ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಹೈದರಾಬಾದ್‌ನ ʻಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿʼಯಲ್ಲಿ 75 ಆರ್‌ಆರ್ ಬ್ಯಾಚ್ ಐಪಿಎಸ್‌ ಅಧಿಕಾರಿಗಳ ʻದೀಕ್ಷಾಂತ್ ಪೆರೇಡ್ʼ ಉದ್ದೇಶಿಸಿ ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʻಅಮೃತಕಾಲʼ ಸಂಕಲ್ಪವನ್ನು ಈಡೇರಿಸುವ ದಿಕ್ಕಿನಲ್ಲಿ 75 ಆರ್‌ಆರ್‌ ಬ್ಯಾಚ್ನ ತರಬೇತಿ ನಿರತ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ

ಈಗ, ನಾವು ʻಪ್ರತಿಕ್ರಿಯಿಸುವʼ ಮತ್ತು ʻಪ್ರತ್ಯುತ್ತರ ನೀಡುವʼ ಪೋಲೀಸಿಂಗ್ ವ್ಯವಸ್ಥೆಯನ್ನು ಮೀರಿ 'ತಡೆಗಟ್ಟುವʼ, ʻಮುನ್ಸೂಚನೆಯುಳ್ಳʼ ಮತ್ತು ʻಸಕ್ರಿಯಾತ್ಮಕʼ ಪೊಲೀಸ್ ವ್ಯವಸ್ಥೆಯತ್ತ ಸಾಗಬೇಕಿದೆ. ನಾವು ಶೂನ್ಯ ಸಹಿಷ್ಣುತೆಯ ನೀತಿಯಿಂದ ʻಶೂನ್ಯ ಸಹಿಷ್ಣುತೆ ಕಾರ್ಯತಂತ್ರʼ ಮತ್ತು ʻಶೂನ್ಯ ಸಹಿಷ್ಣುತೆಯ ಕ್ರಮʼದತ್ತ ಸಾಗಿದ್ದೇವೆ

ʻಒಂದು ದತ್ತಾಂಶ, ಒಂದು ನಮೂದುʼ ತತ್ವದೊಂದಿಗೆ, ಮೋದಿ ಸರ್ಕಾರವು ಆಂತರಿಕ ಭದ್ರತೆಯ ಪ್ರತಿಯೊಂದು ಕ್ಷೇತ್ರಕ್ಕೂ ಡೇಟಾಬೇಸ್‌ಗಳನ್ನು ರಚಿಸುತ್ತಿದೆ ಮತ್ತು ಅವುಗಳನ್ನು ಸಂಯೋಜಿಸುತ್ತಿದೆ

ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ತಳಮಟ್ಟದಲ್ಲಿ ಅಕ್ಷರಶಃ ಜಾರಿಗೆ ತರುವುದು ತರಬೇತಿನಿರತ ಅಧಿಕಾರಿಗಳ ಜವಾಬ್ದಾರಿಯಾಗಿದೆ

ಪೊಲೀಸ್ ಅಧಿಕಾರಿಗಳು ಯಾವಾಗಲೂ ದೇಶದ ಬಡವರು ಮತ್ತು ದುರ್ಬಲ ವರ್ಗಗಳ ಬಗ್ಗೆ ಸಂವೇದನಾಶೀಲರಾಗಿರಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಕ್ರಿಯರಾಗಿರಬೇಕು

Posted On: 27 OCT 2023 3:05PM by PIB Bengaluru

ಕೇಂದ್ರ ಗೃಹ ಹಾಗೂ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಹೈದರಾಬಾದ್‌ನ ʻಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿʼಯಲ್ಲಿ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 75 ಆರ್‌ಆರ್ ಬ್ಯಾಚ್‌ನ ʻದೀಕ್ಷಾಂತ್ ಪೆರೇಡ್ʼ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತೆಲಂಗಾಣದ ರಾಜ್ಯಪಾಲರು, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ನಿರ್ದೇಶಕರು ಮತ್ತು ಸಿಬಿಐ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

https://static.pib.gov.in/WriteReadData/userfiles/image/image0010D1X.jpg

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, “75 ಆರ್‌ಆರ್‌ ಬ್ಯಾಚ್‌ನ ತರಬೇತಿದಾರರಿಗೆ ಇಂದು ಬಹಳ ಮಹತ್ವದ ದಿನವಾಗಿದೆ. ಏಕೆಂದರೆ ಅವರು ದೇಶದ ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ಭಾರತೀಯ ಪೊಲೀಸ್ ವ್ಯವಸ್ಥೆಯ ಅತ್ಯುನ್ನತ ಸ್ಥಾನಕ್ಕೆ ಸೇರ್ಪಡೆಯಾಗುತ್ತಿರುವ ಅದೃಷ್ಟಶಾಲಿ ಅಧಿಕಾರಿಗಳಾಗಿದ್ದಾರೆ. ಜೊತೆಗೆ, ದೇಶದ ಆಂತರಿಕ ಭದ್ರತೆಯ ಜವಾಬ್ದಾರಿ ಅವರ ಕೈಯಲ್ಲಿರುತ್ತದೆ,ʼʼ ಎಂದು ಹೇಳಿದರು. ಅಕಾಡೆಮಿಯ ಅಮೃತ ಮಹೋತ್ಸವದ 75ನೇ ಬ್ಯಾಚ್ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಅಧಿಕಾರಿಗಳು ತಮ್ಮ ಕಠಿಣ ಪರಿಶ್ರಮ, ಶ್ರದ್ಧೆ, ತ್ಯಾಗ ಮತ್ತು ದೇಶಕ್ಕಾಗಿ ಸಮರ್ಪಣೆಯಿಂದ ಈ ಸಂದರ್ಭವನ್ನು ಹೆಚ್ಚು ಐತಿಹಾಸಿಕಗೊಳಿಸುತ್ತಾರೆ ಎಂದು ಅವರು ಹೇಳಿದರು. ಪ್ರಸ್ತುತ ತರಬೇತಿ ಪಡೆಯುತ್ತಿರುವ 75ನೇ ಆರ್‌ಆರ್‌ ಬ್ಯಾಚ್‌ನ ಈ ಅಧಿಕಾರಿಗಳು ದೇಶದ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳನ್ನು ಮುನ್ನಡೆಸುವಾಗ ಇಡೀ ದೇಶವೇ ಇವರ ಬಗ್ಗೆ ಹೆಮ್ಮೆ ಪಡುತ್ತದೆ. ಏಕೆಂದರೆ, ತಮ್ಮ 25 ವರ್ಷಗಳ ಸೇವೆಯಲ್ಲಿ ದೇಶದ ಆಂತರಿಕ ಭದ್ರತೆಯನ್ನು ಖಾತರಿಪಡಿಸಲು ಈ ತರಬೇತಿನಿರತ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಲಿದ್ದಾರೆ ಎಂದು ಶ್ರೀ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದರು. ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʻಅಮೃತಕಾಲʼ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ 75 ಆರ್‌ಆರ್ ಬ್ಯಾಚ್‌ನ ತರಬೇತಿನಿರತ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ದೇಶವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಜಗತ್ತನ್ನು ಮುನ್ನಡೆಸುತ್ತದೆ ಮತ್ತು ಈ ಎಲ್ಲಾ ಅಧಿಕಾರಿಗಳು ಸಹ ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿರುತ್ತಾರೆ ಎಂದರು.

https://static.pib.gov.in/WriteReadData/userfiles/image/image002Q1OJ.jpg

ಸರ್ದಾರ್ ಪಟೇಲ್ ಅವರು ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಬಹಳ ವಿವೇಚನೆಯೊಂದಿಗೆ ಈ ಅಕಾಡೆಮಿಗೆ ಅಡಿಪಾಯ ಹಾಕಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಮ್ಮ ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದೆ ಮತ್ತು ʻಅಮೃತಕಾಲʼದ ಅವಧಿಯನ್ನು ಪ್ರವೇಶಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಬಾರಿ ದೇಶದ 130 ಕೋಟಿ ಜನರಿಗೆ ಸಂಕಲ್ಪಗಳನ್ನು ಕೈಗೊಳ್ಳುವಂತೆ ಮತ್ತು ಆ ಸಂಕಲ್ಪಗಳನ್ನು ಸಾಧನೆಗಳಾಗಿ ಪರಿವರ್ತಿಸುವಂತೆ ಕರೆ ನೀಡಿದ್ದಾರೆ ಎಂದು ಅಮಿತ್‌ ಶಾ ಅವರು ತಿಳಿಸಿದರು.
ಈ 25 ವರ್ಷಗಳು ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಿಸುವ ಹಾಗೂ ವಿಶ್ವದಲ್ಲಿ ಭಾರತವನ್ನು ಸೂಕ್ತವಾದ ಮತ್ತು ವೈಭವಯುತ ಸ್ಥಾನದಲ್ಲಿರಿಸುವ ವರ್ಷಗಳಾಗಿವೆ ಎಂದು ಶ್ರೀ ಶಾ ಹೇಳಿದರು. ʻಅಮೃತಕಾಲʼದ ಸಮಯದಲ್ಲಿ, ಈ ಅಧಿಕಾರಿಗಳು ದೇಶದ ಆಂತರಿಕ ಭದ್ರತೆ, ಗಡಿಗಳ ಭದ್ರತೆ ಹಾಗೂ ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅಕಾಡೆಮಿಯಿಂದ ಉತ್ತೀರ್ಣರಾದ ನಂತರ, ಈ ಅಧಿಕಾರಿಗಳು ದೇಶದಲ್ಲಿ ಸಂವಿಧಾನದ ಸೂಕ್ತ ಜಾರಿ ಮತ್ತು ಅದು ಒದಗಿಸಿದ ಹಕ್ಕುಗಳನ್ನು ಎಲ್ಲಾ ಜನರು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಮಿತ್‌ ಶಾ ಅವರು ಕರೆ ನೀಡಿದರು.

https://static.pib.gov.in/WriteReadData/userfiles/image/image0039DKK.jpg

ದೇಶದ ಮೊದಲ ಗೃಹ ಸಚಿವ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ದೇಶವನ್ನು ಒಗ್ಗೂಡಿಸಿದ್ದಲ್ಲದೆ, ದೇಶದ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಅನೇಕ ಮಹತ್ವದ ಕೆಲಸಗಳನ್ನು ಮಾಡಿದರು ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ದಾರ್ ಪಟೇಲ್ ಅವರು ದೇಶದ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ವಿಲೀನಗೊಳಿಸುವ ಮೂಲಕ ಏಕೀಕೃತ ಭಾರತವನ್ನು ರಚಿಸಿದರು. ಅಲ್ಲದೆ, ʻಐಪಿಎಸ್ʼ ಕೇಡರ್ ಅನ್ನು ಪ್ರಾರಂಭಿಸುವ ಮೂಲಕ ಬಲವಾದ ವ್ಯವಸ್ಥೆಯನ್ನು ರೂಪಿಸಿದರು ಎಂದು ಸಚಿವರು ತಿಳಿಸಿದರು. ಒಕ್ಕೂಟವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿರುವ ಉತ್ತಮ ಅಖಿಲ ಭಾರತ ಸೇವೆಯನ್ನು ಹೊಂದಿಲ್ಲದಿದ್ದರೆ, ಅಂತಹ ಒಕ್ಕೂಟವು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂಬ ಸರ್ದಾರ್ ಪಟೇಲ್ ಅವರ ಮಾತನ್ನು ಶ್ರೀ ಶಾ ಅವರು ಸ್ಮರಿಸಿದರು. ಈ ವಾಕ್ಯವು ಐಪಿಎಸ್ ಕೇಡರ್‌ಗೆ ಮಾರ್ಗದರ್ಶಿ ತತ್ವದಂತೆ. ಒಮ್ಮೆ ಸರ್ದಾರ್ ಪಟೇಲ್ ಅವರು, ʻಈ ಸಂಸ್ಥೆಗೆ ಹಿಂತಿರುಗಿ ನೋಡಲು ಏನೂ ಇಲ್ಲ. ಆದರೆ ಭವಿಷ್ಯದ ಪೀಳಿಗೆಗೆ ಹೊಸ ಸಂಪ್ರದಾಯವನ್ನು ಸ್ಥಾಪಿಸಲು ಸಾಕಷ್ಟು ಕೆಲಸ ಆಗಬೇಕಿದೆʼ ಎಂದು ಹೇಳಿದ್ದರು ಎಂದು ಅಮಿತ್‌ ಶಾ ತಿಳಿಸಿದರು. ಈ ಅಕಾಡೆಮಿ ಸ್ಥಾಪನೆಯಾದಾಗ, ಅದಕ್ಕೆ ಯಾವುದೇ ಇತಿಹಾಸವಿರಲಿಲ್ಲ, ಆದರೆ ಈ 75 ವರ್ಷಗಳಲ್ಲಿ, ಇಲ್ಲಿಂದ ಉತ್ತೀರ್ಣರಾದ ಐಪಿಎಸ್ ಅಧಿಕಾರಿಗಳು ದೇಶದ ಆಂತರಿಕ ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ಕೆಲಸ ಮಾಡುವ ಮೂಲಕ ಉಜ್ವಲ ಹಾಗೂ ಅದ್ಭುತ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಇತಿಹಾಸವನ್ನು ಮುಂದೆ ಕೊಂಡೊಯ್ಯುವುದು ಮತ್ತು ಅದಕ್ಕೆ ಅನೇಕ ಸುವರ್ಣ ಅಧ್ಯಾಯಗಳನ್ನು ಸೇರಿಸುವುದು ಇಂದು ಇಲ್ಲಿಂದ ನಿರ್ಗಮಿಸುತ್ತಿರುವ 75ನೇ ಬ್ಯಾಚ್‌ನ ತರಬೇತಿನಿರತ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಭೂತಾನ್, ಮಾಲ್ಡೀವ್ಸ್, ಮಾರಿಷಸ್ ಮತ್ತು ನೇಪಾಳದ 20 ವಿದೇಶಿ ಅಧಿಕಾರಿಗಳು ಸೇರಿದಂತೆ 175 ತರಬೇತಿದಾರರು ಮೂಲ ಕೋರ್ಸ್ ಪೂರ್ಣಗೊಳಿಸಿದ ನಂತರ ಇಂದು ಇಲ್ಲಿಂದ ಹೊರಹೋಗುತ್ತಿದ್ದಾರೆ. ಈ 175 ಅಧಿಕಾರಿ ತರಬೇತಿದಾರರಲ್ಲಿ 34 ಮಹಿಳಾ ಅಧಿಕಾರಿಗಳಿದ್ದಾರೆ ಎಂದು ಅಮಿತ್‌ ಶಾ ಅವರು ಮಾಹಿತಿ ನೀಡಿದರು.

https://static.pib.gov.in/WriteReadData/userfiles/image/image004LN0G.jpg

ಮುಂಬರುವ ದಿನಗಳಲ್ಲಿ ಆಂತರಿಕ ಭದ್ರತೆಯನ್ನು ನಿಭಾಯಿಸುವಲ್ಲಿ ತಂತ್ರಜ್ಞಾನವು ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿದೆ ಮತ್ತು ಅದಕ್ಕಾಗಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಪೊಲೀಸ್ ತಂತ್ರಜ್ಞಾನ ಮಿಷನ್ʼ ಅನ್ನು ರಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ತಂತ್ರಜ್ಞಾನದ ವಿಷಯದಲ್ಲಿ ಭಾರತೀಯ ಪೊಲೀಸರನ್ನು ವಿಶ್ವದ ಅತ್ಯಂತ ಸುಸಜ್ಜಿತವಾಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಮತ್ತು ಆಂತರಿಕ ಭದ್ರತೆಯನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ಅಗತ್ಯ ವ್ಯವಸ್ಥೆಯನ್ನು ರೂಪಿಸಬೇಕಿದೆ. ಜೊತೆಗೆ, ಪೊಲೀಸರು ಅಪರಾಧಿಗಿಂತಲೂ ತಾಂತ್ರಿಕವಾಗಿ ಸದಾ ಎರಡು ಹೆಜ್ಜೆ ಮುಂದಿರುವಂತಹ ವ್ಯವಸ್ಥೆಯನ್ನು ಸ್ಥಾಪಿಸಬೇಕಾಗಿದೆ ಎಂದರು. ಇಲ್ಲಿ ಪಡೆದ ಎಲ್ಲಾ ಅನುಭವ ಮತ್ತು ತರಬೇತಿಯೊಂದಿಗೆ ಈ ಅಧಿಕಾರಿಗಳು ಕಾರ್ಯಕ್ಷೇತ್ರಕ್ಕೆ ಹೋಗಿ ಸಾರ್ವಜನಿಕರೊಂದಿಗೆ ಸಂವಹನ ನಡೆಸಬೇಕು. ಆಗ ಪ್ರಾಯೋಗಿಕ ಅನುಭವದೊಂದಿಗೆ ಈ ತರಬೇತಿಯನ್ನು ಸಂಯೋಜಿಸುವ ಮೂಲಕ, ಅವರು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅಮಿತ್‌ ಶಾ ಹೇಳಿದರು.

https://static.pib.gov.in/WriteReadData/userfiles/image/image005DWZ3.jpg

ಇಂದು ಮಹಿಳಾ ಅಧಿಕಾರಿಯೊಬ್ಬರು ಅತ್ಯುತ್ತಮ ಅಧಿಕಾರಿ ತರಬೇತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ನಮ್ಮ ದೇಶಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು. ಅಕಾಡೆಮಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ತರಬೇತಿನಿರತ ಮಹಿಳಾ ಅಧಿಕಾರಿ ರಂಜಿತಾ ಶರ್ಮಾ ಅವರಿಗೆ ʻಐಪಿಎಸ್ ಅಸೋಸಿಯೇಷನ್ನ ಗೌರವ ಸ್ಕ್ವಾಡ್ ಆಫ್ ಹಾನರ್ʼ ಗೆಲ್ಲುವ ಅವಕಾಶ ದೊರೆತಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದರು. ದೇಶದ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಇತ್ತೀಚೆಗೆ 33% ಮೀಸಲಾತಿಯನ್ನು ಖಚಿತಪಡಿಸಿದೆ. ಇಂದು ನಿರ್ಗಮಿಸುತ್ತಿರುವ ಮಹಿಳಾ ಅಧಿಕಾರಿಗಳ ನಾಯಕತ್ವದಲ್ಲಿ, ಪ್ರಧಾನಿ ಮೋದಿಯವರ ಮಹಿಳಾ ನೇತೃತ್ವದ ಅಭಿವೃದ್ಧಿಯ ವಿಷಯವು ದೇಶದ ಪ್ರತಿ
ಹಳ್ಳಿಗೂ ವ್ಯಾಪಿಸಲಿದೆ ಎಂದರು.

https://static.pib.gov.in/WriteReadData/userfiles/image/image006DS2Y.jpg

ಅಸಂಖ್ಯಾತ ತ್ಯಾಗ ಮತ್ತು ಹೋರಾಟದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 1857 ರಿಂದ 1947ರವರೆಗಿನ 90 ವರ್ಷಗಳ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರ ತ್ಯಾಗದಿಂದ ಇಂದು ಭಾರತವು ಸ್ವತಂತ್ರ ದೇಶವಾಗಿ 75 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಸಾಧನೆಯೊಂದಿಗೆ ಈಗ ನಾವು ಹೆಮ್ಮೆಯಿಂದ ವಿಶ್ವದ ಮುಂದೆ ನಿಂತಿದ್ದೇವೆ. 7 ದಶಕಗಳಿಗೂ ಹೆಚ್ಚು ಕಾಲ ನಡೆದ ಈ ಸವಾಲಿನ ಪ್ರಯಾಣದಲ್ಲಿ ಅನೇಕ ಪೊಲೀಸರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು. 36,500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಯೋಧರು ತಮ್ಮ ಕರ್ತವ್ಯವನ್ನೇ ಪರಮಶ್ರೇಷ್ಠವೆಂದು ಪರಿಗಣಿಸಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ, ಅದಕ್ಕಾಗಿಯೇ ನಮ್ಮ ದೇಶವು ಇಂದು ವಿಶ್ವದ ಮುಂದೆ ಹೆಮ್ಮೆಯಿಂದ ನಿಂತಿದೆ. ಆ 36,500 ಪೊಲೀಸ್ ಅಧಿಕಾರಿಗಳು ಮತ್ತು ಯೋಧರ ತ್ಯಾಗವು ನಮಗೆ ಸ್ಫೂರ್ತಿಯ ಸೆಲೆಯಾಗಬೇಕು ಎಂದು ಶ್ರೀ ಅಮಿತ್‌ ಶಾ ಅವರು ಹೇಳಿದರು.

https://static.pib.gov.in/WriteReadData/userfiles/image/image0073IQV.jpg

ದೇಶವು ದೀರ್ಘಕಾಲದಿಂದ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ನಕ್ಸಲೀಯ ಹಿಂಸಾಚಾರದ ಸವಾಲನ್ನು ಎದುರಿಸುತ್ತಿದೆ. ಆದರೆ ಕಳೆದ 10 ವರ್ಷಗಳಲ್ಲಿ, ನಮ್ಮ ಕೆಚ್ಚೆದೆಯ ಪೊಲೀಸರ ಪ್ರಯತ್ನದಿಂದಾಗಿ ನಾವು ಅವುಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಸವಾಲುಗಳು ಇನ್ನೂ ಮುಗಿದಿಲ್ಲ. ಸಂಘಟಿತ ಅಪರಾಧ, ಸೈಬರ್ ಅಪರಾಧ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಅಪರಾಧ, ಅಂತರರಾಜ್ಯ ಗ್ಯಾಂಗ್‌ಗಳಂತಹ ಅನೇಕ ಹೊಸ ಸವಾಲುಗಳು ಇಂದು ನಮ್ಮ ಮುಂದಿವೆ ಎಂದರು. ಮಾದಕವಸ್ತು ಕಳ್ಳಸಾಗಣೆ, ಕ್ರಿಪ್ಟೋ ಕರೆನ್ಸಿ, ಹವಾಲಾ ವ್ಯವಹಾರ ಮತ್ತು ನಕಲಿ ಕರೆನ್ಸಿ ವ್ಯವಹಾರದಿಂದ ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುವಂತಹ ಸವಾಲುಗಳ ವಿರುದ್ಧವೂ ನಾವು ಅದೇ ಹುರುಪಿನಿಂದ ನಮ್ಮ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಅವರು ಕರೆ ನೀಡಿದರು. ಇಂದು ಈ ಹೊಸ ಬ್ಯಾಚ್‌ನ ಅಧಿಕಾರಿಗಳು ಸೇವೆಯಲ್ಲಿ ತಮ್ಮ ಮೊದಲ ಹೆಜ್ಜೆ ಇಡಲಿದ್ದು, ನಮ್ಮ ದೇಶವು ಹೊಸ ಯುಗದತ್ತ ಸಾಗಲು ಪ್ರಾರಂಭಿಸಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬ್ರಿಟಿಷ್ ಆಡಳಿತದ ಮೂರು ಕಾನೂನುಗಳಾದ ʻಸಿಆರ್‌ಪಿಸಿʼ, ʻಐಪಿಸಿʼ ಮತ್ತು ʻಸಾಕ್ಷ್ಯ ಕಾಯ್ದೆʼಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ ಮತ್ತು ಈ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ದೇಶದ ಸಂಸತ್ತಿನ ಮುಂದೆ ಇರಿಸಿದೆ ಎಂದು ಅವರು ಹೇಳಿದರು. ಶೀಘ್ರದಲ್ಲೇ ಈ ಮೂರೂ ಹೊಸ ಕಾನೂನುಗಳನ್ನು ಅಂಗೀಕರಿಸಲಾಗುವುದು ಮತ್ತು ಈ ಕಾನೂನುಗಳ ಆಧಾರದ ಮೇಲೆ ನಮ್ಮ ಹೊಸ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ಬ್ರಿಟಿಷರ ಕಾಲದಲ್ಲಿ ರೂಪಿಸಲಾದ ಕಾನೂನುಗಳ ಶಕೆಗೆ ತೆರೆ ಎಳೆದ ಬಳಿಕ, ಭಾರತವು ಹೊಸ ನಂಬಿಕೆ, ಭರವಸೆ ಮತ್ತು ಉತ್ಸಾಹದೊಂದಿಗೆ ಹೊಸ ಶಕೆಯನ್ನು ಪ್ರವೇಶಿಸುತ್ತಿದೆ ಎಂದು ಅಮಿತ್‌ ಶಾ ಹೇಳಿದರು. ಸರ್ಕಾರವನ್ನು ರಕ್ಷಿಸುವುದು ಹಳೆಯ ಕಾನೂನುಗಳ ಏಕೈಕ ಉದ್ದೇಶವಾಗಿತ್ತು. ಆದರೆ ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಆ ಹಕ್ಕುಗಳನ್ನು ಜನರು ಪಡೆಯಲು ಇರಲು ಅಡೆತಡೆಗಳನ್ನು ನಿವಾರಿಸುವುದು ಹೊಸ ಕಾನೂನುಗಳ ಉದ್ದೇಶವಾಗಿದೆ. ಈ ಮೂಲಭೂತ ಬದಲಾವಣೆಯೊಂದಿಗೆ, ಈ ಹೊಸ ಮೂರು ಕಾನೂನುಗಳಿಂದ ಬದಲಾಗುತ್ತಿರುವ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಮುನ್ನಡೆಸುವ ಅವಕಾಶವನ್ನು ಇಲ್ಲಿನ ತರಬೇತಿನಿರತ ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image00882MP.jpg

ಈ ಹೊಸ ಕಾನೂನುಗಳನ್ನು ತಳಮಟ್ಟದಲ್ಲಿ ಅಕ್ಷರಶಃ ಜಾರಿಗೆ ತರುವುದು ತರಬೇತಿನಿರತ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ತರಬೇತಿನಿರತರು ಈ ಕಾನೂನುಗಳ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ಸಾರ್ವಜನಿಕರನ್ನು ಸುರಕ್ಷಿತವಾಗಿಡಬೇಕು ಮತ್ತು ಅವರ ಹಕ್ಕುಗಳನ್ನು ಸಹ ರಕ್ಷಿಸಬೇಕು. ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳನ್ನು ಹೊಸ ಕಾನೂನಿನಲ್ಲಿ ಮರು ವ್ಯಾಖ್ಯಾನಿಸಲಾಗಿದೆ. ಅಂತರರಾಜ್ಯ ಗ್ಯಾಂಗ್‌ಗಳನ್ನು ನಿರ್ಮೂಲನೆ ಮಾಡಲು ಅನೇಕ ನಿಬಂಧನೆಗಳನ್ನು ಸಹ ಸೇರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಇದಲ್ಲದೆ, ತಾಂತ್ರಿಕ ನಿಬಂಧನೆಗಳನ್ನು ಕಾನೂನುಬದ್ಧಗೊಳಿಸುವ ಮೂಲಕ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ತನಿಖಾ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ತನಿಖಾ ಚಾರ್ಜ್‌ಶೀಟ್ ಸಮಯ ಮತ್ತು ವಿಧಿವಿಜ್ಞಾನ ನಿಬಂಧನೆಗಳನ್ನು ಅನುಸರಿಸಲು ಸೂಕ್ತ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಹೊಸ ಕಾನೂನುಗಳ ಅಡಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಕಾಲಮಿತಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಕಾನೂನುಗಳ ಮೂಲಕ ನ್ಯಾಯ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. 'ಪ್ರತಿಕ್ರಿಯೆʼ ಮತ್ತು ʻಪ್ರತ್ಯುತ್ತರʼ ಪೋಲೀಸಿಂಗ್ ವ್ಯವಸ್ಥೆಯನ್ನು ಮೀರಿ, 'ತಡೆಗಟ್ಟುವ, ಮುನ್ಸೂಚನೆಯುಳ್ಳ ಮತ್ತು ಸಕ್ರಿಯಾತ್ಮಕ' ಪೊಲೀಸ್ ವ್ಯವಸ್ಥೆಯತ್ತ ಸಾಗುವಂತೆ ಗೃಹ ಸಚಿವರು ಕರೆ ನೀಡಿದರು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಪೊಲೀಸ್ ವ್ಯವಸ್ಥೆಯನ್ನು ಪರಿವರ್ತಿಸುವಂತೆ ಗೃಹ ಸಚಿವರು ತರಬೇತಿನಿರತ ಅಧಿಕಾರಿಗಳಿಗೆ ತಿಳಿಸಿದರು.

https://static.pib.gov.in/WriteReadData/userfiles/image/image009AWD3.jpg

ಸಂವಿಧಾನವು ಸೂಕ್ಷ್ಮತೆಯನ್ನು ಹೊಂದಿದ್ದು, ಇದು ಸಂವಿಧಾನಕ್ಕೆ ಮಾನವೀಯ ದೃಷ್ಟಿಕೋನವನ್ನು ನೀಡಿದೆ. ನಮ್ಮ ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ಹಾಕಿಕೊಟ್ಟಿರುವ ಆಶಯವನ್ನು ಸೂಕ್ಷ್ಮವಾಗಿ ಜಾರಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಬಡವರು ಮತ್ತು ದುರ್ಬಲ ವರ್ಗಗಳ ಬಗ್ಗೆ ಸದಾ ಸಂವೇದನಾಶೀಲರಾಗಿರಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ ಸದಾ ಸಕ್ರಿಯರಾಗಿರಬೇಕು ಎಂದು ಅವರು ತರಬೇತಿನಿರತ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು. ನಾವು ನಮ್ಮ ಕರ್ತವ್ಯದ ಬಗ್ಗೆ ಗಮನ ಹರಿಸಬೇಕು ಮತ್ತು ಜನಪ್ರಿಯತೆಯ ಮೋಡಿಗೆ ಬಲಿಯಾಗದೆ ಮುಂದುವರಿಯಬೇಕು ಎಂದು ಶ್ರೀ ಶಾ ಹೇಳಿದರು. ಸ್ಥಳೀಯ ಭಾಷೆ, ಸಂಪ್ರದಾಯ ಮತ್ತು ಕರ್ತವ್ಯಕ್ಕೆ ನಿಯೋಜನೆಗೊಂಡ ಸ್ಥಳದ ಇತಿಹಾಸವನ್ನು ಗೌರವಿಸಬೇಕು. ಜೊತೆಗೆ ಜನರೊಂದಿಗೆ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಬೇಕು. ಕಾನೂನಿನ ಆಶಯವನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ, ಪುಸ್ತಕ ಆಧರಿತ ಕಾರ್ಯವಿಧಾನವನ್ನು ಮೀರಿ ಮುಂದೆ ಸಾಗಬೇಕು ಎಂದು ಅವರು ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 9 ವರ್ಷಗಳು ನಮ್ಮ ದೇಶದ ಆಂತರಿಕ ಭದ್ರತೆಯಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶದ ಮೂರು ಹಿಂಸಾಪೀಡಿತ ಪ್ರದೇಶಗಳಾದ ಈಶಾನ್ಯ ಭಾರತ, ಎಡಪಂಥೀಯ ಉಗ್ರವಾದದ ಪ್ರದೇಶಗಳು ಹಾಗೂ ಜಮ್ಮು -ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವಲ್ಲಿ ನಾವು ಭಾರಿ ಯಶಸ್ಸನ್ನು ಸಾಧಿಸಿದ್ದೇವೆ. 2004 ರಿಂದ 2014 ರವರೆಗಿನ 10 ವರ್ಷಗಳಲ್ಲಿ, ಈ ಮೂರು ಹಿಂಸಾಪೀಡಿತ ಪ್ರದೇಶಗಳಲ್ಲಿ 33,200 ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಆದರೆ, ಕಳೆದ 9 ವರ್ಷಗಳಲ್ಲಿ ಇವುಗಳ ಸಂಖ್ಯೆ 12,000ಕ್ಕೆ ಇಳಿದಿದೆ ಎಂದು ಅವರು ಹೇಳಿದರು. ಹಿಂಸಾತ್ಮಕ ಪ್ರಕರಣಗಳಲ್ಲಿ ಶೇ. 63ರಷ್ಟು ಮತ್ತು ಸಾವುಗಳಲ್ಲಿ ಶೇ. 73ರಷ್ಟು ಇಳಿಕೆಯನ್ನು ದಾಖಲಿಸುವ ಮೂಲಕ ನಾವು ಮುಂದೆ ಸಾಗಿದ್ದೇವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಭಯೋತ್ಪಾದನೆಯ ವಿರುದ್ಧ ʻಶೂನ್ಯ ಸಹಿಷ್ಣುತೆʼ ನೀತಿಯನ್ನು ಅಳವಡಿಸಿಕೊಂಡಿದೆ. ಈಗ ನಾವು ʻಶೂನ್ಯ ಸಹಿಷ್ಣುತೆʼಯ ನೀತಿಯನ್ನು ಮೀರಿ ʻಶೂನ್ಯ ಸಹಿಷ್ಣುತೆ ಕಾರ್ಯತಂತ್ರʼ ಮತ್ತು ʻಶೂನ್ಯ ಸಹಿಷ್ಣುತೆಯ ಕ್ರಮʼದತ್ತ ಸಾಗಬೇಕಾಗಿದೆ ಎಂದು ಶ್ರೀ ಶಾ ಕರೆ ನೀಡಿದರು.

https://static.pib.gov.in/WriteReadData/userfiles/image/image0108HJH.jpg

ಕಳೆದ 9 ವರ್ಷಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ʻಒಂದು ದತ್ತಾಂಶ, ಒಂದು ನಮೂದುʼ ತತ್ವದೊಂದಿಗೆ ಆಂತರಿಕ ಭದ್ರತೆಯ ಪ್ರತಿಯೊಂದು ಕ್ಷೇತ್ರದಲ್ಲೂ ದತ್ತಾಂಶಭಂಡಾರಗಳನ್ನು (ಡೇಟಾಬೇಸ್‌) ಸೃಷ್ಟಿಸುವ ಕೆಲಸ ಮಾಡಿದೆ ಎಂದು ಶ್ರೀ ಅಮಿತ್ ಶಾ ಮಾಹಿತಿ ನೀಡಿದರು. ವಿವಿಧ ದತ್ತಾಂಶಭಂಡಾರಗಳ ಏಕೀಕರಣ ಮತ್ತು ಪರಸ್ಪರ ಸಂವಹನಕ್ಕಾಗಿಯೂ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಲ್ಲದೆ, ವಿಶ್ಲೇಷಣಾತ್ಮಕ ಸಾಧನಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಎಲ್ಲಾ ಏಜೆನ್ಸಿಗಳ ಸಾಮರ್ಥ್ಯವರ್ಧನೆ ಕೆಲಸವನ್ನು ಸಹ ಮಾಡಲಾಗುತ್ತಿದೆ. ʻಐಸಿಜೆಎಸ್ʼ ಅಡಿಯಲ್ಲಿ, ʻಸಿಸಿಟಿಎನ್ಎಸ್ʼ ಅನ್ನು 99.93% ಅಂದರೆ 16,733 ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗಿದೆ. 22,000 ನ್ಯಾಯಾಲಯಗಳನ್ನು ಇ-ನ್ಯಾಯಾಲಯಗಳ ಮೂಲಕ ಸಂಪರ್ಕಿಸಲಾಗಿದೆ. ʻಇ-ಜೈಲುʼ ಮೂಲಕ ಸುಮಾರು 2 ಕೋಟಿ ಕೈದಿಗಳ ದತ್ತಾಂಶ ಲಭ್ಯವಿದೆ. ಒಂದು ಕೋಟಿಗೂ ಹೆಚ್ಚು ಪ್ರಾಸಿಕ್ಯೂಷನ್‌ಗಳ ದತ್ತಾಂಶವು ʻಇ-ಪ್ರಾಸಿಕ್ಯೂಷನ್ʼ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿದೆ. 17 ಲಕ್ಷಕ್ಕೂ ಹೆಚ್ಚು ಮಂದಿಯ ದತ್ತಾಂಶವು ʻಇ-ಫೋರೆನ್ಸಿಕ್ʼ ಮೂಲಕ ಲಭ್ಯವಿದೆ. ʻಎನ್ಎಎಫ್ಐಎಸ್‌ʼನಲ್ಲಿ 90 ಲಕ್ಷಕ್ಕೂ ಹೆಚ್ಚು ಬೆರಳಚ್ಚುಗಳ ದಾಖಲೆಗಳು ಲಭ್ಯವಿದೆ, ಭಯೋತ್ಪಾದನೆಯ ಸಮಗ್ರ ಮೇಲ್ವಿಚಾರಣೆಗೆ ಸಾಕಷ್ಟು ದತ್ತಾಂಶ ಲಭ್ಯವಿದೆ. ಬಂಧಿತ ಮಾದಕವಸ್ತು ಅಪರಾಧಿಗಳ ದತ್ತಾಂಶವು ʻನಿಡಾನ್ʼ(ಎನ್‌ಐಡಿಎಎನ್‌) ಮೂಲಕ ಲಭ್ಯವಿದೆ. ʻಅಪರಾಧ ಮಲ್ಟಿ ಏಜೆನ್ಸಿ ಕೇಂದ್ರʼದಲ್ಲಿ ಸೈಬರ್ ಅಪರಾಧ ವರದಿ ಪೋರ್ಟಲ್ ಹಾಗೂ ಜೈಲು ದತ್ತಾಂಶದಲ್ಲಿ ಬಯೋಮೆಟ್ರಿಕ್ ಡೇಟಾವನ್ನು ಸಹ ನಾವು ಲಭ್ಯಗೊಳಿಸಿದ್ದೇವೆ ಎಂದು ಅವರು ಹೇಳಿದರು. ಈ ಎಲ್ಲಾ ದತ್ತಾಂಶಗಳು ಮತ್ತು ವಿಶ್ಲೇಷಣಾತ್ಮಕ ಸಾಧನಗಳ ಮೂಲಕ ಕೆಲಸ ಮಾಡುವಂತೆ ಗೃಹ ಸಚಿವರು ಕರೆ ನೀಡಿದರು. ಇದೇ ವೇಳೆ, ಅಪರಾಧಿಗಳಿಗಿಂತಲೂ ಪೊಲೀಸರು ಸದಾ ಎರಡು ಹೆಜ್ಜೆ ಮುಂದಿರಲು ʻಕೃತಕ ಬುದ್ಧಿಮತ್ತೆʼಯನ್ನು ಬಳಸುವಂತೆ ಶ್ರೀ ಅಮಿತ್‌ ಶಾ ಅವರು ತರಬೇತಿನಿರತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

*****


(Release ID: 1972168) Visitor Counter : 122