ಪ್ರಧಾನ ಮಂತ್ರಿಯವರ ಕಛೇರಿ

ಸ್ವಾಗತ್ ಉಪಕ್ರಮ 20 ವರ್ಷ ತುಂಬಿದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


"ಗುಜರಾತ್‌ನ ಸ್ವಾಗತ್ ಉಪಕ್ರಮವು ಜನರ ಕುಂದುಕೊರತೆ ಪರಿಹರಿಸಲು ತಂತ್ರಜ್ಞಾನವನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತಿದೆ"

“ನಾನು ಕುರ್ಚಿಯ ಸಂಕೋಲೆಗಳ ಗುಲಾಮನಾಗುವುದಿಲ್ಲ. ನಾನು ಜನರ ನಡುವೆ ಇರುತ್ತೇನೆ ಮತ್ತು ಅವರಿಗಾಗಿ ಇರುತ್ತೇನೆ.

"ಸ್ವಾಗತ್ ಸುಲಭವಾಗಿ ಜೀವನ ನಡೆಸುವ ಮತ್ತು ಜನರಿಗೆ ಆಡಳಿತ ತಲುಪಿಸುವ ಪರಿಕಲ್ಪನೆಯ ಮೇಲೆ ನಿಂತಿದೆ"

" ನಾವು ಸ್ವಾಗತ್ ಮೂಲಕ ಗುಜರಾತ್ ಜನರಿಗೆ ಸೇವೆ ಸಲ್ಲಿಸಬಹುದು ಎಂಬುದೇ ನನಗೆ ಸಿಕ್ಕಿರುವ ದೊಡ್ಡ ಬಹುಮಾನ"

"ಆಡಳಿತವು ಹಳೆಯ ನಿಯಮಗಳು ಮತ್ತು ಕಾನೂನುಗಳಿಗೆ ಸೀಮಿತವಾಗಿಲ್ಲ. ಆದರೆ ನಾವೀನ್ಯತೆಗಳು ಮತ್ತು ಹೊಸ ಆಲೋಚನೆಗಳಿಂದ ಆಡಳಿತ ನಡೆಯುತ್ತದೆ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ"

“ಆಡಳಿತದ ಅನೇಕ ಪರಿಹಾರಗಳಿಗೆ ಸ್ವಾಗತ್  ಸ್ಫೂರ್ತಿಯಾಯಿತು. ಅನೇಕ ರಾಜ್ಯಗಳು ಈ ರೀತಿಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

“ಕಳೆದ 9 ವರ್ಷಗಳಲ್ಲಿ ದೇಶದ ತ್ವರಿತ ಅಭಿವೃದ್ಧಿಯಲ್ಲಿ “ಪ್ರಗತಿ” ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಿದೆ. ಇದು ಸ್ವಾಗತ್  ಪರಿಕಲ್ಪನೆಯನ್ನು ಆಧರಿಸಿದೆ"

Posted On: 27 APR 2023 5:25PM by PIB Bengaluru

ಗುಜರಾತ್‌ನಲ್ಲಿ ತಂತ್ರಜ್ಞಾನ ಅಳವಡಿಕೆ(ಬಳಕೆ) ಮೂಲಕ ಕುಂದುಕೊರತೆಗಳ ನಿವಾರಣೆಗೆ  ರಾಜ್ಯವ್ಯಾಪಿ ಗಮನ – ಸ್ವಾಗತ್ (StateWide Attention on Grievances by Application of Technology – SWAGAT) ಉಪಕ್ರಮವು 20 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು. 20 ವರ್ಷಗಳ ಉಪಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರವು ಸ್ವಾಗತ್ ಸಪ್ತಾಹ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ನಂತರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ನಾಗರಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಲ್ಲದೆ ನೂರಾರು ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸ್ವಾಗತ್ ಪ್ರಾರಂಭಿಸಿದ ಉದ್ದೇಶವನ್ನು ಯಶಸ್ವಿಯಾಗಿ ಸಾಧಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. "ಸರ್ಕಾರದ ಕ್ರಮಮತ್ತು ವರ್ತನೆ ಸ್ನೇಹಪರವಾಗಿರಬೇಕು. ಇದರಿಂದ ಸಾಮಾನ್ಯ ನಾಗರಿಕರು ತಮ್ಮ ಸಮಸ್ಯೆಗಳನ್ನು ಅವರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು" ಎಂದು ಪ್ರಧಾನ ಮಂತ್ರಿ ಹೇಳಿದರು. SWAGAT ಉಪಕ್ರಮವು 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಫಲಾನುಭವಿಗಳೊಂದಿಗೆ ಸಂವಾದದ ನಂತರ ತಮ್ಮ ಹಿಂದಿನ ಅನುಭವಗಳನ್ನು ನೆನಪಿಸಿಕೊಂಡರು. ನಾಗರಿಕರ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಸ್ವಾಗತ್ ಯೋಜನೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ಯಾವುದೇ ಯೋಜನೆಯ ಭವಿಷ್ಯವನ್ನು ಆ ಯೋಜನೆಯ ಉದ್ದೇಶ ಮತ್ತು ದೂರದೃಷ್ಟಿಯಿಂದ ನಿರ್ಧರಿಸಲಾಗುತ್ತದೆ. 2003ರಲ್ಲಿ ಉಪಕ್ರಮವನ್ನು ಪ್ರಾರಂಭಿಸಿದಾಗ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ವಯಸ್ಸಾಗಿರಲಿಲ್ಲ. ಅಧಿಕಾರವು ಎಲ್ಲರನ್ನೂ ಬದಲಾಯಿಸುತ್ತದೆ ಎಂಬ ಸಾಮಾನ್ಯ ಪಲ್ಲವಿಯನ್ನು ನಾನು ಸಹ ಎದುರಿಸಿದೆ. “ನಾನು ಕುರ್ಚಿಯ ಸಂಕೋಲೆಗಳ ಗುಲಾಮನಾಗುವುದಿಲ್ಲ ಎಂದು ನನಗೆ ಸ್ಪಷ್ಟವಾಗಿತ್ತು. ನಾನು ಜನರ ನಡುವೆಯೇ ಇರುತ್ತೇನೆ ಮತ್ತು ಅವರಿಗಾಗಿ ಇರುತ್ತೇನೆ ಎಂಬ ನಿರ್ಣಯವು ತಂತ್ರಜ್ಞಾನದ ಅಳವಡಿಕೆ ಮೂಲಕ ಕುಂದುಕೊರತೆಗಳ ಮೇಲೆ ರಾಜ್ಯವ್ಯಾಪಿ ಗಮನ – ಸ್ವಾಗತ್ ಜನ್ಮ ನೀಡಿತು. ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾಮಾನ್ಯ ನಾಗರಿಕರ ಅಭಿಪ್ರಾಯಗಳನ್ನು ಸ್ವಾಗತಿಸುವುದು ಸ್ವಾಗತ್ ನ ಹಿಂದಿನ ಆಲೋಚನೆಯಾಗಿದೆ, ಅದು ಶಾಸನ ಅಥವಾ ಪರಿಹಾರಗಳಲ್ಲಿರಬಹುದು. "ಸ್ವಾಗತ್ ಸುಲಭವಾಗಿ ಜೀವನ ನಡೆಸಲು ಮತ್ತು ಜನರ ಬಳಿಗೆ ಆಡಳಿತ ತಲುಪಿಸುವ ಪರಿಕಲ್ಪನೆಯೊಂದಿಗೆ ನೆಲೆ ನಿಂತಿದೆ" ಎಂದು ಪ್ರಧಾನ ಮಂತ್ರಿ ಹೇಳಿದರು.

ಸರ್ಕಾರದ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದ ಪ್ರಯತ್ನದಿಂದಾಗಿ ಗುಜರಾತ್‌ನ ಉತ್ತಮ ಆಡಳಿತ ಮಾದರಿಯು ವಿಶ್ವದಲ್ಲಿ ತನ್ನದೇ ಆದ ಗುರುತು  ಕಂಡುಕೊಂಡಿದೆ. ಉದಾಹರಣೆಗೆ ಇಂಟರ್ ನ್ಯಾಷನಲ್ ಟೆಲಿಕಾಂ ಸಂಸ್ಥೆಯನ್ನೇ ತೆಗೆದುಕೊಳ್ಳಿ. ಇದು ಸ್ವಾಗತ್ ಉಪಕ್ರಮದ ಉತ್ತಮ ಆಡಳಿತ, ಇ-ಪಾರದರ್ಶಕತೆ ಮತ್ತು ಇ-ಉತ್ತರದಾಯಿತ್ವವನ್ನು ಪ್ರಸ್ತುತಪಡಿಸಿತು. ಸ್ವಾಗತ್ ವಿಶ್ವಸಂಸ್ಥೆಯಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಸಾರ್ವಜನಿಕ ಸೇವೆಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸಹ ಪಡೆದಿದೆ. 2011ರಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಭಾರತ ಸರ್ಕಾರದಿಂದ ಸ್ವಾಗತ್ ಇ-ಆಡಳಿತಕ್ಕಾಗಿ ಗುಜರಾತ್ ಚಿನ್ನದ ಪ್ರಶಸ್ತಿ ಪಡೆದುಕೊಂಡಿದೆ ಎಂದು ಪ್ರಧಾನಿ ತಿಳಿಸಿದರು.

ನಾವು ಸ್ವಾಗತ್ ಮೂಲಕ ಗುಜರಾತ್ ಜನರಿಗೆ ಸೇವೆ ಸಲ್ಲಿಸಬಹುದು ಎಂಬುದೇ ನನಗೆ ದೊಡ್ಡ ಪ್ರತಿಫಲವಾಗಿದೆ ಅಥವಾ ಬಹುಮಾನ ಸಿಕ್ಕಂತಾಗಿದೆ ಎಂದು ಪ್ರಧಾನಿ ಹೇಳಿದರು. SWAGATನಲ್ಲಿ ನಾವು ಪ್ರಾಯೋಗಿಕ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದೇವೆ. SWAGAT ಅಡಿ  ಸಾರ್ವಜನಿಕ ವಿಚಾರಣೆಯ ಮೊದಲ ವ್ಯವಸ್ಥೆಗಳನ್ನು ಬ್ಲಾಕ್ ಮತ್ತು ತಾಲೂಕು  ಮಟ್ಟದಲ್ಲಿ ರಚಿಸಲಾಗಿದೆ. ಆ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿ ವಹಿಸಲಾಯಿತು. ರಾಜ್ಯ ಮಟ್ಟದಲ್ಲಿ ಪ್ರಧಾನ ಮಂತ್ರಿ ಅವರು ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಇದು ಉಪಕ್ರಮಗಳು ಮತ್ತು ಯೋಜನೆಗಳ ಪ್ರಭಾವ, ವ್ಯಾಪ್ತಿಯನ್ನು ಮತ್ತು ಅನುಷ್ಠಾನ ಏಜೆನ್ಸಿಗಳು ಮತ್ತು ಅಂತಿಮ ಫಲಾನುಭವಿಗಳ ನಡುವಿನ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಹೆಚ್ಚಿನ ಸಹಾಯ ಮಾಡಿತು. SWAGAT ನಾಗರಿಕರನ್ನು ಸಶಕ್ತಗೊಳಿಸಿತು ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿತು ಎಂದು ಪ್ರಧಾನಿ ತಿಳಿಸಿದರು.

ವಾರಕ್ಕೊಮ್ಮೆ ಮಾತ್ರ ಸ್ವಾಗತ್ ಕಾರ್ಯಕ್ರಮ ನಡೆಯುತ್ತಿದ್ದರೂ, ನೂರಾರು ಕುಂದುಕೊರತೆಗಳು ಇರುವುದರಿಂದ ಅದಕ್ಕೆ ಸಂಬಂಧಿಸಿದ ಕೆಲಸ ತಿಂಗಳು ಪೂರ್ತಿ ನಡೆಯಲಿದೆ. ಯಾವುದೇ ನಿರ್ದಿಷ್ಟ ಇಲಾಖೆಗಳು, ಅಧಿಕಾರಿಗಳು ಅಥವಾ ಪ್ರದೇಶಗಳ ದೂರುಗಳು ಇತರರಿಗಿಂತ ಹೆಚ್ಚಾಗಿ ದಾಖಲಾಗಿವೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ತಾನು ವಿಶ್ಲೇಷಣೆ ನಡೆಸುತ್ತೇನೆ. "ಒಂದು ಆಳವಾದ ವಿಶ್ಲೇಷಣೆಯನ್ನು ಸಹ ನಡೆಸಲಾಯಿತು, ಅಲ್ಲಿ ಅಗತ್ಯವಿದ್ದೆಡೆ ನೀತಿಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದು ಸಾಮಾನ್ಯ ನಾಗರಿಕರಲ್ಲಿ ವಿಶ್ವಾಸದ ಭಾವನೆ ಸೃಷ್ಟಿಸಿತು. ಸಮಾಜದಲ್ಲಿ ಉತ್ತಮ ಆಡಳಿತದ ಅಳತೆಯು ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಇದು ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರದಲ್ಲಿ ಸ್ಥಾಪಿತವಾದ ನಿರ್ದಿಷ್ಠ ಹಾದಿಗಳನ್ನು ಅನುಸರಿಸುವ ಹಳೆಯ ಕಲ್ಪನೆಯನ್ನು SWAGAT ಬದಲಾಯಿಸಿದೆ. "ಆಡಳಿತವು ಹಳೆಯ ನಿಯಮಗಳು ಮತ್ತು ಕಾನೂನುಗಳಿಗೆ ಸೀಮಿತವಾಗಿಲ್ಲ, ಆದರೆ ನಾವೀನ್ಯತೆಗಳು ಮತ್ತು ಹೊಸ ಆಲೋಚನೆಗಳಿಂದ ಆಡಳಿತ ನಡೆಯುತ್ತದೆ ಎಂದು ನಾವು ಸಾಬೀತುಪಡಿಸಿದ್ದೇವೆ". 2003ರಲ್ಲಿ ಅಂದಿನ ಸರಕಾರಗಳು ಇ-ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಿರಲಿಲ್. ಪೇಪರ್ ಟ್ರೇಲ್‌ಗಳು ಮತ್ತು ಭೌತಿಕ ಫೈಲ್‌ಗಳು ಬಹಳಷ್ಟು ವಿಳಂಬಗಳಿಗೆ ಕಾರಣವಾಯಿತು. ಈ ಪರಿಸ್ಥಿತಿಯಲ್ಲಿ, ಗುಜರಾತ್ ಭವಿಷ್ಯದ ಕಲ್ಪನೆಗಳ ಮೇಲೆ ಕೆಲಸ ಮಾಡಿದೆ. ಇಂದು SWAGATನಂತಹ ವ್ಯವಸ್ಥೆಯು ಆಡಳಿತದ ಅನೇಕ ಪರಿಹಾರಗಳಿಗೆ ಸ್ಫೂರ್ತಿಯಾಗಿದೆ. ಅನೇಕ ರಾಜ್ಯಗಳು ಈ ರೀತಿಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರದಲ್ಲಿ ನಾವು ಸರ್ಕಾರದ ಕೆಲಸ ಪರಿಶೀಲಿಸಲು “ಪ್ರಗತಿ” ಎಂಬ ತಂತ್ರಜ್ಞಾನ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶವು ತ್ವರಿತ ಅಭಿವೃದ್ಧಿ ಕಾಣಲು  “ಪ್ರಗತಿ” ದೊಡ್ಡ ಪಾತ್ರ ವಹಿಸಿದೆ. ಈ ಪರಿಕಲ್ಪನೆಯು SWAGAT ಪರಿಕಲ್ಪನೆಯನ್ನು ಆಧರಿಸಿದೆ. ಪ್ರಗತಿ ಮೂಲಕ ಸುಮಾರು 16 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪರಿಶೀಲಿಸಿದ್ದೇನೆ. ಇದರಿಂದಾಗಿ ಅನೇಕ ಯೋಜನೆಗಳು ವೇಗ ಪಡೆದುಕೊಡಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಬೀಜವೊಂದು ನೂರಾರು ಕೊಂಬೆಗಳನ್ನು ಹೊಂದಿರುವ ಬೃಹತ್ ಮರವಾಗಿ ಮೊಳಕೆಯೊಡೆಯುವ ಸಾದೃಶ್ಯ ನೀಡಿದ ಪ್ರಧಾನಿ, ಸ್ವಾಗತ್ ಪರಿಕಲ್ಪನೆಯು ಆಡಳಿತದಲ್ಲಿ ಸಾವಿರಾರು ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನರಲ್ಲಿ ಹೊಸ ಜೀವನ ಮತ್ತು ಚೈತನ್ಯ ತುಂಬುವ ಮೂಲಕ ಆಡಳಿತದ ಉಪಕ್ರಮಗಳನ್ನು ಈ ರೀತಿ ಆಚರಿಸಲಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. "ಇದು ಸಾರ್ವಜನಿಕ ಆಧಾರಿತ ಆಡಳಿತದ ಮಾದರಿಯಾಗುವ ಮೂಲಕ ಸಾರ್ವಜನಿಕ ಸೇವೆಯನ್ನು ಮುಂದುವರಿಸುತ್ತದೆ" ಎಂದು ಪ್ರಧಾನ ಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

ಹಿನ್ನೆಲೆ

SWAGAT(ತಂತ್ರಜ್ಞಾನ ಅಳವಡಿಕೆ ಮೂಲಕ ಕುಂದುಕೊರತೆಗಳ ಪರಿಹಾರಕ್ಕೆ ರಾಜ್ಯವ್ಯಾಪಿ ಗಮನ) ಅನ್ನು ಪ್ರಧಾನಿ ಅವರು 2003 ಏಪ್ರಿಲ್ ನಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭಿಸಿದರು. ರಾಜ್ಯದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯಮಂತ್ರಿಯ ಆದ್ಯ ಕರ್ತವ್ಯ ಎಂಬ ನಂಬಿಕೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಕಲ್ಪದೊಂದಿಗೆ, ಸುಲಭವಾಗಿ ಜೀವನ ನಡೆಸುವುದನ್ನು  ಉತ್ತೇಜಿಸಲು ತಂತ್ರಜ್ಞಾನದ ಸಂಭಾವ್ಯತೆಯ ಆರಂಭಿಕ ಸಾಕ್ಷಾತ್ಕಾರದ ಜತೆಗೆ, ಅಂದಿನ ಸಿಎಂ ಮೋದಿ ಅವರು ಮೊದಲ ರೀತಿಯ ತಂತ್ರಜ್ಞಾನ ಆಧರಿತ ಕುಂದುಕೊರತೆ ಪರಿಹಾರ ಕಾರ್ಯಕ್ರಮ ಪ್ರಾರಂಭಿಸಿದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ, ನಾಗರಿಕರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ತಮ್ಮ ದಿನನಿತ್ಯದ ಕುಂದುಕೊರತೆಗಳನ್ನು ತ್ವರಿತವಾಗಿ, ಪರಿಣಾಮಕಾರಿಯಾಗಿ ಮತ್ತು ಸಮಯಕ್ಕೆ ಅನುಗುಣವಾಗಿ ಪರಿಹರಿಸಲು ತಂತ್ರಜ್ಞಾನ ಬಳಸುವುದಾಗಿದೆ. ಕಾಲಾ ನಂತರ SWAGAT, ಜನರ ಜೀವನದ ಮೇಲೆ ಪರಿವರ್ತನೀಯ  ಪರಿಣಾಮಗಳನ್ನು ತಂದಿತು. ಕಾಗದರಹಿತ, ಪಾರದರ್ಶಕ ಮತ್ತು ರಗಳೆಮುಕ್ತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಸಾಧನವಾಯಿತು.

ಸ್ವಾಗತ್ ನ ವಿಶಿಷ್ಟತೆಯೆಂದರೆ ಸಾಮಾನ್ಯ ನಾಗರಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗೆ ತಿಳಿಸಲು ಇದು ಸಹಾಯ ಮಾಡುತ್ತದೆ. ಇದು ಪ್ರತಿ ತಿಂಗಳ 4ನೇ ಗುರುವಾರ ನಡೆಯುತ್ತದೆ, ಇದರಲ್ಲಿ ಮುಖ್ಯಮಂತ್ರಿಗಳು ಕುಂದುಕೊರತೆ ಪರಿಹಾರಕ್ಕಾಗಿ ನಾಗರಿಕರೊಂದಿಗೆ ಸಂವಾದ ನಡೆಸುತ್ತಾರೆ. ಕುಂದುಕೊರತೆಗಳ ತ್ವರಿತ ಪರಿಹಾರದ ಮೂಲಕ ಜನರು ಮತ್ತು ಸರ್ಕಾರದ ನಡುವಿನ ಅಂತರ ಕಡಿಮೆ ಮಾಡುವಲ್ಲಿ ಕಾರ್ಯಕ್ರಮ ಪ್ರಮುಖವಾಗಿದೆ. ಕಾರ್ಯಕ್ರಮದ ಅಡಿ,, ಪ್ರತಿಯೊಬ್ಬ ಅರ್ಜಿದಾರರಿಗೆ ಪರಿಹಾರ  ಖಚಿತಪಡಿಸಿಕೊಳ್ಳಲಾಗುತ್ತದೆ. ಎಲ್ಲಾ ಅಪ್ಲಿಕೇಶನ್‌ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇಲ್ಲಿಯವರೆಗೆ ಸಲ್ಲಿಸಲಾದ 99%ಕ್ಕಿಂತ ಹೆಚ್ಚು ಕುಂದುಕೊರತೆಗಳನ್ನು ಪರಿಹರಿಸಲಾಗಿದೆ.

SWAGAT ಆನ್‌ಲೈನ್ ಕಾರ್ಯಕ್ರಮ 4 ಘಟಕಗಳನ್ನು ಹೊಂದಿದೆ: ರಾಜ್ಯ ಸ್ವಾಗತ, ಜಿಲ್ಲಾ ಸ್ವಾಗತ, ತಾಲೂಕು ಸ್ವಾಗತ ಮತ್ತು ಗ್ರಾಮ ಸ್ವಾಗತ. ರಾಜ್ಯ ಸ್ವಾಗತ್ ಸಮಯದಲ್ಲಿ ಮುಖ್ಯಮಂತ್ರಿ ಸ್ವತಃ ಸಾರ್ವಜನಿಕ ವಿಚಾರಣೆಗೆ ಹಾಜರಾಗುತ್ತಾರೆ. ಜಿಲ್ಲಾಧಿಕಾರಿಗಳು ಜಿಲ್ಲಾ ಸ್ವಾಗಾಟ್‌ನ ಮೇಲ್ವಿಚಾರಣೆ ನಡೆಸುತ್ತಾರೆ, ತಹಸೀಲ್ದಾರ್ ಮತ್ತು ವರ್ಗ-1 ಅಧಿಕಾರಿ ತಾಲೂಕಾ ಸ್ವಾಗತ್‌ನ ಮುಖ್ಯಸ್ಥರಾಗಿರುತ್ತಾರೆ. ಗ್ರಾಮ ಸ್ವಾಗತ್ ನಲ್ಲಿ, ನಾಗರಿಕರು ಪ್ರತಿ ತಿಂಗಳ 1ರಿಂದ 10ನೇ ತಾರೀಖಿನವರೆಗೆ ತಲಾತಿ/ಮಂತ್ರಿಗೆ ಅರ್ಜಿ ಸಲ್ಲಿಸುತ್ತಾರೆ. ಇವುಗಳನ್ನು ಪರಿಹಾರಕ್ಕಾಗಿ ತಾಲೂಕು ಸ್ವಾಗತ್ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ. ಹೆಚ್ಚುವರಿಯಾಗಿ, ಲೋಕ ಫರಿಯಾದ್ ಕಾರ್ಯಕ್ರಮವು ನಾಗರಿಕರಿಗಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಅವರು ತಮ್ಮ ಕುಂದುಕೊರತೆಗಳನ್ನು SWAGAT ಘಟಕದಲ್ಲಿ ಸಲ್ಲಿಸುತ್ತಾರೆ.

ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸ್ಪಂದಿಸುವಿಕೆಯನ್ನು ಸುಧಾರಿಸಲು 2010ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಸೇರಿದಂತೆ SWAGAT ಆನ್‌ಲೈನ್ ಕಾರ್ಯಕ್ರಮಕ್ಕೆ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ.

*****



(Release ID: 1922368) Visitor Counter : 132