ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆಯ ಕನ್ನಡ ಭಾಷಾಂತರ

Posted On: 16 NOV 2022 12:58PM by PIB Bengaluru

ಮಾನ್ಯರೇ,

ಸ್ನೇಹಿತರೇ, 

ನಾನು ಮತ್ತೊಮ್ಮೆ ನನ್ನ ಸ್ನೇಹಿತ ಅಧ್ಯಕ್ಷ ಜೋಕೋವಿ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಈ ಕಠಿಣ ಸಮಯದಲ್ಲೂ ಅವರು ಜಿ -20ಕ್ಕೆ ಸಮರ್ಥ ನಾಯಕತ್ವವನ್ನು ನೀಡಿದ್ದಾರೆ. ಮತ್ತು ಬಾಲಿ ಘೋಷಣೆಯನ್ನು ಅಂಗೀಕರಿಸಿದ್ದಕ್ಕಾಗಿ ನಾನು ಇಂದು ಜಿ -20 ಸಮುದಾಯವನ್ನು ಅಭಿನಂದಿಸುತ್ತೇನೆ. ಭಾರತವು ತನ್ನ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಇಂಡೋನೇಷ್ಯಾದ ಪ್ರಶಂಸನೀಯ ಉಪಕ್ರಮಗಳನ್ನು ಮುಂದುವರಿಸಲು ಶ್ರಮಿಸಲಿದೆ. ಈ ಪವಿತ್ರ ದ್ವೀಪವಾದ ಬಾಲಿಯಲ್ಲಿ ನಾವು ಜಿ-20 ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ಭಾರತಕ್ಕೆ ಅತ್ಯಂತ ಶುಭದಾಯಕ ಸಂಯೋಗವಾಗಿದೆ. ಭಾರತ ಮತ್ತು ಬಾಲಿ ಪುರಾತನ ಸಂಬಂಧವನ್ನು ಹೊಂದಿವೆ.

ಜಗತ್ತು ಏಕಕಾಲದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಆರ್ಥಿಕ ಹಿಂಜರಿತ, ಹೆಚ್ಚುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳು ಮತ್ತು ಸಾಂಕ್ರಾಮಿಕ ರೋಗದ ದೀರ್ಘಕಾಲೀನ ದುಷ್ಪರಿಣಾಮಗಳೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಭಾರತವು ಜಿ-20ರ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತಿದೆ. ಅಂತಹ ಸಮಯದಲ್ಲಿ, ಜಗತ್ತು ಜಿ-20ನ್ನು ಭರವಸೆಯಿಂದ ನೋಡುತ್ತಿದೆ. ಇಂದು, ಭಾರತದ ಜಿ-20 ಅಧ್ಯಕ್ಷ ಸ್ಥಾನವು ಎಲ್ಲರನ್ನೂ ಒಳಗೊಳ್ಳುವ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕ್ರಿಯಾ-ಕೇಂದ್ರಿತವಾಗಿರುತ್ತದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ.

ಮಾನ್ಯರೇ, 

ಮುಂದಿನ ಒಂದು ವರ್ಷದಲ್ಲಿ, ಹೊಸ ಆಲೋಚನೆಗಳನ್ನು ಕಲ್ಪಿಸಲು ಮತ್ತು ಸಾಮೂಹಿಕ ಕ್ರಿಯೆಯನ್ನು ವೇಗಗೊಳಿಸಲು ಜಿ-20 ಜಾಗತಿಕ ಪ್ರಧಾನ ವಾಹಕವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಶ್ರಮಿಸುತ್ತೇವೆ. ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಮಾಲೀಕತ್ವದ ಪ್ರಜ್ಞೆಯು ಇಂದು ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ ಮತ್ತು ಪರಿಸರದ ದುಃಸ್ಥಿತಿಗೆ ಮುಖ್ಯ ಕಾರಣವಾಗಿದೆ. ಗ್ರಹದ ಸುರಕ್ಷಿತ ಭವಿಷ್ಯಕ್ಕಾಗಿ, ಧರ್ಮದರ್ಶಿತ್ವದ ಪ್ರಜ್ಞೆಯು ಪರಿಹಾರವಾಗಿದೆ.ಲೈಫ್ (ಎಲ್.ಐ.ಎಫ್.ಇ.) ಅಂದರೆ 'ಪರಿಸರಕ್ಕಾಗಿ ಜೀವನಶೈಲಿ' ಅಭಿಯಾನವು ಇದಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಸುಸ್ಥಿರ ಜೀವನಶೈಲಿಯನ್ನು ಜನಾಂದೋಲನವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ.


ಮಾನ್ಯರೇ, 

ಅಭಿವೃದ್ಧಿಯ ಪ್ರಯೋಜನಗಳು ಸಾರ್ವತ್ರಿಕ ಮತ್ತು ಎಲ್ಲರನ್ನೂ ಒಳಗೊಳ್ಳುವುದು ಇಂದಿನ ಅಗತ್ಯವಾಗಿದೆ. ನಾವು ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ಅಭಿವೃದ್ಧಿಯ ಪ್ರಯೋಜನಗಳನ್ನು ಎಲ್ಲಾ ಮಾನವ ಜೀವಿಗಳಿಗೆ ವಿಸ್ತರಿಸಬೇಕು. ಮಹಿಳೆಯರ ಭಾಗವಹಿಸುವಿಕೆಯಿಲ್ಲದೆ ಜಾಗತಿಕ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮ ಜಿ-20 ಕಾರ್ಯಸೂಚಿಯಲ್ಲೂ ನಾವು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆಯನ್ನು ಕಾಯ್ದುಕೊಳ್ಳಬೇಕು. ಶಾಂತಿ ಮತ್ತು ಭದ್ರತೆಯಿಲ್ಲದೆ, ನಮ್ಮ ಮುಂದಿನ ಪೀಳಿಗೆಯು ಆರ್ಥಿಕ ವೃದ್ಧಿ ಅಥವಾ ತಾಂತ್ರಿಕ ಆವಿಷ್ಕಾರದ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಶಾಂತಿ ಮತ್ತು ಸೌಹಾರ್ದತೆಯ ಪರವಾಗಿ ಜಿ-20 ಬಲವಾದ ಸಂದೇಶವನ್ನು ರವಾನಿಸಬೇಕಾಗಿದೆ. ಈ ಎಲ್ಲ ಆದ್ಯತೆಗಳು ಭಾರತದ ಜಿ-20 ಅಧ್ಯಕ್ಷತೆಯ ಧ್ಯೇಯವಾಕ್ಯವಾದ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಧ್ಯೇಯವಾಕ್ಯದಲ್ಲಿ ಸಂಪೂರ್ಣವಾಗಿ ಸಾಕಾರಗೊಂಡಿವೆ. 

ಮಾನ್ಯರೇ, 

ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂದರ್ಭವಾಗಿದೆ. ನಾವು ನಮ್ಮ ದೇಶದ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿ ಜಿ-20 ಸಭೆಗಳನ್ನು ಆಯೋಜಿಸುತ್ತೇವೆ. ನಮ್ಮ ಅತಿಥಿಗಳು ಭಾರತದ ಅದ್ಭುತ ವೈವಿಧ್ಯತೆ, ಅಂತರ್ಗತ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಸಂಪೂರ್ಣ ಅನುಭವವನ್ನು ಪಡೆಯಲಿದ್ದಾರೆ. 'ಪ್ರಜಾಪ್ರಭುತ್ವದ ತಾಯಿ'ಯಾದ ಭಾರತದಲ್ಲಿ ಈ ವಿಶಿಷ್ಟ ಆಚರಣೆಯಲ್ಲಿ ನೀವೆಲ್ಲರೂ ಭಾಗವಹಿಸುವಂತಾಗಲಿ ಎಂದು ನಾವು ಬಯಸುತ್ತೇವೆ. ಒಟ್ಟಾಗಿ, ನಾವು ಜಿ -20 ಅನ್ನು ಜಾಗತಿಕ ಬದಲಾವಣೆಗೆ ವೇಗವರ್ಧಕವನ್ನಾಗಿ ಮಾಡುತ್ತೇವೆ. 

ತುಂಬ ಧನ್ಯವಾದಗಳು!

ಘೋಷಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಭಾಷಾಂತರವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
 

*****


(Release ID: 1876670) Visitor Counter : 166