ಹಣಕಾಸು ಸಚಿವಾಲಯ
azadi ka amrit mahotsav

ಪ್ಯಾನ್-ಆಧಾರ್ ಲಿಂಕ್ (ಜೋಡಣೆ) ಮಾಡಲು ಕೊನೆಯ ದಿನಾಂಕ ವಿಸ್ತರಣೆ

प्रविष्टि तिथि: 28 MAR 2023 2:48PM by PIB Bengaluru

ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯವನ್ನು ನೀಡುವ ಸಲುವಾಗಿ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ದಿನಾಂಕವನ್ನು 2023 ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ವ್ಯಕ್ತಿಗಳು ತಮ್ಮ ಆಧಾರ್ ಅನ್ನು ಆಧಾರ್-ಪ್ಯಾನ್ ಲಿಂಕ್ ಮಾಡಲು ನಿಗದಿತ ಪ್ರಾಧಿಕಾರಕ್ಕೆ ಯಾವುದೇ ಪರಿಣಾಮಗಳನ್ನು ಎದುರಿಸದೆ ತಿಳಿಸಬಹುದು. ಈ ಸಂಬಂಧ ಅಧಿಸೂಚನೆಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುತ್ತಿದೆ.

ಆದಾಯ ತೆರಿಗೆ ಕಾಯ್ದೆ, 1961 ರ ನಿಬಂಧನೆಗಳ ಪ್ರಕಾರ, 2017 ರ ಜುಲೈ 1 ರಂತೆ ಪ್ಯಾನ್ ಅನ್ನು ಮಂಜೂರು ಮಾಡಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ನಿಗದಿತ ಶುಲ್ಕವನ್ನು ಪಾವತಿಸಿ 2023 ರ ಮಾರ್ಚ್ 31 ರಂದು ಅಥವಾ ಅದಕ್ಕೂ ಮೊದಲು ತನ್ನ ಆಧಾರ್ ಅನ್ನು ನಿಗದಿತ ಪ್ರಾಧಿಕಾರಕ್ಕೆ ತಿಳಿಸಬೇಕಾಗುತ್ತದೆ. ಹಾಗೆ ಮಾಡಲು ವಿಫಲವಾದರೆ 2023 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಕಾಯ್ದೆಯಡಿ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಉದ್ದೇಶಕ್ಕಾಗಿ ನಿಗದಿತ ಪ್ರಾಧಿಕಾರಕ್ಕೆ ಆಧಾರ್ ಅನ್ನು ತಿಳಿಸುವ ದಿನಾಂಕವನ್ನು ಈಗ 2023 ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ.

2023 ರ ಜುಲೈ 1 ರಿಂದ, ಅಗತ್ಯವಿರುವಂತೆ ತಮ್ಮ ಆಧಾರ್ ಅನ್ನು ತಿಳಿಸಲು ವಿಫಲವಾದ ತೆರಿಗೆದಾರರ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಪ್ಯಾನ್ ನಿಷ್ಕ್ರಿಯವಾಗಿರುವ ಅವಧಿಯಲ್ಲಿ ಎದುರಾಗುವ ಪರಿಣಾಮಗಳು ಈ ಕೆಳಗಿನಂತಿವೆ:

i. ನಿಷ್ಕ್ರಿಯಗೊಂಡಂತಹ ಪ್ಯಾನ್ ಕಾರ್ಡ್ ಗಳ ವಿರುದ್ಧ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ;

ii. ಪ್ಯಾನ್ ನಿಷ್ಕ್ರಿಯವಾಗಿರುವ ಅವಧಿಗೆ ಅಂತಹ ಮರುಪಾವತಿಯ ಮೇಲೆ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ; ಮತ್ತು

iii. ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಕಾಯ್ದೆಯಲ್ಲಿ ಒದಗಿಸಿರುವಂತೆ ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ / ಸಂಗ್ರಹಿಸಲಾಗುತ್ತದೆ.

ರೂ.1,000 ಶುಲ್ಕವನ್ನು ಪಾವತಿಸಿದ ನಂತರ ನಿಗದಿತ ಪ್ರಾಧಿಕಾರಕ್ಕೆ ಆಧಾರ್ ಅನ್ನು ತಿಳಿಸಿದ ನಂತರ 30 ದಿನಗಳಲ್ಲಿ ಪ್ಯಾನ್ ಅನ್ನು ಮತ್ತೆ ಕಾರ್ಯರೂಪಕ್ಕೆ ತರಬಹುದು.

ಪ್ಯಾನ್-ಆಧಾರ್ ಲಿಂಕ್ ನಿಂದ ವಿನಾಯಿತಿ ಪಡೆದ ವ್ಯಕ್ತಿಗಳು ಮೇಲೆ ತಿಳಿಸಿದ ಪರಿಣಾಮಗಳಿಗೆ ಜವಾಬ್ದಾರರಾಗಿರುವುದಿಲ್ಲ. ಈ ವರ್ಗವು ನಿರ್ದಿಷ್ಟ ರಾಜ್ಯಗಳಲ್ಲಿ ವಾಸಿಸುವವರು, ಕಾಯ್ದೆಯ ಪ್ರಕಾರ ಅನಿವಾಸಿಗಳು, ಭಾರತದ ಪ್ರಜೆಯಲ್ಲದ ವ್ಯಕ್ತಿ ಅಥವಾ ಹಿಂದಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ ಎಂಭತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ.

ಇಲ್ಲಿಯವರೆಗೆ 51 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾಗಿದೆ. https://eportal.incometax.gov.in/iec/foservices/#/pre-login/bl-link-aadhaar ಈ ಕೆಳಗಿನ ಲಿಂಕ್ ಅನ್ನು ಪ್ರವೇಶಿಸುವ ಮೂಲಕ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಬಹುದು. 

****

 


(रिलीज़ आईडी: 1911434) आगंतुक पटल : 1489
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Gujarati , Odia , Tamil , Telugu