ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಮುಂಬೈಯಲ್ಲಿ ಅಲ್ಜಮಿಯಾ-ತುಸ್-ಸೈಫಿಯಾ ಶಿಕ್ಷಣ ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು


"ನಾನು ಇಲ್ಲಿ ಪ್ರಧಾನಮಂತ್ರಿಯಾಗಿ ಬಂದಿಲ್ಲ ಆದರೆ ನಾಲ್ಕು ತಲೆಮಾರುಗಳಿಂದ ಈ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ"

“ಬದಲಾಗುತ್ತಿರುವ ಸಮಯ ಮತ್ತು ಅಭಿವೃದ್ಧಿಗೆ ಹೊಂದಿಕೊಳ್ಳುವ ಮಾನದಂಡಗಳಲ್ಲಿ, ದಾವೂದಿ ಬೊಹ್ರಾ ಸಮುದಾಯವು ತನ್ನನ್ನು ತಾನು ಸಾಬೀತುಪಡಿಸಿದೆ. ಅಲ್ಜಮಿಯಾ-ತುಸ್-ಸೈಫಿಯಾ ಮುಂತಾದ ಸಂಸ್ಥೆಗಳು ಇದಕ್ಕೆ ಜೀವಂತ ಉದಾಹರಣೆಯಾಗಿದೆ."

"ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಸುಧಾರಣೆಗಳೊಂದಿಗೆ ಅಮೃತ್ ಕಾಲದ ನಿರ್ಣಯಗಳು ದೇಶವನ್ನು ಮುಂದಕ್ಕೊಯ್ಯುತ್ತಿವೆ"

"ಭಾರತೀಯ ನೀತಿಯೊಂದಿಗೆ ಆಧುನಿಕ ಶಿಕ್ಷಣ ವ್ಯವಸ್ಥೆಯು ದೇಶದ ಆದ್ಯತೆಯಾಗಿದೆ"

"ಶೈಕ್ಷಣಿಕ ಮೂಲಸೌಕರ್ಯಗಳ ವೇಗ ಮತ್ತು ಪ್ರಮಾಣವು ಭಾರತವು ವಿಶ್ವವನ್ನು ರೂಪಿಸುವ ಯುವ ಪ್ರತಿಭೆಗಳ ಕೇಂದ್ರವಾಗಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ."

"ನಮ್ಮ ಯುವಜನರು ನೈಜ ಪ್ರಪಂಚದ ಸಕಾಲಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಮತ್ತು ಸಕ್ರಿಯವಾಗಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ"

"ಇಂದು, ದೇಶವು ಉದ್ಯೋಗ ಸೃಷ್ಟಿಕರ್ತರೊಂದಿಗೆ ನಿಂತಿದೆ ಮತ್ತು ನಂಬಿಕೆಯ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ"

"ಭಾರತದಂತಹ ದೇಶಕ್ಕೆ ಅಭಿವೃದ್ಧಿ ಮತ್ತು ಪರಂಪರೆ ಅಷ್ಟೇ ಮುಖ್ಯ"

Posted On: 10 FEB 2023 7:15PM by PIB Bengaluru

ಮುಂಬೈನ ಮರೋಲ್‌ ನಲ್ಲಿರುವ ಅಲ್ಜಮಿಯಾ-ತುಸ್-ಸೈಫಿಯಾ (ದಿ ಸೈಫೀ ಅಕಾಡೆಮಿ) ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಅಲ್ಜಮಿಯಾ-ತುಸ್-ಸೈಫಿಯಾ ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ. ಪರಮಪೂಜ್ಯ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯು ಸಮುದಾಯದ ಕಲಿಕಾ ಸಂಪ್ರದಾಯಗಳು, ವ್ಯವಸ್ಥೆಗಳು ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.

ನೆರೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, “ನಾನು ಇಲ್ಲಿ ಪ್ರಧಾನಮಂತ್ರಿಯಾಗಿ ಬಂದಿಲ್ಲ, ನಾಲ್ಕು ತಲೆಮಾರುಗಳಿಂದ ಈ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಕುಟುಂಬದ ಸದಸ್ಯನಾಗಿ ಬಂದಿರುತ್ತೇನೆ” ಎಂದು ಹೇಳಿದರು.

“ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯದಿಂದ ಪ್ರತಿಯೊಂದು ಸಮುದಾಯ, ಗುಂಪು ಅಥವಾ ಸಂಸ್ಥೆಯು ವಿಶೇಷವಾಗಿ ಗುರುತಿಸಲ್ಪಡುತ್ತಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಬದಲಾಗುತ್ತಿರುವ ಸಮಯ ಮತ್ತು ಅಭಿವೃದ್ಧಿಗೆ ಹೊಂದಿಕೊಳ್ಳುವ ಮಾನದಂಡಗಳಲ್ಲಿ, ದಾವೂದಿ ಬೊಹ್ರಾ ಸಮುದಾಯವು ತನ್ನನ್ನು ತಾನು ಸಾಬೀತುಪಡಿಸಿದೆ. ಅಲ್ಜಮಿಯಾ-ತುಸ್-ಸೈಫಿಯಾ ಮುಂತಾದ ಸಂಸ್ಥೆಗಳು ಇದಕ್ಕೆ ಜೀವಂತ ಉದಾಹರಣೆಯಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ದಾವೂದಿ ಬೋಹ್ರಾ ಸಮುದಾಯದೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು ವಿವರಿಸಿದರು ಮತ್ತು ತಾನು ಹೋದಲ್ಲೆಲ್ಲಾ ತನ್ನ ಮೇಲೆ ಈ ಸಮುದಾಯವು ವಾತ್ಸಲ್ಯದ ಮಳೆಗರೆಯುತ್ತದೆ ಎಂದು ಹೇಳಿದರು. ಅವರು 99 ನೇ ವಯಸ್ಸಿನ ಪರಮಪೂಜ್ಯ ಡಾ ಸೈಯದ್ನಾ ಅವರ ಬೋಧನೆಯ ನಿದರ್ಶನವನ್ನು ನೆನಪಿಸಿಕೊಂಡರು ಮತ್ತು ಗುಜರಾತ್‌ ನ ಸಮುದಾಯದೊಂದಿಗಿನ ಅವರ ನಿಕಟ ಸಂಬಂಧದ ಬಗ್ಗೆ ಮಾತನಾಡಿದರು. ಸೂರತ್‌ನಲ್ಲಿ ನಡೆದ ಪರಮಪೂಜ್ಯ ಡಾ ಸೈಯದ್ನಾ ಅವರ ಶತಮಾನೋತ್ಸವದ ಆಚರಣೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಗುಜರಾತ್‌ ನಲ್ಲಿನ ನೀರಿನ ಪರಿಸ್ಥಿತಿಯ ಬಗ್ಗೆ ಆಧ್ಯಾತ್ಮಿಕ ನಾಯಕರು ಹೊಂದಿರುವ ಬದ್ಧತೆಯನ್ನು ಕೂಡಾ ಸ್ಮರಿಸಿಕೊಂಡರು. ನೀರಿನ ಕಾರಣಕ್ಕಾಗಿ ಅವರ ನಿರಂತರ ಬದ್ಧತೆಗೆ ಪ್ರಧಾನಮಂತ್ರಿ ಅವರು ಆಧ್ಯಾತ್ಮಿಕ ನಾಯಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಅಪೌಷ್ಟಿಕತೆ ಮತ್ತು ನೀರಿನ ಕೊರತೆಯನ್ನು ನಿಭಾಯಿಸುವುದರಿಂದ ಹಿಡಿದು ಸಮಾಜ ಮತ್ತು ಸರ್ಕಾರದ ಪೂರಕತೆಯ ಹಲವಾರು ಉದಾಹರಣೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

"ನಾನು ದೇಶದಲ್ಲಿ ಮಾತ್ರವಲ್ಲದೆ ವಿದೇಶಕ್ಕೆ ಹೋದಾಗ, ನನ್ನ ಬೋಹ್ರಾ ಸಹೋದರರು ಮತ್ತು ಸಹೋದರಿಯರು ಖಂಡಿತವಾಗಿಯೂ ನನ್ನನ್ನು ಭೇಟಿಯಾಗಲು ಬರುತ್ತಾರೆ" ಎಂದು ಪ್ರಧಾನಮಂತ್ರಿಯವರು ಬೊಹ್ರಾ ಸಮುದಾಯದ ಭಾರತದ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ವಿವರಿಸಿದರು.

ಸರಿಯಾದ ಉದ್ದೇಶದ ಕನಸುಗಳು ಯಾವಾಗಲೂ ನನಸಾಗುತ್ತವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮುಂಬೈನಲ್ಲಿ ಅಲ್ಜಮಿಯಾ-ತುಸ್-ಸೈಫಿಯಾ ಸಂಸ್ಥೆಯವರು ಕನಸು ಸ್ವಾತಂತ್ರ್ಯದ ಮೊದಲು ಕಂಡಿದ್ದಾರೆ ಎಂದು ಹೇಳಿದರು. ದಂಡಿ ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮ ಗಾಂಧಿಯವರು ದಾವೂದಿ ಬೊಹ್ರಾ ಸಮುದಾಯದ ನಾಯಕನ ಮನೆಯಲ್ಲಿ ತಂಗಿದ್ದರು ಎಂಬುದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಅವರ ಕೋರಿಕೆಯ ಮೇರೆಗೆ ಈ ಮನೆಯನ್ನು ಸ್ಮಾರಕ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಸರ್ಕಾರಕ್ಕೆ ನೀಡಲಾಯಿತು ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರತಿಯೊಬ್ಬರು ಈ ಸ್ಮಾರಕ ಮನೆಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿಯವರು ಮನವಿ ಮಾಡಿದರು.

ಮಹಿಳೆಯರು ಮತ್ತು ಹುಡುಗಿಯರ ಆಧುನಿಕ ಶಿಕ್ಷಣಕ್ಕಾಗಿ ಲಭ್ಯವಿರುವ ಹೊಸ ಅವಕಾಶಗಳನ್ನು ಎತ್ತಿ ತೋರಿಸಿ, "ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಸುಧಾರಣೆಗಳೊಂದಿಗೆ ದೇಶವು ಅಮೃತ್ ಕಾಲದ ನಿರ್ಣಯಗಳೊಂದಿಗೆ ಎಲ್ಲರನ್ನೂ ಮುಂದಕ್ಕೆ ಕೊಂಡೊಯ್ಯುತ್ತಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಲ್ಜಮಿಯಾ-ತುಸ್-ಸೈಫಿಯಾ ಸಂಸ್ಥೆಯವರೂ ಕೂಡ ಈ ಪ್ರಯತ್ನದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ದೇಶದ ಆದ್ಯತೆಯನ್ನು ಭಾರತೀಯ ತತ್ವದಲ್ಲಿ ರೂಪಿಸಿದ ಆಧುನಿಕ ಶಿಕ್ಷಣ ಪದ್ಧತಿಯನ್ನು ಪ್ರಧಾನಮಂತ್ರಿಯವರು ವಿವರಿಸಿದರು. ಭಾರತವು ಶಿಕ್ಷಣದ ಕೇಂದ್ರವಾಗಿ ನಳಂದ ಮತ್ತು ತಕ್ಷಶಿಲಾದಂತಹ ಸಂಸ್ಥೆಗಳೊಂದಿಗೆ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಗಮನವನ್ನು ಸೆಳೆದ ಕಾಲಘಟ್ಟವನ್ನು ಅವರು ನೆನಪಿಸಿಕೊಂಡರು. ನಾವು ಭಾರತದ ವೈಭವವನ್ನು ಮರುಸ್ಥಾಪಿಸಬೇಕಾದರೆ ಶಿಕ್ಷಣದ ಭವ್ಯವಾದ ವರ್ಷಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಅವರು ಹೇಳಿದರು.

ಕಳೆದ 8 ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ವಿಶ್ವವಿದ್ಯಾನಿಲಯಗಳು ಬಂದಿವೆ ಮತ್ತು ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “2004-2014ರ ನಡುವೆ 145 ಕಾಲೇಜುಗಳನ್ನು ಸ್ಥಾಪಿಸಿದ್ದರೆ, 2014-22ರ ನಡುವೆ 260ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಅಸ್ತಿತ್ವಕ್ಕೆ ಬಂದಿವೆ. ಕಳೆದ 8 ವರ್ಷಗಳಲ್ಲಿ, ಪ್ರತಿ ವಾರ ಒಂದು ವಿಶ್ವವಿದ್ಯಾನಿಲಯ ಮತ್ತು ಎರಡು ಕಾಲೇಜುಗಳನ್ನು ತೆರೆಯಲಾಗಿದೆ. ಈ ವೇಗ ಮತ್ತು ಪ್ರಮಾಣವು ಭಾರತವು ಜಗತ್ತನ್ನು ರೂಪಿಸುವ ಯುವ ಪ್ರತಿಭೆಗಳ ಕೇಂದ್ರಸ್ಥಾನವಾಗಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ"  ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು.

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಮಹತ್ವದ ಬದಲಾವಣೆಯನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಈಗ ಪ್ರಾದೇಶಿಕ ಭಾಷೆಗಳಲ್ಲಿ ತೆಗೆದುಕೊಳ್ಳಬಹುದು ಎಂದು ಹೇಳಿದರು.  ಪೇಟೆಂಟ್ ವ್ಯವಸ್ಥೆಗೆ ಹೆಚ್ಚಿನ ಸಹಾಯ ಮಾಡಿದ ಕಾರಣ ಆಗಿರುವ ಪೇಟೆಂಟ್ ಪ್ರಕ್ರಿಯೆಯ ಸರಳೀಕರಣದ ಬಗ್ಗೆಯೂ ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು. ಇತ್ತೀಚೆಗೆ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ಇಂದಿನ ಯುವಕರು ಉತ್ತಮ ಶಿಕ್ಷಣ ವ್ಯವಸ್ಥೆ ಮತ್ತು ತಂತ್ರಜ್ಞಾನ ಹಾಗೂ ಆವಿಷ್ಕಾರಗಳೊಂದಿಗೆ ವ್ಯವಹರಿಸಲು ವೈವಿಧ್ಯಮಯ ಕೌಶಲ್ಯದಿಂದ ಸಜ್ಜುಗೊಳಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ನಮ್ಮ ಯುವಕರು ನೈಜ ಪ್ರಪಂಚದ ಸಮಸ್ಯೆಗಳಿಗೆ ಬಹುಬೇಗನೆ ಸ್ಪಂದಿಸುತ್ತಾರೆ ಮತ್ತು ಸಕ್ರಿಯವಾಗಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ಯಾವುದೇ ದೇಶಕ್ಕೆ ಬಲಿಷ್ಠ ಶೈಕ್ಷಣಿಕ ವ್ಯವಸ್ಥೆ ಮತ್ತು ಸದೃಢ ಕೈಗಾರಿಕಾ ಪರಿಸರ ವ್ಯವಸ್ಥೆ ಎರಡೂ ಸಮಾನವಾಗಿ ಮಹತ್ವದ್ದಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಇವೆರಡೂ ಯುವಜನರ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ ಎಂದು ಹೇಳಿದರು. ಕಳೆದ 8-9 ವರ್ಷಗಳಲ್ಲಿ ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ನಲ್ಲಿನ ಐತಿಹಾಸಿಕ ಸುಧಾರಣೆಯನ್ನು ಅವರು ವಿವರಿಸಿದರು ಮತ್ತು ದೇಶವು 40 ಸಾವಿರ ಅನುವರ್ತನೆಗಳನ್ನು ರದ್ದುಗೊಳಿಸಿದೆ ಮತ್ತು ನೂರಾರು ಕಾನೂನು-ನಿಬಂಧನೆಗಳನ್ನು ತೆಗೆದು ಹಾಕಿದೆ ಎಂದು ತಿಳಿಸಿದರು. ವರ್ಷಗಳ ಹಿಂದೆ, ತಮ್ಮ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಈ ಕಾನೂನುಗಳನ್ನು ಬಳಸಿಕೊಂಡು ಉದ್ಯಮಿಗಳಿಗೆ ಹೇಗೆ ಕಿರುಕುಳ ನೀಡಲಾಗುತ್ತಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು. "ಇಂದು, ದೇಶವು ಉದ್ಯೋಗ ಸೃಷ್ಟಿಕರ್ತರೊಂದಿಗೆ ನಿಂತಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಹಳೆಯ 42 ಕೇಂದ್ರೀಯ ಕಾಯಿದೆಗಳನ್ನು ಸುಧಾರಿಸಲು ಪರಿಚಯಿಸಲಾದ ಜನ್ ವಿಶ್ವಾಸ್ ಮಸೂದೆ ಮತ್ತು ವ್ಯಾಪಾರ ಮಾಲೀಕರಲ್ಲಿ ವಿಶ್ವಾಸವನ್ನು ತುಂಬಲು ವಿವಾದ್ ಸೇ ವಿಶ್ವಾಸ್ ಯೋಜನೆಯನ್ನು ಈ ಸಂದರ್ಭದಲ್ಲಿ ವಿವರಿಸಿದರು. ಈ ವರ್ಷದ ಬಜೆಟ್‌ನಲ್ಲಿ ತೆರಿಗೆ ದರಗಳನ್ನು ಸುಧಾರಿಸಲಾಗಿದ್ದು, ಇದು ಉದ್ಯೋಗಿಗಳು ಮತ್ತು ಉದ್ಯಮಿಗಳ ಕೈಗೆ ಹೆಚ್ಚಿನ ಹಣವನ್ನು ತರುತ್ತದೆ ಎಂದು ಅವರು ಹೇಳಿದರು.

"ಭಾರತದಂತಹ ದೇಶಕ್ಕೆ ಅಭಿವೃದ್ಧಿ ಮತ್ತು ಪರಂಪರೆ ಸಮಾನವಾಗಿ ಮುಖ್ಯವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ದೇಶದ ಪ್ರತಿಯೊಂದು ಸಮುದಾಯ ಮತ್ತು ಸಿದ್ಧಾಂತದ ಅನನ್ಯತೆಯನ್ನು ಎತ್ತಿ ತೋರಿಸಿದರು. ಭಾರತದಲ್ಲಿ ಪರಂಪರೆ ಮತ್ತು ಆಧುನಿಕತೆಯ ಅಭಿವೃದ್ಧಿಯ ಸಮೃದ್ಧ ಹಾದಿಗೆ ಕೇಂದ್ರ ಸರ್ಕಾರದ ಇತ್ತೀಚೆಗಿನ ಪ್ರಗತಿಪರ ನಿಲುವು ಕಾರಣ. ದೇಶವು ಭೌತಿಕ ಮೂಲಸೌಕರ್ಯ ಮತ್ತು ಸಾಮಾಜಿಕ ಮೂಲಸೌಕರ್ಯ ಎರಡೂ ರಂಗಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ನಾವು ಪ್ರಾಚೀನ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿದ್ದೇವೆ, ಅದೇ ಸಮಯದಲ್ಲಿ ಡಿಜಿಟಲ್ ಪಾವತಿಗಳನ್ನು ಬಳಸುತ್ತಿದ್ದೇವೆ ಎಂದು ಅವರು ವಿವರಿಸಿದರು. ಈ ವರ್ಷದ ಮುಂಗಡ ಆಯವ್ಯಯವನ್ನು ವಿವರಿಸುತ್ತಾ, ಪುರಾತನ ದಾಖಲೆಗಳನ್ನು ಹೊಸ ತಂತ್ರಜ್ಞಾನಗಳ ಸಹಾಯದಿಂದ ಡಿಜಿಟಲೀಕರಣಗೊಳಿಸುವ ಘೋಷಣೆಯನ್ನು ಮಾಡಲಾಗಿದೆ. ಎಲ್ಲಾ ಸಮಾಜಗಳು ಮತ್ತು ಪಂಗಡಗಳ ಸದಸ್ಯರು ಮುಂದೆ ಬಂದು ಅವುಗಳಿಗೆ ಸಂಬಂಧಿಸಿದ ಯಾವುದೇ ಪ್ರಾಚೀನ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸುವಂತೆ ಸಮುದಾಯಗಳನ್ನು ಒತ್ತಾಯಿಸಿದರು. ಈ ರೀತಿಯ ಅಭಿಯಾನದೊಂದಿಗೆ ಯುವಕರನ್ನು ಸಂಯೋಜಿಸುವ ಮೂಲಕ ಬೋಹ್ರಾ ಸಮುದಾಯವು ನೀಡಬಹುದಾದ ಕೊಡುಗೆಗಳನ್ನು ಕೂಡಾ ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿವರಿಸಿದರು. ಪ್ರಪರಿಸರ ಸಂರಕ್ಷಣೆ, ಸಿರಿಧಾನ್ಯಗಳ ಪ್ರಚಾರ ಮತ್ತು ಭಾರತದ ಜಿ20 ಅಧ್ಯಕ್ಷೀಯತೆಗಳಂತಹ ಜಾಗತಿಕ ಕಾರ್ಯಕ್ರಮಗಳ ಉದಾಹರಣೆಗಳನ್ನು ಪ್ರಧಾನಮಂತ್ರಿಯವರು ನೀಡಿದರು, ಇಂತಹವುಗಳಲ್ಲಿ ಬೊಹ್ರಾ ಸಮುದಾಯವು ಸಾರ್ವಜನಿಕವಾಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಬಹುದು ಎಂದು ಪ್ರಧಾನಮಂತ್ರಿಯವರು ಹೇಳಿದರು

“ವಿದೇಶದಲ್ಲಿರುವ ಬೋಹ್ರಾ ಸಮುದಾಯದ ಜನರು ತೇಜೋಮಯವಾಗಿ ಪ್ರಕಾಶಿಸುತ್ತಿರುವ ಭಾರತದ ಬ್ರಾಂಡ್ ಅಂಬಾಸಿಡರ್‌ಗಳಾಗಿ ಕಾರ್ಯನಿರ್ವಹಿಸಬಹುದು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ತಲುಪುವಲ್ಲಿ ದಾವೂದಿ ಬೊಹ್ರಾ ಸಮುದಾಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂಬ ಆಶಾಭಾವದೊಂದಿಗೆ  ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಪರಮಪೂಜ್ಯ  ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವರುಗಳು ಉಪಸ್ಥಿತರಿದ್ದರು.

 

*****



(Release ID: 1898152) Visitor Counter : 163