ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಏರ್ಪಡಿಸಿರುವ ಬಜೆಟ್ ನಂತರದ ವೆಬಿನಾರ್ ನಲ್ಲಿ "ಮಹಿಳೆಯರ ಆರ್ಥಿಕ ಸಬಲೀಕರಣ" ಕುರಿತು ನಾಳೆ ಭಾಷಣ ಮಾಡಲಿರುವ ಪ್ರಧಾನಿ


​​​​​​​

ಮಹಿಳಾ ಮಾಲೀಕತ್ವದ ಮತ್ತು ಮಹಿಳಾ ನೇತೃತ್ವದ ವ್ಯಾಪಾರ ಉದ್ಯಮಗಳ ಸುಸ್ಥಿರ ಬೆಳವಣಿಗೆ ಖಚಿತಪಡಿಸಲು ಮಾರ್ಗಗಳ ಬಗ್ಗೆ ಚಿಂತನ-ಮಂಥನ ಮಾಡುವುದು ಹಾಗೂ 2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಮಾಡಲಾದ ಘೋಷಣೆಗಳ ಅನುಷ್ಠಾನಕ್ಕಾಗಿ ಕಾರ್ಯತಂತ್ರ-ನೀಲನಕ್ಷೆಯನ್ನು ಅಭಿವೃದ್ಧಿಪಡಿಸುವುದು ಈ ವೆಬಿನಾರ್‌ನ ಉದ್ದೇಶವಾಗಿದೆ

ವೆಬಿನಾರ್‌ನ ಮೂರು ಪ್ರತ್ಯೇಕ ಅಧಿವೇಶನಗಳು ʻಸ್ವಸಹಾಯ ಗುಂಪುಗಳನ್ನು (ಎಸ್‌ಎಚ್‌ಜಿ) ದೊಡ್ಡ ವ್ಯಾಪಾರ ಉದ್ಯಮಗಳು / ಸಮೂಹಗಳಾಗಿ ಉನ್ನತೀಕರಿಸುವುದುʼ; ʻತಂತ್ರಜ್ಞಾನ ಮತ್ತು ಹಣಕಾಸು ಬಳಕೆʼ; ಹಾಗೂ ʻಮಾರುಕಟ್ಟೆಗಳು ಮತ್ತು ವ್ಯವಹಾರ ವಿಸ್ತರಣೆʼ ಎಂಬ ಮೂರು ವಿಷಯಗಳ ಅಡಿಯಲ್ಲಿ ವ್ಯಾಪಕ ಚರ್ಚೆಗಳಿಗೆ ಸಾಕ್ಷಿಯಾಗಲಿವೆ

Posted On: 09 MAR 2023 2:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ 10 ಗಂಟೆಗೆ "ಮಹಿಳೆಯರ ಆರ್ಥಿಕ ಸಬಲೀಕರಣ" ಕುರಿತ ಬಜೆಟ್ ನಂತರದ ವೆಬಿನಾರ್‌ನ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ವೆಬಿನಾರ್ ಅನ್ನು ಆಯೋಜಿಸಿದೆ. ʻಮಹಿಳಾ ಮಾಲೀಕತ್ವದ ಮತ್ತು ಮಹಿಳಾ ನೇತೃತ್ವದ ವ್ಯಾಪಾರ ಉದ್ಯಮಗಳ ಸುಸ್ಥಿರ ಬೆಳವಣಿಗೆಯನ್ನು ಖಾತರಿಪಡಿಸುವ ಮಾರ್ಗಗಳ ಬಗ್ಗೆ ಚಿಂತನ-ಮಂಥನ ಮಾಡುವುದು ಹಾಗೂ ಬಜೆಟ್‌ ಘೋಷಣೆಗಳ ಅನುಷ್ಠಾನಕ್ಕಾಗಿ ಕಾರ್ಯತಂತ್ರ ಮತ್ತು ನೀಲನಕ್ಷೆಯನ್ನು ಅಭಿವೃದ್ಧಿಪಡಿಸುವುದು ಈ ವೆಬಿನಾರ್‌ನ ಉದ್ದೇಶವಾಗಿದೆ. ಇದು ಸರಕಾರವು ಆಯೋಜಿಸುತ್ತಿರುವ ಬಜೆಟ್ ನಂತರದ ವೆಬಿನಾರ್‌ ಸರಣಿಯ ಭಾಗವಾಗದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಗಿರಿರಾಜ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಶ್ರೀ ಮಹೇಂದ್ರಭಾಯಿ ಮುಂಜಪಾರ ಮತ್ತು ಇತರ ಗಣ್ಯರು ಹಾಗೂ ಸಾರ್ವಜನಿಕ ಮತ್ತು ಖಾಸಗಿ ವಲಯದ ಅಧಿಕಾರಿಗಳು ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿಯವರು ಬಜೆಟ್ ಅನುಷ್ಠಾನ ಕಾರ್ಯತಂತ್ರದ ಕುರಿತು ವೆಬಿನಾರ್‌ನಲ್ಲಿ ಮಾತನಾಡಲಿದ್ದಾರೆ.

ಉದ್ಘಾಟನಾ ಅಧಿವೇಶನದ ನಂತರ, ʻಸ್ವಸಹಾಯ ಗುಂಪುಗಳನ್ನು ದೊಡ್ಡ ವ್ಯಾಪಾರ ಉದ್ಯಮಗಳು / ಸಮೂಹಗಳಾಗಿ ಉನ್ನತೀಕರಿಸುವುದುʼ ʻತಂತ್ರಜ್ಞಾನ ಮತ್ತು ಹಣಕಾಸು ಬಳಕೆʼ; ʻಮಾರುಕಟ್ಟೆಗಳು ಮತ್ತು ವ್ಯವಹಾರ ವಿಸ್ತರಣೆʼ ಎಂಬ ಮೂರು ವಿಷಯಗಳ ಅಡಿಯಲ್ಲಿ ಮೂರು ಪ್ರತ್ಯೇಕ ಅಧಿವೇಶನಗಳು ನಡೆಯಲಿವೆ. ಈ ಕ್ಷೇತ್ರಗಳ ತಜ್ಞರು, ಮಹಿಳಾ ಸ್ವಸಹಾಯ ಗುಂಪು ಒಕ್ಕೂಟಗಳು ಮತ್ತು ಇತರ ಮಧ್ಯಸ್ಥಗಾರರಿಂದ ಈ ವಿಷಯಗಳ ಮೇಲೆ ವ್ಯಾಪಕ ಚರ್ಚೆಗಳಿಗೆ ಈ ಆಧಿವೇಶನಗಳು ಸಾಕ್ಷಿಯಾಗಲಿವೆ. ಈ ಚರ್ಚಾಕೂಟಗಳು ಪ್ರಾಯೋಗಿಕ ಮತ್ತು ಕಾರ್ಯಗತಗೊಳಿಸಬಹುದಾದ ಪರಿಹಾರಗಳನ್ನು ಮುಂದಿಡುವ ನಿರೀಕ್ಷೆಯಿದೆ.

ಚರ್ಚಾನಿರ್ವಾಹಕರು, ಕ್ಷೇತ್ರದ ತಜ್ಞರು ಮತ್ತು ಕ್ಷೇತ್ರದ ಭಾಷಣಕಾರರು ಈ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಇದನ್ನು ವೆಬ್‌ಕಾಸ್ಟ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ವೆಬಿನಾರ್‌ನಲ್ಲಿ ಸರಕಾರಿ ಅಧಿಕಾರಿಗಳು, ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು / ಒಕ್ಕೂಟಗಳು, ಸಾರ್ವಜನಿಕ / ಖಾಸಗಿ ವಲಯದ ಬ್ಯಾಂಕುಗಳ ಪ್ರತಿನಿಧಿಗಳು, ಅಗ್ರಿ-ಟೆಕ್ ಕಂಪನಿಗಳು, ನಾಗರಿಕ ಸಮಾಜ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟಗಳ ಸದಸ್ಯರು, ʻರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆʼ(ಎಸ್ಆರ್‌ಎಲ್‌ಎಂ) ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ಅನೇಕ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ. "81 ಲಕ್ಷ ಸ್ವಸಹಾಯ ಗುಂಪುಗಳನ್ನು ಸಜ್ಜುಗೊಳಿಸುವಲ್ಲಿ ʻದೀನ್‌ ದಯಾಳ್‌- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆʼ(DAY-NRLM) ಸಾಧಿಸಿದ ಗಮನಾರ್ಹ ಯಶಸ್ಸನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಸೂಕ್ತ ಮಧ್ಯಸ್ಥಿಕೆಗಳ ಮೂಲಕ ದೊಡ್ಡ ಉತ್ಪಾದಕ ಉದ್ಯಮಗಳು ಅಥವಾ ಸಮೂಹಗಳನ್ನು ರಚಿಸುವ ಮೂಲಕ ಆರ್ಥಿಕ ಸಬಲೀಕರಣದ ಮುಂದಿನ ಹಂತಕ್ಕೆ ಈ 81 ಸ್ವಸಹಾಯ ಗುಂಪುಗಳನ್ನು ಕೊಂಡೊಯ್ಯಲಾಗುವುದು. ಅವುಗಳ ಉತ್ಪನ್ನಗಳ ಉತ್ತಮ ವಿನ್ಯಾಸ, ಗುಣಮಟ್ಟ, ಬ್ರ್ಯಾಂಡಿಂಗ್ ಮತ್ತು ಮಾರಾಟಕ್ಕೆ ಸಹಾಯ ಮಾಡಲಾಗುವುದು. ದೊಡ್ಡ ಗ್ರಾಹಕ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸುವ ಸಲುವಾಗಿ ಅವುಗಳ ಕಾರ್ಯಾಚರಣೆಗಳ ವೃತ್ತಿಪರತೆಯನ್ನು ಹೆಚ್ಚಿಸಲಾಗುವುದು.  ಜೊತೆಗೆ, ಅವುಗಳಲ್ಲಿ ಕೆಲವನ್ನು 'ಯುನಿಕಾರ್ನ್'ಗಳಾಗಿ ಪರಿವರ್ತಿಸಲಾಗುವುದು,ʼʼ ಎಂದು ಘೋಷಿಸಿದ್ದಾರೆ. 

ಪ್ರತ್ಯೇಕ ಚರ್ಚಾ ಅಧಿವೇಶನಗಳ ನಂತರ ಸಮಾರೋಪ ಅಧಿವೇಶನ ನಡೆಯಲಿದ್ದು, ಇದರಲ್ಲಿ ಸಂಬಂಧಿತ ಸಚಿವಾಲಯಗಳು / ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಇತರ ಮಧ್ಯಸ್ಥಗಾರರ ಉಪಸ್ಥಿತಿಯಲ್ಲಿ ಪ್ರತಿ ಮೂರು ಅಧಿವೇಶನಗಳ ಚರ್ಚಾ ನಿರ್ವಾಹಕರು ಪ್ರಸ್ತುತಿಗಳನ್ನು ನೀಡಲಿದ್ದಾರೆ. ಬಳಿಕ ಇವುಗಳ ಮೇಲೆ ಮುಕ್ತ ಚರ್ಚೆ ನಡೆಯಲಿದೆ.

ಕಾರ್ಯಕ್ರಮವನ್ನು ವೀಕ್ಷಿಸಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
https://webcast.gov.in/mwcd

 

****


(Release ID: 1905384) Visitor Counter : 167