ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ದಕ್ಷಿಣ ಏಷ್ಯಾ ಪ್ರಾದೇಶಿಕ ಮಾದಕವಸ್ತು ನಿಷೇಧ(ಪ್ರತಿಬಂಧಕ) ಸಂಘಟನೆ(ಸರಾಡೊ) ಜತೆ ದೆಹಲಿಯಲ್ಲಿಂದು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ ಭಾರತದ ರಾಷ್ಟ್ರೀಯ ಮಾದಕವಸ್ತು ಪ್ರತಿಬಂಧಕ ಸಂಸ್ಥೆ(ನಾಡಾ-ಇಂಡಿಯಾ)


ತಿಳಿವಳಿಕೆ ಪತ್ರ(ಒಡಂಬಡಿಕೆ)ವು ಕ್ರೀಡೆಯಲ್ಲಿ ಉದ್ದೀಪನ ನಿಷೇಧದಲ್ಲಿ ಪ್ರಾದೇಶಿಕ ಸಹಕಾರ ಹೆಚ್ಚಿಸುವ ಗುರಿ ಹೊಂದಿದೆ
 
ಕ್ರೀಡಾ ಕ್ಷೇತ್ರದಲ್ಲಿ ಉದ್ದೀಪನ ಪ್ರತಿಬಂಧಿಸಬೇಕೆಂಬ ‘ವಿಶ್ವ ಮಾದಕವಸ್ತು ನಿಷೇಧ ಏಜೆನ್ಸಿ’ ಮತ್ತು ‘ಯುನೆಸ್ಕೊ ಅಂತಾರಾಷ್ಟ್ರೀಯ ಒಡಂಬಡಿಕೆ’ಗೆ ಭಾರತ ಹೆಚ್ಚಿನ ಕೊಡುಗೆ ನೀಡುತ್ತಾ ಬಂದಿದೆ; ಜತೆಗೆ, ಮಾದಕ ವಸ್ತುಗಳ ನಿಷೇಧ ಆಂದೋಲನದಲ್ಲಿ ಇನ್ನೂ ಹೆಚ್ಚಾಗಿ ತೊಡಗಿಸಿಕೊಳ್ಳುವ ಭಾರತದ ಇಚ್ಛೆ ಮತ್ತು ಬಲವಾದ ಉದ್ದೇಶವನ್ನು ಇದು ಪ್ರತಿಬಿಂಬಿಸುತ್ತಿದೆ: ಶ್ರೀ ಅನುರಾಗ್ ಠಾಕೂರ್

Posted On: 03 JUL 2023 3:47PM by PIB Bengaluru

ಭಾರತದ ರಾಷ್ಟ್ರೀಯ ಮಾದಕವಸ್ತು ಪ್ರತಿಬಂಧಕ ಸಂಸ್ಥೆ(ನಾಡಾ-ಇಂಡಿಯಾ) ಮತ್ತು ದಕ್ಷಿಣ ಏಷ್ಯಾ ಪ್ರಾದೇಶಿಕ ಮಾದಕವಸ್ತು ನಿಷೇಧ ಸಂಘಟನೆ (ಸರಾಡೊ) ದೆಹಲಿಯಲ್ಲಿಂದು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದವು. ನಾಡಾ-ಇಂಡಿಯಾ ಮತ್ತು ಸರಾಡೊ ಸಹಕಾರ ಸಭೆಯಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ಉದ್ದೀಪನ ಅಥವಾ ಮಾದಕವಸ್ತುಗಳ ನಿಷೇಧ ಸಂಸ್ಥೆಗಳು ಭಾಗವಹಿಸಿದ್ದವು. ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ, ಸರಡೊ ಸಚಿವಾಲಯ ಮತ್ತು ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಒಡಂಬಡಿಕೆ ಏರ್ಪಟ್ಟಿದೆ.
ಈ ತಿಳಿವಳಿಕೆ ಪತ್ರ(ಒಡಂಬಡಿಕೆ)ವು ಕ್ರೀಡೆಯಲ್ಲಿ ಉದ್ದೀಪನ ಬಳಕೆ ನಿಷೇಧಿಸುವ ವಿಷಯದಲ್ಲಿ ಪ್ರಾದೇಶಿಕ ಸಹಕಾರ ಹೆಚ್ಚಿಸುವ ಗುರಿ ಹೊಂದಿದೆ.
 
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ಸಾಧನೆಗಳು ಹೆಚ್ಚುತ್ತಿರುವ ಬಗ್ಗೆ ಬೆಳಕು ಚೆಲ್ಲಿದರು. ಸ್ವಚ್ಛ ಕ್ರೀಡಾ ಪ್ರಯತ್ನಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಗತಿಕ ಉದ್ದೀಪನ ತಡೆಯ ಆಂದೋಲನಕ್ಕೆ ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊರಲು ಭಾರತ ತೋರುತ್ತಿರುವ ಉತ್ಸುಕತೆಯನ್ನು ಪ್ರಸ್ತಾಪಿಸಿದರು.
 
" ಮುಂಬರುವ ವರ್ಷಗಳಲ್ಲಿ ಭಾರತವು ಕ್ರೀಡಾ ಶಕ್ತಿಕೇಂದ್ರವಾಗಿ ಹೊರಹೊಮ್ಮುವಂತೆ ಮಾಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಯೋಜಿಸಿದ್ದಾರೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈ ಕನಸನ್ನು ನನಸಾಗಿಸಲು ಬದ್ಧವಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಸುಧಾರಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂದರು.
 
"ಉತ್ತಮ ಗುಣಮಟ್ಟದ ತರಬೇತಿ, ಲಭ್ಯವಾಗುವ ಮತ್ತು ಸುಧಾರಿತ ಕ್ರೀಡಾ ಮೂಲಸೌಕರ್ಯ, ಸ್ಪರ್ಧೆಗಳು ಮತ್ತು ತರಬೇತಿ ಶಿಬಿರಗಳ ಮೂಲಕ ಎಲ್ಲಾ ಕ್ರೀಡೆಗಳಿಗೆ ಅವಕಾಶ ಹೆಚ್ಚಿಸುವುದು ಮತ್ತು ಕ್ರೀಡೆಗಳಲ್ಲಿ ಲಿಂಗ ಸಮಾನತೆ ಉತ್ತೇಜಿಸುವ ಮುಖ್ಯವಾಹಿನಿಯ ಪ್ರಯತ್ನಗಳು ಜಾಗತಿಕವಾಗಿ ಕ್ರೀಡಾಭಿವೃದ್ಧಿಗೆ ಕೊಡುಗೆ ನೀಡುವ ಭಾರತದ ಉದ್ದೇಶ ಮತ್ತು ಮಹತ್ವಾಕಾಂಕ್ಷೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿವೆ" ಎಂದು ಸಚಿವರು ತಿಳಿಸಿದರು.

 


ಜಾಗತಿಕ ಉತ್ತರ ಮತ್ತು ದಕ್ಷಿಣದ ನಡುವಿನ ಅಂತರ(ಕಂದಕ) ಪರಿಹರಿಸಲು ಮತ್ತು ಏಷ್ಯಾದ ನಮ್ಮ ಸ್ನೇಹಿತರಿಗೆ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಭಾರತವು ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ರೀ ಅನುರಾಗ್ ಠಾಕೂರ್ ಹೇಳಿದರು.

ಕ್ರೀಡೆಯಲ್ಲಿ ಉದ್ದೀಪನ ಬಳಕೆ ಪ್ರತಿಬಂಧಿಸಲು ವಿಶ್ವ ಮಾದಕವಸ್ತು ನಿಷೇಧ ಏಜೆನ್ಸಿ ಮತ್ತು ಯುನೆಸ್ಕೊ ಅಂತಾರಾಷ್ಟ್ರೀಯ ಒಡಂಬಡಿಕೆ ಅನುಷ್ಠಾನಕ್ಕೆ ಭಾರತ ಹೆಚ್ಚಿನ ಕೊಡುಗೆ ನೀಡುತ್ತಾ ಬಂದಿದೆ. ಜಾಗತಿಕ ಮಟ್ಟದಲ್ಲಿ ಉದ್ದೀಪನ ತಡೆ ಆಂದೋಲನವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಮತ್ತು ಡೋಪಿಂಗ್ ವಿರೋಧಿ ಉಪಕ್ರಮಗಳನ್ನು ಬಲಪಡಿಸಲು ನಿರಂತರವಾಗಿ ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.


ಭಾರತವು ಪ್ರಸ್ತುತ ಜಿ-20 ಅಧ್ಯಕ್ಷ ಸ್ಥಾನ ಅಲಂಕರಿಸಿರುವುದರಿಂದ, ಏಷ್ಯಾ ಪ್ರದೇಶದ ಕಳವಳಗಳು ಮತ್ತು ದೃಷ್ಟಿಕೋನಗಳನ್ನು ಜಗತ್ತಿಗೆ ತಿಳಿಹೇಳುವಲ್ಲಿ  ಭಾರತ ಗಮನ ಹರಿಸುತ್ತಿದೆ. ಪ್ರಾದೇಶಿಕ ಸಹಭಾಗಿತ್ವದ ಪ್ರಾಮುಖ್ಯತೆಗೆ ಒತ್ತು ನೀಡಿದ ಅವರು, ಇದು ಈ ಪ್ರದೇಶವು ವಿಕಸನಗೊಳ್ಳಲು ಮತ್ತು ವಿವಿಧ ಕ್ಷೇತ್ರಗಳ ಸಹಕಾರದ ನಡುವೆ, ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸಶಕ್ತ ವಿಧಾನದೊಂದಿಗೆ ಹೊರಹೊಮ್ಮಲು ಸಹಾಯ ಮಾಡುತ್ತದೆ. ಉದ್ದೀಪನ ತಡೆಯ ಆಂದೋಲನದಲ್ಲಿ  ಇದೇ ಮೊದಲ ಬಾರಿಗೆ ನಾಡಾ ಇಂಡಿಯಾ ಮತ್ತು ಸರಡೊ ತಿಳಿವಳಿಕೆ ಪತ್ರಕ್ಕೆ ಭಾರತದಲ್ಲಿ ಸಹಿ ಹಾಕಿರುವುದು ಅಭಿನಂದನೀಯ. ಕ್ರೀಡಾ ಅಭಿವೃದ್ಧಿಯಲ್ಲಿ ಇತರ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಸಹಕರಿಸಲು ಮತ್ತು ಏಷ್ಯಾ ಪ್ರದೇಶದಲ್ಲಿ ಪ್ರಾದೇಶಿಕ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತೆ ಅವರು, ಈ ಪ್ರದೇಶದ ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಡೋಪಿಂಗ್ ವಿರೋಧಿ ಕ್ರಮಗಳನ್ನು ಸಮರೋಪಾದಿಯಲ್ಲಿ ನಡೆಸಲು ಸರಡೊ ಸದಸ್ಯ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕೆಂದು ಸಚಿವರು ಒತ್ತಾಯಿಸಿದರು.

ನಾಡಾ ಇಂಡಿಯಾದ ಮಹಾನಿರ್ದೇಶಕಿ ಮತ್ತು ಸಿಇಒ ಶ್ರೀಮತಿ ರಿತು ಸೈನ್ ಮತ್ತು ಸರಡೋ ಮಹಾನಿರ್ದೇಶಕ ಶ್ರೀ ಮೊಹಮದ್ ಮಹಿದ್ ಶರೀಫ್ ಅವರು ತಮ್ಮ ಸಂಸ್ಥೆಗಳ ಪರವಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಯೋಜನೆ ಮತ್ತು ಸಹಕಾರದ ಕ್ಷೇತ್ರಗಳ ಮೂಲಕ ತಿಳಿವಳಿಕೆ ಪತ್ರವು 3 ವರ್ಷಗಳ ಅವಧಿಯಲ್ಲಿ ಈ ಕೆಳಗಿನ ಉದ್ದೇಶಗಳನ್ನು ಪೂರೈಸುವ ಗುರಿ ಹೊಂದಿದೆ:
 
* ದಕ್ಷಿಣ ಏಷ್ಯಾದಲ್ಲಿ ಉದ್ದೀಪನ ನಿಷೇಧ ಶಿಕ್ಷಣ ಮತ್ತು ತಡೆಗಟ್ಟುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು.
   
* ಮಾದರಿ ಸಂಗ್ರಹ ಸಿಬ್ಬಂದಿ ಮತ್ತು ಶಿಕ್ಷಕರ ತರಬೇತಿ ಮತ್ತು ಕೌಶಲ್ಯ ಹೆಚ್ಚಿಸುವುದು ಮತ್ತು ಡೋಪಿಂಗ್ ನಿಷೇಧಿಸುವ‌ ಇತರೆ ಶಿಕ್ಷಣ ಅಧಿಕಾರಿಗಳನ್ನು ನೇಮಿಸುವುದು.

* ಮಾದಕ ವಸ್ತು ನಿಷೇಧ ಶಿಕ್ಷಣ ಮತ್ತು ತಡೆಗಟ್ಟುವಿಕೆಯ ಕೋರ್ಸ್‌ಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು, ಸಂಶೋಧನೆ ಮತ್ತು ವಿನಿಮಯ ಪ್ರವಾಸಗಳನ್ನು ಆಯೋಜಿಸುವುದು.
* ಡೋಪಿಂಗ್ ನಿಷೇಧ ಶಿಕ್ಷಣ ಮತ್ತು ತಡೆಗಟ್ಟುವಿಕೆ ಕುರಿತು ಶಿಕ್ಷಣ ಅಧಿಕಾರಿಗಳು, ಕಾರ್ಯಕ್ರಮ ನಿರ್ವಾಹಕರು, ತರಬೇತುದಾರರು, ಶಿಕ್ಷಕರು ಮತ್ತು ತಜ್ಞರ ವಿಚಾರ ವಿನಿಮಯ ಸುಲಭಗೊಳಿಸುವುದು.

* ಡೋಪಿಂಗ್ ನಿಷೇಧ ಶಿಕ್ಷಣ ಚಟುವಟಿಕೆಗಳನ್ನು ಬೆಂಬಲಿಸುವುದು ಮತ್ತು ತಜ್ಞರ ಸೇವೆಗಳನ್ನು ವಿನಿಮಯ ಮಾಡಿಕೊಳ್ಳುವುದು.

* ಡೋಪಿಂಗ್ ನಿಷೇಧ ಮತ್ತು ತಡೆಗಟ್ಟುವಿಕೆಯ ಶಿಕ್ಷಣ ಪಠ್ಯ ತಯಾರಿಸುವುದು.
 
ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ(ಕ್ರೀಡೆ) ಶ್ರೀಮತಿ ಸುಜಾತಾ ಚತುರ್ವೇದಿ, ಶ್ರೀ ಕಝುಹಿರೊ ಹಯಾಶಿ, ನಿರ್ದೇಶಕರು, ಏಷ್ಯಾ/ಓಷಿಯಾನಿಯಾ ಕಚೇರಿ, ವಾಡಾ, ಶ್ರೀಮತಿ ರಿತು ಸೇನ್, ಡೈರೆಕ್ಟರ್ ಜನರಲ್ ಮತ್ತು ಸಿಇಒ, ನಾಡಾ ಇಂಡಿಯಾ ಮತ್ತು ಸರಡೊ ಮಹಾನಿರ್ದೇಶಕ ಶ್ರೀ ಮೊಹಮ್ಮದ್ ಮಹಿದ್ ಶರೀಫ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉದ್ಘಾಟನಾ ಅಧಿವೇಶನದ ನಂತರ ನಾಡಾ ಇಂಡಿಯಾ ಮತ್ತು ಸರಡೊ ಸದಸ್ಯರ ನಡುವಿನ ಮೊದಲ ಪ್ರಾಜೆಕ್ಟ್ ನ ಯೋಜನಾ ಸಭೆಯಲ್ಲಿ ದಕ್ಷಿಣ ಏಷ್ಯಾ ಪ್ರದೇಶಕ್ಕಾಗಿ ಡೋಪಿಂಗ್ ನಿಷೇಧ ಶಿಕ್ಷಣ ಯೋಜನೆ ಅಭಿವೃದ್ಧಿಪಡಿಸುವ ಉದ್ದೇಶ ಕುರಿತು ಚರ್ಚಿಸಲಾಯಿತು. ನಾಡಾ ಭಾರತ ತಂಡವು ಪ್ರಾಜೆಕ್ಟ್ ಯೋಜನೆ, ಸಹಕಾರದ ಕ್ಷೇತ್ರಗಳು, ಅನುಷ್ಠಾನ ಕಾರ್ಯತಂತ್ರ, ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡುವ ಕಾರ್ಯವಿಧಾನಗಳು ಮತ್ತು ನಾಡಾ ಭಾರತದ ಡೋಪಿಂಗ್ ನಿಷೇಧದ ಶಿಕ್ಷಣ ಉಪಕ್ರಮಗಳು ಮತ್ತು ಸಂಪನ್ಮೂಲಗಳ ಅವಲೋಕನವನ್ನು ಪ್ರಸ್ತುತಪಡಿಸಿತು. ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ತಮ್ಮ ದೇಶಗಳಲ್ಲಿ ಡೋಪಿಂಗ್ ನಿಷೇಧದ ಅವಲೋಕನವನ್ನು ಪ್ರಸ್ತುತಪಡಿಸಿದರು.

****


(Release ID: 1937115) Visitor Counter : 175