ಗೃಹ ವ್ಯವಹಾರಗಳ ಸಚಿವಾಲಯ

​​​​​​​ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರ-2024


ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರ್-2024ರ ಸಾಂಸ್ಥಿಕ ವಿಭಾಗದಲ್ಲಿ ಉತ್ತರ ಪ್ರದೇಶದ 60 ಪ್ಯಾರಾಚೂಟ್ ಫೀಲ್ಡ್ ಆಸ್ಪತ್ರೆ ಆಯ್ಕೆ

Posted On: 23 JAN 2024 10:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿದೆ

2024ನೇ ಸಾಲಿಗೆ, ಸಾಂಸ್ಥಿಕ ವಿಭಾಗದಲ್ಲಿ ಉತ್ತರ ಪ್ರದೇಶದ 60 ಪ್ಯಾರಾಚೂಟ್ ಫೀಲ್ಡ್ ಆಸ್ಪತ್ರೆಯನ್ನು ವಿಪತ್ತು ನಿರ್ವಹಣೆಯಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರ -2024 ಕ್ಕೆ  ಆಯ್ಕೆ ಮಾಡಲಾಗಿದೆ.

ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಭಾರತ ಸರ್ಕಾರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರ ಎಂದು ಕರೆಯಲ್ಪಡುವ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಿದೆ. ಪ್ರತೀ ವರ್ಷ  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಪ್ರಶಸ್ತಿಯು ಸಂಸ್ಥೆಯಾಗಿದ್ದ  ಸಂದರ್ಭದಲ್ಲಿ 51 ಲಕ್ಷ ರೂ.ಗಳ ನಗದು ಬಹುಮಾನ ಮತ್ತು ಪ್ರಮಾಣಪತ್ರ ಮತ್ತು ವ್ಯಕ್ತಿಯಾಗಿದ್ದ  ಸಂದರ್ಭದಲ್ಲಿ 5 ಲಕ್ಷ ರೂ.ಗಳ ನಗದು ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ದೇಶವು ವಿಪತ್ತು ನಿರ್ವಹಣಾ ಪದ್ಧತಿಗಳು, ಸನ್ನದ್ಧತೆ, ತಗ್ಗಿಸುವಿಕೆ ಮತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿದೆ, ಇದರ ಪರಿಣಾಮವಾಗಿ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಾವುನೋವುಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಕೇಂದ್ರ ಗೃಹ ಸಚಿವರು ವಿಪತ್ತು ಸನ್ನದ್ಧತೆಯನ್ನು ನಿರಂತರವಾಗಿ ಪರಿಶೀಲಿಸುತ್ತಾರೆ ಮತ್ತು ಸಮುದಾಯದ ತರಬೇತಿ ಮತ್ತು ಜೀವ ಹಾಗು ಆಸ್ತಿಪಾಸ್ತಿ ನಷ್ಟವನ್ನು ಕಡಿಮೆ ಮಾಡಲು ಭಾಗೀದಾರರಿಂದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡುತ್ತಾರೆ.

2024ನೇ ಸಾಲಿನ ಪ್ರಶಸ್ತಿಗೆ 2023ರ ಜುಲೈ 1 ರಿಂದ ಆನ್ಲೈನ್ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. 2024ನೇ ಸಾಲಿನ ಪ್ರಶಸ್ತಿ ಯೋಜನೆಗೆ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿತ್ತು. ಪ್ರಶಸ್ತಿ ಯೋಜನೆಗೆ ಪ್ರತಿಕ್ರಿಯೆಯಾಗಿ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ 245 ಮೌಲ್ಯಯುತ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು.

ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ 2024 ರ ಪ್ರಶಸ್ತಿ ವಿಜೇತರ ಅತ್ಯುತ್ತಮ ಕೆಲಸದ ಸಾರಾಂಶ ಈ ಕೆಳಗಿನಂತಿದೆ:

ಉತ್ತರ ಪ್ರದೇಶದ 60 ಪ್ಯಾರಾಚೂಟ್ ಫೀಲ್ಡ್ ಹಾಸ್ಪಿಟಲ್  1942 ರಲ್ಲಿ ಸ್ಥಾಪನೆಯಾಯಿತು. ಇದು ಭಾರತೀಯ ಸಶಸ್ತ್ರ ಪಡೆಗಳ ಏಕೈಕ ವಾಯುಗಾಮಿ ವೈದ್ಯಕೀಯ ಸಂಸ್ಥೆಯಾಗಿದ್ದು, ವಿವಿಧ ಜಾಗತಿಕ ಬಿಕ್ಕಟ್ಟಿನಲ್ಲಿ ಅಸಾಧಾರಣ ಸೇವೆಗಾಗಿ ಗುರುತಿಸಲ್ಪಟ್ಟಿದೆ. ಶಾಂತಿ ಮತ್ತು ಯುದ್ಧದ ಸಮಯದಲ್ಲಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಕಾರ್ಯಾಚರಣೆಗಳನ್ನು ಕೈಗೊಳ್ಳುವುದು ಇದರ ಪ್ರಾಥಮಿಕ ಆದ್ಯತೆಯ ಕೆಲಸಗಳಲ್ಲಿ ಸೇರಿದೆ. ಉತ್ತರಾಖಂಡ ಪ್ರವಾಹ (2013), ನೇಪಾಳ ಭೂಕಂಪ (2015) ಸಮಯದಲ್ಲಿ ಮೈತ್ರಿ ಮತ್ತು ಇಂಡೋನೇಷ್ಯಾ ಸುನಾಮಿ ಸಮಯದಲ್ಲಿ ಆಪರೇಷನ್ ಸಮುದ್ರ ಮೈತ್ರಿ (2018) ಭಾಗವಾಗಿ ವೈದ್ಯಕೀಯ ನೆರವು ಒದಗಿಸಿದೆ. ಇತ್ತೀಚೆಗೆ, 2023 ರ ಫೆಬ್ರವರಿಯಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪಕ್ಕೆ ಪ್ರತಿಕ್ರಿಯೆಯಾಗಿ, ಘಟಕವು 99 ಸದಸ್ಯರ ತಂಡವನ್ನು ತ್ವರಿತವಾಗಿ ಒಟ್ಟುಗೂಡಿಸಿತು ಮತ್ತು ಹಟಾಯ್  ಪ್ರಾಂತ್ಯದ ಶಾಲಾ ಕಟ್ಟಡದಲ್ಲಿ ಸೀಮಿತ ಸಂಪನ್ಮೂಲಗಳು  ಮತ್ತು ಭಾಷಾ ಅಡೆತಡೆಗಳನ್ನು ಮೀರಿ 30 ಹಾಸಿಗೆಗಳ ಆಸ್ಪತ್ರೆಯನ್ನು ರೂಪಿಸಿದ್ದಲ್ಲದೆ ಟರ್ಕಿಯಲ್ಲಿ ಭಾರತದ ಪ್ರವರ್ತಕ ಲೆವೆಲ್ -2 ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಿತು.  ಈ ಘಟಕವು ಪಾರು ಮಾಡುವ/ರಕ್ಷಿಸುವ , ಚಿಕಿತ್ಸೆಯ ಸರದಿ ನಿರ್ಧಾರ, ಶಸ್ತ್ರಚಿಕಿತ್ಸೆ, ದಂತ ಚಿಕಿತ್ಸೆ, ಎಕ್ಸ್ ರೇ ಮತ್ತು ಪ್ರಯೋಗಾಲಯ ಸೌಲಭ್ಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೈದ್ಯಕೀಯ ಸೇವೆಗಳನ್ನು ಒದಗಿಸಿತು ಮತ್ತು 'ಆಪರೇಷನ್ ದೋಸ್ತ್' ನ ಭಾಗವಾಗಿ 12 ದಿನಗಳ ಅವಧಿಯಲ್ಲಿ 3600 ರೋಗಿಗಳಿಗೆ ಆರೈಕೆಯನ್ನೂ ಒದಗಿಸಿತು.

****



(Release ID: 1998824) Visitor Counter : 71