ಪ್ರಧಾನ ಮಂತ್ರಿಯವರ ಕಛೇರಿ

ಸಂಸತ್ತಿನ ಮುಂಗಾರು ಅಧಿವೇಶನ, 2023 ಕ್ಕೆ ಮುಂಚಿತವಾಗಿ ಪ್ರಧಾನ ಮಂತ್ರಿಯವರು ನೀಡಿದ  ಹೇಳಿಕೆಯ ಇಂಗ್ಲಿಷ್ ಅವತರಣಿಕೆ

Posted On: 20 JUL 2023 11:55AM by PIB Bengaluru

ನಮಸ್ಕಾರ ಸ್ನೇಹಿತರೇ!

ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇವೆ. ಪವಿತ್ರ ಸಾವನ್ (ಶ್ರಾವಣ) ತಿಂಗಳು ನಡೆಯುತ್ತಿದೆ, ಮತ್ತು ಈ ಬಾರಿ ಸಾವನ್ ಎರಡು ತಿಂಗಳ ಕಾಲ ಇರುತ್ತದೆ, ಆ ಮೂಲಕ ಅದರ ಅವಧಿಯನ್ನು ಸ್ವಲ್ಪ ಹೆಚ್ಚು ಮಾಡುತ್ತದೆ. ಪವಿತ್ರ ನಿರ್ಣಯಗಳು ಮತ್ತು ಕಾರ್ಯಗಳಿಗೆ ಸಾವನ್ ತಿಂಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇಂದು, ಈ ಪವಿತ್ರ ಸಾವನ್ ತಿಂಗಳಲ್ಲಿ ನಾವು ಪ್ರಜಾಪ್ರಭುತ್ವದ ದೇವಾಲಯದಲ್ಲಿ ಒಟ್ಟುಗೂಡುತ್ತಿರುವಾಗ, ಪ್ರಜಾಪ್ರಭುತ್ವದ ದೇವಾಲಯಕ್ಕೆ ಹಲವಾರು ಪವಿತ್ರ ಕಾರ್ಯಗಳನ್ನು ಕೈಗೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಇರಲು ಸಾಧ್ಯವಿಲ್ಲ. ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರು ಒಗ್ಗೂಡಿ ಜನರ ಕಲ್ಯಾಣಕ್ಕಾಗಿ ಈ ಅಧಿವೇಶನವನ್ನು ಅತ್ಯಂತ ಉಪಯುಕ್ತವಾಗಿ ಬಳಸಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ.

ವಿವಿಧ ಕಾನೂನುಗಳನ್ನು ಜಾರಿಗೆ ತರುವಲ್ಲಿ ಸಂಸತ್ತು ಮತ್ತು ಪ್ರತಿಯೊಬ್ಬ ಸಂಸತ್ ಸದಸ್ಯರ ಜವಾಬ್ದಾರಿಗಳನ್ನು ವಿವರವಾಗಿ ಚರ್ಚಿಸುವುದು ಅತ್ಯಗತ್ಯ. ಚರ್ಚೆಗಳು ಹೆಚ್ಚು ವ್ಯಾಪಕ ಮತ್ತು ವಿಮರ್ಶಾತ್ಮಕವಾಗಿದ್ದರೆ, ಜನರ ಕಲ್ಯಾಣಕ್ಕಾಗಿ ಹೆಚ್ಚು ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಸದನಕ್ಕೆ ಬರುವ ಗೌರವಾನ್ವಿತ ಸಂಸದರು ಸ್ಥಳೀಯವಾಗಿ ಹೆಚ್ಚು ತಿಳಿದಿರುತ್ತಾರೆ. ತಳಮಟ್ಟದಲ್ಲಿಯ  ಜನರ ದುಃಖ ಮತ್ತು ನೋವುಗಳನ್ನು ಅರ್ಥಮಾಡಿಕೊಂಡಿರುತ್ತಾರೆ. ಅವರು ಚರ್ಚೆಗೆ ಕೊಡುಗೆ ನೀಡಿದಾಗ, ಅವರ ಆಲೋಚನೆಗಳು ರಾಷ್ಟ್ರದ ಕಲ್ಯಾಣದಲ್ಲಿ ಬೇರೂರುತ್ತವೆ, ಚರ್ಚೆಗಳನ್ನು ಶ್ರೀಮಂತಗೊಳಿಸುತ್ತವೆ ಮತ್ತು ನಿರ್ಧಾರಗಳನ್ನು ಶಕ್ತಿಯುತಗೊಳಿಸುತ್ತವೆ ಹಾಗು ಫಲಿತಾಂಶ ಆಧಾರಿತವಾಗಿಸುತ್ತವೆ. ಆದ್ದರಿಂದ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಗೌರವಾನ್ವಿತ ಸಂಸದರು ಈ ಅಧಿವೇಶನವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಮತ್ತು ಸಾರ್ವಜನಿಕರ ಒಳಿತಿಗಾಗಿ ಕೈಗೊಂಡಿರುವ ಕೆಲಸಗಳನ್ನು ಮುಂದುವರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಈ ಅಧಿವೇಶನದಲ್ಲಿ ಮಂಡಿಸಲಾಗುತ್ತಿರುವ ವಿಧೇಯಕಗಳು ನೇರವಾಗಿ ಜನರ ಕಲ್ಯಾಣಕ್ಕೆ ಸಂಬಂಧಿಸಿರುವುದರಿಂದ ಈ ಅಧಿವೇಶನವು ವಿವಿಧ ರೀತಿಯಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಡಿಜಿಟಲ್ ಜಗತ್ತಿನ  ಮುಂಚೂಣಿಯಲ್ಲಿರುವ  ನಮ್ಮ ಯುವ ಪೀಳಿಗೆಗೆ, ದತ್ತಾಂಶ (ಡೇಟಾ) ಸಂರಕ್ಷಣಾ ವಿಧೇಯಕ, ವಿಶೇಷವಾಗಿ ಈ ಡಿಜಿಟಲ್ ಯುಗದಲ್ಲಿ ಬಹಳ ಮಹತ್ವದ್ದಾಗಿದೆ, ಏಕೆಂದರೆ ಇದು ಪ್ರತಿಯೊಬ್ಬ ನಾಗರಿಕರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಖ್ಯಾತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಂತೆಯೇ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ಹೊಸ ಶಿಕ್ಷಣ ನೀತಿಯ ಸಂದರ್ಭದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ, ಇದು ಸಂಶೋಧನೆ, ನಾವೀನ್ಯತೆಯನ್ನು ಸಬಲೀಕರಣಗೊಳಿಸುತ್ತದೆ ಮತ್ತು ಹೊಸ ಉಪಕ್ರಮಗಳು ಹಾಗು ಸಾಮರ್ಥ್ಯಗಳ ಮೂಲಕ ಜಗತ್ತನ್ನು ಮುನ್ನಡೆಸಲು ನಮ್ಮ ಯುವಕರಿಗೆ ಅವಕಾಶಗಳನ್ನು ಒದಗಿಸುತ್ತದೆ.

ಜನ ವಿಶ್ವಾಸ್ ವಿಧೇಯಕವು  ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ವಿವಿಧ ಕಾನೂನುಗಳನ್ನು ಅಪರಾಧಮುಕ್ತಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಅಂತೆಯೇ, ಹಳೆಯ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ವಿವಾದಗಳನ್ನು ಪರಿಹರಿಸಲು ಮಾತುಕತೆ ಮತ್ತು ಮಧ್ಯಸ್ಥಿಕೆಯನ್ನು ಉತ್ತೇಜಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ, ಇದು ನಮ್ಮ ದೇಶದಲ್ಲಿ ಶತಮಾನಗಳಿಂದ ಚಾಲ್ತಿಯಲ್ಲಿರುವ ಸಂಪ್ರದಾಯವಾಗಿದೆ. ಈ ಅಧಿವೇಶನದಲ್ಲಿ ಮಧ್ಯಸ್ಥಿಕೆ ವಿಧೇಯಕವನ್ನು ತರುವುದು ಮಧ್ಯಸ್ಥಿಕೆಯ ದೀರ್ಘಕಾಲದ ಸಂಪ್ರದಾಯಕ್ಕೆ ಬಲವಾದ ಕಾನೂನು ಆಧಾರವನ್ನು ಒದಗಿಸುತ್ತದೆ, ಇದು ಸಾಮಾನ್ಯ ವಿವಾದಗಳನ್ನು ಮಾತ್ರವಲ್ಲದೆ ಸಂಕೀರ್ಣ ಮತ್ತು ಅಸಾಮಾನ್ಯ ಸಂದರ್ಭಗಳನ್ನು ಪರಸ್ಪರ ಚರ್ಚೆಗಳ ಮೂಲಕ ಪರಿಹರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಡೆಂಟಲ್ ಮಿಷನ್ ವಿಧೇಯಕವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ದಂತವೈದ್ಯ ಕಾಲೇಜುಗಳಿಗೆ ಹೊಸ ವ್ಯವಸ್ಥೆಯನ್ನು ಸ್ಥಾಪಿಸುವ ನಿರೀಕ್ಷೆಯಿದೆ.

ಈ ಅಧಿವೇಶನದಲ್ಲಿ ಹಲವಾರು ನಿರ್ಣಾಯಕ ವಿಧೇಯಕಗಳು ಸಂಸತ್ತಿಗೆ ಬರಲಿವೆ, ಮತ್ತು ಅವು ಸಾರ್ವಜನಿಕರ, ಯುವಕರ ಮತ್ತು ಭಾರತದ ಉಜ್ವಲ ಭವಿಷ್ಯದ ಹಿತದೃಷ್ಟಿಯನ್ನು ಹೊಂದಿವೆ.. ಈ ಅಧಿವೇಶನದಲ್ಲಿ ಈ ವಿಧೇಯಕಗಳ ಬಗ್ಗೆ ಗಂಭೀರ ಚರ್ಚೆಗಳ ಮೂಲಕ ನಾವು ರಾಷ್ಟ್ರದ ಕಲ್ಯಾಣಕ್ಕಾಗಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೇ,

ಇಂದು, ನಾನು ಪ್ರಜಾಪ್ರಭುತ್ವದ ದೇವಾಲಯದಲ್ಲಿ ನಿಮ್ಮ ನಡುವೆ ನಿಂತಿರುವಾಗ, ಮಣಿಪುರದಲ್ಲಿ ನಡೆದ ಘಟನೆಯ ಬಗ್ಗೆ ನನ್ನ ಹೃದಯವು ದುಃಖ ಮತ್ತು ಕೋಪದಿಂದ ತುಂಬಿದೆ. ಈ ಘಟನೆಯು ಯಾವುದೇ ಸುಸಂಸ್ಕೃತ, ನಾಗರಿಕ ಸಮಾಜಕ್ಕೆ ನಾಚಿಕೆಯ ಸಂಗತಿಯಾಗಿದೆ. ಈ ಪಾಪದ ಕೃತ್ಯ ಎಸಗಿದವರು, ತಪ್ಪಿತಸ್ಥರು, ಅವರು ಯಾರೇ ಆಗಿರಲಿ, ಇಡೀ ರಾಷ್ಟ್ರವು ನಾಚಿಕೆಪಡುತ್ತಿದೆ. 140 ಕೋಟಿ ನಾಗರಿಕರು ಮುಜುಗರ ಅನುಭವಿಸುತ್ತಿದ್ದಾರೆ. ತಮ್ಮ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು, ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ರಾಜಸ್ಥಾನ, ಛತ್ತೀಸ್ ಗಢ ಅಥವಾ ಮಣಿಪುರದಲ್ಲಿ, ಭಾರತದ ಯಾವುದೇ ಮೂಲೆಯಲ್ಲಿ, ಯಾವುದೇ ರಾಜ್ಯ ಸರ್ಕಾರದಲ್ಲಿ ಈ ಘಟನೆ ನಡೆದರೂ, ರಾಜಕೀಯ ವಿವಾದಗಳನ್ನು ಮೀರಿ, ಕಾನೂನಿನ ನಿಯಮ ಮತ್ತು ಮಹಿಳೆಯರಿಗೆ ಗೌರವದ ಮಹತ್ವವನ್ನು ಕಾಪಾಡಿಕೊಳ್ಳುವುದು ನಿರ್ಣಾಯಕವಾಗಿದೆ. ತಪ್ಪು ಮಾಡಿದ ಯಾರನ್ನೇ ಆದರೂ ಬಿಡುವುದಿಲ್ಲ ಎಂದು ನಾನು ಈ ದೇಶದ ನಾಗರಿಕರಿಗೆ ಭರವಸೆ ನೀಡಲು ಬಯಸುತ್ತೇನೆ. ಕಾನೂನನ್ನು ಅದರ ಎಲ್ಲಾ ಶಕ್ತಿಯೊಂದಿಗೆ ಅನುಷ್ಠಾನಕ್ಕೆ ತರಲು ಪ್ರತಿಯೊಂದು ಹೆಜ್ಜೆಯನ್ನು ತೆಗೆದುಕೊಳ್ಳಲಾಗುವುದು. ಮಣಿಪುರದ ಹೆಣ್ಣುಮಕ್ಕಳಿಗೆ ಏನಾಗಿದೆ  ಎಂಬುದನ್ನು ಎಂದಿಗೂ ಕ್ಷಮಿಸಲಾಗದು

ತುಂಬಾ ಧನ್ಯವಾದಗಳು, ಸ್ನೇಹಿತರೇ.

ಘೋಷಣೆ: ಇದು ಪ್ರಧಾನ ಮಂತ್ರಿಯವರ ಹೇಳಿಕೆಯ ಸರಿಸುಮಾರಾದ ಭಾಷಾಂತರ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

***



(Release ID: 1941545) Visitor Counter : 91