ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (ಎಂ/ಎನ್‌ಎಸ್ ಇಂಡಿಯಾ) ಹಝಿರಾ ಸ್ಥಾವರದ ವಿಸ್ತರಣೆಯ ವೇಳೆ ಪ್ರಧಾನಮಂತ್ರಿ ಅವರು ವೀಡಿಯೊ ಸಂದೇಶದ ಮೂಲಕ ಮಾಡಿದ ಭಾಷಣದ ಕನ್ನಡ ಅನುವಾದ

Posted On: 28 OCT 2022 5:06PM by PIB Bengaluru

ನಮಸ್ಕಾರ!

ನಿಮ್ಮೆಲ್ಲರಿಗೂ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳು..! ಹೊಸ ವರ್ಷದ ಈ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಇಂದು ನಿಮ್ಮೆಲ್ಲರನ್ನು ಭೇಟಿ ಮಾಡಲು ಸಾಧ್ಯವಾಗಿದೆ. ಹೊಸ ವರ್ಷವು ಗುಜರಾತ್‌ನ ನನ್ನ ಎಲ್ಲ ಆತ್ಮೀಯ ಸಹೋದರ ಸಹೋದರಿಯರಿಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಹಝಿರಾ ಘಟಕ ವಿಸ್ತರಣೆಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ಈ ಉಕ್ಕಿನ ಘಟಕವು ಕೇವಲ ಹೂಡಿಕೆಯನ್ನು ಮಾತ್ರ ತರುತ್ತಿಲ್ಲ, ಆದರೆ ಭವಿಷ್ಯಕ್ಕಾಗಿ ಹೊಸ ಸಾಧ್ಯತೆಗಳ ಹಲವು ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತಿದೆ. 60,000 ಕೋಟಿ ರೂಪಾಯಿಗೂ ಅಧಿಕ ಹೂಡಿಕೆಯು ಗುಜರಾತ್ ಮತ್ತು ದೇಶದ ಯುವಕರಿಗೆ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ವಿಸ್ತರಣೆಯ ನಂತರ ಹಝಿರಾ ಉಕ್ಕು ಘಟಕದಲ್ಲಿ ಕಚ್ಚಾ ಉಕ್ಕಿನ ಉತ್ಪಾದನಾ ಸಾಮರ್ಥ್ಯವು ವಾರ್ಷಿಕವಾಗಿ 9 ಮಿಲಿಯನ್ ಟನ್‌ಗಳಿಂದ 15 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗಲಿದೆ. ಅದಕ್ಕಾಗಿ ನಾನು ಲಕ್ಷ್ಮಿ ಮಿತ್ತಲ್ ಜಿ, ಆದಿತ್ಯ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

ಮಿತ್ರರೇ,

ನಮ್ಮ ದೇಶವು ಇದೀಗ "ಅಮೃತ ಕಾಲ"ವನ್ನು ಪ್ರವೇಶಿಸುತ್ತಿದ್ದು,  2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಗಳತ್ತ ಸಾಗಲು ಉತ್ಸುಕವಾಗಿದೆ. ದೇಶದ ಅಭಿವೃದ್ಧಿ ಪಯಣದಲ್ಲಿ ಉಕ್ಕಿನ ಉದ್ಯಮದ ಪಾತ್ರವು ಬಹಳ ಮಹತ್ವದ್ದಾಗಿದೆ, ಏಕೆಂದರೆ ದೇಶದಲ್ಲಿ ಉಕ್ಕಿನ ವಲಯವು ಬಲಿಷ್ಠವಾಗಿದೆ, ಮೂಲಸೌಕರ್ಯ ಕ್ಷೇತ್ರವು ಸುದೃಢವಾಗುತ್ತದೆ. ಉಕ್ಕಿನ ವಲಯವು ವಿಸ್ತರಿಸಿದಾಗ, ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ವಿಸ್ತರಣೆಯೂ ಆಗುತ್ತದೆ. ಉಕ್ಕಿನ ವಲಯವು ಬೆಳೆದಂತೆ, ನಿರ್ಮಾಣ ಮತ್ತು ವಾಹನ ಕ್ಷೇತ್ರಗಳಿಗೆ ಹೊಸ ಆಯಾಮ ದೊರಕುತ್ತದೆ. ಉಕ್ಕಿನ ಕ್ಷೇತ್ರದ ಸಾಮರ್ಥ್ಯವು ಬೆಳೆದಾಗ, ರಕ್ಷಣೆ, ಬಂಡವಾಳ ಸರಕು ಮತ್ತು ಎಂಜಿನಿಯರಿಂಗ್ ಉತ್ಪನ್ನಗಳ ಅಭಿವೃದ್ಧಿಗೂ ಉತ್ತೇಜನ ದೊರಕುತ್ತದೆ. ಈವರೆಗೆ ಕಬ್ಬಿಣದ ಅದಿರನ್ನು ರಫ್ತು ಮಾಡುವ ಮೂಲಕ ನಾವು ತೃಪ್ತರಾಗಿದ್ದೇವೆ. ಆರ್ಥಿಕ ಅಭಿವೃದ್ಧಿಗಾಗಿ ನಮ್ಮ ಭೂ ಆಸ್ತಿಗಳನ್ನು ಮೌಲ್ಯಮಾಪನ ಮಾಡುವುದು ಬಹಳ ಮುಖ್ಯ. ಇಂತಹ ಉಕ್ಕಿನ ಸ್ಥಾವರಗಳ ವಿಸ್ತರಣೆಯಿಂದ ನಮ್ಮ ದೇಶದಲ್ಲಿ ನಮ್ಮ ಕಬ್ಬಿಣದ ಅದಿರು ಸರಿಯಾಗಿ ಬಳಕೆಯಾಗುತ್ತದೆ. ದೇಶದ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿದ್ದು, ಭಾರತದ ಉಕ್ಕು ಉದ್ಯಮವೂ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲಿದೆ. ಇದು ಕೇವಲ ಸ್ಥಾವರದ ವಿಸ್ತರಣೆಯಲ್ಲ, ಆದರೆ ಅದರೊಂದಿಗೆ ಹೊಸ ಹೊಸ ತಂತ್ರಜ್ಞಾನವು ಭಾರತಕ್ಕೆ ಬರಲಿದೆ ಎಂಬ ಮಾಹಿತಿ ನನಗಿದೆ. ಈ ಹೊಸ ತಂತ್ರಜ್ಞಾನವು ಎಲೆಕ್ಟ್ರಿಕ್ ವಾಹನ, ಆಟೋಮೊಬೈಲ್ ಮತ್ತು ಇತರ ಉತ್ಪಾದನಾ ವಲಯಗಳಿಗೆ ಸಾಕಷ್ಟು ಸಹಾಯಕವಾಗಲಿದೆ. ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ ಈ ಯೋಜನೆಯು ಮೇಕ್ ಇನ್ ಇಂಡಿಯಾದ ದೃಷ್ಟಿಯಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದೆ ಎಂಬ ಖಾತ್ರಿ ನನಗಿದೆ. ಉಕ್ಕಿನ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಪ್ರಯತ್ನಗಳಿಗೆ ಇದು ಹೊಸ ಶಕ್ತಿಯನ್ನು ನೀಡಲಿದೆ.

ಮಿತ್ರರೇ,

ಜಗತ್ತು ಇಂದು ನಮ್ಮನ್ನು ಬಹಳ ನಿರೀಕ್ಷೆಯಿಂದ ನೋಡುತ್ತಿದೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುವತ್ತ ತ್ವರಿತವಾಗಿ ಸಾಗುತ್ತಿದೆ. ಮತ್ತು ಈ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ನೀತಿ ವಾತಾವರಣವನ್ನು ರೂಪಿಸುವಲ್ಲಿ ಸರ್ಕಾರವು ಸಕ್ರಿಯವಾಗಿ ತೊಡಗಿದೆ. ಭೂಪೇಂದ್ರಭಾಯಿ ಪಟೇಲ್ ಅವರ ನೇತೃತ್ವದ ಹೊಸ ಕೈಗಾರಿಕಾ ನೀತಿಯು ಗುಜರಾತ್ ಅನ್ನು ಜಾರಿಗೊಳಿಸಲಾಗಿದ್ದು, ಅದು ಉತ್ಪಾದನಾ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಕೂಡಿದೆ. ಅದಕ್ಕಾಗಿ ನಾನು ಗುಜರಾತ್ ಸರ್ಕಾರವನ್ನು ಅಭಿನಂದಿಸುತ್ತೇನೆ.

ಕಳೆದ ಎಂಟು ವರ್ಷಗಳಲ್ಲಿ ಕೈಗೊಂಡಿರುವ  ಸಾಮೂಹಿಕ ಪ್ರಯತ್ನಗಳಿಂದಾಗಿ ಭಾರತೀಯ ಉಕ್ಕು ಉದ್ಯಮವು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದನಾ ಉದ್ಯಮವಾಗಿ ಬೆಳೆದಿದೆ. ಈ ಉದ್ಯಮದಲ್ಲಿ ಅಭಿವೃದ್ಧಿಗೆ ಅಪಾರ ಸಾಮರ್ಥ್ಯವಿದ್ದು, ಸರ್ಕಾರದ ಪಿಎಲ್‌ಐ ಯೋಜನೆಯು ಅದರ ವಿಸ್ತರಣೆಗೆ ದಾರಿ ಮಾಡಿಕೊಟ್ಟಿದ್ದು, ‘ಆತ್ಮನಿರ್ಭರ ಭಾರತ್’ ಅಭಿಯಾನವನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ. ಇದು ಉತ್ಕೃಷ್ಟ ದರ್ಜೆಯ ಉಕ್ಕಿನ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು   ನಮಗೆ ಅನುವು ಮಾಡಿಕೊಟ್ಟಿದೆ. ಈ ಉತ್ಕೃಷ್ಟ ದರ್ಜೆಯ ಉಕ್ಕಿನ ಬಳಕೆಯು ನಿರ್ಣಾಯಕ ಮತ್ತು ಕಾರ್ಯತಂತ್ರದ ಅಳವಡಿಕೆಯೂ ಹೆಚ್ಚಾಗಿದೆ. ಐಎನ್‌ಎಸ್ ವಿಕ್ರಾಂತ್ ನಿಮ್ಮ ಮುಂದೆ ಅಂತಹ ಒಂದು ಉದಾಹರಣೆಯಾಗಿದೆ. ಈ ಹಿಂದೆ, ವಿಮಾನವಾಹಕ ನೌಕೆಗಳಲ್ಲಿ ಬಳಸುವ ಉಕ್ಕಿಗಾಗಿ ನಾವು ಇತರ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ದೇಶದ ಭದ್ರತೆಯನ್ನು ಬಲಪಡಿಸಲು ನಮಗೆ ಇತರ ದೇಶಗಳ ಅನುಮೋದನೆ ಬೇಕಿತ್ತು. ಆ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ಸ್ವಾವಲಂಬಿಗಳಾಗಬೇಕಿತ್ತು ಮತ್ತು ಭಾರತೀಯ ಉಕ್ಕು ಉದ್ಯಮವು ಈ ಸವಾಲನ್ನು ಹೊಸಹುಮ್ಮಸ್ಸಿನಿಂದ ಸ್ವೀಕರಿಸಿತು. ತಕ್ಷಣವೇ ನಮ್ಮ ಡಿಆರ್‌ಡಿಒ ವಿಜ್ಞಾನಿಗಳು ವಿಮಾನವಾಹಕ ನೌಕೆಯಲ್ಲಿ ಬಳಸುವ ವಿಶೇಷ ಉಕ್ಕನ್ನು ಅಭಿವೃದ್ಧಿಪಡಿಸಿದರು. ಭಾರತೀಯ ಕಂಪನಿಗಳು ಸಾವಿರಾರು ಮೆಟ್ರಿಕ್ ಟನ್ ಉಕ್ಕನ್ನು ಉತ್ಪಾದಿಸಿದವು. ಮತ್ತು ಐಎನ್‌ಎಸ್ ವಿಕ್ರಾಂತ್ ಸ್ವದೇಶಿ ಸಾಮರ್ಥ್ಯ ಮತ್ತು ತಂತ್ರಜ್ಞಾನದೊಂದಿಗೆ ಸಿದ್ಧವಾಯಿತು. ಅಂತಹ ಸಾಮರ್ಥ್ಯವನ್ನು ಉತ್ತೇಜಿಸಲು ದೇಶವು ಈಗ ಕಚ್ಚಾ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಸದ್ಯಕ್ಕೆ ನಾವು 154 ಎಂಟಿ ಕಚ್ಚಾ ಉಕ್ಕನ್ನು ಉತ್ಪಾದಿಸುತ್ತೇವೆ. ಮುಂದಿನ 9-10 ವರ್ಷಗಳಲ್ಲಿ 300 ಎಂಟಿ ಉತ್ಪಾದನಾ ಸಾಮರ್ಥ್ಯ ತಲುಪುವುದು ನಮ್ಮ ಗುರಿಯಾಗಿದೆ.

ಮಿತ್ರರೇ,

ನಾವು ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿರುವಾಗ, ಕೆಲವು ಸವಾಲುಗಳನ್ನು ಸಹ ಗಮನ ವಹಿಸಬೇಕಾಗುತ್ತದೆ. ಇಂಗಾಲದ ಹೊರಸೂಸುವಿಕೆಯು ಉಕ್ಕಿನ ಉದ್ಯಮಕ್ಕೆ ಅಂತಹ ಒಂದು ಸವಾಲಾಗಿದೆ. ಆದ್ದರಿಂದ, ಒಂದೆಡೆ, ನಾವು ಕಚ್ಚಾ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದೇವೆ ಮತ್ತು ಮತ್ತೊಂದೆಡೆ, ನಾವು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುತ್ತಿದ್ದೇವೆ. ಇಂದು, ಭಾರತವು ಅಂತಹ ಉತ್ಪಾದನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ನೀಡುತ್ತಿದೆ, ಇದು ಇಂಗಾಲದ ಹೊರಸೂಸುವಿಕೆಯನ್ನು  ತಗ್ಗಿಸುತ್ತದೆ, ಆದರೆ ಇಂಗಾಲವನ್ನು ಹಿಡಿದಿಟ್ಟುಕೊಂಡು ಮತ್ತು ಮರುಬಳಕೆ ಮಾಡುತ್ತದೆ. ದೇಶದಲ್ಲಿ ಆರ್ಥಿಕತೆ ಚಲಾವಣೆಯನ್ನೂ ಸಹ ಉತ್ತೇಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಎಎಂ/ಎನ್ ಎಸ್  ಇಂಡಿಯಾ ಸಮೂಹದ ಹಝಿರಾ ಯೋಜನೆಯು ಹಸಿರು ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ನನಗೆ ಹರ್ಷ ತಂದಿದೆ.

ಮಿತ್ರರೇ,

ಪ್ರತಿಯೊಬ್ಬರೂ ಸಂಪೂರ್ಣ ಬಲದಿಂದ ಗುರಿಯತ್ತ ಪ್ರಯತ್ನಗಳನ್ನು ಮಾಡಲು ಆರಂಭಿಸಿದಾಗ, ಅದನ್ನು ಸಾಧಿಸುವುದು ಕಷ್ಟವೇನಲ್ಲ. ಉಕ್ಕು ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಯು ಇಡೀ ಪ್ರದೇಶ ಮತ್ತು ಉಕ್ಕು ವಲಯದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂಬ ಖಾತ್ರಿ ನನಗಿದೆ.  ನಾನು ಮತ್ತೊಮ್ಮೆ ಎ ಎಂ /ಎನ್ ಎಸ್ ಇಂಡಿಯಾ ತಂಡವನ್ನು ಅಭಿನಂದಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ತಿಳಿಸಬಯಸುತ್ತೇನೆ.

ತುಂಬಾ ಧನ್ಯವಾದಗಳು!

ಘೋಷಣೆ:  ಇದು ಪ್ರಧಾನಿ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು. 

*****



(Release ID: 1872732) Visitor Counter : 112