ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಪಿಎಂಕೆಎಸ್ ವೈ-ಎಐಬಿಪಿ) ಅಡಿ ಉತ್ತರಾಖಂಡ್ ನ ಜಮ್ರಾಣಿ ಅಣೆಕಟ್ಟೆ ವಿವಿಧೋದ್ದೇಶ ಯೋಜನೆ ಸೇರ್ಪಡೆಗೆ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಅನುಮೋದನೆ 


ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ಕೇಂದ್ರದ ನೆರವಿನ ಪಾಲು ಶೇ.90; ಉಳಿದ ಕಾಮಗಾರಿಗೆ ಶೇ.10 ರಷ್ಟು ರಾಜ್ಯದ ಪಾಲು 

ಉತ್ತರಾಖಂಡಕ್ಕೆ ನೀಡುವ ಕೇಂದ್ರದ ಸಹಾಯಧನ 1,557.18 ಕೋಟಿ ಸೇರಿ ಒಟ್ಟು ಅಂದಾಜು ವೆಚ್ಚ 2,584.10 ಕೋಟಿ ರೂ. 

ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಸಮಯ 2028ರ ಮಾರ್ಚ್ 

ಉತ್ತರಾಖಂಡದ ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ, ಉತ್ತರ ಪ್ರದೇಶದ ರಾಂಪುರ ಮತ್ತು ಬರೇಲಿ ಜಿಲ್ಲೆಗಳ 57 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿ ನೀರಾವರಿ ಸೌಲಭ್ಯ 

ಹೆಚ್ಚುವರಿಯಾಗಿ, ಹಲ್ದ್ವಾನಿ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ 42.70 ಮಿಲಿಯನ್ ಕ್ಯೂಬಿಕ್ ಮೀಟರ್ (ಎಂಸಿಎಂ) ಕುಡಿಯುವ ನೀರು 10.65 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ ಪ್ರಯೋಜನ ಲಭ್ಯ

14 ಎಂಡಬ್ಲೂ ವಿದ್ಯುತ್ ಸ್ಥಾವರದ ಸ್ಥಾಪಿತ ಸಾಮರ್ಥ್ಯದೊಂದಿಗೆ ಸುಮಾರು 63.4 ಮಿಲಿಯನ್ ಯೂನಿಟ್ ಜಲವಿದ್ಯುತ್ ಉತ್ಪಾದನೆ

Posted On: 25 OCT 2023 3:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ (ಸಿಸಿಇಎ) ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನವೀಕರಣ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಪಿಎಂಕೆಎಸ್ ವೈ-ಎಐಬಿಪಿ) ಅಡಿ ಉತ್ತರಾಖಂಡ್ ನ ಜಮ್ರಾಣಿ ಅಣೆಕಟ್ಟೆ ಬಹು ಉದ್ದೇಶದ ಯೋಜನೆ ಸೇರ್ಪಡೆಗೆ ಅನುಮೋದನೆ ನೀಡಿತು. 

ಅಂದಾಜು 2,584.10 ಕೋಟಿ ರೂ. ವೆಚ್ಚದ ಯೋಜನೆಯನ್ನು 2028ರ ಮಾರ್ಚ್ ಒಳಗೆ ಪೂರ್ಣಗೊಳಿಸಲು ಉತ್ತರಾಖಂಡಕ್ಕೆ 1,557.18 ಕೋಟಿ ರೂ.ಗಳ ಕೇಂದ್ರ ನೆರವನ್ನು ಸಿಸಿಇಎ ಅನುಮೋದಿಸಿದೆ. 

ಈ ಯೋಜನೆಯಡಿ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮ್ ಗಂಗಾ ನದಿಯ ಉಪನದಿಯಾದ ಗೋಲಾ ನದಿಗೆ ಅಡ್ಡಲಾಗಿ ಜಮ್ರಾಣಿ ಗ್ರಾಮದ ಬಳಿ ಅಣೆಕಟ್ಟನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಣೆಕಟ್ಟು 1981 ರಲ್ಲಿ ಪೂರ್ಣಗೊಂಡ ಅದರ 40.5 ಕಿಮೀ ಉದ್ದದ ನಾಲಾ ವ್ಯವಸ್ಥೆ ಮತ್ತು 244 ಕಿಮೀ ಉದ್ದದ ನಾಲಾ ವ್ಯವಸ್ಥೆಯ ಮೂಲಕ ಅಸ್ತಿತ್ವದಲ್ಲಿರುವ ಗೋಲಾ ಬ್ಯಾರೇಜ್‌ಗೆ ನೀರನ್ನು ಒದಗಿಸುತ್ತದೆ. 

ಈ ಯೋಜನೆಯು ಉತ್ತರಾಖಂಡದ ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 57,065 ಹೆಕ್ಟೇರ್ (ಉತ್ತರಾಖಂಡದಲ್ಲಿ 9,458 ಹೆಕ್ಟೇರ್ ಮತ್ತು ಉತ್ತರ ಪ್ರದೇಶದಲ್ಲಿ 47,607 ಹೆಕ್ಟೇರ್) ಮತ್ತು ಉತ್ತರ ಪ್ರದೇಶದ ರಾಂಪುರ ಮತ್ತು ಬರೇಲಿ ಜಿಲ್ಲೆಗಳಲ್ಲಿ  ನೀರಾವರಿ ಸೌಲಭ್ಯವನ್ನು ಕಲ್ಪಿಸುತ್ತದೆ. ಅಲ್ಲದೆ, ಎರಡು ಹೊಸ ಫೀಡರ್ ಕಾಲುವೆಗಳ ನಿರ್ಮಾಣದ ಹೊರತಾಗಿ, 207 ಕಿಲೋ ಮೀಟರ್ ಹಾಲಿ ಇರುವ ಕಾಲುವೆಗಳನ್ನು ನವೀಕರಿಸಬೇಕು ಮತ್ತು 278 ಕಿಲೋ ಮೀಟರ್ ಪಕ್ಕಾ ಚಾನಲ್‌ಗಳನ್ನು ಸಹ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಹೆಚ್ಚುವರಿಯಾಗಿ ಈ ಯೋಜನೆಯು 14 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದನೆಯನ್ನು ಸಹ ಕಲ್ಪಿಸುತ್ತದೆ, ಜೊತೆಗೆ 42.70 ಮಿಲಿಯನ್ ಘನ ಮೀಟರ್ (ಎಂಸಿಎಂ) ಕುಡಿಯುವ ನೀರನ್ನು ಹಲ್ದ್ವಾನಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ 10.65 ಲಕ್ಷಕ್ಕೂ ಅಧಿಕ ಜನರಿಗೆ ಪ್ರಯೋಜನ ಒದಗಿಸುತ್ತದೆ.

ಈ ಯೋಜನೆಯಿಂದ ನೀರಾವರಿ ಪ್ರಯೋಜನಗಳ ಗಣನೀಯ ಭಾಗವು ನೆರೆಯ ರಾಜ್ಯ ಉತ್ತರ ಪ್ರದೇಶಕ್ಕೆ ಹರಿಯುತ್ತದೆ ಮತ್ತು 2017 ರಲ್ಲಿ ಸಹಿ ಮಾಡಿದ ಒಪ್ಪಂದದ ಪ್ರಕಾರ ಎರಡು ರಾಜ್ಯಗಳ ನಡುವೆ ವೆಚ್ಚ/ ಲಾಭ ಹಂಚಿಕೆಯನ್ನು ಮಾಡಿಕೊಳ್ಳಲಾಗುವುದು. ಆದರೂ ಸಹ ಹೆಚ್ಚಿನ ಕುಡಿಯುವ ನೀರು ಮತ್ತು ವಿದ್ಯುತ್ ಪ್ರಯೋಜನ ಸಂಪೂರ್ಣವಾಗಿ ಉತ್ತರಾಖಂಡಕ್ಕೆ ದೊರೆಯುತ್ತವೆ. 
 
ಹಿನ್ನೆಲೆ:
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ ವೈ) ಅನ್ನು 2015-16 ರಲ್ಲಿ ಆರಂಭಿಸಲಾಯಿತು, ಇದು ಜಮೀನಿನಲ್ಲಿ ನೀರಿನ ಭೌತಿಕ ಲಭ್ಯತೆಯನ್ನು ಹೆಚ್ಚಿಸಲು ಮತ್ತು ನೀರಾವರಿ ಖಾತ್ರಿಯೊಂದಿಗೆ ಸಾಗುವಳಿ ಪ್ರದೇಶವನ್ನು ವಿಸ್ತರಿಸಲು, ಜಮೀನಿನಲ್ಲಿ ನೀರಿನ ಬಳಕೆಯನ್ನು ಸುಧಾರಿಸಲು, ಸುಸ್ಥಿರ ನೀರಿನ ಸಂರಕ್ಷಣಾ ಪದ್ದತಿಗಳನ್ನು ಪರಿಚಯಿಸುವುದು ಸೇರಿ ಹಲವು ಗುರಿಗಳನ್ನು ಹೊಂದಿದೆ. ಭಾರತ ಸರ್ಕಾರವು 2021-26ರ ಅವಧಿಯಲ್ಲಿ ಪಿಎಂಕೆಎಸ್ ವೈ  ಅನುಷ್ಠಾನಕ್ಕೆ ಒಟ್ಟಾರೆ ರೂ.93,068.56 ಕೋಟಿ (ರೂ. 37,454 ಕೋಟಿ ಕೇಂದ್ರದ ನೆರವು) ರೂ.ಗೆ ಅನುಮೋದನೆ ನೀಡಿದೆ.  ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ (ಎಐಬಿಪಿ) ಪಿಎಂಕೆಎಸ್ ವೈ ನ ಒಂದು ಭಾಗವಾಗಿದ್ದು, ಅದರ ಉದ್ದೇಶ ಪ್ರಮುಖ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸುವುದು. ಪಿಎಂಕೆಎಸ್ ವೈ-ಎಐಬಿಪಿ ಅಡಿಯಲ್ಲಿ ಈವರೆಗೆ 53 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು 25.14 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿ ನೀರಾವರಿ ಸಾಮರ್ಥ್ಯ ಸೃಷ್ಟಿಸಲಾಗಿದೆ. 2021-22 ರಿಂದ ಪಿಎಂಕೆಎಸ್ ವೈ 2.0 ನ ಎಐಬಿಪಿ ಯಡಿ ಆರು ಯೋಜನೆಗಳನ್ನು ಸೇರ್ಪಡೆ ಮಾಡಲಾಗಿದೆ. ಜಮ್ರಾಣಿ ಅಣೆಕಟ್ಟು ವಿವಿಧೋದ್ದೇಶ ಯೋಜನೆ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಳನೇ ಯೋಜನೆಯಾಗಿದೆ.


******


(Release ID: 1970927) Visitor Counter : 260