ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 10,500 ಕೋಟಿ ರೂ.ಗೂ ಅಧಿಕ ಮೊತ್ತದ  ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು 


"ಆಂಧ್ರಪ್ರದೇಶದ ಜನರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ"

“ಅಭಿವೃದ್ಧಿಯ ಹಾದಿಯು ಬಹು ಆಯಾಮಗಳನ್ನು ಹೊಂದಿದೆ. ಇದು ಸಾಮಾನ್ಯ ನಾಗರಿಕರ ಅವಶ್ಯಕತೆಗಳು ಮತ್ತು ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಸುಧಾರಿತ ಮೂಲಸೌಕರ್ಯದ ಮುನ್ನೋಟವನ್ನು ಪ್ರಸ್ತುತಪಡಿಸುತ್ತದೆ.

"ನಮ್ಮದು ಅಂತರ್ಗತ ಬೆಳವಣಿಗೆ ಮತ್ತು ಅಂತರ್ಗತ ಅಭಿವೃದ್ಧಿಯ ದೃಷ್ಟಿಕೋನ"

"ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಮೂಲಸೌಕರ್ಯ ನಿರ್ಮಾಣದ ವೇಗವನ್ನು ಹೆಚ್ಚಿಸಿದೆ, ಹಾಗೆಯೇ ಯೋಜನೆಗಳ ವೆಚ್ಚವನ್ನು ಕಡಿಮೆ ಮಾಡಿದೆ"

"ನೀಲಿ ಆರ್ಥಿಕತೆಗೆ ಮೊದಲ ಬಾರಿಗೆ ದೊಡ್ಡ ಆದ್ಯತೆ ದೊರೆತಿದೆ"

Posted On: 12 NOV 2022 12:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 10,500 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.

ವಿಪ್ಲವ ವೀರುಡು ಅಲ್ಲೂರು ಸೀತಾರಾಮರಾಜು ಅವರ 125ನೇ ಜಯಂತಿಯಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕ ಸಂದರ್ಭವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿಯವರು ತಮ್ಮ ಭಾಷಣವನ್ನು ಆರಂಭಿಸಿದರು. ವಿಶಾಖಪಟ್ಟಣವು ವ್ಯಾಪಾರ ಮತ್ತು ವ್ಯವಹಾರದ ಅತ್ಯಂತ ಶ್ರೀಮಂತ ಸಂಪ್ರದಾಯವನ್ನು ಹೊಂದಿರುವ ವಿಶೇಷವಾದ ನಗರವಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರಾಚೀನ ಭಾರತದಲ್ಲಿ ವಿಶಾಖಪಟ್ಟಣವು ಒಂದು ಪ್ರಮುಖ ಬಂದರಾಗಿತ್ತು ಎಂದ ಅವರು, ಸಾವಿರಾರು ವರ್ಷಗಳ ಹಿಂದೆ ಪಶ್ಚಿಮ ಏಷ್ಯಾ ಮತ್ತು ರೋಮ್‌ಗೆ ಇದು ವ್ಯಾಪಾರ ಮಾರ್ಗದ ಭಾಗವಾಗಿತ್ತು ಮತ್ತು ಇಂದು ಭಾರತದ ವ್ಯಾಪಾರದ ಕೇಂದ್ರ ಬಿಂದುವಾಗಿ ಉಳಿದಿದೆ ಎಂದು ಹೇಳಿದರು. ಇಂದು ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯಾಗಿರುವ 10,500 ರೂ. ಕೋಟಿ ವೆಚ್ಚದ ಯೋಜನೆಗಳು ಮೂಲಸೌಕರ್ಯ, ಜೀವನ ಸೌಕರ್ಯ ಮತ್ತು ಆತ್ಮನಿರ್ಭರ ಭಾರತದಲ್ಲಿ ಹೊಸ ಆಯಾಮಗಳನ್ನು ತೆರೆಯುವ ಮೂಲಕ ವಿಶಾಖಪಟ್ಟಣ ಮತ್ತು ಆಂಧ್ರಪ್ರದೇಶದ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಸಾಧಿಸಲು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪ್ರಧಾನಿ ಹೇಳಿದರು. ಪ್ರಧಾನಮಂತ್ರಿಯವರು ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಅವರ ಬಗ್ಗೆ ವಿಶೇಷ ಪ್ರಸ್ತಾಪ ಮಾಡಿದರು ಮತ್ತು ಆಂಧ್ರಪ್ರದೇಶದ ಬಗ್ಗೆ ಅವರ ಪ್ರೀತಿ ಮತ್ತು ಸಮರ್ಪಣೆ ಅಪ್ರತಿಮವಾಗಿದೆ ಎಂದು ಹೇಳಿದರು.

ಶಿಕ್ಷಣ ಅಥವಾ ಉದ್ಯಮಶೀಲತೆ, ತಂತ್ರಜ್ಞಾನ ಅಥವಾ ವೈದ್ಯಕೀಯ ವೃತ್ತಿ ಹೀಗೆ ಯಾವುದೇ ಕ್ಷೇತ್ರವಾಗಿರಲಿ, ಆಂಧ್ರಪ್ರದೇಶದ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಹೆಸರು ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಶ್ರೇಯಕ್ಕೆ ಆಂಧ್ರಪ್ರದೇಶದ ಜನರ ವೃತ್ತಿಪರ ಗುಣಗಳು ಮಾತ್ರವಲ್ಲದೆ ಹೊರಹೋಗುವ ಮತ್ತು ಸಂತೋಷದಿಂದಿರುವ ಅವರ ಸ್ವಭಾವದ ಫಲಿತಾಂಶವಾಗಿದೆ ಎಂದು ಅವರು ಹೇಳಿದರು. ಇಂದು ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಈ ಯೋಜನೆಗಳು ರಾಜ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿವೆ ಎಂದು ಹೇಳಿದರು.

"ಈ ಅಮೃತ ಕಾಲದಲ್ಲಿ, ದೇಶವು ಅಭಿವೃದ್ಧಿ ಹೊಂದಿದ ಭಾರತವಾಗುವ ಉದ್ದೇಶದೊಂದಿಗೆ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಅಭಿವೃದ್ಧಿಯ ಮಾರ್ಗವು ಬಹು ಆಯಾಮಗಳನ್ನು ಹೊಂದಿದೆ ಎಂದ ಪ್ರಧಾನಿಯವರು, ಇದು ಸಾಮಾನ್ಯ ನಾಗರಿಕರ ಅವಶ್ಯಕತೆಗಳು ಮತ್ತು ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಸುಧಾರಿತ ಮೂಲಸೌಕರ್ಯಕ್ಕಾಗಿ ಮುನ್ನೋಟವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. ಸರ್ಕಾರದ ಅಂತರ್ಗತ ಬೆಳವಣಿಗೆಯ ದೃಷ್ಟಿಕೋನವನ್ನು ಅವರು ಒತ್ತಿ ಹೇಳಿದರು. ಮೂಲಸೌಕರ್ಯ ಅಭಿವೃದ್ಧಿಗೆ ಹಿಂದಿನ ಸರ್ಕಾರಗಳ ಬಿಡಿ ಬಿಡಿ ವಿಧಾನಗಳು ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳಿಗೆ ಕಾರಣವಾಯಿತು ಮತ್ತು ಪೂರೈಕೆ ಸರಪಳಿಯಲ್ಲಿ ಅಡಚಣೆಯನ್ನು ಸೃಷ್ಟಿಸಿತು ಎಂದು ಪ್ರಧಾನಮಂತ್ರಿ ವಿಷಾದಿಸಿದರು. ಪೂರೈಕೆ ಸರಪಳಿ ಮತ್ತು ಸರಕು ಸಾಗಣೆಯು ಬಹು-ಮಾದರಿ ಸಂಪರ್ಕವನ್ನು ಅವಲಂಬಿಸಿರುವುದರಿಂದ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಇಂದು ಆರಂಭಿಸಲಾಗಿರುವ ಯೋಜನೆಗಳ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಉದ್ದೇಶಿತ ಆರ್ಥಿಕ ಕಾರಿಡಾರ್ ಯೋಜನೆಯ 6-ಪಥದ ರಸ್ತೆಗಳು, ಬಂದರು ಸಂಪರ್ಕಕ್ಕಾಗಿ ಪ್ರತ್ಯೇಕ ರಸ್ತೆ, ವಿಶಾಖಪಟ್ಟಣ ರೈಲು ನಿಲ್ದಾಣದ ಸುಂದರೀಕರಣ ಮತ್ತು ಅತ್ಯಾಧುನಿಕ ಮೀನುಗಾರಿಕೆ ಬಂದರುಗಳನ್ನು ಪಟ್ಟಿ ಮಾಡಿದರು. ಅಭಿವೃದ್ಧಿಯ ಈ ಸಮಗ್ರ ದೃಷ್ಟಿಕೋನದ ಶ್ರೇಯವುನ್ನು ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ ಸಲ್ಲುತ್ತದೆ ಮತ್ತು ಇದು ಮೂಲಸೌಕರ್ಯ ನಿರ್ಮಾಣದ ವೇಗವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಯೋಜನೆಗಳ ವೆಚ್ಚವನ್ನು ಕಡಿಮೆ ಮಾಡಿದೆ ಎಂದು ಪ್ರಧಾನಿ ಹೇಳಿದರು. ಬಹು ಮಾದರಿ ಸಾರಿಗೆ ವ್ಯವಸ್ಥೆಯು ಪ್ರತಿ ನಗರದ ಭವಿಷ್ಯವಾಗಿದೆ ಮತ್ತು ವಿಶಾಖಪಟ್ಟಣವು ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದರು. ಆಂಧ್ರಪ್ರದೇಶ ಮತ್ತು ಅದರ ಕರಾವಳಿ ಪ್ರದೇಶಗಳು ಈ ಅಭಿವೃದ್ಧಿಯ ಓಟದಲ್ಲಿ ಹೊಸ ವೇಗ ಮತ್ತು ಶಕ್ತಿಯೊಂದಿಗೆ ಮುನ್ನಡೆಯಲಿವೆ ಎಂದು ಪ್ರಧಾನಿಹೇಳಿದರು.

ಪ್ರಧಾನಮಂತ್ರಿಯವರು ಜಾಗತಿಕ ಹವಾಮಾನದ ತೊಂದರೆಯ ಬಗ್ಗೆ ಮತ್ತು ಪ್ರಮುಖ ಉತ್ಪನ್ನಗಳು ಮತ್ತು ಇಂಧನ ಅಗತ್ಯಗಳಲ್ಲಿ ಪೂರೈಕೆ ಸರಪಳಿಯ ಅಡಚಣೆಯ ಬಗ್ಗೆ ಪ್ರಸ್ತಾಪಿಸಿದರು. ಆದಾಗ್ಯೂ, ಈ ಕಷ್ಟದ ಸಮಯದಲ್ಲಿ ಭಾರತವು ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆದಿದೆ ಎಂದು ಪ್ರಧಾನಿ ಹೇಳಿದರು. ತಜ್ಞರು ಭಾರತದ ಸಾಧನೆಗಳನ್ನು ಶ್ಲಾಘಿಸುತ್ತಿರುವುದರಿಂದ ಜಗತ್ತು ಇದನ್ನು ಒಪ್ಪಿಕೊಂಡಿದೆ ಮತ್ತು ಭಾರತವು ಇಡೀ ಪ್ರಪಂಚದ ಭರವಸೆಯ ಕೇಂದ್ರವಾಗಿದೆ ಎಂದು ಅವರು ಹೇಳಿದರು. ಭಾರತವು ತನ್ನ ನಾಗರಿಕರ ಆಕಾಂಕ್ಷೆ ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ. ಪ್ರತಿಯೊಂದು ನೀತಿ ಮತ್ತು ನಿರ್ಧಾರಗಳನ್ನು ಸಾಮಾನ್ಯ ನಾಗರಿಕನ ಜೀವನವನ್ನು ಉತ್ತಮಗೊಳಿಸಲು ರೂಪಿಸಲಾಗಿದೆ ಎಂದರು. ಪಿಎಲ್‌ಐ ಯೋಜನೆ, ಜಿಎಸ್‌ಟಿ, ಐಬಿಸಿ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಭಾರತದಲ್ಲಿ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ವಿಸ್ತರಿಸಲಾಗುತ್ತಿದೆ ಎಂದರು. ಇಂದಿನ ಅಭಿವೃದ್ಧಿಯ ಈ ಪಯಣದಲ್ಲಿ, ಹಿಂದೆ ಹಿಂದುಳಿದಿದ್ದ ಪ್ರದೇಶಗಳು ಸಹ ಸೇರ್ಪಡೆಗೊಂಡಿವೆ. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿಯೂ ಸಹ ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ ಮೂಲಕ ಅಭಿವೃದ್ಧಿ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಕಳೆದ ಎರಡೂವರೆ ವರ್ಷಗಳಿಂದ ಜನರಿಗೆ ಉಚಿತ ಪಡಿತರ, ಪ್ರತಿ ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ಮತ್ತು ಡ್ರೋನ್, ಗೇಮಿಂಗ್ ಮತ್ತು ಸ್ಟಾರ್ಟ್-ಅಪ್ ಸಂಬಂಧಿತ ನಿಯಮಗಳನ್ನು ಸರಳಗೊಳಿಸುವಂತಹ ಹಲವು ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.

ಸ್ಪಷ್ಟ ಗುರಿಗಳ ಮಹತ್ವದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಂಧ್ರಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಆಳ ನೀರಿನ ಶಕ್ತಿಯನ್ನು ಹೊರತೆಗೆಯುವ ಉದಾಹರಣೆಯನ್ನು ನೀಡಿದರು. ನೀಲಿ ಆರ್ಥಿಕತೆಯ ಮೇಲೆ ಸರ್ಕಾರದ ಗಮನವನ್ನು ಅವರು ಒತ್ತಿ ಹೇಳಿದರು. ನೀಲಿ ಆರ್ಥಿಕತೆಗೆ ಮೊದಲ ಬಾರಿಗೆ ದೊಡ್ಡ ಆದ್ಯತೆ ದೊರೆತಿದೆ ಎಂದು ಅವರು ಹೇಳಿದರು. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಂದು ಆರಂಭವಾಗಿರುವ ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನ ಆಧುನೀಕರಣದಂತಹ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದರು.

ಶತಮಾನಗಳಿಂದಲೂ ಸಮುದ್ರವು ಭಾರತಕ್ಕೆ ಸಮೃದ್ಧಿಯ ಮೂಲವಾಗಿದೆ ಮತ್ತು ನಮ್ಮ ಕಡಲ ತೀರಗಳು ಈ ಸಮೃದ್ಧಿಯ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ದೇಶದಲ್ಲಿ ಬಂದರು ಅಭಿವೃದ್ಧಿಗಾಗಿ ನಡೆಯುತ್ತಿರುವ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಇಂದಿನಿಂದ ಮತ್ತಷ್ಟು ವಿಸ್ತರಣೆಯಾಗಲಿವೆ ಎಂದು ಅವರು ಒತ್ತಿ ಹೇಳಿದರು.

21 ನೇ ಶತಮಾನದ ಭಾರತವು ಅಭಿವೃದ್ಧಿಯ ಸಮಗ್ರ ಚಿಂತನೆಯನ್ನು ವಾಸ್ತವಗೊಳಿಸುತ್ತಿದೆ  ಎಂದು ಅವರು ಹೇಳಿದರು. ಆಂಧ್ರಪ್ರದೇಶವು ದೇಶದ ಈ ಅಭಿವೃದ್ಧಿಯ ಅಭಿಯಾನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ ಪ್ರಧಾನಿಯವರು ತಮ್ಮ ಭಾಷಣ ಮಕ್ತಾಯಗೊಳಿಸಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ ಎಸ್ ಆರ್ ಜಗನ್ ರೆಡ್ಡಿ, ಆಂಧ್ರಪ್ರದೇಶದ ರಾಜ್ಯಪಾಲ ಶ್ರೀ ಬಿಸ್ವ ಭೂಷಣ ಹರಿಚಂದನ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಂಸದರು ಮತ್ತು ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹಿನ್ನೆಲೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಮಾರು 450 ಕೋಟಿ ರೂಪಾಯಿ ವೆಚ್ಚದ ವಿಶಾಖಪಟ್ಟಣ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದರು. ಪುನರಾಭಿವೃದ್ಧಿಗೊಂಡ ನಿಲ್ದಾಣವು ದಿನಕ್ಕೆ 75,000 ಪ್ರಯಾಣಿಕರಿಗೆ ಸೇವೆ ಒದಗಿಸುತ್ತದೆ ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಅನುಭವವನ್ನು ಸುಧಾರಿಸುತ್ತದೆ.

ಪ್ರಧಾನಮಂತ್ರಿಯವರು ವಿಶಾಖಪಟ್ಟಣಂ ಮೀನುಗಾರಿಕೆ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ಯೋಜನೆಯ ಒಟ್ಟು ವೆಚ್ಚ ಸುಮಾರು 150 ಕೋಟಿ ರೂ.ಗಳಾಗಿವೆ. ಉನ್ನತೀಕರಣ ಮತ್ತು ಆಧುನೀಕರಣದ ನಂತರ ಈ ಮೀನುಗಾರಿಕೆ ಬಂದರಿನ ನಿರ್ವಹಣೆ ಸಾಮರ್ಥ್ಯವು ದಿನಕ್ಕೆ 150 ಟನ್‌ಗಳಿಂದ ಸುಮಾರು 300 ಟನ್‌ಗಳಿಗೆ ದುಪ್ಪಟ್ಟಾಗುತ್ತದೆ. ಸುರಕ್ಷಿತ ಲ್ಯಾಂಡಿಂಗ್ ಮತ್ತು ಬರ್ತಿಂಗ್ ಮತ್ತು ಇತರ ಆಧುನಿಕ ಮೂಲಸೌಕರ್ಯ ಸೌಲಭ್ಯಗಳು ಜೆಟ್ಟಿಯಲ್ಲಿ ತಂಗುವ ಸಮಯವನ್ನು ಕಡಿಮೆ ಮಾಡುತ್ತವೆ, ನಷ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಉತ್ತಮ ಬೆಲೆ ಪಡೆಯಲು ಸಹಾಯ ಮಾಡುತ್ತವೆ. 

ಪ್ರಧಾನಿಯವರು ಆರು ಪಥಗಳ ಗ್ರೀನ್‌ಫೀಲ್ಡ್ ರಾಯ್‌ಪುರ-ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್‌ನ ಆಂಧ್ರಪ್ರದೇಶ ವಿಭಾಗದ ಕಾಮಗಾರಿಗೆ ಅಡಿಗಲ್ಲು ಹಾಕಿದರು. ಇದು 3750 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಆರ್ಥಿಕ ಕಾರಿಡಾರ್ ಛತ್ತೀಸ್‌ಗಢ ಮತ್ತು ಒಡಿಶಾದ ಕೈಗಾರಿಕಾ ಪ್ರದೇಶಗಳಿಂದ ವಿಶಾಖಪಟ್ಟಣಂ ಬಂದರು ಮತ್ತು ಚೆನ್ನೈ - ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಗೆ ವೇಗವಾದ ಸಂಪರ್ಕವನ್ನು ಒದಗಿಸುತ್ತದೆ. ಇದು ಆಂಧ್ರಪ್ರದೇಶ ಮತ್ತು ಒಡಿಶಾದ ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ವಿಶಾಖಪಟ್ಟಣದ ಕಾನ್ವೆಂಟ್ ಜಂಕ್ಷನ್‌ನಿಂದ ಶೀಲಾ ನಗರ ಜಂಕ್ಷನ್‌ವರೆಗೆ ಸಮರ್ಪಿತ ಪೋರ್ಟ್ ರಸ್ತೆಯ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಿದರು. ಇದು ಸ್ಥಳೀಯ ಮತ್ತು ಬಂದರು ಸರಕಿನ ದಟ್ಟಣೆಯನ್ನು ಪ್ರತ್ಯೇಕಿಸುವ ಮೂಲಕ ವಿಶಾಖಪಟ್ಟಣ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಪ್ರಧಾನಿಯವರು ಶ್ರೀಕಾಕುಳಂ-ಗಜಪತಿ ಕಾರಿಡಾರ್‌ನ ಭಾಗವಾಗಿ 200 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎನ್‌ ಹೆಚ್‌ -326ಎ  ನರಸನ್ನಪೇಟೆ- ಪಥಪಟ್ಟಣಂ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಯೋಜನೆಯು ಈ ಪ್ರದೇಶದಲ್ಲಿ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.

ಆಂಧ್ರಪ್ರದೇಶದ ಒಎನ್‌ಜಿಸಿಯ ಯು-ಫೀಲ್ಡ್ ಆನ್‌ಶೋರ್ ಡೀಪ್ ವಾಟರ್ ಬ್ಲಾಕ್ ಯೋಜನೆಯನ್ನು ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ದಿನಕ್ಕೆ ಸುಮಾರು 3 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲ ಉತ್ಪಾದನಾ ಸಾಮರ್ಥ್ಯದೊಂದಿಗೆ ಯೋಜನೆಯ ಆಳ ಸಮುದ್ರದ ಅನಿಲ ಆವಿಷ್ಕಾರವಾಗಿದೆ. ಪ್ರಧಾನಿಯವರು ಸುಮಾರು 6.65 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಗೇಲ್ ನ ಶ್ರೀಕಾಕುಳಂ ಅಂಗುಲ್ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು 2650 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 745 ಕಿ.ಮೀ ಉದ್ದದ ಈ ಪೈಪ್‌ಲೈನ್‌ ನಿರ್ಮಾಣವಾಗಲಿದೆ. ನೈಸರ್ಗಿಕ ಅನಿಲ ಗ್ರಿಡ್ (ಎನ್‌ ಜಿ ಜಿ) ನ ಭಾಗವಾಗಿರುವ ಪೈಪ್‌ಲೈನ್ ಆಂಧ್ರಪ್ರದೇಶ ಮತ್ತು ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಮನೆಗಳು, ಕೈಗಾರಿಕೆಗಳು, ವಾಣಿಜ್ಯ ಘಟಕಗಳು ಮತ್ತು ಆಟೋಮೊಬೈಲ್ ವಲಯಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಸಲು ಪ್ರಮುಖ ಮೂಲಸೌಕರ್ಯವನ್ನು ರಚಿಸುತ್ತದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲಕ್ಕೆ ಈ ಪೈಪ್‌ಲೈನ್ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ.

*****



(Release ID: 1875516) Visitor Counter : 152