ಪ್ರಧಾನ ಮಂತ್ರಿಯವರ ಕಛೇರಿ
ವಾರಾಣಸಿಯ ರುದ್ರಕಾಶ್ ಕನ್ವೆನ್ಷನ್ ಸೆಂಟರ್‌ನಲ್ಲಿ 'ಒನ್ ವರ್ಲ್ಡ್ ಟಿಬಿ ಶೃಂಗಸಭೆ' ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
Posted On:
24 MAR 2023 2:33PM by PIB Bengaluru
ಹರ ಹರ ಮಹಾದೇವ್!
ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಜಿ, ಉಪಮುಖ್ಯಮಂತ್ರಿ ಶ್ರೀ ಬ್ರಿಜೇಶ್ ಪಾಠಕ್ ಜಿ, ವಿವಿಧ ದೇಶಗಳ ಆರೋಗ್ಯ ಸಚಿವರು, ವಿಶ್ವ ಆರೋಗ್ಯ ಸಂಘಟನೆಯ ಪ್ರಾದೇಶಿಕ ನಿರ್ದೇಶಕರು, ಇಲ್ಲಿರುವ ಎಲ್ಲಾ ಗಣ್ಯರು, ಸ್ಟಾಪ್ ಟಿಬಿ ಪಾರ್ಟ್ ನರ್ ಶಿಪ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರೆ ಮತ್ತು ಮಹನೀಯರೆ!
‘ಒನ್ ವರ್ಲ್ಡ್ ಟಿಬಿ ಶೃಂಗಸಭೆ’ ಕಾಶಿಯಲ್ಲಿ ನಡೆಯುತ್ತಿರುವುದು ನನಗೆ ಸಂತಸದ ವಿಷಯವಾಗಿದೆ. ಅದೃಷ್ಟವಶಾತ್ ನಾನು ಕಾಶಿಯ ಸಂಸದನೂ ಆಗಿದ್ದೇನೆ. ಕಾಶಿ ನಗರವು ಸಾವಿರಾರು ವರ್ಷಗಳಿಂದ ಮಾನವೀಯತೆಯ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಗೆ ಸಾಕ್ಷಿಯಾಗಿರುವ ಶಾಶ್ವತ ನೆಲೆಯಾಗಿದೆ. ಎಷ್ಟೇ ದೊಡ್ಡ ಸವಾಲು ಎದುರಾದರೂ ಎಲ್ಲರ ಪ್ರಯತ್ನದಿಂದ ಹೊಸ ಪರಿಹಾರ ಹೊರಹೊಮ್ಮುತ್ತದೆ ಎಂಬುದಕ್ಕೆ ಕಾಶಿಯೇ ಸಾಕ್ಷಯಾಗಿದೆ. ಕ್ಷಯ ರೋಗದಂತಹ ಕಾಯಿಲೆಯ ವಿರುದ್ಧ ಹೋರಾಟದ ನಮ್ಮ ಜಾಗತಿಕ ಸಂಕಲ್ಪಕ್ಕೆ ಕಾಶಿ ಹೊಸ ಉತ್ತೇಜನ ನೀಡುತ್ತದೆ ಎಂಬುದು ನನಗೆ ಖಾತ್ರಿಯಿದೆ.
‘ಒನ್ ವರ್ಲ್ಡ್ ಟಿಬಿ ಶೃಂಗಸಭೆ’ಗಾಗಿ ಭಾರತ ಮತ್ತು ವಿದೇಶಗಳಿಂದ ಕಾಶಿಗೆ ಆಗಮಿಸಿರುವ ಎಲ್ಲ ಗೌರವಾನ್ವಿತ ಅತಿಥಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಒಂದು ದೇಶವಾಗಿ ಭಾರತದ ಸಿದ್ಧಾಂತದ ಆತ್ಮವು 'ವಸುಧೈವ ಕುಟುಂಬಕಂ'ನಲ್ಲಿ ಪ್ರತಿಫಲಿಸುತ್ತಿದೆ, ಅಂದರೆ 'ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ! ಈ ಪ್ರಾಚೀನ ನಂಬಿಕೆಯು ಇಂದು ಆಧುನಿಕ ಜಗತ್ತಿಗೆ ಸಮಗ್ರ ದೃಷ್ಟಿಕೋನ ಮತ್ತು ಪರಿಹಾರಗಳನ್ನು ನೀಡುತ್ತಿದೆ. ಆದ್ದರಿಂದ ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಭಾರತವು 'ಒಂದು ವಿಶ್ವ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ವಿಷಯವನ್ನು ಪ್ರಸ್ತಾಪಿಸಿದೆ! ಈ ಧ್ಯೇಯ(ಥೀಮ್)ವು ಒಂದು ಕುಟುಂಬವಾಗಿ ಇಡೀ ವಿಶ್ವದ ಹಂಚಿಕೆಯ ಭವಿಷ್ಯದ ನಿರ್ಣಯವಾಗಿದೆ. ಇತ್ತೀಚೆಗೆ, ಭಾರತವು 'ಒಂದು ಭೂಮಿ, ಒಂದು ಆರೋಗ್ಯ' ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯಲು ಉಪಕ್ರಮ ಆರಂಭಿಸಿದೆ. ಈಗ ಭಾರತವು 'ಒಂದು ವಿಶ್ವ ಟಿಬಿ ಶೃಂಗಸಭೆ' ಮೂಲಕ ಜಾಗತಿಕ ಒಳಿತಿಗೆ ಮತ್ತೊಂದು ಸಂಕಲ್ಪ ಕೈಗೊಂಡಿದೆ.
ಸ್ನೇಹಿತರೆ,
2014ರಿಂದ ಭಾರತವು ಟಿಬಿ ವಿರುದ್ಧ ಕೆಲಸ ಮಾಡಲು ಪ್ರಾರಂಭಿಸಿದ ಹೊಸ ಚಿಂತನೆ ಮತ್ತು ಕಾರ್ಯವಿಧಾನ ನಿಜವಾಗಿಯೂ ಅಭೂತಪೂರ್ವವಾಗಿದೆ. ಇಂದು ಇಡೀ ಜಗತ್ತು ಭಾರತದ ಈ ಪ್ರಯತ್ನಗಳ ಬಗ್ಗೆ ತಿಳಿದಿರಬೇಕು. ಏಕೆಂದರೆ ಇದು ಟಿಬಿ ವಿರುದ್ಧದ ಜಾಗತಿಕ ಹೋರಾಟದಲ್ಲಿ ಇದು ಹೊಸ ಮಾದರಿಯಾಗಿದೆ. ಕಳೆದ 9 ವರ್ಷಗಳಲ್ಲಿ ಟಿಬಿ ವಿರುದ್ಧದ ಈ ಹೋರಾಟದಲ್ಲಿ ಭಾರತ ಹಲವು ರಂಗಗಳಲ್ಲಿ ಒಟ್ಟಾಗಿ ಕೆಲಸ ಮಾಡಿದೆ. ಉದಾಹರಣೆಗೆ, ಜನರ ಭಾಗವಹಿಸುವಿಕೆ-ಜನ್ ಭಾಗಿದರಿ; ಪೌಷ್ಟಿಕಾಂಶ ಹೆಚ್ಚಿಸುವುದು-ಪೋಷಣೆಗಾಗಿ ವಿಶೇಷ ಅಭಿಯಾನ; ಚಿಕಿತ್ಸಾ ಅನುಶೋಧನೆ-ಚಿಕಿತ್ಸೆಗಾಗಿ ಹೊಸ ಕಾರ್ಯತಂತ್ರ, ತಂತ್ರಜ್ಞಾನ ಸಮಗ್ರತೆ-ತಂತ್ರಜ್ಞಾನದ ಗರಿಷ್ಠ ಬಳಕೆ, ಯೋಗಕ್ಷೇಮ ಮತ್ತು ರೋಗಗಳತಡೆಗಟ್ಟುವಿಕೆ-ಫಿಟ್ ಇಂಡಿಯಾ, ಖೇಲೊ ಇಂಡಿಯಾ, ಯೋಗ ಇತ್ಯಾದಿ ಉತ್ತಮ ಆರೋಗ್ಯ ಉತ್ತೇಜಿಸುವ ಅಭಿಯಾನಗಳಾಗಿವೆ.
ಸ್ನೇಹಿತರೆ,
ಟಿಬಿ ವಿರುದ್ಧದ ಹೋರಾಟದಲ್ಲಿ ಭಾರತ ಮಾಡಿದ ಅಸಾಧಾರಣ ಕೆಲಸವೆಂದರೆ ಜನರ ಭಾಗವಹಿಸುವಿಕೆ. ಭಾರತವು ಈ ವಿಶಿಷ್ಟ ಅಭಿಯಾನವನ್ನು ಹೇಗೆ ಪ್ರಾರಂಭಿಸಿತು ಎಂಬುದನ್ನು ತಿಳಿಯಲು ವಿದೇಶಗಳ ನಮ್ಮ ಅತಿಥಿಗಳಿಗೆ ಇದು ತುಂಬಾ ಆಸಕ್ತಿದಾಯಕವಾಗಿದೆ.
ಸ್ನೇಹಿತರೆ,
‘ಕ್ಷಯ ರೋಗ ಮುಕ್ತ (ಉಚಿತ) ಭಾರತ’ ಅಭಿಯಾನದಲ್ಲಿ ಪಾಲ್ಗೊಳ್ಳಲು ‘ನಿಕ್ಷಯ ಮಿತ್ರ’ರಾಗುವಂತೆ ದೇಶದ ಜನತೆಗೆ ಕರೆ ನೀಡಿದ್ದೆವು. ‘ಕ್ಷಯ’ ಎಂಬುದು ಭಾರತದಲ್ಲಿ ಟಿಬಿಯ ಆಡುಮಾತಿನ ಪದವಾಗಿದೆ. ಈ ಅಭಿಯಾನ ಆರಂಭಿಸಿದ ನಂತರ ಸುಮಾರು 10 ಲಕ್ಷ ಟಿಬಿ ರೋಗಿಗಳನ್ನು ದೇಶದ ನಾಗರಿಕರು ದತ್ತು ಪಡೆದಿದ್ದಾರೆ. ನಮ್ಮ ದೇಶದಲ್ಲಿ 10-12 ವರ್ಷ ವಯಸ್ಸಿನ ಮಕ್ಕಳು ಸಹ 'ನಿ-ಕ್ಷಯ ಮಿತ್ರ'ರಾಗುವ ಮೂಲಕ ಟಿಬಿ ವಿರುದ್ಧದ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ‘ಬ್ಯಾಂಕ್’ನ ಸಣ್ಣ ಉಳಿತಾಯದ ಹಣ ತೆಗೆದು ಕ್ಷಯ ರೋಗಿಗಳನ್ನು ದತ್ತು ಪಡೆದ ಮಕ್ಕಳೇ ಹೆಚ್ಚು. ಟಿಬಿ ರೋಗಿಗಳಿಗೆ ಈ 'ನಿ-ಕ್ಷಯ ಮಿತ್ರ'ಗಳ ಆರ್ಥಿಕ ನೆರವು 1,000 ಕೋಟಿ ರೂ. ತಲುಪಿದೆ. ದೇಶದ ಬೃಹತ್ ಸಮುದಾಯ ಟಿಬಿ ವಿರುದ್ಧ ಇಂತಹ ಉಪಕ್ರಮ ನಡೆಸುವುದು ಸ್ವತಃ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಹೆಚ್ಚಿನ ಸಂಖ್ಯೆಯ ಸಾಗರೋತ್ತರ ಭಾರತೀಯರೂ ಈ ಪ್ರಯತ್ನದ ಭಾಗವಾಗಿದ್ದಾರೆ ಎಂದು ನನಗೆ ಖುಷಿಯಾಗಿದೆ. ನಾನು ಸಹ ನಿಮಗೂ ಕೃತಜ್ಞನಾಗಿದ್ದೇನೆ. ನೀವು ಇಂದು ವಾರಾಣಸಿಯಿಂದ 5 ಜನರನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದೀರಿ.
ಸ್ನೇಹಿತರೆ,
ಈ 'ನಿ-ಕ್ಷಯ ಮಿತ್ರ' ಅಭಿಯಾನವು ಟಿಬಿ ರೋಗಿಗಳಿಗೆ ದೊಡ್ಡ ಸವಾಲು ನಿಭಾಯಿಸುವಲ್ಲಿ ಬಹಳಷ್ಟು ಸಹಾಯ ಮಾಡಿದೆ. ಈ ಸವಾಲು ಟಿಬಿ ರೋಗಿಗಳಿಗೆ ಪೌಷ್ಟಿಕಾಂಶ ಒದಗಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು 2018ರಲ್ಲಿ ಟಿಬಿ ರೋಗಿಗಳಿಗೆ ನೇರ ನಗದು ವರ್ಗಾವಣೆ ಘೋಷಿಸಿದ್ದೇವೆ. ಅಂದಿನಿಂದ ಸುಮಾರು 2,000 ಕೋಟಿ ರೂ. ನೇರವಾಗಿ ಟಿಬಿ ರೋಗಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಸುಮಾರು 75 ಲಕ್ಷ ರೋಗಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಈಗ 'ನಿ-ಕ್ಷಯ ಮಿತ್ರ' ಯೋಜನೆಯು ಟಿಬಿ ರೋಗಿಗಳಿಗೆ ಹೊಸ ಶಕ್ತಿ, ಚೈತನ್ಯ ನೀಡುತ್ತಿದೆ.
ಸ್ನೇಹಿತರೆ,
ಹಳೆಯ ಕಾರ್ಯವಿಧಾನವನ್ನೇ ಮುಂದುವರಿಸಿ ಉತ್ತಮ ಫಲಿತಾಂಶ ಪಡೆಯುವುದು ತುಂಬಾ ಕಷ್ಟ. ಯಾವುದೇ ಟಿಬಿ ರೋಗಿಯು ಚಿಕಿತ್ಸೆಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು ನಾವು ಹೊಸ ಕಾರ್ಯತಂತ್ರ ರೂಪಿಸಿದ್ದೇವೆ. ನಾವು ಟಿಬಿ ರೋಗಿಗಳ ತಪಾಸಣೆ ಮತ್ತು ಅವರ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಜೋಡಿಸಿದ್ದೇವೆ. ಉಚಿತ ಟಿಬಿ ಪರೀಕ್ಷೆಗಾಗಿ ನಾವು ದೇಶಾದ್ಯಂತ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಕ್ಷಯ ರೋಗಿಗಳ ಸಂಖ್ಯೆ ಹೆಚ್ಚು ಇರುವ ಸ್ಥಳಗಳಲ್ಲಿ ನಾವು ವಿಶೇಷ ಗಮನ ಹರಿಸಿ, ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಈ ಪ್ರಯತ್ನಗಳ ಭಾಗವಾಗಿ, 'ಟಿಬಿ ಮುಕ್ತ ಪಂಚಾಯಿತಿ' ಉಪಕ್ರಮವು ಒಂದು ಪ್ರಮುಖ ಹೆಜ್ಜೆಯಾಗಿದೆ. 'ಕ್ಷಯ ಮುಕ್ತ ಪಂಚಾಯಿತಿ' ಅಡಿ, ಪ್ರತಿ ಗ್ರಾಮದ ಚುನಾಯಿತ ಪ್ರತಿನಿಧಿಗಳು ತಮ್ಮ ಗ್ರಾಮದಲ್ಲಿ ಒಂದೇ ಒಂದು ಕ್ಷಯ ರೋಗಿ ಇರದಂತೆ, ಅವರ ಉತ್ತಮ ಆರೋಗ್ಯ ಖಚಿತಪಡಿಸುತ್ತಿದ್ದಾರೆ. ನಾವು ಸಾಮಾನ್ಯ 6 ತಿಂಗಳ ಕೋರ್ಸ್ ಬದಲಿಗೆ ಟಿಬಿ ತಡೆಗಟ್ಟುವಿಕೆಗಾಗಿ 3 ತಿಂಗಳ ಚಿಕಿತ್ಸೆ ಪ್ರಾರಂಭಿಸುತ್ತಿದ್ದೇವೆ. ಮೊದಲು ರೋಗಿಗಳು 6 ತಿಂಗಳ ಕಾಲ ಪ್ರತಿದಿನ ಔಷಧ ತೆಗೆದುಕೊಳ್ಳಬೇಕಿತ್ತು. ಹೊಸ ವ್ಯವಸ್ಥೆಯಲ್ಲಿ ರೋಗಿಗಳು ವಾರಕ್ಕೊಮ್ಮೆ ಮಾತ್ರ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಇದು ರೋಗಿಗಳಿಗೆ ಸಾಂತ್ವನ ನೀಡುವುದಲ್ಲದೆ, ಕಡಿಮೆ ಔಷಧಿ ಸೇವನೆಯನ್ನು ಸಹ ಅರ್ಥೈಸುತ್ತಿದೆ.
ಸ್ನೇಹಿತರೆ,
ಈ ಟಿಬಿ ಮುಕ್ತ ಅಭಿಯಾನಕ್ಕಾಗಿ ಭಾರತವು ತಂತ್ರಜ್ಞಾನದ ಗರಿಷ್ಠ ಬಳಕೆಗೆ ಒತ್ತು ನೀಡುತ್ತಿದೆ. ನಾವು ಪ್ರತಿ ಟಿಬಿ ರೋಗಿಗಳಿಗೆ ನಿ-ಕ್ಷಯ್ ಪೋರ್ಟಲ್ ರಚಿಸಿದ್ದೇವೆ. ಅದು ಅವರಿಗೆ ಅಗತ್ಯವಿರುವ ಆರೈಕೆಯನ್ನು ಟ್ರ್ಯಾಕ್ ಮಾಡುತ್ತದೆ. ನಾವು ದತ್ತಾಂಶ ವಿಜ್ಞಾನವನ್ನು ಅತ್ಯಂತ ಆಧುನಿಕ ರೀತಿಯಲ್ಲಿ ಬಳಸುತ್ತಿದ್ದೇವೆ. ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಜಂಟಿಯಾಗಿ ಉಪ-ರಾಷ್ಟ್ರೀಯ ರೋಗಗಳ ಕಣ್ಗಾವಲಿನ ಹೊಸ ಕಾರ್ಯವಿಧಾನವನ್ನು ವಿನ್ಯಾಸಗೊಳಿಸಿವೆ. ಜಾಗತಿಕ ಮಟ್ಟದಲ್ಲಿ ವಿಶ್ವ ಆರೋಗ್ಯ ಸಂಘಟನೆ ಹೊರತುಪಡಿಸಿ, ಅಂತಹ ಮಾದರಿಯನ್ನು ಅಭಿವೃದ್ಧಿಪಡಿಸಿದ ಏಕೈಕ ದೇಶ ಭಾರತವಾಗಿದೆ.
ಸ್ನೇಹಿತರೆ,
ಇಂತಹ ಹಲವು ಪ್ರಯತ್ನಗಳಿಂದಾಗಿ ಭಾರತದಲ್ಲಿ ಇದೀಗ ಟಿಬಿ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕರ್ನಾಟಕ ಮತ್ತು ಜಮ್ಮು-ಕಾಶ್ಮೀರಕ್ಕೆ ಟಿಬಿ ಮುಕ್ತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಿಲ್ಲಾ ಮಟ್ಟದ ಅತ್ಯುತ್ತಮ ಕಾರ್ಯಗಳಿಗೂ ಪ್ರಶಸ್ತಿ ನೀಡಲಾಗಿದೆ. ಈ ಯಶಸ್ಸು ಸಾಧಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ, ಅವರಿಗೆ ಶುಭ ಹಾರೈಸುತ್ತೇನೆ. ಈ ಫಲಿತಾಂಶಗಳಿಂದ ಸ್ಫೂರ್ತಿ ಪಡೆದು ಭಾರತವು ಬೃಹತ್ ನಿರ್ಣಯ ತೆಗೆದುಕೊಂಡಿದೆ. ಕ್ಷಯ ರೋಗವನ್ನು ತೊಡೆದುಹಾಕಲು 2030ರ ಜಾಗತಿಕ ಗುರಿ ಹಾಕಿಕೊಂಡಿದೆ. ಭಾರತವು ಈಗ 2025ರ ಹೊತ್ತಿಗೆ ಕ್ಷಯ ರೋಗ ತೊಡೆದುಹಾಕುವ ಗುರಿಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಜಾಗತಿಕ ಗುರಿಗಿಂತ 5 ವರ್ಷಗಳ ಮೊದಲು ಗುರಿ ಸಾಧಿಸುವ ಬೃಹತ್ ದೇಶದ ಅಂತಹ ಬೃಹತ್ ನಿರ್ಣಯ ಇದಾಗಿದೆ! ಈ ನಿರ್ಣಯವು ದೇಶವಾಸಿಗಳ ಬಲವಾದ ನಂಬಿಕೆ ಆಧರಿಸಿದೆ. ಭಾರತದಲ್ಲಿ ಕೋವಿಡ್ ಸಮಯದಲ್ಲಿ ಆರೋಗ್ಯ ಮೂಲಸೌಕರ್ಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ನಾವು ರೋಗ ಪತ್ತೆ, ಪರೀಕ್ಷೆ, ಚಿಕಿತ್ಸೆ ಮತ್ತು ತಂತ್ರಜ್ಞಾನದ ಕಾರ್ಯತಂತ್ರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಈ ಕಾರ್ಯತಂತ್ರವು ಟಿಬಿ ವಿರುದ್ಧದ ನಮ್ಮ ಹೋರಾಟದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಭಾರತದ ಈ ಸ್ಥಳೀಯ ಕಾರ್ಯವಿಧಾನದಲ್ಲಿ ಅಪಾರ ಜಾಗತಿಕ ಸಾಮರ್ಥ್ಯವಿದೆ, ಅದನ್ನು ನಾವು ಒಟ್ಟಾಗಿ ಬಳಸಿಕೊಳ್ಳಬೇಕು. ಇಂದು, ಟಿಬಿ ಚಿಕಿತ್ಸೆಗಾಗಿ 80% ಔಷಧಿಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಭಾರತದ ಫಾರ್ಮಾ ಕಂಪನಿಗಳ ಈ ಸಾಮರ್ಥ್ಯವು ಟಿಬಿ ವಿರುದ್ಧದ ಜಾಗತಿಕ ಅಭಿಯಾನದ ದೊಡ್ಡ ಶಕ್ತಿಯಾಗಿದೆ. ನಾವು ಜಾಗತಿಕ ಒಳಿತಿಗೆ ಬದ್ಧರಾಗಿರುವುದರಿಂದ ಹೆಚ್ಚಿನ ದೇಶಗಳು ಇಂತಹ ಅಭಿಯಾನಗಳು, ನಾವೀನ್ಯತೆಗಳು ಮತ್ತು ಭಾರತದ ಆಧುನಿಕ ತಂತ್ರಜ್ಞಾನ ಪ್ರಯೋಜನ ಪಡೆಯಬೇಕೆಂದು ನಾನು ಬಯಸುತ್ತೇನೆ. ಈ ಶೃಂಗಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ದೇಶಗಳು ಈ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬಹುದು. ‘ಹೌದು, ನಾವು ಟಿಬಿಯನ್ನು ಕೊನೆಗೊಳಿಸಬಹುದು’ ಎಂಬ ನಮ್ಮ ನಿರ್ಣಯವು ಖಂಡಿತವಾಗಿಯೂ ಈಡೇರುತ್ತದೆ ಎಂಬುದು ನನಗೆ ಖಾತ್ರಿಯಿದೆ. 'ಟಿಬಿ ಸೋಲುತ್ತದೆ, ಭಾರತ ಗೆಲ್ಲುತ್ತದೆ' ಮತ್ತು ನೀವು ಹೇಳಿದಂತೆ 'ಟಿಬಿ ಸೋಲುತ್ತದೆ, ಜಗತ್ತು ಗೆಲ್ಲುತ್ತದೆ'.
ಸ್ನೇಹಿತರೆ,
ನಿಮ್ಮೊಂದಿಗೆ ಮಾತನಾಡುವಾಗ ಹಳೆಯ ಘಟನೆಯೊಂದು ನೆನಪಾಯಿತು. ನಾನು ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕುಷ್ಠರೋಗ ಹೋಗಲಾಡಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಒಮ್ಮೆ ಅವರು ಸಬರಮತಿ ಆಶ್ರಮದಲ್ಲಿ ವಾಸಿಸುತ್ತಿದ್ದಾಗ ಅಹಮದಾಬಾದ್‌ನಲ್ಲಿ ಕುಷ್ಠರೋಗ ಆಸ್ಪತ್ರೆ ಉದ್ಘಾಟಿಸಲು ಅವರನ್ನು ಕರೆಯಲಾಯಿತು. ಆಗ ಗಾಂಧೀಜಿ ಆ ಆಸ್ಪತ್ರೆ ಉದ್ಘಾಟಿಸಲು ನಿರಾಕರಿಸಿದರು. ಗಾಂಧೀಜಿಗೆ ಅವರದ್ದೇ ಆದ ವಿಶೇಷ ಚಿಂತನೆ ಇತ್ತು. ನಾನು ಉದ್ಘಾಟನೆಗೆ ಬರುವುದಿಲ್ಲ, ಆದರೆ ಆ ಕುಷ್ಠರೋಗ ಆಸ್ಪತ್ರೆ ಮುಚ್ಚಲು ಕರೆದರೆ ತುಂಬಾ ಸಂತೋಷವಾಗುತ್ತದೆ ಎಂದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ಆಸ್ಪತ್ರೆ ಮುಚ್ಚುವ ಮೂಲಕ ಕುಷ್ಠರೋಗ ತೊಡೆದುಹಾಕಲು ಅವರು ಬಯಸಿದ್ದರು. ದಶಕಗಳ ಕಾಲ ಆ ಆಸ್ಪತ್ರೆ ಗಾಂಧೀಜಿ ಅವರ ಮರಣದ ನಂತರವೂ ಕಾರ್ಯ ನಿರ್ವಹಿಸುತ್ತಲೇ ಇತ್ತು. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಜನರು ನನಗೆ ಅವಕಾಶ ನೀಡಿದಾಗ, ಆ ಆಸ್ಪತ್ರೆಯನ್ನು ಮುಚ್ಚುವ, ಗಾಂಧೀಜಿ ಅವರ ಆಶಯ ಸಾಕಾರಗೊಳಿಸಲು ನಾನು ಸ್ವಲ್ಪ ಪ್ರಯತ್ನ ಮಾಡಲು ನಿರ್ಧರಿಸಿದೆ. ಕುಷ್ಠರೋಗ ವಿರುದ್ಧದ ಅಭಿಯಾನಕ್ಕೆ ಹೊಸ ವೇಗ ನೀಡಲಾಯಿತು. ಇದರ ಫಲಿತಾಂಶ ಏನು? ಗುಜರಾತ್‌ನಲ್ಲಿ ಇದ್ದ ಕುಷ್ಠರೋಗ ಪ್ರಮಾಣವು 23%ನಿಂದ 1%ಗಿಂತ ಕಡಿಮೆ ಮಟ್ಟಕ್ಕೆ ತಗ್ಗಿತು. 2007ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಆ ಆಸ್ಪತ್ರೆ ಮುಚ್ಚಿದಾಗ ಗಾಂಧೀಜಿ ಅವರ ಕನಸು ನನಸಾಯಿತು. ಈ ಕಾರ್ಯದಲ್ಲಿ ಅನೇಕ ಸಾಮಾಜಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ, ಟಿಬಿ ವಿರುದ್ಧ ಭಾರತದ ಯಶಸ್ಸಿನ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ.
ನವ ಭಾರತವು ತನ್ನ ಗುರಿಗಳನ್ನು ಸಾಧಿಸಲು ಹೆಸರುವಾಸಿಯಾಗಿದೆ. ಭಾರತವು ಬಯಲು ಶೌಚ ಮುಕ್ತವಾಗಲು ಸಂಕಲ್ಪ ತೊಟ್ಟು ಅದನ್ನು ಸಾಧಿಸಿದೆ. ಭಾರತವು ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಗುರಿಯನ್ನು ಸಮಯಕ್ಕಿಂತ ಮುಂಚಿತವಾಗಿ ಸಾಧಿಸಿದೆ. ಭಾರತವು ನಿಗದಿತ ಅವಧಿಗಿಂತ ಮುಂಚಿತವಾಗಿ ಪೆಟ್ರೋಲ್‌ನಲ್ಲಿ ನಿಗದಿತ ಶೇಕಡಾವಾರು ಎಥೆನಾಲ್ ಮಿಶ್ರಣದ ಗುರಿ ಸಾಧಿಸಿದೆ. ಸಾರ್ವಜನಿಕ ಸಹಭಾಗಿತ್ವದ ಈ ಇಂಧನವು ಇಡೀ ಜಗತ್ತಿನ ವಿಶ್ವಾಸ ಹೆಚ್ಚಿಸುತ್ತಿದೆ. ಕ್ಷಯ ರೋಗದ ವಿರುದ್ಧದ ಭಾರತದ ಹೋರಾಟದ ಯಶಸ್ಸು ಸಾರ್ವಜನಿಕ ಸಹಭಾಗಿತ್ವದ ಫಲಿತಾಂಶವಾಗಿದೆ. ಹೌದು, ನಾನು ಸಹ ನಿಮ್ಮಲ್ಲಿ ಮನವಿ ಮಾಡಲು ಬಯಸುತ್ತೇನೆ. ಟಿಬಿ ರೋಗಿಗಳಲ್ಲಿ ಸಾಮಾನ್ಯವಾಗಿ ಅರಿವಿನ ಕೊರತೆ ಇರುತ್ತದೆ. ಸಮಾಜದಲ್ಲಿ ಪ್ರಚಲಿತದಲ್ಲಿರುವ ಹಳೆಯ ಆಲೋಚನೆಯಿಂದಾಗಿ ಅವರು ಈ ರೋಗವನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಈ ರೋಗಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ನಾವು ಸಮಾನ ಗಮನ ನೀಡಬೇಕು.
ಸ್ನೇಹಿತರೆ,
ಕಾಶಿಯಲ್ಲಿ ಆರೋಗ್ಯ ಸೇವೆಗಳ ತ್ವರಿತ ವಿಸ್ತರಣೆಯು ಟಿಬಿ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡಿದೆ. ಇಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವಾರಾಣಸಿ ಶಾಖೆಯ ಶಿಲಾನ್ಯಾಸ ನೆರವೇರಿಸಲಾಗಿದೆ. ಸಾರ್ವಜನಿಕ ಆರೋಗ್ಯ ನಿಗಾ ಘಟಕವೂ ಕಾರ್ಯಾರಂಭ ಮಾಡಿದೆ. ಇಂದು ಬಿಎಚ್‌ಯುನಲ್ಲಿರುವ ಚೈಲ್ಡ್ ಕೇರ್ ಇನ್‌ಸ್ಟಿಟ್ಯೂಟ್, ಬ್ಲಡ್ ಬ್ಯಾಂಕ್‌ನ ಆಧುನೀಕರಣ, ಆಧುನಿಕ ಟ್ರಾಮಾ ಸೆಂಟರ್ ನಿರ್ಮಾಣ, ಸೂಪರ್ ಸ್ಪೆಷಾಲಿಟಿ ಬ್ಲಾಕ್ ಇತ್ಯಾದಿಗಳು ಬನಾರಸ್ ಜನರಿಗೆ ಅನೇಕ ಪ್ರಯೋಜನ ನೀಡುತ್ತಿವೆ. ಪಂಡಿತ್ ಮದನ್ ಮೋಹನ್ ಮಾಳವೀಯ ಕ್ಯಾನ್ಸರ್ ಕೇಂದ್ರದಲ್ಲಿ ಇಲ್ಲಿಯವರೆಗೆ 70,000ಕ್ಕೂ ಹೆಚ್ಚಿನ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಈ ಜನರು ಚಿಕಿತ್ಸೆಗಾಗಿ ಲಕ್ನೋ, ದೆಹಲಿ ಅಥವಾ ಮುಂಬೈಗೆ ಹೋಗಬೇಕಾಗಿಲ್ಲ. ಅದೇ ರೀತಿ ಬನಾರಸ್ ನಲ್ಲಿ ಕಬೀರ್ ಚೌರಾ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಡಯಾಲಿಸಿಸ್, ಸಿಟಿ ಸ್ಕ್ಯಾನ್ ಮುಂತಾದ ಹಲವು ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಕಾಶಿ ಭಾಗದ ಹಳ್ಳಿಗಳಲ್ಲೂ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಸ್ಥಾವರಗಳು ಹಾಗೂ ಆಮ್ಲಜನಕ ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಅನೇಕ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ಬನಾರಸ್‌ನ 1.5 ಲಕ್ಷಕ್ಕೂ ಹೆಚ್ಚಿನ ಜನರು ಈ ಆಸ್ಪತ್ರೆಗಳು ಮತ್ತು ಯೋಗಕ್ಷೇಮ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಸುಮಾರು 70 ಜನೌಷಧಿ ಕೇಂದ್ರಗಳಿಂದ ರೋಗಿಗಳು ಕೈಗೆಟಕುವ ದರದಲ್ಲಿ ಔಷಧಗಳನ್ನು ಪಡೆಯುತ್ತಿದ್ದಾರೆ. ಪೂರ್ವಾಂಚಲ್ ಮತ್ತು ನೆರೆಯ ಬಿಹಾರದ ಜನರು ಸಹ ಈ ಎಲ್ಲಾ ಕ್ರಮಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಸ್ನೇಹಿತರೆ,
ಭಾರತವು ತನ್ನ ಅನುಭವ, ಪರಿಣತಿ ಮತ್ತು ಇಚ್ಛಾಶಕ್ತಿಯೊಂದಿಗೆ ಟಿಬಿ ತೊಡೆದುಹಾಕುವ ಅಭಿಯಾನದಲ್ಲಿ ತೊಡಗಿದೆ. ಭಾರತವೂ ಇತರೆ ದೇಶಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಸಿದ್ಧವಾಗಿದೆ. ಎಲ್ಲರ ಪ್ರಯತ್ನದಿಂದ ಮಾತ್ರ ಟಿಬಿ ವಿರುದ್ಧದ ನಮ್ಮ ಅಭಿಯಾನ ಯಶಸ್ವಿಯಾಗುತ್ತದೆ. ನಮ್ಮ ಪ್ರಯತ್ನಗಳು ನಮ್ಮ ಸುರಕ್ಷಿತ ಭವಿಷ್ಯದ ಅಡಿಪಾಯ ಬಲಪಡಿಸುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಪೃಥ್ವಿ ನೀಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ. ಭಾರತವನ್ನು ತುಂಬಾ ಮೆಚ್ಚಿದ್ದಕ್ಕಾಗಿ ಮತ್ತು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈ ಶುಭ ಆರಂಭದೊಂದಿಗೆ ಮತ್ತು 'ವಿಶ್ವ ಟಿಬಿ ನಿಯಂತ್ರಣ ದಿನಾಚರಣೆ' ಸಂದರ್ಭದಲ್ಲಿ ಅದರ ಯಶಸ್ಸಿಗಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ದೃಢ ಸಂಕಲ್ಪದೊಂದಿಗೆ ಮುನ್ನಡೆಯುತ್ತೇನೆ. ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
*
(Release ID: 1911069)
Visitor Counter : 181
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam