ಪ್ರಧಾನ ಮಂತ್ರಿಯವರ ಕಛೇರಿ
ಜಿ-20 ವಿದೇಶಾಂಗ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಉದ್ದೇಶದ ಐಕಮತ್ಯ ಮತ್ತು ಕ್ರಿಯೆಯ ಏಕತೆಯ ಅಗತ್ಯವನ್ನು ಸೂಚಿಸುತ್ತದೆ"
"ವಿಶ್ವ ಯುದ್ಧದ ನಂತರದ ಜಾಗತಿಕ ಆಡಳಿತವು ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವ ಮತ್ತು ಸಾಮಾನ್ಯ ಹಿತಾಸಕ್ತಿ ವಿಷಯಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವ ಎರಡೂ ಉದ್ದೇಶಗಳಲ್ಲಿ ವಿಫಲವಾಗಿದೆ"
"ಯಾವುದೇ ಗುಂಪು ತನ್ನ ನಿರ್ಧಾರಗಳಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗುವವರ ಅಭಿಪ್ರಾಯವನ್ನು ಕೇಳದೆ ಜಾಗತಿಕ ನಾಯಕತ್ವವನ್ನು ಪಡೆಯಲು ಸಾಧ್ಯವಿಲ್ಲ"
"ಭಾರತದ ಜಿ-20 ಅಧ್ಯಕ್ಷತೆಯು ಗ್ಲೋಬಲ್ ಸೌತ್ (ಆರ್ಥಿಕವಾಗಿ ಹಿಂದುಳಿದ ದೇಶಗಳು) ಗೆ ಧ್ವನಿ ನೀಡಲು ಪ್ರಯತ್ನಿಸಿದೆ"
“ನಾವು ಒಟ್ಟಾಗಿ ಪರಿಹರಿಸಲಾಗದ ಸಮಸ್ಯೆಗಳ ನಿರ್ಣಯಗಳು ಪರಿಹರಿಸಬಹುದಾದ ಮಾರ್ಗಗಳಿಗೆ ಅಡ್ಡಿಯಾಗಲು ಬಿಡಬಾರದು”
"ಒಂದೆಡೆ ಬೆಳವಣಿಗೆ ಮತ್ತು ದಕ್ಷತೆ ಮತ್ತು ಇನ್ನೊಂದೆಡೆ ಸ್ಥಿತಿಸ್ಥಾಪಕತ್ವದ ನಡುವೆ ಸೂಕ್ತ ಸಮತೋಲನವನ್ನು ಸಾಧಿಸಲು ಜಿ-20 ನಿರ್ಣಾಯಕ ಪಾತ್ರವನ್ನು ಹೊಂದಿದೆ"
Posted On:
02 MAR 2023 9:34AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಜಿ-20 ವಿದೇಶಾಂಗ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ತನ್ನ ಜಿ-20 ಅಧ್ಯಕ್ಷ ಸ್ಥಾನಕ್ಕೆ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಘೋಷವಾಕ್ಯವನ್ನು ಆಯ್ಕೆ ಮಾಡಿರುವುದು ಏಕೆ ಎಂಬುದನ್ನು ಒತ್ತಿ ಹೇಳಿದರು. ಇದು ಉದ್ದೇಶದ ಐಕ್ಯತೆಯ ಜೊತೆಗೆ ಕ್ರಿಯೆಯ ಏಕತೆಯ ಅಗತ್ಯವನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದರು. ಇಂದಿನ ಸಭೆಯು ಸಾಮಾನ್ಯ ಮತ್ತು ದೃಢವಾದ ಉದ್ದೇಶಗಳನ್ನು ಸಾಧಿಸಲು ಒಗ್ಗಟ್ಟಿನ ಮನೋಭಾವವನ್ನು ಪ್ರತಿಬಿಂಬಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ವಿಶ್ವದಲ್ಲಿ ಬಹುಪಕ್ಷೀಯತೆಯು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂದ ಪ್ರಧಾನಿಯವರು, ಎರಡನೆಯ ಮಹಾಯುದ್ಧದ ನಂತರ ರಚಿಸಲಾದ ಜಾಗತಿಕ ಆಡಳಿತದ ಎರಡು ಮುಖ್ಯ ಉದ್ದೇಶಿತ ಕಾರ್ಯಗಳ ಬಗ್ಗೆ ಗಮನಸೆಳೆದರು. ಮೊದಲನೆಯದಾಗಿ, ಸ್ಪರ್ಧಾತ್ಮಕ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಮೂಲಕ ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವುದು ಮತ್ತು ಎರಡನೆಯದಾಗಿ, ಸಾಮಾನ್ಯ ಹಿತಾಸಕ್ತಿಗಳ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವುದು ಎಂದು ಅವರು ವಿವರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗ, ಭಯೋತ್ಪಾದನೆ ಮತ್ತು ಯುದ್ಧಗಳನ್ನು ಗಮನಿಸಿದರೆ, ಅದರ ಎರಡೂ ಉದ್ದೇಶಗಳಲ್ಲಿ ಜಾಗತಿಕ ಆಡಳಿತದ ವೈಫಲ್ಯಗಳಿವೆ ಎಂದು ಪ್ರಧಾನಿ ಹೇಳಿದರು. ಈ ವೈಫಲ್ಯದ ದುರಂತ ಪರಿಣಾಮಗಳನ್ನು ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚಾಗಿ ಎದುರಿಸುತ್ತಿವೆ ಮತ್ತು ವರ್ಷಗಳ ಪ್ರಗತಿಯ ನಂತರ ವಿಶ್ವವು ಸುಸ್ಥಿರ ಅಭಿವೃದ್ಧಿಯಿಂದ ಹಿಂಜರಿಯುವ ಅಪಾಯದಲ್ಲಿದೆ ಎಂದು ಅವರು ಹೇಳಿದರು. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಜನರಿಗೆ ಆಹಾರ ಮತ್ತು ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಸಮರ್ಥನೀಯ ಸಾಲದೊಂದಿಗೆ ಹೆಣಗಾಡುತ್ತಿವೆ ಎಂದು ಪ್ರಧಾನಿ ಹೇಳಿದರು. ಶ್ರೀಮಂತ ರಾಷ್ಟ್ರಗಳಿಂದ ಉಂಟಾಗುವ ಜಾಗತಿಕ ತಾಪಮಾನದಿಂದ ಹೆಚ್ಚು ಪರಿಣಾಮ ಎದುರಿಸುವುದು ಅಭಿವೃದ್ಧಿಶೀಲ ರಾಷ್ಟ್ರಗಳು ಎಂದು ಅವರು ಹೇಳಿದರು. ಭಾರತದ ಜಿ-20 ಅಧ್ಯಕ್ಷತೆಯು ಗ್ಲೋಬಲ್ ಸೌತ್ (ಆರ್ಥಿಕವಾಗಿ ಹಿಂದುಳಿದ ದೇಶಗಳು) ಗೆ ಧ್ವನಿ ನೀಡಲು ಪ್ರಯತ್ನಿಸಿದೆ, ತನ್ನ ನಿರ್ಧಾರಗಳಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗುವವರ ಅಭಿಪ್ರಾಯಗಳನ್ನು ಕೇಳದೆ ಯಾವುದೇ ಗುಂಪು ಜಾಗತಿಕ ನಾಯಕತ್ವವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇಂದಿನ ಸಭೆಯು ತೀವ್ರವಾದ ಜಾಗತಿಕ ಒಡಕಿನ ಸಮಯದಲ್ಲಿ ನಡೆಯುತ್ತಿದೆ ಮತ್ತು ವಿದೇಶಾಂಗ ಸಚಿವರಾಗಿ, ಸದ್ಯದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಚರ್ಚೆಗಳ ಮೇಲೆ ಪರಿಣಾಮ ಬೀರುವುದು ಸಹಜ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಉದ್ವಿಗ್ನತೆಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ನಾವೆಲ್ಲರೂ ನಮ್ಮ ನಿಲುವುಗಳನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಶ್ವದ ಪ್ರಮುಖ ಆರ್ಥಿಕತೆಗಳಾಗಿ, ಈ ಕೋಣೆಯಲ್ಲಿ ಇಲ್ಲದವರ ಬಗ್ಗೆ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಒತ್ತಿ ಹೇಳಿದರು. ಬೆಳವಣಿಗೆ, ಅಭಿವೃದ್ಧಿ, ಆರ್ಥಿಕ ಸ್ಥಿತಿಸ್ಥಾಪಕತ್ವ, ವಿಪತ್ತು ಸ್ಥಿತಿಸ್ಥಾಪಕತ್ವ, ಆರ್ಥಿಕ ಸ್ಥಿರತೆ, ದೇಶೀಯ ಅಪರಾಧ, ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಆಹಾರ ಮತ್ತು ಇಂಧನ ಭದ್ರತೆಯ ಸವಾಲುಗಳನ್ನು ಸರಾಗಗೊಳಿಸಲು ಜಗತ್ತು ಜಿ-20 ರ ಕಡೆ ನೋಡುತ್ತಿದೆ ಎಂದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಒಮ್ಮತವನ್ನು ನಿರ್ಮಿಸುವ ಮತ್ತು ದೃಢವಾದ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಜಿ-20 ಹೊಂದಿದೆ ಎಂದು ಅವರು ಹೇಳಿದರು. ಒಟ್ಟಾಗಿ ಪರಿಹರಿಸಲಾಗದ ಸಮಸ್ಯೆಗಳ ನಿರ್ಣಯಗಳು ಪರಿಹರಿಸಬಹುದಾದ ಮಾರ್ಗಗಳಿಗೆ ಅಡ್ಡಿಯಾಗಬಾರದು ಎಂದು ಅವರು ಹೇಳಿದರು. ಗಾಂಧಿ ಮತ್ತು ಬುದ್ಧನ ನಾಡಿನಲ್ಲಿ ಸಭೆ ನಡೆಯುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಮ್ಮನ್ನು ವಿಭಜಿಸುವುದರ ಮೇಲೆ ಗಮನ ಕೇಂದ್ರೀಕರಿಸದೆ, ನಮ್ಮೆಲ್ಲರನ್ನೂ ಒಂದುಗೂಡಿಸುವ ಭಾರತದ ನಾಗರಿಕತೆಯ ನೀತಿಯಿಂದ ಸ್ಫೂರ್ತಿ ಪಡೆಯುವಂತೆ ವಿದೇಶಾಂಗ ಸಚಿವರನ್ನು ಒತ್ತಾಯಿಸಿದರು.
ನೈಸರ್ಗಿಕ ವಿಕೋಪಗಳಲ್ಲಿ ಕಳೆದುಹೋದ ಸಾವಿರಾರು ಜೀವಗಳು ಮತ್ತು ಜಗತ್ತು ಎದುರಿಸುತ್ತಿರುವ ವಿನಾಶಕಾರಿ ಸಾಂಕ್ರಾಮಿಕ ರೋಗದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು, ಒತ್ತಡ ಮತ್ತು ಪ್ರಕ್ಷುಬ್ಧತೆಯ ಸಮಯದಲ್ಲಿ ಜಾಗತಿಕ ಪೂರೈಕೆ ಸರಪಳಿಗಳು ಹೇಗೆ ಕಳಚಿಹೋಗಿವೆ ಎಂಬುದನ್ನು ಗಮನಿಸಿದರು. ಸ್ಥಿರ ಆರ್ಥಿಕತೆಗಳು ಇದ್ದಕ್ಕಿದ್ದಂತೆ ಸಾಲ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಮುಳುಗಿರುವುದರ ಬಗ್ಗೆ ಗಮನಸೆಳೆದ ಪ್ರಧಾನಮಂತ್ರಿಯವರು, ನಮ್ಮ ಸಮಾಜಗಳು, ಆರ್ಥಿಕತೆಗಳು, ಆರೋಗ್ಯ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುವ ಅಗತ್ಯವನ್ನು ಒತ್ತಿ ಹೇಳಿದರು. ಒಂದೆಡೆ ಬೆಳವಣಿಗೆ ಮತ್ತು ದಕ್ಷತೆ ಮತ್ತು ಇನ್ನೊಂದೆಡೆ ಸ್ಥಿತಿಸ್ಥಾಪಕತ್ವದ ನಡುವೆ ಸೂಕ್ತ ಸಮತೋಲನವನ್ನು ಸಾಧಿಸುವಲ್ಲಿ ಜಿ-20 ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಈ ಸಮತೋಲನವನ್ನು ಸುಲಭವಾಗಿ ಸಾಧಿಸಬಹುದು ಎಂದು ಅವರು ಸಲಹೆ ನೀಡಿದರು. ಸಾಮೂಹಿಕ ವಿವೇಕ ಮತ್ತು ಸಾಮರ್ಥ್ಯದ ಬಗ್ಗೆ ವಿಶ್ವಾಸ ಪ್ರಧಾನಿ ವ್ಯಕ್ತಪಡಿಸಿದರು ಮತ್ತು ಇಂದಿನ ಸಭೆಯು ಮಹತ್ವಾಕಾಂಕ್ಷೆ, ಅಂತರ್ಗತ ಮತ್ತು ಕಾರ್ಯ-ಆಧಾರಿತವಾಗಿ ಹೊರಹೊಮ್ಮುತ್ತದೆ, ಭಿನ್ನಾಭಿಪ್ರಾಯಗಳನ್ನು ಮೀರಿ ನಿರ್ಣಯಗಳನ್ನು ಮಾಡುತ್ತದೆ ಎಂದು ಆಶಿಸಿದರು.
***
(Release ID: 1903666)
Visitor Counter : 154
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam