ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜುಲೈ 27 ಮತ್ತು 28ರಂದು ರಾಜಸ್ಥಾನ ಮತ್ತು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಿ


ರೈತರಿಗೆ ಅನುಕೂಲವಾಗುವ ಮಹತ್ವದ ಕ್ರಮದಲ್ಲಿ, 1.25 ಲಕ್ಷ ʻಪಿಎಂ ಕಿಸಾನ್ ಸಮೃದ್ಧಿ ಕೇಂದ್ರʼಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿಗಳು

ಗಂಧಕ ಲೇಪಿತ ಯೂರಿಯಾ- ʻಯೂರಿಯಾ ಗೋಲ್ಡ್ʼಗೆ  ಪ್ರಧಾನಮಂತ್ರಿ ಚಾಲನೆ; ಇದು ಬೇವು ಲೇಪಿತ ಯೂರಿಯಾಕ್ಕಿಂತ ಹೆಚ್ಚು ಆರ್ಥಿಕ ಮತ್ತು ಪರಿಣಾಮಕಾರಿ

ಸಿಕಾರ್‌ನಲ್ಲಿ ʻಪಿಎಂ-ಕಿಸಾನ್ʼ ಯೋಜನೆಯಡಿ ಸುಮಾರು 17,000 ಕೋಟಿ ರೂ.ಗಳ 14 ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಿರುವ ಪ್ರಧಾನಿ

ʻಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ಜಾಲʼಕ್ಕೆ(ಒಎನ್ ಡಿಸಿ) 1500 ʻರೈತ ಉತ್ಪನ್ನ ಸಂಸ್ಥೆʼಗಳ ಸೇರ್ಪಡೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿಗಳು

ಪ್ರಧಾನಮಂತ್ರಿಯವರು ಐದು ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಏಳು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ರಾಜ್ ಕೋಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿಗಳು; ರಾಜ್ ಕೋಟ್‌ನಲ್ಲಿ 860 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನೂ ಅವರು ಉದ್ಘಾಟಿಸಲಿದ್ದಾರೆ

ಗಾಂಧಿನಗರದಲ್ಲಿ ʻಸೆಮಿಕಾನ್ ಇಂಡಿಯಾ-2023ʼಗೆ ಚಾಲನೆ ನೀಡಲಿರುವ ಪ್ರಧಾನಿ

Posted On: 25 JUL 2023 1:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 27 ಮತ್ತು 28ರಂದು ರಾಜಸ್ಥಾನ ಮತ್ತು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.

ಜುಲೈ 27ರಂದು ಬೆಳಿಗ್ಗೆ 11:15ಕ್ಕೆ ಪ್ರಧಾನಮಂತ್ರಿಯವರು ರಾಜಸ್ಥಾನದ ಸಿಕಾರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ನಂತರ ಅವರು ಗುಜರಾತ್‌ನ ರಾಜ್‌ಕೋಟ್ ತಲುಪಲಿದ್ದು, ಮಧ್ಯಾಹ್ನ 3:15ರ ಸುಮಾರಿಗೆ ನಡಿಗೆ ಮೂಲಕ ರಾಜ್‌ಕೋಟ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಸಂಜೆ 4.15ಕ್ಕೆ ರಾಜ್‌ಕೋಟ್‌ನ ರೇಸ್ ಕೋರ್ಸ್ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜುಲೈ 28 ರಂದು ಬೆಳಿಗ್ಗೆ 10:30ಕ್ಕೆ ಪ್ರಧಾನಮಂತ್ರಿಯವರು ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ʻಸೆಮಿಕಾನ್ ಇಂಡಿಯಾ-2023ʼ ಸಭೆಯನ್ನು ಉದ್ಘಾಟಿಸಲಿದ್ದಾರೆ.

ಸಿಕಾರ್‌ದನಲ್ಲಿ ಪ್ರಧಾನಿ

ರೈತರಿಗೆ ಪ್ರಯೋಜನವಾಗುವ ಮಹತ್ವದ ಕ್ರಮದಲ್ಲಿ, ಪ್ರಧಾನಮಂತ್ರಿಯವರು 1.25 ಲಕ್ಷ ʻಪಿಎಂ ಕಿಸಾನ್ ಸಮೃದ್ಧಿ ಕೇಂದ್ರʼಗಳನ್ನು(ಪಿಎಂಕೆಎಸ್‌ಕೆ) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಎಲ್ಲಾ ರೈತರ ಅಗತ್ಯಗಳಿಗೆ ಒಂದೇ ಸ್ಥಳದಲ್ಲಿ ಪರಿಹಾರವನ್ನು ಒದಗಿಸಲು ʻಪಿಎಂಕೆಎಸ್‌ಕೆʼಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೃಷಿಗೆ ಬಳಸುವ ಉತ್ಪನ್ನಗಳ (ರಸಗೊಬ್ಬರಗಳು, ಬೀಜಗಳು, ಉಪಕರಣಗಳು) ಮಾಹಿತಿಯಿಂದ ಹಿಡಿದು ಮಣ್ಣು, ಬೀಜಗಳು ಮತ್ತು ರಸಗೊಬ್ಬರಗಳ ಪರೀಕ್ಷಾ ಸೌಲಭ್ಯಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯವರೆಗೆ, ದೇಶದ ರೈತರಿಗೆ ವಿಶ್ವಾಸಾರ್ಹ ಬೆಂಬಲ ವ್ಯವಸ್ಥೆಯನ್ನಾಗಿ ಮಾಡಲು ʻಪಿಎಂಕೆಎಸ್‌ಕೆʼಗಳನ್ನು ಯೋಜಿಸಲಾಗಿದೆ. ಬ್ಲಾಕ್ / ಜಿಲ್ಲಾ ಮಟ್ಟದ ಮಳಿಗೆಗಳಲ್ಲಿ ರಸಗೊಬ್ಬರ ಚಿಲ್ಲರೆ ವ್ಯಾಪಾರಿಗಳ ನಿಯಮಿತ ಸಾಮರ್ಥ್ಯ ವರ್ಧನೆಯನ್ನು ಈ ಕೇಂದ್ರಗಳು ಖಚಿತಪಡಿಸಲಿವೆ.

ಪ್ರಧಾನಮಂತ್ರಿಯವರು ʻಯೂರಿಯಾ ಗೋಲ್ಡ್ʼ ಎಂಬ ಗಂಧಕ ಲೇಪಿತ ಹೊಸ ಬಗೆಯ ಯೂರಿಯಾವನ್ನು ಬಿಡುಗಡೆ ಮಾಡಲಿದ್ದಾರೆ. ಗಂಧಕ ಲೇಪಿತ ಯೂರಿಯಾವು ಮಣ್ಣಿನಲ್ಲಿ ಗಂಧಕದ ಕೊರತೆಯನ್ನು ನೀಗಿಸುತ್ತದೆ. ಈ ನವೀನ ರಸಗೊಬ್ಬರವು ಬೇವು ಲೇಪಿತ ಯೂರಿಯಾಕ್ಕಿಂತ ಹೆಚ್ಚು ಅಗ್ಗ ಮತ್ತು ಪರಿಣಾಮಕಾರಿ. ಇದು ಸಸ್ಯಗಳಲ್ಲಿ ಸಾರಜನಕ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ, ರಸಗೊಬ್ಬರದ ಬಳಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಬೆಳೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ʻಡಿಜಿಟಲ್ ವ್ಯಾಪಾರಕ್ಕಾಗಿ ಮುಕ್ತ ಜಾಲʼಕ್ಕೆ (ಒಎನ್ ಡಿಸಿ) 1500 ʻರೈತ ಉತ್ಪನ್ನ ಸಂಸ್ಥೆʼಗಳನ್ನು(ಎಫ್ ಪಿಒ) ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ʻಒಎನ್‌ಡಿಸಿʼಯು ʻರೈತ ಉತ್ಪನ್ನ ಸಂಸ್ಥೆʼಗಳಿಗೆ ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ಪಾವತಿ, ಬಿಸಿನೆಸ್-ಟು-ಬಿಸಿನೆಸ್ (ಬಿ2ಬಿ) ಮತ್ತು ʻಬಿಸಿನೆಸ್-ಟು-ಕಸ್ಟಮರ್‌ʼ(ಬಿ2ಸಿ) ವಹಿವಾಟುಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ. ಜೊತೆಗೆ, ಸ್ಥಳೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಸರಕು-ಸಾಗಣೆ ವ್ಯವಸ್ಥೆ ಬೆಳವಣಿಗೆಗೆ ವೇಗ ನೀಡುತ್ತದೆ.

ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರ ಬದ್ಧತೆಗೆ ಮತ್ತೊಂದು ಉದಾಹರಣೆಯನ್ನು ಪ್ರದರ್ಶಿಸುವ ಕ್ರಮವಾಗಿ, ʻಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ(ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 17,000 ಕೋಟಿ ರೂ.ಗಳ 14 ನೇ ಕಂತಿನ ಮೊತ್ತವನ್ನು 8.5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ ಮೂಲಕ ಬಿಡುಗಡೆ ಮಾಡಲಾಗುವುದು.

ಚಿತ್ತೋರ್‌ಗಢ, ಧೋಲ್‌ಪುರ್, ಸಿರೋಹಿ, ಸಿಕಾರ್ ಮತ್ತು ಶ್ರೀ ಗಂಗಾನಗರದಲ್ಲಿ ಐದು ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಬರಾನ್, ಬುಂಡಿ, ಕರೌಲಿ, ಜುಂಜುನು, ಸವಾಯಿ ಮಾಧೋಪುರ್, ಜೈಸಲ್ಮೇರ್ ಮತ್ತು ಟೋಂಕ್‌ನಲ್ಲಿ ಏಳು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

"ಅಸ್ತಿತ್ವದಲ್ಲಿರುವ ಜಿಲ್ಲಾ / ರೆಫರಲ್ ಆಸ್ಪತ್ರೆಗಳಿಗೆ ಜೋಡಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ" ಅಡಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನಿ ಉದ್ಘಾಟಿಸಲಿರುವ ಐದು ವೈದ್ಯಕೀಯ ಕಾಲೇಜುಗಳನ್ನು 1,400 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಶಂಕುಸ್ಥಾಪನೆ ನೆರವೇರಿಸಲಿರುವ ಏಳು ವೈದ್ಯಕೀಯ ಕಾಲೇಜುಗಳನ್ನು 2,275 ಕೋಟಿ ರೂ.ಗಳ ಸಂಚಿತ ವೆಚ್ಚದಲ್ಲಿ ನಿರ್ಮಿಸಲಾಗುವುದು.

 2014ರವರೆಗೆ ರಾಜಸ್ಥಾನ ರಾಜ್ಯದಲ್ಲಿ ಕೇವಲ 10 ವೈದ್ಯಕೀಯ ಕಾಲೇಜುಗಳಿದ್ದವು. ಕೇಂದ್ರ ಸರ್ಕಾರದ ವಿಶೇಷ ಪ್ರಯತ್ನಗಳ ಮೂಲಕ, ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 35ಕ್ಕೆ ಏರಿದೆ, ಇದು 250% ಹೆಚ್ಚಳವೆನಿಸಿದೆ. ಈ 12 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಿಂದ 2013-14ರಲ್ಲಿ 1750 ಇದ್ದ ಎಂಬಿಬಿಎಸ್ ಸೀಟುಗಳ ಸಂಖ್ಯೆ 2013-14ರಲ್ಲಿ 6275ಕ್ಕೆ ಏರಿಕೆಯಾಗಲಿದೆ.

ಇದಲ್ಲದೆ, ಪ್ರಧಾನಮಂತ್ರಿಯವರು ಉದಯಪುರ, ಬನ್ಸ್‌ವಾರಾ, ಪ್ರತಾಪಗಢ ಮತ್ತು ಡುಂಗರಪುರ ಜಿಲ್ಲೆಗಳಲ್ಲಿ ಆರು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ. ಇವುಗಳಿಂದ ಈ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಅವರು ಜೋಧಪುರದ `ಕೇಂದ್ರೀಯ ವಿದ್ಯಾಲಯ ತಿವ್ರಿ’ಯನ್ನು ಉದ್ಘಾಟಿಸಲಿದ್ದಾರೆ.

ರಾಜ್‌ಕೋಟ್ ನಲ್ಲಿ ಪ್ರಧಾನಿ

ರಾಜ್‌ಕೋಟ್‌ನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯೊಂದಿಗೆ, ದೇಶಾದ್ಯಂತ ವಾಯು ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಉತ್ತೇಜನ ಸಿಗಲಿದೆ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಒಟ್ಟು 2500 ಎಕರೆ ಪ್ರದೇಶದಲ್ಲಿ 1400 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸ ವಿಮಾನ ನಿಲ್ದಾಣವು ಆಧುನಿಕ ತಂತ್ರಜ್ಞಾನ ಮತ್ತು ಸುಸ್ಥಿರ ವೈಶಿಷ್ಟ್ಯಗಳ ಸಂಯೋಜನೆಯನ್ನು ಹೊಂದಿದೆ. ಟರ್ಮಿನಲ್ ಕಟ್ಟಡವು ʻಜಿಆರ್‌ಐಎಚ್‌ಎʼ-4 (ಇಂಟಿಗ್ರೇಟೆಡ್ ಹ್ಯಾಬಿಟೇಟ್ ಅಸೆಸ್ಮೆಂಟ್ಗಾಗಿ ಗ್ರೀನ್ ರೇಟಿಂಗ್) ಅನುಸರಣೆ ಹೊಂದಿದೆ. ಹೊಸ ಟರ್ಮಿನಲ್ ಕಟ್ಟಡ (ಎನ್ಐಟಿಬಿ) ಡಬಲ್ ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಸ್ಕೈಲೈಟ್‌ಗಳು, ಎಲ್ಇಡಿ ಲೈಟಿಂಗ್, ಲೋ ಹೀಟ್ ಗೇನ್ ಗ್ಲೇಸಿಂಗ್ ಮುಂತಾದ ವಿವಿಧ ಸುಸ್ಥಿರ ವೈಶಿಷ್ಟ್ಯಗಳನ್ನು ಹೊಂದಿದೆ.

ರಾಜ್‌ಕೋಟ್‌ನ ಸಾಂಸ್ಕೃತಿಕ ಚೈತನ್ಯವು ವಿಮಾನ ನಿಲ್ದಾಣದ ಟರ್ಮನಲ್‌ನ ವಿನ್ಯಾಸಕ್ಕೆ ಸ್ಫೂರ್ತಿ ನೀಡಿದೆ. ವಿಮಾನ ನಿಲ್ದಾಣದ ಕ್ರಿಯಾತ್ಮಕ ಬಾಹ್ಯ ಮುಂಭಾಗ ಮತ್ತು ಭವ್ಯ ಒಳಾಂಗಣದಲ್ಲಿ ಲಿಪ್ಪಾನ್ ಕಲೆಯಿಂದ ದಾಂಡಿಯಾ ನೃತ್ಯದವರೆಗೆ ಕಲಾ ಪ್ರಕಾರಗಳನ್ನು ಚಿತ್ರಿಸಲಾಗಿದೆ. ಈ ವಿಮಾನ ನಿಲ್ದಾಣವು ಸ್ಥಳೀಯ ವಾಸ್ತುಶಿಲ್ಪದ ಪರಂಪರೆಯ ಸಾರವನ್ನು ಒಳಗೊಂಡಿದೆ. ಗುಜರಾತ್‌ನ ಕಾಥೇವಾಡ ಪ್ರದೇಶದ ಕಲೆ ಮತ್ತು ನೃತ್ಯ ಪ್ರಕಾರಗಳ ಸಾಂಸ್ಕೃತಿಕ ವೈಭವವನ್ನೂ ಪ್ರತಿಬಿಂಬಿಸುತ್ತದೆ. ರಾಜ್‌ಕೋಟ್‌ನ ಹೊಸ ವಿಮಾನ ನಿಲ್ದಾಣವು ನಗರದ ಸ್ಥಳೀಯ ಆಟೋಮೊಬೈಲ್ ಉದ್ಯಮದ ಅಭಿವೃದ್ಧಿಗೆ ಕೊಡುಗೆ ನೀಡುವುದಲ್ಲದೆ, ಗುಜರಾತ್‌ನಾದ್ಯಂತ ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಉತ್ತೇಜಿಸುತ್ತದೆ.

ಇದೇ ವೇಳೆ, ಪ್ರಧಾನಮಂತ್ರಿಯವರು 860 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ʻಸೌನಿ ಯೋಜನೆ ಲಿಂಕ್-3 ಪ್ಯಾಕೇಜ್ 8 ಮತ್ತು 9ʼ ಯೋಜನೆಯು ನೀರಾವರಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ಸೌರಾಷ್ಟ್ರ ಪ್ರದೇಶಕ್ಕೆ ಕುಡಿಯುವ ನೀರಿನ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ದ್ವಾರಕಾ ʻಆರ್‌ಡಬ್ಲ್ಯೂಎಸ್‌ಎಸ್ʼ ಅನ್ನು ಮೇಲ್ದರ್ಜೆಗೇರಿಸುವುದರಿಂದ ಪೈಪ್ ಲೈನ್ ಮೂಲಕ ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಸಹಾಯಕವಾಗುತ್ತದೆ. ಉಪಾರ್‌ಕೋಟ್‌ ಕೋಟೆಯ ಸಂರಕ್ಷಣೆ, ಪುನಃಸ್ಥಾಪನೆ ಮತ್ತು ಅಭಿವೃದ್ಧಿ - ಹಂತ 1 ಮತ್ತು 2; ನೀರು ಸಂಸ್ಕರಣಾ ಘಟಕ ನಿರ್ಮಾಣ; ಒಳಚರಂಡಿ ಸಂಸ್ಕರಣಾ ಘಟಕ; ಮೇಲ್ಸೇತುವೆ ಸೇರಿದಂತೆ ಇತರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಗಾಂಧಿನಗರದಲ್ಲಿ ಪ್ರಧಾನಿ

ಪ್ರಧಾನಮಂತ್ರಿಯವರು ಜುಲೈ 28ರಂದು ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ʻಸೆಮಿಕಾನ್ ಇಂಡಿಯಾ-2023ʼ ಸಭೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಮ್ಮೇಳನದ ವಿಷಯ 'ಭಾರತದ ಅರೆವಾಹಕ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವುದು'. ಇದು ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಜಾಗತಿಕ ನಾಯಕರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಇದು ಭಾರತದ ಅರೆವಾಹಕ ಕಾರ್ಯತಂತ್ರ ಮತ್ತು ನೀತಿಯನ್ನು ಪ್ರದರ್ಶಿಸುತ್ತದೆ. ಭಾರತವನ್ನು ಅರೆವಾಹಕ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಇದು ಹೊಂದಿದೆ. ʻಸೆಮಿಕಾನ್ ಇಂಡಿಯಾ-2023ʼ ಸಭೆಯಲ್ಲಿ ಮೈಕ್ರಾನ್ ಟೆಕ್ನಾಲಜಿ, ಅಪ್ಲೈಡ್ ಮೆಟೀರಿಯಲ್ಸ್, ಫಾಕ್ಸ್‌ಕಾನ್, ಸೆಮಿ, ಕ್ಯಾಡೆನ್ಸ್, ಎಎಂಡಿ ಮುಂತಾದ ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

****



(Release ID: 1942415) Visitor Counter : 122