ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬರುವ ಬೇಸಿಗೆಯಲ್ಲಿ ಬಿಸಿ ವಾತಾವರಣವನ್ನು ನಿಭಾಯಿಸಲು ಮಾಡಿಕೊಂಡಿರುವ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ 


ಮುಂಗಾರು ಮುನ್ಸೂಚನೆ, ಹಿಂಗಾರು ಬೆಳೆಗಳ ಮೇಲಿನ ಪರಿಣಾಮ, ವೈದ್ಯಕೀಯ ಮೂಲಸೌಕರ್ಯಗಳ ಸನ್ನದ್ಧತೆ ಮತ್ತು ಬಿಸಿಲಿನ ಧಗೆ ಮತ್ತು ಉಪಶಮನ  ಕ್ರಮಗಳಿಗೆ ಸಂಬಂಧಿಸಿದ ವಿಪತ್ತಿನ ಸಿದ್ಧತೆಗಳ ಕುರಿತು ಪ್ರಧಾನಮಂತ್ರಿಯವರಿಗೆ ವಿವರಣೆ 
 
ವಿವಿಧ ಮಧ್ಯಸ್ಥಗಾರರಿಗೆ ಪ್ರತ್ಯೇಕ ಜಾಗೃತಿ ಸಾಮಗ್ರಿಯನ್ನು ಸಿದ್ಧಪಡಿಸುವಂತೆ ಪ್ರಧಾನಿ ಕರೆ
 
ಅರ್ಥಮಾಡಿಕೊಳ್ಳಲು ಮತ್ತು ಪ್ರಸಾರ ಮಾಡಲು ಸುಲಭವಾದ ರೀತಿಯಲ್ಲಿ ದೈನಂದಿನ ಹವಾಮಾನ ಮುನ್ಸೂಚನೆಗಳನ್ನು  ಸಿದ್ಧಪಡಿಸುವಂತೆ ಹವಾಮಾನ ಇಲಾಖೆಗೆ ಪ್ರಧಾನಿ ಸೂಚನೆ
 
ಎಲ್ಲಾ ಆಸ್ಪತ್ರೆಗಳಲ್ಲಿ ವಿವರವಾದ ಅಗ್ನಿಶಾಮಕ ತಪಾಸಣೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ 
 
ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿ ಧಾನ್ಯಗಳ ಅತ್ಯುತ್ತಮ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ತಯಾರಿ ಮಾಡಿಕೊಳ್ಳುವಂತೆ ಭಾರತೀಯ ಆಹಾರ ನಿಗಮಕ್ಕೆ ಸೂಚನೆ

Posted On: 06 MAR 2023 6:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಲೋಕಕಲ್ಯಾಣ ಮಾರ್ಗದ ನಿವಾಸದಲ್ಲಿ ಮುಂಬರುವ ಬೇಸಿಗೆಯಲ್ಲಿ ಬಿಸಿ ವಾತಾವರಣವನ್ನು ನಿಭಾಯಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಲು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮುಂದಿನ ಕೆಲವು ತಿಂಗಳುಗಳ ಹವಾಮಾನ ಮುನ್ಸೂಚನೆ ಮತ್ತು ಸಾಮಾನ್ಯ ಮುಂಗಾರು ಸಾಧ್ಯತೆಯ ಕುರಿತು ಪ್ರಧಾನಮಂತ್ರಿ ಅವರಿಗೆ ವಿವರಿಸಲಾಯಿತು. ಹಿಂಗಾರು ಬೆಳೆಗಳ ಮೇಲೆ ಹವಾಮಾನದ ಪ್ರಭಾವ ಮತ್ತು ಪ್ರಮುಖ ಬೆಳೆಗಳ ನಿರೀಕ್ಷಿತ ಇಳುವರಿ ಬಗ್ಗೆಯೂ ಅವರಿಗೆ ವಿವರಣೆ ನೀಡಲಾಯಿತು. ನೀರಾವರಿ ನೀರು ಪೂರೈಕೆ, ಮೇವು ಮತ್ತು ಕುಡಿಯುವ ನೀರಿನ ಮೇಲ್ವಿಚಾರಣೆಗಾಗಿ ನಡೆಯುತ್ತಿರುವ ಕ್ರಮಗಳನ್ನು ಪರಿಶೀಲಿಸಲಾಯಿತು. ಇದಲ್ಲದೆ, ಅಗತ್ಯವಿರುವ ಸರಬರಾಜುಗಳ ಲಭ್ಯತೆ ಮತ್ತು ತುರ್ತು ಪರಿಸ್ಥಿತಿಗಳಿಗೆ ಸನ್ನದ್ಧತೆಯ ವಿಷಯದಲ್ಲಿ ರಾಜ್ಯಗಳ ಸನ್ನದ್ಧತೆ ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಲಾಯಿತು. ಬಿಸಿಲಿನ ಧಗೆ ಮತ್ತು ಉಪಶಮನ ಕ್ರಮಗಳಿಗೆ ಸಂಬಂಧಿಸಿದ ವಿಪತ್ತುಗಳಿಗೆ ತಯಾರಿ ನಡೆಸಲು ದೇಶಾದ್ಯಂತ ನಡೆಯುತ್ತಿರುವ ವಿವಿಧ ಪ್ರಯತ್ನಗಳ ಬಗ್ಗೆಯೂ ಅವರಿಗೆ ವಿವರ ನೀಡಲಾಯಿತು.

ನಾಗರಿಕರು ಸೇರಿದಂತೆ ವೈದ್ಯಕೀಯ ವೃತ್ತಿಪರರು, ಪುರಸಭೆ ಮತ್ತು ಪಂಚಾಯತ್ ಆಡಳಿತಗಳು, ಅಗ್ನಿಶಾಮಕ ಸಿಬ್ಬಂದಿ ಇತ್ಯಾದಿ ವಿಪತ್ತು ಪ್ರತಿಕ್ರಿಯೆ ತಂಡಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರಿಗೆ ಪ್ರತ್ಯೇಕ ಜಾಗೃತಿ ಸಾಮಗ್ರಿಯನ್ನು ಸಿದ್ಧಪಡಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ತೀವ್ರತರವಾದ ಶಾಖದ ಪರಿಸ್ಥಿತಿಗಳನ್ನು ಎದುರಿಸಲು ಮಕ್ಕಳನ್ನು ಸಜ್ಜುಗೊಳಿಸಲು ಶಾಲೆಗಳಲ್ಲಿ ಕೆಲವು ಮಲ್ಟಿಮೀಡಿಯಾ ಉಪನ್ಯಾಸಗಳನ್ನು ನಡೆಸುವಂತೆ ಸೂಚನೆ ನೀಡಲಾಯಿತು. ಬಿಸಿ ವಾತಾವರಣಕ್ಕಾಗಿ ಪ್ರೋಟೋಕಾಲ್‌ಗಳು ಮತ್ತು ಮಾಡಬೇಕಾದುದು ಮತ್ತು ಮಾಡಬಾರದ ಕೆಲಸಗಳ ಬಗ್ಗೆ ಪ್ರವೇಶಿಸಬಹುದಾದ ಸ್ವರೂಪಗಳಲ್ಲಿ ಸಾಮಗ್ರಿಗಳನ್ನು ಸಿದ್ಧಪಡಿಸಬೇಕು ಮತ್ತು ಜಿಂಗಲ್‌ಗಳು, ಚಲನಚಿತ್ರಗಳು, ಕರಪತ್ರಗಳು ಮುಂತಾದ ಹಲವಾರು ಪ್ರಚಾರ ವಿಧಾನಗಳನ್ನು ಸಹ ಸಿದ್ಧಪಡಿಸಬೇಕು ಮತ್ತು ಬಿಡುಗಡೆ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮತ್ತು ಪ್ರಸಾರ ಮಾಡುವ ರೀತಿಯಲ್ಲಿ ದೈನಂದಿನ ಹವಾಮಾನ ಮುನ್ಸೂಚನೆಗಳನ್ನು ನೀಡುವಂತೆ ಪ್ರಧಾನಮಂತ್ರಿಯವರು ಐಎಂಡಿಗೆ ಸೂಚಿಸಿದರು. ಟಿವಿ ನ್ಯೂಸ್ ಚಾನೆಲ್‌ಗಳು, ಎಫ್‌ಎಂ ರೇಡಿಯೋ ಇತ್ಯಾದಿಗಳು ನಾಗರಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅನುವಾಗುವ ರೀತಿಯಲ್ಲಿ ದೈನಂದಿನ ಹವಾಮಾನ ಮುನ್ಸೂಚನೆಯನ್ನು ವಿವರಿಸಲು ಪ್ರತಿದಿನ ಕೆಲವು ನಿಮಿಷಗಳನ್ನು ಮೀಸಲಿಡಬಹುದು ಎಂದು ಚರ್ಚಿಸಲಾಯಿತು.

ಎಲ್ಲಾ ಆಸ್ಪತ್ರೆಗಳ ವಿವರವಾದ ಅಗ್ನಿಶಾಮಕ ತಪಾಸಣೆ ಮತ್ತು ಅಗ್ನಿಶಾಮಕ ದಳದವರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಅಣಕು ಅಗ್ನಿಶಾಮಕ ಕಾರ್ಯಾಚರಣೆಗಳ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು ಕಾಡ್ಗಿಚ್ಚನ್ನು ಎದುರಿಸಲು ಸಂಘಟಿತ ಪ್ರಯತ್ನದ ಅಗತ್ಯವನ್ನು ಸಹ ಸೂಚಿಸಲಾಯಿತು. ಕಾಡ್ಗಿಚ್ಚು ತಡೆಗಟ್ಟುವ ಮತ್ತು ನಿಭಾಯಿಸುವ ಪ್ರಯತ್ನಗಳನ್ನು ಬೆಂಬಲಿಸಲು ವ್ಯವಸ್ಥಿತ ಬದಲಾವಣೆಗಳನ್ನು ಮಾಡಬೇಕು ತಿಳಿಸಲಾಯಿತು.

ಮೇವು ಮತ್ತು ಜಲಾಶಯಗಳಲ್ಲಿ ನೀರಿನ ಲಭ್ಯತೆಯ ಬಗ್ಗೆ ನಿಗಾ ಇಡಬೇಕು ಎಂದು ಪ್ರಧಾನಿ ಸೂಚನೆ ನೀಡಿದರು. ಹವಾಮಾನ ವೈಪರೀತ್ಯದ ಪರಿಸ್ಥಿತಿಯಲ್ಲಿ ಧಾನ್ಯಗಳ ಅತ್ಯುತ್ತಮ ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ತಯಾರಿ ನಡೆಸುವಂತೆ ಭಾರತೀಯ ಆಹಾರ ನಿಗಮಕ್ಕೆ ಸೂಚಿಸಲಾಯಿತು.

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಾರ್ಯದರ್ಶಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮತ್ತು ಎನ್‌ ಡಿ ಎಂ ಎ ಸದಸ್ಯ ಕಾರ್ಯದರ್ಶಿ ಸಭೆಯಲ್ಲಿ ಭಾಗವಹಿಸಿದ್ದರು.

***


(Release ID: 1904712) Visitor Counter : 128