ರಾಷ್ಟ್ರಪತಿಗಳ ಕಾರ್ಯಾಲಯ

ಗಣರಾಜ್ಯೋತ್ಸವ - 2024 ಅಂಗವಾಗಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

Posted On: 25 JAN 2024 7:42PM by PIB Bengaluru

ನನ್ನ ಪ್ರೀತಿಯ ಸಹ ನಾಗರಿಕರೇ

ನಮಸ್ಕಾರ!
75 ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ನಿಮಗೆಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು!. ಪ್ರತೀಕೂಲ ಪರಿಸ್ಥಿತಿ ನಡುವೆಯೂ ನಾವು ಎಷ್ಟು ದೂರ ಕ್ರಮಿಸಿದ್ದೇವೆ ಎಂದು ಹಿಂತಿರುಗಿ ನೋಡಿದಾಗ ನನ್ನ ಹೃದಯ ಹೆಮ್ಮೆಯಿಂದ ತುಂಬಿ ಬರುತ್ತದೆ. ದೇಶದ ಪಯಣದ ಹಲವು ಹಾದಿಗಳಲ್ಲಿ 75 ನೇ ಗಣರಾಜ್ಯೋತ್ಸವ ನಿಜಕ್ಕೂ ಐತಿಹಾಸಿಕ ಮೈಲಿಗಲ್ಲಾಗಿದೆ. ಇದು ವಿಶೇಷವಾಗಿ ಹಬ್ಬದ ಸಂದರ್ಭವಾಗಿದೆ.  ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಪೂರ್ಣಗೊಳಿಸಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಾವು ನಮ್ಮ ದೇಶದ ಅಸಾಧಾರಣ ಹಿರಿಮೆ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ನೋಡಿದ್ದೇವೆ. 
ನಾಳೆ ನಾವು ನಮ್ಮ ಸಂವಿಧಾನ ಆಚರಣೆಗೆ ಬಂದ ಸಂದರ್ಭವನ್ನು ಆಚರಿಸುತ್ತಿದ್ದೇವೆ. ಸಂವಿಧಾನ ಪೀಠಿಕೆ ಈ ಶಬ್ದಗಳಿಂದ ಆರಂಭವಾಗುತ್ತದೆ “ನಾವು ಭಾರತದ ಜನತೆ” ಇದು ದಾಖಲೆಯ ಅಸ್ಮಿತೆಯನ್ನು ಬೆಳಗಿಸುತ್ತಿದ್ದು, ಅದುವೆ ಪ್ರಜಾಪ್ರಭುತ್ವವಾಗಿದೆ. ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ಪರಿಕಲ್ಪನೆಗಿಂತ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅತ್ಯಂತ ಪುರಾತನವಾದದ್ದು. ಇದೇ ಕಾರಣಕ್ಕಾಗಿ ಭಾರತವನ್ನು “ಪ್ರಜಾಪ್ರಭುತ್ವದ ತಾಯಿ” ಎಂದು ಕರೆಯಲಾಗುತ್ತದೆ.
ದೀರ್ಘ ಮತ್ತು ಸಂಕಷ್ಟದ ಹೋರಾಟದ ನಂತರ 1947, ಆಗಸ್ಟ್ 15 ರಂದು ವಿದೇಶಿ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯಿತು. ಆದರೂ ದೇಶವನ್ನಾಳುವ ಮತ್ತು ಅದರ ನೈಜ ಸಾಮರ್ಥ್ಯವನ್ನು  ಹೊರ ಹಾಕುವ ಸಿದ್ಧಾಂತ ಮತ್ತು ಪ್ರಕ್ರಿಯೆಯನ್ನು ರೂಪಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಸಂವಿಧಾನ ಸಭೆಯು ಸುಮಾರು ಮೂರು ವರ್ಷಗಳ ಕಾಲ ಆಡಳಿತದ ಎಲ್ಲಾ ಅಂಶಗಳ ಬಗ್ಗೆ ವಿವರವಾದ ಚರ್ಚೆ ನಡೆಸಿತು ಮತ್ತು ನಮ್ಮ ರಾಷ್ಟ್ರವನ್ನು ಸ್ಥಾಪಿಸುವ ದಾಖಲೆಯಾದ ಭಾರತದ ಸಂವಿಧಾನವನ್ನು ರೂಪಿಸಿತು. ಭವ್ಯವಾದ ಮತ್ತು ಸ್ಪೂರ್ತಿದಾಯಕ ಸಂವಿಧಾನವನ್ನು ರೂಪಿಸಿದ ನಾಯಕರು ಮತ್ತು ಅಧಿಕಾರಿಗಳಿಗೆ ದೇಶ ಇಂದು ಕೃತಜ್ಞತೆಯಿಂದ ಸ್ಮರಿಸುತ್ತದೆ. 
ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿ ರಾಷ್ಟ್ರವು ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಸಾಕ್ಷಿಯಾಗುವ ಅವಧಿಯಾಗಿದೆ. ಈ ಸಮಯ ಪರಿವರ್ತನೆಯ ಯುಗವಾಗಿದೆ. ದೇಶವನ್ನು ಔನತ್ಯಕ್ಕೆ ಕೊಂಡೊಯ್ಯಲು ನಾವು ಸುವರ್ಣಾವಕಾಶವನ್ನು ಕಲ್ಪಿಸಿದ್ದೇವೆ. ಗುರಿಗಳನ್ನು ತಲುಪಲು ಪ್ರತಿಯೊಬ್ಬ ನಾಗರಿಕರ ಕೊಡುಗೆ ನಿರ್ಣಾಯಕವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ನಮ್ಮ ಮೂಲಭೂತ ಕರ್ತವ್ಯಗಳಿಗೆ ಬದ್ಧರಾಗಿರಲು ನನ್ನ ಎಲ್ಲಾ ಸಹ ನಾಗರಿಕರಿಗೆ ನಾನು ಮನವಿ ಮಾಡುತ್ತೇನೆ. ದೇಶ 100 ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಭಾರತ ಅಭಿವೃದ್ಧಿ ಹೊಂದಲು ಈ ಕರ್ತವ್ಯಗಳು ಅತ್ಯಂತ ಅಗತ್ಯವಾಗಿವೆ. ಇಲ್ಲಿ ನಾನು ಮಹಾತ್ಮಾಗಾಂಧೀಜಿ ಅವರನ್ನು ನೆನಪಿಸಿಕೊಳ್ಳುತ್ತೇನೆ.  “ಹಕ್ಕುಗಳ ಬಗ್ಗೆ ಯೋಚಿಸುವ ಜನ ಬೆಳವಣಿಗೆಯಾಗಿಲ್ಲ. ಆದರೆ ಕರ್ತವ್ಯದ ಬಗ್ಗೆ ಯೋಚಿಸುವ ಜನ ಮುಂದುವರೆದಿದ್ದಾರೆ” ಎಂದು ಅವರು ಸರಿಯಾಗಿಯೇ ಹೇಳಿದ್ದಾರೆ. 
ನನ್ನ ಪ್ರೀತಿಯ ಸಹ ನಾಗರಿಕರೇ 
ಗಣರಾಜ್ಯೋತ್ಸವ ನಮ್ಮ ಮೂಲಭೂತ ಮೌಲ್ಯ, ತತ್ವಗಳನ್ನು   ನೆನಪಿಸಿಕೊಳ್ಳುವ ದಿನ ಇದಾಗಿದೆ. ಅವುಗಳಲ್ಲಿ ನಾವು ಯಾವುದನ್ನಾದರೂ ಆಲೋಚಿಸಿದಾಗ ಉಳಿದವುಗಳಿಗೆ ನಾವು ಸ್ವಾಭಾವಿಕವಾಗಿ ಮಾರ್ಗದರ್ಶನ ನೀಡುತ್ತೇವೆ. ಪ್ರಜಾಪ್ರಭುತ್ವ ಸಂಸ್ಕತಿ, ನಂಬಿಕೆ ಮತ್ತು ಆಚರಣೆಗಳ ವೈವಿಧ್ಯತೆಯನ್ನು ಸೂಚಿಸುತ್ತದೆ. ವೈವಿಧ್ಯತೆಯನ್ನು ಆಚರಿಸುವುದು ಸಮಾನತೆಯನ್ನು ಸೂಚಿಸಿದಂತೆ, ಇದು ನ್ಯಾಯವನ್ನು ಎತ್ತಿ ಹಿಡಿದಂತೆ. ಸ್ವಾತಂತ್ರ್ಯವೇ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಒಟ್ಟಾರೆ ಈ ಮೌಲ್ಯಗಳು ಮತ್ತು ತತ್ವಗಳು ನಮ್ಮನ್ನು ಭಾರತೀಯರನ್ನಾಗಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ಜಾಣತನದಿಂದ ಮಾರ್ಗದರ್ಶನ ಮಾಡಿದ್ದು, ಸಂವಿಧಾನದ ಚೈತನ್ಯ ಈ ಎಲ್ಲಾ ಮೂಲಭೂತ ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿದೆ. ಎಲ್ಲಾ ರೀತಿಯ ತಾರತಮ್ಯವನ್ನು ಕೊನೆಗೊಳಿಸಲು ನಮ್ಮನ್ನು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಿರಂತರವಾಗಿ ಇದು ಮುನ್ನಡೆಸಿದೆ. 
ಸಾಮಾಜಿಕ ನ್ಯಾಯಕ್ಕಾಗಿ ಅವಿರತವಾಗಿ ಶ್ರಮಿಸಿದ ಶ್ರೀ ಕರ್ಪೂರಿ ಠಾಕೂರ್ ಜೀ ಅವರ ಜನ್ಮ ಶತಮಾನೋತ್ಸವ ನಿನ್ನೆ ಕೊನೆಗೊಂಡಿದ್ದು, ಇದನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಶ್ರೀ ಕರ್ಪೂರಿ ಠಾಕೂರ್ ಜೀ ಅವರು ಹಿಂದುಳಿದ ವರ್ಗದವರ ಪರ ವಕಾಲತ್ತು ವಹಿಸಿದವರಾಗಿದ್ದು, ತಮ್ಮ ಜೀವನವನ್ನು ಇವರಿಗಾಗಿಯೇ ಮೀಸಲಿಟ್ಟಿದ್ದರು. ಅವರೇ ಜೀವನೇ ಸಂದೇಶವಾಗಿದೆ. ತಮ್ಮ ಕೊಡುಗೆಗಳ ಮೂಲಕ ಸಾರ್ವಜನಿಕ ಜೀವನವನ್ನು ಶ್ರೀಮಂತಗೊಳಿಸಿದ ಅವರಿಗೆ ಗೌರವ ಸಲ್ಲಿಸಲು ಬಯಸುತ್ತೇನೆ. ನಮ್ಮ ಗಣರಾಜ್ಯದ ನೀತಿಯು 1.4 ಶತಕೋಟಿ ಜನರನ್ನು ಒಂದು ಕುಟುಂಬವಾಗಿ ಬದುಕಲು ನಮ್ಮನ್ನು ಒಟ್ಟಗೂಡಿಸುತ್ತದೆ. ವಿಶ್ವದ ಈ ದೊಡ್ಡ ಕುಟುಂಬಕ್ಕೆ ಸಹಬಾಳ್ವೆಯು ಭೌಗೋಳಿಕತೆಯ ಹೇರಿಕೆಯಲ್ಲ. ಆದರೆ ಸಂತೋಷದ ಮೂಲವಾಗಿದೆ. ಇದು ನಮ್ಮ ಗಣರಾಜ್ಯೋತ್ಸವದ ಆಚರಣೆಗಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. 
ಈ ವಾರ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಿರುವ ಭವ್ಯವಾದ ಭಗವಾನ್ ಶ್ರೀ ರಾಮನ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಈ ಕಾರ್ಯಕ್ರಮವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕಾಗಿದ್ದು, ಭವಿಷ್ಯದ ಇತಿಹಾಸಕಾರರು ಇದನ್ನು ಭಾರತದ ನಾಗರಿಕತೆಯ ಪರಂಪರೆಯ ಮರುಶೋಧನೆಯಲ್ಲಿ ಒಂದು ಹೆಗ್ಗುರುತಾಗಿ ಪರಿಗಣಿಸುತ್ತಾರೆ. ಮಂದಿರ ನಿರ್ಮಾಣ ನ್ಯಾಯಾಂಗ ಪ್ರಕ್ರಿಯೆಯ ನಂತರ ಆರಂಭವಾಯಿತು ಮತ್ತು ಈ ನೆಲದ ಪರಮೋಚ್ಛ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದೆ. ಈಗ ಇದು ಒಂದು ಭವ್ಯ ಸೌಧವಾಗಿ ನಿಂತಿದ್ದು, ಜನರ ನಂಬಿಕೆಗೆ ಸೂಕ್ತವಾದ ಅಭಿವ್ಯಕ್ತಿಯನ್ನು ನೀಡುತ್ತಿದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅಗಾಧ ನಂಬಿಕೆಗೆ ಇದು ಸಾಕ್ಷಿಯಾಗಿದೆ. 
ನನ್ನ ಪ್ರೀತಿಯ ಸಹ ನಾಗರಿಕರೇ 
ನಮ್ಮ ರಾಷ್ಟ್ರೀಯ ಹಬ್ಬಗಳು ಮಹತ್ವಪೂರ್ಣ ಸಂದರ್ಭಗಳಿಗೆ ಸಾಕ್ಷಿಯಾಗಿದ್ದು, ನಾವು ಒಟ್ಟಿಗೆ ಇದರ ಹಿನ್ನೆಲೆ ಮತ್ತು ಮುನ್ನೆಲೆಯನ್ನು ನೋಡಬೇಕಾಗಿದೆ. ಕಳೆದ ಗಣರಾಜ್ಯೋತ್ಸವದ ನಂತರದ ವರ್ಷವನ್ನು ಗಮನಿಸಿದರೆ ಸಂತಸಪಡಬೇಕಾದದ್ದು ಬಳಷ್ಟಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದು, ಇದು ಹಿಂದೆಂದೂ ಕಂಡರಿಯದ ಸಾಧನೆಯಾಗಿದೆ. ಇಲ್ಲಿ ದಾಖಲಾರ್ಹ ಸಂಗತಿ ಎಂದರೆ ಜಿ20 ಕಾರ್ಯಕ್ರಮಗಳಲ್ಲಿ ಜನರ ಸಹಭಾಗಿತ್ವವಿತ್ತು. ಆಲೋಚನೆಗಳು ಮತ್ತು ಒಳಹರಿವುಗಳು ಮೇಲಿನಿಂದ ಕೆಳಕ್ಕೆ ಅಲ್ಲ, ಕೆಳಗಿನಿಂದ ಮೇಲಕ್ಕೆ ಚಲಿಸುತ್ತವೆ. ಭವ್ಯವಾದ ಘಟನೆಯು ನಾಗರಿಕರನ್ನು ಕಾರ್ಯತಂತ್ರ ಮತ್ತು ರಾಜತಾಂತ್ರಿಕ ವಿಷಯಗಳಲ್ಲಿ ಭಾಗವಹಿಸುವಂತೆ ಮಾಡುವ ಮತ್ತು ಮಾಡುವಲ್ಲಿ ಎಲ್ಲರಿಗೂ ಪಾಠ ಕಲಿಸಿದ್ದು, ಅಂತಿಮವಾಗಿ ಇದು ಅವರ ಭವಿಷ್ಯ ರೂಪಿಸಿಕೊಳ್ಳಲಿದೆ. ಈ ಜಿ20 ಶೃಂಗ ಸಭೆ ಜಾಗತಿಕ ದಕ್ಷಿಣ ಭಾಗದಲ್ಲಿ ತನ್ನ ಧ್ವನಿಗೆ ಪುಷ್ಟಿ ನೀಡುವಂತೆ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ತನ್ನ ಅಗತ್ಯವಾದ ಧ್ವನಿಯನ್ನು ಇದು ಒಟ್ಟುಗೂಡಿಸಲಿದೆ. 
ಲಿಂಗಸಮಾನತೆ ವಿಚಾರದಲ್ಲಿ ನಾವು ಪ್ರಗತಿ ಸಾಧಿಸಿದ್ದು, ಸಂಸತ್ತಿನಲ್ಲಿ ಐತಿಹಾಸಿಕ ಮಹಿಳಾ ಮೀಸಲು ಮಸೂದೆಗೆ ಅಂಗೀಕಾರ ದೊರೆತಿದೆ. ನಾರಿ ಶಕ್ತಿ ವಂದನ್ ಅಧಿನಿಯಮ್ ಸಂಸತ್ತಿನಲ್ಲಿ ಮಹಿಳಾ ಸಬಲೀಕರಣಕ್ಕೆ ಕ್ರಾಂತಿಕಾರ ಸಾಧನವಾಗಲಿದೆ. ನಮ್ಮ ಆಡಳಿತ ಪ್ರಕ್ರಿಯೆಗಳನ್ನು ಸುಧಾರಿಸುವಲ್ಲಿ ಇದು ಬಹಳ ದೂರ ಸಾಗಲಿದೆ. ಸಾಮೂಹಿಕ ಮಹತ್ವದ ವಿಚಾರಗಳಲ್ಲಿ ಹೆಚ್ಚಿನ ಮಹಿಳೆಯರು ಒಳಗೊಂಡರೆ ನಮ್ಮ ಆಡಳಿತದ ಆದ್ಯತೆಗಳು ನಮ್ಮ ಜನಸಾಮಾನ್ಯರ ಅಗತ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಹೊಂದಿಕೆಯಾಗಲಿದೆ. 
ಭಾರತ ಚಂದ್ರನಲ್ಲಿಗೆ ಹೋದ ವರ್ಷವೂ ಸಹ ಇದಾಗಿದ್ದು, ಚಂದ್ರನ ದಕ್ಷಿಣ ದ್ರುವದಲ್ಲಿ ಮೊದಲ ಬಾರಿಗೆ ಇಳಿದ ವರ್ಷಕ್ಕೆ ಸಾಕ್ಷಿಯಾಗಿದೆ. ಚಂದ್ರಯಾನ – 3 ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೌರಯಾನದತ್ತ ಕೇಂದ್ರೀಕೃತವಾಗಿದೆ. ಇತ್ತೀಚೆಗೆ ಆದಿತ್ಯ ಎಲ್-1 ಯಶಸ್ವಿಯಾಗಿ ತನ್ನ ಕಕ್ಷೆ ಸೇರಿದೆ. ಕಪ್ಪುಕುಳಿಗಳಂತಹ ಬಾಹ್ಯಾಕಾಶ ರಹಸ್ಯಗಳನ್ನು ಅಧ್ಯಯನ ಮಾಡುವ ಎಕ್ಸ್ ಪಿಒಸ್ಯಾಟ್ ಎಂಬ ನಮ್ಮ ಮೊದಲ ಎಕ್ಸ್ – ರೇ ಪೋಲಾರ್ ಮೀಟರ್ ಎಂಬ ಉಪಗ್ರಹದ ಉಡಾವಣೆಯೊಂದಿಗೆ ನಾವು ಹೊಸ ವರ್ಷವನ್ನು ಪ್ರಾರಂಭಿಸಿದ್ದೇವೆ. ಪ್ರಸಕ್ತ ವರ್ಷದಲ್ಲಿ ಇನ್ನೂ ಹಲವಾರು ಬಾಹ್ಯಾಕಾಶ ಅಭಿಯಾನಗಳ ಬಗ್ಗೆ ಯೋಜನೆ ರೂಪಿಸಲಾಗಿದೆ. ಭಾರತದ ಬಾಹ್ಯಾಕಾಶ ಪಯಣ ಹೊಸ ಮೈಲಿಗಲ್ಲುಗಳನ್ನು ದಾಟಲು ನಿರ್ಧರಿಸಿದೆ ಎಂಬುದನ್ನು ತಿಳಿಸಲು ತಮಗೆ ಸಂತಸವಾಗುತ್ತಿದೆ. ಗಗನಯನ ಅಭಿಯಾನಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ನಮ್ಮ ಮೊದಲ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮದ ಸನ್ನದ್ಧತೆ ಸುಗಮವಾಗಿ ನಡೆಯುತ್ತಿದೆ. ನಾವು ನಮ್ಮ ವಿಜ್ಞಾನಿಗಳು ಮತ್ತು ತಾಂತ್ರಿಕ ಪರಿಣಿತರ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ಆದರೆ ಈಗ ಅವರು ಮೊದಲಿಗಿಂತಲೂ ಹೆಚ್ಚಿನ ಗುರಿ ಹೊಂದಿದ್ದಾರೆ ಮತ್ತು ಸಾಕಾರಗೊಳಿಸುತ್ತಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಇಡೀ ಮನುಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವನ್ನು ವಿಸ್ತರಿಸುವ ಹಾಗೂ ಆಳಗೊಳಿಸುವ ಗುರಿ ಹೊಂದಿದೆ. ಇಸ್ರೋದ ಉಪಕ್ರಮಗಳಲ್ಲಿ ನಾವು ದೇಶದಲ್ಲಿ ಕಾಣುವ ಉತ್ಸಾಹ ಹೃದಯಸ್ಪರ್ಶಿಯಾಗಿದೆ. ಹೊಸ ಸಾಧನೆಗಳು ಯುವ ಪೀಳಿಗೆಯ ಕಲ್ಪನೆಯನ್ನು ಬದಲಿಸಿದೆ. ಹೆಚ್ಚಿನ ಮಕ್ಕಳು ವಿಜ್ಞಾನದತ್ತ ಆಸಕ್ತಿ ತೋರುತ್ತಿದ್ದಾರೆ ಮತ್ತು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುತ್ತಾರೆ ಎಂಬ ಖಚಿತತೆ ಇದೆ. ಹೆಚ್ಚಿನ ಯುವ ಸಮೂಹ, ವಿಶೇಷವಾಗಿ ಯುವತಿಯರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವೃತ್ತಿ ಜೀವನ ಮುಂದುವರೆಸಲು ಪ್ರೇರೇಪಿಸಿದಂತಾಗಿದೆ. 
ನನ್ನ ಪ್ರೀತಿಯ ಸಹ ನಾಗರಿಕರೇ 
ಭಾರತ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದು, ಇದು ದೃಢವಾದ ಆರೋಗ್ಯದಿಂದ ಕೂಡಿರುತ್ತದೆ ಮತ್ತು ಪ್ರತಿಫಲಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಆರ್ಥಿಕತೆಗಳಲ್ಲಿ ನಮ್ಮ ಜಿಡಿಪಿ ದರ ಹೆಚ್ಚಿನ ಪ್ರಮಾಣದಲ್ಲಿದ್ದು, 2024 ರಲ್ಲಿ ಮತ್ತು ನಂತರವೂ ಅಸಾಧಾರಣ ಸಾಮರ್ಥ್ಯವನ್ನು ಮುಂದುವರೆಸಲಿದೆ ಎಂಬ ವಿಶ್ವಾಸವಿದೆ. ನಿರ್ದಿಷ್ಟವಾಗಿ ಗಮನಿಸಬೇಕಾದ ಸಂಗತಿಯೆಂದರೆ ಆರ್ಥಿಕತೆಗೆ ಶಕ್ತಿ ತುಂಬುವ ಅದೇ ದೂರದೃಷ್ಟಿಯ ಯೋಜನೆಯು ಅಬಿವೃದ್ಧಿ ಪದದ ಪ್ರತಿಯೊಂದು ಅರ್ಥವನ್ನು ಒಳಗೊಂಡಂತೆ ಸಾಗಲಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಸರ್ಕಾರ ದುರ್ಬಲ ವರ್ಗದವರಿಗೆ ಉಚಿತ ಆಹಾರ ಒದಗಿಸಿ ಯೋಜನೆಯ ವ್ಯಾಪ್ತಿಯನ್ನು ಹಿಗ್ಗಿಸಿದೆ. ಆ ಬಿಕ್ಕಟ್ಟಿನಿಂದ ಹೊರಬರಲು, ದುರ್ಬಲವರ್ಗದವರಿಗೆ ಸಹಾಯಹಸ್ತ ಚಾಚಲು ಈ ಕ್ರಮಗಳನ್ನು ನಂತರ ಮುಂದುವರೆಸಲಾಯಿತು. ಐದು ವರ್ಷಗಳ ಕಾಲ  81 ಕೋಟಿ ಬಡವರಿಗೆ ಉಚಿತ ಆಹಾರಧಾನ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು, ತನ್ನ ಉಪಕ್ರಮದ ವ್ಯಾಪ್ತಿಯನ್ನು ವಿಸ್ತರಿಸಿದೆ. ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಕಲ್ಯಾಣ ವಲಯದ ಉಪಕ್ರಮವಾಗಿದೆ. 
ಎಲ್ಲಾ ನಾಗರಿಕರ ಸುಗಮ ಜೀವನಕ್ಕಾಗಿ ನಮ್ಮಲ್ಲಿ ಹಲವಾರು ಅಭಿಯಾನ ಮಾದರಿಯ ಕಾರ್ಯಕ್ರಮಗಳಿವೆ. ಮನೆಗಳಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರಿನ ಲಭ್ಯತೆಯಿಂದ ಹಿಡಿದು ಭದ್ರತೆವರೆಗೆ ಇವೆಲ್ಲವೂ ಮೂಲಭೂತ ಅಗತ್ಯಗಳೇ ಹೊರತು ಸವಲತ್ತುಗಳಲ್ಲ. ಈ ಎಲ್ಲವೂ ರಾಜಕೀಯ ಮತ್ತು ಆರ್ಥಿಕ ಚಿಂತನೆಗಳನ್ನು ಮೀರಿದ್ದಾಗಿವೆ ಮತ್ತು ಇವುಗಳನ್ನು ಮಾನವೀಯ ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ. ನಮ್ಮ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ವಿಸ್ತರಣೆ ಮಾಡಿದೆ ಮತ್ತು ವೃದ್ಧಿಸಿದೆ. ಅಷ್ಟೇ ಅಲ್ಲದೇ ಕಲ್ಯಾಣದ ಚಿಂತನೆಯನ್ನೇ ಮರು ವ್ಯಾಖ್ಯಾನಿಸಿದೆ. ನಿರಾಶ್ರಿತರ ಸಮಸ್ಯೆ ಅಪರೂಪವಾಗಿರುವ ಕೆಲವೇ ಕೆಲವು ದೇಶಗಳ ಪೈಕಿ ಭಾರತವೂ ಸಹ ಒಂದಾಗಿದ್ದು, ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿ ಡಿಜಿಟಲ್ ಅಂತರವನ್ನು ತಗ್ಗಿಸಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಏಕರೂಪ ಶಿಕ್ಷಣದ ಚೌಕಟ್ಟಿನ ಲಾಭ ದೊರಕಿಸಿಕೊಡುತ್ತದೆ. ಆಯುಷ್ಮಾನ್ ಭಾರತ್ ವಿಮಾ ಯೋಜನೆಯ ವಿಸ್ತರಣೆ ಎಲ್ಲಾ ಫಲಾನುಭವಿಗಳನ್ನು ಒಂದೇ ಚತ್ರಿಯಡಿ ಒಟ್ಟಿಗೆ ತರುವ ಮತ್ತು ದುರ್ಬಲ ಹಾಗೂ ಬಡವರ್ಗದವರಿಗೆ ಪರಮೋಚ್ಛ ಭರವಸೆಯನ್ನು ಇದು ನೀಡುತ್ತದೆ. 
ನಮ್ಮ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಕಳೆದ ವರ್ಷ ಏಷ್ಯಾ ಕ್ರೀಡಾಕೂಟ ನಡೆದಿದ್ದು, ನಾವು ದಾಖಲೆಮಟ್ಟದಲ್ಲಿ 107 ಪದಕಗಳನ್ನು ಪಡೆದಿದ್ದೇವೆ ಮತ್ತು ಏಷ್ಯಾ ಪ್ಯಾರಾ ಗೇಮ್ಸ್ ನಲ್ಲಿ 111 ಪದಕಗಳನ್ನು ನಾವು ಗೆದ್ದಿದ್ದೇವೆ. ನಮ್ಮ ಪದಕಪಟ್ಟಿಯಲ್ಲಿ ಮಹಿಳೆಯರು ಅತ್ಯಂತ ಪ್ರಭಾವಶಾಲಿ ಕೊಡುಗೆ ನೀಡುತ್ತಿರುವುದನ್ನು ನೋಡಿ ಸಂತಸವಾಗುತ್ತಿದೆ. ನಮ್ಮ ಕ್ರೀಡಾ ತಾರೆಗಳು ಮಕ್ಕಳನ್ನು ವಿವಿಧ ಕ್ರೀಡೆ ಮತ್ತು ಆಟಗಳಲ್ಲಿ ತೊಡಗಿಸಿಕೊಳ್ಳುವಂತೆ, ಸ್ವಯಂ ನಂಬಿಕೆಗೆ ಪುಷ್ಟಿ ನೀಡುವಲ್ಲಿ ನೆರವಾಗುತ್ತಿದ್ದಾರೆ. ಹೊಸ ಆತ್ಮವಿಶ್ವಾಸದಿಂದ ತುಂಬಿರುವ ನಮ್ಮ ಕ್ರೀಡಾಪಟುಗಳು ಮುಂಬರುವ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಸುಧಾರಿತ ಪ್ರದರ್ಶನ ನೀಡುವ ಬಗ್ಗೆ ತಮಗೆ ಖಾತ್ರಿಯಿದೆ. 
ನನ್ನ ಪ್ರೀತಿಯ ಸಹ ನಾಗರಿಕರೇ 
ಇತ್ತೀಚಿನ ಸಮಯದಲ್ಲಿ ಜಗತ್ತಿನಲ್ಲಿ ಹಲವು ಸಂಘರ್ಷಗಳು ನಡೆದಿವೆ ಮತ್ತು ಕೆಲವೆಡೆ ಹಿಂಸಾಚಾರದಿಂದ ತೊಂದರೆ ಎದುರಾಗಿದೆ. ಎರಡು ಬದಿಯ ಸಂಘರ್ಷ ಸಮಯದಲ್ಲಿ ನಾವು ಸರಿ ಎಂಬ ವಾದ ಇದ್ದೇ ಇರುತ್ತದೆ ಮತ್ತು ಮತ್ತೊಂದು ಬದಿಯಲ್ಲಿ ತಪ್ಪು ಎಂಬ ಪ್ರತಿವಾದ ಇರುತ್ತದೆ. ಇಂತಹ ಸಂದರ್ಭದಲ್ಲಿ ಬೆಳಕಿನ ದಾರಿಯಲ್ಲಿ ಕಾರಣವನ್ನು ಕಂಡುಕೊಳ್ಳಬೇಕು. ದುರದೃಷ್ಟಕರವೆಂದರೆ ಕಾರಣಕ್ಕೆ ಬದಲಾಗಿ ಭಯ ಮತ್ತು ಪೂರ್ವಾಗ್ರಹಗಳು, ಭಾವೋದ್ರೇಕಗಳು ಹೆಚ್ಚಿಸಿವೆ. ಇದು ನಿರಂತರ ಹಿಂಸೆಗೆ ಕಾರಣವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಮಾನವೀಯ ದುರಂತಗಳ ಸರಣಿಗಳು ನಡೆದಿವೆ ಮತ್ತು ನಾವು ಮಾನವ ಸಂಕಟದ ಬಗ್ಗೆ ದುಃಖಿತರಾಗಿದ್ದೇವೆ. ಅಂತಹ ಸಂದರ್ಭದಲ್ಲಿ ನಾವು ಬುದ್ಧನ ಮಾತುಗಳನ್ನು ನೆನಪಿಸಿಕೊಳ್ಳುತ್ತೇವೆ. 
न हि वेरेन वेरानि, सम्मन्तीध कुदाचनम्
अवेरेन च सम्मन्ति, एस धम्मो सनन्तनो
ಇದರ ಅರ್ಥ 
“ಯಾವುದೇ ಸಮಯದಲ್ಲೂ ಶತೃತ್ವದ ಮೂಲಕ ಶಮನಕಾಣಲು ಸಾಧ್ಯವಿಲ್ಲ, ದ್ವೇಷರಹಿತತೆ ಮೂಲಕ ಶಮನ ಕಾಣಬೇಕು. ಇದು ಶಾಶ್ವತ ಕಾನೂನು” 
ವರ್ಧಮಾನ್ ಮಹಾವೀರ್ ಮತ್ತು ಸಾಮ್ರಾಟ್ ಅಶೋಕ ಅವರಿಂದ ಹಿಡಿದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ವರೆಗೆ ಭಾರತ ಎಲ್ಲಾ ಕಾಲದಲ್ಲೂ ಅಹಿಂಸೆಯನ್ನೇ ಅನುಸರಿಸಿದೆ. ಇದು ಕೇವಲ ಆದರ್ಶವಲ್ಲ, ಅದನ್ನು ಆಚರಿಸಲು ಕಷ್ಟವಾಗಬಹುದು, ಅದರೆ ಅದರಲ್ಲಿ ಒಂದು ವಿಭಿನ್ನ ಸಾಧ್ಯತೆಯಿದೆ ಎಂಬುದನ್ನು ಮತ್ತೆ ಮತ್ತೆ ತೋರಿಸಿದೆ. ವಾಸ್ತವಿಕವಾಗಿ ಇದು ಅನೇಕರಿಗೆ ಜೀವಂತ ಸತ್ಯವಾಗಿದೆ. ಘರ್ಷಣೆಯಲ್ಲಿ ಸಿಲುಕಿರುವ ಪ್ರದೇಶಗಳು ಸಂಘರ್ಷವನ್ನು ಪರಿಹರಿಸಲು ಮತ್ತು ಶಾಂತಿ ತರಲು ಶಾಂತಿಯುತ ಮಾರ್ಗವನ್ನು ಕಂಡುಕೊಳ್ಳಲಿ ಎಂದು ನಾವು ಆಶಿಸೋಣ. ಭಾರತದ ಪ್ರಾಚೀನ ಬುದ್ದಿವಂತಿಕೆಯು ಜಾಗತಿಕ ಬಿಕ್ಕಟ್ಟಿನ ಪರಿಸರದಿಂದ ಹೊರಬರಲು ಸಹಾಯ ಮಾಡುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಗತಿಕ ಹವಾಮಾನ ಬದಲಾವಣೆ ಕ್ರಮದಲ್ಲಿ ನಾಯಕತ್ವದ ಸ್ಥಾನವನ್ನು ತೆಗೆದುಕೊಳ್ಳುವಲ್ಲಿ ಭಾರತ ಮಂಚೂಣಿಯಲ್ಲಿರುವುದನ್ನು ನೋಡಲು ಸಂತಸವಾಗುತ್ತದೆ. ಪರಿಸರ ಸ್ನೇಹಿ ಜೀವನ ಕ್ರಮ ಅನುಸರಣೆಗಾಗಿ ಭಾರತ “ಜೀವನ ಅಭಿಯಾನ” ಆರಂಭಿಸಿದೆ. ಹವಾಮಾನ ಬದಲಾವಣೆ ಸಮಸ್ಯೆಗಳನ್ನು ಎದುರಿಸಲು ವೈಯಕ್ತಿಕ ನಡಾವಳಿಕೆ ಬದಲಾವಣೆಗೆ ನಮ್ಮ ದೇಶ ಒತ್ತು ನೀಡಿರುವುದನ್ನು ಜಾಗತಿಕ ಸಮುದಾಯ ಶ್ಲಾಘಿಸಿದೆ. ಎಲ್ಲೆಡೆ ಇರುವ ಜನತೆ ತಮ್ಮ ಜೀವನ ಶೈಲಿಯನ್ನು ತಾಯಿ ಪ್ರಕೃತಿ ಮಾತೆಗೆ ಅನುಗುಣವಾಗಿ ಬದಲಾವಣೆ ಮಾಡುವ ಮೂಲಕ ಕೊಡುಗೆ ನೀಡಬಹುದು ಮತ್ತು ನೀಡಬೇಕಾಗಿದೆ. ಅದು ಮುಂದಿನ ಪೀಳಿಗೆಗೆ ಈ ಗ್ರಹವನ್ನು ಉಳಿಸಲು ನೆರವಾಗುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. 
ನನ್ನ ಪ್ರೀತಿಯ ಸಹ ನಾಗರಿಕರೇ 
ಅಮೃತ ಕಾಲದ ಅವಧಿ ಹಿಂದೆಂದೂ ಕಂಡರಿಯದ ತಂತ್ರಜ್ಞಾನದ ಸವಾಲುಗಳಿಗೆ ಕಾರಣವಾಗಿದೆ. ಕೃತಕಬುದ್ದಿಮತ್ತೆ ಹಾಗೂ ಮಿಷಿನ್ ಲರ್ನಿಂಗ್ ತನ್ನ ವೇಗ ಹೆಚ್ಚಿಸಿಕೊಂಡು ವೃತ್ತಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುತ್ತಿದೆ. ಭವಿಷ್ಯದಲ್ಲಿ ಕಾಳಜಿಯ ಹಲವಾರು ಕ್ಷೇತ್ರಗಳಿವೆ. ಮುಂದಿನ ದಿನಗಳಲ್ಲಿ ವಿಶೇಷವಾಗಿ ಯುವ ಸಮೂಹದ ಉತ್ತೇಜನಕ್ಕೆ ಅವಕಾಶಗಳಿವೆ. ಅವರು ಹೊಸ ವಲಯಗಳನ್ನು ಪರಿಶೋಧಿಸುತ್ತಿದ್ದಾರೆ. ಅವರ ಹಾದಿಯಿಂದ ಅಡೆತಡೆಗಳನ್ನು ತೊಡೆದುಹಾಕಲು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು  ಹೊರಹಾಕಲು ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಾಗಿದೆ. ಅವರಿಗೆ ಸಮಾನತೆಯ ಅವಕಾಶಗಳು ಬೇಕಾಗಿವೆ. ಅವರಿಗೆ ಬೇಕಾಗಿರುವುದು ಸಮಾನತೆಯ ಹಳೆಯ ವಾಕ್ಚಾತುರ್ಯವಲ್ಲ. ಆದರೆ ನಾವು ಪಾಲಿಸಬೇಕಾದ ಸಮಾನತೆಯ ಆದರ್ಶದ ಸಾಕ್ಷಾತ್ಕಾರ ಬೇಕಾಗಿದೆ. 
ನಾಳಿನ ಭಾರತವನ್ನು ಕಟ್ಟುವುದು ಅವರ ಆತ್ಮವಿಶ್ವಾಸವಾಗಿದೆ. ಹೆಚ್ಚಿನದಾಗಿ ನಮ್ಮ ಯುವ ಜನಾಂಗದ ಮನಸ್ಸುಗಳಿಗೆ ಶಿಕ್ಷಕರು ಸೂಕ್ತ ರೂಪ ನೀಡಿದ್ದು, ಅವರೇ ಭವಿಷ್ಯ ರಾಷ್ಟ್ರದ ನೈಜ ವಾಸ್ತುಶಿಲ್ಪಿಗಳು. ಮೌನವಾಗಿ ಶ್ರಮಿಸುವ ಮತ್ತು ರಾಷ್ಟ್ರಕ್ಕೆ ಉತ್ತಮ ಭವಿಷ್ಯ ರೂಪಿಸಲು ಪ್ರಬಲ ಕೊಡುಗೆ ನೀಡುವ ನಮ್ಮ ರೈತರು, ಕಾರ್ಮಿಕರ ಬಗ್ಗೆ ನಾನು ಕೃತಜ್ಞತೆಯಿಂದ ಉಲ್ಲೇಖಿಸಲು ಬಯಸುತ್ತೇನೆ. ಇಂತಹ ಪ್ರಮುಖ ಸಂದರ್ಭದಲ್ಲಿ ಭಾರತ ಕೂಡ ತನ್ನ ಸಶಸ್ತ್ರಪಡೆಗಳು, ಪೊಲೀಸ್ ಮತ್ತು ಅರೆಮಿಲಿಟರಿ ಪಡೆಗಳಿಗೆ ಕೃತಜ್ಞತೆಯಿಂದ ನಮಿಸಲು ಬಯಸುತ್ತದೆ. ಇವುಗಳ ಶೌರ್ಯ ಮತ್ತು ಕಟ್ಟೆಚ್ಚರ ಇಲ್ಲದಿದ್ದರೆ ನಾವು ಎತ್ತರಕ್ಕೆ ಏರಲು ಸಾಧ್ಯವಿಲ್ಲ. 
ನಾನು ಮಾತು ಮುಗಿಸುವ ಮುನ್ನ ನ್ಯಾಯಾಂಗ ಮತ್ತು ನಾಗರಿಕ ಸೇವಾವಲಯಕ್ಕೆ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. ವಿದೇಶದಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದ ರಾಯಭಾರಿ ಸಿಬ್ಬಂದಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ನಾವೆಲ್ಲರೂ ನಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ದೇಶ ಮತ್ತು ನನ್ನ ಸಹ ನಾಗರಿಕರಿಗೆ ಸೇವೆ ಸಲ್ಲಿಸಲು ನಮ್ಮನ್ನು ಅರ್ಪಿಸಿಕೊಳ್ಳೋಣ. ಈ ಪ್ರಯತ್ನದಲ್ಲಿ ನಿಮಗೆಲ್ಲರಿಗೂ ನನ್ನ ಶುಭಾಶಯಗಳು. 
ಧನ್ಯವಾದಗಳು
ಜೈಹಿಂದ್!  
ಜೈ ಭಾರತ್!



(Release ID: 1999754) Visitor Counter : 228