ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ವಡೋದರಾದಲ್ಲಿ ಸಿ-295 ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ 


'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ಗ್ಲೋಬ್' ಎಂಬ ಮಂತ್ರದೊಂದಿಗೆ ಭಾರತ ಮುನ್ನಡೆಯುತ್ತಿದೆ.

"ಪ್ರಸಿದ್ಧ ಸಾಂಸ್ಕೃತಿಕ ಮತ್ತು ಶಿಕ್ಷಣ ಕೇಂದ್ರವಾದ ವಡೋದರಾ, ವಿಮಾನಯಾನ ಕ್ಷೇತ್ರದ ಕೇಂದ್ರವಾಗಿ ಹೊಸ ಗುರುತಿನೊಂದಿಗೆ  ಅಭಿವೃದ್ಧಿಯಾಗಲಿದೆ"

"ವಾಯು ಸಂಚಾರಕ್ಕೆ ಸಂಬಂಧಿಸಿದಂತೆ ನಾವು ವಿಶ್ವದ ಅಗ್ರ ಮೂರು ದೇಶಗಳಲ್ಲಿ ಒಂದಾಗಿ ಪರಿಗಣಿಸಲ್ಪಡಲಿದ್ದೇವೆ”

"ಜಾಗತಿಕ ಸಾಂಕ್ರಾಮಿಕ, ಯುದ್ಧ ಮತ್ತು ಪೂರೈಕೆ ಸರಪಳಿ ಅಡೆತಡೆಗಳ ಹೊರತಾಗಿಯೂ ಭಾರತದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲಾಗಿದೆ"

"ಭಾರತವು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮತ್ತು ಹೆಚ್ಚಿನ ಉತ್ಪಾದನೆಯ ಅವಕಾಶಗಳನ್ನು ಪ್ರಸ್ತುತಪಡಿಸುತ್ತಿದೆ"

"ಇಂದು, ಭಾರತವು ಹೊಸ ಮನಸ್ಥಿತಿ, ಹೊಸ ಕೆಲಸದ ಸಂಸ್ಕೃತಿಯೊಂದಿಗೆ ಕಾರ್ಯನಿರತವಾಗಿದೆ"

"ಇಂದು ನಮ್ಮ ನೀತಿಗಳು ಸ್ಥಿರವಾಗಿವೆ, ಊಹಿಸಬಹುದಾದ ಮತ್ತು ಭವಿಷ್ಯವಾದಿಯಾಗಿವೆ” 

"2025 ರ ವೇಳೆಗೆ ನಮ್ಮ ರಕ್ಷಣಾ ಉತ್ಪಾದನೆಯನ್ನು 25 ಬಿಲಿಯನ್ ಡಾಲರಿಗಿಂತಲೂ   ಹೆಚ್ಚು ಮಾಡುವ  ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ರಕ್ಷಣಾ ರಫ್ತು ಕೂಡ 5 ಬಿಲಿಯನ್ ಡಾಲರ್ ಮೀರಲಿದೆ”.

Posted On: 30 OCT 2022 4:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ವಡೋದರಾದಲ್ಲಿ ಸಿ-295 ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆತ್ಮನಿರ್ಭರ ಭಾರತ್ ಅಡಿಯಲ್ಲಿ ಏರೋಸ್ಪೇಸ್ ಉದ್ಯಮದಲ್ಲಿ ತಾಂತ್ರಿಕ ಮತ್ತು ಉತ್ಪಾದನಾ ದಾಪುಗಾಲುಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನಕ್ಕೂ ಅವರು ಭೇಟಿ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತವನ್ನು ವಿಶ್ವದ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ದಿಸೆಯಲ್ಲಿ ಇಂದು ನಾವು ಒಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂದರು. ಭಾರತವು ಫೈಟರ್ ಜೆಟ್ ಗಳು(ಯುದ್ಧ ವಿಮಾನಗಳು), ಟ್ಯಾಂಕ್ ಗಳು, ಜಲಾಂತರ್ಗಾಮಿಗಳು, ಔಷಧಗಳು, ಲಸಿಕೆಗಳು, ವಿದ್ಯುನ್ಮಾನ ಗ್ಯಾಜೆಟ್ ಗಳು, ಮೊಬೈಲ್ ಫೋನ್ ಗಳು ಮತ್ತು ಕಾರುಗಳನ್ನು ತಯಾರಿಸುತ್ತಿದೆ ಎಂದು ಅವರು ಹೇಳಿದರು. 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ಗ್ಲೋಬ್' ಮಂತ್ರದೊಂದಿಗೆ ಭಾರತವು ಮುಂದುವರಿಯುತ್ತಿದೆ ಮತ್ತು ಈಗ ಭಾರತವು ವಿಶ್ವದಲ್ಲಿ ಸಾರಿಗೆ ವಿಮಾನಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುವ ರಾಷ್ಟ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. 'ಮೇಡ್ ಇನ್ ಇಂಡಿಯಾ' ಎಂಬ ಪದಗಳನ್ನು ಮೂಡಿಸಿಕೊಂಡ ದೊಡ್ಡ ಪ್ರಯಾಣಿಕ ವಿಮಾನಗಳನ್ನು ಭಾರತವು ಶೀಘ್ರದಲ್ಲೇ ತಯಾರಿಸಲಿದೆ ಎಂಬ ಮುಂಗಾಣ್ಕೆಯನ್ನು ತಾವು ಹೊಂದಿರುವುದಾಗಿಯೂ  ಪ್ರಧಾನ ಮಂತ್ರಿ ಅವರು ಹೇಳಿದರು. 

ಇಂದು ಶಂಕುಸ್ಥಾಪನೆ ನೆರವೇರಿಸಿದ ಘಟಕ ಸೌಲಭ್ಯವು ದೇಶದ ರಕ್ಷಣೆ ಮತ್ತು ಸಾರಿಗೆ ಕ್ಷೇತ್ರವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಇದೇ ಮೊದಲ ಬಾರಿಗೆ ಭಾರತೀಯ ರಕ್ಷಣಾ ವಲಯದಲ್ಲಿ ಈ ಬೃಹತ್ ಹೂಡಿಕೆ ನಡೆಯುತ್ತಿದೆ ಎಂಬುದರತ್ತ ಅವರು ಗಮನಸೆಳೆದರು. ಇಲ್ಲಿ ತಯಾರಿಸಲಾಗುವ ಸಾರಿಗೆ ವಿಮಾನಗಳು ಸಶಸ್ತ್ರ ಪಡೆಗಳಿಗೆ ಶಕ್ತಿ ನೀಡುವುದಲ್ಲದೆ, ವಿಮಾನ ತಯಾರಿಕೆಯ ಹೊಸ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ "ಸಾಂಸ್ಕೃತಿಕ ಮತ್ತು ಶಿಕ್ಷಣ ಕೇಂದ್ರವಾಗಿ ಪ್ರಸಿದ್ಧವಾಗಿರುವ ವಡೋದರಾ, ವೈಮಾನಿಕ ವಲಯದ ಕೇಂದ್ರವಾಗಿ ಹೊಸ ಗುರುತನ್ನು ಪಡೆಯಲಿದೆ" ಎಂದು ಅವರು ಹೇಳಿದರು.  100 ಕ್ಕೂ ಹೆಚ್ಚು ಎಂಇಎಂಇಗಳು ಸಹ ಈ ಯೋಜನೆಯೊಂದಿಗೆ ಸಂಬಂಧ ಹೊಂದಿರುವ  ಸಂಗತಿಯ ಬಗ್ಗೆ ಪ್ರಧಾನಮಂತ್ರಿಯವರು ಸಂತೋಷ ವ್ಯಕ್ತಪಡಿಸಿದರು. 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ಗ್ಲೋಬ್' ಎಂಬ ಭರವಸೆ ಈ ನೆಲದಿಂದ ಹೊಸ ಉತ್ತೇಜನವನ್ನು, ಪ್ರೇರಣೆಯನ್ನು ಪಡೆದುಕೊಳ್ಳಲಿದೆ, ಏಕೆಂದರೆ ಈ ಯೋಜನೆಯಿಂದ ಭವಿಷ್ಯದಲ್ಲಿ ಇತರ ದೇಶಗಳಿಗೆ ರಫ್ತು ಮಾಡಲು ಬೇಡಿಕೆಯ ಆದೇಶಗಳನ್ನು ಪಡೆದುಕೊಳ್ಳಲು ನಮ್ಮ ದೇಶ ಸಮರ್ಥವಾಗಲಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ವಾಯು ಸಂಚಾರಕ್ಕೆ ಸಂಬಂಧಿಸಿದಂತೆ ನಾವು ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗಲಿದ್ದೇವೆ ಎಂದರು. ಉಡಾನ್ ಯೋಜನೆಯು ಅನೇಕ ಪ್ರಯಾಣಿಕರನ್ನು ವಿಮಾನ ಯಾನಿಗಳನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು. ಪ್ರಯಾಣಿಕ ಮತ್ತು ಸರಕು ವಿಮಾನಗಳಿಗೆ ಹೆಚ್ಚಿದ ಬೇಡಿಕೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಮುಂದಿನ 15 ವರ್ಷಗಳಲ್ಲಿ ಭಾರತಕ್ಕೆ 2000 ಕ್ಕೂ ಹೆಚ್ಚು ವಿಮಾನಗಳ ಅಗತ್ಯವಿದೆ ಎಂದು ಹೇಳಿದರು. ಈ ದಿಶೆಯಲ್ಲಿ ಇಂದಿನದ್ದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಮತ್ತು ಇದಕ್ಕಾಗಿ ಭಾರತ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ ಎಂಬುದರತ್ತ  ಪ್ರಧಾನಮಂತ್ರಿ ಅವರು ಗಮನಸೆಳೆದರು. ಕೊರೋನಾ ಜಾಗತಿಕ ಸಾಂಕ್ರಾಮಿಕ ಮತ್ತು ಯುದ್ಧದಿಂದ ಆವೃತವಾಗಿರುವ ಮತ್ತು ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳಿಂದ ಹಾನಿಗೊಳಗಾದ ವಿಶ್ವಕ್ಕೆ ಭಾರತವು ಜಾಗತಿಕ ಅವಕಾಶವನ್ನು ಪ್ರಸ್ತುತಪಡಿಸುತ್ತಿದೆ ಎಂದೂ  ಶ್ರೀ ಮೋದಿ ಅಭಿಪ್ರಾಯಪಟ್ಟರು. ಅಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಭಾರತದ ಬೆಳವಣಿಗೆಯ ವೇಗವು ಸ್ಥಿರವಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಕಾರ್ಯಾಚರಣಾ ಪರಿಸ್ಥಿತಿಗಳು ನಿರಂತರವಾಗಿ ಸುಧಾರಿಸುತ್ತಿವೆ ಮತ್ತು ಭಾರತವು ವೆಚ್ಚದ ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟದ ಮೇಲೆ ಗಮನ ಹರಿಸುತ್ತಿದೆ ಎಂದು ಅವರು ವಿವರಿಸಿದರು. "ಭಾರತವು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮತ್ತು ಹೆಚ್ಚಿನ ಉತ್ಪಾದನೆಯ ಅವಕಾಶವನ್ನು ಪ್ರಸ್ತುತಪಡಿಸುತ್ತಿದೆ" ಎಂದು ಪ್ರಧಾನಿ ಹೇಳಿದರು. ಭಾರತವು ನುರಿತ ಮಾನವಶಕ್ತಿಯ ಬೃಹತ್ ಪ್ರತಿಭಾ ಸಮೂಹವನ್ನು ಹೊಂದಿದೆ ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಸರ್ಕಾರ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಭಾರತವು ದೇಶದಲ್ಲಿ ಉತ್ಪಾದನೆಗೆ ಅಭೂತಪೂರ್ವ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದರು. ಜಾಗತಿಕವಾಗಿ ಸ್ಪರ್ಧಾತ್ಮಕವಾಗುವಂತೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಅವರು  ಸರಳೀಕೃತ ಸಾಂಸ್ಥಿಕ  ತೆರಿಗೆ ರಚನೆ,  ಶೇಕಡಾ 100 ರಷ್ಟು ವಿದೇಶೀ ನೇರ ಹೂಡಿಕೆ (ಎಫ್.ಡಿ.ಐ.) ಮಾರ್ಗವನ್ನು ತೆರೆಯುವುದು, ಖಾಸಗಿ ಕಂಪನಿಗಳಿಗೆ ರಕ್ಷಣೆ ಮತ್ತು ಬಾಹ್ಯಾಕಾಶ ವಲಯಗಳನ್ನು ತೆರೆಯುವುದು, 29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಾಗಿ ಸುಧಾರಿಸುವುದು, 33,000 ಅನುಸರಣೆಗಳನ್ನು ರದ್ದುಗೊಳಿಸುವುದು ಮತ್ತು ಡಜನುಗಟ್ಟಲೆ ತೆರಿಗೆಗಳ ಸಂಕೀರ್ಣ ಜಾಲವನ್ನು ಕೊನೆಗೊಳಿಸುವ ಮೂಲಕ ಸರಕು ಮತ್ತು ಸೇವಾ ತೆರಿಗೆಯನ್ನು ರೂಪಿಸಿದ ಉದಾಹರಣೆಗಳನ್ನು ಉಲ್ಲೇಖಿಸಿದರು. "ಇಂದು ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಹೊಸ ಕಥೆಯನ್ನು ಬರೆಯಲಾಗುತ್ತಿದೆ ಮತ್ತು ಉತ್ಪಾದನಾ ವಲಯವು ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದೆ" ಎಂದೂ ಅವರು ಹೇಳಿದರು.  

ಈ ಯಶಸ್ಸಿಗೆ ಮನಸ್ಥಿತಿಯ ಬದಲಾವಣೆಯೇ ಕಾರಣ ಎಂದು ಪ್ರಧಾನಮಂತ್ರಿ ಅವರು ಹೇಳಿದರು. "ಇಂದು, ಭಾರತವು ಹೊಸ ಮನಸ್ಥಿತಿ, ಹೊಸ ಕೆಲಸದ ಸಂಸ್ಕೃತಿಯೊಂದಿಗೆ ಕಾರ್ಯನಿರತವಾಗಿದೆ " ಎಂದು ಹೇಳಿದ ಅವರು ಸರ್ಕಾರಕ್ಕೆ ಎಲ್ಲವೂ ತಿಳಿದಿರುತ್ತದೆ ಎಂದು ನಂಬಿದ್ದ ಕಾಲಘಟ್ಟದಲ್ಲಿ, ದೇಶದ ಪ್ರತಿಭೆ ಮತ್ತು ಖಾಸಗಿ ವಲಯದ ಶಕ್ತಿಯನ್ನು ಹತ್ತಿಕ್ಕುವ ಮನಸ್ಥಿತಿ ನೆಲೆಗೊಂಡಿತ್ತು ಎಂಬುದನ್ನೂ ನೆನಪಿಸಿಕೊಂಡರು. "ಈಗ 'ಸಬ್ಕಾ ಪ್ರಯಾಸ್' ಅನುಸರಿಸಿ, ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಸಮಾನ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದೆ ಎಂದ ಅವರು  ಉತ್ಪಾದನಾ ವಲಯವನ್ನು ಸಬ್ಸಿಡಿಯ ಮೂಲಕ ಕೇವಲ ವಿರಳವಾಗಿ ಕಾರ್ಯನಿರ್ವಹಿಸುವಂತೆ ಮಾಡಿದ  ಹಿಂದಿನ ಸರ್ಕಾರದ ತಾತ್ಕಾಲಿಕ ವಿಧಾನದ ಬಗ್ಗೆಯೂ ಟೀಕಿಸಿದರು. ಲಾಜಿಸ್ಟಿಕ್ಸ್ (ಸರಕು ಸಾಗಾಣಿಕೆ), ವಿದ್ಯುತ್ ಸರಬರಾಜು ಅಥವಾ ನೀರು ಪೂರೈಕೆಯಂತಹ ಮೂಲಭೂತ ಸೌಲಭ್ಯಗಳನ್ನು ನಿರ್ಲಕ್ಷಿಸಲಾಯಿತು. "ನಾವು ತಾತ್ಕಾಲಿಕ ನಿರ್ಧಾರ ತೆಗೆದುಕೊಳ್ಳುವ ವಿಧಾನವನ್ನು ತ್ಯಜಿಸಿದ್ದೇವೆ ಮತ್ತು ಹೂಡಿಕೆದಾರರಿಗೆ ವಿವಿಧ ಹೊಸ ಪ್ರೋತ್ಸಾಹಕಗಳೊಂದಿಗೆ ಬಂದಿದ್ದೇವೆ. ನಾವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಪ್ರಾರಂಭಿಸಿದ್ದೇವೆ, ಇದು ಬದಲಾವಣೆ ಗೋಚರಿಸುವಂತೆ ಮಾಡಿತು. ಇಂದು ನಮ್ಮ ನೀತಿಗಳು ಸ್ಥಿರವಾಗಿವೆ, ಊಹಿಸಬಹುದಾದ ಮತ್ತು ಭವಿಷ್ಯವಾದಿಯಾಗಿವೆ ", ಎಂದು ಅವರು ಹೇಳಿದರು.

ಉತ್ಪಾದನಾ ರಂಗವು  ಕೈಗೆಟುಕದು  ಎಂದು ಪರಿಗಣಿಸಿ ಸೇವಾ ಕ್ಷೇತ್ರದ ಮೇಲೆ ಕೇಂದ್ರೀಕರಿಸಬೇಕು ಎಂಬ  ಪ್ರಬಲ ಚಿಂತನೆಯಿದ್ದ ಕಾಲವನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. "ಇಂದು ನಾವು ಸೇವೆಗಳು ಮತ್ತು ಉತ್ಪಾದನಾ ವಲಯಗಳನ್ನು ಸುಧಾರಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಉತ್ಪಾದನೆ ಮತ್ತು ಸೇವಾ ವಲಯಗಳೆರಡರ ಮೇಲೂ ಗಮನ ಕೇಂದ್ರೀಕರಿಸುವ ಸಮಗ್ರ ವಿಧಾನದ ಮಹತ್ವವನ್ನು ಅವರು ಒತ್ತಿ ಹೇಳಿದರು. "ಇಂದು ಭಾರತವು ಉತ್ಪಾದನೆಯಲ್ಲಿ ಎಲ್ಲರಿಗಿಂತ ಮುಂದಿರಲು ತಯಾರಿ ನಡೆಸುತ್ತಿದೆ" ಎಂದು ಅವರು ಹೇಳಿದರು. "ಕಳೆದ 8 ವರ್ಷಗಳಲ್ಲಿ ನಾವು ಕೌಶಲ್ಯ ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ ಮತ್ತು ಅದಕ್ಕಾಗಿ ವಾತಾವರಣವನ್ನು ಸೃಷ್ಟಿಸಿದ್ದೇವೆ. ಈ ಎಲ್ಲ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ಇಂದು ಉತ್ಪಾದನಾ ವಲಯದಲ್ಲಿ ಭಾರತದ ಅಭಿವೃದ್ಧಿ ಪ್ರಯಾಣವು ಈ ಹಂತವನ್ನು ತಲುಪಿದೆ", ಎಂದೂ ಪ್ರಧಾನಿ ನುಡಿದರು. 

ಸರ್ಕಾರದ ಹೂಡಿಕೆ ಸ್ನೇಹಿ ನೀತಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅದರ ಪ್ರಯೋಜನಗಳು ಎಫ್ ಡಿಐನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಹೇಳಿದರು. "ಕಳೆದ ಎಂಟು ವರ್ಷಗಳಲ್ಲಿ 160 ಕ್ಕೂ ಹೆಚ್ಚು ದೇಶಗಳ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ" ಎಂದು ಅವರು ಹೇಳಿದರು. ಅಂತಹ ವಿದೇಶಿ ಹೂಡಿಕೆಗಳು ಕೆಲವು ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ,ಬದಲು ಆರ್ಥಿಕತೆಯ 61 ವಲಯಗಳಲ್ಲಿ ಹರಡಿವೆ ಮತ್ತು ಭಾರತದ 31 ರಾಜ್ಯಗಳನ್ನು ಆವರಿಸಿವೆ ಎಂದು ಅವರು ವಿವರಿಸಿದರು. ಏರೋಸ್ಪೇಸ್ ಕ್ಷೇತ್ರವೊಂದರಲ್ಲೇ 3 ಬಿಲಿಯನ್ ಡಾಲರ್ ಗೂ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2014 ರ ನಂತರ, ಈ ವಲಯದಲ್ಲಿನ ಹೂಡಿಕೆಯು 2000 ರಿಂದ 2014 ರವರೆಗೆ ಹೂಡಿಕೆ ಮಾಡಿದ್ದಕ್ಕಿಂತ 5 ಪಟ್ಟು ಹೆಚ್ಚಾಗಿದೆ ಎಂಬುದರತ್ತ ಗಮನ ಸೆಳೆದ  ಪ್ರಧಾನಮಂತ್ರಿ ಅವರು ಮುಂಬರುವ ವರ್ಷಗಳಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ವಲಯಗಳು ಆತ್ಮನಿರ್ಭರ ಭಾರತ ಅಭಿಯಾನದ ನಿರ್ಣಾಯಕ ಆಧಾರ ಸ್ತಂಭಗಳಾಗಲಿವೆ ಎಂದೂ ಭವಿಷ್ಯ ನುಡಿದರು.  "2025 ರ ವೇಳೆಗೆ ನಮ್ಮ ರಕ್ಷಣಾ ಉತ್ಪಾದನೆಯನ್ನು 25 ಬಿಲಿಯನ್ ಡಾಲರಿಗಿಂತ ಹೆಚ್ಚು ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ರಕ್ಷಣಾ ರಫ್ತು ಕೂಡ 5 ಬಿಲಿಯನ್ ಡಾಲರ್ ಮೀರಲಿದೆ" ಎಂದು ಅವರು ಹೇಳಿದರು. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ರಕ್ಷಣಾ ಕಾರಿಡಾರ್ ಗಳು ಈ ವಲಯವನ್ನು ಅಭಿವೃದ್ಧಿ ಮಾಡಲು ಅಪಾರ ಸಹಾಯ ಮಾಡಲಿವೆ ಎಂದೂ  ಪ್ರಧಾನ ಮಂತ್ರಿ ಅವರು ನುಡಿದರು. ಗಾಂಧಿನಗರದಲ್ಲಿ ಅತಿ ದೊಡ್ಡ ಡಿಫೆನ್ಸ್ ಎಕ್ಸ್ ಪೋ ಆಯೋಜಿಸಿದ್ದಕ್ಕಾಗಿ ರಕ್ಷಣಾ ಸಚಿವಾಲಯ ಮತ್ತು ಗುಜರಾತ್ ಸರ್ಕಾರವನ್ನು ಶ್ರೀ ಮೋದಿ ಶ್ಲಾಘಿಸಿದರು. ಡಿಫೆನ್ಸ್-ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಎಲ್ಲಾ ಸಲಕರಣೆಗಳು ಮತ್ತು ತಂತ್ರಜ್ಞಾನಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದನ್ನವರು  ಒತ್ತಿ ಹೇಳಿದರು. "ಪ್ರಾಜೆಕ್ಟ್ ಸಿ-295 ರ ಪ್ರತಿಬಿಂಬವು ಮುಂಬರುವ ವರ್ಷಗಳ ಡಿಫೆನ್ಸ್-ಎಕ್ಸ್ ಪೋದಲ್ಲಿ ನಮಗೆ ಗೋಚರಿಸಲಿದೆ" ಎಂದು ಪ್ರಧಾನ ಮಂತ್ರಿ ನುಡಿದರು.  

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ  ಪ್ರಧಾನಮಂತ್ರಿಯವರು, ಈ ಸಮಯದಲ್ಲಿ ದೇಶದಲ್ಲಿ ಹಿಂದೆಂದೂ ಕಂಡರಿಯದ ಹೂಡಿಕೆಯ ವಿಶ್ವಾಸವು ಕಂಡುಬರುತ್ತಿದ್ದು ಅದನ್ನು  ಸದುಪಯೋಗಪಡಿಸಿಕೊಳ್ಳುವಂತೆ ಉದ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ಕರೆ ನೀಡಿದರು. ದೇಶದ ನವೋದ್ಯಮಗಳಿಗೆ ಮುಂದೆ ಸಾಗಲು ಸಹಾಯ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆ ನಡೆಯಬೇಕು ಎಂದವರು ಸಲಹೆ ಮಾಡಿದರು. ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲುದಾರಿಕೆಯನ್ನು ಹೆಚ್ಚಿಸಬೇಕು ಎಂಬುದನ್ನೂ ಅವರು ಪ್ರಬಲವಾಗಿ ಪ್ರತಿಪಾದಿಸಿದರು,  "ನಾವು ಈ ದಿಕ್ಕಿನಲ್ಲಿ ಸಾಗಿದರೆ, ನಾವೀನ್ಯತೆ ಮತ್ತು ಉತ್ಪಾದನೆಯ ಹೆಚ್ಚು ಬಲಿಷ್ಠ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಮಗೆ ಸಾಧ್ಯವಾಗುತ್ತದೆ. ನೀವು ಸದಾ ಸಬ್ ಕಾ ಪ್ರಯಾಸ್ ಮಂತ್ರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು", ಎಂದು ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನು  ಮುಕ್ತಾಯಗೊಳಿಸಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್,  ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಟಾಟಾ ಸನ್ಸ್ ಅಧ್ಯಕ್ಷ ಶ್ರೀ ಎನ್ ಚಂದ್ರಶೇಖರನ್ ಮತ್ತು ಏರ್ ಬಸ್  ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ಕ್ರಿಶ್ಚಿಯನ್ ಶೆರರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ
ಸಿ-295 ಏರ್ ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ವಿಮಾನ ತಯಾರಿಕಾ ಘಟಕ) ದೇಶದ ಖಾಸಗಿ ವಲಯದಲ್ಲಿನ ಮೊದಲ ವಿಮಾನ ಉತ್ಪಾದನಾ ಸೌಲಭ್ಯವಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಸ್ಪೇನ್ ನ  ಏರ್ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಸಹಯೋಗದೊಂದಿಗೆ ಭಾರತೀಯ ವಾಯುಪಡೆಗೆ 40 ಸಿ -295 ವಿಮಾನಗಳನ್ನು ತಯಾರಿಸಲು ಈ ಸೌಲಭ್ಯವನ್ನು ಬಳಸಲಾಗುವುದು. ಈ ಸೌಲಭ್ಯವು ರಕ್ಷಣಾ ವಲಯದಲ್ಲಿ ಆತ್ಮನಿರ್ಭರವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಮತ್ತು ಈ ವಲಯದಲ್ಲಿ ಖಾಸಗಿ ಕಂಪನಿಗಳ ಸಾಮರ್ಥ್ಯವನ್ನು ಅನಾವರಣ ಮಾಡಲು ಕೂಡಾ ಸಹಾಯ ಮಾಡುತ್ತದೆ.

*****


(Release ID: 1872112) Visitor Counter : 182