ಪ್ರವಾಸೋದ್ಯಮ ಸಚಿವಾಲಯ

ಜನರನ್ನು ಒಗ್ಗೂಡಿಸುವಲ್ಲಿ ಭಾರತೀಯ ಸಂಗೀತ ಎಂತಹ ಮಹತ್ವದ ಪಾತ್ರ ವಹಿಸಿದೆ ಎಂಬ ಬಗ್ಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ವಿಶದ ಪಡಿಸಿದ್ದಾರೆ.


​​​​​​​ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು, ಅದನ್ನು ಉತ್ತೇಜಿಸುವುದು ಮತ್ತು ಅದನ್ನು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿ: ಶ್ರೀ ನರೇಂದ್ರ ಮೋದಿ

Posted On: 29 NOV 2022 1:39PM by PIB Bengaluru

ಆಕಾಶವಾಣಿಯ ಸರಣಿ ಕಾರ್ಯಕ್ರಮ ‘ಮನ್ ಕಿ ಬಾತ್ʼ ನ 2022 ರ ನವೆಂಬರ್ 27 ರ 95ನೇ ಆವೃತ್ತಿಯಲ್ಲಿ  ನಮ್ಮ ದೇಶವು ವಿಶ್ವದ ಅತ್ಯಂತ ಹಳೆಯ ಸಂಪ್ರದಾಯಗಳಿಗೆ ನೆಲೆಯಾಗಿದೆ ಎಂದು ಹೇಳಿದರು. ಆದ್ದರಿಂದ, ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು, ಅದನ್ನು ಉತ್ತೇಜಿಸುವುದು ಮತ್ತು ಅದನ್ನು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಭಾರತೀಯ ಸಂಗೀತವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಜನರನ್ನು ಹೇಗೆ ಹತ್ತಿರ ತರುತ್ತಿದೆ ಎನ್ನುವುದನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಸಂಗೀತವು ದೇಹಕ್ಕೆ  ವಿಶ್ರಾಂತಿ ನೀಡುವುದಲ್ಲದೆ ಜೊತೆಗೆ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ, ಸಂಗೀತವು ನಮ್ಮ ಸಮಾಜವನ್ನು ಕೂಡ ಬೆಸೆಯುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರಧಾನಮಂತ್ರಿಯವರು ನಾಗಾ ಸಮುದಾಯದ ಉದಾಹರಣೆಯನ್ನು ನೀಡಿದರು ಮತ್ತು ಅವರ ಭವ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಅವರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ವಿವರಿಸಿದರು.

ಮನ್ ಕಿ ಬಾತ್ ನಲ್ಲಿ, ಪ್ರಧಾನಮಂತ್ರಿಯವರು ಗ್ರೀಸ್‌ ನ ಗಾಯಕರ ಕುರಿತು ಮಾತನಾಡಿದರು - 'ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್' ಅವರು ಗಾಂಧೀಜಿಯವರ 150ನೇ ಜಯಂತಿಯ  ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಾಪು ಅವರ ನೆಚ್ಚಿನ ಹಾಡನ್ನು ಹಾಡಿದ್ದಾರೆ. ಗಾಯಕರಿಗೆ ಭಾರತದ ಬಗ್ಗೆ ತುಂಬಾ ಪ್ರೀತಿ ಇದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಕಳೆದ 42 ವರ್ಷಗಳಲ್ಲಿ ಅವರು ಬಹುತೇಕ ಪ್ರತಿ ವರ್ಷ ಭಾರತಕ್ಕೆ ಬಂದಿದ್ದಾರೆ. ಅವರು ಭಾರತೀಯ ಸಂಗೀತದ ಮೂಲ, ವಿವಿಧ ಭಾರತೀಯ ಸಂಗೀತ ವ್ಯವಸ್ಥೆಗಳು, ವಿವಿಧ ರೀತಿಯ ರಾಗಗಳು, ತಾಳಗಳು ಮತ್ತು ರಸಗಳು ಮತ್ತು ವಿವಿಧ ಘರಾನಾಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ಭಾರತೀಯ ಸಂಗೀತದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಅಧ್ಯಯನ ಮಾಡಿದ್ದಾರೆ; ಅವರು ಭಾರತದ ಶಾಸ್ತ್ರೀಯ ನೃತ್ಯಗಳ ವಿವಿಧ ಅಂಶಗಳನ್ನು ಸಹ ನಿಕಟವಾಗಿ ಅರ್ಥಮಾಡಿಕೊಂಡಿದ್ದಾರೆ. ಈಗ ಅವರು ಭಾರತಕ್ಕೆ ಸಂಬಂಧಿಸಿದ ಈ ಎಲ್ಲ ಅನುಭವಗಳನ್ನು ಪುಸ್ತಕದಲ್ಲಿ ಬಹಳ ಸುಂದರವಾಗಿ ರೂಪಿಸಿದ್ದಾರೆ. ಇಂಡಿಯನ್ ಮ್ಯೂಸಿಕ್  ಎನ್ನುವ ಅವರ ಪುಸ್ತಕದಲ್ಲಿ ಸುಮಾರು 760 ಚಿತ್ರಗಳಿವೆ. ಈ ಹೆಚ್ಚಿನ ಫೋಟೋಗಳನ್ನು ಅವರೇ ಸೆರೆ ಹಿಡಿದಿದ್ದಾರೆ. ಇತರ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಇರುವ ಇಂತಹ ಉತ್ಸಾಹ ಮತ್ತು ಆಕರ್ಷಣೆ ನಿಜವಾಗಿಯೂ ಹೃದಯ ತಟ್ಟುತ್ತದೆ.

ಕಳೆದ 8 ವರ್ಷಗಳಲ್ಲಿ ಭಾರತದಿಂದ ಸಂಗೀತ ವಾದ್ಯಗಳ ರಫ್ತು ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಪ್ರಧಾನಮಂತ್ರಿಯವರು ಹೇಳಿದರು. ಎಲೆಕ್ಟ್ರಿಕಲ್ ಸಂಗೀತ ವಾದ್ಯಗಳ ಬಗ್ಗೆ ಮಾತನಾಡುತ್ತಾ, ಅವುಗಳ ರಫ್ತು 60 ಪಟ್ಟು ಹೆಚ್ಚಾಗಿದೆ. ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ವ್ಯಾಮೋಹ ಹೆಚ್ಚುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ. ಭಾರತೀಯ ಸಂಗೀತ ವಾದ್ಯಗಳ ದೊಡ್ಡ ಖರೀದಿದಾರರು ಅಮೆರಿಕ, ಜರ್ಮನಿ, ಫ್ರಾನ್ಸ್, ಜಪಾನ್ ಮತ್ತು ಯುಕೆ ನಂತಹ ಅಭಿವೃದ್ಧಿ ಹೊಂದಿದ ದೇಶಗಳು. ನಮ್ಮ ದೇಶವು ಸಂಗೀತ, ನೃತ್ಯ ಮತ್ತು ಕಲೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವುದು ನಮ್ಮೆಲ್ಲರ ಭಾಗ್ಯದ ಸಂಗತಿ ಎಂದು ಹೇಳಿದರು.

'ನೀತಿ ಶತಕ' ಬರೆದ ಶ್ರೇಷ್ಠ ಋಷಿ ಕವಿ ಭರ್ತೃಹರಿಯ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ಪದ್ಯದಲ್ಲಿ ಅವರು ಕಲೆ, ಸಂಗೀತ ಮತ್ತು ಸಾಹಿತ್ಯದೊಂದಿಗಿನ ಬಾಂಧವ್ಯವು ಮಾನವೀಯತೆಯ ನಿಜವಾದ ಗುರುತು ಎಂದು ಹೇಳುತ್ತಾರೆ. ವಾಸ್ತವವಾಗಿ, ನಮ್ಮ ಸಂಸ್ಕೃತಿ ಅದನ್ನು ಮಾನವೀಯತೆಯ ಮೇಲೆ, ದೈವತ್ವಕ್ಕೆ ಕೊಂಡೊಯ್ಯುತ್ತದೆ. ವೇದಗಳಲ್ಲಿ ಸಾಮವೇದವನ್ನು ನಮ್ಮ ವೈವಿಧ್ಯಮಯ ಸಂಗೀತದ ಮೂಲ ಎಂದು ಕರೆಯಲಾಗಿದೆ. ಅದು ತಾಯಿ ಸರಸ್ವತಿಯ ವೀಣೆಯಾಗಿರಲಿ, ಭಗವಾನ್ ಕೃಷ್ಣನ ಕೊಳಲು ಆಗಿರಲಿ ಅಥವಾ ಭೋಲೇನಾಥನ ಡಮರುಗ ಆಗಿರಲಿ, ನಮ್ಮ ದೇವರು ಮತ್ತು ದೇವತೆಗಳೂ ಸಂಗೀತದೊಂದಿಗೆ ಬೆರೆತಿದ್ದಾರೆ. ನಾವು ಭಾರತೀಯರು ಎಲ್ಲದರಲ್ಲೂ ಸಂಗೀತವನ್ನು ಕಾಣುತ್ತೇವೆ. ನದಿಯ ಝುಳು ಝುಳು ನಾದ, ಮಳೆಹನಿಗಳು, ಹಕ್ಕಿಗಳ ಚಿಲಿಪಿಲಿ ಅಥವಾ ಗಾಳಿಯ ನಿನಾದ, ಸಂಗೀತವು ನಮ್ಮ ನಾಗರಿಕತೆಯ ಎಲ್ಲೆಡೆ ಇರುತ್ತದೆ. ಈ ಸಂಗೀತವು ದೇಹವನ್ನು ಮಾತ್ರವಲ್ಲ, ಮನಸ್ಸಿಗೂ ಉಲ್ಲಾಸವನ್ನು ನೀಡುತ್ತದೆ. ಸಂಗೀತವೂ ನಮ್ಮ ಸಮಾಜವನ್ನು ಬೆಸೆಯುತ್ತದೆ. ಭಾಂಗ್ರಾ ಮತ್ತು ಲಾವಣಿ ಉತ್ಸಾಹ ಮತ್ತು ಸಂತೋಷದ ಭಾವವನ್ನು ಹೊಂದಿದ್ದರೆ, ರವೀಂದ್ರ ಸಂಗೀತ ನಮ್ಮ ಆತ್ಮಗಳನ್ನು ಉನ್ನತೀಕರಿಸುತ್ತದೆ. ದೇಶದಾದ್ಯಂತ ಇರುವ ಆದಿವಾಸಿಗಳು ವಿಭಿನ್ನ ಸಂಗೀತ ಸಂಪ್ರದಾಯಗಳನ್ನು ಹೊಂದಿದ್ದಾರೆ. ಅವರು ಪರಸ್ಪರ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ನಮ್ಮನ್ನು ಪ್ರೇರೇಪಿಸುತ್ತಾರೆ. ನಮ್ಮ ಸಂಗೀತದ ಪ್ರಕಾರಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲದೆ ಪ್ರಪಂಚದ ಸಂಗೀತದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಭಾರತೀಯ ಸಂಗೀತದ ಕೀರ್ತಿ ಪ್ರಪಂಚದ ಮೂಲೆ ಮೂಲೆಗೂ ಹರಡಿದೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ದಕ್ಷಿಣ ಅಮೆರಿಕಾದಲ್ಲಿರುವ ಭಾರತದಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ದಕ್ಷಿಣ ಅಮೆರಿಕಾದ ದೇಶವಾದ ಗಯಾನದವರೆಗೆ ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಪ್ರಭಾವದ ಬಗ್ಗೆ ಪ್ರಧಾನಿ ವಿವರಿಸಿದರು. 19 ಮತ್ತು 20 ನೇ ಶತಮಾನಗಳಲ್ಲಿ, ಭಾರತದಿಂದ ಹೆಚ್ಚಿನ ಸಂಖ್ಯೆಯ ಜನರು ಗಯಾನಾಕ್ಕೆ ಹೋದರು. ಭಜನೆ ಕೀರ್ತನೆಯ ಸಂಪ್ರದಾಯ ಸೇರಿದಂತೆ ಭಾರತದ ಅನೇಕ ಸಂಪ್ರದಾಯಗಳನ್ನು ಅವರು ತಮ್ಮೊಂದಿಗೆ ತೆಗೆದುಕೊಂಡರು. ನಾವು ಭಾರತದಲ್ಲಿ ಹೋಳಿ ಆಚರಿಸುವಾಗ, ಗಯಾನಾದಲ್ಲಿ ಹೋಳಿಯ ಬಣ್ಣಗಳು ಉತ್ಸಾಹದಿಂದ ಜೀವಂತವಾಗಿವೆ. ಹೋಳಿಯ ಬಣ್ಣಗಳಿರುವಲ್ಲಿ, ಫಗುವಾದ ಸಂಗೀತವೂ ಇರುತ್ತದೆ. ಗಯಾನಾದ ಫಗ್ವಾದಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ಮದುವೆಯ ಹಾಡುಗಳನ್ನು ಹಾಡುವ ವಿಶೇಷ ಸಂಪ್ರದಾಯವಿದೆ. ಈ ಹಾಡುಗಳನ್ನು ಚೌಟಲ್ ಎಂದು ಕರೆಯಲಾಗುತ್ತದೆ. ನಾವು ಇಲ್ಲಿ ಮಾಡುವಂತೆ ಅದೇ ರೀತಿಯ ರಾಗದಲ್ಲಿ ಮತ್ತು ಹೆಚ್ಚಿನ ಸ್ಥಾಯಿಯಲ್ಲಿ ಅವುಗಳನ್ನು ಹಾಡಲಾಗುತ್ತದೆ. ಅಷ್ಟೇ ಅಲ್ಲ, ಚೌಟಲ್ ಸ್ಪರ್ಧೆಗಳು ಗಯಾನಾದಲ್ಲಿಯೂ ನಡೆಯುತ್ತವೆ. ಅಂತೆಯೇ, ಅನೇಕ ಭಾರತೀಯರು, ವಿಶೇಷವಾಗಿ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಫಿಜಿಗೆ ಹೋಗಿದ್ದರು. ಅವರು ಸಾಂಪ್ರದಾಯಿಕ ಭಜನೆ ಕೀರ್ತನೆಗಳನ್ನು ಹಾಡುತ್ತಿದ್ದರು, ಮುಖ್ಯವಾಗಿ ರಾಮಚರಿತಮಾನಸದ ದ್ವಿಪದಿಗಳಿಂದ ಕೂಡಿದ್ದವು. ಅವರು ಫಿಜಿಯಲ್ಲಿ ಭಜನೆ-ಕೀರ್ತನೆಗೆ ಸಂಬಂಧಿಸಿದ ಅನೇಕ ಮಂಡಳಿಗಳನ್ನು ಸಹ ರಚಿಸಿದರು. ಇಂದಿಗೂ ಫಿಜಿಯಲ್ಲಿ ರಾಮಾಯಣ ಮಂಡಳಿ ಎಂಬ ಹೆಸರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭಜನೆ ಮಂಡಳಿಗಳಿವೆ.  ಇಂದು ಅವುಗಳನ್ನು ಪ್ರತಿಯೊಂದು ಹಳ್ಳಿ ಮತ್ತು ಪ್ರದೇಶದಲ್ಲಿ ಕಾಣಬಹುದು.

ನಮ್ಮ ದೇಶವು ವಿಶ್ವದ ಅತ್ಯಂತ ಪುರಾತನ ಸಂಪ್ರದಾಯಗಳಿಗೆ ನೆಲೆಯಾಗಿದೆ ಎಂಬ ವಿಷಯದಲ್ಲಿ ನಾವೆಲ್ಲರೂ ಯಾವಾಗಲೂ ಹೆಮ್ಮೆ ಪಡುತ್ತೇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆದ್ದರಿಂದ, ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು, ಅದನ್ನು ಉತ್ತೇಜಿಸುವುದು ಮತ್ತು ಅದನ್ನು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ಒಂದು ಶ್ಲಾಘನೀಯ ಪ್ರಯತ್ನವನ್ನು ನಮ್ಮ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ನ ಕೆಲವು ಸ್ನೇಹಿತರು ಮಾಡುತ್ತಿದ್ದಾರೆ. ಈ ಸಂಪ್ರದಾಯಗಳು ಮತ್ತು ಕೌಶಲ್ಯಗಳನ್ನು ಉಳಿಸಲು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ರವಾನಿಸಲು, ಅಲ್ಲಿನ ಜನರು ಒಂದು ಸಂಸ್ಥೆಯನ್ನು ರಚಿಸಿದ್ದಾರೆ, ಅದರ ಹೆಸರು 'ಲಿಡಿ-ಕ್ರೋ-ಯು'. 'ವಿನಾಶದ ಅಂಚಿನಲ್ಲಿರುವ ನಾಗಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಸಂಸ್ಥೆ ಕೈಗೆತ್ತಿಕೊಂಡಿದೆ. ಉದಾಹರಣೆಗೆ, ನಾಗಾ ಜಾನಪದ ಸಂಗೀತವು ಸ್ವತಃ ಅತ್ಯಂತ ಶ್ರೀಮಂತ ಪ್ರಕಾರವಾಗಿದೆ. ನಾಗಾ ಮ್ಯೂಸಿಕ್ ಆಲ್ಬಂಗಳನ್ನು ಬಿಡುಗಡೆ ಮಾಡುವ ಕೆಲಸವನ್ನು ಈ ಸಂಸ್ಥೆ ಆರಂಭಿಸಿದೆ. ಇಲ್ಲಿಯವರೆಗೆ, ಅಂತಹ ಮೂರು ಆಲ್ಬಂಗಳನ್ನು ಬಿಡುಗಡೆ ಮಾಡಲಾಗಿದೆ. ಈ ಸಂಸ್ಥೆಗಳು ಜಾನಪದ ಸಂಗೀತ ಮತ್ತು ಜಾನಪದ ನೃತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನು ಸಹ ಆಯೋಜಿಸುತ್ತಾರೆ. ಇವುಗಳಿಗೆಲ್ಲ ಯುವಕರಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಅಷ್ಟೇ ಅಲ್ಲ, ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶೈಲಿಯ ಉಡುಪು ತಯಾರಿಕೆ, ಟೈಲರಿಂಗ್ ಮತ್ತು ನೇಯ್ಗೆಯಲ್ಲೂ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಈಶಾನ್ಯದಲ್ಲಿ ಬಿದಿರಿನಿಂದ ಅನೇಕ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೊಸ ಪೀಳಿಗೆಯ ಯುವಕರಿಗೂ ಬಿದಿರಿನ ಉತ್ಪನ್ನಗಳನ್ನು ತಯಾರಿಸಲು ಕಲಿಸಲಾಗುತ್ತದೆ. ಇದರೊಂದಿಗೆ, ಈ ಯುವಕರು ತಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದುತ್ತಾರೆ, ಆದರೆ ಅವರಿಗೆ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಾರೆ. 'ಲಿಡಿ-ಕ್ರೋ-ಯು'ನಲ್ಲಿನ ಜನರು ನಾಗಾ ಜಾನಪದ-ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಾರೆ.

ಎಲ್ಲರೂ  ಇದೇ ರೀತಿಯ ಉಪಕ್ರಮಗಳನ್ನು ಕೈಗೊಳ್ಳಬೇಕು ಮತ್ತು ತಮ್ಮ ತಮ್ಮ ಸ್ಥಳ ಮತ್ತು ಪ್ರದೇಶಗಳಲ್ಲಿ ಸಾಂಸ್ಕೃತಿಕ ಶೈಲಿಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸಲು ಕೆಲಸ ಮಾಡಬೇಕೆಂದು ಪ್ರಧಾನಮಂತ್ರಿಯವರು ಒತ್ತಾಯಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದ ವಿವಿಧ ಆವೃತ್ತಿಗಳಲ್ಲಿ ʼಏಕ ಭಾರತ ಶ್ರೇಷ್ಠ ಭಾರತʼಕ್ಕೆ ಹೆಮ್ಮೆಯ ಸ್ಥಾನವನ್ನು ನೀಡಿದ್ದಾರೆ. 

***



(Release ID: 1879791) Visitor Counter : 184