ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಉದ್ಯೋಗ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ 51,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು
"ಉದ್ಯೋಗ ಮೇಳದ ಪ್ರಯಾಣವು ಒಂದು ಪ್ರಮುಖ ಮೈಲುಗಲ್ಲನ್ನು ತಲುಪಿದೆ"
"ನಮ್ಮ ಸರ್ಕಾರವು ಯುವಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ"
"ನಾವು ಉದ್ಯೋಗವನ್ನು ಒದಗಿಸುವುದಲ್ಲದೆ ಪಾರದರ್ಶಕ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದೇವೆ"
"ಉದ್ಯೋಗದ ಅಧಿಸೂಚನೆಯಿಂದ ಉದ್ಯೋಗ ಪತ್ರದವರೆಗಿನ ಒಟ್ಟಾರೆ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ"
"ಇಂದು, ಭಾರತ ಸಾಗುತ್ತಿರುವ ಪಥ ಮತ್ತು ಅದರ ಪ್ರಗತಿಯ ವೇಗವು ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ"
ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ಆಟೋಮೇಷನ್ ಮತ್ತು ರಕ್ಷಣಾ ರಫ್ತು ಮುಂತಾದ ಹೊಸ ಕ್ಷೇತ್ರಗಳನ್ನು ಉತ್ತೇಜಿಸುವುದರ ಜೊತೆಗೆ ಸರ್ಕಾರ ಸಾಂಪ್ರದಾಯಿಕ ಕ್ಷೇತ್ರಗಳ ಬಲಪಡಿಸುತ್ತಿದೆ.
ಇಂದು, ಉದಯೋನ್ಮುಖ ಅವಕಾಶಗಳನ್ನು ಬಳಸಿಕೊಳ್ಳಲು ಭಾರತವು ತನ್ನ ಯುವಕರನ್ನು ಕೌಶಲ್ಯ ಮತ್ತು ಶಿಕ್ಷಣದೊಂದಿಗೆ ಸಜ್ಜುಗೊಳಿಸುತ್ತಿದೆ
"ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ"
Posted On:
28 OCT 2023 1:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಉದ್ಯೋಗ ಮೇಳವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ 51,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶದ ವಿವಿಧ ಭಾಗಗಳಿಂದ ಆಯ್ಕೆಗೊಂಡ ನೂತನ ನೌಕರರು ರೈಲ್ವೆ ಸಚಿವಾಲಯ, ಅಂಚೆ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು / ಇಲಾಖೆಗಳಿಗೆ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರ ಭಾಷಣದ ವೇಳೆ ದೇಶಾದ್ಯಂತ 37 ಸ್ಥಳಗಳನ್ನು ಉದ್ಯೋಗ ಮೇಳದೊಂದಿಗೆ ಸಂಪರ್ಕಿಸಲಾಯಿತು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉದ್ಯೋಗ ಮೇಳಗಳು ಪ್ರಾರಂಭವಾಗಿದ್ದು, ಕೇಂದ್ರ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿವಿಧ ಉದ್ಯೋಗ ಮೇಳಗಳಲ್ಲಿ ಲಕ್ಷಾಂತರ ಯುವಕರಿಗೆ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಆ ಮೂಲಕ ಉದ್ಯೋಗ ಮೇಳಗಳ ಪ್ರಯಾಣವು ಒಂದು ಪ್ರಮುಖ ಮೈಲುಗಲ್ಲನ್ನು ತಲುಪಿದೆ ಎಂದರು. ಇಂದು ಕೂಡ 50,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಪ್ರಧಾನಮಂತ್ರಿಯವರು ಹೊಸದಾಗಿ ನೇಮಕಗೊಂಡವರು ಮತ್ತು ಅವರ ಕುಟುಂಬಗಳಿಗೆ ಅಭಿನಂದನೆ ಸಲ್ಲಿಸಿದರು.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗಿರುವ ಉದ್ಯೋಗ ಮೇಳಗಳು ಯುವಜನರ ಭವಿಷ್ಯದ ಬಗ್ಗೆ ಸರ್ಕಾರದ ಬದ್ಧತೆಯ ಸಂಕೇತಗಳಾಗಿವೆ. ಈ ನಿಟ್ಟನಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ನಾವು ಉದ್ಯೋಗವನ್ನು ಒದಗಿಸುವುದಲ್ಲದೆ ಪಾರದರ್ಶಕ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದೇವೆ" ಎಂದು ಹೇಳಿದ ಶ್ರೀ ಮೋದಿ ಅವರು, ನೇಮಕಾತಿ ಪ್ರಕ್ರಿಯೆಗಳಲ್ಲಿ ಯುವಜನರಲ್ಲಿ ಹೆಚ್ಚಿದ ನಂಬಿಕೆಯ ಬಗ್ಗೆ ಉಲ್ಲೇಖಿಸಿದರು. ನೇಮಕಾತಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮಾತ್ರವಲ್ಲದೆ, ಪರೀಕ್ಷಾ ಕಾರ್ಯವಿಧಾನವನ್ನು ಪುನರ್‌ರಚಿಸಲು ಸಹ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯಲ್ಲಿ ನೇಮಕಾತಿಗೆ ತೆಗೆದುಕೊಳ್ಳುವ ಸಮಯವನ್ನು ಅರ್ಧಕ್ಕೆ ಇಳಿಸಲಾಗಿದೆ ಎಂದು ಅವರು ಒತ್ತಿಹೇಳಿದರು. "ಉದ್ಯೋಗದ ಅಧಿಸೂಚನೆಯಿಂದ ಉದ್ಯೋಗ ಪತ್ರದವರೆಗಿನ ಒಟ್ಟಾರೆ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ" ಎಂದು ಶ್ರೀ ಮೋದಿ ವಿವರಿಸಿದರು. ʻಎಸ್ಎಸ್‌ಸಿʼ ಅಡಿಯಲ್ಲಿ ನಡೆಸಲಾಗುವ ಕೆಲವು ಪರೀಕ್ಷೆಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪರೀಕ್ಷೆಗಳನ್ನು ಈಗ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ, 13 ವಿವಿಧ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿಯ ವೇಗದಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿರುವ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು. ವಿಶ್ವಸಂಸ್ಥೆಯಿಂದ ʻಅತ್ಯುತ್ತಮ ಪ್ರವಾಸೋದ್ಯಮ ಗ್ರಾಮʼ ಮಾನ್ಯತೆ ಪಡೆದ ಧೋರ್ಡೊ ಗ್ರಾಮವನ್ನು ಹಾಗೂ ವಿಶ್ವ ಪರಂಪರೆಯ ತಾಣದ ಮಾನ್ಯತೆ ಪಡೆದ ಹೊಯ್ಸಳ ದೇವಾಲಯ ಸಂಕೀರ್ಣ ಮತ್ತು ಶಾಂತಿ ನಿಕೇತನದ ಬಗ್ಗೆ ಅವರು ಉಲ್ಲೇಖಿಸಿದರು. ಈ ಬೆಳವಣಿಗೆಗಳು ಮತ್ತು ಹೆಚ್ಚಿದ ಪ್ರವಾಸೋದ್ಯಮವು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಂತೆಯೇ, ಕ್ರೀಡೆಯಲ್ಲಿನ ದಾಪುಗಾಲುಗಳು ಸಹ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.
"ಸರ್ಕಾರವು ಉದ್ಯೋಗಾವಕಾಶಗಳನ್ನು ಒದಗಿಸುವ ಸಾಂಪ್ರದಾಯಿಕ ಕ್ಷೇತ್ರಗಳನ್ನು ಬಲಪಡಿಸುತ್ತಿದೆ. ಜೊತೆಗೆ, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ಆಟೊಮೇಷನ್, ಮತ್ತು ರಕ್ಷಣಾ ರಫ್ತುಗಳಂತಹ ಹೊಸ ಕ್ಷೇತ್ರಗಳನ್ನು ಸಹ ಉತ್ತೇಜಿಸುತ್ತಿದೆ" ಎಂದು ಪ್ರಧಾನಿ ಹೇಳಿದರು. ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹಾದಿಗಳನ್ನು ತೆರೆಯುವ ಬಗ್ಗೆ ಮತ್ತು ಅದರ ಸಹಾಯದಿಂದ ಬೆಳೆ ಮೌಲ್ಯಮಾಪನ ಮತ್ತು ಪೋಷಕಾಂಶ ಸಿಂಪಡಣೆಯ ಉದಾಹರಣೆಗಳನ್ನು ಪ್ರಸ್ತಾಪಿಸಿದರು. ʻಸ್ವಾಮಿತ್ವʼ ಯೋಜನೆಯಡಿ, ಭೂ ನಕ್ಷೆಗಾಗಿ ಡ್ರೋನ್ ಗಳನ್ನು ಬಳಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿಟಿ ಪ್ರದೇಶದಲ್ಲಿ ಡ್ರೋನ್‌ಗಳನ್ನು ಬಳಸುವ ಮೂಲಕ ಔಷಧಗಳ ವಿತರಣೆಯನ್ನು ಅವರು ಉಲ್ಲೇಖಿಸಿದರು. ಇದರಿಂದಾಗಿ ವಿತರಣೆಗೆ ಹಿಡಿಯುತ್ತಿದ್ದ ಅಂದಾಜು ಸಮಯವನ್ನು 2 ಗಂಟೆಗಳಿಂದ ಸುಮಾರು 20-30 ನಿಮಿಷಗಳಿಗೆ ಇಳಿಸಲಾಗಿದೆ. ನವೋದ್ಯಮಗಳು ಡ್ರೋನ್‌ಗಳಿಂದ ಸಾಕಷ್ಟು ಪ್ರಯೋಜನ ಪಡೆದಿವೆ ಮತ್ತು ಹೊಸ ವಿನ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ರಚಿಸಲು ಸಹಾಯ ಮಾಡಿವೆ ಎಂದರು.
ಖಾದಿಯ ಪುನರುಜ್ಜೀವನದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. 10 ವರ್ಷಗಳ ಹಿಂದೆ ಕೇವಲ 30 ಸಾವಿರ ಕೋಟಿಗೆ ಹೋಲಿಸಿದರೆ ಇಂದು 1.25 ಲಕ್ಷ ಕೋಟಿಗೂ ಹೆಚ್ಚು ಮಾರಾಟವನ್ನು ಖಾದಿ ದಾಖಲಿಸಿದೆ. ಇದು ಖಾದಿ ಮತ್ತು ಗ್ರಾಮೋದ್ಯೋಗ ವಲಯದಲ್ಲಿ ಅನೇಕ ಉದ್ಯೋಗಗಳನ್ನು ಸೃಷ್ಟಿಸಿದೆ, ವಿಶೇಷವಾಗಿ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಯಾವುದೇ ದೇಶದ ಯಾವುದೇ ಸ್ಪರ್ಧಾತ್ಮಕ ಪ್ರಯೋಜನವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಯುವಕರ ಶಕ್ತಿಯ ಅಗತ್ಯವಿದೆ ಎಂದು ಪಿಎಂ ಮೋದಿ ಹೇಳಿದರು. ಹೊಸ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆಯಲು ಯುವಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೌಶಲ್ಯ ಮತ್ತು ಶಿಕ್ಷಣದ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಹೊಸ ವೈದ್ಯಕೀಯ ಕಾಲೇಜುಗಳು, ಐಐಟಿ, ಐಐಎಂ ಮತ್ತು ಐಐಐಟಿಗಳನ್ನು ಸ್ಥಾಪಿಸಲಾಘಿದೆ. ಜೊತೆಗೆ ʻಪಿಎಂ ಕೌಶಲ್ ವಿಕಾಸ್ʼ ಯೋಜನೆಯಡಿ ಕೋಟ್ಯಂತರ ಯುವಕರಿಗೆ ತರಬೇತಿ ನೀಡಲಾಗಿದೆ. ವಿಶ್ವಕರ್ಮ ಸಮುದಾಯಕ್ಕಾಗಿ ʻಪಿಎಂ ವಿಶ್ವಕರ್ಮʼ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮರು ಕೌಶಲ್ಯ ಮತ್ತು ಕೌಶಲ್ಯ ವೃದ್ಧಿಯು ಇಂದಿನ ಅಗತ್ಯವಾಗಿರುವುದರಿಂದ, ʻಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆʼಯು ವಿಶ್ವಕರ್ಮರನ್ನು ಆಧುನಿಕ ತಂತ್ರಜ್ಞಾನ ಮತ್ತು ಸಾಧನಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿಯು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ. ಇದು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು. ಹೊಸದಾಗಿ ನೇಮಕಗೊಂಡವರು ಸರ್ಕಾರದ ಯೋಜನೆಗಳನ್ನು ಮುಂದೆ ಕೊಂಡೊಯ್ದು ಅವುಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಾರೆ ಎಂದು ಒತ್ತಿ ಹೇಳಿದರು. "ಇಂದು, ನೀವೆಲ್ಲರೂ ರಾಷ್ಟ್ರ ನಿರ್ಮಾಣದ ನಮ್ಮ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ" ಎಂದು ಹೇಳಿದರು. ಭಾರತದ ಗುರಿಯನ್ನು ಸಾಕಾರಗೊಳಿಸಲು ತಮ್ಮೆಲ್ಲ ಶಕ್ತಿಯೊಂದಿಗೆ ಕೊಡುಗೆ ನೀಡುವಂತೆ ಪ್ರಧಾನಿಯವರು ನೂತನ ನೌಕರರಿಗೆ ಮನವಿ ಮಾಡಿದರು. ತಮ್ಮ ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಮತ್ತು ʻಐಜಿಒಟಿ ಕರ್ಮಯೋಗಿ ಪೋರ್ಟಲ್ʼ ಅನ್ನು ಬಳಸಿಕೊಳ್ಳುವಂತೆ ಅವರು ಒತ್ತಾಯಿಸಿದರು. "ನಿಮ್ಮ ಪ್ರತಿಯೊಂದು ಹೆಜ್ಜೆಯೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಮುನ್ನಡೆಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಶರದ್ ಪೂರ್ಣಿಮೆಯ ಶುಭ ಸಂದರ್ಭವನ್ನು ಉಲ್ಲೇಖಿಸಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಮಾಧ್ಯಮವಾದ ʻವೋಕಲ್ ಫಾರ್ ಲೋಕಲ್ʼ ಸಂದೇಶವನ್ನು ಹರಡುವಂತೆ ಹೊಸದಾಗಿ ನೇಮಕಗೊಂಡವರನ್ನು ಒತ್ತಾಯಿಸುವ ಮೂಲಕ ಪ್ರಧಾನಿಯವರು ಮಾತು ಮುಗಿಸಿದರು.
ಹಿನ್ನೆಲೆ
ದೇಶಾದ್ಯಂತ 37 ಸ್ಥಳಗಳಲ್ಲಿ ಉದ್ಯೋಗ ಮೇಳ ನಡೆಯಿತು. ಈ ಉಪಕ್ರಮವನ್ನು ಬೆಂಬಲಿಸುವ ಕೇಂದ್ರ ಸರ್ಕಾರಿ ಇಲಾಖೆಗಳು, ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ವಿವಿಧ ಇಲಾಖೆಗಳಲ್ಲಿ ಈ ನೇಮಕಾತಿಗಳು ನಡೆಯುತ್ತಿವೆ. ರೈಲ್ವೆ ಸಚಿವಾಲಯ, ಅಂಚೆ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು / ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರು ಸರಕಾರಿ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ಯಗೋ ಮೇಳವು ಒಂದು ಪ್ರಮುಖ ಹೆಜ್ಜೆಯಾಗಿದೆ. ಉದ್ಯೋಗ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಯುವಕರಿಗೆ ಅವರ ಸಬಲೀಕರಣದ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ʻಐಜಿಒಟಿ ಕರ್ಮಯೋಗಿ ಪೋರ್ಟಲ್ʼನಲ್ಲಿ ಆನ್‌ಲೈನ್ ಮಾಡ್ಯೂಲ್ ʻಕರ್ಮಯೋಗಿ ಪ್ರರಂಭ್ʼ ಮೂಲಕ ಸ್ವಯಂ ತರಬೇತಿ ಪಡೆಯುವ ಅವಕಾಶವನ್ನು ಹೊಸ ಉದ್ಯೋಗಿಗಳು ಪಡೆಯಲಿದ್ದಾರೆ. ಅಲ್ಲಿ 750 ಕ್ಕೂ ಹೆಚ್ಚು ಇ-ಕಲಿಕೆ ಕೋರ್ಡ್‌ಗಳಿದ್ದು, ಅವು 'ಎಲ್ಲಿಯಾದರೂ ಯಾವುದೇ ಸಾಧನ'ದ ಮೂಲಕವಾದರೂ ಕಲಿಕೆಗೆ ಲಭ್ಯವಾಗುವಂತೆ ಮಾಡಲಾಗಿದೆ.
*****
(Release ID: 1972576)
Visitor Counter : 179
Read this release in:
Bengali
,
Khasi
,
English
,
Urdu
,
Marathi
,
Hindi
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam