ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಅಕ್ಟೋಬರ್ 3ರಂದು ಛತ್ತೀಸ್‌ಗಢ ಮತ್ತು ತೆಲಂಗಾಣಕ್ಕೆ ಪ್ರಧಾನಿ ಭೇಟಿ 


ನಗರ್ನಾರ್‌ನಲ್ಲಿರುವ ಎನ್ಎಂಡಿಸಿ ಸ್ಟೀಲ್ ಲಿಮಿಟೆಡ್‌ನ ಉಕ್ಕು ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನ ಮಂತ್ರಿ; ಇದು 23,800 ಕೋಟಿ ರೂ.ಗಿಂತ ಹೆಚ್ಚಿನ  ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಬಸ್ತಾರ್ ಅನ್ನು ವಿಶ್ವದ ಉಕ್ಕು ಉತ್ಪಾದನಾ ಕ್ಷೇತ್ರದ ಉನ್ನತ ಸ್ಥಾನದಲ್ಲಿ ಇರಿಸಲಿದೆ.
 
ಜಗದಲ್‌ಪುರ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
 
ಛತ್ತೀಸ್‌ಗಢದಲ್ಲಿ ಬಹು ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನ ಮಂತ್ರಿ
 
ತೆಲಂಗಾಣದಲ್ಲಿ ಸುಮಾರು 8,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನ ಮಂತ್ರಿ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
 
ಎನ್ ಟಿಪಿಸಿಯ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‌ನ 800 ಮೆಗಾವ್ಯಾಟ್ ಸಾಮರ್ಥ್ಯದ ಘಟಕವನ್ನು ಸಮರ್ಪಿಸಲಿರುವ ಪ್ರಧಾನಮಂತ್ರಿ; ವಿವಿಧ ರೈಲು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ 
 
ಪ್ರಧಾನ ಮಂತ್ರಿ - ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ, ತೆಲಂಗಾಣದಾದ್ಯಂತ ನಿರ್ಮಿಸಲಿರುವ 20 ಕ್ರಿಟಿಕಲ್ ಕೇರ್ ಬ್ಲಾಕ್‌ಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
 

Posted On: 02 OCT 2023 10:12AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಅಕ್ಟೋಬರ್ 3ರಂದು ಛತ್ತೀಸ್‌ಗಢ ಮತ್ತು ತೆಲಂಗಾಣಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಅ.3ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನ ಮಂತ್ರಿ ಅವರು ನಗರ್ನಾರ್‌ನಲ್ಲಿರುವ ಎನ್ಎಂಡಿಸಿ ಸ್ಟೀಲ್ ಲಿಮಿಟೆಡ್‌ನ ಉಕ್ಕಿನ ಸ್ಥಾವರ ಸೇರಿದಂತೆ ಛತ್ತೀಸ್‌ಗಢದ ಬಸ್ತಾರ್‌ನ ಜಗದಲ್‌ಪುರದಲ್ಲಿ 26,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹುಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪ್ರಧಾನಿ ಅವರು ತೆಲಂಗಾಣದ ನಿಜಾಮಾಬಾದ್‌ ತಲುಪಲಿದ್ದು, ಅಲ್ಲಿ ಅವರು ವಿದ್ಯುತ್, ರೈಲು ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸುಮಾರು 8000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 
 
ಛತ್ತೀಸ್‌ಗಢದಲ್ಲಿ ಪ್ರಧಾನ ಮಂತ್ರಿ

ಆತ್ಮನಿರ್ಭರ ಭಾರತದ ದೃಷ್ಟಿಗೆ ಪ್ರಮುಖ ಉತ್ತೇಜನ ಒದಗಿಸುವ ಹೆಜ್ಜೆ ಗುರುತಾಗಿ, ಬಸ್ತಾರ್ ಜಿಲ್ಲೆಯ ನಗರ್ನಾರ್‌ನಲ್ಲಿರುವ ಎನ್ಎಂಡಿಸಿ ಸ್ಟೀಲ್ ಲಿಮಿಟೆಡ್‌ನ ಉಕ್ಕು ಸ್ಥಾವರವನ್ನು ಪ್ರಧಾನ ಮಂತ್ರಿ ದೇಶಕ್ಕೆ ಸಮರ್ಪಿಸಲಿದ್ದಾರೆ. 23,800 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ಉಕ್ಕಿನ ಸ್ಥಾವರವು ಉತ್ತಮ ಗುಣಮಟ್ಟದ ಉಕ್ಕು ಉತ್ಪಾದಿಸುವ ಹಸಿರು ವಲಯದ ಯೋಜನೆಯಾಗಿದೆ. ನಗರ್ನಾರ್‌ನಲ್ಲಿರುವ ಎನ್ಎಂಡಿಸಿ ಸ್ಟೀಲ್ ಲಿಮಿಟೆಡ್‌ನ ಉಕ್ಕು ಘಟಕವು ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಇದು ಬಸ್ತಾರ್ ಅನ್ನು ವಿಶ್ವದ ಉಕ್ಕು ಉತ್ಪಾದನಾ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ಇರಿಸುತ್ತದೆ. ಇದು ಈ ಪ್ರದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

ದೇಶದಾದ್ಯಂತ ರೈಲು ಮೂಲಸೌಕರ್ಯ ಸುಧಾರಿಸುವ ಪ್ರಧಾನ ಮಂತ್ತಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಕಾರ್ಯಕ್ರಮದ ಸಮಯದಲ್ಲಿ ಅನೇಕ ರೈಲು ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಪ್ರಧಾನಿ ಅವರು ಅಂತಗಢ ಮತ್ತು ತರೋಕಿ ನಡುವಿನ ಹೊಸ ರೈಲು ಮಾರ್ಗ ಮತ್ತು ಜಗದಲ್‌ಪುರ ಮತ್ತು ದಾಂತೇವಾರ ನಡುವಿನ ಜೋಡಿ ರೈಲು ಮಾರ್ಗ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಅವರು ಬೋರಿದಂಡ್-ಸೂರಜ್‌ಪುರ ಜೋಡಿ ರೈಲು ಮಾರ್ಗ ಯೋಜನೆ ಮತ್ತು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಜಗದಲ್‌ಪುರ ನಿಲ್ದಾಣದ ಮರುಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನ ಮಂತ್ರಿ ಅವರು ತಾರೋಕಿ - ರಾಯ್ಪುರ್ ಡಿಇಎಂಯು ರೈಲು ಸೇವೆಗೂ ಹಸಿರುನಿಶಾನೆ ತೋರಲಿದ್ದಾರೆ. ಈ ರೈಲು ಯೋಜನೆಗಳು ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ. ಸುಧಾರಿತ ರೈಲು ಮೂಲಸೌಕರ್ಯ ಮತ್ತು ಹೊಸ ರೈಲು ಸೇವೆಯು ಸ್ಥಳೀಯ ಜನರಿಗೆ ಪ್ರಯೋಜನ ನೀಡುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ರಾಷ್ಟ್ರೀಯ ಹೆದ್ದಾರಿ-43ರ 'ಕುಂಕೂರಿಯಿಂದ ಛತ್ತೀಸ್‌ಗಢ - ಜಾರ್ಖಂಡ್ ಗಡಿ ಭಾಗದವರೆಗೆ' ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಹೊಸ ರಸ್ತೆಯು ರಸ್ತೆ ಸಂಪರ್ಕವನ್ನು ಸುಧಾರಿಸುತ್ತದೆ, ಈ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಲಿದೆ.
 
ತೆಲಂಗಾಣದಲ್ಲಿ ಪ್ರಧಾನ ಮಂತ್ರಿ

ದೇಶದಲ್ಲಿ ಸುಧಾರಿತ ಇಂಧನ ದಕ್ಷತೆಯೊಂದಿಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಎನ್ ಟಿಪಿಸಿಯ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‌ನ ಮೊದಲ ಹಂತದ 800 ಮೆಗಾವ್ಯಾಟ್ ಸಾರ್ಥ್ಯದ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಇದು ತೆಲಂಗಾಣಕ್ಕೆ ಕಡಿಮೆ ವೆಚ್ಚದ ವಿದ್ಯುತ್ ಒದಗಿಸುತ್ತದೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಇದು ದೇಶದ ಅತ್ಯಂತ ಪರಿಸರ ಬದ್ಧ ವಿದ್ಯುತ್ ಕೇಂದ್ರಗಳಲ್ಲಿ ಒಂದಾಗಲಿದೆ.

ಮನೋಹರಾಬಾದ್ ಮತ್ತು ಸಿದ್ದಿಪೇಟ್ ಸಂಪರ್ಕಿಸುವ ಹೊಸ ರೈಲು ಮಾರ್ಗ ಸೇರಿದಂತೆ ರಾಷ್ಟ್ರ ರೈಲು ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ಸಮರ್ಪಿಸುವುದರಿಂದ ತೆಲಂಗಾಣದ ರೈಲು ಮೂಲಸೌಕರ್ಯವು ಉತ್ತೇಜನ ಪಡೆಯುತ್ತದೆ. ಧರ್ಮಾಬಾದ್ - ಮನೋಹರಾಬಾದ್ ಮತ್ತು ಮಹಬೂಬ್ನಗರ - ಕರ್ನೂಲ್ ನಡುವಿನ ವಿದ್ಯುದೀಕರಣ ಯೋಜನೆ. 76 ಕಿ.ಮೀ. ಉದ್ದದ ಮನೋಹರಾಬಾದ್-ಸಿದ್ದಿಪೇಟ್ ರೈಲು ಮಾರ್ಗವು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಮೇದಕ್ ಮತ್ತು ಸಿದ್ದಿಪೇಟ್ ಜಿಲ್ಲೆಗಳಲ್ಲಿ. ಧರ್ಮಾಬಾದ್ - ಮನೋಹರಾಬಾದ್ ಮತ್ತು ಮಹಬೂಬ್‌ನಗರ - ಕರ್ನೂಲ್ ನಡುವಿನ ವಿದ್ಯುದೀಕರಣ ಯೋಜನೆಯು ರೈಲುಗಳ ಸರಾಸರಿ ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ, ಈ ಪ್ರದೇಶದಲ್ಲಿ ಪರಿಸರಸ್ನೇಹಿ ರೈಲು ಸಾರಿಗೆಗೆ ಕಾರಣವಾಗುತ್ತದೆ. ಪ್ರಧಾನ ಮಂತ್ರಿ ಅವರು ಸಿದ್ದಿಪೇಟ್ - ಸಿಕಂದರಾಬಾದ್ - ಸಿದ್ದಿಪೇಟ್ ರೈಲು ಸೇವೆಗೆ ಚಾಲನೆ ನೀಡಲಿದ್ದು, ಈ ಪ್ರದೇಶದ ಸ್ಥಳೀಯ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ತೆಲಂಗಾಣದಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ, ರಾಜ್ಯಾದ್ಯಂತ 20 ಕ್ರಿಟಿಕಲ್ ಕೇರ್ ಬ್ಲಾಕ್‌(ಸಿಸಿಬಿ)ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದಿಲಾಬಾದ್, ಭದ್ರಾದ್ರಿ ಕೊತಗುಡಂ, ಜಯಶಂಕರ್ ಭೂಪಾಲಪಲ್ಲಿ, ಜೋಗುಲಾಂಬ ಗದ್ವಾಲ್, ಹೈದರಾಬಾದ್, ಖಮ್ಮಂ, ಕುಮುರಂ ಭೀಮ್ ಆಸಿಫಾಬಾದ್, ಮಂಚೇರಿಯಲ್, ಮಹಬೂಬ್‌ನಗರ(ಬದೇಪಲ್ಲಿ), ಮುಲುಗು, ನಾಗರಕರ್ನೂಲ್, ನಲ್ಗೊಂಡ, ನಾರಾಯಣಪೇಟೆ, ನಿರ್ಮಲ್, ರಾಜಣ್ಣ ಸಿರಕ್‌ಡಿ, ಸೂರ್ಯಪೇಟ್, ಪೆದ್ದಪಲ್ಲಿ, ವಿಕಾರಾಬಾದ್ ಮತ್ತು ವಾರಂಗಲ್ (ನರಸಂಪೇಟೆ) ಜಿಲ್ಲೆಗಳಲ್ಲಿ ಈ ಸಿಸಿಬಿಗಳನ್ನು ನಿರ್ಮಿಸಲಾಗುವುದು.. ಈ ಸಿಸಿಬಿಗಳು ತೆಲಂಗಾಣದಾದ್ಯಂತ ಜಿಲ್ಲಾ ಮಟ್ಟದ ಕ್ರಿಟಿಕಲ್ ಕೇರ್ ಮೂಲಸೌಕರ್ಯವನ್ನು ಹೆಚ್ಚಿಸಿ ರಾಜ್ಯದ ಜನರಿಗೆ ಪ್ರಯೋಜನ ನೀಡುತ್ತವೆ.

****
 



(Release ID: 1963279) Visitor Counter : 102