ಪ್ರಧಾನ ಮಂತ್ರಿಯವರ ಕಛೇರಿ
ಜುಲೈ 1 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
“ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್” ಅನ್ನು ಪ್ರಧಾನಮಂತ್ರಿ ಅವರು ಚಾಲನೆಗೊಳಿಸಲಿದ್ದಾರೆ
ಶಾಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಪ್ರಧಾನಮಂತ್ರಿ ಅವರು ಸಂವಾದ ನಡೆಸಲಿದ್ದಾರೆ
ರಾಜ್ಯದ ಸುಮಾರು 3.57 ಕೋಟಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ಗಳ ವಿತರಣಾ ಕಾರ್ಯವನ್ನು ಪ್ರಧಾನಮಂತ್ರಿ ಅವರು ಚಾಲನೆ ಮಾಡಲಿದ್ದಾರೆ
ಗೊಂಡ್ವಾನಾದ 16ನೇ ಶತಮಾನದ ಧೈರ್ಯಶಾಲಿ ರಾಣಿ “ಮಹಾರಾಣಿ ದುರ್ಗಾವತಿ”ಯವರಿಗೆ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಲಿದ್ದಾರೆ.
Posted On:
30 JUN 2023 2:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 1, 2023 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ ಗಂಟೆ 3:30 ರ ಸುಮಾರಿಗೆ, ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್ (ರಾಷ್ಟ್ರೀಯ ಕುಡಗೋಲು ಕೋಶ(ಜೀವಕಣ) ರಕ್ತಹೀನತೆ ರೋಗ ನಿರ್ಮೂಲನಾ ಯೋಜನೆ) ಅನ್ನು ಪ್ರಾರಂಭಿಸಲಿದ್ದಾರೆ. ಹಾಗೂ, ಫಲಾನುಭವಿಗಳಿಗೆ ಕುಡಗೋಲು ಕೋಶ ವಂಶೀಯ ತಳಿ ಸ್ಥಿತಿ ಕಾರ್ಡ್ಗಳನ್ನು (ಸಿಕಲ್ ಸೆಲ್ ಜೆನೆಟಿಕ್ ಸ್ಟೇಟಸ್ ಕಾರ್ಡ್) ವಿತರಿಸಲಿದ್ದಾರೆ.
ವಿಶೇಷವಾಗಿ ಬುಡಕಟ್ಟು ಜನರಲ್ಲಿ ಕಂಡುಬರುವ ಕುಡಗೋಲು ಕೋಶ ರೋಗದಿಂದ ಉಂಟಾಗುವ ಆರೋಗ್ಯದ ವಿವಿಧ ಸವಾಲುಗಳನ್ನು ಎದುರಿಸಿ ನಿಯಂತ್ರಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವ ಕುಡಗೋಲು ಕೋಶ ರೋಗವನ್ನು 2047ರ ವೇಳೆಗೆ ಸಂಪೂರ್ಣವಾಗಿ ತೊಡೆದುಹಾಕಲು ಸರ್ಕಾರದ ಮಾಡುತ್ತಿರುವ ಪ್ರಯತ್ನಗಳಲ್ಲಿ ಈ ಯೋಜನೆಯು ನಿರ್ಣಾಯಕ ಮೈಲಿಗಲ್ಲಾಗಿದೆ. ರಾಷ್ಟ್ರೀಯ ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನಾ ಯೋಜನೆಯನ್ನು 2023ರ ಕೇಂದ್ರ ಬಜೆಟ್ನಲ್ಲಿ ಈಗಾಗಲೇ ಘೋಷಿಸಲಾಗಿದೆ. ಇದನ್ನು ದೇಶದಲ್ಲಿ ಅತ್ಯಧಿಕ ಕೇಂದ್ರೀಕರಿಸಲಾದ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡ ಮೊದಲಾದ 17 ರಾಜ್ಯಗಳ ಗುರುತಿಸಲಾದ 278 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು.
ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ “ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್” ಗಳ ವಿತರಣೆಯನ್ನು ಪ್ರಧಾನಮಂತ್ರಿಯವರು ಪ್ರಾರಂಭಿಸಲಿದ್ದಾರೆ. ಆಯುಷ್ಮಾನ್ ಕಾರ್ಡ್ ವಿತರಣೆ ಸಮಾರಂಭವನ್ನು ರಾಜ್ಯಾದ್ಯಂತ ನಗರ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಅಭಿವೃದ್ಧಿ ಬ್ಲಾಕ್ ಗಳಲ್ಲಿ ಆಯೋಜಿಸಲಾಗಿದೆ. ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನವು, ಜನಕಲ್ಯಾಣ ಯೋಜನೆಗಳ 100 ಪ್ರತಿಶತದಷ್ಟು ಶುದ್ಧತ್ವವನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಬ್ಬ ಫಲಾನುಭವಿಯನ್ನು ಯೋಜನೆಗಳು ತಲುಪುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.
16 ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾ ಪ್ರದೇಶದ ಆಡಳಿತ ರಾಣಿಯಾಗಿದ್ದ “ಮಹಾರಾಣಿ ದುರ್ಗಾವತಿ” ಅವರನ್ನು ಪ್ರಧಾನಮಂತ್ರಿಗಳು ಈ ಸಂದರ್ಭದಲ್ಲಿ ಗೌರವಿಸಲಿದ್ದಾರೆ. ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ, ನಿರ್ಭೀತ ಮತ್ತು ಧೈರ್ಯಶಾಲಿ ಯೋಧೆ ಎಂದು ಮಹಾರಾಣಿ ದುರ್ಗಾವತಿಯವರನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಳ್ಳಲಿದ್ದಾರೆ.
ಸಂಜೆ ಸುಮಾರು 5 ಗಂಟೆಗೆ, ಒಂದು ವಿಶಿಷ್ಟ ಉಪಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು ಶಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಬುಡಕಟ್ಟು ಸಮುದಾಯದ ಮುಖಂಡರು, ಸ್ವ-ಸಹಾಯ ಗುಂಪುಗಳು, ಪಿ.ಇ.ಎಸ್.ಎ. (ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996) ಸಮಿತಿಗಳು ಮತ್ತು ಗ್ರಾಮದ ಕಾಲ್ಚೆಂಡು ಆಟದ ತಂಡಗಳ ಮುಖ್ಯಸ್ಥರುಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ.
*** *
(Release ID: 1936479)
Visitor Counter : 100
Read this release in:
Hindi_RJ
,
English
,
Urdu
,
Marathi
,
Hindi
,
Nepali
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam