ಪ್ರಧಾನ ಮಂತ್ರಿಯವರ ಕಛೇರಿ

ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 10 ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಜಾಗತಿಕ ಉದ್ಯಮ ಮುಖಂಡರು

Posted On: 10 JAN 2024 12:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದ ʻಮಹಾತ್ಮಾ ಮಂದಿರʼದಲ್ಲಿ ಗುಜರಾತ್ ಜಾಗತಿಕ ಹೂಡಿಕೆದಾರರ ಸಮಾವೇಶದ 10ನೇ ಆವೃತ್ತಿಯಾದ ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼಕ್ಕೆ ಚಾಲನೆ ನೀಡಿದರು. ಈ ವರ್ಷದ ಶೃಂಗಸಭೆಯು 'ಭವಿಷ್ಯದ ಹೆಬ್ಬಾಗಿಲು' ವಿಷಯಾಧಾರಿತವಾಗಿ ಆಯೋಜನೆಗೊಂಡಿದ್ದು, 34 ಪಾಲುದಾರ ರಾಷ್ಟ್ರಗಳು ಮತ್ತು 16 ಪಾಲುದಾರ ಸಂಸ್ಥೆಗಳು ಭಾಗವಹಿಸಿವೆ. ಈಶಾನ್ಯ ಪ್ರದೇಶಗಳಲ್ಲಿ ಹೂಡಿಕೆಯ ಅವಕಾಶಗಳನ್ನು ಪ್ರದರ್ಶಿಸಲು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಈ ಶೃಂಗಸಭೆಯನ್ನು ವೇದಿಕೆಯಾಗಿ ಬಳಸುತ್ತಿದೆ.
ಉದ್ಯಮದ ಅನೇಕ ಮುಖಂಡರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಏರ್ಸೆಲರ್ ಮಿತ್ತಲ್ ಅಧ್ಯಕ್ಷ ಶ್ರೀ ಲಕ್ಷ್ಮಿ ಮಿತ್ತಲ್ ಅವರು  ಮಾತನಾಡಿ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ʻವೈಬ್ರೆಂಟ್ ಗುಜರಾತ್ʼನ 20ನೇ ವಾರ್ಷಿಕೋತ್ಸವಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಮೆಗಾ ಜಾಗತಿಕ ಕಾರ್ಯಕ್ರಮವಾದ ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಗೆ ಸಾಂಸ್ಥಿಕ ಚೌಕಟ್ಟು ಒದಗಿಸುವ ನಿಟ್ಟಿನಲ್ಲಿ ಪ್ರಧಾನಿಯವರು ನೀಡಿದ ಮಹತ್ವವನ್ನು ಶ್ಲಾಘಿಸಿದರು. ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼದ ತತ್ವಗಳಲ್ಲಿ ಪ್ರಧಾನಮಂತ್ರಿಯವರ ನಂಬಿಕೆ ಹಾಗೂ ಪ್ರತಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜಾಗತಿಕ ದಕ್ಷಿಣದ ಧ್ವನಿಯನ್ನು ಬಲಪಡಿಸಲು ಪ್ರಧಾನಿಯವರ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಉಕ್ಕಿನ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮಿತ್ತಲ್, 2021ರಲ್ಲಿ ʻಏರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಹಜೀರಾ ವಿಸ್ತರಣಾ ಯೋಜನೆʼಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಿದರು. ಯೋಜನೆಯ ಮೊದಲ ಹಂತವು 2026ರ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ನವೀಕರಿಸಬಹುದಾದ ಇಂಧನ ಮತ್ತು ಹಸಿರು ಜಲಜನಕದಂತಹ ಹಸಿರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಜಪಾನ್ನ ʻಸುಜುಕಿ ಮೋಟಾರ್ ಕಾರ್ಪೊರೇಷನ್ʼನ ಅಧ್ಯಕ್ಷರಾದ ಶ್ರೀ ತೋಶಿಹಿರೊ ಸುಜುಕಿ ಅವರು, ಪ್ರಧಾನಮಂತ್ರಿಯವರ ದಿಟ್ಟ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ದೇಶದಲ್ಲಿ ಉತ್ಪಾದನಾ ವಲಯದ ಉದ್ಯಮಗಳಿಗೆ ನೀಡಿದ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು. ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ ಎಂದು ಹೇಳಿದ ಸುಜುಕಿ, ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಧಾನಿಯವರ ಪ್ರಗತಿಪರ ಕಾರ್ಯವಿಧಾನದ ಪರಿಣಾಮವನ್ನು ಎತ್ತಿ ತೋರಿದರು. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಒತ್ತಿಹೇಳಿದ ಅವರು, ಭಾರತದಲ್ಲಿ ಉತ್ಪಾದಿಸಲಾದ ಮೊದಲ ವಿದ್ಯುತ್ಚಾಲಿತ ವಾಹನವನ್ನು (ಇವಿ) ಹೊರತರುವ ಕಂಪನಿಯ ಯೋಜನೆಗಳನ್ನು ಪ್ರಸ್ತಾಪಿಸಿದರು. ಜೊತೆಗೆ ಈ ವಾಹನಗಳನ್ನು ಯುರೋಪಿಯನ್ ದೇಶಗಳು ಮತ್ತು ಜಪಾನ್ಗೆ ರಫ್ತು ಮಾಡುವ ಯೋಜನೆಗಳ ಬಗ್ಗೆಯೂ ಉಲ್ಲೇಖಿಸಿದರು. ಎಥೆನಾಲ್, ಹಸಿರು ಹೈಡ್ರೋಜನ್ ಮತ್ತು ಹಸುವಿನ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆಯ ಮೂಲಕ ಹಸಿರುಮನೆ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುವ ಸಂಸ್ಥೆಯ ಯೋಜನೆಯ ಬಗ್ಗೆ ಅವರು ಮಾಹಿತಿ ನೀಡಿದರು.

ರಿಲಯನ್ಸ್ ಗ್ರೂಪ್ನ ಶ್ರೀ ಮುಖೇಶ್ ಅಂಬಾನಿ ಅವರು ಮಾತನಾಡಿ, ʻವೈಬ್ರೆಂಟ್ ಗುಜರಾತ್ʼ ಅನ್ನು ಇಂದು ವಿಶ್ವದ ಅತ್ಯಂತ ಪ್ರತಿಷ್ಠಿತ ಹೂಡಿಕೆ ಶೃಂಗಸಭೆ ಎಂದು ಬಣ್ಣಿಸಿದರು. ಏಕೆಂದರೆ ಈ ರೀತಿಯ ಯಾವುದೇ ಶೃಂಗಸಭೆ 20 ವರ್ಷಗಳಿಂದ ಮುಂದುವರೆದಿಲ್ಲ. ಇದು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲಿಷ್ಠವಾಗುತ್ತಾ ಸಾಗುತ್ತಿದೆ ಎಂದರು. "ಇದು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಸ್ಥಿರತೆಗೆ ಸಂದ ಗೌರವವಾಗಿದೆ," ಎಂದು ಶ್ರೀ ಮುಖೇಶ್ ಅವರು ಹೇಳಿದರು. ʻವೈಬ್ರೆಂಟ್ ಗುಜರಾತ್ʼನ ಪ್ರತಿಯೊಂದು ಆವೃತ್ತಿಯಲ್ಲೂ ತಾವು ಭಾಗವಹಿಸಿರುವುದಾಗಿ ಅವರು ಮಾಹಿತಿ ನೀಡಿದರು. ತಮ್ಮ ಗುಜರಾತಿ ಮೂಲದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶ್ರೀ ಅಂಬಾನಿ, ಗುಜರಾತ್ ಅನ್ನು ಕ್ರಾಂತಿಕಾರಿ ರೀತಿಯಲ್ಲಿ ಪರಿವರ್ತಿಸಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲಬೇಕು ಎಂದರು. "ಈ ಪರಿವರ್ತನೆಗೆ ಮುಖ್ಯ ಕಾರಣ ಆಧುನಿಕ ಕಾಲದ ಶ್ರೇಷ್ಠ ನಾಯಕರಾಗಿ ಹೊರಹೊಮ್ಮಿದ ನಮ್ಮ ನಾಯಕ, ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು. ಮೋದಿ ಅವರು ಮಾತನಾಡುವಾಗ, ಜಗತ್ತು ಸಹ ಮಾತನಾಡುವುದು ಮಾತ್ರವಲ್ಲ, ಅವರನ್ನು ಶ್ಲಾಘಿಸುತ್ತದೆ,ʼʼ ಎಂದರು. ಭಾರತದ ಪ್ರಧಾನಿ ಹೇಗೆ ಅಸಾಧ್ಯವನ್ನು ಸಾಧ್ಯವಾಗಿಸುತ್ತಾರೆ ಎಂಬುದನ್ನು ವಿವರಿಸಿದ ಶ್ರೀ  ಮುಖೇಶ್,  'ಮೋದಿ ಹೈ ತೋ ಮುಮ್ಕಿನ್ ಹೈ' ಎಂಬ ಘೋಷಣೆಯು ಈಗ ಜಾಗತಿಕ ಸಮುದಾಯದಲ್ಲಿ  ಪ್ರತಿಧ್ವನಿಸುವುದು ಮಾತ್ರವಲ್ಲ, ಈ ಮಾತನ್ನು ಮೇಲೆ ಜಗತ್ತು ಬಲವಾಗಿ ನಂಬುತ್ತದೆ ಎಂದರು. ತಮ್ಮ ತಂದೆ ಧೀರೂಭಾಯಿ ಅವರನ್ನು ಸ್ಮರಿಸಿದ ಶ್ರೀ ಮುಖೇಶ್ ಅಂಬಾನಿ, ʻರಿಲಯನ್ಸ್ʼ ಎಂದಿಗೂ ಗುಜರಾತಿ ಕಂಪನಿಯಾಗಿರಲಿದೆ ಎಂದು ಹೇಳಿದರು.  "ರಿಲಯನ್ಸ್ ಸಂಸ್ಥೆಯು ಪ್ರತಿಯೊಂದು ವ್ಯವಹಾರವೂ ನನ್ನ 7 ಕೋಟಿ ಸಹ ಗುಜರಾತಿಗಳ ಕನಸುಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿದೆ," ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ವಿಶ್ವದರ್ಜೆಯ ಸಂಪತ್ತನ್ನು ಸೃಷ್ಟಿಸಲು ಭಾರತದಾದ್ಯಂತ 150 ಶತಕೋಟಿ ಅಮೆರಿಕನ್ ಡಾಲರ್ಗಿಂತಲೂ ಅಧಿಕ ಅಂದರೆ, 12 ಲಕ್ಷ ಕೋಟಿ ರೂ.ಗಳನ್ನು ರಿಲಯನ್ಸ್ ಹೂಡಿಕೆ ಮಾಡಿದೆ. ಇದರಲ್ಲಿ ಮೂರನೇ ಒಂದು ಭಾಗದಷ್ಟನ್ನು  ಗುಜರಾತ್ನಲ್ಲೇ ಹೂಡಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಶ್ರೀ ಅಂಬಾನಿ ಅವರು ಗುಜರಾತ್ಗೆ 5 ಭರವಸೆಗಳನ್ನು ನೀಡಿದರು. ಮೊದಲನೆಯದಾಗಿ, ಮುಂದಿನ 10 ವರ್ಷಗಳಲ್ಲಿ ಗಮನಾರ್ಹ ಹೂಡಿಕೆಗಳೊಂದಿಗೆ ಗುಜರಾತ್ನ ಬೆಳವಣಿಗೆಯ ಕಥಾನಕದಲ್ಲಿ ರಿಲಯನ್ಸ್ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ. ನಿರ್ದಿಷ್ಟವಾಗಿ, ಗುಜರಾತ್ ಅನ್ನು ಹಸಿರು ಬೆಳವಣಿಗೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವಲ್ಲಿ ರಿಲಯನ್ಸ್ ಪ್ರಮುಖ ಪಾತ್ರ ವಹಿಸುತ್ತದೆ. "2030ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಗುಜರಾತ್ನ ಅರ್ಧದಷ್ಟು ಇಂಧನ ಅಗತ್ಯಗಳನ್ನು ಪೂರೈಸುವ ಗುರಿಗೆ ನಾವು ಸಹಾಯ ಮಾಡುತ್ತೇವೆ," ಎಂದು ಅವರು ಹೇಳಿದರು. ಜಾಮ್ನಗರದಲ್ಲಿ 5000 ಎಕರೆ ʻಧೀರೂಭಾಯಿ ಎನರ್ಜಿ ಗಿಗಾ ಕಾಂಪ್ಲೆಕ್ಸ್ʼ ನಿರ್ಮಾಣವಾಗುತ್ತಿದ್ದು, ಇದು 2024ರ ದ್ವಿತೀಯಾರ್ಧದಲ್ಲಿ ಕಾರ್ಯಾರಂಭಕ್ಕೆ ಸಿದ್ಧವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಎರಡನೆಯದಾಗಿ, 5ಜಿ ವೇಗವಾಗಿ ವಿಸ್ತರಣೆಗೊಂಡಿದ್ದರಿಂದ, ಇಂದು ಗುಜರಾತ್ ಸಂಪೂರ್ಣವಾಗಿ 5ಜಿ ಸಕ್ರಿಯವಾಗಿದೆ. ಇದು ಡಿಜಿಟಲ್ ದತ್ತಾಂಶ ವೇದಿಕೆ ಮತ್ತು ಕೃತಕ ಬುದ್ಧಿಮತ್ತೆ ಅಳವಡಿಕೆಯಲ್ಲಿ ಗುಜರಾತ್ ಅನ್ನು ನಾಯಕನನ್ನಾಗಿ ಮಾಡುತ್ತದೆ. ಮೂರನೆಯದಾಗಿ, ರಿಲಯನ್ಸ್ ರೀಟೇಲ್ ವಿಭಾಗವು ಗುಣಮಟ್ಟದ ಉತ್ಪನ್ನಗಳನ್ನು ತರಲು ಮತ್ತು ಲಕ್ಷಾಂತರ ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಲು ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ. ನಾಲ್ಕನೆಯದಾಗಿ, ರಿಲಯನ್ಸ್ ಸಂಸ್ಥೆಯು ಗುಜರಾತ್ ಅನ್ನು ಹೊಸ ವಸ್ತುಗಳು ಮತ್ತು ಆವರ್ತನ ಆರ್ಥಿಕತೆಯಲ್ಲಿ ಪ್ರವರ್ತಕರನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. ರಿಲಯನ್ಸ್ ಸಮೂಹವು ಹಜೀರಾದಲ್ಲಿ ವಿಶ್ವದರ್ಜೆಯ ಕಾರ್ಬನ್ ಫೈಬರ್ ಘಟಕವನ್ನು ಸ್ಥಾಪಿಸುತ್ತಿದೆ. 2036ರ ಒಲಿಂಪಿಕ್ಸ್ಗೆ ಆತಿಥ್ಯ ವಹಿಸುವ ಪ್ರಧಾನಿಯವರ ಘೋಷಣೆಗೆ ಅನುಗುಣವಾಗಿ, ರಿಲಯನ್ಸ್ ಮತ್ತು ರಿಲಯನ್ಸ್ ಫೌಂಡೇಶನ್ ಗುಜರಾತ್ ನಲ್ಲಿ ಕ್ರೀಡೆ, ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಕೆಲಸ ಮಾಡಲು ಇತರ ಹಲವಾರು ಪಾಲುದಾರರೊಂದಿಗೆ ಕೈಜೋಡಿಸಲಿವೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ʻಭಾರತದ ಅಭಿವೃದ್ಧಿಗಾಗಿ ಗುಜರಾತ್ ಅಭಿವೃದ್ಧಿʼ ಎಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮದಯದಲ್ಲಿ ಪ್ರಧಾನಿ ಹೇಳುತ್ತಿದ್ದರು, ಈಗ 'ಪ್ರಧಾನ ಮಂತ್ರಿಯಾಗಿ ನಿಮ್ಮ ಧ್ಯೇಯವು ಜಾಗತಿಕ ಬೆಳವಣಿಗೆಗಾಗಿ ಭಾರತದ ಅಭಿವೃದ್ಧಿ' ಎಂದು ಬದಲಾಗಿದೆ ಎಂದು ಶ್ರೀ ಅಂಬಾನಿ ನೆನಪಿಸಿಕೊಂಡರು. “ನೀವು ಜಾಗತಿಕ ಒಳಿತಿನ ಮಂತ್ರದೊಂದಿಗೆ ಕೆಲಸ ಮಾಡುತ್ತಿದ್ದೀರಿ ಮತ್ತು ಭಾರತವನ್ನು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿ ಮಾಡುತ್ತಿದ್ದೀರಿ. ಕೇವಲ ಎರಡು ದಶಕಗಳಲ್ಲಿ ಗುಜರಾತ್ನಿಂದ ಜಾಗತಿಕ ವೇದಿಕೆಗೆ ನಿಮ್ಮ ಪ್ರಯಾಣದ ಯಶೋಗಾಥೆಯು ಆಧುನಿಕ ಮಹಾಕಾವ್ಯಕ್ಕಿಂತ ಕಡಿಮೆಯಿಲ್ಲ,ʼʼ  ಎಂದು ಶ್ರೀ ಮುಖೇಶ್ ಅವರು ಶ್ಲಾಘಿಸಿದರು. "ಯುವ ಪೀಳಿಗೆಯು ಆರ್ಥಿಕತೆಯನ್ನು ಪ್ರವೇಶಿಸಲು, ಆವಿಷ್ಕಾರ ಮಾಡಲು, ಮತ್ತು ಜೀವನವನ್ನು ಸುಗಮಗೊಳಿಸಲು ಮತ್ತು ಕೋಟ್ಯಂತರ ಜನರಿಗೆ ಗಳಿಕೆಯ ಸುಗಮತೆಯನ್ನು ಒದಗಿಸಲು ಇಂದಿನ ಭಾರತದ ಸಮಯವು ಅತ್ಯುತ್ತಮ ಸಮಯವಾಗಿದೆ”, ಎಂದರು. ರಾಷ್ಟ್ರೀಯವಾದಿಯ ಜೊತೆಗೆ ಅಂತರರಾಷ್ಟ್ರೀಯವಾದಿ ಆಗಿದ್ದಕ್ಕಾಗಿ ಮುಂಬರುವ ಪೀಳಿಗೆಯು ಪ್ರಧಾನಿಗೆ ಕೃತಜ್ಞರಾಗಿರುತ್ತದೆ. ನೀವು ʻವಿಕಸಿತ ಭಾರತʼಕ್ಕೆ ಭದ್ರ ಬುನಾದಿ ಹಾಕಿದ್ದೀರಿ. 2047ರ ವೇಳೆಗೆ ಭಾರತವು 35 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದನ್ನು ಭೂಮಿಯ ಮೇಲಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಗುಜರಾತ್ ಒಂದೇ ರಾಜ್ಯವು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ʻಮೋದಿ ಯುಗʼವು ಭಾರತವನ್ನು ಸಮೃದ್ಧಿ, ಪ್ರಗತಿ ಮತ್ತು ವೈಭವದ ಹೊಸ ಶಿಖರಗಳಿಗೆ ಕೊಂಡೊಯ್ಯುತ್ತದೆ ಎಂದು ವಿಶ್ವಾಸವನ್ನು ಪ್ರತಿಯೊಬ್ಬ ಗುಜರಾತಿ ಮತ್ತು ಪ್ರತಿಯೊಬ್ಬ ಭಾರತೀಯರೂ ಹೊಂದಿದ್ದಾರೆ ಎಂದರು.

ಅಮೆರಿಕದ ʻಮೈಕ್ರಾನ್ ಟೆಕ್ನಾಲಜೀಸ್ʼನ ಸಿಇಓ ಶ್ರೀ ಸಂಜಯ್ ಮೆಹ್ರೋತ್ರಾ ಅವರು, ದೇಶವನ್ನು ಅರೆವಾಹಕ (ಸೆಮಿಕಂಡಕ್ಟರ್) ಉತ್ಪಾದನೆಗೆ ಮುಕ್ತಗೊಳಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಧನ್ಯವಾದ ಅರ್ಪಿಸಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಮುನ್ನುಗ್ತಿರುವ ಸಮಯದಲ್ಲಿ ಕೈಗೊಂಡ ಈ ಕ್ರಮವು ಭವಿಷ್ಯದಲ್ಲಿ ಆರ್ಥಿಕತೆಗೆ ದೊಡ ಚಾಲಕ ಶಕ್ತಿಯಾಗಲಿದೆ ಎಂದು ಹೇಳಿದರು. ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಯು ಅರೆವಾಹಕ ಶಕ್ತಿಯಾಗಿ ಭಾರತದ ಬೆಳವಣಿಗೆಗೆ ನಿರ್ಣಾಯಕವಾದ ದೂರದೃಷ್ಟಿಯ ವಿಚಾರಗಳನ್ನು ಚರ್ಚಿಸುತ್ತದೆ. ಈ ವಲಯದಲ್ಲಿನ ಬಹು ಬೆಳವಣಿಗೆಯ ಅವಕಾಶಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಅವರು ಹೇಳಿದರು. ಗುಜರಾತ್ನಲ್ಲಿ ವಿಶ್ವದರ್ಜೆಯ ʻಮೆಮೊರಿ ಅಸೆಂಬ್ಲಿʼ ಮತ್ತು ʻಪರೀಕ್ಷಾ ಘಟಕʼ ಸ್ಥಾಪಿಸಲು ಸಹಾಯ ಮಾಡಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಅವರು ಧನ್ಯವಾದ ಅರ್ಪಿಸಿದರು. 500,000 ಚದರ ಅಡಿ ಪ್ರದೇಶವನ್ನು ಒಳಗೊಂಡ ಮೊದಲ ಹಂತವು 2025ರ ಆರಂಭದಲ್ಲಿ ಕಾರ್ಯನಿರ್ವಹಿಸಲಿದ್ದು, ಆ ಮೂಲಕ ಮುಂಬರುವ ವರ್ಷಗಳಲ್ಲಿ 5,000 ನೇರ ಉದ್ಯೋಗಗಳು ಮತ್ತು 15,000 ಹೆಚ್ಚುವರಿ ಸಮುದಾಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. "ಎರಡೂ ಹಂತಗಳಲ್ಲಿ ʻಮೈಕ್ರಾನ್ʼ ಮತ್ತು ಸರ್ಕಾರದ ಸಂಯೋಜಿತ ಹೂಡಿಕೆಯು 2.75 ಶತಕೋಟಿ ಅಮೆರಿಕನ್ ಡಾಲರ್ ತಲುಪಬಹುದು," ಎಂದು ಅವರು ಹೇಳಿದರು. ಅರೆವಾಹಕ ಉದ್ಯಮದಲ್ಲಿ ಭಾರತದಲ್ಲಿ ಹೂಡಿಕೆಗಳನ್ನು ಹೆಚ್ಚಿಸುವಲ್ಲಿ ಕಂಪನಿಯ ಪಾತ್ರವನ್ನು ಒತ್ತಿಹೇಳುವ ಮೂಲಕ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.  
ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಅವರು  ಮಾತನಾಡಿ, ತಾವು ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಯ ಪ್ರತಿ ಆವೃತ್ತಿಯ ಭಾಗವಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಪ್ರಧಾನಿಯವರ ಅಸಾಧಾರಣ ದೂರದೃಷ್ಟಿಗೆ ಧನ್ಯವಾದ ಅರ್ಪಿಸಿದ ಅದಾನಿ, ಅವರ ವಿಶಿಷ್ಟ ನಡೆಗಳು, ಭವ್ಯ ಮಹತ್ವಾಕಾಂಕ್ಷೆಗಳು, ನಿಖರವಾದ ಆಡಳಿತ ಮತ್ತು ದೋಷರಹಿತ ಅನುಷ್ಠಾನವನ್ನು ಶ್ಲಾಘಿಸಿದರು. ಭಾರತದ ಕೈಗಾರಿಕಾ ಭೂದೃಶ್ಯವನ್ನು ಮೂಲಭೂತವಾಗಿ ಮರುರೂಪಿಸುವ ನಿಟ್ಟಿನಲ್ಲಿ ರಾಜ್ಯಗಳು ಪರಸ್ಪರ ಸ್ಪರ್ಧೆ ಮತ್ತು ಸಹಕಾರದೊಂದಿಗೆ ಮುಂದೆ ಸಾಗಲು ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಚೋದಿಸಿದ ಪ್ರಧಾನಿಯವರ ಮನವಿಯನ್ನು ಅವರು ಪ್ರಶಂಸಿಸಿದರು. 2014ರಿಂದ, ಭಾರತದ ಜಿಡಿಪಿ 185% ಮತ್ತು ತಲಾ ಆದಾಯ 165% ರಷ್ಟು ಬೆಳೆದಿದೆ. ವಿಶೇಷವಾಗಿ ಭೌಗೋಳಿಕ-ರಾಜಕೀಯ ಅಸ್ಥಿರತೆ ಮತ್ತು ಸಾಂಕ್ರಾಮಿಕ ಸವಾಲುಗಳಿಂದ ಗುರುತಿಸಲಾದ ಸಮಯದಲ್ಲಿ ಇದು ಗಮನಾರ್ಹ ಸಾಧನೆಯಾಗಿದೆ ಎಂದು ಅವರು ಒತ್ತಿಹೇಳಿದರು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿಯವರ ಸಾಧನೆಗಳನ್ನು ಶ್ಲಾಘಿಸಿದ ಶ್ರೀ ಅದಾನಿ, ಜಾಗತಿಕ ವೇದಿಕೆಗಳಲ್ಲಿ ಧ್ವನಿ ಎತ್ತಲು ಬಯಸುವ ದೇಶದಿಂದ ಈಗ ಜಾಗತಿಕ ವೇದಿಕೆಗಳನ್ನು ರಚಿಸುವ ದೇಶದತ್ತ ರಾಷ್ಟ್ರದ ಪ್ರಯಾಣವನ್ನು ಎತ್ತಿ ತೋರಿದರು. ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಅಂತರರಾಷ್ಟ್ರೀಯ ಸೌರ ಮೈತ್ರಿಯ ಪ್ರಾರಂಭ ಮತ್ತು ಪ್ರಧಾನಿಯವರ ನಾಯಕತ್ವ, ಜಿ-20ಗೆ ಜಾಗತಿಕ ದಕ್ಷಿಣದ ಸೇರ್ಪಡೆಯನ್ನು ಉಲ್ಲೇಖಿಸಿದ ಅದಾನಿ, ಇದು ಹೆಚ್ಚು ಹೆಚ್ಚು ಒಳಗೊಂಡ ಜಾಗತಿಕ ಬೆಳವಣಿಗೆಗೆ ಮಾನದಂಡಗಳನ್ನು ನಿಗದಿಪಡಿಸಿದೆ ಎಂದರು. ಇದೇ ವೇಳೆ, ಇದು ಭಾರತೀಯ ಇತಿಹಾಸದಲ್ಲಿ ನಿರ್ಣಾಯಕ ಕ್ಷಣವಾಗಿದೆ ಎಂದು ಅದಾನಿ ಬಣ್ಣಿಸಿದರು. "ನೀವು ಭವಿಷ್ಯವನ್ನು ಊಹಿಸುವುದಿಲ್ಲ, ಬದಲಿಗೆ, ನೀವು ಅದನ್ನು ರೂಪಿಸುತ್ತೀರಿ," ಎಂದು ಅದಾನಿ ಹೇಳಿದರು. ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಮರುರೂಪಿಸಿದ್ದಕ್ಕಾಗಿ ಹಾಗೂ ʻವಸುದೈವ ಕುಟುಂಬಕಂʼ ಮತ್ತು ʻವಿಶ್ವ ಗುರುʼ ತತ್ವಗಳಿಂದ ಪ್ರೇರಿತವಾದ ಜಾಗತಿಕ ಸಾಮಾಜಿಕ ಚಾಂಪಿಯನ್ ಆಗಿ ಭಾರತವನ್ನು ಸ್ಥಾಪಿಸಿದ್ದಕ್ಕಾಗಿ ಪ್ರಧಾನಿಯನ್ನು ಶ್ಲಾಘಿಸಿದರು. 2047ರ ವೇಳೆಗೆ ಭಾರತವನ್ನು 'ವಿಕಸಿತ ಭಾರತ' ಮಾಡುವ ಪ್ರಧಾನ ಮಂತ್ರಿಯವರ ದೃಷ್ಟಿಕೋನದಿಂದಾಗಿ ಇಂದಿನ ಭಾರತವು ನಾಳೆಯ ಜಾಗತಿಕ ಭವಿಷ್ಯವನ್ನು ರೂಪಿಸಲು ಸಜ್ಜಾಗಿದೆ ಎಂದು ಅವರು ಹೇಳಿದರು. 2025ರ ವೇಳೆಗೆ ರಾಜ್ಯದಲ್ಲಿ 50,000 ಕೋಟಿ ರೂ.ಗಳ ಹೂಡಿಕೆಯ ಗುರಿಯನ್ನು ಮೀರಿ, 55,000 ಕೋಟಿ ರೂ.ಗಳ ಹೂಡಿಕೆ ಮಾಡುವುದಾಗಿ ಘೋಷಿಸಿದ ಅವರು, ಇದರಿಂದ ವಿವಿಧ ಕ್ಷೇತ್ರಗಳಲ್ಲಿ 25,000 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದರು. ʻಆತ್ಮನಿರ್ಭರ ಭಾರತʼಕ್ಕಾಗಿ ಹಸಿರು ಪೂರೈಕೆ ಸರಪಳಿಯನ್ನು ವಿಸ್ತರಿಸುವ ಬಗ್ಗೆ ಮತ್ತು ಸೌರ ಫಲಕಗಳು, ಪವನ ಟರ್ಬೈನ್ಗಳು, ಜಲ ವಿದ್ಯುದ್ವಿಭಜಕಗಳು, ಹಸಿರು ಅಮೋನಿಯಾ, ಪಿವಿಸಿ ಮತ್ತು ತಾಮ್ರ ಹಾಗೂ ಸಿಮೆಂಟ್ ಯೋಜನೆಗಳ ವಿಸ್ತರಣೆ ಸೇರಿದಂತೆ ಅತಿದೊಡ್ಡ ಸಮಗ್ರ ನವೀಕರಿಸಬಹುದಾದ ಇಂಧನ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಗುಜರಾತ್ನಲ್ಲಿ ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಅದಾನಿ ಸಮೂಹದ  ಯೋಜನೆಯ ಬಗ್ಗೆ ಮತ್ತು ಆ ಮೂಲಕ 1 ಲಕ್ಷಕ್ಕೂ ಅಧಿಕ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಬಗ್ಗೆ ಅವರು ಮಾಹಿತಿ ನೀಡಿದರು.

ದಕ್ಷಿಣ ಕೊರಿಯಾದ ʻಸಿಮ್ಟೆಕ್ʼ ಸಂಸ್ಥೆಯು ಸಿಇಒ ಜೆಫ್ರಿ ಚುನ್ ಅವರು ಮಾತನಾಡಿ, ಗುಜರಾತ್ ರಾಜ್ಯದಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷೆ ಘಟಕಗಳಲ್ಲಿ ಪ್ರಮುಖ ಪೂರೈಕೆ ಸರಪಳಿ ಪಾಲುದಾರರಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ತಮ್ಮ ಪ್ರಮುಖ ಗ್ರಾಹಕನಾದ ʻಮೈಕ್ರಾನ್ʼ ಸಂಸ್ಥೆಯು ಗುಜರಾತ್ನಲ್ಲಿ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೋ-ಲೊಕೇಶನ್ ಹೂಡಿಕೆದಾರರಾಗಿ ಭಾರತದಲ್ಲಿ ತಾವು ಆರಂಭಿಸಲಿರುವ ಯೋಜನೆಯ ಬಗ್ಗೆ ಉತ್ಸಾಹ  ವ್ಯಕ್ತಪಡಿಸಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯು ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರದಲ್ಲಿ ಹೊಸ ಪೂರೈಕೆ ಸರಪಳಿ ಜಾಲವನ್ನು ರಚಿಸುವ ಜಾಗತಿಕ ಆಂದೋಲನವನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು. ಭಾರತದಲ್ಲಿ ಮತ್ತೊಂದು ಸುತ್ತಿನ ʻಕೊ-ಲೊಕೇಷನ್ʼ ಹೂಡಿಕೆಯನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೆಂಬಲದ ಬಗ್ಗೆ ಉಲ್ಲೇಖಿಸಿದರು. ಇದು ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಜಾಲದಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚು ಬಲಪಡಿಸುತ್ತದೆ ಮತ್ತು ಭಾರತದ ಸ್ಥಳೀಯ ಪೂರೈಕೆದಾರರನ್ನು ಜಾಗತಿಕ ಪೂರೈಕೆ ಸರಪಳಿ ಪರಿಸರ ವ್ಯವಸ್ಥೆಯ ಭಾಗವಾಗಲು ಅನುವು ಮಾಡಿಕೊಡುತ್ತದೆ ಎಂದರು.

ʻಟಾಟಾ ಸನ್ಸ್ ಲಿಮಿಟೆಡ್ʼನ ಅಧ್ಯಕ್ಷರಾದ ಶ್ರೀ ಎನ್ ಚಂದ್ರಶೇಖರನ್ ರವರು ಮಾತನಾಡಿ, "ಇಷ್ಟು ದೀರ್ಘಕಾಲದವರೆಗೆ ಗುಜರಾತ್ನ ಸ್ಥಿರ ಮತ್ತು ಅದ್ಭುತ ಪ್ರಗತಿಯು ದೂರದೃಷ್ಟಿಯ ನಾಯಕತ್ವ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ," ಎಂದು ಹೇಳಿದರು. ಆರ್ಥಿಕ ಅಭಿವೃದ್ಧಿಯು ಅದ್ಭುತ ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗಿದೆ ಮತ್ತು ಗುಜರಾತ್ ರಾಜ್ಯವು ಭಾರತದ ಭವಿಷ್ಯದ ಹೆಬ್ಬಾಗಿಲು ಎಂದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಅವರು ಒತ್ತಿ ಹೇಳಿದರು. ಟಾಟಾ ಸಂಸ್ಥೆಯ ಸಂಸ್ಥಾಪಕರಾದ ಜೆಮ್ಶೆಡ್ಜೀ ಟಾಟಾ ಅವರು ನವಸಾರಿಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಟಾಟಾ ಸಮೂಹದ ಗುಜರಾತ್ ಮೂಲದ ಬಗ್ಗೆ ಅವರು ಒತ್ತಿ ಹೇಳಿದರು. ಇಂದು 21 ಟಾಟಾ ಸಮೂಹದ ಕಂಪನಿಗಳು ರಾಜ್ಯದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿವೆ. ʻಇವಿʼ ವಾಹನಗಳು, ಬ್ಯಾಟರಿ ಉತ್ಪಾದನೆ, ʻಸಿ295ʼ ರಕ್ಷಣಾ ವಿಮಾನಗಳು ಮತ್ತು ಅರೆವಾಹಕ ಫ್ಯಾಬ್, ಸುಧಾರಿತ ಉತ್ಪಾದನಾ ಕೌಶಲ್ಯ ನಿರ್ಮಾಣ ಕ್ಷೇತ್ರಗಳಲ್ಲಿ ಗುಜರಾತ್ನಲ್ಲಿ ಟಾಟಾ ಸಮೂಹದ ವಿಸ್ತರಣಾ ಯೋಜನೆಯ ಬಗ್ಗೆಯೂ ಅವರು ವಿವರಿಸಿದರು. "ಟಾಟಾ ಸಮೂಹದ ಪ್ರಮುಖ ಹೂಡಿಕೆ ತಾಣಗಳಲ್ಲಿ ಗುಜರಾತ್ ಒಂದಾಗಿದೆ ಮತ್ತು ರಾಜ್ಯದ ಅಭಿವೃದ್ಧಿಯ ಪ್ರಯಾಣದಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ," ಎಂದು ಅವರು ಹೇಳಿದರು.

ʻಡಿಪಿ ವರ್ಲ್ಡ್ʼನ ಅಧ್ಯಕ್ಷರಾದ ಶ್ರೀ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರು ಮಾತನಾಡಿ, ʻವೈಬ್ರೆಂಟ್ ಗುಜರಾತ್ʼಗಾಗಿ ಪ್ರಧಾನಮಂತ್ರಿಯವರ ಆಶಯವು ಸಾಕಾರವಾಗುತ್ತಿರುವುದನ್ನು ನೋಡುವುದು ಒಂದು ಹೃದಯಸ್ಪರ್ಶಿ ಅನುಭವ ಎಂದರು. ಇದೇ ವೇಳೆ, ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಗುಜರಾತ್ ಸರ್ಕಾರವನ್ನು ಅಭಿನಂದಿಸಿದರು. ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಯು ಪ್ರಧಾನಮಂತ್ರಿಯವರ 'ವಿಕಸಿತ ಭಾರತ@2047' ಆಶಯದಿಂದ ಮಾರ್ಗದರ್ಶನ ಪಡೆದ ಭಾರತದ ಪ್ರಮುಖ ವ್ಯಾಪಾರ ವೇದಿಕೆಯಾಗಿದೆ ಎಂದು ಅವರು ಹೇಳಿದರು. ʻಗಿಫ್ಟ್ ಸಿಟಿʼ, ʻಧೋಲೆರಾ ವಿಶೇಷ ಹೂಡಿಕೆ ಪ್ರದೇಶʼ ಮತ್ತು ʻಗುಜರಾತ್ ಮೆರಿಟೈಮ್ ಕ್ಲಸ್ಟರ್ʼನಂತಹ ವಿವಿಧ ಕೈಗಾರಿಕಾ ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸಿ ಉತ್ತೇಜಿಸಿದ್ದಕ್ಕಾಗಿ ಅವರು ಸರ್ಕಾರವನ್ನು ಶ್ಲಾಘಿಸಿದರು. ಇದು ಭವಿಷ್ಯದ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಭಾರತ ಮತ್ತು ʻಯುಎಇʼ ನಡುವಿನ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಬಗ್ಗೆಯೂ ಬೆಳಕು ಚೆಲ್ಲಿದ ಅವರು, ಗುಜರಾತ್ನಲ್ಲಿ 2017 ರಿಂದ 2.4 ಶತಕೋಟಿ ಡಾಲರ್ಗಿಂತಲೂ ಅಧಿಕ ಹೂಡಿಕೆ ಮೂಲಕ ʻಯುಎಇʼ ದೇಶವು ಭಾರತದ ಅತಿದೊಡ್ಡ ಸಾಗರೋತ್ತರ ಹೂಡಿಕೆದಾರರಲ್ಲಿ ಒಂದಾಗಿದೆ ಹೊರಹೊಮ್ಮಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ಗುಜರಾತ್ 7 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿರುವುದನ್ನು ಅವರು ಉಲ್ಲೇಖಿಸಿದರು. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದು ಹೇಳಿದ ಶ್ರೀ ಸುಲಾಯೆಮ್, ಪ್ರಧಾನಿಯವರ ಬಲವಾದ ನಾಯಕತ್ವದಲ್ಲಿ ಬೆಳವಣಿಗೆ ಮುಂದುವರಿಯಲಿದೆ ಎಂದು ಒತ್ತಿ ಹೇಳಿದರು. ʻಗತಿಶಕ್ತಿʼಯಂತಹ ಹೂಡಿಕೆ ಉಪಕ್ರಮಗಳು ಭಾರತ ಮತ್ತು ಗುಜರಾತ್ ಆರ್ಥಿಕ ಶಕ್ತಿ ಕೇಂದ್ರಗಳಾಗಿ ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಗುಜರಾತ್ನ ಕಾಂಡ್ಲಾದಲ್ಲಿ 2 ದಶಲಕ್ಷ ಕಂಟೇನರ್ಗಳ ಸಾಮರ್ಥ್ಯದ ಅತ್ಯಾಧುನಿಕ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸಲು ಮತ್ತು ಇದರಲ್ಲಿ ಹೂಡಿಕೆ ಮಾಡಲು ʻಡಿಪಿ ವರ್ಲ್ಡ್ʼ ರೂಪಿಸಿರುವ ಯೋಜನೆಯ ಬಗ್ಗೆ ಅವರು ಮಾಹಿತಿ ನೀಡಿದರು. ದೇಶದ ಸರಕುಸಾಗಣೆ ಮೂಲಸೌಕರ್ಯವನ್ನು ವಿಸ್ತರಿಸುವಲ್ಲಿ ಭಾರತ ಸರ್ಕಾರದೊಂದಿಗೆ ಪಾಲುದಾರರಾಗಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಯ ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ ಗುಜರಾತ್ ಸರ್ಕಾರಕ್ಕೆ ಅವರು ಧನ್ಯವಾದ ಅರ್ಪಿಸಿದರು.

ʻಎನ್ವಿಡಿಯಾʼ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶ್ರೀ ಶಂಕರ್ ತ್ರಿವೇದಿ ಅವರು ಮಾತನಾಡಿ, ಹೆಚ್ಚುತ್ತಿರುವ ʻಜನರೇಟಿವ್ ಎಐʼನ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆದರು. ಭಾರತ ಸರ್ಕಾರದ ಹಿರಿಯ ನಾಯಕರಿಗೆ ಉಪನ್ಯಾಸ ನೀಡುವಂತೆ ತಮಗೆ ಪ್ರಧಾನಿ ಮೋದಿ ಅವರು ಆಹ್ವಾನ ನೀಡಿದ್ದನ್ನು ʻಎನ್ವಿಡಿಯಾʼ ಸಂಸ್ಥೆಯ ಸಿಇಒ ಶ್ರೀ ಜೆನ್ಸನ್ ಹುವಾಂಗ್ ಅವರು ನೆನಪಿಸಿಕೊಂಡರು. "ಅದು ಜಾಗತಿಕ ನಾಯಕರೊಬ್ಬರು ʻಎಐʼ ಬಗ್ಗೆ ಮಾತನಾಡುತ್ತಿದ್ದು ಅದೇ ಮೊದಲಾಗಿತ್ತು. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಧನ್ಯವಾದಗಳು. ಇದು ಭಾರತದಲ್ಲಿ ಮತ್ತು ಇಲ್ಲಿ ಗುಜರಾತ್ನಲ್ಲಿ ಉತ್ಪಾದಕ ʻಎಐʼ(ಕೃತಕ ಬುದ್ಧಿಮತ್ತೆ) ಅಳವಡಿಸಿಕೊಳ್ಳಲು ವೇಗವರ್ಧಕವಾಗಿ ಕೆಲಸ ಮಾಡಿದೆ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕೌಶಲ್ಯ ಅಭಿವೃದ್ಧಿಯಲ್ಲಿ ʻಎನ್ವಿಡಿಯಾʼ ಸಂಸ್ಥೆಯ ಪ್ರಯತ್ನಗಳನ್ನು ವಿವರಿಸಿದ ಅವರು, ʻʻಭಾರತವು ಪ್ರತಿಭೆ, ಪ್ರಮಾಣ ಮತ್ತು ಅದ್ಭುತ ದತ್ತಾಂಶ ಹಾಗೂ  ಅನನ್ಯ ಸಂಸ್ಕೃತಿಯನ್ನು ಹೊಂದಿದೆ,ʼʼ ಎಂದು ಹೇಳಿದರು. ʻಮೇಕ್ ಇನ್ ಇಂಡಿಯಾʼಕ್ಕೆ ʻಎನ್ವಿಡಿಯಾʼ ನೀಡಿರುವ ಬೆಂಬಲವನ್ನೂ ಅವರು ಒತ್ತಿ ಹೇಳಿದರು.

ʻಜೆರೋಧಾʼದ ಸ್ಥಾಪಕ ಮತ್ತು ಸಿಇಒ ನಿಖಿಲ್ ಕಾಮತ್ ಅವರು ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ದೇಶದ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಬೆಳಕು ಚೆಲ್ಲಿದರು. ಕಳೆದ 10 ವರ್ಷಗಳಲ್ಲಿ ದೇಶದ ನವೋದ್ಯಮ ಪರಿಸರ ವ್ಯವಸ್ಥೆ,  ಸಣ್ಣ ಉದ್ಯಮಿಗಳು ಮತ್ತು ಇ-ಕಾಮರ್ಸ್ನ ಪ್ರಗತಿಯನ್ನು ಶ್ಲಾಘಿಸಿದರು. ಇವೆಲ್ಲಾ 10 ವರ್ಷಗಳ ಹಿಂದೆ ಇರಲಿಲ್ಲ ಎಂದು ಹೇಳಿದರು. ʻನವೋದ್ಯಮʼಗಳು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ಸ್ಥಿರ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸಿದ ಕೀರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸಿದರು. 

***

 



(Release ID: 1994882) Visitor Counter : 81