ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಇಂದೋರ್‌ನಲ್ಲಿ 2023 ಸೆಪ್ಟೆಂಬರ್ 26-27ರಂದು ಇಂಡಿಯಾ ಸ್ಮಾರ್ಟ್ ಸಿಟಿಗಳ ಸಮಾವೇಶ - 2023 ನಡೆಯಲಿದೆ
ಭಾರತ ಸ್ಮಾರ್ಟ್ ಸಿಟಿಗಳ ಪ್ರಶಸ್ತಿ ಸ್ಪರ್ಧೆ (ಐಸಾಕ್-ಐಎಸ್ಎಸಿ) - 2022ರ ವಿಜೇತರನ್ನು ರಾಷ್ಟ್ರಪತಿ ಅಭಿನಂದಿಸಲಿದ್ದಾರೆ
ನವದೆಹಲಿ, 24 ಸೆಪ್ಟೆಂಬರ್, 2023l
Posted On:
24 SEP 2023 11:42AM by PIB Bengaluru
ಭಾರತ ಸರ್ಕಾರವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮಧ್ಯಪ್ರದೇಶದ ಇಂದೋರ್‌ನ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ 2023 ಸೆಪ್ಟೆಂಬರ್ 26-27ರಂದು ಭಾರತ ಸ್ಮಾರ್ಟ್ ಸಿಟಿಗಳ ಸಮಾವೇಶ 2023 ಆಯೋಜಿಸುತ್ತಿದೆ. ಈ ಸಮಾವೇಶವು ಎಲ್ಲಾ 100 ಸ್ಮಾರ್ಟ್ ಸಿಟಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ನಗರಗಳು ನಗರಾಭಿವೃದ್ಧಿ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುವ ಮೂಲಕ ನಗರಗಳ ಅಭಿವೃದ್ಧಿ ಅಭ್ಯಾಸದಲ್ಲಿ ಮಾದರಿ ಬದಲಾವಣೆಯನ್ನು ಮುನ್ನಡೆಸುತ್ತಿವೆ. ದೇಶದ ನಗರಗಳ ಪರಿವರ್ತನೆಯ ಭವಿಷ್ಯದ ಮಾರ್ಗಸೂಚಿಗಳಿಗೆ ಕಾರ್ಯತಂತ್ರ ರೂಪು ನೀಡಲು ಸಹಾಯ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಅಡಿ, ಮಾಡಿದ ತಮ್ಮ ಆದರ್ಶಪ್ರಾಯ ಕೆಲಸಗಳನ್ನು ಪ್ರದರ್ಶಿಸಲು ಈ ಸಮಾವೇಶವು ನಗರಗಳಿಗೆ ವೇದಿಕೆ ಒದಗಿಸುತ್ತದೆ.
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2022ರ ಭಾರತ ಸ್ಮಾರ್ಟ್ ಸಿಟಿಗಳ ಪ್ರಶಸ್ತಿ ಸ್ಪರ್ಧೆಯ (ಐಸಾಕ್-ಐಎಸ್ಎಸಿ) 4ನೇ ಆವೃತ್ತಿಯ ವಿಜೇತರನ್ನು 2023 ಸೆಪ್ಟೆಂಬರ್ 27ರಂದು ಸನ್ಮಾನಿಸಲಿದ್ದಾರೆ. ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ಸಿಟೀಸ್ ಮಿಷನ್ ಅಡಿ, ಐಸಾಕ್(ಐಎಸ್ಎಸಿ) ಸಮಾವೇಶವನ್ನು 2018ರಿಂದಲೂ ಆಯೋಜಿಸುತ್ತಾ ಬಂದಿದೆ. ಇದು ಸ್ಮಾರ್ಟ್ ಸಿಟಿ ಮಿಷನ್ ಅಡಿ, ಪ್ರಾರಂಭಿಸಲಾದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ. ಅಲ್ಲಿ ಪ್ರವರ್ತಕ ನಗರ ಕಾರ್ಯತಂತ್ರಗಳು, ಯೋಜನೆಗಳು ಮತ್ತು ಆಲೋಚನೆ, ಅನುಕರಣೀಯ ಕಾರ್ಯಕ್ಷಮತೆಯನ್ನು ಗುರುತಿಸಿ, ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜತೆಗೆ, ವಿಚಾರ ವಿನಿಮಯದ ಮೂಲಕ ಕಲಿಕೆ ಸಕ್ರಿಯಗೊಳಿಸುವ ಜತೆಗೆ, ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಲಾಗುತ್ತದೆ.
ಈ ಸಮಾವೇಶದಲ್ಲಿ ಮಧ್ಯಪ್ರದೇಶ ರಾಜ್ಯಪಾಲ ಶ್ರೀ ಮಂಗುಭಾಯ್ ಸಿ. ಪಟೇಲ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಶ್ರೀ ಭೂಪೇಂದ್ರ ಯಾದವ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ರೈಲ್ವೆ ಸಚಿವ ಶ್ರೀ ಕೌಶಲ್ ಕಿಶೋರ್, ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವ ಶ್ರೀ ಭೂಪೇಂದ್ರ ಸಿಂಗ್, ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವರು ಪಾಲ್ಗೊಳ್ಳಲಿದ್ದಾರೆ.
ಇದರ ಜತೆಗೆ, ಮಧ್ಯಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳು, ಎಲ್ಲಾ 100 ಸ್ಮಾರ್ಟ್ ಸಿಟಿಗಳ ಮೇಯರ್‌ಗಳು ಮತ್ತು ಆಯುಕ್ತರು, ಕೈಗಾರಿಕಾ ಪಾಲುದಾರರು, ಶೈಕ್ಷಣಿಕ ವಲಯ ಮತ್ತು ಸ್ಮಾರ್ಟ್ ಸಿಟಿ ಮಿಷನ್‌ಗೆ ಸಂಬಂಧಿಸಿದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ 2023 ಸೆಪ್ಟೆಂಬರ್ 26 ಮತ್ತು 27ರಂದು 2 ದಿನಗಳ ಕಾಲ ಕಾರ್ಯಕ್ರಮಗಳು ಜರುಗಲಿವೆ. ಸಮಾವೇಶದ ಮೊದಲ ದಿನ ಐಎಸ್ಎಸಿ 2022ರ ಪ್ರಶಸ್ತಿ ವಿಜೇತ ನಗರ ಯೋಜನೆಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನದ ಉದ್ಘಾಟನೆ ನೆರವೇರಲಿದೆ. ಸ್ಮಾರ್ಟ್ ಸಿಟಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ)ಗಳೊಂದಿಗೆ ಸಂವಾದಗಳು ನಡೆಯಲಿವೆ. ಜತೆಗೆ, ಇಂದೋರ್ ಮತ್ತು ಉಜ್ಜಯಿನಿಯಲ್ಲಿ ಸ್ಮಾರ್ಟ್ ಸಿಟೀಸ್ ಮಿಷನ್ ಅಡಿ ಜಾರಿಗೆ ತರಲಾದ ಪ್ರಾತಿನಿಧಿಕ ಐಕಾನಿಕ್ ಯೋಜನೆಗಳ ವೀಕ್ಷಣೆಗೆ ಸ್ಥಳ ಭೇಟಿ ಕಾರ್ಯಕ್ರಮ ಇರಲಿದೆ.
2ನೇ ದಿನದ ಕಾರ್ಯಕ್ರಮದಲ್ಲಿ ಐಸಾಕ್-2022 ಪ್ರಶಸ್ತಿ ವಿಜೇತರಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡುವರು. ಅಲ್ಲಿ 5 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು 31 ಅನನ್ಯ ನಗರಗಳು ಮತ್ತು 7 ಪಾಲುದಾರ ಸಂಸ್ಥೆಗಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಒಟ್ಟು 66 ಮಂದಿ ಐಸಾಕ್ ಪ್ರಶಸ್ತಿ ವಿಜೇತರಿದ್ದಾರೆ, ಇವುಗಳ ವಿವರವಾದ ಪಟ್ಟಿಯನ್ನು ಅನುಬಂಧ ‘ಬಿ’ಯಲ್ಲಿ ನೀಡಲಾಗಿದೆ. ಜತೆಗೆ, ಸ್ಮಾರ್ಟ್ ಸಿಟ್ ಮಿಷನ್ 4 ವರದಿಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳೆಂದರೆ, ಐಎಸ್ಎಸಿ 2022 ಪ್ರಶಸ್ತಿಗಳ ಸಂಕಲನ, ವಿಶ್ವಸಂಸ್ಥೆಯ ಪ್ರಕೃತಿ ಆವಾಸಸ್ಥಾನ ವರದಿ: ಸ್ಮಾರ್ಟ್ ಸಿಟೀಸ್ ಮಿಷನ್ - ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ, ಪೂರೈಕೆ ಸರಪಳಿ ನಿರ್ವಹಣೆಯ ಸುದ್ದಿಪತ್ರಗಳ ಸಂಕಲನ ಮತ್ತು ಐಎಸ್ಎಸಿ 2023 ಪ್ರಶಸ್ತಿಗಳ ಕರಪತ್ರವನ್ನು ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪ್ರಶಸ್ತಿಗಳ ವಿತರಣೆ ಮತ್ತು ಅನಾವರಣ ಕಾರ್ಯಕ್ರಮದ ನಂತರ, ಪ್ರಶಸ್ತಿ ವಿಜೇತ ಸ್ಮಾರ್ಟ್ ಸಿಟಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು (ಸಿಇಒಗಳು) ತಮ್ಮ ಅನುಭವಗಳು ಮತ್ತು ಕಲಿಕೆಗಳ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ 2ನೇ ದಿನದ ಕಾರ್ಯಕ್ರಮ ಸಮಾಪ್ತಿಯಾಗಲಿದೆ.
ಸ್ಮಾರ್ಟ್ ಸಿಟಿ ಮಿಷನ್‌ನ ಸಂಕ್ಷಿಪ್ತ ಅವಲೋಕನ
ಸ್ಮಾರ್ಟ್ ಸಿಟೀಸ್ ಮಿಷನ್ 2015 ಜೂನ್ 25ರಂದು ಪ್ರಾರಂಭವಾಯಿತು, 'ಸ್ಮಾರ್ಟ್ ಪರಿಹಾರಗಳ' ಅನ್ವಯದ ಮೂಲಕ ದೇಶದ ನಾಗರಿಕರಿಗೆ ಪ್ರಧಾನ ಮೂಲಸೌಕರ್ಯ, ಸ್ವಚ್ಛ ಮತ್ತು ಸುಸ್ಥಿರ ಪರಿಸರ ಮತ್ತು ಯೋಗ್ಯ ಗುಣಮಟ್ಟದ ಜೀವನ ಒದಗಿಸುವ ಗುರಿ ಹೊಂದಿದೆ. ಇದು ದೇಶದ ನಗರಾಭಿವೃದ್ಧಿಯ ಅಭ್ಯಾಸದಲ್ಲಿ ಒಂದು ಮಾದರಿ ಬದಲಾವಣೆ ತರುವ ಉದಾತ್ತ ಗುರಿ ಹೊಂದಿರುವ ಪರಿವರ್ತನಾ ಧ್ಯೇಯವಾಗಿದೆ. ಇಲ್ಲಿಯವರೆಗೆ, 1.1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 6,000ಕ್ಕಿಂತ ಅಧಿಕ ಯೋಜನೆಗಳು ಪೂರ್ಣಗೊಂಡಿವೆ. ಉಳಿದ ಯೋಜನೆಗಳನ್ನು 2024 ಜೂನ್ 30 ರೊಳಗೆ ಪೂರ್ಣಗೊಳಿಸಲಾಗುವುದು.
ಈ ಮಿಷನ್ ಅಡಿ ಸಾಧಿಸಿದ ಅತ್ಯಂತ ಗಮನಾರ್ಹ ಮೈಲಿಗಲ್ಲು ಎಂದರೆ, ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು (ಐಸಿಸಿಸಿ). ಇದು ಎಲ್ಲಾ 100 ಸ್ಮಾರ್ಟ್ ಸಿಟಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಐಸಿಸಿಸಿಗಳು ನಗರ ನಿರ್ವಹಣೆಗೆ ತಂತ್ರಜ್ಞಾನ ಬಳಸಿಕೊಂಡು ನಗರದ ಕಾರ್ಯಾಚರಣೆಗಳಿಗೆ ಮೆದುಳು ಮತ್ತು ನರಮಂಡಲವಾಗಿ ಕೆಲಸ ಮಾಡುತ್ತವೆ. ಅಪರಾಧ ಟ್ರ್ಯಾಕಿಂಗ್, ನಾಗರಿಕರ ಸುರಕ್ಷತೆ ಮತ್ತು ಭದ್ರತೆ, ಸಾರಿಗೆ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ನೀರು ಸರಬರಾಜು, ವಿಪತ್ತುಗಳ ನಿರ್ವಹಣೆ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ನಗರ ಸೇವೆಗಳು ಗಮನಾರ್ಹವಾಗಿ ಸುಧಾರಿಸಿದೆ.
100 ಸ್ಮಾರ್ಟ್ ಸಿಟಿಗಳು ಚಲನಶೀಲತೆ, ಇಂಧನ, ನೀರು, ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ, ರೋಮಾಂಚಕ ಸಾರ್ವಜನಿಕ ಸ್ಥಳಗಳು, ಸಾಮಾಜಿಕ ಮೂಲಸೌಕರ್ಯ, ಸ್ಮಾರ್ಟ್ ಆಡಳಿತ ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ವಲಯಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಉದಾಹರಣೆಗೆ, ಸ್ಮಾರ್ಟ್ ಮೊಬಿಲಿಟಿಯಲ್ಲಿ, 1,192 ಯೋಜನೆಗಳನ್ನು 24,265 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. 16,905 ಕೋಟಿ ರೂ. ಮೌಲ್ಯದ 494 ಯೋಜನೆಗಳು ನಡೆಯುತ್ತಿವೆ. ಸ್ಮಾರ್ಟ್ ಎನರ್ಜಿ(ಇಂಧನ)ಯಲ್ಲಿ 573 ಯೋಜನೆಗಳು ಪೂರ್ಣಗೊಂಡಿವೆ ಮತ್ತು 94 ಚಾಲ್ತಿಯಲ್ಲಿವೆ. ನೀರು ಸರಬರಾಜು, ನೈರ್ಮಲ್ಯ ಮತ್ತು ಸ್ವಚ್ಛತೆಯನಲ್ಲಿ 34,751 ಕೋಟಿ ರೂ. ಮೌಲ್ಯದ 1,162ಕ್ಕಿಂತ ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ, 18,716 ಕೋಟಿ ರೂ. ಮೌಲ್ಯದ 333 ಯೋಜನೆಗಳು ಚಾಲ್ತಿಯಲ್ಲಿವೆ. 100 ಸ್ಮಾರ್ಟ್ ಸಿಟಿಗಳು ಈಗಾಗಲೇ 6,403 ಕೋಟಿ ರೂ. ವೆಚ್ಚದಲ್ಲಿ ಒಟ್ಟು 1,063 ಸಾರ್ವಜನಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿವೆ, 5,470 ಕೋಟಿ ರೂ. ಮೌಲ್ಯದ 260 ಯೋಜನೆಗಳು ಚಾಲ್ತಿಯಲ್ಲಿವೆ. ಇದಲ್ಲದೆ, 8,228 ಕೋಟಿ ರೂ. ಮೌಲ್ಯದ 180 ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ)ದ ಯೋಜನೆಗಳು ಪೂರ್ಣಗೊಂಡಿವೆ, ಇನ್ನೂ 27 ಯೋಜನೆಗಳು ಚಾಲ್ತಿಯಲ್ಲಿವೆ. ಮಾರುಕಟ್ಟೆ ಪುನರಾಭಿವೃದ್ಧಿ ಮತ್ತು ಸ್ಟಾರ್ಟಪ್ ಇನ್ ಕ್ಯುಬೇಷನ್ ಸೆಂಟರ್(ಪೋಷಣಾ ಕೇಂದ್ರಗಳು)ಗಳಂತಹ ಆರ್ಥಿಕ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ 652 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ, ಇನ್ನೂ 267 ಯೋಜನೆಗಳು ಚಾಲ್ತಿಯಲ್ಲಿವೆ. ಸಾಮಾಜಿಕ ಮೂಲಸೌಕರ್ಯ ವಲಯದಲ್ಲಿ (ಆರೋಗ್ಯ, ಶಿಕ್ಷಣ, ವಸತಿ ಇತ್ಯಾದಿ), 679 ಯೋಜನೆಗಳು ಪೂರ್ಣಗೊಂಡಿದ್ದು, ಇನ್ನೂ 153 ಯೋಜನೆಗಳು ಚಾಲ್ತಿಯಲ್ಲಿವೆ.
ಐಸಾಕ್ ಪ್ರಶಸ್ತಿಗಳ ಅವಲೋಕನ
ಈ ಹಿಂದೆ, ಐಸಾಕ್-2018, 2019 ಮತ್ತು 2020 3 ಆವೃತ್ತಿಗಳಿಗೆ ಸಾಕ್ಷಿಯಾಗಿದೆ. 100 ಸ್ಮಾರ್ಟ್ ಸಿಟಿಗಳಲ್ಲಿ ಸುಸ್ಥಿರ ಅಭಿವೃದ್ಧಿ ಉತ್ತೇಜಿಸುವ ನಗರಗಳು, ಯೋಜನೆಗಳು ಮತ್ತು ನವೀನ ಆಲೋಚನೆಗಳನ್ನು ಗುರುತಿಸಿ, ವಿಜೇತರನ್ನು ಪುರಸ್ಕರಿಸುತ್ತದೆ, ಜತೆಗೆ ಎಲ್ಲರನ್ನೂ ಒಳಗೊಂಡ, ಸಮಾನ, ಸುರಕ್ಷಿತ, ಆರೋಗ್ಯಕರ ಮತ್ತು ಸಹಭಾಗಿತ್ವದ ನಗರಗಳು, ಹೀಗೆ ಎಲ್ಲರಿಗೂ ಜೀವನದ ಗುಣಮಟ್ಟ ಹೆಚ್ಚಿಸುತ್ತವೆ. 2022 ಏಪ್ರಿಲ್ ನಲ್ಲಿ ಸೂರತ್‌ನಲ್ಲಿ ನಡೆದ 'ಸ್ಮಾರ್ಟ್ ಸಿಟೀಸ್-ಸ್ಮಾರ್ಟ್ ನಗರೀಕರಣ' ಕಾರ್ಯಕ್ರಮದಲ್ಲಿ ಐಸಾಕ್ 4ನೇ ಆವೃತ್ತಿಯನ್ನು ಪ್ರಾರಂಭಿಸಲಾಯಿತು. ಐಸಾಕ್ 2022 ಪ್ರಶಸ್ತಿಯು 'ಅರ್ಹತಾ ಹಂತ' ಒಳಗೊಂಡಿರುವ 2 ಹಂತದ ಸಲ್ಲಿಕೆ ಪ್ರಕ್ರಿಯೆ ಹೊಂದಿತ್ತು, ಇದು ನಗರದ ಕಾರ್ಯಕ್ಷಮತೆಯ ಒಟ್ಟಾರೆ ಮೌಲ್ಯಮಾಪನ ಒಳಗೊಂಡಿತ್ತು ಮತ್ತು 'ಪ್ರಸ್ತಾಪ ಹಂತ'ವು ಈ ಕೆಳಗಿನಂತೆ 6 ಪ್ರಶಸ್ತಿ ವಿಭಾಗಗಳಿಗೆ ಸ್ಮಾರ್ಟ್ ಸಿಟಿಗಳು ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಲು ಅಗತ್ಯವಿದೆ:
· ಪ್ರಾಜೆಕ್ಟ್ ಪ್ರಶಸ್ತಿಗಳು: 10 ವಿಭಿನ್ನ ಥೀಮ್‌ಗಳು,
· ನಾವೀನ್ಯತೆ ಪ್ರಶಸ್ತಿಗಳು: 2 ವಿಭಿನ್ನ ಥೀಮ್‌ಗಳು,
· ನಗರ ಪ್ರಶಸ್ತಿಗಳು: 2 ಥೀಮ್‌ಗಳು: ರಾಷ್ಟ್ರೀಯ ಮತ್ತು ವಲಯ
· ರಾಜ್ಯ ಪ್ರಶಸ್ತಿಗಳು,
· ಕೇಂದ್ರಾಡಳಿತ ಪ್ರದೇಶಗಳ ಪ್ರಶಸ್ತಿ, ಮತ್ತು
· ಪಾಲುದಾರರ ಪ್ರಶಸ್ತಿಗಳು, 3 ವಿಭಿನ್ನ ಥೀಮ್‌ಗಳು
ಐಸಾಕ್-2022 ಪ್ರಶಸ್ತಿಗೆ 80 ಅರ್ಹತಾ ಸ್ಮಾರ್ಟ್ ಸಿಟಿಗಳಿಂದ ಒಟ್ಟು 845 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ. ಈ ನಮೂದುಗಳನ್ನು 5 ಹಂತಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಮೊದಲ ಹಂತದಲ್ಲಿ, 845 ಪ್ರಸ್ತಾವನೆಗಳ ಪೂರ್ವ ಪರಿಶೀಲನೆ ನಡೆಸಲಾಯಿತು. 423 ಪ್ರಸ್ತಾವನೆಗಳು ಅಂದರೆ 50% ನಮೂದುಗಳನ್ನು ಮುಂದಿನ ಹಂತಕ್ಕೆ ಸರಿಸಲಾಗಿದೆ. 2ನೇ ಹಂತದಲ್ಲಿ ಪ್ರತಿ ಪ್ರಶಸ್ತಿ ವರ್ಗಕ್ಕೆ ಅಗ್ರ 12 ಪ್ರಸ್ತಾವನೆಗಳನ್ನು ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆಯ ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಮೂರನೇ ಹಂತದಲ್ಲಿ, ಪ್ರತಿ ಪ್ರಸ್ತಾಪದ ಪ್ರತಿಪಾದಕರು ವಿಷಯ ತಜ್ಞರ ಸಮಿತಿಗೆ ಪ್ರಸ್ತುತಿ ಮಾಡಿದ್ದಾರೆ. ಇದು ಟಾಪ್ 6 ಪ್ರಸ್ತಾಪಗಳ ಆಯ್ಕೆಗೆ ಕಾರಣವಾಯಿತು. ಅಂತಿಮವಾಗಿ, 4ನೇ ಹಂತದಲ್ಲಿ, ಟಾಪ್ 6 ಪ್ರಸ್ತಾವನೆಗಳು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶಕರ ನೇತೃತ್ವದ ವಿಷಯ ತಜ್ಞರನ್ನು ಒಳಗೊಂಡಿರುವ ತೀರ್ಪುಗಾರರಿಗೆ ವಿಸ್ತಾರವಾದ ಪ್ರಸ್ತುತಿಯನ್ನು ನೀಡಲಾಗಿದೆ. ಈ ನಾಲ್ಕನೇ ಹಂತದ ನಂತರ, ಸ್ಮಾರ್ಟ್ ಸಿಟೀಸ್ ಮಿಷನ್‌ನ ಸರ್ವೋಚ್ಚ ಸಮಿತಿಯು ಪ್ರತಿ ಪ್ರಶಸ್ತಿ ವರ್ಗಕ್ಕೆ ಟಾಪ್ 3 ಪ್ರಸ್ತಾವನೆಗಳನ್ನು ಗುರುತಿಸಿದೆ. 5 ಪ್ರಶಸ್ತಿಗಳ ವಿಭಾಗಗಳ ಅಡಿ ಸ್ವೀಕರಿಸಿದ ಒಟ್ಟು 845 ಅರ್ಜಿಗಳಲ್ಲಿ, 66 ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗಿದೆ. - 35 ಯೋಜನಾ ಪ್ರಶಸ್ತಿ, 6 ನಾವೀನ್ಯತಾ ಪ್ರಶಸ್ತಿ, 13 ರಾಷ್ಟ್ರೀಯ, ವಲಯ ನಗರ ಪ್ರಶಸ್ತಿ, 5 ರಾಜ್ಯ, ಕೇಂದ್ರಾಡಳಿತ ಪ್ರದೇಶ ಪ್ರಶಸ್ತಿ ಮತ್ತು 7 ಪಾಲುದಾರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ.ಅನುಬಂಧ ಬಿ.
****
(Release ID: 1960096)
Visitor Counter : 126
Read this release in:
Hindi
,
Nepali
,
Odia
,
English
,
Khasi
,
Urdu
,
Marathi
,
Assamese
,
Manipuri
,
Bengali
,
Punjabi
,
Gujarati
,
Telugu