ಪ್ರಧಾನ ಮಂತ್ರಿಯವರ ಕಛೇರಿ
ಭಾರತ ಮತ್ತು ಸಿಂಗಾಪುರ ನಡುವೆ ಯುಪಿಐ-ಪೇನೌ ಅಪ್ಲಿಕೇಷನ್(ಆಪ್) ಲಿಂಕ್‌ನ ಜಂಟಿ ವರ್ಚುವಲ್ ಅನಾವರಣ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
Posted On:
21 FEB 2023 12:24PM by PIB Bengaluru
ಗೌರವಾನ್ವಿತ ಸಿಂಗಾಪುರ ಪ್ರಧಾನ ಮಂತ್ರಿ ಲೀ ಅವರೆ,
‘ಮಾನಿಟರಿ ಅಥಾರಿಟಿ ಆಫ್ ಸಿಂಗಾಪುರ್’ನ ವ್ಯವಸ್ಥಾಪಕ ನಿರ್ದೇಶಕರೆ,
‘ಭಾರತೀಯ ರಿಸರ್ವ್ ಬ್ಯಾಂಕ್’ನ ಗವರ್ನರ್ ಅವರೆ,
ಭಾರತ ಮತ್ತು ಸಿಂಗಾಪುರದ ನನ್ನೆಲ್ಲಾ ಸ್ನೇಹಿತರೆ,
ಭಾರತ ಮತ್ತು ಸಿಂಗಾಪುರ ನಡುವಿನ ಸ್ನೇಹ ಬಹಳ ಹಳೆಯದು ಮತ್ತು ಯಾವಾಗಲೂ ಇದು ಕಾಲ ಪರೀಕ್ಷಿತವಾಗಿದೆ. ನಮ್ಮ ಜನರ ಸಂಬಂಧವೇ ಅದರ ಮುಖ್ಯ ಆಧಾರವಾಗಿದೆ. ಯುಪಿಐ-ಪೇನೌ ಅಪ್ಲಿಕೇಷನ್ ಲಿಂಕ್‌ನ ಜಂಟಿ ಅನಾವರಣವು ಉಭಯ ದೇಶಗಳ ನಾಗರಿಕರಿಗೆ, ಅವರು ನಿರೀಕ್ಷೆಯಿಂದ ಕಾಯುತ್ತಿರುವ ಬಹುದೊಡ್ಡ ಉಡುಗೊರೆಯಾಗಿದೆ.ಈ ಸಂದರ್ಭದಲ್ಲಿ ನಾನು ಭಾರತ ಮತ್ತು ಸಿಂಗಾಪುರದ ಜನತೆಯನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇಂದಿನ ಜಗತ್ತಿನಲ್ಲಿ, ತಂತ್ರಜ್ಞಾನವು ನಮ್ಮನ್ನು ವಿವಿಧ ರೀತಿಯಲ್ಲಿ ಸಂಪರ್ಕಿಸುತ್ತಿದೆ. ಹಣಕಾಸು ತಂತ್ರಜ್ಞಾನವು ಸಹ ಅಂತಹ ಒಂದು ಆಧುನಿಕ ವಲಯವಾಗಿದೆ. ಇದು ಜನರನ್ನು ಪರಸ್ಪರ ಸಂಪರ್ಕಿಸುತ್ತಿದೆ. ಸಾಮಾನ್ಯವಾಗಿ, ಅದರ ವ್ಯಾಪ್ತಿ ದೇಶದ ಗಡಿಯೊಳಗೆ ಸೀಮಿತವಾಗಿರುತ್ತದೆ. ಆದರೆ, ಇಂದಿನ ಯುಪಿಐ-ಪೇನೌ ಲಿಂಕ್ ಅನಾವರಣವು ಗಡಿಯಾಚೆಗಿನ ಹಣಕಾಸು ತಂತ್ರಜ್ಞಾನ ಸಂಪರ್ಕದಲ್ಲಿ ಹೊಸ ಅಧ್ಯಾಯ ತೆರೆಯುತ್ತಿದೆ.
ಇಂದಿನಿಂದ ಸಿಂಗಾಪುರ್ ಮತ್ತು ಭಾರತದ ಜನರು ತಮ್ಮ ತಮ್ಮ ದೇಶಗಳಲ್ಲಿ ಬಳಸುವ ರೀತಿಯಲ್ಲೇ ತಮ್ಮ ಮೊಬೈಲ್ ಫೋನ್‌ಗಳಿಂದ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಇದು ಎರಡೂ ದೇಶಗಳ ಜನರು ತಮ್ಮ ಮೊಬೈಲ್‌ಗಳಿಂದ ಹಣವನ್ನು ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ವರ್ಗಾಯಿಸಲು ಸಹಾಯ ಮಾಡುತ್ತದೆ. ಈ ಸೌಲಭ್ಯದೊಂದಿಗೆ, 2 ದೇಶಗಳ ನಡುವೆ ಹಣ ಕಳಿಸಲು, ವರ್ಗಾವಣೆ ಮಾಡಲು ಅಗ್ಗದ ಮತ್ತು ಕಾಲಾತೀತ ಆಯ್ಕೆ ಸಾಧ್ಯವಾಗುತ್ತದೆ. ಇದು ವಿಶೇಷವಾಗಿ ನಮ್ಮ ಸಾಗರೋತ್ತರ ಸಹೋದರ ಸಹೋದರಿಯರು, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಅಪಾರ ಪ್ರಯೋಜನ ನೀಡುತ್ತದೆ.
ಸ್ನೇಹಿತರೆ,
ಇತ್ತೀಚಿನ ವರ್ಷಗಳಲ್ಲಿ ನಾವೀನ್ಯತೆ ಮತ್ತು ಆಧುನೀಕರಣಕ್ಕೆ ಅನುವು ಮಾಡಿಕೊಡುವ ವಾತಾವರಣ ಸೃಷ್ಟಿಸಲು ಭಾರತವು ಹೆಚ್ಚಿನ ಆದ್ಯತೆ ನೀಡಿದೆ. ಹೆಚ್ಚುವರಿಯಾಗಿ, ನಮ್ಮ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಭಾರತದಲ್ಲಿ ಸುಲಭವಾಗಿ ಉದ್ಯಮ ವ್ಯವಹಾರ ಮತ್ತು ವ್ಯಾಪಾರ ಮಾಡಲು ಮತ್ತು ಸುಲಭವಾಗಿ ಬದುಕಲು ಸುಧಾರಣೆ ತಂದಿದೆ. ಇದು ಡಿಜಿಟಲ್ ಸಂಪರ್ಕದೊಂದಿಗೆ ಆರ್ಥಿಕ ಸೇರ್ಪಡೆಗೆ ಅಭೂತಪೂರ್ವ ವೇಗ ನೀಡಿದೆ.
ಡಿಜಿಟಲ್ ಇಂಡಿಯಾ ಅಭಿಯಾನವು ಆಡಳಿತ ಮತ್ತು ಸಾರ್ವಜನಿಕ ಸೇವೆ ವಿತರಣೆಯಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಮಾಡಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಕೋಟಿಗಟ್ಟಲೆ ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಲು ಸಾಧ್ಯವಾಯಿತು ಎಂಬುದು ಭಾರತದ ಡಿಜಿಟಲ್ ಮೂಲಸೌಕರ್ಯದ ನಿಜವಾದ ಶಕ್ತಿಯಾಗಿದೆ.
ಸ್ನೇಹಿತರೆ,
5 ವರ್ಷಗಳ ಹಿಂದೆ ನಾನು ಸಿಂಗಾಪುರದಲ್ಲಿ ಹೇಳಿದ್ದೆ. ಹಣಕಾಸು ತಂತ್ರಜ್ಞಾನವು ನಾವೀನ್ಯತೆ ಮತ್ತು ಯುವ ಶಕ್ತಿಯ ಮೇಲಿನ ನಂಬಿಕೆಯ ದೊಡ್ಡ ಆಚರಣೆಯಾಗಿದೆ. ಹಣಕಾಸು ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯ ಭಾರತದ ಯಶಸ್ಸು ನಮ್ಮ ತಂತ್ರಜ್ಞಾನ ತರಬೇತಿ ಪಡೆದ ಯುವಕರಿಂದ ಮುನ್ನಡೆಸಲ್ಪಟ್ಟಿದೆ. ಇಂದು ಭಾರತದಲ್ಲಿ ಸಾವಿರಾರು ಸ್ಟಾರ್ಟಪ್‌ಗಳು ಹಣಕಾಸು ತಂತ್ರಜ್ಞಾನ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಈ ಶಕ್ತಿಯಿಂದಾಗಿ ಇಂದು ಭಾರತವು, ರಿಯಲ್ ಟೈಮ್ ಡಿಜಿಟಲ್ ವಹಿವಾಟಿನ ವಿಷಯದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.
ಇಂದು ಯುಪಿಐ ಅಪ್ಲಿಕೇಷನ್ ಭಾರತದಲ್ಲಿ ಅತ್ಯಂತ ಆದ್ಯತೆಯ ಪಾವತಿ ಕಾರ್ಯವಿಧಾನವಾಗಿದೆ. ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರೂ ಇದನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂದು ಭಾರತದಲ್ಲಿ ಶೀಘ್ರದಲ್ಲೇ ಡಿಜಿಟಲ್ ವ್ಯಾಲೆಟ್ ವಹಿವಾಟುಗಳು ನಗದು ವಹಿವಾಟುಗಳನ್ನು ಮೀರಿಸುತ್ತದೆ ಎಂದು ಅನೇಕ ಹಣಕಾಸು ಮತ್ತು ಆರ್ಥಿಕ ತಜ್ಞರು ಊಹಿಸುತ್ತಿದ್ದಾರೆ. ಕಳೆದ ವರ್ಷ ಅಂದರೆ 2022ರಲ್ಲಿ ಸುಮಾರು 126 ಲಕ್ಷ ಕೋಟಿ ರೂಪಾಯಿ ಅಂದರೆ 2 ಟ್ರಿಲಿಯನ್ ಸಿಂಗಾಪುರ್ ಡಾಲರ್‌ಗೂ ಹೆಚ್ಚು ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. ನಾನು ವಹಿವಾಟುಗಳ ಸಂಖ್ಯೆಯ ಬಗ್ಗೆ ಮಾತನಾಡಿದರೆ, ಅದು 7,400 ಕೋಟಿಗೂ ಹೆಚ್ಚು. ಭಾರತದ ಯುಪಿಐ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಜನರನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ.
ಬೇರೆ ಬೇರೆ ದೇಶಗಳೊಂದಿಗೆ ಯುಪಿಐ ಸಹಭಾಗಿತ್ವ ಹೆಚ್ಚುತ್ತಿರುವುದು ಒಳ್ಳೆಯದು. ಇಂದು ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿ ಸೌಲಭ್ಯ ಪ್ರಾರಂಭಿಸಿದ ಮೊದಲ ದೇಶ ಸಿಂಗಾಪುರವಾಗಿದೆ. ಸಿಂಗಾಪುರದ ಹಣಕಾಸು ಪ್ರಾಧಿಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಈ ಪ್ರಯತ್ನವನ್ನು ಯಶಸ್ವಿಗೊಳಿಸುವಲ್ಲಿ ತೊಡಗಿರುವ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಾನು ಮತ್ತೊಮ್ಮೆ ಎರಡೂ ದೇಶಗಳ ಜನರನ್ನು ಅಭಿನಂದಿಸುತ್ತೇನೆ, ಸಿಂಗಾಪುರ ಪ್ರಧಾನ ಮಂತ್ರಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ವಿದೇಶಾಂಗ ವ್ಯವಹಾರಗಳ ಸಚಿವರು ಇಂಗ್ಲೀಷ್ ಭಾಷೆಯಲ್ಲಿ ನೀಡಿರುವ ಪ್ರಧಾನ ಮಂತ್ರಿಗಳ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಪ್ರಧಾನ ಮಂತ್ರಿ ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
****
(Release ID: 1901413)
Visitor Counter : 153
Read this release in:
Bengali
,
English
,
Urdu
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam