ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

9ನೇ ಅಂತಾರಾಷ್ಟ್ರೀಯ ಯೋಗ ದಿನ – 2023 ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 21 JUN 2023 11:30PM by PIB Bengaluru

ಗೌರವಾನ್ವಿತ ಶ್ರೀ ಸಿಸಾಬಾ ಕೊರೊಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರು, ಗೌರವಾನ್ವಿತ ಅಮಿನಾ ಮೊಹಮ್ಮದ್, ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ, ಗೌರವಾನ್ವಿತ ಎರಿಕ್ ಆಡಮ್ಸ್, ನ್ಯೂಯಾರ್ಕ್ ಮೇಯರ್, ಮತ್ತು ವಿಶ್ವಾದ್ಯಂತ ಇರುವ ನನ್ನ ಆತ್ಮೀಯ ಸ್ನೇಹಿತರೆ,

ನಮಸ್ಕಾರ!

ಸ್ನೇಹಿತರೆ,

ನಾವೆಲ್ಲಾ ಇಂದು ಈ ಸುಪ್ರಭಾತದಲ್ಲಿ (ಶುಭ ಮುಂಜಾನೆ) ವಿಶ್ವಸಂಸ್ಥೆಯ ಕಚೇರಿಯಲ್ಲಿ ಒಟ್ಟುಗೂಡಿದ್ದೇವೆ.

ಇಡೀ ಮನುಕುಲಕ್ಕಾಗಿ ಆರೋಗ್ಯ ಮತ್ತು ಒಳಿತಿಗಾಗಿ ಈ ಕಾರ್ಯಕ್ರಮ! ಈ ಅದ್ಭುತ ನಗರ ನ್ಯೂಯಾರ್ಕ್ ನಲ್ಲಿ ನಾವೆಲ್ಲಾ ಸೇರಿದ್ದೇವೆ! ನನಗೆ ಗೊತ್ತು, ನಿಮ್ಮಲ್ಲಿ ಹಲವರು ದೂರದಿಂದ ಬಂದವರು, ನಿಮ್ಮಲ್ಲಿ ಹೆಚ್ಚಿನವರು ಸೂರ್ಯೋದಯಕ್ಕೆ ಮುಂಚೆಯೇ ಎಚ್ಚರಗೊಂಡು ಇಲ್ಲಿಗೆ ಬರಲು ಪ್ರಯತ್ನಿಸಿದ್ದೀರಿ.

ನಿಮ್ಮೆಲ್ಲರನ್ನು ನೋಡಲು ನನಗೆ ಸಂತೋಷವಾಗಿದೆ ಮತ್ತು ನೀವೆಲ್ಲರೂ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ!

 

ಸ್ನೇಹಿತರೆ,

ಇಂದು ಇಲ್ಲಿ ಬಹುತೇಕ ಎಲ್ಲಾ ರಾಷ್ಟ್ರೀಯತೆಗಳು ಪ್ರತಿನಿಧಿಸಿವೆ ಎಂಬುದು ನನಗೆ ತಿಳಿದುಬಂದಿದೆ. ನಮ್ಮೆಲ್ಲರನ್ನೂ ಒಟ್ಟುಗೂಡಿಸಲು ಎಂತಹ ಅದ್ಭುತ ಕಾರಣ – ಅದು ಯೋಗ!

ಯೋಗ ಎಂದರೆ – ಒಂದಾಗುವುದು ಅಥವಾ ಒಟ್ಟಿಗೆ ಸೇರುವುದು. ಆದ್ದರಿಂದ, ನೀವು ಒಟ್ಟಿಗೆ ಸೇರುವುದು ಯೋಗದ ಮತ್ತೊಂದು ರೂಪದ ಅಭಿವ್ಯಕ್ತಿಯಾಗಿದೆ. ನನಗೆ ನೆನಪಿದೆ, ಸುಮಾರು 9 ವರ್ಷಗಳ ಹಿಂದೆ ಇಲ್ಲಿಯೇ ವಿಶ್ವಸಂಸ್ಥೆಯಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯನ್ನು ಪ್ರಸ್ತಾಪಿಸುವ ಗೌರವ ನನಗೆ ಸಿಕ್ಕಿತ್ತು.

ಅಂದಿನ ಕಲ್ಪನೆಯನ್ನು ಬೆಂಬಲಿಸಲು ಇಡೀ ಜಗತ್ತೇ ಒಗ್ಗೂಡಿದ್ದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ನಾನು ವಿಶ್ವಸಂಸ್ಥೆಯ ಅಪ್ರತಿಮ ಶಾಂತಿಪಾಲಕರಿಗೆ ಗೌರವ ಸಲ್ಲಿಸಿದ್ದೇನೆ. 2015ರಲ್ಲಿ ಅವರ ಸ್ಮರಣಾರ್ಥ ವಿಶ್ವಸಂಸ್ಥೆಯಲ್ಲಿ ಹೊಸ ಸ್ಮಾರಕ ನಿರ್ಮಿಸಬೇಕು ಎಂದು ಕರೆ ನೀಡಿದ್ದೆ.

 

ಕಳೆದ ವಾರ, ಇದನ್ನು ಶೀಘ್ರದಲ್ಲೇ ವಾಸ್ತವ ರೂಪಕ್ಕೆ ತರಲು ಇಡೀ ಜಗತ್ತು ಭಾರತದೊಂದಿಗೆ ಕೈಜೋಡಿಸಿತು. ಅತಿದೊಡ್ಡ ಶಾಂತಿಪಡೆಯ ಕೊಡುಗೆ ರಾಷ್ಟ್ರವಾಗಿ ಭಾರತವು, ಈ ಉದಾತ್ತ ಉದ್ದೇಶಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನಾವು ಎಲ್ಲಾ ರಾಷ್ಟ್ರಗಳಿಗೆ ಕೃತಜ್ಞರಾಗಿರುತ್ತೇವೆ.

ಕಳೆದ ವರ್ಷ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಬೆಂಬಲಿಸಲು ಇಡೀ ಜಗತ್ತು ಒಗ್ಗೂಡಿತು. ಸಿರಿಧಾನ್ಯ ಒಂದು ಉತ್ಕೃಷ್ಟ ಆಹಾರ. ಅವು ಸಮಗ್ರ ಆರೋಗ್ಯವನ್ನು ಉತ್ತೇಜಿಸುತ್ತವೆ ಮತ್ತು ಪರಿಸರಕ್ಕೂ ಒಳ್ಳೆಯದು. ಇಂದು ಇಡೀ ಜಗತ್ತು ಯೋಗಕ್ಕಾಗಿ ಮತ್ತೆ ಒಟ್ಟಿಗೆ ಸೇರುವುದನ್ನು ನೋಡುವುದು ಅದ್ಭುತವಾಗಿದೆ!

 

ಸ್ನೇಹಿತರೆ,

ಯೋಗ ಭಾರತದಿಂದ ಬಂದಿದೆ. ಇದು ಬಹಳ ಹಳೆಯ ಸಂಪ್ರದಾಯವಾಗಿದೆ. ಆದರೆ ಎಲ್ಲಾ ಪ್ರಾಚೀನ ಭಾರತೀಯ ಸಂಪ್ರದಾಯಗಳಂತೆ, ಇದು ಜೀವಂತ ಮತ್ತು ಕ್ರಿಯಾತ್ಮಕವಾಗಿದೆ. ಯೋಗ ಉಚಿತವಾಗಿದೆ. ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಂದ ಮುಕ್ತವಾಗಿದೆ, ರಾಜಧನ ಪಾವತಿಗಳಿಂದಲೂ ಮುಕ್ತವಾಗಿದೆ. ನಿಮ್ಮ ವಯಸ್ಸು, ಲಿಂಗ ಮತ್ತು ದೇಹರ್ದಾಢ್ಯತೆ ಮಟ್ಟಕ್ಕೆ ಯೋಗ ಹೊಂದಿಕೊಳ್ಳಬಲ್ಲದು. ಯೋಗವು ಒಯ್ಯಬಲ್ಲದ್ದಾಗಿದೆ(ಪೋರ್ಟಬಲ್). ನೀವು ಅದನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅಥವಾ ಸಾರಿಗೆ ಸಂಚಾರ ವೇಳೆಯಲ್ಲೂ ಮಾಡಬಹುದು.

ಯೋಗವು ಹೊಂದಿಕೊಳ್ಳುತ್ತದೆ. ನೀವು ಅದನ್ನು ಏಕಾಂಗಿಯಾಗಿ ಅಥವಾ ಗುಂಪಿನಲ್ಲಿ ಅಭ್ಯಾಸ ಮಾಡಬಹುದು, ಶಿಕ್ಷಕರಿಂದ ಕಲಿಯಬಹುದು ಅಥವಾ ಸ್ವಂತ ಕಲಿಯ(ಸ)ಬಹುದು. ಯೋಗವು ಏಕೀಕರಣವಾಗಿದೆ. ಇದು ಎಲ್ಲರಿಗೂ, ಎಲ್ಲಾ ಜನಾಂಗಗಳಿಗೆ, ಎಲ್ಲಾ ನಂಬಿಕೆಗಳಿಗೆ ಮತ್ತು ಎಲ್ಲಾ ಸಂಸ್ಕೃತಿಗಳಿಗೆ. ಯೋಗ ನಿಜವಾಗಿಯೂ ಸಾರ್ವತ್ರಿಕವಾಗಿದೆ.

 

ಸ್ನೇಹಿತರೆ,

 ನಾವು ಯೋಗ ಮಾಡುವಾಗ, ನಾವು ದೈಹಿಕವಾಗಿ ಸದೃಢರಾಗುತ್ತೇವೆ, ಮಾನಸಿಕವಾಗಿ ಶಾಂತವಾಗಿರುತ್ತೇವೆ ಮತ್ತು ಭಾವನಾತ್ಮಕವಾಗಿ ತೃಪ್ತಿ ಹೊಂದುತ್ತೇವೆ. ಆದರೆ ಚಾಪೆಯ ಮೇಲೆ ವ್ಯಾಯಾಮ ಮಾಡುವುದು ಮಾತ್ರವಲ್ಲ. ಯೋಗವು ಒಂದು ಜೀವನ ವಿಧಾನವಾಗಿದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನ, ಆಲೋಚನೆಗಳು ಮತ್ತು ಕಾರ್ಯಗಳಲ್ಲಿ ಸಾವಧಾನತೆ ಹೊಂದಲು ಒಂದು ಸನ್ಮಾರ್ಗವಾಗಿದೆ. ಜನರೊಂದಿಗೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಇರುವ ಒಂದು ಸ್ವಯಂ ಮಾರ್ಗ. ನಿಮ್ಮಲ್ಲಿ ಅನೇಕರು ಯೋಗದ ವಿವಿಧ ಅಂಶಗಳನ್ನು ವೈಜ್ಞಾನಿಕವಾಗಿ ದೃಢೀಕರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ವಾಸ್ತವವಾಗಿ, ಇದು ಸೂಕ್ತ ಮಾರ್ಗವಾಗಿದೆ.

 

ಸ್ನೇಹಿತರೆ,

ಯೋಗ ಪ್ರಾರಂಭಿಸಲು ನೀವೆಲ್ಲರೂ ಉತ್ಸುಕರಾಗಿದ್ದೀರಿ ಎಂದು ನನಗೆ ತಿಳಿದಿದೆ! ಸರಿ, ನಾನು ಸಹ. ಇಂದು ನಮ್ಮನ್ನು ಕರೆದು ಇಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ನಾನು ವಿಶ್ವಸಂಸ್ಥೆಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಸಹಾಯ ಮತ್ತು ಬೆಂಬಲ ನೀಡಿದ ಮೇಯರ್ ಮತ್ತು ನ್ಯೂಯಾರ್ಕ್ ನಗರಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ, ಇಂದು ಇಲ್ಲಿಗೆ ಬಂದಿದ್ದಕ್ಕಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಯೋಗದ ಶಕ್ತಿ, ಚೈತನ್ಯವನ್ನು ನಾವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರಲು ಮಾತ್ರವಲ್ಲದೆ, ದಯೆಯಿಂದ ನಮ್ಮೊಂದಿಗೆ ಮತ್ತು ಪರಸ್ಪರರಿಗೆ ಬಳಸೋಣ.

ಸ್ನೇಹದ ಸೇತುಗಳು, ಶಾಂತಿಯುತ ಜಗತ್ತು, ಸ್ವಚ್ಛ, ಹಸಿರು ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸಲು ಯೋಗದ ಶಕ್ತಿಯನ್ನು ಬಳಸೋಣ. "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಗುರಿ ಸಾಧಿಸಲು ನಾವು ಒಟ್ಟಾಗಿ ಕೈಜೋಡಿಸೋಣ. ನಾನು ಈ ಒಂದು ಆಶಯದೊಂದಿಗೆ ಭಾಷಣ ಮುಕ್ತಾಯಗೊಳಿಸುತ್ತೇನೆ:

ಎಲ್ಲರೂ ಸುಖವಾಗಿ ಬಾಳಲಿ

ಸರ್ವೇ ಸಂತು ನಿರಾಮಯ:

ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ!

ಧನ್ಯವಾದಗಳು!

ಮತ್ತೊಮ್ಮೆ ತುಂಬು ಧನ್ಯವಾದಗಳು!

 

*******

 


(Release ID: 1934435) Visitor Counter : 131