ಪ್ರಧಾನ ಮಂತ್ರಿಯವರ ಕಛೇರಿ

18ನೇ ಪೂರ್ವ ಏಷ್ಯಾ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 07 SEP 2023 1:28PM by PIB Bengaluru

ಗೌರವಾನ್ವಿತ ಅಧ್ಯಕ್ಷ ವಿಡೊಡೊ,
ಇಲ್ಲಿ ನೆರೆದಿರುವ ಎಲ್ಲಾ ಗಣ್ಯರೆ,
ನಮಸ್ಕಾರ,

ಮತ್ತೊಮ್ಮೆ "ಪೂರ್ವ ಏಷ್ಯಾ ಶೃಂಗಸಭೆಯಲ್ಲಿ" ಭಾಗವಹಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಅಧ್ಯಕ್ಷ ವಿಡೊಡೊ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ನಾನು ನನ್ನ ಪ್ರಾಮಾಣಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೆಚ್ಚುವರಿಯಾಗಿ, ನಾನು ವೀಕ್ಷಕರಾಗಿ ಆಗಮಿಸಿರುವ ಟಿಮೋರ್-ಲೆಸ್ಟೆಯ ಪ್ರಧಾನ ಮಂತ್ರಿ ಕ್ಸಾನಾನಾ ಗುಸ್ಮಾವೊ ಅವರನ್ನು ಈ ಸಭೆಯಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತೇನೆ.
ಪೂರ್ವ ಏಷ್ಯಾ ಶೃಂಗಸಭೆಯು ಬಹಳ ಮುಖ್ಯವಾದ ವೇದಿಕೆಯಾಗಿದೆ. ಇಂಡೋ-ಪೆಸಿಫಿಕ್ ವಲಯದ ಕಾರ್ಯತಂತ್ರ ವಿಷಯಗಳಲ್ಲಿ ಮಾತುಕತೆ ಮತ್ತು ಸಹಕಾರಕ್ಕಾಗಿ ನಾಯಕರ ನೇತೃತ್ವದ ಏಕೈಕ ಕಾರ್ಯವಿಧಾನವಾಗಿದೆ. ಹೆಚ್ಚುವರಿಯಾಗಿ, ಇದು ಏಷ್ಯಾದಲ್ಲಿ ಪ್ರಾಥಮಿಕ ವಿಶ್ವಾಸ-ನಿರ್ಮಾಣ ಕಾರ್ಯವಿಧಾನವಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಯಶಸ್ಸಿನ ಕೀಲಿಯು ಆಸಿಯಾನ್ ರಾಷ್ಟ್ರಗಳ ಕೇಂದ್ರೀಕರಣವಾಗಿದೆ.
 
ಗೌರವಾನ್ವಿತ ಗಣ್ಯರೆ,
  
ಭಾರತವು "ಇಂಡೋ-ಪೆಸಿಫಿಕ್‌ನಲ್ಲಿ ಆಸಿಯಾನ್ ಮುನ್ನೋಟ ಅಥವಾ ಹೊರನೋಟವನ್ನು ಸಂಪೂರ್ಣ ಬೆಂಬಲಿಸುತ್ತದೆ. ಇಂಡೋ-ಪೆಸಿಫಿಕ್‌ ವಲಯಕ್ಕಾಗಿ ಭಾರತ ಮತ್ತು ಆಸಿಯಾನ್‌ನ ದೃಷ್ಟಿಕೋನದಲ್ಲಿ ಏಕತೆ ಇದೆ. ಇದು "ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ ಕಾರ್ಯಗತಗೊಳಿಸಲು ನಿರ್ಣಾಯಕ ವೇದಿಕೆಯಾಗಿ 'ಪೂರ್ವ ಏಷ್ಯಾ ಶೃಂಗಸಭೆ'ಯ ಮಹತ್ವವನ್ನು ಒತ್ತಿ ಹೇಳುತ್ತಿದೆ. ಕ್ವಾಡ್ ನ ದೃಷ್ಟಿಯಲ್ಲಿ ಅಸಿಯಾನ್ ಕೇಂದ್ರ ಸ್ಥಾನ ಪಡುಕೊಂಡಿದೆ. ಕ್ವಾಡ್ ನ ಸಕಾರಾತ್ಮಕ ಕಾರ್ಯಸೂಚಿಯು ಅಸಿಯಾನ್ ನ ವಿವಿಧ ಕಾರ್ಯವಿಧಾನಗಳಿಗೆ ಪೂರಕವಾಗಿದೆ.
 
ಗೌರವಾನ್ವಿತ ಗಣ್ಯರೆ,

ಪ್ರಸ್ತುತ ಜಾಗತಿಕ ಭೂದೃಶ್ಯವು ಸವಾಲಿನ ಸಂದರ್ಭಗಳು ಮತ್ತು ಅನಿಶ್ಚಿಯಗಳಿಂದ ಸುತ್ತುವರಿದಿದೆ. ಭಯೋತ್ಪಾದನೆ, ಉಗ್ರವಾದ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳು ನಮ್ಮೆಲ್ಲರಿಗೂ ದೊಡ್ಡ ಸವಾಲುಗಳಾಗಿವೆ. ಅವುಗಳನ್ನು ಎದುರಿಸುವಲ್ಲಿ ಬಹುಪಕ್ಷೀಯತೆ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಕ್ರಮವು ಅತ್ಯಗತ್ಯ. ಅಂತಾರಾಷ್ಟ್ರೀಯ ಕಾನೂನುಗಳಿಗೆ ಸಂಪೂರ್ಣವಾಗಿ ಬದ್ಧವಾಗಿರುವುದು ಕಡ್ಡಾಯವಾಗಿದೆ.  ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಪ್ರತಿಯೊಬ್ಬರ ಬದ್ಧತೆ ಮತ್ತು ಜಂಟಿ ಪ್ರಯತ್ನಗಳು ಸಹ ಅಗತ್ಯ. ನಾನು ಮೊದಲೇ ಹೇಳಿದಂತೆ, ಇಂದಿನ ಯುಗ ಯುದ್ಧವಲ್ಲ. ಸಂವಾದ ಮತ್ತು ರಾಜತಾಂತ್ರಿಕತೆಯು ನಿರ್ಣಯಕ್ಕೆ ಏಕೈಕ ಮಾರ್ಗವಾಗಿದೆ.
 
ಗೌರವಾನ್ವಿತ ಗಣ್ಯರೆ,

ಮ್ಯಾನ್ಮಾರ್‌ನಲ್ಲಿ ಭಾರತದ ನೀತಿಯು ಅಸಿಯಾನ್ ನ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ಅದೇ ಸಮಯದಲ್ಲಿ, ನೆರೆಯ ರಾಷ್ಟ್ರವಾಗಿ, ಗಡಿಗಳಲ್ಲಿ ಶಾಂತಿ ಮತ್ತು ಭದ್ರತೆ ಖಾತ್ರಿಪಡಿಸುವುದು, ಭಾರತ-ಆಸಿಯಾನ್ ಸಂಪರ್ಕ ಹೆಚ್ಚಿಸುವುದು ನಮ್ಮ ಗಮನವಾಗಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿ ತರುವುದು ನಮ್ಮೆಲ್ಲರ ಹಿತಾಸಕ್ತಿಯಾಗಿದೆ.
ಸಮಯದ ಅಗತ್ಯವು ಇಂಡೋ-ಪೆಸಿಫಿಕ್ ನಲ್ಲಿ ಸಾಗರ ಕಾನೂನಿನ ವಿಶ್ವಸಂಸ್ಥೆ ಒಡಂಬಡಿಕೆ (United Nations Convention on the Law of the Sea-UNCLOS) ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಗಳು ಎಲ್ಲಾ ದೇಶಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಅಲ್ಲಿ ನ್ಯಾವಿಗೇಷನ್ ಮತ್ತು ಓವರ್‌ಫ್ಲೈಟ್ ಸ್ವಾತಂತ್ರ್ಯವಿದೆ.  ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ಒಪ್ಪಂದವಿದೆ. ದಕ್ಷಿಣ ಚೀನಾದ ಸಾಗರ ನೀತಿ ಸಂಹಿತೆ ಪರಿಣಾಮಕಾರಿಯಾಗಿರಬೇಕು. ಅದು UNCLOS ಗೆ ಅನುಗುಣವಾಗಿರಬೇಕು ಎಂಬುದನ್ನು ಭಾರತ ನಂಬುತ್ತದೆ. ಹೆಚ್ಚುವರಿಯಾಗಿ, ಚರ್ಚೆಗಳಲ್ಲಿ ನೇರವಾಗಿ ಭಾಗಿಯಾಗದ ದೇಶಗಳ ಹಿತಾಸಕ್ತಿಗಳನ್ನು ಇದು ಪರಿಗಣನೆಗೆ ತೆಗೆದುಕೊಳ್ಳಬೇಕು.
  
ಗೌರವಾನ್ವಿತ ಗಣ್ಯರೆ,

ಹವಾಮಾನ ಬದಲಾವಣೆ, ಸೈಬರ್ ಭದ್ರತೆ, ಆಹಾರ ಭದ್ರತೆ, ಆರೋಗ್ಯ ಮತ್ತು ಇಂಧನಕ್ಕೆ ಸಂಬಂಧಿಸಿದ ಸವಾಲುಗಳು ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗದ ಮೇಲೆ ಪ್ರಭಾವ ಬೀರುತ್ತಿವೆ. ನಮ್ಮ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ನಾವು ಜಾಗತಿಕ ದಕ್ಷಿಣಕ್ಕೆ ಸಂಬಂಧಿಸಿದ ಈ ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ.
 
 
ಗೌರವಾನ್ವಿತ ಗಣ್ಯರೆ,

ಪೂರ್ವ ಏಷ್ಯಾ ಶೃಂಗಸಭೆಯ ಪ್ರಕ್ರಿಯೆಗೆ ಭಾರತ ಹೊಂದಿರುವ ಬದ್ಧತೆಯನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ. ಮುಂದಿನ ಅಧ್ಯಕ್ಷತೆ ವಹಿಸಲಿರುವ ಲಾವ್ ಪಿಡಿಆರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಅಧ್ಯಕ್ಷತೆಗೆ ಭಾರತದ ಸಂಪೂರ್ಣ ಬೆಂಬಲ ಇರುತ್ತದೆ ಎಂಬ ಭರವಸೆಯನ್ನು ನಾನು ಈ ಸಂದರ್ಭದಲ್ಲಿ ನೀಡುತ್ತೇನೆ.
 
ತುಂಬು ಧನ್ಯವಾದಗಳು
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

****



(Release ID: 1955404) Visitor Counter : 109