ಪ್ರಧಾನ ಮಂತ್ರಿಯವರ ಕಛೇರಿ

ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪ್ರಧಾನಮಂತ್ರಿಯವರ ಭೇಟಿ (ಫೆಬ್ರವರಿ 13-14, 2024)

Posted On: 10 FEB 2024 5:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಫೆಬ್ರವರಿ 13ರಿಂದ 14ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಅಧಿಕೃತ ಭೇಟಿ ನೀಡಲಿದ್ದಾರೆ.

ಇದು 2015 ರಿಂದ ಯುಎಇಗೆ ಪ್ರಧಾನಿ ಮೋದಿಯವರ ಏಳನೇ ಭೇಟಿಯಾಗಿದೆ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ. ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಯುಎಇ ಅಧ್ಯಕ್ಷ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಉಭಯ ನಾಯಕರು ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ, ವಿಸ್ತರಿಸುವ ಮತ್ತು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಪ್ರಧಾನಮಂತ್ರಿಯವರು ಯುಎಇಯ ಉಪಾಧ್ಯಕ್ಷ, ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನೂ ಭೇಟಿ ಮಾಡಲಿದ್ದಾರೆ. ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿಯವರು ದುಬೈನಲ್ಲಿ ನಡೆಯಲಿರುವ ವಿಶ್ವ ಸರ್ಕಾರಿ ಶೃಂಗಸಭೆ 2024 ರಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ಶೃಂಗಸಭೆಯಲ್ಲಿ ವಿಶೇಷ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು ಅಬುಧಾಬಿಯ ಮೊದಲ ಹಿಂದೂ ದೇವಾಲಯವಾದ ಬಿಎಪಿಎಸ್ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಅಬುಧಾಬಿಯ ಜಾಯೆದ್ ಸ್ಪೋರ್ಟ್ಸ್ ಸಿಟಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಯುಎಇಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತ ಮತ್ತು ಯುಎಇ ಬಲವಾದ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಪರ್ಕಗಳಿಂದ ಬೆಂಬಲಿತವಾದ ಬೆಚ್ಚಗಿನ, ನಿಕಟ ಮತ್ತು ಬಹುಮುಖಿ ಸಂಬಂಧಗಳನ್ನು ಹೊಂದಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015ರ ಆಗಸ್ಟ್ ನಲ್ಲಿ ಯುಎಇಗೆ ನೀಡಿದ ಐತಿಹಾಸಿಕ ಭೇಟಿಯ ನಂತರ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಾಗಿ ಉನ್ನತೀಕರಿಸಲಾಗಿದೆ. ಗಡಿಯಾಚೆಗಿನ ವಹಿವಾಟುಗಳಿಗೆ ಭಾರತೀಯ ರೂಪಾಯಿ ಮತ್ತು ಎಇಡಿ ಬಳಕೆಯನ್ನು ಉತ್ತೇಜಿಸಲು ಉಭಯ ದೇಶಗಳು ಫೆಬ್ರವರಿ 2022 ರಲ್ಲಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಮತ್ತು ಜುಲೈ 2023 ರಲ್ಲಿ ಸ್ಥಳೀಯ ಕರೆನ್ಸಿ ಇತ್ಯರ್ಥ (ಎಲ್ಸಿಎಸ್) ವ್ಯವಸ್ಥೆಗೆ ಸಹಿ ಹಾಕಿದವು.

2022-23ರಲ್ಲಿ ಸುಮಾರು 85 ಬಿಲಿಯನ್ ಯುಎಸ್ ಡಾಲರ್ ದ್ವಿಪಕ್ಷೀಯ ವ್ಯಾಪಾರದೊಂದಿಗೆ ಉಭಯ ದೇಶಗಳು ಪರಸ್ಪರ ಉನ್ನತ ವ್ಯಾಪಾರ ಪಾಲುದಾರರಲ್ಲಿ ಸೇರಿವೆ. 2022-23ರಲ್ಲಿ ವಿದೇಶಿ ನೇರ ಹೂಡಿಕೆಯ ವಿಷಯದಲ್ಲಿ ಯುಎಇ ಭಾರತದ ಅಗ್ರ 4 ಹೂಡಿಕೆದಾರರಲ್ಲಿ ಒಂದಾಗಿದೆ.

ಸುಮಾರು 3.5 ಮಿಲಿಯನ್ ಬಲವಾದ ಮತ್ತು ರೋಮಾಂಚಕ ಭಾರತೀಯ ಸಮುದಾಯವು ಯುಎಇಯಲ್ಲಿ ಅತಿದೊಡ್ಡ ವಲಸಿಗ ಗುಂಪನ್ನು ರೂಪಿಸುತ್ತದೆ. ತಮ್ಮ ಆತಿಥೇಯ ದೇಶದ ಅಭಿವೃದ್ಧಿಯಲ್ಲಿ ಅವರ ಸಕಾರಾತ್ಮಕ ಮತ್ತು ಪ್ರಶಂಸನೀಯ ಕೊಡುಗೆ ಯುಎಇಯೊಂದಿಗಿನ ನಮ್ಮ ಅತ್ಯುತ್ತಮ ದ್ವಿಪಕ್ಷೀಯ ಕಾರ್ಯಕ್ರಮಗಳ ಪ್ರಮುಖ ಆಧಾರವಾಗಿದೆ.

*****

 



(Release ID: 2005812) Visitor Counter : 49