ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್‌ ಸಂಸ್ಥಾನದ ಅಮೃತ ಮಹೋತ್ಸವ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


"ಗುರುಕುಲವು ವಿದ್ಯಾರ್ಥಿಗಳ ಶ್ರೇಯೋವೃದ್ಧಿಗೆ ಮನಸ್ಸು ಮತ್ತು ಹೃದಯಗಳನ್ನು ಆಲೋಚನೆ ಮತ್ತು ಮೌಲ್ಯಗಳೊಂದಿಗೆ ಅಭಿವೃದ್ಧಿಪಡಿಸಿದೆ"
 
“ಎಲ್ಲೆಡೆ ಜ್ಞಾನವನ್ನು ಹರಡುವುದು ಪ್ರಪಂಚದ ಅತ್ಯಂತ ಪ್ರಮುಖ ಕಾರ್ಯವಾಗಿದೆ. ಈ ಯೋಜನೆಗೆ ನಮ್ಮ ಭಾರತ ಸೂಕ್ತವಾಗಿದೆ”
 
"ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಮರ್ಪಿತರು ಹಾಗೂ ನಮ್ಮ ಇಸ್ರೋ ಮತ್ತು ಬಾರ್ಕ್‌ನ ವಿಜ್ಞಾನಿಗಳವರೆಗೆ ಗುರುಕುಲದ ವ್ಯವಸ್ಥೆಯು ದೇಶದ ಪ್ರತಿ ಕ್ಷೇತ್ರದಲ್ಲಿಯೂ ತನ್ನ ಕೊಡುಗೆ ನೀಡಿದೆ"
 
"ಆವಿಷ್ಕಾರ ಮತ್ತು ಸಂಶೋಧನೆ ನಮ್ಮ ಭಾರತೀಯ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ"
 
"ನಮ್ಮ ಗುರುಕುಲಗಳು ವಿಜ್ಞಾನ, ಆಧ್ಯಾತ್ಮಿಕತೆ ಮತ್ತು ಲಿಂಗ ಸಮಾನತೆಯ ಬಗ್ಗೆ ಮಾನವೀಯತೆ ಸೂಕ್ತ ದಿಶೆ ತೋರಿಸಿವೆ"
 
"ನಮ್ಮ ದೇಶದಲ್ಲಿ ಶಿಕ್ಷಣ ಎಲ್ಲೆಡೆ ವಿಸ್ತರಿಸಲು  ಅಭೂತಪೂರ್ವ ಕೆಲಸ ನಡೆಯುತ್ತಿದೆ"

Posted On: 24 DEC 2022 12:11PM by PIB Bengaluru

ಪ್ರಧಾನ ಮಂತ್ರಿ. ಶ್ರೀ ನರೇಂದ್ರ ಮೋದಿ ಅವರು ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನದ ಅಮೃತ ಮಹೋತ್ಸವವನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು, ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನ 75 ವರ್ಷಗಳನ್ನು ಪೂರೈಸಿದೆ. ಇದೊಂದು ಮಹತ್ವದ ಮೈಲುಗಲ್ಲು. ಈ ಸಾಧನೆ ಹಾಗೂ ಸುದೀರ್ಘ ಸೇವೆಯನ್ನು ಒದಗಿಸುವ ಮೂಲಕ ಜ್ಞಾನ ದಾಸೋಹ ಮಾಡುತ್ತಿರುವ  ಎಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು,
 
ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವಂದಾಸ್ಜಿ ಸ್ವಾಮಿಗಳ ನೇತೃತ್ವದಲ್ಲಿ ಈ ಸುದೀರ್ಘ ಪ್ರಯಾಣ ಕಠಿಣ ಪರಿಶ್ರಮ, ನಿರಂತರ ಪ್ರಯತ್ನಗಳನ್ನು ಒಳಗೊಂಡಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ. ಭಗವಾನ್ ಶ್ರೀ ಸ್ವಾಮಿ ನಾರಾಯಣರ ಹೆಸರನ್ನು ಸ್ಮರಿಸುವ ಮೂಲಕ ಹೊಸ ರೀತಿಯ ಪ್ರಜ್ಞಾಪೂರ್ವಕ ಹಾಗೂ ಯೋಚನಾ ಲಹರಿ ಅನುಭವಿಸಬಹುದು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದರು. 
 
ದೇಶದ ಮತ್ತು ಗುರುಕುಲ ಎರಡೂ ಈಗ ಅಮೃತ ಮಹೋತ್ಸವ ಆಚರಿಸುತ್ತಿರುವುದು ನಿಜಕ್ಕೂ ಕಾಕತಾಳೀಯವಾಗಿದೆ ಎಂದು ಪ್ರಧಾನಮಂತ್ರಿಗಳು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇತಿಹಾಸದುದ್ದಕ್ಕೂ ಇಂತಹ ಕಾಕತಾಳೀಯ ಘಟನೆಗಳಿಂದ ಭಾರತೀಯ ಸಂಪ್ರದಾಯಕ್ಕೆ ಶಕ್ತಿ ತುಂಬಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಬಣ್ಣಿಸಿದರು. 
 
ಇತಿಹಾಸದಲ್ಲಿ ಈ ಸಂಗಮಗಳು ಅಂದರೆ ಕರ್ತವ್ಯ ಮತ್ತು ಕಠಿಣ ಪರಿಶ್ರಮ, ಸಂಸ್ಕೃತಿ ಮತ್ತು ಸಮರ್ಪಣೆ, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯು ಹೀಗೆ ಎಲ್ಲವೂ ಪ್ರೇರಣಾದಾಯಕ ಎಂದು ಹೇಳಿದರು. ಸ್ವಾತಂತ್ರ್ಯದ ನಂತರ ಪ್ರಾಚೀನ ಭಾರತೀಯ ಶಿಕ್ಷಣ ವ್ಯವಸ್ಥೆಯ ವೈಭವವನ್ನು ಪುನರುಜ್ಜೀವನಗೊಳಿಸಲು ಎಡವಿದ್ದು ಹಾಗೂ ಶಿಕ್ಷಣದ ಬಗ್ಗೆ  ನಿರ್ಲಕ್ಷ್ಯ ತಾಳಿದ್ದು ನಿಜಕ್ಕೂ ವಿಷಾದನೀಯ. ಹಿಂದಿನ ಸರ್ಕಾರಗಳು ಎಡವಿದ್ದರಿಂದ ನಮ್ಮ ದೇಶದ ಸಂತರು ಮತ್ತು ಆಚಾರ್ಯರು ವಿವಿಧ ಸವಾಲಗಳನ್ನು ಸ್ವೀಕರಿಸಿದರು ಎಂದು ಪ್ರಧಾನಂತ್ರಿ ಶ್ರೀನರೇಂದ್ರ ಮೋದಿ ಹೇಳಿದರು. "ಸ್ವಾಮಿನಾರಾಯಣ ಗುರುಕುಲವು ಈ 'ಸುಯೋಗ'ದ ನೇರ ಉದಾಹರಣೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯ ಚಳವಳಿಯ ಆದರ್ಶಗಳ ತಳಹದಿಯ ಮೇಲೆ ಈ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. "ನಿಜವಾದ ಜ್ಞಾನವನ್ನು ಹರಡುವುದು ಅತ್ಯಂತ ಪ್ರಮುಖ ಕಾರ್ಯವಾಗಿದೆ, ಮತ್ತು ಇದು ವಿಶ್ವದಲ್ಲಿ ಜ್ಞಾನ ಮತ್ತು ಶಿಕ್ಷಣದ ಕಡೆಗೆ ಭಾರತ ತೋರುತ್ತಿರುವ ಬಹು ದೊಡ್ಡ ಶಕ್ತಿಯಾಗಿದೆ. ಭಾರತೀಯ ನಾಗರಿಕತೆಯ ಬೇರುಗಳನ್ನು ಸ್ಥಾಪಿಸುವಲ್ಲಿ ತಮ್ಮದೇ ಆದ ಕೊಡುವೆ ನೀಡಿವೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಹೇಳಿದರು. 

ಗುರುಕುಲ ವಿದ್ಯಾ ಪ್ರತಿಷ್ಠಾನಂ ರಾಜ್‌ಕೋಟ್‌ನಲ್ಲಿ ಕೇವಲ ಏಳು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ಇಂದು ವಿಶ್ವದಾದ್ಯಂತ ನಲವತ್ತು ಶಾಖೆಗಳನ್ನು ಹೊಂದಿದೆ, ಇದು ಪ್ರಪಂಚದಾದ್ಯಂತದ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಈ ಗುರುಕುಲ ಎಲ್ಲರಿಗೂ ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿಗಳು ತಿಳಿಸಿದರು. ಕಳೆದ 75 ವರ್ಷಗಳಲ್ಲಿ ಗುರುಕುಲವು ಉತ್ತಮ ಆಲೋಚನೆಗಳು ಮತ್ತು ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳ ಮನಸ್ಸು ಮತ್ತು ಹೃದಯವನ್ನು ಉತ್ತಮ ರೀತಿಯಲ್ಲಿ ಹಾಗೂ ಮೌಲ್ಯಯುತವಾಗಿ ಮಾರ್ಪಾಡು ಮಾಡುತ್ತಿವೆ. ಇದರಿಂದ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು. ಆಧ್ಯಾತ್ಮಿಕ ಕ್ಷೇತ್ರ ಹಾಗೂ ಇಸ್ರೋ ಮತ್ತು ಬಾರ್ಕ್‌ನ ವಿಜ್ಞಾನಿಗಳವರೆಗೆ ಗುರುಕುಲದ ವ್ಯವಸ್ಥೆಯು ದೇಶದ ಪ್ರತಿ ಕ್ಷೇತ್ರದಲ್ಲಿಯೂ ತನ್ನ ಕೊಡುಗೆ ನೀಡಿದೆ" ಎಂದು ತಿಳಿಸಿದರು.

ಬಡ ವಿದ್ಯಾರ್ಥಿಗಳಿಗೆ ಕೇವಲ ಒಂದು ರೂಪಾಯಿ ಶುಲ್ಕವನ್ನು ವಿಧಿಸುವ ಗುರುಕುಲ ಎಲ್ಲರಿಗೂ ಮಾದರಿಯಾಗಿದೆ. ಇದರಿಂದಾಗಿ ಎಲ್ಲರೂ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದರು.
 
ಜ್ಞಾನವು ಜೀವನದ ಅತ್ಯುನ್ನತ ಅನ್ವೇಷಣೆಯಾಗಿದೆ. ಪ್ರಪಂಚದ ಇತರ ಭಾಗಗಳನ್ನು ಅವರ ಆಡಳಿತ ಮತ್ತು ರಾಜವಂಶಗಳೊಂದಿಗೆ ಗುರುತಿಸಿದಾಗ, ಭಾರತೀಯ ಗುರುತನ್ನು ಗುರುಕುಲಗಳೊಂದಿಗೆ ಗುರುತಿಸಬಹುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ನಮ್ಮ ಗುರುಕುಲಗಳು ಶತಮಾನಗಳಿಂದ ಸಮಾನತೆ, ಕಾಳಜಿ ಮತ್ತು ಸೇವಾ ಮನೋಭಾವವನ್ನು ಹೊಂದಿವೆ. ಅವುಗಳನ್ನೇ ಇಂದಿಗೂ ಪ್ರತಿನಿಧಿಸುತ್ತವೆ" ಎಂದು ಅವರು ಹೇಳಿದರು. ನಳಂದಾ ಮತ್ತು ತಕ್ಷಶಿಲೆ ಭಾರತದ ಪ್ರಾಚೀನ ವೈಭವಕ್ಕೆ ಸಾಕ್ಷಿಯಾಗಿವೆ ಎಂದು ಪ್ರಧನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಮರಿಸಿದರು. 
 
“ಆವಿಷ್ಕಾರ ಮತ್ತು ಸಂಶೋಧನೆಯು ಭಾರತೀಯ ಜೀವನಶೈಲಿಯ ಅವಿಭಾಜ್ಯ ಅಂಗ. ಸ್ವಯಂ ಅನ್ವೇಷಣೆಯಿಂದ ದೈವತ್ವ, ಆಯುರ್ವೇದದಿಂದ ಆಧ್ಯಾತ್ಮ (ಆಧ್ಯಾತ್ಮಿಕತೆ), ಸಮಾಜ ವಿಜ್ಞಾನದಿಂದ ಸೌರ ವಿಜ್ಞಾನ, ಗಣಿತದಿಂದ ಲೋಹಶಾಸ್ತ್ರ ಮತ್ತು ಶೂನ್ಯದಿಂದ ಅನಂತದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಂಶೋಧನೆ ಮತ್ತುವಿಶೇಷ ಅಧ್ಯಯನ ಮಾಡಲಾಗಿದೆ. "ಭಾರತ, ಇಂದಿನ ಸಂಕಷ್ಟಕರ ಯುಗದಲ್ಲಿ, ಮಾನವೀಯತೆಯ ಬೆಳಕಿನ ಕಿರಣಗಳನ್ನು ನೀಡಿದೆ, ಅದು ಆಧುನಿಕ ವಿಜ್ಞಾನಕ್ಕೆ ಹೊಸ ದಾರಿ ಮಾಡಿಕೊಟ್ಟಿದೆ" ಎಂದು ಅವರು ಹೇಳಿದರು. 

ಭಾರತೀಯ ಪುರಾತನ ಗುರುಕುಲ ವ್ಯವಸ್ಥೆಯು ಲಿಂಗ ಸಮಾನತೆ ಮತ್ತು ಸೂಕ್ಷ್ಮತೆಯನ್ನು ಎತ್ತಿ ಹಿಡಿದಿದೆ. ‘ಕನ್ಯಾ ಗುರುಕುಲʼ ವನ್ನು ಆರಂಭಿಸಿದ್ದು ಸ್ವಾಮಿನಾರಾಯಣ ಗುರುಕುಲದ ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದರು.
 
ಭಾರತದ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಮತ್ತು ಆಜಾದಿ ಕಾ ಅಮೃತ್ ಕಾಲ್‌ನಲ್ಲಿ ಪ್ರತಿ ಹಂತದಲ್ಲೂ ದೇಶದಲ್ಲಿ ಶಿಕ್ಷಣ ಮೂಲಸೌಕರ್ಯ ಮತ್ತು ನೀತಿಗಳನ್ನು ಅಭಿವೃದ್ಧಿಪಡಿಸಲು ದೇಶವು ತ್ವರಿತ ಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು. ದೇಶದಲ್ಲಿ ಐಐಟಿ, ಐಐಐಟಿ, ಐಐಎಂ ಮತ್ತು ಎಐಐಎಂಎಸ್‌ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಮತ್ತು 2014 ರ ಹಿಂದಿನ ಸಮಯಕ್ಕೆ ಹೋಲಿಸಿದರೆ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ತಿಳಿಸಿದರು.
 
ಹೊಸ ಶೈಕ್ಷಣಿಕ ನೀತಿಯೊಂದಿಗೆ, ದೇಶವು ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಇದರ ಪರಿಣಾಮವಾಗಿ, ಹೊಸ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುವ ಹೊಸ ತಲೆಮಾರುಗಳು ದೇಶದ ಆದರ್ಶ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದು ಪ್ರಧಾನಿ ವಿವರಿಸಿದರು.
 
ಮುಂದಿನ 25 ವರ್ಷಗಳ ಪ್ರಯಾಣದಲ್ಲಿ ಸಂತರ ಪಾತ್ರ ಮಹತ್ವದ್ದಾಗಿದೆ. “ಇಂದು ಭಾರತದ ನಿರ್ಣಯಗಳು ಹೊಸ ಆಲೋಚನೆಗಳದ್ದಾಗಿದೆ. ಅವುಗಳನ್ನು ಸಾಕಾರಗೊಳಿಸುವ ಪ್ರಯತ್ನಗಳು ವಿಶೇಷ ಪರಿಶ್ರಮಗಳನ್ನು ಒಳಗೊಂಡಿವೆ. ಇಂದು ದೇಶವು ಡಿಜಿಟಲ್ ಇಂಡಿಯಾ, ಆತ್ಮನಿರ್ಭರ್ ಭಾರತ್, ಸ್ಥಳೀಯರಿಗೆ ಆದ್ಯತೆ, ಪ್ರತಿ ಜಿಲ್ಲೆಯಲ್ಲಿ 75 ಅಮೃತ್ ಸರೋವರಗಳು ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಹೀಗೆ ಹಲವಾರು ವೈವಿಧ್ಯಮ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿವೆ. ಒಟ್ಟಾರೆಯಾಗಿ ಹೊಸ ರೀತಿಯ ಯೋಚನಾ ಲಹರಿಯಲ್ಲಿ ಚಲಿಸುತ್ತಿದೆ. ‘ಸಾಮಾಜಿಕ ಪರಿವರ್ತನೆ ಮತ್ತು ಸಮಾಜ ಸುಧಾರಣೆಯ ಈ ಯೋಜನೆಗಳಲ್ಲಿ ಸಬ್‌ ಕಾ ಪ್ರಯಾಸ್ (ಎಲ್ಲರ ಪ್ರಯತ್ನ) ಅನ್ನೂ ಒಳಗೊಂಡಿದೆ. ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಎಲ್ಲರೂ ತಮ್ಮದೇ ರೀತಿಯ ಕೊಡುಗೆಗಳನ್ನು ನೀಡಬೇಕಾಗಿದೆ. ಇದು ಅಗತ್ಯವಾಗಿದೆ, ಕೋಟ್ಯಂತರ ಜನರ ಜೀವನದ ಮೇಲೆ ಇದು ಪರಿಣಾಮ ಬೀರುತ್ತದೆ. ಗುರುಕುಲದ ವಿದ್ಯಾರ್ಥಿಗಳಿಗೆ ಕನಿಷ್ಠ 15 ದಿನಗಳ ಕಾಲ ಈಶಾನ್ಯ ಭಾರತ ಪ್ರವಾಸ ಮಾಡಿಸಬೇಕು. ರಾಷ್ಟ್ರವನ್ನು ಮತ್ತಷ್ಟು ಬಲಪಡಿಸಲು ಜನರೊಂದಿಗೆ ಸಂಪರ್ಕ ಸಾಧಿಸುವಂತೆ ನಾವು ಸೂಕ್ತ ದಾರಿ ತೋರಿಸಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಲಹೆ ನೀಡಿದರು. 
 
ಬೇಟಿ ಬಚಾವೋ ಮತ್ತು ಪರಿಸರ ಸಂರಕ್ಷಣೆಯಂತಹ ವಿಷಯಗಳ ಬಗ್ಗೆ ಶ್ರೀ ನರೇಂದ್ರ ಮೋದಿ  ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಏಕ್ ಭಾರತ್ ಶ್ರೇಷ್ಠ ಭಾರತವನ್ನು ಬಲಪಡಿಸಲು ಜನರು ಒಗ್ಗೂಡಬೇಕೆಂದು ಅವರು ಒತ್ತಾಯಿಸಿದರು. "ಸ್ವಾಮಿನಾರಾಯಣ ಗುರುಕುಲ ವಿದ್ಯಾ ಪ್ರತಿಷ್ಠಾನಂನಂಥ ಸಂಸ್ಥೆಗಳು ಈ ಸಂಕಲ್ಪಗಳ ಪಯಣಕ್ಕೆ ಬಲ ನೀಡುವುದನ್ನು ಮುಂದುವರಿಸುತ್ತವೆ ಎಂಬ ಭರವಸೆ ನನಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಿಳಿಸಿದರು.
 
ಹಿನ್ನೆಲೆ
 
ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನವನ್ನು 1948 ರಲ್ಲಿ ಗುರುದೇವ ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವಂದಾಸ್ಜಿ ಸ್ವಾಮಿ ಅವರ ಮುಂದಾಳತ್ವದಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಂದಿಗವರೆಗೂ ಸಂಸ್ಥಾನವು ಈಗ ಸಾಕಷ್ಟು ವಿಸ್ತರವಾಗಿ ಹರಿಡಿದೆ. ಪ್ರಸ್ತುತ ವಿಶ್ವದಾದ್ಯಂತ 40 ಕ್ಕೂ ಹೆಚ್ಚು ಶಾಖೆಗಳನ್ನು ಇದು ಹೊಂದಿದೆ, 25,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆ, ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣ ಒದಗಿಸಲಾಗುತ್ತಿದೆ.

*****



(Release ID: 1886348) Visitor Counter : 139