ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತೆಲಂಗಾಣದ ರಾಮಗುಂಡಂನಲ್ಲಿ 9,500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿ


ರಾಮಗುಂಡಂನಲ್ಲಿ ರಸಗೊಬ್ಬರ ಘಟಕ ಲೋಕಾರ್ಪಣೆ


" ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಪಥದ ಬಗ್ಗೆ ವಿಶ್ವದಾದ್ಯಂತದ ತಜ್ಞರು ಉತ್ಸುಕರಾಗಿದ್ದಾರೆ"


" ಹೊಸ ಭಾರತವು ಆತ್ಮವಿಶ್ವಾಸ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳೊಂದಿಗೆ ವಿಶ್ವಕ್ಕೆ ತನ್ನನ್ನು ತಾನು ಪ್ರಸ್ತುತಪಡಿಸುತ್ತದೆ "


" ರಸಗೊಬ್ಬರ ವಲಯವು ಕೇಂದ್ರ ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ "


"ಎಸ್ ಸಿಸಿಎಲ್ ಖಾಸಗೀಕರಣದ ಯಾವುದೇ ಪ್ರಸ್ತಾಪವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿಲ್ಲ "

ತೆಲಂಗಾಣ ಸರ್ಕಾರವು ಎಸ್ ಸಿಸಿಎಲ್ ನಲ್ಲಿ ಶೇ. 51 ರಷ್ಟು ಪಾಲನ್ನು ಹೊಂದಿದ್ದರೆ, ಕೇಂದ್ರ ಸರ್ಕಾರವು ಶೇ. 49 ರಷ್ಟು ಪಾಲನ್ನು ಹೊಂದಿದೆ. ಎಸ್ ಸಿಸಿಎಲ್ ಖಾಸಗೀಕರಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ತನ್ನದೇ ಆದ ಮಟ್ಟದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

Posted On: 12 NOV 2022 5:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ರಾಮಗುಂಡಂನಲ್ಲಿ 9,500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.

ಇದಕ್ಕೂ ಮುನ್ನ ಇಂದು ಪ್ರಧಾನಮಂತ್ರಿ ಅವರು ರಾಮಗುಂಡಂ ರಸಗೊಬ್ಬರಗಳು ಮತ್ತು ರಾಸಾಯನಿಕಗಳು ಲಿಮಿಟೆಡ್ (ಆರ್ ಎಫ್ ಸಿಎಲ್) ಸ್ಥಾವರಕ್ಕೆ ಭೇಟಿ ನೀಡಿದರು.

ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ಆರಂಭಿಸಲಾದ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ಕೃಷಿ ಮತ್ತು ಕೃಷಿ ಬೆಳವಣಿಗೆ ಎರಡನ್ನೂ ಉತ್ತೇಜಿಸುತ್ತವೆ ಎಂದರು. ಒಂದೆಡೆ ಇಡೀ ವಿಶ್ವವೇ ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಮತ್ತು ಯುದ್ಧ ಮತ್ತು ಮಿಲಿಟರಿ ಕ್ರಮಗಳ ಕಠಿಣ ಪರಿಸ್ಥಿತಿಗಳಿಂದ ಬಾಧಿತವಾಗುತ್ತಿದೆ ಎಂದು ಪ್ರಧಾನಮಂತ್ರಿ ಗಮನಸೆಳೆದರು. " ಆದರೆ ಈ ಎಲ್ಲದರ ನಡುವೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ," ಎಂದು ಪ್ರಧಾನಮಂತ್ರಿ ಹೇಳಿದರು. 90 ರ ದಶಕದಿಂದ 30 ವರ್ಷಗಳಿಗೆ ಸಮನಾದ ಬೆಳವಣಿಗೆಯು ಮುಂಬರುವ ಕೆಲವು ವರ್ಷಗಳಲ್ಲಿ ನಡೆಯಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. " ಈ ಗ್ರಹಿಕೆಗೆ ಮುಖ್ಯ ಕಾರಣವೆಂದರೆ ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಬದಲಾವಣೆ. ಕಳೆದ 8 ವರ್ಷಗಳಲ್ಲಿ ಭಾರತವು ಕೆಲಸ ಮಾಡುವ ತನ್ನ ವಿಧಾನವನ್ನು ಬದಲಾಯಿಸಿದೆ. ಈ 8 ವರ್ಷಗಳಲ್ಲಿ ಚಿಂತನೆ ಮತ್ತು ಆಡಳಿತದ ದೃಷ್ಟಿಕೋನವು ಪರಿವರ್ತನೆಗೆ ಒಳಗಾಗಿದೆ," ಎಂದು ಅವರು ಹೇಳಿದರು. ಮೂಲಸೌಕರ್ಯ, ಸರ್ಕಾರಿ ಪ್ರಕ್ರಿಯೆಗಳು, ವ್ಯಾಪಾರ ಮಾಡಲು ಸುಲಭ ಮತ್ತು ಭಾರತದ ಮಹತ್ವಾಕಾಂಕ್ಷೆಯ ಸಮಾಜದಿಂದ ಸ್ಫೂರ್ತಿ ಪಡೆಯುತ್ತಿರುವ ಪರಿವರ್ತನೆಗಳಲ್ಲಿ ಇದನ್ನು ಕಾಣಬಹುದು ಎಂದು ಅವರು ಹೇಳಿದರು.

" ನವ ಭಾರತವು ಆತ್ಮವಿಶ್ವಾಸ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳೊಂದಿಗೆ ಜಗತ್ತಿಗೆ ತನ್ನನ್ನು ತಾನು ಪ್ರಸ್ತುತಪಡಿಸುತ್ತದೆ," ಎಂದು ಅವರು ಹೇಳಿದರು. ಅಭಿವೃದ್ಧಿಯು ದೇಶದಲ್ಲಿ ವರ್ಷದಲ್ಲಿ 365 ದಿನಗಳು ನಡೆಯುವ ನಿರಂತರ ಧ್ಯೇಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಜನೆಯ ಸಮರ್ಪಣೆಯನ್ನು ಮಾಡಿದಾಗ, ಹೊಸ ಯೋಜನೆಗಳ ಕೆಲಸವು ಏಕಕಾಲದಲ್ಲಿ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು. ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ರಾಮಗುಂಡಂ ಯೋಜನೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 2016ರ ಆಗಸ್ಟ್ 7ರಂದು ಪ್ರಧಾನಮಂತ್ರಿ ಅವರು ರಾಮಗುಂಡಂ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸುವ ಮೂಲಕ 21ನೇ ಶತಮಾನದ ಭಾರತವು ಮುನ್ನಡೆಯಬಹುದು ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. " ಉದ್ದೇಶವು ಮಹತ್ವಾಕಾಂಕ್ಷೆಯದ್ದಾಗಿರುವಾಗ, ನಾವು ಹೊಸ ವಿಧಾನಗಳೊಂದಿಗೆ ಬರಬೇಕು ಮತ್ತು ಹೊಸ ಸೌಲಭ್ಯಗಳನ್ನು ಸೃಷ್ಟಿಸಬೇಕು," ಎಂದು ಪ್ರಧಾನಮಂತ್ರಿ ಹೇಳಿದರು. ರಸಗೊಬ್ಬರ ಕ್ಷೇತ್ರವು ಕೇಂದ್ರ ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ರಸಗೊಬ್ಬರಗಳ ಬೇಡಿಕೆಗಳನ್ನು ಪೂರೈಸಲು ಭಾರತವು ವಿದೇಶಗಳನ್ನು ಅವಲಂಬಿಸಿದ್ದ ಕಾಲವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ರಾಮಗುಂಡಂ ಸ್ಥಾವರ ಸೇರಿದಂತೆ ಹಳೆಯ ತಂತ್ರಜ್ಞಾನಗಳಿಂದಾಗಿ ಈ ಹಿಂದೆ ಸ್ಥಾಪಿಸಲಾದ ಅನೇಕ ರಸಗೊಬ್ಬರ ಸ್ಥಾವರಗಳನ್ನು ಮುಚ್ಚುವಂತೆ ಒತ್ತಾಯಿಸಲಾಯಿತು ಎಂದು ಗಮನಸೆಳೆದರು. ಹೆಚ್ಚಿನ ದರದಲ್ಲಿ ಆಮದು ಮಾಡಿಕೊಳ್ಳಲಾದ ಯೂರಿಯಾವನ್ನು ರೈತರನ್ನು ತಲುಪುವ ಬದಲು ಇತರ ಉದ್ದೇಶಗಳಿಗಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದರು.

ರಸಗೊಬ್ಬರ ಲಭ್ಯತೆಯನ್ನು ಸುಧಾರಿಸಲು ಕ್ರಮಗಳು
• ಯೂರಿಯಾದ ಶೇ.100 ರಷ್ಟು ಬೇವಿನ ಲೇಪನ.
• ಮುಚ್ಚಲಾಗಿದ್ದ 5 ದೊಡ್ಡ ಘಟಕಗಳನ್ನು ತೆರೆಯುವುದು, 60 ಲಕ್ಷ ಟನ್ ಗಿಂತಲೂ ಹೆಚ್ಚು ಯೂರಿಯಾವನ್ನು ಉತ್ಪಾದಿಸಲಾಗುವುದು
• ನ್ಯಾನೋ ಯೂರಿಯಾಗೆ ಒತ್ತು 
• ಸಿಂಗಲ್ ಪ್ಯಾನ್-ಇಂಡಿಯಾ ಬ್ರಾಂಡ್ ' ಭಾರತ್ ಬ್ರಾಂಡ್ '
• ರಸಗೊಬ್ಬರಗಳನ್ನು ಕೈಗೆಟುಕುವಂತೆ ಮಾಡಲು 8 ವರ್ಷಗಳಲ್ಲಿ 9.5 ಲಕ್ಷ ಕೋಟಿ ರೂ.ವೆಚ್ಚ
• ಈ ವರ್ಷ 2.5 ಲಕ್ಷ ಕೋಟಿಗೂ ಹೆಚ್ಚು ಖರ್ಚು
• ಯೂರಿಯಾ ಚೀಲದ ಅಂತಾರಾಷ್ಟ್ರೀಯ ಬೆಲೆ 2000 ರೂ., ರೈತರಿಗೂ 270 ರೂ. ನೀಡಲಾಗುತ್ತಿದೆ.
• ಪ್ರತಿ ಡಿಎಪಿ ರಸಗೊಬ್ಬರ ಚೀಲಕ್ಕೆ 2500 ಸಬ್ಸಿಡಿ ಸಿಗುತ್ತದೆ.
• ಮಾಹಿತಿಯುಕ್ತ ರಸಗೊಬ್ಬರ ನಿರ್ಧಾರಕ್ಕಾಗಿ ಮಣ್ಣಿನ ಆರೋಗ್ಯ ಕಾರ್ಡ್
• ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 2.25 ಲಕ್ಷ ಕೋಟಿ ರೂಪಾಯಿ ವರ್ಗಾವಣೆ

2014 ರ ನಂತರ, ಕೇಂದ್ರ ಸರ್ಕಾರವು ತೆಗೆದುಕೊಂಡ ಮೊದಲ ಕ್ರಮಗಳಲ್ಲಿ ಯೂರಿಯಾದ ಶೇ.100 ರಷ್ಟು ಬೇವಿನ ಲೇಪನವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಳಸಂತೆ ಮಾರಾಟವನ್ನು ನಿಲ್ಲಿಸುವುದು. ಮಣ್ಣಿನ ಆರೋಗ್ಯ ಕಾರ್ಡ್ ಅಭಿಯಾನವು ತಮ್ಮ ಹೊಲಗಳ ಗರಿಷ್ಠ ಅಗತ್ಯಗಳ ಬಗ್ಗೆ ರೈತರಲ್ಲಿ ಜ್ಞಾನವನ್ನು ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ವರ್ಷಗಳಿಂದ ಮುಚ್ಚಿದ್ದ ಐದು ದೊಡ್ಡ ರಸಗೊಬ್ಬರ ಘಟಕಗಳನ್ನು ಪುನರಾರಂಭಿಸಲಾಗುತ್ತಿದೆ. ಉತ್ತರ ಪ್ರದೇಶದ ಗೋರಖ್ ಪುರ ಘಟಕವು ಉತ್ಪಾದನೆಯನ್ನು ಪ್ರಾರಂಭಿಸಿದೆ, ಮತ್ತು ರಾಮಗುಂಡಂ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಐದು ಘಟಕಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಿದಾಗ, ದೇಶಕ್ಕೆ 60 ಲಕ್ಷ ಟನ್ ಯೂರಿಯಾ ಸಿಗುತ್ತದೆ, ಇದು ಆಮದುಗಳ ಮೇಲೆ ಭಾರಿ ಉಳಿತಾಯ ಮತ್ತು ಯೂರಿಯಾದ ಲಭ್ಯತೆಯನ್ನು ಸುಲಭಗೊಳಿಸುತ್ತದೆ. ರಾಮಗುಂಡಂ ರಸಗೊಬ್ಬರ ಘಟಕವು ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್ ಗಡ ಮತ್ತು ಮಹಾರಾಷ್ಟ್ರದ ರೈತರಿಗೆ ಸೇವೆ ಸಲ್ಲಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಸ್ಥಾವರವು ಸುತ್ತಮುತ್ತಲಿನ ಪ್ರದೇಶಗಳ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಲಾಜಿಸ್ಟಿಕ್ಸ್-ಸಂಬಂಧಿತ ವ್ಯವಹಾರಗಳಿಗೆ ಉತ್ತೇಜನ ನೀಡುತ್ತದೆ. " ಕೇಂದ್ರ ಸರ್ಕಾರವು ಹೂಡಿಕೆ ಮಾಡಿದ 6000 ಕೋಟಿ ರೂಪಾಯಿಗಳು ತೆಲಂಗಾಣದ ಯುವಕರಿಗೆ ಹಲವಾರು ಸಾವಿರ ರೂಪಾಯಿಗಳ ಪ್ರಯೋಜನವನ್ನು ನೀಡುತ್ತವೆ," ಎಂದು ಅವರು ಹೇಳಿದರು. ರಸಗೊಬ್ಬರ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿಯ ಬಗ್ಗೆಯೂ ಮಾತನಾಡಿದ ಪ್ರಧಾನಮಂತ್ರಿ ಅವರು, ನ್ಯಾನೋ ಯೂರಿಯಾ ಈ ಕ್ಷೇತ್ರದಲ್ಲಿ ಭಾರಿ ಬದಲಾವಣೆಯನ್ನು ತರಲಿದೆ ಎಂದರು. ಆತ್ಮನಿರ್ಭರತಾದ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದಾಗಿ ರಸಗೊಬ್ಬರದ ಜಾಗತಿಕ ಬೆಲೆ ಏರಿಕೆಯನ್ನು ರೈತರಿಗೆ ಹೇಗೆ ವರ್ಗಾಯಿಸಲಿಲ್ಲ ಎಂಬುದನ್ನು ಉಲ್ಲೇಖಿಸಿದರು. 2000 ರೂ.ಗಳ ಯೂರಿಯಾ ಚೀಲವು ರೈತನಿಗೆ 270 ರೂಪಾಯಿಗಳಿಗೆ ಲಭ್ಯವಿದೆ. ಅಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 4000 ರೂ.ಗಳ ಬೆಲೆಯ ಡಿಎಪಿಯ ಒಂದು ಚೀಲಕ್ಕೆ 2500 ರೂಪಾಯಿಯಂತೆ ಸಬ್ಸಿಡಿ ನೀಡಲಾಗುತ್ತಿದೆ ಎಂದರು.

" ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಸುಮಾರು 10 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಇದರಿಂದ ರೈತರಿಗೆ ರಸಗೊಬ್ಬರಗಳ ಹೊರೆ ಬೀಳುವುದಿಲ್ಲ " ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಭಾರತದ ರೈತರಿಗೆ ಅಗ್ಗದ ರಸಗೊಬ್ಬರಗಳು ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಈ ವರ್ಷ ಇಲ್ಲಿಯವರೆಗೆ 2.5 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 2.25 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಮಾರುಕಟ್ಟೆಯಲ್ಲಿ ಲಭ್ಯವಿರುವ ರಸಗೊಬ್ಬರಗಳ ಹಲವಾರು ಬ್ರಾಂಡ್ ಗಳ ಬಗ್ಗೆಯೂ ಪ್ರಧಾನಿ ಬೆಳಕು ಚೆಲ್ಲಿದರು, ಇದು ದಶಕಗಳಿಂದ ರೈತರ ಕಳವಳಕ್ಕೆ ಕಾರಣವಾಗಿದೆ. " ಯೂರಿಯಾ ಈಗ ಭಾರತದಲ್ಲಿ ಒಂದೇ ಒಂದು ಬ್ರಾಂಡ್ ಅನ್ನು ಹೊಂದಿರುತ್ತದೆ ಮತ್ತು ಇದನ್ನು ಭಾರತ್ ಬ್ರಾಂಡ್ ಎಂದು ಕರೆಯಲಾಗುತ್ತದೆ. ಅದರ ಗುಣಮಟ್ಟ ಮತ್ತು ಬೆಲೆಯನ್ನು ಈಗಾಗಲೇ ನಿರ್ಧರಿಸಲಾಗಿದೆ ", ಎಂದು ಅವರು ಹೇಳಿದರು. ಸರ್ಕಾರವು ಈ ವಲಯವನ್ನು, ವಿಶೇಷವಾಗಿ ಸಣ್ಣ ರೈತರಿಗೆ ಹೇಗೆ ಸುಧಾರಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು ಸಂಪರ್ಕ ಮೂಲಸೌಕರ್ಯದ ಸವಾಲಿನ ಬಗ್ಗೆಯೂ ಪ್ರಸ್ತಾಪಿಸಿದರು. ಪ್ರತಿ ರಾಜ್ಯಕ್ಕೆ ಆಧುನಿಕ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಜಲಮಾರ್ಗಗಳು, ರೈಲ್ವೆಗಳು ಮತ್ತು ಇಂಟರ್ನೆಟ್ ಹೆದ್ದಾರಿಗಳನ್ನು ಒದಗಿಸುವ ಮೂಲಕ ಈ ಸವಾಲನ್ನು ಎದುರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನಿಂದ ಇದು ಹೊಸ ಶಕ್ತಿಯನ್ನು ಪಡೆಯುತ್ತಿದೆ. ಸಮನ್ವಯ ಮತ್ತು ಮಾಹಿತಿಯುಕ್ತ ಕಾರ್ಯಶೈಲಿಯು ದೀರ್ಘಕಾಲದವರೆಗೆ ಸ್ಥಗಿತಗೊಂಡಿರುವ ಯೋಜನೆಗಳ ಸಾಧ್ಯತೆಯನ್ನು ತೆಗೆದುಹಾಕುತ್ತಿದೆ ಎಂದು ಅವರು ಹೇಳಿದರು. ಭದ್ರಾದ್ರಿ ಕೊಥಗುಡೆಮ್ ಜಿಲ್ಲೆ ಮತ್ತು ಖಮ್ಮಮ್ ಅನ್ನು ಸಂಪರ್ಕಿಸುವ ರೈಲ್ವೆ ಮಾರ್ಗವನ್ನು 4 ವರ್ಷಗಳಲ್ಲಿ ಸಿದ್ಧಪಡಿಸಲಾಗಿದ್ದು, ಸ್ಥಳೀಯ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು. ಅಂತೆಯೇ, ಇಂದು ಪ್ರಾರಂಭವಾದ ಮೂರು ಹೆದ್ದಾರಿಗಳು ಕೈಗಾರಿಕಾ ಪ್ರದೇಶ, ಕಬ್ಬು ಮತ್ತು ಅರಿಶಿನ ಬೆಳೆಗಾರರಿಗೆ ಪ್ರಯೋಜನಕಾರಿಯಾಗಲಿವೆ.

ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಾಗ ಉಂಟಾಗುವ ವದಂತಿಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ, ಕೆಲವು ಶಕ್ತಿಗಳು ರಾಜಕೀಯ ಲಾಭಕ್ಕಾಗಿ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು. ' ಸಿಂಗರೇಣಿ ಕಲ್ಲಿದ್ದಲು ಕಂಪನಿ ಲಿಮಿಟೆಡ್-ಎಸ್ ಸಿಸಿಎಲ್' ಮತ್ತು ವಿವಿಧ ಕಲ್ಲಿದ್ದಲು ಗಣಿಗಳ ಬಗ್ಗೆ ತೆಲಂಗಾಣದಲ್ಲಿ ಪ್ರಸ್ತುತ ಇದೇ ರೀತಿಯ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಅವರು ಗಮನಸೆಳೆದರು. ತೆಲಂಗಾಣ ಸರ್ಕಾರವು ಎಸ್ ಸಿಸಿಎಲ್  ನಲ್ಲಿ ಶೇ. 51 ರಷ್ಟು ಪಾಲನ್ನು ಹೊಂದಿದ್ದರೆ, ಕೇಂದ್ರ ಸರ್ಕಾರವು ಶೇ. 49 ರಷ್ಟು ಪಾಲನ್ನು ಹೊಂದಿದೆ. ಎಸ್ ಸಿಸಿಎಲ್ ನ ಖಾಸಗೀಕರಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರವು ತನ್ನದೇ ಆದ ಮಟ್ಟದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ," ಎಂದು ಸ್ಪಷ್ಟಪಡಿಸಿದ ಪ್ರಧಾನಮಂತ್ರಿ ಅವರು, ಎಸ್ ಸಿಸಿಎಲ್ ನ ಖಾಸಗೀಕರಣದ ಯಾವುದೇ ಪ್ರಸ್ತಾಪವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿಲ್ಲ ಎಂದು ಪುನರುಚ್ಚರಿಸಿದರು.

ಕಲ್ಲಿದ್ದಲು ಗಣಿಗಳಿಗೆ ಸಂಬಂಧಿಸಿದಂತೆ ದೇಶವನ್ನು ಕಾಡುತ್ತಿರುವ ಸಾವಿರಾರು ಕೋಟಿ ರೂಪಾಯಿಗಳ ಅಸಂಖ್ಯಾತ ಹಗರಣಗಳನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ದೇಶ ಮತ್ತು ಕಾರ್ಮಿಕರು, ಬಡವರು ಮತ್ತು ಈ ಗಣಿಗಳು ಇರುವ ಪ್ರದೇಶಗಳು ಭಾರಿ ನಷ್ಟವನ್ನು ಅನುಭವಿಸಿವೆ ಎಂದು ಅವರು ಮಾಹಿತಿ ನೀಡಿದರು. ದೇಶದಲ್ಲಿ ಹೆಚ್ಚುತ್ತಿರುವ ಕಲ್ಲಿದ್ದಲಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಲ್ಲಿದ್ದಲು ಗಣಿಗಳನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಹರಾಜು ಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು. " ಖನಿಜಗಳನ್ನು ಹೊರತೆಗೆಯುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರಯೋಜನಗಳನ್ನು ನೀಡಲು ನಮ್ಮ ಸರ್ಕಾರವು ಡಿಎಂಎಫ್ ಅಂದರೆ ಜಿಲ್ಲಾ ಖನಿಜ ನಿಧಿಯನ್ನು ಸಹ ರಚಿಸಿದೆ. ಈ ನಿಧಿಯಡಿ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ" ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, " ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್, "  ಎಂಬ ಮಂತ್ರವನ್ನು ಅನುಸರಿಸುವ ಮೂಲಕ ತೆಲಂಗಾಣವನ್ನು ಮುನ್ನಡೆಸಲು ನಾವು ಬಯಸುತ್ತೇವೆ ಎಂದರು.

ತೆಲಂಗಾಣದ ರಾಜ್ಯಪಾಲ ಡಾ.ತಮಿಳಿಸೈ ಸೌಂದರರಾಜನ್, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, ಸಂಸದರು ಮತ್ತು ವಿಧಾನಸಭೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 70 ವಿಧಾನಸಭಾ ಕ್ಷೇತ್ರಗಳ ರೈತರು ಈ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ್ದರು.

ಹಿನ್ನೆಲೆ
ಪ್ರಧಾನಮಂತ್ರಿ ಅವರು ರಾಮಗುಂಡಂನಲ್ಲಿ ರಸಗೊಬ್ಬರ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ರಾಮಗುಂಡಂ ಯೋಜನೆಗೆ ಪ್ರಧಾನಮಂತ್ರಿ ಅವರು 2016ರ ಆಗಸ್ಟ್ 7ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ರಸಗೊಬ್ಬರ ಸ್ಥಾವರದ ಪುನರುಜ್ಜೀವದ ಹಿಂದಿನ ಪ್ರೇರಕ ಶಕ್ತಿಯೆಂದರೆ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಧಾನ ಮಂತ್ರಿಯವರ ದೂರದೃಷ್ಟಿ. ರಾಮಗುಂಡಂ ಸ್ಥಾವರವು ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ದೇಶೀಯ ಬೇವು ಲೇಪಿತ ಯೂರಿಯಾ ಉತ್ಪಾದನೆಯನ್ನು ಒದಗಿಸುತ್ತದೆ.

ರಾಮಗುಂಡಂ ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ (ಆರ್ ಎಫ್ ಸಿ ಎಲ್) ಅಡಿಯಲ್ಲಿ ಈ ಯೋಜನೆಯನ್ನು ಸ್ಥಾಪಿಸಲಾಗಿದೆ, ಇದು ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್ಎಫ್ಎಲ್), ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಮತ್ತು ಫರ್ಟಿಲೈಸರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಫ್ ಸಿಐಎಲ್) ನ ಜಂಟಿ ಉದ್ಯಮ ಕಂಪನಿಯಾಗಿದೆ. 6300 ಕೋಟಿ ರೂ.ಗಳಿಗೂ ಹೆಚ್ಚಿನ ಬಂಡವಾಳದೊಂದಿಗೆ ಹೊಸ ಅಮೋನಿಯಾ-ಯೂರಿಯಾ ಘಟಕವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಆರ್ ಎಫ್ ಸಿಎಲ್ ಗೆ  ವಹಿಸಲಾಗಿದೆ. ಜಗದೀಶ್ಪುರ್ - ಫುಲ್ಪುರ್- ಹಲ್ದಿಯಾ ಕೊಳವೆ ಮಾರ್ಗದ ಮೂಲಕ ಆರ್ ಎಫ್ ಸಿಎಲ್ ಸ್ಥಾವರಕ್ಕೆ ಅನಿಲವನ್ನು ಪೂರೈಸಲಾಗುವುದು.

ಈ ಸ್ಥಾವರವು ತೆಲಂಗಾಣ ರಾಜ್ಯ ಮತ್ತು ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸಗಡ ಮತ್ತು ಮಹಾರಾಷ್ಟ್ರದ ರೈತರಿಗೆ ಸಾಕಷ್ಟು ಮತ್ತು ಸಮಯೋಚಿತವಾಗಿ ಯೂರಿಯಾ ರಸಗೊಬ್ಬರವನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ. ಈ ಸ್ಥಾವರವು ರಸಗೊಬ್ಬರದ ಲಭ್ಯತೆಯನ್ನು ಸುಧಾರಿಸುವುದಲ್ಲದೆ, ರಸ್ತೆಗಳು, ರೈಲ್ವೆಗಳು, ಪೂರಕ ಉದ್ಯಮ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಈ ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದಲ್ಲದೆ, ಕಾರ್ಖಾನೆಗೆ ವಿವಿಧ ಸರಕುಗಳನ್ನು ಪೂರೈಸಲು ಎಂಎಸ್ಎಂಇ ಮಾರಾಟಗಾರರ ಅಭಿವೃದ್ಧಿಯಿಂದ ಈ ಪ್ರದೇಶವು ಪ್ರಯೋಜನ ಪಡೆಯುತ್ತದೆ. ಆರ್ ಎಫ್ ಸಿಎಲ್ ನ ' ಭಾರತ್ ಯೂರಿಯಾ ' ಆಮದುಗಳನ್ನು ಕಡಿಮೆ ಮಾಡುವ ಮೂಲಕ ಮಾತ್ರವಲ್ಲದೆ ರಸಗೊಬ್ಬರಗಳು ಮತ್ತು ವಿಸ್ತರಣಾ ಸೇವೆಗಳ ಸಮಯೋಚಿತ ಪೂರೈಕೆಯ ಮೂಲಕ ಸ್ಥಳೀಯ ರೈತರಿಗೆ ಉತ್ತೇಜನ ನೀಡುವ ಮೂಲಕ ಆರ್ಥಿಕತೆಗೆ ಅದ್ಭುತ ಉತ್ತೇಜನವನ್ನು ನೀಡುತ್ತದೆ.

ಸುಮಾರು 1000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಭದ್ರಾಚಲಂ ರಸ್ತೆ-ಸತ್ತುಪಲ್ಲಿ ರೈಲು ಮಾರ್ಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಹೆದ್ದಾರಿ 161 ಬಿಬಿಯ ಬೋಧನ್-ಬಸಾರ್-ಬೈನ್ಸಾ ವಿಭಾಗ; ರಾಷ್ಟ್ರೀಯ ಹೆದ್ದಾರಿ 353 ಸಿ ಯ ಸಿರೋಂಚಾದಿಂದ ಮಹದೇವಪುರ ವಿಭಾಗ ರಾಷ್ಟ್ರೀಯ ಹೆದ್ದಾರಿ 765 ಡಿಜಿಯ ಮೇದಕ್-ಸಿದ್ದಿಪೇಟ್-ಎಲ್ಕತುರ್ತಿ ವಿಭಾಗದ 2200 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ರಸ್ತೆ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

*****


(Release ID: 1875617) Visitor Counter : 168