ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಪ್ರದೇಶ, ಕೇರಳ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯುಗೆ ಏಪ್ರಿಲ್ 24 ಮತ್ತು 15ರಂದು ಭೇಟಿ ನೀಡಲಿರುವ ಪ್ರಧಾನಮಂತ್ರಿ


25 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಲಿರುವ ಪ್ರಧಾನಮಂತ್ರಿ 

ರೇವಾದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಪಂಚಾಯ್ತಿ ಮಟ್ಟದಲ್ಲಿ ಸಾರ್ವಜನಿಕ ದಾಸ್ತಾನಿಗಾಗಿ ಏಕೀಕೃತ ಇ ಗ್ರಾಮ ಸ್ವರಾಜ್ ಮತ್ತು ಜಿ.ಇ.ಎಂ. ಪೋರ್ಟಲ್ ಉದ್ಘಾಟಿಸಿ, ಸುಮಾರು 35 ಲಕ್ಷ ಸ್ವಾಮಿತ್ವ ಸ್ವತ್ತಿನ ಕಾರ್ಡ್ ಹಸ್ತಾಂತರಿಸಲಿರುವ ಪ್ರಧಾನಮಂತ್ರಿ

ಪಿಎಂಜಿವೈ – ಗ್ರಾಮೀಣ ಅಡಿ 4 ಲಕ್ಷ ಫಲಾನುಭವಿಗಳ ಗೃಹ ಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿ 

ಕೇರಳದ ಪ್ರಥಮ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಮಂತ್ರಿ

ಕೋಚ್ಚಿ ಜಲ ಮೆಟ್ರೋ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಸಿಲ್ವಾಸಾದಲ್ಲಿ ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಡಮನ್ ನಲ್ಲಿ ದೇವ್ಕಾ ಸಮುದ್ರ ಮುಂಚಾಚು (ಸಮುದ್ರದ  ಮುಂದಿನ ತೀರ)  ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

Posted On: 21 APR 2023 3:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಏಪ್ರಿಲ್  24 ಮತ್ತು 25ರಂದು ಮಧ್ಯಪ್ರದೇಶ, ಕೇರಳ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯುಗೆ ಭೇಟಿ ನೀಡಲಿದ್ದಾರೆ. 

ಏಪ್ರಿಲ್ 24ರಂದು ಬೆಳಗ್ಗೆ ಸುಮಾರು 11.30ರ ಹೊತ್ತಿಗೆ ಮಧ್ಯಪ್ರದೇಶದ ರೇವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿಯಾಗಲಿದ್ದಾರೆ. ಅಲ್ಲಿ ಅವರು ಸುಮಾರು 17 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. 

ಏಪ್ರಿಲ್ 25ರಂದು ಸುಮಾರು ಬೆಳಗ್ಗೆ 10.30ರ ಹೊತ್ತಿಗೆ ತಿರುವನಂತಪುರದ ಕೇಂದ್ರ ರೈಲು ನಿಲ್ದಾಣದಲ್ಲಿ ಅವರು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ನಂತರ 11 ಗಂಟೆಯ ಸುಮಾರಿಗೆ ಪ್ರಧಾನಮಂತ್ರಿಯವರು ತಿರುವನಂತಪುರಂನಲ್ಲಿ, ಸುಮಾರು 3,200 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.  

ಸಂಜೆ 4 ಗಂಟೆಯ ಹೊತ್ತಿಗೆ ಪ್ರಧಾನಮಂತ್ರಿಯವರು ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಲಿದ್ದು, ದಾದ್ರಾ ಮತ್ತು ನಗರ್ ಹವೇಲಿಯ ಸಿಲ್ವಾಸದಲ್ಲಿ ಸುಮಾರು 4.30ರ ಹೊತ್ತಿಗೆ 4850 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ತರುವಾಯ ಸುಮಾರು 6 ಗಂಟೆಯ ಹೊತ್ತಿಗೆ ಡಮನ್ ನಲ್ಲಿ ಅವರು ದೇವ್ಕಾ ಸಮುದ್ರ ಮುಂಚಾಚನ್ನು ಉದ್ಘಾಟಿಸಲಿದ್ದಾರೆ. 

ರೇವಾದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ದೇಶಾದ್ಯಂತ ಎಲ್ಲಾ ಗ್ರಾಮ ಸಭೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ, ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕ ದಾಸ್ತಾನಿಗಾಗಿ ಏಕೀಕೃತ ಇಗ್ರಾಮ ಸ್ವರಾಜ್ ಮತ್ತು ಜಿ.ಇ.ಎಂ. ಪೋರ್ಟಲ್ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಇ-ಗ್ರಾಮಸ್ವರಾಜ್ - ಸರ್ಕಾರಿ ಇ-ಮಾರುಕಟ್ಟೆ ತಾಣ ಏಕೀಕರಣವು ಇಗ್ರಾಮ ಸ್ವರಾಜ್ ವೇದಿಕೆಯನ್ನು ನಿಯಂತ್ರಿಸುವ ಮೂಲಕ ಪಂಚಾಯತಿಗಳಿಗೆ ತಮ್ಮ ಸರಕುಗಳು ಮತ್ತು ಸೇವೆಗಳನ್ನು ಜಿ.ಇ.ಎಂ. ಮೂಲಕ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಸರ್ಕಾರದ ಯೋಜನೆಗಳ ಗರಿಷ್ಠತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಮುನ್ನಡೆಸುವ ಗುರಿಯೊಂದಿಗೆ ಪ್ರಧಾನಮಂತ್ರಿಯವರು “विकास की ओर साझे क़दम”  ಎಂಬ ಹೆಸರಿನ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನದ ಧ್ಯೇಯವಾಕ್ಯ ಸಮಗ್ರ ಅಭಿವೃದ್ಧಿಯಾಗಿದ್ದು, ಇದು ಕೊನೆಯ ಮೈಲಿಯನ್ನೂ ತಲುಪುವತ್ತ ಗಮನ ಹರಿಸುತ್ತದೆ. 

ಪ್ರಧಾನಮಂತ್ರಿಯವರು ಸುಮಾರು 35 ಲಕ್ಷ ಸ್ವಾಮಿತ್ವ ಸ್ವತ್ತಿನ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮದ ನಂತರ ದೇಶದಲ್ಲಿ ಸ್ವಾಮಿತ್ವ ಯೋಜನೆಯಡಿ 1.25 ಕೋಟಿ ಸ್ವತ್ತಿನ ಕಾರ್ಡ್ ಗಳನ್ನು ವಿತರಿಸಿದಂತೆ ಆಗುತ್ತದೆ. 

'ಸರ್ವರಿಗೂ ಸೂರು' ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ವಸತಿ ಯೋಜನೆ-ಗ್ರಾಮೀಣ ಅಡಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ 'ಗೃಹ ಪ್ರವೇಶ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿಯವರು ಸುಮಾರು 2300 ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನು ನೆರವೇರಿಸಲಿದ್ದಾರೆ.  ದೇಶಕ್ಕೆ ಸಮರ್ಪಿಸಲಾಗುವ ಯೋಜನೆಗಳಲ್ಲಿ ಮಧ್ಯಪ್ರದೇಶದಲ್ಲಿ ಶೇ. 100ರಷ್ಟು ರೈಲ್ವೆ ಮಾರ್ಗ ವಿದ್ಯುದ್ದೀಕರಣ ಸೇರಿದಂತೆ ವಿವಿಧ ಜೋಡಿಮಾರ್ಗ, ಗೇಜ್ ಪರಿವರ್ತನೆ ಮತ್ತು ವಿದ್ಯುದ್ದೀಕರಣ ಯೋಜನೆಗಳು ಸೇರಿವೆ. ಪ್ರಧಾನಮಂತ್ರಿಯವರು ಗ್ವಾಲಿಯರ್ ನಿಲ್ದಾಣದ ಮರು ಅಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಜಲ ಜೀವನ್ ಅಭಿಯಾನದ ಅಡಿಯಲ್ಲಿ ಸುಮಾರು 7,000 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ತಿರುವನಂತಪುರಂನಲ್ಲಿ ಪ್ರಧಾನ ಮಂತ್ರಿ

ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಕೇರಳದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಲ್ಲಿ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಲಿದ್ದಾರೆ. ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪಥನಂತಿಟ್ಟ, ಮಲಪ್ಪುರಂ, ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈ ರೈಲು ಸಂಚರಿಸಲಿದೆ.

ಪ್ರಧಾನಮಂತ್ರಿಯವರು 3200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ಕೊಚ್ಚಿ ಜಲ ಮೆಟ್ರೋವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕೊಚ್ಚಿ ನಗರದೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರಿಡ್ ದೋಣಿಗಳ ಮೂಲಕ ಕೊಚ್ಚಿ ಸುತ್ತಮುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುವ ವಿನೂತನ ಯೋಜನೆಯಾಗಿದೆ. ಕೊಚ್ಚಿ ಜಲ ಮೆಟ್ರೋ ಜೊತೆಗೆ, ದಿಂಡಿಗಲ್-ಪಳನಿ-ಪಾಲಕ್ಕಾಡ್ ವಿಭಾಗದ ರೈಲು ವಿದ್ಯುದೀಕರಣ ಮಾರ್ಗವನ್ನೂ ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಿರುವನಂತಪುರಂ, ಕೋಝಿಕೋಡ್, ವರ್ಕಲಾ ಶಿವಗಿರಿ ರೈಲ್ವೆ ನಿಲ್ದಾಣಗಳ ಮರು ಅಭಿವೃದ್ಧಿ; ನೆಮೊನ್ ಮತ್ತು ಕೊಚುವೇಲಿ ಸೇರಿದಂತೆ ತಿರುವನಂತಪುರಂ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ತಿರುವನಂತಪುರಂ-ಶೊರ್ನೂರ್ ವಿಭಾಗೀಯ ವೇಗವನ್ನು ಹೆಚ್ಚಿಸುವುದೂ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಇದರ ಜೊತೆಗೆ ಪ್ರಧಾನಮಂತ್ರಿಯವರು ತಿರುವನಂತಪುರಂನಲ್ಲಿ ಡಿಜಿಟಲ್ ವಿಜ್ಞಾನ ಉದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಡಿಜಿಟಲ್ ವಿಜ್ಞಾನ ಉದ್ಯನವನ್ನು ಶೈಕ್ಷಣಿಕ ಸಹಯೋಗದೊಂದಿಗೆ ಉದ್ಯಮ ಮತ್ತು ವ್ಯವಹಾರ ಘಟಕಗಳು ಡಿಜಿಟಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವ ಪ್ರಮುಖ ಸಂಶೋಧನಾ ಸೌಲಭ್ಯವಾಗಿ ರೂಪಿಸಲಾಗಿದೆ.  ಮೂರನೇ ತಲೆಮಾರಿನ ವಿಜ್ಞಾನ ಉದ್ಯಾನವಾಗಿ, ಡಿಜಿಟಲ್ ಸೈನ್ಸ್ ಪಾರ್ಕ್ ಎಐ, ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಸ್ಮಾರ್ಟ್ ಮೆಟೀರಿಯಲ್ಸ್ ಮುಂತಾದ ಇಂಡಸ್ಟ್ರಿ 4.0 ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಉತ್ಪನ್ನಗಳ ಅಭಿವೃದ್ಧಿಯನ್ನು ಬೆಂಬಲಿಸಲು ಸಾಮಾನ್ಯ ಸೌಲಭ್ಯಗಳನ್ನು ಹೊಂದಿರುತ್ತದೆ. ಅತ್ಯಾಧುನಿಕ ಮೂಲಭೂತ ಮೂಲಸೌಕರ್ಯವು ಕೈಗಾರಿಕೆಗಳಿಂದ ಉನ್ನತ ಮಟ್ಟದ ಅನ್ವಯಿಕ ಸಂಶೋಧನೆ ಮತ್ತು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಉತ್ಪನ್ನಗಳ ಸಹ-ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಯೋಜನೆಯ ಮೊದಲ ಹಂತಕ್ಕೆ ಆರಂಭಿಕ ಹೂಡಿಕೆ ಸುಮಾರು 200 ಕೋಟಿ ರೂ.ಗಳಾಗಿದ್ದು, ಒಟ್ಟು ಯೋಜನಾ ವೆಚ್ಚ ಸುಮಾರು 1515 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. 

ಸಿಲ್ವಾಸ್ಸಾ ಮತ್ತು ದಮನ್ ನಲ್ಲಿ ಪ್ರಧಾನ ಮಂತ್ರಿ

ಸಿಲ್ವಾಸ್ಸಾದಲ್ಲಿರುವ ನಮೋ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಪ್ರಧಾನಮಂತ್ರಿಯವರು ಭೇಟಿ ನೀಡಿ  ಅದನ್ನು ಲೋಕಾರ್ಪಣೆ ಮಾಡಲಿದ್ದಾರೆ, ಇದಕ್ಕೆ 2019ರ ಜನವರಿಯಲ್ಲಿ ಪ್ರಧಾನಮಂತ್ರಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು ನಾಗರಿಕರಿಗೆ ಆರೋಗ್ಯ ಸೇವೆಗಳಲ್ಲಿ ಸುಧಾರಣೆಯನ್ನು ತರುತ್ತದೆ. ಅತ್ಯಾಧುನಿಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚಿನ ಸಂಶೋಧನಾ ಕೇಂದ್ರಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಿಗೆ ಪ್ರವೇಶವನ್ನು ಹೊಂದಿರುವ 24×7 ಕೇಂದ್ರ ಗ್ರಂಥಾಲಯ, ವಿಶೇಷ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಪ್ರಯೋಗಾಲಯಗಳು, ಸ್ಮಾರ್ಟ್ ಉಪನ್ಯಾಸ ಸಭಾಂಗಣಗಳು, ಸಂಶೋಧನಾ ಪ್ರಯೋಗಾಲಯಗಳು, ಅಂಗರಚನಾಶಾಸ್ತ್ರ ವಸ್ತುಸಂಗ್ರಹಾಲಯ, ಕ್ಲಬ್ ಹೌಸ್, ಕ್ರೀಡಾ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳು ಮತ್ತು ಬೋಧಕ ಸದಸ್ಯರ ನಿವಾಸಗಳೂ ಸೇರಿವೆ.

ತದನಂತರ ಪ್ರಧಾನಮಂತ್ರಿಯವರು ಸಿಲ್ವಾಸ್ಸಾದ ಸಯ್ಲಿ ಮೈದಾನದಲ್ಲಿ 4850 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 96 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳಲ್ಲಿ ದಾದ್ರಾ ಮತ್ತು ನಗರ್ ಹವೇಲಿ ಜಿಲ್ಲೆಯ ಮೊರ್ಖಾಲ್, ಖೇರ್ಡಿ, ಸಿಂಧೋನಿ ಮತ್ತು ಮಸತ್ ಸರ್ಕಾರಿ ಶಾಲೆಗಳು ಸೇರಿವೆ;  ದಾದ್ರಾ ಮತ್ತು ನಗರ್ ಹವೇಲಿ ಜಿಲ್ಲೆಯ ವಿವಿಧ ರಸ್ತೆಗಳ ಸೌಂದದರ್ಯೀಕರಣ, ಬಲವರ್ಧನೆ ಮತ್ತು ಅಗಲೀಕರಣ; ಅಂಬಾವಾಡಿ, ಪರಿಯಾರಿ, ದಮನ್ವಾಡಾ, ಖರಿವಾಡ್ ಮತ್ತು ದಮನ್ ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು;  ಮೋತಿ ದಮನ್ ಮತ್ತು ನಾನಿ ದಮನ್ ನಲ್ಲಿನ ಮೀನು ಮಾರುಕಟ್ಟೆ ಮತ್ತು ಮಾರುಕಟ್ಟೆ ಸಮುಚ್ಛಯ ಮತ್ತು ನಾನಿ ದಮನ್ ನಲ್ಲಿ ನೀರು ಸರಬರಾಜು ಯೋಜನೆಯನ್ನು ತ್ವರಿತಗೊಳಿಸುವುದನ್ನೂ ಒಳಗೊಂಡಿದೆ.

ಪ್ರಧಾನಮಂತ್ರಿಯವರು ದಮನ್ ನಲ್ಲಿ ದೇವ್ಕಾ ಸಮುದ್ರ ಮುಂಚಾಚು (ಸಮುದ್ರದ  ಮುಂದಿನ ತೀರ) ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 165 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 5.45 ಕಿ.ಮೀ ಸಮುದ್ರ ತೀರವು ದೇಶದ ಕರಾವಳಿ ವಾಯುವಿಹಾರಗಳಲ್ಲಿ ಒಂದಾಗಲಿದೆ.  ಸಮುದ್ರ ಮುಂಚಾಚು (ಸಮುದ್ರದ  ಮುಂದಿನ ತೀರ)  ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಈ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ವಿಶ್ರಾಂತಿ ಮತ್ತು ಮನರಂಜನಾ ಚಟುವಟಿಕೆಗಳ ಕೇಂದ್ರವಾಗಿದೆ. ಸಮುದ್ರ ಮುಂಚಾಚುವನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗಿದೆ. ಇದು ಸ್ಮಾರ್ಟ್ ವಿದ್ಯುದೀಕರಣ, ವಾಹನ ನಿಲುಗಡೆ ಸೌಲಭ್ಯಗಳು, ಉದ್ಯಾನಗಳು, ಆಹಾರ ಮಳಿಗೆಗಳು, ಮನರಂಜನಾ ಪ್ರದೇಶಗಳು ಮತ್ತು ಭವಿಷ್ಯದಲ್ಲಿ ಐಷಾರಾಮಿ ಡೇರೆ ನಗರಗಳ ಅವಕಾಶವನ್ನು ಒಳಗೊಂಡಿದೆ.


(Release ID: 1921545) Visitor Counter : 125