ಪ್ರಧಾನ ಮಂತ್ರಿಯವರ ಕಛೇರಿ

ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಸಮಾರೋಪ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಭಾಷಣದ ಕನ್ನಡ ಅನುವಾದ

Posted On: 17 NOV 2023 8:57PM by PIB Bengaluru

ಮಹನೀಯರೇ,

ನಮಸ್ಕಾರ!

ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಸಮಾರೋಪಕ್ಕೆ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್, ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್ ದ್ವೀಪ ಸೇರಿದಂತೆ ಸುಮಾರು 130 ದೇಶಗಳು ಈ ದಿನದ ಶೃಂಗಸಭೆಯಲ್ಲಿ ಭಾಗವಹಿಸಿರುವುದು ನನಗೆ ಖುಷಿ ತಂದಿದೆ. ಒಂದು ವರ್ಷದೊಳಗೆ ಗ್ಲೋಬಲ್ ಸೌತ್ ನ ಎರಡು ಶೃಂಗ ಸಭೆಗಳನ್ನು ಹೊಂದುವುದು ಮತ್ತು ಅದರಲ್ಲಿ ನೀವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು, ಜಗತ್ತಿಗೆ ಮಹತ್ವದ ಸಂದೇಶವನ್ನು ರವಾನಿಸುತ್ತದೆ. ಸಂದೇಶವು ಜಾಗತಿಕ ದಕ್ಷಿಣವು ತನ್ನ ಸ್ವಾಯತ್ತತೆಯನ್ನು ಬಯಸುತ್ತದೆ. ಜಾಗತಿಕ ಆಡಳಿತದಲ್ಲಿ ಗ್ಲೋಬಲ್ ಸೌತ್ ತನ್ನ ಧ್ವನಿಯನ್ನು ಬಯಸುತ್ತದೆ ಎಂಬುದು ಸಂದೇಶವಾಗಿದೆ. ಇದರಲ್ಲಿ ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಗ್ಲೋಬಲ್ ಸೌತ್ ಸಿದ್ಧವಾಗಿದೆ ಎಂಬ ಸಂದೇಶವಿದೆ.

ಮಹನೀಯರೇ,

ಈ ಶೃಂಗಸಭೆಯು ಮತ್ತೊಮ್ಮೆ ನಮ್ಮ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಚರ್ಚಿಸಲು ಅವಕಾಶವನ್ನು ನೀಡಿದೆ. ಜಿ-20 ನಂತಹ ಪ್ರಮುಖ ವೇದಿಕೆಯಲ್ಲಿ ಜಾಗತಿಕ ದಕ್ಷಿಣದ ಧ್ವನಿಯನ್ನು ಕಾರ್ಯಸೂಚಿಗೆ ಸೇರಿಸಲು ನಮಗೆ ಅವಕಾಶ ಸಿಕ್ಕಿದೆ ಎಂದು ಭಾರತ ಹೆಮ್ಮೆಪಡುತ್ತದೆ. ಇದರ ಶ್ರೇಯವು ನಿಮ್ಮ ಬಲವಾದ ಬೆಂಬಲ ಮತ್ತು ಭಾರತದ ಮೇಲೆ ನೀವು ಇಟ್ಟಿರುವ ನಿಮ್ಮ ಬಲವಾದ ನಂಬಿಕೆಗೆ ಸಲ್ಲುತ್ತದೆ. ಇದಕ್ಕಾಗಿ, ನನ್ನ ಹೃದಯಾಂತರಾಳದಿಂದ ನಿಮ್ಮೆಲ್ಲರಿಗೂ ನಾನು ತುಂಬಾ ಕೃತಜ್ಞತೆ ಅರ್ಪಿಸುತ್ತಿದ್ದೇನೆ. ಮತ್ತು ಜಿ-20 ಶೃಂಗಸಭೆಯಲ್ಲಿ ರೂಪಿತ ಧ್ವನಿಯ ಪ್ರತಿಧ್ವನಿಯು ಮುಂದಿನ ದಿನಗಳಲ್ಲಿ ಇತರ ಜಾಗತಿಕ ವೇದಿಕೆಗಳಲ್ಲಿ ಕೇಳಿಬರುತ್ತದೆ ಎಂದು ನನಗೆ ವಿಶ್ವಾಸವಿದೆ.

ಮಹನೀಯರೇ,

ಮೊದಲ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ನಾನು ಕೆಲವು ಬದ್ಧತೆಗಳ ಬಗ್ಗೆ ಮಾತನಾಡಿದ್ದೆ. ಎಲ್ಲದರಲ್ಲೂ ಪ್ರಗತಿ ಸಾಧಿಸಲಾಗಿದೆ ಎಂದು ವರದಿ ಮಾಡಲು ನನಗೆ ಸಂತೋಷವಾಗಿದೆ. ಇಂದು ಬೆಳಿಗ್ಗೆ, "ದಕ್ಷಿಣ್" ಹೆಸರಿನ ಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಪ್ರಾರಂಭಿಸಲಾಯಿತು. ಈ ಕೇಂದ್ರವು ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿ ಸಮಸ್ಯೆಗಳಿಗೆ ಸಂಬಂಧಿಸಿದ ಸಂಶೋಧನೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಉಪಕ್ರಮದ ಮೂಲಕ, ಜಾಗತಿಕ ದಕ್ಷಿಣದಲ್ಲಿನ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಸಹ ಹುಡುಕಲಾಗುತ್ತದೆ. ಆರೋಗ್ಯ ಮೈತ್ರಿ ಉಪಕ್ರಮದ ಅಡಿಯಲ್ಲಿ, ಭಾರತ ಮಾನವೀಯ ಸಹಾಯಕ್ಕಾಗಿ ಅಗತ್ಯ ಔಷಧಗಳು ಮತ್ತು ಸರಬರಾಜುಗಳನ್ನು ತಲುಪಿಸಲು ಬದ್ಧವಾಗಿದೆ. ಕಳೆದ ತಿಂಗಳು, ನಾವು ಪ್ಯಾಲೆಸ್ತೀನ್ ಗೆ 7 ಟನ್ ಗಳಷ್ಟು ಔಷಧಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಿದ್ದೇವೆ. ನವೆಂಬರ್ 3 ರಂದು ನೇಪಾಳದಲ್ಲಿ ಸಂಭವಿಸಿದ ಭೂಕಂಪದ ನಂತರ, ಭಾರತವು ನೇಪಾಳಕ್ಕೆ 3 ಟನ್ ಗಳಿಗಿಂತ ಹೆಚ್ಚು ಔಷಧಿಗಳ ನೆರವನ್ನು ಕಳುಹಿಸಿದೆ. ಗ್ಲೋಬಲ್ ಸೌತ್ ನೊಂದಿಗೆ ಡಿಜಿಟಲ್ ಆರೋಗ್ಯ ಸೇವೆ ವಿತರಣೆಯಲ್ಲಿ ತನ್ನ ಸಾಮರ್ಥ್ಯಗಳನ್ನು ಹಂಚಿಕೊಳ್ಳಲು ಭಾರತ ಸಂತೋಷಪಡುತ್ತದೆ.

ಜಾಗತಿಕ-ದಕ್ಷಿಣ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕ್ರಮದ ಮೂಲಕ, ಸಾಮರ್ಥ್ಯ ನಿರ್ಮಾಣ ಮತ್ತು ಸಂಶೋಧನೆಯೊಂದಿಗೆ ಜಾಗತಿಕ ದಕ್ಷಿಣದಲ್ಲಿರುವ ನಮ್ಮ ಪಾಲುದಾರರಿಗೆ ಸಹಾಯ ಮಾಡಲು ನಾವು ಅವಕಾಶ ಎದುರುನೋಡುತ್ತೇವೆ. "ಜಿ20 ಉಪಗ್ರಹ ಮಿಷನ್ ಪರಿಸರ ಮತ್ತು ಹವಾಮಾನ ವೀಕ್ಷಣೆ" ಯಿಂದ ಪಡೆದ ಹವಾಮಾನ ಮತ್ತು ಹವಾಮಾನ ಡೇಟಾವನ್ನು ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳಲ್ಲಿ ಹಂಚಿಕೊಳ್ಳಲಾಗುವುದು.

ಗ್ಲೋಬಲ್ ಸೌತ್ ಸ್ಕಾಲರ್ ಶಿಪ್ ಪ್ರೋಗ್ರಾಂ ಅನ್ನು ಸಹ ಪ್ರಾರಂಭಿಸಲಾಗಿದೆ ಎಂದು ತಿಳಿದು ನನಗೆ ಖುಷಿಯಾಗಿದೆ. ಈಗ ಜಾಗತಿಕ ದಕ್ಷಿಣದ ದೇಶಗಳ ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಈ ವರ್ಷ, ಭಾರತದ ಮೊದಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಅನ್ನು ಸಹ ತಾಂಜಾನಿಯಾದಲ್ಲಿ ತೆರೆಯಲಾಗಿದೆ. ಗ್ಲೋಬಲ್ ಸೌತ್ ನಲ್ಲಿ ಸಾಮರ್ಥ್ಯ ವರ್ಧನೆಗಾಗಿ ಇದು ನಮ್ಮ ಹೊಸ ಉಪಕ್ರಮವಾಗಿದ್ದು, ಇದನ್ನು ಇತರ ಪ್ರದೇಶಗಳಲ್ಲಿಯೂ ತೆರೆಯಲಾಗುವುದು.

ನಮ್ಮ ಯುವ ರಾಜತಾಂತ್ರಿಕರಿಗೆ, ನಾನು ಜನವರಿಯಲ್ಲಿ ಜಾಗತಿಕ-ದಕ್ಷಿಣ ಯುವ ರಾಜತಾಂತ್ರಿಕರ ವೇದಿಕೆಯನ್ನು ಪ್ರಸ್ತಾಪಿಸಿದ್ದೆ. ಇದರ ಉದ್ಘಾಟನಾ ಸಮಾರಂಭವನ್ನು ನಮ್ಮ ದೇಶಗಳ ಯುವ ರಾಜತಾಂತ್ರಿಕರು ಭಾಗವಹಿಸುವ ಮೂಲಕ ಶೀಘ್ರದಲ್ಲೇ ಆಯೋಜಿಸಲಾಗುವುದು.

ಮಹನೀಯರೇ,

ಮುಂದಿನ ವರ್ಷದಿಂದ, ಜಾಗತಿಕ ದಕ್ಷಿಣದ ಅಭಿವೃದ್ಧಿ ಆದ್ಯತೆಗಳ ಮೇಲೆ ಕೇಂದ್ರೀಕರಿಸುವ ವಾರ್ಷಿಕ ಅಂತರರಾಷ್ಟ್ರೀಯ ಸಮ್ಮೇಳನವನ್ನು ಭಾರತದಲ್ಲಿ ಪ್ರಾರಂಭಿಸಲು ನಾವು ಪ್ರಸ್ತಾಪಿಸುತ್ತೇವೆ. ಜಾಗತಿಕ ಸೌತ್ ನ ಪಾಲುದಾರ ಸಂಶೋಧನಾ ಕೇಂದ್ರಗಳು ಮತ್ತು ಥಿಂಕ್-ಟ್ಯಾಂಕ್ಗಳ ಸಹಯೋಗದೊಂದಿಗೆ "ದಕ್ಷಿಣ್" ಕೇಂದ್ರವು ಈ ಸಮ್ಮೇಳನವನ್ನು ಆಯೋಜಿಸುತ್ತದೆ. ಜಾಗತಿಕ ದಕ್ಷಿಣದ ಅಭಿವೃದ್ಧಿ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿದೆ, ಇದು ನಮ್ಮ ಭವಿಷ್ಯವನ್ನು ಬಲಪಡಿಸುತ್ತದೆ.

ಮಹನೀಯರೇ,

ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ನಾವು ಸಾಮಾನ್ಯ ಆಸಕ್ತಿಯನ್ನು ಹೊಂದಿದ್ದೇವೆ. ಪಶ್ಚಿಮ ಏಷ್ಯಾದ ಗಂಭೀರ ಪರಿಸ್ಥಿತಿಯ ಕುರಿತು ನಾನು ಇಂದು (23-22-2023) ಬೆಳಿಗ್ಗೆ ನನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ. ಈ ಎಲ್ಲಾ ಬಿಕ್ಕಟ್ಟುಗಳು ಜಾಗತಿಕ ದಕ್ಷಿಣದ ಮೇಲೆ ಪ್ರಮುಖ ಪ್ರಭಾವವನ್ನು ಬೀರುತ್ತವೆ. ಆದ್ದರಿಂದ, ಈ ಎಲ್ಲಾ ಸಂದರ್ಭಗಳಿಗೆ ನಾವು ಒಗ್ಗಟ್ಟಿನಿಂದ, ಒಂದೇ ಧ್ವನಿಯಲ್ಲಿ ಮತ್ತು ಸಂಘಟಿತ ಪ್ರಯತ್ನಗಳೊಂದಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

ಮಹನೀಯರೇ,

ನಮ್ಮೊಂದಿಗೆ, ಜಿ-20 ನ ಮುಂದಿನ ಅಧ್ಯಕ್ಷರಾದ ನನ್ನ ಸ್ನೇಹಿತ  ಮತ್ತು ಘನತೆವೆತ್ತ ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಲುಲಾ ಅವರು ಇದ್ದಾರೆ. ಬ್ರೆಜಿಲ್ನ ಜಿ-20 ಅಧ್ಯಕ್ಷ ಸ್ಥಾನವು ಜಾಗತಿಕ ದಕ್ಷಿಣದ ಆದ್ಯತೆಗಳು ಮತ್ತು ಹಿತಾಸಕ್ತಿಗಳನ್ನು ಬಲಪಡಿಸಲು ಮತ್ತು ಮುನ್ನಡೆಸಲು ಮುಂದುವರಿಯುತ್ತದೆ ಎಂದು ನನಗೆ ವಿಶ್ವಾಸವಿದೆ.  ಟ್ರೋಯಿಕಾ ಸದಸ್ಯರಾಗಿ, ಭಾರತವು ಬ್ರೆಜಿಲ್ ಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ನಾನು ನನ್ನ ಸ್ನೇಹಿತ ಅಧ್ಯಕ್ಷ ಶ್ರೀ  ಲೂಲಾ ಅವರನ್ನು ಅವರ ಅಭಿಪ್ರಾಯಗಳಿಗಾಗಿ ಆಹ್ವಾನಿಸುತ್ತೇನೆ ಮತ್ತು ನಂತರ ನಿಮ್ಮೆಲ್ಲರಿಂದ ಅಭಿಪ್ರಾಯ ಕೇಳಲು ಎದುರು ನೋಡುತ್ತಿದ್ದೇನೆ.

ತುಂಬ ಧನ್ಯವಾದಗಳು!

ಹಕ್ಕು ನಿರಾಕರಣೆ: ಇದು ಪ್ರಧಾನಮಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

******



(Release ID: 1979407) Visitor Counter : 51