ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
'ವೋಕಲ್ ಫಾರ್ ಲೋಕಲ್ʼ ಧ್ಯೇಯದಡಿ ಐದು ದಿನಗಳ 'ದೀಪಾವಳಿ ಉತ್ಸವʼವನ್ನು ಉದ್ಘಾಟಿಸಿದ ಕೆವಿಐಸಿ ಅಧ್ಯಕ್ಷರು
ನವೆಂಬರ್ 11ರವರೆಗೆ ಖಾದಿ ಉತ್ಪನ್ನಗಳ ಮೇಲೆ ಶೇ. 20ವರೆಗೆ ವಿಶೇಷ ರಿಯಾಯಿತಿ ಸೌಲಭ್ಯ
Posted On:
08 NOV 2023 4:08PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್ʼನ 106ನೇ ಸರಣಿಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದಾಗ ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಸ್ಥಳೀಯವಾಗಿಯೇ ತಯಾರಾದ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದ್ದರು. ಅವರ ನಾಯಕತ್ವದಲ್ಲಿ "ವೋಕಲ್ ಫಾರ್ ಲೋಕಲ್" ಅಭಿಯಾನವನ್ನು ಇನ್ನಷ್ಟು ಸ್ಫೂರ್ತಿದಾಯಕವಾಗಿ ಮುನ್ನಡೆಸುವ ದೃಷ್ಟಿಯಿಂದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಅವರು ಐದು ದಿನಗಳ "ದೀಪಾವಳಿ ಉತ್ಸವ"ವನ್ನು ನವದೆಹಲಿಯ ಕೊನ್ನೌಟ್ ಪ್ರದೇಶದಲ್ಲಿರುವ ಖಾದಿ ಲಾಂಜ್‌ನ ಗ್ರಾಮಶಿಲ್ಪದಲ್ಲಿ ನಿನ್ನೆ ಉದ್ಘಾಟಿಸಿದರು.
ಪ್ರಧಾನಮಂತ್ರಿಯವರ ಕರೆಗೆ ಪೂಕರವಾಗಿ ದೆಹಲಿಯ ಜನರಿಗೆ ಸ್ಥಳೀಯ ಉತ್ಪನ್ನಗಳನ್ನು ಖರೀದಿ ಸೌಲಭ್ಯ ಕಲ್ಪಿಸುವ ಸಲುವಾಗಿ ʼದೀಪಾವಳಿ ಉತ್ಸವʼದಲ್ಲಿ ವಿಶೇಷ ಶ್ರೇಣಿಯ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಹೆಚ್ಚು ಹೆಚ್ಚು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳು ಸಾಮಾನ್ಯ ಜನರನ್ನು ತಲುಪಿಸುವ ವ್ಯವಸ್ಥೆ ಕಲ್ಪಿಸಲು ಒತ್ತು ನೀಡಲಾಗಿದೆ. ಖಾದಿ ಉತ್ಪನ್ನಗಳು ಮಾರಾಟವಾದಷ್ಟು ಅದು ಗ್ರಾಮೀಣ ಭಾರತದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳಿಗೆ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮನೋಜ್ ಕುಮಾರ್, “ಖಾದಿ ಪ್ರಿಯರ ಕೈಗೆಟುಕುವ ದರದಲ್ಲಿ ವ್ಯಾಪಕ ಶ್ರೇಣಿಯ ಸ್ಥಳೀಯ ಉತ್ಪನ್ನಗಳು ದೊಡ್ಡ ಸಂಗ್ರಹ ಉತ್ಸವದಲ್ಲಿದೆ. ದೆಹಲಿಯಲ್ಲಿ ಕುಂಬಾರರು ತಯಾರಿಸಿದ ಮಣ್ಣಿನ ಉತ್ಪನ್ನಗಳಿಂದ ಹಿಡಿದು ಲಕ್ಷ್ಮೀ ಮತ್ತು ಗಣೇಶನ ಸುಂದರವಾದ ಮೂರ್ತಿಗಳು, ಕರಕುಶಲ ಮಣ್ಣಿನ ದೇವರ ಗುಡಿಗಳು, ಗ್ರಾಮೋದ್ಯೋಗ ಮತ್ತು ಪಿಎಂಇಜಿಪಿ ಘಟಕಗಳು ಸಿರಿಧಾನ್ಯದಿಂದ ತಯಾರಿಸಿದ ಉತ್ಪನ್ನಗಳು, ಮೇಣದಬತ್ತಿಗಳು, ಅಗರಬತ್ತಿ, ಖಾದಿ ಜಾಕೆಟ್‌ಗಳು 50 ರಿಂದ 1000 ರೂ. ದರದಲ್ಲಿ ಖರೀದಿಗೆ ಲಭ್ಯವಿದೆ. ಖಾದಿ ಕುಶಲಕರ್ಮಿಗಳು ಮತ್ತು ವಿನ್ಯಾಸಕಾರರು ವಿಶೇಷವಾಗಿ ವಿನ್ಯಾಸಗೊಳಿಸಿದ ನಾನಾ ಫ್ಯಾಶನ್ ಖಾದಿ ಉಡುಪುಗಳ ವಿಶೇಷ ಶ್ರೇಣಿಯೂ ಲಭ್ಯವಿದೆ,ʼʼ ಎಂದು ಹೇಳಿದರು.
ದೀಪಾವಳಿ ಉತ್ಸವ ಮತ್ತು ಆತ್ಮನಿರ್ಭರ ಭಾರತ್ ಅಭಿಯಾನವನ್ನು ಸಂಭ್ರಮದಿಂದ ಆಚರಿಸುವ ರೀತಿಯಲ್ಲಿ ನವದೆಹಲಿಯ ಕನ್ನಾಟ್ ಪ್ರದೇಶದಲ್ಲಿರುವ ಖಾದಿ ಗ್ರಾಮೋದ್ಯೋಗ ಭವನವು ಖಾದಿ ಉತ್ಪನ್ನಗಳ ಮೇಲೆ ಶೇ. 20ರಷ್ಟು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ ಸೇರಿದಂತೆ ವಿಶೇಷ ರಿಯಾಯಿತಿಗಳನ್ನು ಸಹ ನೀಡುತ್ತಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅನುಕರಣೀಯ ನಾಯಕತ್ವದ ಯಶೋಗಾಥೆಯನ್ನು ಉಲ್ಲೇಖಿಸಿದ ಶ್ರೀ ಕುಮಾರ್ ಅವರು, “ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು ಹಿಂದಿನ ಆರ್ಥಿಕ ವರ್ಷದಲ್ಲಿ 1.34 ಲಕ್ಷ ಕೋಟಿ ರೂ. ವಹಿವಾಟು ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕೇವಲ ಒಂದೇ ಒಂದು ಹಣಕಾಸು ವರ್ಷದಲ್ಲಿ 9.54 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದೆ,ʼʼ ಎಂದು ಸಂತಸದಿಂದ ನುಡಿದರು.
2023ರ ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿಯಂದು ನವದೆಹಲಿಯ ಕನ್ನಾಟ್ ಪ್ರದೇಶದಲ್ಲಿರುವ ಪ್ರಮುಖ ಖಾದಿ ಭವನದಲ್ಲಿ ಕೇವಲ ಒಂದೇ ದಿನದಲ್ಲಿ 1.52 ಕೋಟಿ ರೂ. ಮೌಲ್ಯದ ಖಾದಿ ಉತ್ಪನ್ನಗಳು ಮಾರಾಟವಾಗಿದ್ದವು. ಕೆವಿಐಸಿಯು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ನಿರಂತರವಾಗಿ ಒತ್ತು ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆವಿಐಸಿಗೆ ಸಂಬಂಧಿಸಿದ ಲಕ್ಷಾಂತರ ಕುಶಲಕರ್ಮಿಗಳು ಜೀವನೋಪಾಯಕ್ಕೆ ನೆರವಾಗುವ ದೃಷ್ಟಿಯಿಂದ ಪ್ರತಿಯೊಬ್ಬರೂ ಹಬ್ಬಗಳ ಸಂದರ್ಭದಲ್ಲಿ ಸ್ವದೇಶಿ ಖಾದಿ ಉತ್ಪನ್ನಗಳನ್ನು ಖರೀದಿಸಬೇಕು,ʼʼ ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವಿನಿತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
*****
(Release ID: 1976016)
Visitor Counter : 100