ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯಾ ಕ್ರೀಡಾಕೂಟ 2022 ರಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


“ಏಷ್ಯಾ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಇಡೀ ದೇಶವೇ ಸಂತಸಗೊಂಡಿದೆ”

“ಏಷ್ಯಾ ಕ್ರೀಡಾಕೂಟದಲ್ಲಿ ಇದು ಇಲ್ಲಿಯವರೆಗಿನ ಭಾರತದ ಅತ್ಯುತ್ತಮ ಸಾಧನೆಯಾಗಿದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದು ನನಗೆ ವೈಯಕ್ತಿಕವಾಗಿ ತೃಪ್ತಿಯ ವಿಷಯವಾಗಿದೆ”

"ನಿಮ್ಮ ಪ್ರಯತ್ನದಿಂದಾಗಿ ಹಲವು ವಿಭಾಗಗಳಲ್ಲಿ ಹಲವು ದಶಕಗಳ ಕಾಯುವಿಕೆ ಕೊನೆಗೊಂಡಿದೆ"

"ಅನೇಕ ವಿಭಾಗಗಳಲ್ಲಿ, ನೀವು ಖಾತೆಯನ್ನು ತೆರೆದಿರುವುದು ಮಾತ್ರವಲ್ಲದೆ ಯುವ ಪೀಳಿಗೆಗೆ ಸ್ಫೂರ್ತಿಯಾಗುವ ಹಾದಿಯನ್ನು ತೋರಿದ್ದೀರಿ"

"ಭಾರತದ ಹೆಣ್ಣುಮಕ್ಕಳು ನಂಬರ್ 1 ಕ್ಕಿಂತ ಕಡಿಮೆ ಏನನ್ನೂ ಪಡೆಯಲು ಸಿದ್ಧರಿರಲಿಲ್ಲ"

"ನಮ್ಮ ಟಾಪ್ಸ್ ಮತ್ತು ಖೇಲೋ ಇಂಡಿಯಾ ಯೋಜನೆಗಳು ಗೇಮ್‌ ಚೇಂಜರ್‌ ಎಂಬುದನ್ನು ಸಾಬೀತುಪಡಿಸಿವೆ"

"ನಮ್ಮ ಆಟಗಾರರು ದೇಶಕ್ಕಾಗಿ 'GOAT' ಅಂದರೆ ಸಾರ್ವಕಾಲಿಕ ಶ್ರೇಷ್ಠರಾಗಿದ್ದಾರೆ"

"ಪದಕ ವಿಜೇತರಲ್ಲಿ ಕಿರಿಯ ಕ್ರೀಡಾಪಟುಗಳು ಇರುವುದು ಕ್ರೀಡಾ ರಾಷ್ಟ್ರದ ಸಂಕೇತವಾಗಿದೆ"

"ಯುವ ಭಾರತದ ಹೊಸ ಚಿಂತನೆಯು ಇನ್ನು ಮುಂದೆ ಕೇವಲ ಉತ್ತಮ ಪ್ರದರ್ಶನದಿಂದ ತೃಪ್ತಿಪಡುವುದಿಲ್ಲ, ಬದಲಿಗೆ ಅದು ಪದಕಗಳು ಮತ್ತು ಗೆಲುವುಗಳನ್ನು ಬಯಸುತ್ತದೆ"

"ಮಾದಕವಸ್ತುಗಳ ವಿರುದ್ಧ ಹೋರಾಡಲು ಮತ್ತು ಸಿರಿಧಾನ್ಯ ಮತ್ತು ಪೋಷಣ ಮಿಷನ್ ಅನ್ನು ಉತ್ತೇಜಿಸಲು ಸಹಾಯ ಮಾಡಿ"

"ಹಣದ ಕೊರತೆಯು ನಿಮ್ಮ ಪ್ರಯತ್ನಗಳಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ"

"ಯುವಜನರ ಮೇಲಿನ ನಮ್ಮ ನಂಬಿಕೆಯೇ '100 ಪಾರ್' ಎಂಬ ಘೋಷಣೆಯ ಆಧಾರವಾಗಿತ್ತು, ನೀವು ಆ ನಂಬಿಕೆಗೆ ತಕ್ಕಂತೆ ನಡೆದುಕೊಂಡಿದ್ದೀರಿ"

Posted On: 10 OCT 2023 6:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಏಷ್ಯಾ ಕ್ರೀಡಾಕೂಟ 2022 ರಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಅವರು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು. ಭಾರತವು 2022ರ ಏಷ್ಯಾ ಕ್ರೀಡಾಕೂಟದಲ್ಲಿ 28 ಚಿನ್ನದ ಪದಕಗಳು ಸೇರಿದಂತೆ 107 ಪದಕಗಳನ್ನು ಗೆದ್ದುಕೊಂಡಿದೆ, ಕಾಂಟಿನೆಂಟಲ್ ಮಲ್ಟಿ-ಸ್ಪೋರ್ಟ್ ಕ್ರೀಡಾಕೂಟದಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆಯ ಪ್ರಕಾರ ಇದು ಅತ್ಯುತ್ತಮ ಸಾಧನೆಯಾಗಿದೆ.

ಕ್ರೀಡಾಪಟುಗಳ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ದೇಶದ ಪ್ರತಿಯೊಬ್ಬ ನಾಗರಿಕರ ಪರವಾಗಿ ಅವರನ್ನು ಸ್ವಾಗತಿಸಿದರು ಮತ್ತು ಅವರ ಯಶಸ್ಸಿಗಾಗಿ ಅಭಿನಂದಿಸಿದರು. 1951ರಲ್ಲಿ ಇದೇ ಕ್ರೀಡಾಂಗಣದಲ್ಲಿ ಏಷ್ಯಾ ಕ್ರೀಡಾಕೂಟದ ಉದ್ಘಾಟನಾ ಆವೃತ್ತಿ ನಡೆದಿದ್ದು ಕಾಕತಾಳೀಯವಾಗಿದೆ ಎಂದು ಪ್ರಧಾನಿ ಸ್ಮರಿಸಿದರು. ಕ್ರೀಡಾಪಟುಗಳು ತೋರಿದ ಧೈರ್ಯ ಮತ್ತು ದೃಢಸಂಕಲ್ಪ ರಾಷ್ಟ್ರದ ಮೂಲೆ ಮೂಲೆಯಲ್ಲೂ ಸಂಭ್ರಮಾಚರಣೆಗೆ ಕಾರಣವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 100 ಪ್ಲಸ್ ಪದಕಗಳ ಗುರಿಯನ್ನು ಸಾಧಿಸಲು ಪಟ್ಟ ಶ್ರಮದ ಬಗ್ಗೆ ಮಾತನಾಡಿದ ಪ್ರಧಾನಿ, ಇಡೀ ರಾಷ್ಟ್ರವು ಹೆಮ್ಮೆಯಿಂದ ಬೀಗುತ್ತಿದೆ ಎಂದು ಒತ್ತಿ ಹೇಳಿದರು. ಅವರು ತರಬೇತುದಾರರನ್ನು ಅಭಿನಂದಿಸಿದರು ಮತ್ತು ಫಿಸಿಯೋಗಳು ಮತ್ತು ಅಧಿಕಾರಿಗಳ ಕೊಡುಗೆಗಳನ್ನು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ಎಲ್ಲಾ ಕ್ರೀಡಾಪಟುಗಳ ಪೋಷಕರಿಗೆ ನಮಿಸಿದರು ಮತ್ತು ಕುಟುಂಬಗಳು ನೀಡಿದ ಕೊಡುಗೆಗಳು ಮತ್ತು ಮಾಡಿದ ತ್ಯಾಗಗಳನ್ನು ಎತ್ತಿ ತೋರಿಸಿದರು. "ಪೋಷಕರ ಬೆಂಬಲವಿಲ್ಲದೆ ತರಬೇತಿ ಮೈದಾನದಿಂದ ಪೋಡಿಯಂವರೆಗೆ ಪ್ರಯಾಣ ಅಸಾಧ್ಯ" ಎಂದು ಪ್ರಧಾನಿ ಹೇಳಿದರು.

ನೀವು ಇತಿಹಾಸ ಸೃಷ್ಟಿಸಿದ್ದೀರಿ ಎಂದು ಪ್ರಧಾನಿ ಹೇಳಿದರು. ಈ ಏಷ್ಯಾ ಕ್ರೀಡಾಕೂಟದ ಅಂಕಿಅಂಶಗಳು ಭಾರತದ ಯಶಸ್ಸಿಗೆ ಸಾಕ್ಷಿಯಾಗಿವೆ. ಏಷ್ಯಾ ಕ್ರೀಡಾಕೂಟದಲ್ಲಿ ಇದುವರೆಗಿನ ಭಾರತದ ಅತ್ಯುತ್ತಮ ಸಾಧನೆ ಇದಾಗಿದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದು ನನಗೆ ವೈಯಕ್ತಿಕ ತೃಪ್ತಿಯ ವಿಷಯವಾಗಿದೆ ಎಂದು ಅವರು ಹೇಳಿದರು. ಕೊರೊನಾ ಲಸಿಕೆಯನ್ನು ಅನ್ವೇಷಿಸುವ ಸಮಯದಲ್ಲಿ ಇದ್ದ ಅನುಮಾನಗಳನ್ನು ಅವರು ನೆನಪಿಸಿಕೊಂಡರು ಮತ್ತು ನಾವು ಜೀವಗಳನ್ನು ಉಳಿಸುವಲ್ಲಿ ಮತ್ತು 250 ದೇಶಗಳಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾದಾಗ, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಇದೇ ಭಾವನೆಯನ್ನು ಅನುಭವಿಸಿದೆವು ಎಂದು ಅವರು ಹೇಳಿದರು.

ಶೂಟಿಂಗ್, ಆರ್ಚರಿ, ಸ್ಕ್ವಾಷ್, ರೋಯಿಂಗ್, ಮಹಿಳಾ ಬಾಕ್ಸಿಂಗ್ ಮತ್ತು ಮಹಿಳಾ ಮತ್ತು ಪುರುಷರ ಕ್ರಿಕೆಟ್ ನಲ್ಲಿ ಮೊದಲಬಾರಿಗೆ ಚಿನ್ನದ ಪದಕ, ಸ್ಕ್ವಾಷ್ ಮಿಶ್ರ ಡಬಲ್ಸ್‌ ನಲ್ಲಿ ಇದುವರೆಗಿನ ಅತ್ಯಧಿಕ ಪದಕಗಳನ್ನು ಪ್ರಧಾನಿ ಉಲ್ಲೇಖಿಸಿದರು. ಮಹಿಳೆಯರ ಶಾಟ್‌ಪುಟ್ (72 ವರ್ಷಗಳು), 4x4 100 ಮೀಟರ್‌ಗಳು (61 ವರ್ಷಗಳು), ಕುದುರೆ ಸವಾರಿ (41 ವರ್ಷಗಳು) ಮತ್ತು ಪುರುಷರ ಬ್ಯಾಡ್ಮಿಂಟನ್ (40 ವರ್ಷಗಳು) ನಲ್ಲಿ ದೀರ್ಘ ಸಮಯದ ನಂತರ ಪದಕಗಳನ್ನು ಗಳಿಸಿದ ಮಹತ್ವವನ್ನು ಅವರು ಒತ್ತಿ ಹೇಳಿದರು. "ನಿಮ್ಮ ಪ್ರಯತ್ನದಿಂದಾಗಿ ಹಲವು ದಶಕಗಳ ಕಾಯುವಿಕೆ ಕೊನೆಗೊಂಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತವು ಭಾಗವಹಿಸಿದ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಪದಕಗಳನ್ನು ಗೆದ್ದಿದ್ದರಿಂದ ವ್ಯಾಪ್ತಿ ವಿಸ್ತರಿಸಿದೆ ಎಂದು ಪ್ರಧಾನಿ ಹೇಳಿದರು. ಕನಿಷ್ಠ 20 ಈವೆಂಟ್‌ಗಳಲ್ಲಿ ಭಾರತವು ಎಂದಿಗೂ ಪದಕದ ಪೋಡಿಯಂ ಹತ್ತಿರಲಿಲ್ಲ. ನೀವು ಕೇವಲ ಖಾತೆಯನ್ನು ತೆರೆಯಲಿಲ್ಲ, ಬದಲಿಗೆ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಹಾದಿಯನ್ನು ತೋರಿದ್ದೀರಿ. ಇದು ಏಷ್ಯಾ ಕ್ರೀಡಾಕೂಟದಿಂದಾಚೆಗೆ ಹೋಗುತ್ತದೆ ಮತ್ತು ಒಲಿಂಪಿಕ್ಸ್‌ ನತ್ತ ನಮ್ಮ ನಡಿಗೆಗೆ ಹೊಸ ಆತ್ಮವಿಶ್ವಾಸವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಮಹಿಳಾ ಅಥ್ಲೀಟ್‌ಗಳು ನೀಡಿದ ಕೊಡುಗೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಿ, ಇದು ಭಾರತದ ಹೆಣ್ಣು ಮಕ್ಕಳ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಗೆದ್ದ ಎಲ್ಲಾ ಪದಕಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಕ್ರೀಡಾಪಟುಗಳ ಪಾಲಾಗಿದ್ದು, ಯಶಸ್ಸಿನ ಸರಮಾಲೆಯನ್ನು ಮಹಿಳಾ ಕ್ರಿಕೆಟ್ ತಂಡವೇ ಆರಂಭಿಸಿತು ಎಂದು ಅವರು ಹೇಳಿದರು. ಬಾಕ್ಸಿಂಗ್‌ ನಲ್ಲಿ ಮಹಿಳೆಯರೇ ಹೆಚ್ಚಿನ ಪದಕಗಳನ್ನು ಗೆದ್ದಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಪ್ರಭಾವಶಾಲಿ ಪ್ರದರ್ಶನಕ್ಕಾಗಿ ಮಹಿಳಾ ಅಥ್ಲೆಟಿಕ್ಸ್ ತಂಡವನ್ನು ಅವರು ಶ್ಲಾಘಿಸಿದರು. "ಭಾರತದ ಹೆಣ್ಣುಮಕ್ಕಳು ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ ಗಳಲ್ಲಿ ನಂ.1 ಕ್ಕಿಂತ ಕಡಿಮೆ ಯಾವುದನ್ನೂ ಪಡೆಯಲು ಸಿದ್ಧರಿರಲಿಲ್ಲ. ಇದು ನವ ಭಾರತದ ಆತ್ಮ ಮತ್ತು ಶಕ್ತಿಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಅಂತಿಮ ಶಿಳ್ಳೆ ಊದುವವರೆಗೆ ಮತ್ತು ವಿಜೇತರನ್ನು ನಿರ್ಧರಿಸುವವರೆಗೆ ನವ ಭಾರತವು ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. "ನವ ಭಾರತವು ಪ್ರತಿ ಬಾರಿಯೂ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತದೆ" ಎಂದು ಅವರು ಹೇಳಿದರು.

ಭಾರತಕ್ಕೆ ಯಾವತ್ತೂ ಪ್ರತಿಭೆಯ ಕೊರತೆ ಇರಲಿಲ್ಲ ಮತ್ತು ಕ್ರೀಡಾಪಟುಗಳು ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರು, ಆದರೆ ಹಲವು ಸವಾಲುಗಳಿಂದಾಗಿ ನಾವು ಪದಕಗಳ ವಿಷಯದಲ್ಲಿ ಹಿಂದುಳಿದಿದ್ದೆವು ಎಂದು ಅವರು ಹೇಳಿದರು. 2014ರ ನಂತರ ಕೈಗೊಂಡ ಆಧುನೀಕರಣ ಮತ್ತು ಪರಿವರ್ತನಾಶೀಲ ಪ್ರಯತ್ನಗಳ ಕುರಿತು ಪ್ರಧಾನಿ ವಿವರಿಸಿದರು. ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ ಸೌಲಭ್ಯಗಳನ್ನು ಒದಗಿಸುವುದು, ಕ್ರೀಡಾಪಟುಗಳಿಗೆ ಗರಿಷ್ಠ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತರಬೇತಿ ಒದಗಿಸುವುದು, ಆಯ್ಕೆಯಲ್ಲಿ ಪಾರದರ್ಶಕತೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ಗರಿಷ್ಠ ಅವಕಾಶವನ್ನು ಒದಗಿಸುವುದು ಭಾರತದ ಪ್ರಯತ್ನವಾಗಿದೆ ಎಂದು ಹೇಳಿದರು. 9 ವರ್ಷಗಳ ಹಿಂದಿನ ಕ್ರೀಡಾ ಬಜೆಟ್‌ ಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ನಮ್ಮ ಟಾಪ್ಸ್ ಮತ್ತು ಖೇಲೋ ಇಂಡಿಯಾ ಯೋಜನೆಗಳು ಗೇಮ್‌ ಚೇಂಜರ್‌ ಎಂದು ಸಾಬೀತುಪಡಿಸಿವೆ ಎಂದ ಅವರು, ಖೇಲೋ ಗುಜರಾತ್ ರಾಜ್ಯದ ಕ್ರೀಡಾ ಸಂಸ್ಕೃತಿಯನ್ನು ಹೇಗೆ ಬದಲಾಯಿಸಿತು ಎಂದು ನೆನಪಿಸಿಕೊಂಡರು. ಏಷ್ಯಾ ಕ್ರೀಡಾಕೂಟದ ತಂಡದ ಸುಮಾರು 125 ಅಥ್ಲೀಟ್‌ ಗಳು ಖೇಲೋ ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಅವರಲ್ಲಿ 40 ಕ್ಕೂ ಹೆಚ್ಚು ಮಂದಿ ಪದಕಗಳನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದರು. ಖೇಲೋ ಇಂಡಿಯಾ ಕ್ರೀಡಾಪಟುಗಳ ಯಶಸ್ಸು ಅಭಿಯಾನದ ಸರಿಯಾದ ದಿಕ್ಕನ್ನು ತೋರಿಸುತ್ತಿದೆ ಎಂದು ಅವರು ಹೇಳಿದರು. ಖೇಲೋ ಇಂಡಿಯಾ ಅಡಿಯಲ್ಲಿ 3000ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಈ ಆಟಗಾರರು ವರ್ಷಕ್ಕೆ ತಲಾ 6 ಲಕ್ಷ ರೂಪಾಯಿಗೂ ಹೆಚ್ಚು ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಈಗ ಸುಮಾರು ಎರಡೂವರೆ ಸಾವಿರ ಕೋಟಿ ರೂ.ಗಳ ಸಹಾಯಧನವನ್ನು ಕ್ರೀಡಾಪಟುಗಳಿಗೆ ನೀಡಲಾಗಿದೆ. ಹಣದ ಕೊರತೆಯು ನಿಮ್ಮ ಪ್ರಯತ್ನಗಳಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ನಿಮಗಾಗಿ ಮತ್ತು ಕ್ರೀಡೆಗಾಗಿ 3 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಇಂದು, ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ದೇಶದ ಮೂಲೆ ಮೂಲೆಗಳಲ್ಲಿ ನಿಮಗಾಗಿ ನಿರ್ಮಿಸಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.

ಪದಕ ವಿಜೇತರಲ್ಲಿ ಕಿರಿಯ ಕ್ರೀಡಾಪಟುಗಳು ಇರುವುದರ  ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. “ಇದು ಕ್ರೀಡಾ ರಾಷ್ಟ್ರದ ಸಂಕೇತವಾಗಿದೆ. ಈ ಹೊಸ ಯುವ ವಿಜೇತರು ದೀರ್ಘಕಾಲದವರೆಗೆ ದೇಶಕ್ಕಾಗಿ ಅದ್ಭುತ ಪ್ರದರ್ಶನ ನೀಡುತ್ತಾರೆ. ಯುವ ಭಾರತದ ಹೊಸ ಚಿಂತನೆಯು ಇನ್ನು ಮುಂದೆ ಕೇವಲ ಉತ್ತಮ ಪ್ರದರ್ಶನದಿಂದ ತೃಪ್ತವಾಗುವುದಿಲ್ಲ, ಬದಲಿಗೆ ಅದು ಪದಕಗಳು ಮತ್ತು ಗೆಲುವುಗಳನ್ನು ಬಯಸುತ್ತದೆ" ಎಂದು ಅವರು ಹೇಳಿದರು.

"ರಾಷ್ಟ್ರಕ್ಕಾಗಿ, ನೀವು GOAT ಅಂದರೆ ಸಾರ್ವಕಾಲಿಕ ಶ್ರೇಷ್ಠರಾಗಿದ್ದೀರಿ” ಎಂದು ಪ್ರಧಾನಮಂತ್ರಿ ಹೇಳಿದರು. ಕ್ರೀಡಾಪಟುಗಳ ಉತ್ಸಾಹ, ಸಮರ್ಪಣಾ ಮನೋಭಾವ ಹಾಗೂ ಬಾಲ್ಯದ ಕಥೆಗಳು ಎಲ್ಲರಿಗೂ ಸ್ಪೂರ್ತಿ ಎಂದರು. ಯುವ ಪೀಳಿಗೆಯ ಮೇಲೆ ಕ್ರೀಡಾಪಟುಗಳು ಬೀರುವ ಪ್ರಭಾವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೆಚ್ಚಿನ ಯುವಕರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಈ ಸಕಾರಾತ್ಮಕ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕ್ರೀಡಾಪಟುಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸುವಂತೆ ತಾವು ನೀಡಿದ ಸಲಹೆಯನ್ನು ಸ್ಮರಿಸಿದ ಪ್ರಧಾನಿ, ಮಾದಕ ವಸ್ತುಗಳ ದುಷ್ಪರಿಣಾಮಗಳು ಅವರ ವೃತ್ತಿ ಮತ್ತು ಜೀವನವನ್ನು ಹೇಗೆ ಹಾಳುಮಾಡಬಹುದು ಎಂಬುದರ ಕುರಿತು ಕ್ರೀಡಾಪಟುಗಳು ಯುವಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು. ರಾಷ್ಟ್ರವು ಡ್ರಗ್ಸ್ ವಿರುದ್ಧ ನಿರ್ಣಾಯಕ ಯುದ್ಧವನ್ನು ನಡೆಸುತ್ತಿದೆ ಎಂದ ಅವರು, ಕ್ರೀಡಾಪಟುಗಳು ಅವಕಾಶ ಸಿಕ್ಕಾಗಲೆಲ್ಲಾ ಡ್ರಗ್ಸ್ ಮತ್ತು ಹಾನಿಕಾರಕ ಔಷಧಿಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಬೇಕು ಎಂದು ಕರೆಕೊಟ್ಟರು. ಡ್ರಗ್ಸ್ ವಿರುದ್ಧದ ಸಮರವನ್ನು ಬಲಪಡಿಸಲು ಮತ್ತು ಮಾದಕ ದ್ರವ್ಯ ಮುಕ್ತ ಭಾರತದ ಧ್ಯೇಯವನ್ನು ಸಾಕಾರಗೊಳಿಸಲು ಮುಂದಾಗಬೇಕು ಎಂದು ಪ್ರಧಾನಿ ಕರೆ ನೀಡಿದರು.

ಫಿಟ್‌ನೆಸ್‌ ಗಾಗಿ ಸೂಪರ್ ಫುಡ್‌ ಗಳ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು ಮತ್ತು ದೇಶದ ಮಕ್ಕಳಲ್ಲಿ ಪೌಷ್ಟಿಕಾಂಶದ ಆಹಾರಕ್ಕೆ ಆದ್ಯತೆ ನೀಡುವ ಬಗ್ಗೆ ಜಾಗೃತಿ ಮೂಡಿಸಲು ಕ್ರೀಡಾಪಟುಗಳನ್ನು ಒತ್ತಾಯಿಸಿದರು. ಮಕ್ಕಳೊಂದಿಗೆ ಸಂಪರ್ಕ ಸಾಧಿಸುವಂತೆ ಮತ್ತು ಸರಿಯಾದ ಆಹಾರ ಪದ್ಧತಿಯ ಬಗ್ಗೆ ಮಾತನಾಡುವಂತೆ ಅವರನ್ನು ಒತ್ತಾಯಿಸಿದರು ಮತ್ತು ಸಿರಿಧಾನ್ಯ ಆಂದೋಲನ ಮತ್ತು ಪೋಷಣಾ ಮಿಷನ್‌ ನಲ್ಲಿ ದೊಡ್ಡ ಪಾತ್ರವನ್ನು ವಹಿಸಬೇಕು ಎಂದು ಅವರು ಹೇಳಿದರು.

ಕ್ರೀಡಾ ಕ್ಷೇತ್ರದಲ್ಲಿನ ಯಶಸ್ಸನ್ನು ರಾಷ್ಟ್ರೀಯ ಯಶಸ್ಸಿನ ದೊಡ್ಡ ಕ್ಯಾನ್ವಾಸ್‌ ನೊಂದಿಗೆ ಪ್ರಧಾನಮಂತ್ರಿಯವರು ಜೋಡಿಸಿದರು. “ಇಂದು, ಭಾರತವು ವಿಶ್ವ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಗಳಿಸುತ್ತಿರುವಾಗ, ನೀವು ಅದನ್ನು ಕ್ರೀಡಾ ಕ್ಷೇತ್ರದಲ್ಲೂ ಪ್ರದರ್ಶಿಸಿದ್ದೀರಿ. ಇಂದು, ಭಾರತವು ವಿಶ್ವದ ಮೂರನೇ ಅಗ್ರ ಆರ್ಥಿಕತೆಯತ್ತ ಸಾಗುತ್ತಿರುವಾಗ, ನಮ್ಮ ಯುವಜನರು ಅದರ ನೇರ ಲಾಭವನ್ನು ಪಡೆಯುತ್ತಾರೆ” ಎಂದು ಅವರು ಒತ್ತಿ ಹೇಳಿದರು. ಬಾಹ್ಯಾಕಾಶ, ಸ್ಟಾರ್ಟ್‌ಅಪ್‌, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ಇದೇ ರೀತಿಯ ಯಶಸ್ಸನ್ನು ಅವರು ಉಲ್ಲೇಖಿಸಿದರು. ಭಾರತದ ಯುವ ಸಾಮರ್ಥ್ಯವು ಪ್ರತಿಯೊಂದು ಕ್ಷೇತ್ರದಲ್ಲೂ ಗೋಚರಿಸುತ್ತಿದೆ ಎಂದು ಅವರು ಹೇಳಿದರು.

ಎಲ್ಲ ಕ್ರೀಡಾಪಟುಗಳ ಮೇಲೆ ದೇಶವು ಅಪಾರ ವಿಶ್ವಾಸವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು. ಈ ವರ್ಷದ ಏಷ್ಯಾ ಕ್ರೀಡಾಕೂಟಕ್ಕೆ ಆಯ್ಕೆಯಾದ ‘100 ಪಾರ್’ ಘೋಷಣೆಯ ಬಗ್ಗೆ ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಮುಂದಿನ ಆವೃತ್ತಿಯಲ್ಲಿ ಈ ದಾಖಲೆ ಇನ್ನಷ್ಟು ಮುಂದಕ್ಕೆ ಹೋಗಲಿದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಹತ್ತಿರದಲ್ಲಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಶ್ರದ್ಧೆಯಿಂದ ತಯಾರಿ ನಡೆಸುವಂತೆ ಕರೆಕೊಟ್ಟರು. ಈ ಬಾರಿ ಯಶಸ್ಸು ಕಾಣದ ಎಲ್ಲರಿಗೂ ಸಾಂತ್ವನ ಹೇಳಿದ ಅವರು ತಮ್ಮ ತಪ್ಪುಗಳಿಂದ ಪಾಠ ಕಲಿತು ಹೊಸ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು. ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿರುವ ಪ್ಯಾರಾ ಏಷ್ಯನ್ ಗೇಮ್ಸ್‌ ನ ಎಲ್ಲಾ ಆಟಗಾರರಿಗೆ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಏಷ್ಯಾ ಕ್ರೀಡಾಕೂಟ 2022 ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಅಭಿನಂದಿಸುವ ಮತ್ತು ಭವಿಷ್ಯದ ಸ್ಪರ್ಧೆಗಳಿಗೆ ಅವರನ್ನು ಪ್ರೇರೇಪಿಸುವ ಈ ಕಾರ್ಯಕ್ರಮವು ಪ್ರಧಾನ ಮಂತ್ರಿಯವರ ಪ್ರಯತ್ನವಾಗಿದೆ. ಭಾರತವು 2022 ರ ಏಷ್ಯಾ ಕ್ರೀಡಾಕೂಟದಲ್ಲಿ 28 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 107 ಪದಕಗಳನ್ನು ಗೆದ್ದಿದೆ. ಒಟ್ಟು ಪದಕಗಳಿಗೆ ಸಂಬಂಧಿಸಿದಂತೆ ಇದು ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.

ಕಾರ್ಯಕ್ರಮದಲ್ಲಿ ಏಷ್ಯಾ ಕ್ರೀಡಾಕೂಟದ ಭಾರತೀಯ ತಂಡದ ಕ್ರೀಡಾಪಟುಗಳು, ಅವರ ತರಬೇತುದಾರರು, ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ ಪ್ರತಿನಿಧಿಗಳು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು.

 

 

***

 

 



(Release ID: 1966509) Visitor Counter : 139