ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಮನ್ಸುಖ್ ಮಾಂಡವಿಯಾ ಅವರು ರಾಜ್ಯಗಳಲ್ಲಿ ಕೋವಿಡ್-19 ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಮತ್ತು ಕೋವಿಡ್-19 ಲಸಿಕೆ ನೀಡಿಕೆ ಬಗ್ಗೆ ಪ್ರಗತಿ  ಪರಿಶೀಲನೆ ನಡೆಸಿದರು

 

ಕೇಂದ್ರ ಮತ್ತು ರಾಜ್ಯಗಳು ಹಿಂದೆ ಸೋಂಕು ಉಲ್ಬಣ ಸಂದರ್ಭಗಳಲ್ಲಿ ಮಾಡಿದಂತೆ ಸಹಕಾರಿ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ: ಡಾ. ಮನ್ಸುಖ್ ಮಾಂಡವಿಯಾ

"ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕೆ ಹಾಗೂ ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆಯ ಐದು ಹಂತದ ಕಾರ್ಯತಂತ್ರವು ಕೋವಿಡ್ ನಿರ್ವಹಣೆಗೆ ಪ್ರಧಾನ ನೀತಿಯಾಗಿ ಮುಂದುವರಿಯುತ್ತದೆ"

ಏಪ್ರಿಲ್ 8 ಮತ್ತು 9 ರಂದು ಜಿಲ್ಲಾಡಳಿತ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳೊಂದಿಗೆ ಸನ್ನದ್ಧತೆಯನ್ನು ಪರಿಶೀಲಿಸಲು ರಾಜ್ಯ ಆರೋಗ್ಯ ಸಚಿವರಿಗೆ ಸಚಿವರ ಮನವಿ

ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಏಪ್ರಿಲ್ 10 ಮತ್ತು 11ರಂದು ಅಣಕು ಸನ್ನದ್ಧತಾ ಪ್ರದರ್ಶನ ನಡೆಸಲು ರಾಜ್ಯಗಳಿಗೆ ಸೂಚಿಸಲಾಗಿದೆ; ಅಣಕು ಸನ್ನದ್ಧತೆ ಪ್ರದರ್ಶನಗಳನ್ನು ಪರಿಶೀಲಿಸಲು ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ರಾಜ್ಯ ಆರೋಗ್ಯ ಸಚಿವರಿಗೆ ಸೂಚಿಸಲಾಯಿತು

ಕೋವಿಡ್-19 ನಿರ್ವಹಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಜಾಗರೂಕರಾಗಿರಲು ರಾಜ್ಯಗಳಿಗೆ ಸಲಹೆ ನೀಡಲಾಯಿತು

ತುರ್ತು ʻಹಾಟ್‌ಸ್ಪಾಟ್‌ʼಗಳನ್ನು ಗುರುತಿಸಲು; ಪರೀಕ್ಷೆ, ಲಸಿಕೆ ನೀಡಿಕೆ ಹೆಚ್ಚಿಸಲು ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಯಿತು

Posted On: 07 APR 2023 2:47PM by PIB Bengaluru

"ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಹಿಂದಿನ ಸೋಂಕು ಉಲ್ಬಣ ಸಂದರ್ಭದಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯಗಳು ಸಹಯೋಗದ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ,ʼʼ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ತಿಳಿಸಿದರು. ಇಂದು ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು / ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ವರ್ಚುವಲ್ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆಲವು ರಾಜ್ಯಗಳಲ್ಲಿ ಇತ್ತೀಚೆಗೆ ಕೋವಿಡ್‌ ಪ್ರಕರಣಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಸೋಂಕು ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಹಾಗೂ ರಾಷ್ಟ್ರೀಯ ಕೋವಿಡ್ -19 ಲಸಿಕಾ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಅವರ ಉಪಸ್ಥಿತಿಯಲ್ಲಿ ವರ್ಚುವಲ್ ಸಭೆ ನಡೆಯಿತು.

ರಾಜ್ಯಗಳು ಜಾಗರೂಕರಾಗಿರಬೇಕು ಮತ್ತು ಕೋವಿಡ್-19 ನಿರ್ವಹಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಸಲಹೆ ನೀಡಿದರು. 2023ರ ಏಪ್ರಿಲ್ 10 ಮತ್ತು 11ರಂದು ಎಲ್ಲ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣಕು ಸನ್ನದ್ಧತಾ ಪ್ರದರ್ಶನ ನಡೆಸುವಂತೆ ಹಾಗೂ 2023ರ ಏಪ್ರಿಲ್ 8 ಮತ್ತು 9ರಂದು ಜಿಲ್ಲಾಡಳಿತಗಳು ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಸೂಚಿಸಿದರು. ʻಐಎಲ್ಐʼ/ʻಎಸ್ಎಆರ್‌ಐʼ ಪ್ರಕರಣಗಳ ಏರಿಳಿತ ಪ್ರವೃತ್ತಿಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಹಾಗೂ ಕೋವಿಡ್-19 ಮತ್ತು ಇನ್‌ಫ್ಲುಯೆಂಜಾ ಪರೀಕ್ಷೆಗೆ ಸಾಕಷ್ಟು ಮಾದರಿಗಳನ್ನು ಕಳುಹಿಸುವ ಮೂಲಕ ʻಹಾಟ್‌ಸ್ಪಾಟ್‌ʼಗಳನ್ನು ಮುಂಚಿತವಾಗಿ ಗುರುತಿಸುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು. ಇದೇ ವೇಳೆ, ಪಾಸಿಟಿವ್‌ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ ಹೆಚ್ಚಿಸುವಂತೆ ಸೂಚಿಸಿದರು. 

23 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪ್ರತಿ ದಶಲಕ್ಷಕ್ಕೆ ನಡೆಸಿದ ಸರಾಸರಿ ಪರೀಕ್ಷೆಗಳ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಹೊಸ ಕೋವಿಡ್ ರೂಪಾಂತರಗಳ ಹೊರತಾಗಿಯೂ, 'ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕೆ ಮತ್ತು ಕೋವಿಡ್ ಸೂಕ್ತ ನಡೆವಳಿಕೆಯ ಅನುಸರಣೆ' ಎಂಬ ಐದು ಹಂತಗಳ ಕಾರ್ಯತಂತ್ರವು ಕೋವಿಡ್ ನಿರ್ವಹಣೆಗೆ ಕಾರ್ಯತಂತ್ರವಾಗಿ ಮುಂದುವರಿಯುತ್ತದೆ ಎಂದು ಡಾ.ಮಾಂಡವಿಯಾ ಹೇಳಿದರು. ಇದರಿಂದ ಸೂಕ್ತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.  2023ರ ಏಪ್ರಿಲ್ 7ಕ್ಕೆ ಕೊನೆಗೊಳ್ಳುವ ವಾರದ ಹೊತ್ತಿಗೆ, ಪ್ರಸ್ತುತ ಇರುವ ಪ್ರತಿ ದಶಲಕ್ಷಕ್ಕೆ 100 ಪರೀಕ್ಷೆಗಳ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಯಿತು. ಪರೀಕ್ಷೆಗಳಲ್ಲಿ ʻಆರ್‌ಟಿ-ಪಿಸಿಆರ್‌ʼ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸಲಹೆ ನೀಡಲಾಯಿತು.
 
ಭಾರತದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣವು ಕ್ರಮೇಣ ಏರಿಕೆಯಾಗುತ್ತಿರುವ ಬಗ್ಗೆ ರಾಜ್ಯಗಳಿಗೆ ವಿವರಿಸಲಾಯಿತು. 2023ರ ಮಾರ್ಚ್ 17ಕ್ಕೆ ಕೊನೆಗೊಂಡ ವಾರದಲ್ಲಿ  571 ಇದ್ದ ಸರಾಸರಿ ದೈನಂದಿನ ಪ್ರಕರಣಗಳ ಸಂಖ್ಯೆಯು 2023ರ ಏಪ್ರಿಲ್ 07ಕ್ಕೆ ಕೊನೆಗೊಂಡ ವಾರದಲ್ಲಿ 4,188ಕ್ಕೆ ಏರಿದೆ; ಮತ್ತು 2023ರ ಏಪ್ರಿಲ್  7ಕ್ಕೆ ಕೊನೆಗೊಂಡ ವಾರದಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರವು ಶೇ.3.02ಕ್ಕೆ ಏರಿದೆ ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಲಾಯಿತು. ಇದೇ ವೇಳೆ, ಜಾಗತಿಕವಾಗಿ 88,503 ದೈನಂದಿನ ಸರಾಸರಿ ಪ್ರಕರಣಗಳು ವರದಿಯಾಗಿವೆ, ಕಳೆದ ಒಂದು ವಾರದಲ್ಲಿ ಜಾಗತಿಕ ಪ್ರಕರಣಗಳಲ್ಲಿ ಅಗ್ರ ಐದು ದೇಶಗಳ ಪಾಲು ಶೇ.62.6 ರಷ್ಟಿದೆ ಎಂದು ಮಾಹಿತಿ ನೀಡಲಾಯಿತು. 

ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯು ʻಎಕ್ಸ್‌ಬಿಬಿ.1.5ʼ ಅನ್ನು ʻಆಸಕ್ತಿಕರ ರೂಪಾಂತರಿ(ವಿಒಐ)ʼ ಎಂದು ಗುರುತಿಸಿದ್ದು, ಅದರ ಮೇಲೆ ನಿಗಾ ಇರಿಸಿದೆ. ಜೊತೆಗೆ ಇತರ ಆರು ರೂಪಾಂತರಗಳ ಮೇಲೂ ನಿಕಟವಾಗಿ ನಿಗಾ ಇರಿಸಿದೆ(ಬಿಕ್ಯೂ.1, ಬಿಎ.2.75, ಸಿಎಚ್.1.1, ಎಕ್ಸ್‌ಬಿಬಿ, ಎಕ್ಸ್‌ಬಿಎಫ್ ಮತ್ತು ಎಕ್ಸ್‌ಬಿಬಿ.1.16). ಒಮಿಕ್ರಾನ್ ಮತ್ತು ಅದರ ಉಪ-ತಳಿಗಳು ಪ್ರಧಾನ ರೂಪಾಂತರಿಗಳಾಗಿ ಮುಂದುವರಿದಿದ್ದರೂ, ಪತ್ತೆಯಾಗಿರುವ ಬಹುತೇಕ ರೂಪಾಂತರಿಗಳು  ಹೆಚ್ಚು ಅಥವಾ ಗಮನಾರ್ಹ ಹರಡುವಿಕೆ ಹೊಂದಿಲ್ಲ. ಅವುಗಳಿಂದ ಉಂಟಾಗುವ ರೋಗದ ತೀವ್ರತೆಯೂ ಕಡಿಮೆ.  ʻಎಕ್ಸ್‌ಬಿಬಿ.1.16ʼ ರೂಪಾಂತರಿಯ ಹರಡುವಿಕೆಯು ಫೆಬ್ರವರಿಯಲ್ಲಿ ಶೆ.21.6 ರಷ್ಟು ಇದ್ದದ್ದು ಮಾರ್ಚ್, 2023ರಲ್ಲಿ ಶೇ. 35.8ಕ್ಕೆ ಏರಿದೆ. ಆದಾಗ್ಯೂ, ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಸಾವಿನ ಹೆಚ್ಚಳದ ಯಾವುದೇ ಪುರಾವೆಗಳು ವರದಿಯಾಗಿಲ್ಲ.

ಭಾರತವು ಶೇ. 90ಕ್ಕಿಂತಲೂ ಹೆಚ್ಚು ಪ್ರಾಥಮಿಕ ಲಸಿಕೆ ನೀಡಿಕೆಯ ಸಾಧನೆ ಮಾಡಿದ್ದರೂ, ಮುನ್ನೆಚ್ಚರಿಕೆ ಡೋಸ್‌ ವ್ಯಾಪ್ತಿ ಬಹಳ ಕಡಿಮೆ ಎಂದು ಸಭೆಯ ಗಮನಕ್ಕೆ ತರಲಾಯಿತು. ಎಲ್ಲ ಅರ್ಹ ಜನಸಂಖ್ಯೆಗೆ, ವಿಶೇಷವಾಗಿ ವೃದ್ಧರು ಮತ್ತು ದೈಹಿಕವಾಗಿ ದುರ್ಬಲರಿಗೆ ಲಸಿಕೆ ನೀಡುವುದನ್ನು ಹೆಚ್ಚಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವರು ಸಲಹೆ ನೀಡಿದರು.

ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಜಿಲ್ಲೆಗಳು ಶೇ. 10ಕ್ಕಿಂತ ಹೆಚ್ಚು ಪಾಸಿಟಿವಿಟಿ ವರದಿ ಮಾಡುತ್ತಿವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ದೆಹಲಿ, ಹಿಮಾಚಲಪ್ರದೇಶ, ತಮಿಳುನಾಡು ಮತ್ತು ಹರಿಯಾಣ ರಾಜ್ಯಗಳಲ್ಲಿ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಿರುವುದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಹೆಚ್ಚಿಸುವ ಅಗತ್ಯವನ್ನು ಡಾ.ಮಾಂಡವಿಯಾ ಒತ್ತಿ ಹೇಳಿದರು. ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳ ಸನ್ನದ್ಧತೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಪರಿಶೀಲಿಸುವಂತೆ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರಿಗೆ ಮನವಿ ಮಾಡಿದರು. ಇದೇ ವೇಳೆ, ಅಗತ್ಯ ಔಷಧಿಗಳ ಸಮರ್ಪಕ ಸಂಗ್ರಹವನ್ನು ಖಾತರಿಪಡಿಸಿಕೊಳ್ಳುವಂತೆ ಸೂಚಿಸಿದರು. ʻಕೋವಿಡ್ ಇಂಡಿಯಾ ಪೋರ್ಟಲ್‌ʼನಲ್ಲಿ ತಮ್ಮ ಕೋವಿಡ್ ದತ್ತಾಂಶವನ್ನು ನಿಯಮಿತವಾಗಿ ನವೀಕರಿಸುವಂತೆ ರಾಜ್ಯಗಳಿಗೆ ತಿಳಿಸಲಾಯಿತು.

ಜಾಗತಿಕ ಕೋವಿಡ್-19 ಪರಿಸ್ಥಿತಿ ಮತ್ತು ದೇಶೀಯ ಸನ್ನಿವೇಶದ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವರಿಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ʻಐಸಿಎಂಆರ್ʼ, 2023ರ ಮಾರ್ಚ್ 25ರಂದು ಎಲ್ಲ ರಾಜ್ಯಗಳಿಗೆ ಹೊರಡಿಸಿದ ಜಂಟಿ ಮಾರ್ಗಸೂಚಿಯ ಬಗ್ಗೆ ಗಮನ ಸೆಳೆಯಲಾಯಿತು. ʻಇನ್‌ಫ್ಲೂಯೆಂಜಾʼ ಮತ್ತು ಕೋವಿಡ್-19 ಪ್ರಕರಣಗಳು ಉಲ್ಬಣವಾಗದಂತೆ ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಆರೋಗ್ಯ ತ್ವರಿತ ಪ್ರತಿಕ್ರಿಯೆಯನ್ನು ಖಾತರಿಪಡಿಸಲು ಈ ಮಾರ್ಗಸೂಚಿಯು ಕರೆ ನೀಡಿತು. ಅಲ್ಲದೆ, ಶಂಕಿತ ಮತ್ತು ಪಾಸಿಟಿವ್‌ ಪ್ರಕರಣಗಳ ಮುಂಚಿತ ಪತ್ತೆ, ಪ್ರತ್ಯೇಕತೆ, ಪರೀಕ್ಷೆ ಹಾಗೂ ಸಮಯೋಚಿತ ನಿರ್ವಹಣೆಯ ಮೂಲಕ ಹೊಸ ʻಸಾರ್ಸ್-ಕೋವ್-2ʼ ರೂಪಾಂತರಿಗಳ ಪ್ರಸರಣ ತಡೆಯಲು ಈ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವರು ಮನವಿ ಮಾಡಿದರು. ಆಸ್ಪತ್ರೆಯ ಮೂಲಸೌಕರ್ಯಗಳನ್ನು ಹೆಚ್ಚಿಸುವುದು; ಪರೀಕ್ಷೆಯನ್ನು ಹೆಚ್ಚಿಸುವುದು ಸೇರಿದಂತೆ ಕೋವಿಡ್ ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಸಮಗ್ರ ಮತ್ತು ವಿವರವಾದ ಚರ್ಚೆ ನಡೆಯಿತು.

ಡಾ.ಭಾರತಿ ಪ್ರವೀಣ್ ಪವಾರ್ ಅವರು ʻಕೋವಿಡ್-19ʼಕ್ಕೆ ಸಂಬಂಧಿಸಿದಂತೆ ಸಮಯೋಚಿತ ಸನ್ನದ್ಧತೆ ಮತ್ತು ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದರು. ಆರೋಗ್ಯ ಮೂಲಸೌಕರ್ಯವನ್ನು ಪುನರುಜ್ಜೀವಗೊಳಿಸಲು ಆದ್ಯತೆಯ ಮೇರೆಗೆ ʻತುರ್ತು ಕೋವಿಡ್‌ ಪ್ರತಿಕ್ರಿಯಾ ಪ್ಯಾಕೇಜ್‌ -2’(ECRP-II)ರಲ್ಲಿನ ತಮ್ಮ ಪಾಲನ್ನು ಬಳಸಿಕೊಳ್ಳುವಂತೆ ಅವರು ರಾಜ್ಯಗಳನ್ನು ಒತ್ತಾಯಿಸಿದರು. ಪ್ರವಾಸೋದ್ಯಮದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ತಮ್ಮ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಬಲಪಡಿಸಬೇಕು ಜೊತೆಗೆ ನಿಗಾ ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದರು.

ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮಯೋಚಿತ ಪರಿಶೀಲನಾ ಸಭೆಗಳು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಗಳನ್ನು ರಾಜ್ಯಗಳು ಶ್ಲಾಘಿಸಿದವು. ಕೋವಿಡ್-19 ಸೋಂಕಿನ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಕೇಂದ್ರದೊಂದಿಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ರಾಜ್ಯಗಳು ಭರವಸೆ ನೀಡಿದವು. ಅಗತ್ಯ ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತಿರುವುದಾಗಿ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ರಾಜ್ಯಗಳು ಮಾಹಿತಿ ನೀಡಿದವು.  2023ರ  ಏಪ್ರಿಲ್ 10 ಮತ್ತು 11 ರಂದು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಆಸ್ಪತ್ರೆ ಮೂಲಸೌಕರ್ಯಗಳ ಸಿದ್ಧತೆಗಾಗಿ ಅಣಕು ಸನ್ನದ್ಧತಾ ಪ್ರದರ್ಶನ ನಡೆಸುವುದಾಗಿ ರಾಜ್ಯಗಳು ಭರವಸೆ ನೀಡಿವೆ.

ಪುದುಚೇರಿಯ ಮುಖ್ಯಮಂತ್ರಿ ಶ್ರೀ ಎನ್.ರಂಗಸ್ವಾಮಿ, ಉತ್ತರಾಖಂಡದ ಆರೋಗ್ಯ ಸಚಿವ ಶ್ರೀ ಧನ್ ಸಿಂಗ್ ರಾವತ್, ಅಸ್ಸಾಂ ಆರೋಗ್ಯ ಸಚಿವ ಶ್ರೀ ಕೇಶಬ್ ಮಹಾಂತ,  ಗೋವಾ ಆರೋಗ್ಯ ಸಚಿವ ಶ್ರೀ ವಿಶ್ವಜಿತ್ ರಾಣೆ, ಜಾರ್ಖಂಡ್ ಆರೋಗ್ಯ ಸಚಿವ ಶ್ರೀ ಬನ್ನಾ ಗುಪ್ತಾ, ಮಧ್ಯಪ್ರದೇಶದ ಆರೋಗ್ಯ ಸಚಿವ ಶ್ರೀ ಪ್ರಭುರಾಮ್ ಚೌಧರಿ, ಪಂಜಾಬ್ ಆರೋಗ್ಯ ಸಚಿವ ಬಲ್‌ಬೀರ್‌ ಸಿಂಗ್‌, ಮಣಿಪುರದ ಆರೋಗ್ಯ ಸಚಿವ ಡಾ.ಸಪನ್ ರಂಜನ್ ಸಿಂಗ್, ಹರಿಯಾಣ ಆರೋಗ್ಯ ಸಚಿವ ಶ್ರೀ ಅನಿಲ್ ವಿಜ್,  ಹಿಮಾಚಲ ಪ್ರದೇಶದ ಆರೋಗ್ಯ ಸಚಿವ  ಡಾ. ಧನಿ ರಾಮ್ ಶಾಂಡಿಲ್, ತಮಿಳುನಾಡು ಆರೋಗ್ಯ ಸಚಿವ ‍ಶ್ರೀ ತಿರು ಮಾ ಸುಬ್ರಮಣಿಯನ್‌, ಆಂಧ್ರಪ್ರದೇಶದ ಆರೋಗ್ಯ ಸಚಿವೆ ಶ್ರೀಮತಿ ವಿದಡಾಲ ರಜನಿ, ತೆಲಂಗಾಣ ಆರೋಗ್ಯ ಸಚಿವ ಶ್ರೀ ತನ್ನೀರು ಹರೀಶ್ ರಾವ್, ಗುಜರಾತ್ ಆರೋಗ್ಯ ಸಚಿವ ಶ್ರೀ ರುಷಿಕೇಶ್ ಪಟೇಲ್, ಒರಿಸ್ಸಾ ಆರೋಗ್ಯ ಸಚಿವ ಶ್ರೀ ನಿರಂಜನ್ ಪೂಜಾರಿ, ಅರುಣಾಚಲ ಪ್ರದೇಶ ಆರೋಗ್ಯ ಸಚಿವ ಶ್ರೀ ಅಲೋ ಲಿಬಾಂಗ್, ಮಹಾರಾಷ್ಟ್ರದ ಆರೋಗ್ಯ ಸಚಿವ ಶ್ರೀ ತಾನಾಜಿ ಸಾವಂತ್,  ಮೇಘಾಲಯದ ಆರೋಗ್ಯ ಸಚಿವೆ ಶ್ರೀಮತಿ ಮಜೆಲ್ ಅಂಪರೀನ್ ಲಿಂಗ್ಡೊ, ದಿಲ್ಲಿ ಆರೋಗ್ಯ ಸಚಿವ ಶ್ರೀ ಸೌರಭ್ ಭಾರದ್ವಾಜ್ ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

**



(Release ID: 1914693) Visitor Counter : 168