ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಜಿ-20 ಅಧ್ಯಕ್ಷತೆಯ  ಅಂಶಗಳನ್ನು ಚರ್ಚಿಸಲು ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಎಲ್.ಜಿ.ಗಳ ವೀಡಿಯೊ ಸಭೆ

Posted On: 09 DEC 2022 8:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಜಿ 20 ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ರಾಜ್ಯಗಳ ರಾಜ್ಯಪಾಲರು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳ ವೀಡಿಯೊ ಸಭೆಯನ್ನು ನಡೆಸಿದರು.

ಭಾರತದ ಜಿ-20 ಅಧ್ಯಕ್ಷ ಸ್ಥಾನವು ಇಡೀ ರಾಷ್ಟ್ರಕ್ಕೆ ಸೇರಿದ್ದು, ಮತ್ತು ದೇಶದ ಶಕ್ತಿಯನ್ನು ಪ್ರದರ್ಶಿಸಲು ಇದೊಂದು ಅಪೂರ್ವ ಅವಕಾಶವಾಗಿದೆ ಎಂದು ಪ್ರಧಾನಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ತಂಡ ಕಾರ್ಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವಿವಿಧ ಜಿ-20 ಕಾರ್ಯಕ್ರಮಗಳ ಆಯೋಜನೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರವನ್ನು ಕೋರಿದರು. ಸಾಂಪ್ರದಾಯಿಕ ದೊಡ್ಡ ಮಹಾನಗರಗಳ ಆಚೆಗೆ ಭಾರತದ ಕೆಲವು ಭಾಗಗಳನ್ನು ಪ್ರದರ್ಶಿಸಲು ಜಿ 20 ಅಧ್ಯಕ್ಷತೆ ಸಹಾಯ ಮಾಡುತ್ತದೆ ಎಂಬ ಅಂಶದತ್ತ ಅವರು ಗಮನ ಸೆಳೆದರು, ಆ ಮೂಲಕ ನಮ್ಮ ದೇಶದ ಪ್ರತಿಯೊಂದು ಭಾಗದ ಅನನ್ಯತೆಯನ್ನು ಹೊರತರಲು ಸಾಧ್ಯವಾಗುತ್ತದೆ ಎಂದರು.

ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತಕ್ಕೆ ಆಗಮಿಸಲಿರುವ ಹೆಚ್ಚಿನ ಸಂಖ್ಯೆಯ ಸಂದರ್ಶಕರು ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ವಿವಿಧ ಕಾರ್ಯಕ್ರಮಗಳ ಮೇಲೆ ಗಮನ ಹರಿಸುತ್ತವೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಕರ್ಷಕ ವ್ಯಾಪಾರೋದ್ಯಮ, ಹೂಡಿಕೆ ಮತ್ತು ಪ್ರವಾಸೋದ್ಯಮ ತಾಣಗಳಾಗಿ ತಮ್ಮನ್ನು ತಾವು ಮರುಬ್ರಾಂಡ್ ಮಾಡಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದು  ಮಹತ್ವದ ಸಂದರ್ಭ ಎಂದೂ  ಒತ್ತಿ ಹೇಳಿದರು. ಜಿ-20 ಕಾರ್ಯಕ್ರಮಗಳಲ್ಲಿ ಇಡೀ ಸರ್ಕಾರ ಮತ್ತು ಇಡೀ ಸಮಾಜದ ಧೋರಣೆಯ ವಿಧಾನದ ಮೂಲಕ ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಪುನರುಚ್ಚರಿಸಿದರು.

ಅನೇಕ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ ಗಳು ಸಭೆಯಲ್ಲಿ ತಮ್ಮ ಆಲೋಚನೆಗಳನ್ನು, ಚಿಂತನೆಗಳನ್ನು ಹಂಚಿಕೊಂಡರು, ಜಿ 20 ಸಭೆಗಳನ್ನು ಸೂಕ್ತವಾಗಿ ಆಯೋಜಿಸಲು ರಾಜ್ಯಗಳು ಮಾಡುತ್ತಿರುವ ಸಿದ್ಧತೆಗಳ ಬಗ್ಗೆಯೂ ಒತ್ತಿ ಹೇಳಿದರು.

ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರು ಕೂಡ ಮಾತನಾಡಿದರು ಮತ್ತು ಭಾರತದ ಜಿ 20 ಷರ್ಪಾ (ಅಂತಾರಾಷ್ಟ್ರೀಯ ಶೃಂಗ ಸಭೆಯ ಸರಕಾರದ ಮುಖ್ಯಸ್ಥರು) ಅವರು ವಿವರಗಳನ್ನು ಪ್ರಸ್ತುತಪಡಿಸಿದರು.

*****



(Release ID: 1882596) Visitor Counter : 106