ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

​​​​​​​ಕೋವಿಡ್-19 ಸ್ಥಿತಿಗತಿ ಮತ್ತು ದೇಶದಲ್ಲಿ ಕೆಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಮೇಲೆ ನಿಗಾ, ನಿಯಂತ್ರಣ ಮತ್ತು ನಿರ್ವಹಣೆಯ ಸಿದ್ಧತೆಗಳ ಪರಾಮರ್ಶೆ ನಡೆಸಿದ ಡಾ.ಮನ್ಸುಖ್ ಮಾಂಡವೀಯ


ಕೋವಿಡ್-19 ಸೋಂಕಿನ ಹೊಸ ಮತ್ತು ಉದಯವಾಗುತ್ತಿರುವ ವೈರಾಣುಗಳ ಬಗ್ಗೆ ಎಚ್ಚರಿಕೆ ಮತ್ತು ಸನ್ನದ್ದವಾಗಿರುವುದು ಅತಿ ಮುಖ್ಯ: ಡಾ.ಮಾಂಡವೀಯ

ಕೋವಿಡ್-19 ಪರಿಣಾಮಕಾರಿ ನಿರ್ವಹಣೆ ಖಾತ್ರಿಗೆ ಕೇಂದ್ರ ಮತ್ತು ರಾಜ್ಯಗಳು ಜಂಟಿ ಪ್ರಯತ್ನಗಳನ್ನು ಕೈಗೊಳ್ಳುವುದು ಅತ್ಯಗತ್ಯವೆಂದು ಪುನರುಚ್ಚಾರ 

“ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಅಣಕು ಪ್ರದರ್ಶನಗಳನ್ನು ಕೈಗೊಳ್ಳಬೇಕು ಮತ್ತು ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಬೇಕು’’

ರಾಜ್ಯಗಳು ಹೊಸದಾಗಿ ಕಂಡುಬರುತ್ತಿರುವ ಕೋವಿಡ್-19 ಪ್ರಕರಣಗಳು, ಗುಣಲಕ್ಷಣಗಳು ಮತ್ತು ಪ್ರಕರಣಗಳ ತೀವ್ರತೆ ಮೇಲೆ ನಿಗಾ ವಹಿಸಬೇಕು ಮತ್ತು ಸೂಕ್ತ ಸಾರ್ವಜನಿಕ ಆರೋಗ್ಯ ಸಜ್ಜುಗೊಳಿಸಬೇಕು

“ಹೊಸ ರೂಪಾಂತರಿಗಳ ಮೇಲೆ ನಿಗಾ ಇಡಲು ಅನುಕೂಲವಾಗುವಂತೆ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಎಲ್ಲಾ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು INSACOG ಪ್ರಯೋಗಾಲಯಗಳಿಗೆ ಕಳುಹಿಸಲು ಸೂಚನೆ

ಸರಿಯಾದ ಜಾಗೃತಿ, ಮಾಹಿತಿ ನಿರ್ವಹಣೆ ಮತ್ತು ವಾಸ್ತವವಾಗಿ ಸರಿಯಾದ ಮಾಹಿತಿ ಹಂಚಿಕೊಳ್ಳುವುದು ಖಾತ್ರಿಪಡಿಸಲು ರಾಜ್ಯಗಳಿಗೆ ಕರೆ

Posted On: 20 DEC 2023 1:01PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಭಾರತದಲ್ಲಿನ ಕೋವಿಡ್-19 ಸ್ಥಿತಿಗತಿ ಕುರಿತಂತೆ ಉನ್ನತ ಮಟ್ಟದ ಸಭೆ ಮತ್ತು ದೇಶದಲ್ಲಿ ಕೆಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಮೇಲೆ ನಿಗಾ, ನಿಯಂತ್ರಣ ಮತ್ತು ನಿರ್ವಹಣೆಯ ಸಿದ್ಧತೆಗಳ ಪರಿಶೀಲನಾ ಸಭೆ ನಡೆಯಿತು. ಅವರೊಂದಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಪ್ರೊ.ಎಸ್‌. ಪಿ.ಸಿಂಗ್ ಭಗೇಲ್ ಮತ್ತು ಡಾ. ಭಾರತಿ ಪ್ರವೀಣ್ ಪವಾರ್ ಮತ್ತು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಸಭೆಯಲ್ಲಿ ಭಾಗವಹಿಸಿದ್ದರು. 

ಸಭೆಯಲ್ಲಿ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಶ್ರೀ ಅಲೋ ಲಿಂಬಾಗ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಶ್ರೀ ಬ್ರಜೇಶ್ ಪಾಠಕ್, ಉತ್ತರಾಖಂಡದ ಆರೋಗ್ಯ ಸಚಿವ ಶ್ರೀ ಧನ್ ಸಿಂಗ್ ರಾವತ್ ಅವರು ದೈಹಿಕವಾಗಿ ಉಪಸ್ಥಿತರಿದ್ದರು. ಕರ್ನಾಟಕ ಆರೋಗ್ಯ ಸಚಿವ ಶ್ರೀ ದಿನೇಶ್ ಗುಂಡೂರಾವ್; ಹರಿಯಾಣದ ಶ್ರೀ ಆರೋಗ್ಯ ಸಚಿವ ಅನಿಲ್ ವಿಜ್ ; ಕೇರಳದ ಆರೋಗ್ಯ ಸಚಿವೆ ಶ್ರೀಮತಿ ವೀಣಾ ಜಾರ್ಜ್, ಗೋವಾದ ಆರೋಗ್ಯ ಸಚಿವ ಶ್ರೀ ವಿಶ್ವಜಿತ್ ಪ್ರತಾಪ್ಸಿಂಗ್ ರಾಣೆ; ಅಸ್ಸಾಂ ಆರೋಗ್ಯ ಸಚಿವ ಶ್ರೀ ಕೇಶಬ್ ಮಹಂತ, ಜಾರ್ಖಂಡ್ ಆರೋಗ್ಯ ಸಚಿವ ಶ್ರೀ ಬನ್ನಾ ಗುಪ್ತಾ, ಪಂಜಾಬ್ ಆರೋಗ್ಯ ಸಚಿವ ಡಾ.ಬಲ್ಬೀರ್ ಸಿಂಗ್, ದೆಹಲಿಯ ಆರೋಗ್ಯ ಸಚಿವ ಶ್ರೀ ಸೌರಭ್‌ ಭಾರದ್ವಾಜ್, ಹಿಮಾಚಲ ಪ್ರದೇಶದ ಆರೋಗ್ಯ ಸಚಿವ ಡಾ.(ಕರ್ನಲ್ ) ಧನಿ ರಾಮ್ ಶಂಡಿಲ್, ಮಹಾರಾಷ್ಟ್ರದ ಆರೋಗ್ಯ ಸಚಿವ ಪ್ರೊ.ತಾನಾಜಿರಾವ್ ಸಾವಂತ್, ತೆಲಂಗಾಣ ಆರೋಗ್ಯ ಸಚಿವ ಡಾ.ದಾಮೋದರ್ ರಾಜನರಸಿಂಹ, ಮಣಿಪುರದ ಆರೋಗ್ಯ ಸಚಿವ ಡಾ.ಸಪಂ ರಂಜನ್, ಒಡಿಶಾ ಆರೋಗ್ಯ ಸಚಿವ ಶ್ರೀ ನಿರಂಜನ್ ಪುಜಾರಿ, ಪುದುಚೇರಿ ಆಡಳಿತಾಧಿಕಾರಿ ಶ್ರೀ ರಂಗಸ್ವಾಮಿ ಮತ್ತಿತರರು ವರ್ಚುವಲ್ ರೂಪದಲ್ಲಿ ಭಾಗವಹಿಸಿದ್ದರು.

ಚೀನಾ, ಬ್ರೆಜಿಲ್, ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್‌(ಅಮೆರಿಕಾ)ದಂತಹ ರಾಷ್ಟ್ರ ಸೇರಿ ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದ ಉಂಟಾಗುವ ಸವಾಲನ್ನು ಒತ್ತಿಹೇಳಿದ ಕೇಂದ್ರ ಆರೋಗ್ಯ ಸಚಿವರು, ವಿಶೇಷವಾಗಿ ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಹೊಸ ಮತ್ತು ಉದಯೋನ್ಮುಖ ಕೋವಿಡ್ ರೂಪಾಂತರಿಗಳ ವಿರುದ್ಧ ಸಿದ್ಧರಾಗಿರಬೇಕು ಮತ್ತು ಎಚ್ಚರವಾಗಿರುವುದರ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು.  ಕೋವಿಡ್ ಇನ್ನೂ ಮುಗಿದಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಕೋವಿಡ್-19 ಪ್ರಕರಣಗಳು, ರೋಗದ ಗುಣಲಕ್ಷಣಗಳು ಮತ್ತು ಪ್ರಕರಣದ ತೀವ್ರತೆಯ ಹೊಸದಾಗಿ ಕಂಡುಬರುತ್ತಿರುವ ಪುರಾವೆಗಳನ್ನು ಮೇಲ್ವಿಚಾರಣೆ ಮಾಡಲು ಸೂಕ್ತವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರೂಪಿಸುವಂತೆ ರಾಜ್ಯಗಳಿಗೆ ಮನವಿ ಮಾಡಿದರು.  

"ಸಂಪೂರ್ಣ ಸರ್ಕಾರದ" ವಿಧಾನದ ಸ್ಪೂರ್ತಿಯಲ್ಲಿ ಹೊಸ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಡಾ. ಮಾಂಡವಿಯಾ ಒತ್ತಿ ಹೇಳಿದರು. ದೇಶದಲ್ಲಿ ಹರಡುತ್ತಿರುವ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚುವುದನ್ನು ಖಾತ್ರಿಪಡಿಸಿಕೊಳ್ಳಲು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನೆಟ್‌ವರ್ಕ್ ಮೂಲಕ ರೂಪಾಂತರಿಗಳನ್ನು ಪತ್ತೆಹಚ್ಚಲು ಪಾಸಿಟಿವ್ ಪ್ರಕರಣದ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ನಿಗಾ ವ್ಯವಸ್ಥೆಯನ್ನು ಬಲಪಡಿಸಲು ಅವರು ನಿರ್ದೇಶನ ನೀಡಿದರು. ಇದು ಸೂಕ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಸಮಯೋಚಿತವಾಗಿ ರೂಪಿಸಲು ಅನುಕೂಲವಾಗುತ್ತದೆ ಎಂದು ಅವರು ಉಲ್ಲೇಖಿಸಿದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪರೀಕ್ಷೆಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಮತ್ತು ನ್ಯುಮೋನಿಯಾ ತರಹದ ಅನಾರೋಗ್ಯದ ಮಾದರಿಗಳನ್ನು ಪ್ರತಿದಿನವೂ ಸೀಕ್ವೆನ್ಸಿಂಗ್ ಗಾಗಿ ಮತ್ತು  ಹೊಸ ರೂಪಾಂತರಿಗಳನ್ನು ಪತ್ತೆಹಚ್ಚಲು INSACOG ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬೊರೇಟರೀಸ್ (IGSLs)ಗೆ ಕಳುಹಿಸುವಂತೆ ಮನವಿ ಮಾಡಲಾಗಿದೆ.

ಎಲ್ಲಾ ರಾಜ್ಯಗಳು ಎಚ್ಚರಿಕೆಯಿಂದಿರಬೇಕು, ನಿಗಾ ಹೆಚ್ಚಿಸಬೇಕು ಮತ್ತು ಔಷಧಿಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು ಮತ್ತು ಲಸಿಕೆಗಳ ಸಾಕಷ್ಟು ದಾಸ್ತಾನು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವರು ಕರೆ ನೀಡಿದರು. ಪಿಎಸ್‌ಎ ಘಟಕಗಳು, ಆಕ್ಸಿಜನ್ ಸಾಂದ್ರಕಗಳು ಮತ್ತು ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು ಇತ್ಯಾದಿಗಳ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಅಣಕು ಪ್ರದರ್ಶನಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಉತ್ತಮ ಪದ್ದತಿಗಳ ವಿನಿಮಯವನ್ನು ಪ್ರೋತ್ಸಾಹಿಸಿದರು. ಉಸಿರಾಟದ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಾಸ್ತವಿಕವಾಗಿ ಸರಿಯಾದ ಮಾಹಿತಿಯ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಮಾಹಿತಿ ಸಂಗ್ರಹವನ್ನು ಸರಿಯಾಗಿ ನಿರ್ವಹಿಸಲು ಮತ್ತು ಯಾವುದೇ ಭೀತಿ ಎದುರಾಗದಂತೆ ನಕಲಿ ಸುದ್ದಿಗಳನ್ನು ಎದುರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ರಾಜ್ಯಗಳನ್ನು ಆಗ್ರಹಪಡಿಸಿದರು. ಸಮಯೋಚಿತ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲು ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತ್ವರಿತಗೊಳಿಸಲು ಕೋವಿಡ್ ಪೋರ್ಟಲ್‌ನಲ್ಲಿ ನೈಜ ಸಮಯದಲ್ಲಿ ಪ್ರಕರಣಗಳು, ಪರೀಕ್ಷೆಗಳು, ಪಾಸಿಟಿವಿಟಿ ಇತ್ಯಾದಿಗಳ ಮಾಹಿತಿಯನ್ನು ನೈಜ ಸಮಯದಲ್ಲಿ ಹಂಚಿಕೊಳ್ಳಲು ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡಿದರು ರಾಜ್ಯಗಳಿಗೆ ಕೇಂದ್ರದಿಂದ ಎಲ್ಲ ಬೆಂಬಲವಿದೆ ಎಂದು ಅವರು ಭರವಸೆ ನೀಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ಸುದನ್ಷು ಪಂತ್ ಅವರು ಪ್ರಾತ್ಯಕ್ಷಿಕೆ ಮೂಲಕ ಕೇಂದ್ರ ಆರೋಗ್ಯ ಸಚಿವರಿಗೆ ಕೋವಿಡ್-19 ಜಾಗತಿಕ ಸ್ಥಿತಿಗತಿ ಮತ್ತು ದೇಶೀಯ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದರು. ಜಾಗತಿಕ ಸ್ಥಿತಿಗತಿಗೆ ಹೋಲಿಸಿದರೆ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಿದ್ದರೂ, ಕಳೆದ ಎರಡು ವಾರಗಳಲ್ಲಿ 2023ರ ಡಿಸೆಂಬರ್ 6 ರಂದು 115 ರಿಂದ 614ಕ್ಕೆ ಸಕ್ರಿಯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ತಿಳಿಸಲಾಗಿದೆ. ಶೇ. 92.8 ರಷ್ಟು ಪ್ರಕರಣಗಳು ಮನೆಯಲ್ಲಿ ಪ್ರತ್ಯೇಕವಾಗಿವೆ, ಇದು ಸೌಮ್ಯ ಸ್ವಭಾವದ ಅನಾರೋಗ್ಯವನ್ನು ಸೂಚಿಸುತ್ತದೆ. ಕೋವಿಡ್-19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವ ದರಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ, ಇತರ ವೈದ್ಯಕೀಯ ಪರಿಸ್ಥಿತಿಗಳಿಂದ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳಲ್ಲಿ ಪ್ರಾಸಂಗಿಕವಾಗಿ ಕೋವಿಡ್-19 ಕಂಡುಬಂದಿದೆ. ಕೇರಳ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಪ್ರತಿದಿನದ ಪಾಸಿಟಿವಿಟಿ ದರ ಏರಿಕೆಯಾಗಿದೆ.

SARS-CoV-2 ನ ಹೊಸ ರೂಪಾಂತರಿ JN.1 ಕುರಿತು, ಈ ರೂಪಾಂತರವು ಪ್ರಸ್ತುತ ತೀವ್ರ ವೈಜ್ಞಾನಿಕ ಪರಿಶೀಲನೆಯಲ್ಲಿದೆ, ಆದರೆ ತಕ್ಷಣ ಅತಂಕ ಪಡಬೇಕಾಗಿಲ್ಲ ಎಂದು ತಿಳಿಸಲಾಗಿದೆ. JN.1 ರ ಕಾರಣದಿಂದಾಗಿ ಭಾರತದಲ್ಲಿ ಯಾವುದೇ ಪ್ರಕರಣಗಳ ಕ್ಲಸ್ಟರಿಂಗ್ ಕಂಡುಬಂದಿಲ್ಲ ಮತ್ತು ಎಲ್ಲಾ ಪ್ರಕರಣಗಳು ಸೌಮ್ಯ ಸ್ವರೂಪದ್ದಾಗಿರುತ್ತವೆ ಮತ್ತು ಅವರೆಲ್ಲರೂ ಯಾವುದೇ ತೊಂದರೆಗಳಿಲ್ಲದೆ ಚೇತರಿಸಿಕೊಂಡಿದ್ದಾರೆ.

ಡಾ.ವಿ.ಕೆ.ಪೌಲ್, ಕೋವಿಡ್ ಪ್ರಕರಣಗಳ ಉಲ್ಬಣ ಮತ್ತು ಹೊಸ ರೂಪಾಂತರಿಗಳ ಉದಯದಿಂದ ಎದುರಾಗಿರುವ ಸವಾಲನ್ನು ನಿಭಾಯಿಸಲು ಸಂಪೂರ್ಣ-ಸರ್ಕಾರದ ವಿಧಾನದ ಅಗತ್ಯವನ್ನು ಪುನರುಚ್ಚರಿಸಿದರು. ಭಾರತದಲ್ಲಿನ ವೈಜ್ಞಾನಿಕ ಸಮುದಾಯವು ಹೊಸ ರೂಪಾಂತರಿಗಳನ್ನು ನಿಕಟವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಆದರೆ ರಾಜ್ಯಗಳು ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ತಮ್ಮ ನಿಗಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು.

ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಮತ್ತು ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ , ಐಸಿಎಂಆರ್ ಸದ್ಯ ಹೊಸ ಜೆಎನ್.1 ರೂಪಾಂತರಿ ಜಿನೋಮ್ ಸೀಕ್ವೆನ್ಸಿಂಗ್ ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಕೋವಿಡ್-19 ಸ್ಥಿತಿಗತಿಯ ಮೇಲೆ ನಿಗಾವಹಿಸಲು ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಲು ಅವರು ರಾಜ್ಯಗಳಿಗೆ ಕರೆ ನೀಡಿದರು, ಆದರೆ ಭಯಪಡಲು ಯಾವುದೇ ಕಾರಣವಿಲ್ಲ ಎಂದು ಉಲ್ಲೇಖಿಸಿದರು.

ಆರೋಗ್ಯ ಖಾತೆ ರಾಜ್ಯ ಸಚಿವರು, ಕೇಂದ್ರದಿಂದ ಪಡೆಯುತ್ತಿರುವ ನೆರವು ಮತ್ತು ಮಾರ್ಗದರ್ಶನವನ್ನು ಶ್ಲಾಘಿಸಿದರು. ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ ಪರೀಕ್ಷೆ ಮತ್ತು ಕಣ್ಗಾವಲು ಕ್ರಮಗಳನ್ನು ಹೆಚ್ಚಿಸುವ ಭರವಸೆಯನ್ನು ಅವರು ನೀಡಿದರು.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಎಲ್‌.ಎಸ್‌. ಚಾಂಗ್ಸನ್, ಆರೋಗ್ಯ ಸಚಿವಾಲಯ, ಐಸಿಎಂಆರ್ ಮತ್ತು ಎನ್ ಸಿಡಿಡಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. 

****

 


 



(Release ID: 1988691) Visitor Counter : 56