ಪ್ರಧಾನ ಮಂತ್ರಿಯವರ ಕಛೇರಿ

ʻರಾಷ್ಟ್ರೀಯ ಏಕತಾ ದಿನ’ದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಮೇರಿ ಮಾಟಿ ಮೇರಾ ದೇಶ್’ ಅಭಿಯಾನದ ʻಅಮೃತ ಕಲಶ ಯಾತ್ರೆ’ಯ ಸಮಾರೋಪದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ


ದೇಶಾದ್ಯಂತದ ಸಾವಿರಾರು ʻಅಮೃತ ಕಲಶ ಯಾತ್ರಿ’ಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳು ಮಾತನಾಡಲಿದ್ದಾರೆ

ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ಅಭಿವೃದ್ಧಿಪಡಿಸಿದ ʻಅಮೃತ ಉದ್ಯಾನʼ ಮತ್ತು ʻಅಮೃತ ಮಹೋತ್ಸವ ಸ್ಮಾರಕʼವನ್ನು ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದೊಂದಿಗೆ ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವೂ ಸಂಪನ್ನಗೊಳ್ಳಲಿದೆ

ಯುವಕರಿಗಾಗಿ 'ಮೇರಾ ಯುವ ಭಾರತ್' (MY Bharat) ವೇದಿಕೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ

ʻಮೈ ಭಾರತ್ʼ ದೇಶದ ಯುವಕರಿಗೆ ಸಂಪೂರ್ಣ ಸರ್ಕಾರಿ ವೇದಿಕೆಯಾಗಲಿದೆ

Posted On: 30 OCT 2023 9:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್ 31ರಂದು ಸಂಜೆ 5 ಗಂಟೆಗೆ ಕರ್ತವ್ಯ ಪಥದಲ್ಲಿ ʻಮೇರಿ ಮಾಟಿ 9ಮೇರಾ ದೇಶ್ʼ ಅಭಿಯಾನದ ʻಅಮೃತ ಕಲಶ ಯಾತ್ರೆʼಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸಮಾರೋಪ ಸಮಾರಂಭದ ಭಾಗವೂ ಆಗಿದೆ. 

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಅಮೃತ ಉದ್ಯಾನʼ ಮತ್ತು ʻಅಮೃತ ಮಹೋತ್ಸವʼ ಸ್ಮಾರಕವನ್ನು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾವಿರಾರು ʻಅಮೃತ ಕಲಶ ಯಾತ್ರಿʼಗಳನ್ನು ಉದ್ದೇಶಿಸಿ ಪ್ರಧಾನಯವರು ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದ ಯುವಜನರಿಗಾಗಿ 'ಮೇರಾ ಯುವ ಭಾರತ್’(MY Bharat) ವೇದಿಕೆಗೆ ಚಾಲನೆ ನೀಡಲಿದ್ದಾರೆ.

ʻಮೇರಿ ಮಾಟಿ ಮೇರಾ ದೇಶ್’ 

ʻ ಅಭಿಯಾನವು ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ವೀರರು ಮತ್ತು ವೀರಾಂಗನೆಯರಿಗೆ ಸಲ್ಲಿಸುವ ಗೌರವವಾಗಿದೆ. ʻಜನ ಭಾಗೀದಾರಿʼ ಉಪಕ್ರಮದ ಆಶಯದೊಂದಿಗೆ, ಈ ಅಭಿಯಾನ ಅಡಿಯಲ್ಲಿ ದೇಶಾದ್ಯಂತ ಪಂಚಾಯತ್ / ಗ್ರಾಮ, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಚಟುವಟಿಕೆಗಳು ಮತ್ತು ಸಮಾರಂಭಗಳನ್ನು ನಡೆಸಲಾಗಿದೆ. ಸರ್ವೋಚ್ಚ ತ್ಯಾಗ ಮಾಡಿದ ಎಲ್ಲಾ ಕೆಚ್ಚೆದೆಯ ವೀರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ʻಶಿಲಾಫಲಕಂʼ(ಸ್ಮಾರಕ) ನಿರ್ಮಿಸುವುದು; ʻಶಿಲಾಫಲಕಂʼನಲ್ಲಿ ಜನರು ಕೈಗೊಂಡ 'ಪಂಚಪ್ರಣ್ ' ಪ್ರತಿಜ್ಞೆ; ಸ್ಥಳೀಯ ಪ್ರಬೇದದ ಸಸಿಗಳನ್ನು ನೆಡುವುದು ಮತ್ತು 'ಅಮೃತ ಉದ್ಯಾನ' (ವಸುಧಾ ವಂದನ್) ಅಭಿವೃದ್ಧಿಪಡಿಸುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳನ್ನು ಗೌರವಿಸುವ ಸನ್ಮಾನ ಸಮಾರಂಭಗಳು (ವೀರೋನ್ ಕಾ ವಂದನ್) ಇತ್ಯಾದಿ ಚಟುವಟಿಕೆಗಳು ಇದರಲ್ಲಿ ಸೇರಿವೆ.

ಈ ಅಭಿಯಾನವು ಭಾರಿ ಯಶಸ್ಸು ಕಂಡಿದ್ದು, 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 2.3 ಲಕ್ಷಕ್ಕೂ ಹೆಚ್ಚು ಶಿಲಾಫಲಕಗಳನ್ನು ನಿರ್ಮಿಸಲಾಗಿದೆ; ಸುಮಾರು 4 ಕೋಟಿ ಮಂದಿ ʻಪಂಚ ಪ್ರಣ್ ʼ ಸಂಕಲ್ಪ ಕೈಗೊಂಡು ಸೆಲ್ಫಿಗಳನ್ನು ಅಪ್ಲೋಡ್ ಮಾಡಿದ್ದಾರೆ. ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು 'ವೀರೋನ್ ಕಾ ವಂದನ್' ಕಾರ್ಯಕ್ರಮಗಳು ನಡೆದಿವೆ; 2.36 ಕೋಟಿಗೂ ಹೆಚ್ಚು ದೇಶೀಯ ಸಸಿಗಳನ್ನು ನೆಡಲಾಗಿದೆ. ಮತ್ತು ದೇಶಾದ್ಯಂತ ʻವಸುಧಾ ವಂದನʼ ವಿಷಯಾಧಾರಿತವಾಗಿ 2.63 ಲಕ್ಷ ʻಅಮೃತ ಉದ್ಯಾನʼಗಳನ್ನು ಅಭಿವೃದ್ಧಿಪಡಿಸಲಾಗಿದೆ.

'ಮೇರಿ ಮಾಟಿ ಮೇರಾ ದೇಶ್' ಅಭಿಯಾನವು ʻಅಮೃತ ಕಲಶ ಯಾತ್ರೆʼಯನ್ನು ಸಹ ಒಳಗೊಂಡಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿನ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಂದ ಮತ್ತು ನಗರ ಪ್ರದೇಶಗಳಲ್ಲಿನ ವಾರ್ಡ್ ಗಳಿಂದ ಮಣ್ಣು ಮತ್ತು ಅಕ್ಕಿ ಧಾನ್ಯಗಳನ್ನು ಸಂಗ್ರಹಿಸುವುದು ಇದರ ಒಂದು ಭಾಗವಾಗಿದೆ. ಇದನ್ನು ಬ್ಲಾಕ್ ಮಟ್ಟಕ್ಕೆ ಕಳುಹಿಸಲಾಗುತ್ತದೆ (ಈ ಹಂತದಲ್ಲಿ ಬ್ಲಾಕ್ ನಲ್ಲಿರುವ ಎಲ್ಲಾ ಗ್ರಾಮಗಳ ಮಣ್ಣನ್ನು ಮಿಶ್ರಣ ಮಾಡಲಾಗುತ್ತದೆ) ಮತ್ತು ನಂತರ ಅದನ್ನು ರಾಜ್ಯ ರಾಜಧಾನಿಗೆ ರವಾನಿಸಲಾಗುತ್ತದೆ. ರಾಜ್ಯ ಮಟ್ಟದಿಂದ ಮಣ್ಣನ್ನು ಸಾವಿರಾರು ʻಅಮೃತ ಕಲಶ ಯಾತ್ರಿʼಗಳೊಂದಿಗೆ ರಾಷ್ಟ್ರ ರಾಜಧಾನಿಗೆ ಕಳುಹಿಸಲಾಗುತ್ತದೆ.

ಅಕ್ಟೋಬರ್ 30, 2023 ರಂದು, ʻಅಮೃತ ಕಲಶ ಯಾತ್ರೆʼಯಲ್ಲಿ ಆಯಾ ಬ್ಲಾಕ್ ಗಳನ್ನು ಪ್ರತಿನಿಧಿಸುವ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಕಲಶದಿಂದ ಮಣ್ಣನ್ನು 'ಏಕ್ ಭಾರತ್ ಶ್ರೇಷ್ಠ ಭಾರತ್' ಆಶಯದಲ್ಲಿ ಒಂದು ದೈತ್ಯ ಅಮೃತ ಕಲಶದಲ್ಲಿ ಇರಿಸಲಿವೆ.  ಅಕ್ಟೋಬರ್ 31 ರಂದು ಪ್ರಧಾನಮಂತ್ರಿಯವರು ದೇಶಾದ್ಯಂತದ ಸಾವಿರಾರು ʻಅಮೃತ ಕಲಶ ಯಾತ್ರಿʼಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿರುವ ʻಅಮೃತ ಉದ್ಯಾನʼ ಮತ್ತು ʻಅಮೃತ ಮಹೋತ್ಸವ ಸ್ಮಾರಕʼವನ್ನು ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ನಿರ್ಮಿಸಲಾಗುವುದು.

ʻಮೇರಿ ಮಾಟಿ ಮೇರಾ ದೇಶ್ʼ ಅಭಿಯಾನವನ್ನು 'ಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸಮಾರೋಪ ಸಮಾರಂಭವಾಗಿ ರೂಪಿಸಲಾಗಿದೆ. ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು 2021ರ ಮಾರ್ಚ್ 12 ರಂದು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼ ಪ್ರಾರಂಭವಾಯಿತು. ಅಂದಿನಿಂದ ಇದರಡಿ ಉತ್ಸಾಹಭರಿತ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೈ ಭಾರತ್

ʻಮೇರಾ ಯುವ ಭಾರತ್ʼ(ಮೈ ಭಾರತ್) ಅನ್ನು ಸ್ವಾಯತ್ತ ಸಂಸ್ಥೆಯಾಗಿ ರಚಿಸಲಾಗುತ್ತಿದ್ದು, ಇದು ದೇಶದ ಯುವಕರಿಗೆ ಒಂದೇ ಗವಾಕ್ಷಿಯ ಸಂಪೂರ್ಣ ಸರ್ಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ದೇಶದ ಪ್ರತಿಯೊಬ್ಬ ಯುವಕರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ʻಮೈ ಭಾರತ್ʼ ವೇದಿಕೆಯು ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರದ ಸಂಪೂರ್ಣ ವ್ಯವಸ್ಥೆಯಾದ್ಯಂತ ಸಕ್ರಿಯ ಕಾರ್ಯವಿಧಾನವನ್ನು ಒದಗಿಸುತ್ತದೆ. ಇದರಿಂದ ಯುವಕರು ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳಬಹುದು ಮತ್ತು 'ವಿಕಸಿತ ಭಾರತ' ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಬಹುದು. ಸಮುದಾಯ ಬದಲಾವಣೆಯ ರೂವಾರಿಗಳು ಮತ್ತು ರಾಷ್ಟ್ರ ನಿರ್ಮಾತೃಗಳಾಗಲು ಯುವಕರನ್ನು ಪ್ರೇರೇಪಿಸುವುದು ಹಾಗೂ ಸರ್ಕಾರ ಮತ್ತು ನಾಗರಿಕರ ನಡುವಿನ 'ಯುವ ಸೇತು' ಆಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದು ʻಮೈ ಭಾರತ್ʼ ವೇದಿಕೆಯ ಉದ್ದೇಶವಾಗಿದೆ. ಈ ಅರ್ಥದಲ್ಲಿ, 'ಮೈ ಭಾರತ್' ದೇಶದಲ್ಲಿ 'ಯುವ ನೇತೃತ್ವದ ಅಭಿವೃದ್ಧಿ'ಗೆ ಭಾರಿ ಉತ್ತೇಜನವನ್ನು ನೀಡಲಿದೆ.
 

****



(Release ID: 1972970) Visitor Counter : 87