ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯಗಳ ಗೃಹ ಸಚಿವರ 'ಚಿಂತನ ಶಿಬಿರ'ದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಕನ್ನಡ
Posted On:
28 OCT 2022 6:33PM by PIB Bengaluru
ಭಾಷಾಂತರ!
ನಮಸ್ಕಾರ!
ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಅಮಿತ್ ಶಾ ಅವರೇ, ಮುಖ್ಯಮಂತ್ರಿಗಳೇ, ಗೃಹ ಸಚಿವರೇ, ವಿವಿಧ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರುಗಳೇ, ಗೃಹ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳೇ, ಇತರ ಎಲ್ಲಾ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ಈ ದಿನಗಳಲ್ಲಿ ದೇಶದಲ್ಲಿ ಹಬ್ಬದ ವಾತಾವರಣವಿದೆ. ದೇಶವಾಸಿಗಳು ಓಣಂ, ಈದ್, ದಸರಾ, ದುರ್ಗಾ ಪೂಜೆ ಮತ್ತು ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿದ್ದಾರೆ. ಈಗ ಛಾತ್ ಪೂಜೆ ಸೇರಿದಂತೆ ಇನ್ನೂ ಅನೇಕ ಮುಂಬರುವ ಹಬ್ಬಗಳಿವೆ. ವಿವಿಧ ಸವಾಲುಗಳ ಹಿನ್ನೆಲೆಯಲ್ಲಿ, ಈ ಹಬ್ಬಗಳ ಸಮಯದಲ್ಲಿ ದೇಶದ ಏಕತೆಯನ್ನು ಬಲಪಡಿಸುವುದು ಸಹ ನಿಮ್ಮ ಸನ್ನದ್ಧತೆಯ ಪ್ರತಿಬಿಂಬವಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯು ಸಂವಿಧಾನದ ಅಡಿಯಲ್ಲಿ ರಾಜ್ಯಗಳ ಜವಾಬ್ದಾರಿಯಾಗಿದ್ದರೂ ಕೂಡ ಅದು ಹೆಚ್ಚಾಗಿ ದೇಶದ ಏಕತೆ ಮತ್ತು ಸಮಗ್ರತೆಗೆ ಅಷ್ಟೇ ಸಂಬಂಧಿಸಿದ್ದಾಗಿದೆ. ಸೂರಜ್ ಕುಂಡ್ ನಲ್ಲಿ ನಡೆಯುತ್ತಿರುವ ಗೃಹ ಸಚಿವರುಗಳ ಈ 'ಚಿಂತನ ಶಿಬಿರ' (ಚಿಂತನ ಮಂಥನ ಅಧಿವೇಶನ) ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಪ್ರತಿಯೊಂದು ರಾಜ್ಯವೂ ಪರಸ್ಪರರಿಂದ ಕಲಿಯಬೇಕು, ಪರಸ್ಪರರಿಂದ ಸ್ಫೂರ್ತಿ ಪಡೆಯಬೇಕು ಮತ್ತು ದೇಶದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ಇದು ಸಂವಿಧಾನದ ಸ್ಫೂರ್ತಿ ಮತ್ತು ದೇಶವಾಸಿಗಳ ಬಗ್ಗೆ ನಮ್ಮ ಜವಾಬ್ದಾರಿಯೂ ಆಗಿದೆ.
ಸ್ನೇಹಿತರೇ,
ಸ್ವಾತಂತ್ರ್ಯದ 'ಅಮೃತ ಕಾಲ' ನಮ್ಮ ಮುಂದಿದೆ. ಮುಂದಿನ 25 ವರ್ಷಗಳು ದೇಶದಲ್ಲಿ 'ಅಮೃತ' ಪೀಳಿಗೆಯ ಸೃಷ್ಟಿಗೆ ಕಾರಣವಾಗುತ್ತವೆ. 'ಪಂಚ ಪ್ರಾಣ'ಗಳ (ಐದು ಸಂಕಲ್ಪಗಳು) ನಿರ್ಣಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ 'ಅಮೃತ' ಪೀಳಿಗೆಯನ್ನು ಸೃಷ್ಟಿಸಲಾಗುವುದು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು, ಗುಲಾಮಗಿರಿಯ ಪ್ರತಿಯೊಂದು ಪರಿಕಲ್ಪನೆಯಿಂದ ಮುಕ್ತಿ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ, ಏಕತೆ ಮತ್ತು ಸಮಗ್ರತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಾಗರಿಕ ಕರ್ತವ್ಯ- ಈ ಐದು ಪಂಚಪ್ರಾಣ ಸಂಕಲ್ಪದ ಮಹತ್ವವನ್ನು ನೀವೆಲ್ಲರೂ ಅರ್ಥಮಾಡಿಕೊಂಡಿದ್ದೀರಿ. ಇದು ಒಂದು ಬೃಹತ್ ಸಂಕಲ್ಪವಾಗಿದೆ, ಇದನ್ನು 'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಮೂಲಕ ಮಾತ್ರ ಸಾಧಿಸಬಹುದು. ವಿಧಾನಗಳು ವಿಭಿನ್ನವಾಗಿರಬಹುದು, ನಮ್ಮ ಮಾರ್ಗಗಳು ಮತ್ತು ಆದ್ಯತೆಗಳು ವಿಭಿನ್ನವಾಗಿರಬಹುದು, ಆದರೆ ಈ 'ಪಂಚ ಪ್ರಾಣಗಳು' ದೇಶದ ಪ್ರತಿಯೊಂದು ರಾಜ್ಯದಲ್ಲೂ ನಮ್ಮ ಆಡಳಿತಕ್ಕೆ ಸ್ಫೂರ್ತಿಯಾಗಿರಬೇಕು. ಇವು ಉತ್ತಮ ಆಡಳಿತದ ತಿರುಳಾಗಿರುವಾಗ ಭಾರತದ ಸಾಮರ್ಥ್ಯವು ವ್ಯಾಪಕವಾಗಿ ವಿಸ್ತರಿಸಲ್ಪಡುತ್ತದೆ. ದೇಶದ ಸಾಮರ್ಥ್ಯ ಹೆಚ್ಚಾದಾಗ, ಪ್ರತಿಯೊಬ್ಬ ನಾಗರಿಕನ, ದೇಶದ ಪ್ರತಿಯೊಂದು ಕುಟುಂಬದ ಶಕ್ತಿ ಹೆಚ್ಚಾಗುತ್ತದೆ. ಇದುವೇ ಉತ್ತಮ ಆಡಳಿತ, ದೇಶದ ಪ್ರತಿಯೊಂದು ರಾಜ್ಯವು ಸಮಾಜದ ಕೊನೆಯ ಸಾಲಿನಲ್ಲಿ ನಿಂತಿರುವ ಕೊನೆಯ ವ್ಯಕ್ತಿಗೆ ಪ್ರಯೋಜನ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನೀವೆಲ್ಲರೂ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದ್ದೀರಿ.
ಸ್ನೇಹಿತರೇ,
ಈ 'ಶಿಬಿರ'ಕ್ಕೆ ಹಾಜರಾಗುವ ನಿಮ್ಮಲ್ಲಿ ಹೆಚ್ಚಿನವರು ನಿಮ್ಮ ರಾಜ್ಯವನ್ನು ಮುನ್ನಡೆಸುತ್ತಿದ್ದೀರೆ, ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ನೇರವಾಗಿ ಜವಾಬ್ದಾರರಾಗಿರುತ್ತೀರಿ. ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯದ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ, ರಾಜ್ಯಗಳ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಮ್ಮ ನಿರ್ಧಾರಗಳು, ನೀತಿಗಳು ಮತ್ತು ರೂಢಿಗಳು ಬಹಳ ಮುಖ್ಯವಾಗಿವೆ.
ಸ್ನೇಹಿತರೇ,
ಇಡೀ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯು ವಿಶ್ವಾಸಾರ್ಹವಾಗಿರುವುದು ಮತ್ತು ಸಾರ್ವಜನಿಕರಲ್ಲಿ ಅದರ ಬಗ್ಗೆ ಇರುವ ಅಭಿಪ್ರಾಯ ಏನು ಎಂಬುದು ಅಷ್ಟೇ ಮುಖ್ಯವಾಗಿದೆ. ಯಾವುದೇ ಪ್ರಾಕೃತಿಕ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿರುವುದನ್ನು ನೀವು ನೋಡಿದ್ದೀರಿ. ಯಾವುದೇ ವಿಪತ್ತು ಸಂಭವಿಸುವ ಮೊದಲೇ ಅವರು ಕಾಣಿಸಿಕೊಂಡಾಗ ಅವರು ಬಂದಿದ್ದಾರೆ ಪರಿಸ್ಥಿತಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ದೇಶವಾಸಿಗಳಲ್ಲಿ ಮೂಡಿರುತ್ತದೆ. ಅವರು ಹೇಳುವುದಕ್ಕೆ ನಾವು ಬದ್ಧರಾಗಿರಬೇಕು ಮತ್ತು ನಾವು ಅವರ ಮಾತುಗಳನ್ನು ಕೇಳಿದರೆ ನಮಗೆ ಆಗಬಹುದಾದ ನಷ್ಟ ಕಡಿಮೆ ಆಗುತ್ತದೆ ಎಂಬ ನಂಬಿಕೆ ಇದೆ. ನೀವೇ ನೋಡಿ, ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್.ನಲ್ಲಿ ಯಾರೆಲ್ಲಾ ಇದ್ದಾರೆ? ಅವರು ನಿಮ್ಮ ಸಹೋದ್ಯೋಗಿಗಳೇ. ಅವರು ಸಶಸ್ತ್ರ ಪಡೆಗಳ ಯೋಧರು. ಆದರೆ, ಸಮಾಜದಲ್ಲಿ ಅವರ ಬಗ್ಗೆ ಒಂದು ರೀತಿಯ ಗೌರವವಿದೆ. ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್. ತಂಡವು ವಿಪತ್ತು ಪೀಡಿತ ಪ್ರದೇಶವನ್ನು ತಲುಪಿದ ತಕ್ಷಣ, ಪರಿಸ್ಥಿತಿಯನ್ನು ನಿಭಾಯಿಸುವ ತಜ್ಞರ ತಂಡವಿದೆ ಎಂದು ಜನರು ಭರವಸೆ ವ್ಯಕ್ತಪಡಿಸುತ್ತಾರೆ.
ಸ್ನೇಹಿತರೇ,
ಅಪರಾಧದ ಸಂಭವಿಸಿದ ಯಾವುದೇ ಸ್ಥಳಕ್ಕೆ ಪೊಲೀಸರು ತಲುಪಿದ ತಕ್ಷಣ, ಸರ್ಕಾರ ಬಂದಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಕರೋನಾ ಅವಧಿಯಲ್ಲಿ ಪೊಲೀಸರ ವಿಶ್ವಾಸಾರ್ಹತೆಯಲ್ಲಿ ನಾವು ಅದ್ಭುತ ಸುಧಾರಣೆಯನ್ನು ಕಂಡಿದ್ದೇವೆ. ಪೊಲೀಸರು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದರು, ಅಗತ್ಯ ಸಂಪನ್ಮೂಲಗಳನ್ನು ವ್ಯವಸ್ಥೆ ಮಾಡುತ್ತಿದ್ದರು ಮತ್ತು ತಮ್ಮ ಜೀವವನ್ನು ಸಹ ಪಣಕ್ಕಿಟ್ಟಿದ್ದರು. ಅಂದರೆ, ಕರ್ತವ್ಯ ನಿಷ್ಠೆಗೆ ಸಂಬಂಧಿಸಿದಂತೆ ಯಾವುದೇ ಕೊರತೆಯಿರಲಿಲ್ಲ. ಹೀಗಾಗಿ, ಸಕಾರಾತ್ಮಕ ಅಭಿಪ್ರಾಯನ್ನು ಕಾಪಾಡಿಕೊಳ್ಳುವ ಅಗತ್ಯವೂ ಇದೆ. ಆದ್ದರಿಂದ, ಪೊಲೀಸ್ ಪಡೆಯನ್ನು ಪ್ರೇರೇಪಿಸಲು ಮತ್ತು ಅದಕ್ಕೆ ಅನುಗುಣವಾಗಿ ಯೋಜಿಸಲು ಮೇಲಿನಿಂದ ಕೆಳಗಿನವರೆಗೆ ನಿರಂತರ ಪ್ರಕ್ರಿಯೆ ಇರಬೇಕು. ಯಾವುದೇ ಪ್ರತಿ ಸಣ್ಣ ತಪ್ಪನ್ನು ತಡೆಗಟ್ಟುವ ಬಗ್ಗೆ ಅವರಿಗೆ ನಿಯಮಿತವಾಗಿ ಮಾರ್ಗದರ್ಶನ ನೀಡಬೇಕು.
ಸ್ನೇಹಿತರೇ,
ನಾವು ಇನ್ನೂ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಈಗ ಕಾನೂನು ಮತ್ತು ಸುವ್ಯವಸ್ಥೆ ಯಾವುದೇ ಒಂದು ರಾಜ್ಯದ ವ್ಯಾಪ್ತಿಗೆ ಸೀಮಿತವಾಗಿ ಉಳಿದಿಲ್ಲ. ಈಗ ಅಂತಾ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾಧಗಳು ನಡೆಯುತ್ತಿವೆ. ತಂತ್ರಜ್ಞಾನದ ಸಹಾಯದಿಂದ, ಒಂದು ರಾಜ್ಯದಲ್ಲಿ ಕುಳಿತಿರುವ ಅಪರಾಧಿಗಳು ಮತ್ತೊಂದು ರಾಜ್ಯದಲ್ಲಿ ಭಯಾನಕ ಅಪರಾಧಗಳನ್ನು ಮಾಡುವ ಶಕ್ತಿಯವನ್ನು ಹೊಂದಿದ್ದಾರೆ. ದೇಶದ ಗಡಿಯ ಹೊರಗಿನ ಅಪರಾಧಿಗಳು ಸಹ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪ್ರತಿಯೊಂದು ರಾಜ್ಯದ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ನಡುವಿನ ಸಮನ್ವಯವು ಬಹಳ ಮುಖ್ಯವಾಗಿದೆ. ಎರಡು ರಾಜ್ಯಗಳ ನೆರೆಹೊರೆಯ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ನಿಯಮಿತವಾಗಿ ಮೌಲ್ಯಮಾಪನ ಮಾಡಬೇಕು ಮತ್ತು ಅವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಡಿಜಿಪಿ ಸಭೆಯಲ್ಲಿ ನಾನು ಹೇಳಿದ್ದು, ನಿಮಗೆ ನೆನಪಿರಬಹುದು. ಇದು ಹೊಸ ಶಕ್ತಿಯ ಸೃಷ್ಟಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಕೇಂದ್ರೀಯ ಸಂಸ್ಥೆಗಳು ಏಕಕಾಲದಲ್ಲಿ ಹಲವಾರು ರಾಜ್ಯಗಳಲ್ಲಿ ತನಿಖೆಗಳನ್ನು ನಡೆಸಬೇಕಾಗುತ್ತದೆ ಮತ್ತು ಅವರು ಇತರ ದೇಶಗಳಿಗೂ ಹೋಗಬೇಕಾಗುತ್ತದೆ. ಆದ್ದರಿಂದ, ಯಾವುದೇ ರಾಜ್ಯ ಅಥವಾ ಕೇಂದ್ರ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡುವುದು ಪ್ರತಿಯೊಂದು ರಾಜ್ಯದ ಜವಾಬ್ದಾರಿಯಾಗಿದೆ. ಎಲ್ಲ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು. ಯಾವುದೇ ಸಂಸ್ಥೆಯ ಅಧಿಕಾರ ಮತ್ತು ಡೊಮೇನ್ ಬಗ್ಗೆ ಅನಗತ್ಯವಾಗಿ ಯೋಚಿಸಬಾರದು. ಕೆಲವೊಮ್ಮೆ, ಅಪರಾಧದ ಪ್ರದೇಶ ಮತ್ತು ಪೊಲೀಸ್ ಠಾಣೆಯ ವ್ಯಾಪ್ತಿಯ ಬಗೆಗಿನ ಗೊಂದಲದಿಂದಾಗಿ ಎಫ್ಐಆರ್ ದಾಖಲಾಗುವುದಿಲ್ಲ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಈ ವಿಷಯಗಳು ಕೇವಲ ಪೊಲೀಸ್ ಅಥವಾ ಪೊಲೀಸ್ ಠಾಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯಗಳ ನಡುವೆಯೂ ಉಂಟಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆಯೂ ಸಂಭವಿಸುತ್ತದೆ. ಇದು ಭಾರತ ಮತ್ತು ವಿದೇಶಗಳ ಸಂಸ್ಥೆಗಳ ನಡುವೆಯೂ ಸಂಭವಿಸುತ್ತದೆ. ಆದ್ದರಿಂದ, ನಮ್ಮ ಸ್ವಂತ ದಕ್ಷತೆ ಮತ್ತು ಫಲಿತಾಂಶಕ್ಕೆ ಮತ್ತು ದೇಶದ ಸಾಮಾನ್ಯ ನಾಗರಿಕರಿಗೆ ಭದ್ರತೆಯನ್ನು ಒದಗಿಸಲು ಎಲ್ಲಾ ಹಂತಗಳಲ್ಲಿ ಸಮನ್ವಯ, ಸಂಕಲನ ಮತ್ತು ಸಹಕಾರವು ಬಹಳ ಮುಖ್ಯವಾಗಿದೆ. ಎಲ್ಲ ಹಂತಗಳಲ್ಲಿ ಸಹಕಾರವಿದ್ದರೆ ಪ್ರತಿಯೊಂದು ರಾಜ್ಯವೂ ಅದರ ಪ್ರಯೋಜನ ಪಡೆಯುತ್ತದೆ.
ಸ್ನೇಹಿತರೇ,
ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಸೈಬರ್ ಅಪರಾಧ ಅಥವಾ ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ನಿಗ್ರಹಿಸಲು ನಾವು ತಂತ್ರಜ್ಞಾನದ ಜೊತೆಗೆ ಕೆಲಸ ಮಾಡುತ್ತಲೇ ಇರಬೇಕು. ನೀವು ನೋಡಿ, ಇದು 5 ಜಿಯ ಯುಗವಾಗಿದೆ. ಈಗ 5ಜಿ ಪ್ರಯೋಜನಗಳ ಜೊತೆಗೆ, ಆ ಮಟ್ಟದಲ್ಲಿ ಜಾಗೃತಿಯೂ ಅಗತ್ಯವಾಗಿರುತ್ತದೆ. ಮುಖ ಗುರುತಿಸುವಿಕೆ ತಂತ್ರಜ್ಞಾನ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ತಂತ್ರಜ್ಞಾನ, ಡ್ರೋನ್ ಗಳು ಮತ್ತು ಸಿಸಿಟಿವಿಯಂತಹ ಹಲವು ತಂತ್ರಜ್ಞಾನಗಳ ಕಾರ್ಯಕ್ಷಮತೆಯನ್ನು 5 ಜಿ ಸುಧಾರಿಸಲಿದೆ. ನಾವು ಎಷ್ಟು ವೇಗವಾಗಿ ಮುಂದೆ ಸಾಗುತ್ತಿದ್ದೇವೆಯೋ, ಅದೇ ರೀತಿ ಇಂದು ಅಪರಾಧವೂ, ಜಾಗತೀಕರಣವಾಗಿದೆ. ಅಪರಾಧ ಜಗತ್ತು ಸಮಾನವಾಗಿ ಮುಂದುವರಿಯುತ್ತಿದೆ. ಅವರು ತಂತ್ರಜ್ಞಾನದಲ್ಲಿ ಅಷ್ಟೇ ನಿಪುಣರಾಗುತ್ತಿದ್ದಾರೆ. ಹೀಗಾಗಿ ನಾವು ಅವರಿಗಿಂತ ಹತ್ತು ಹೆಜ್ಜೆ ಮುಂದೆ ಯೋಜಿಸಬೇಕು. ನಮ್ಮ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯನ್ನು ಸ್ಮಾರ್ಟ್ ಮಾಡಲು ನಾವು ಹೆಚ್ಚು ತುರ್ತಾಗಿ ಕೆಲಸ ಮಾಡಬೇಕಾಗುತ್ತದೆ.
ಸ್ನೇಹಿತರೇ,
ತಂತ್ರಜ್ಞಾನದ ಬಳಕೆಗೆ ಬಜೆಟ್ ತೊಡಕು ಬಾರದಂತೆ ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ. ಆದ್ದರಿಂದ, ನಾನು ಎಲ್ಲ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರನ್ನು ಈ ವಿಷಯದ ಬಗ್ಗೆ ಒಂದು ತಂಡವನ್ನು ರಚಿಸಿ, ವಿಶ್ವದಲ್ಲಿ ಅಪರಾಧ ಜಗತ್ತು ಹೇಗೆ ತಂತ್ರಜ್ಞಾನದೊಂದಿಗೆ ಹೇಗೆ ಬೆಳೆಯುತ್ತಿದೆ ಮತ್ತು ನಮ್ಮಲ್ಲಿ ಲಭ್ಯವಿರುವ ತಂತ್ರಜ್ಞಾನದಿಂದ ನಾವು ನಮ್ಮ ಜನರಿಗೆ ಹೇಗೆ ಭದ್ರತೆಯನ್ನು ಒದಗಿಸಬಹುದು ಎಂಬ ಬಗ್ಗೆ ಗಂಭೀರವಾಗಿ ಚರ್ಚಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಇದಕ್ಕೆ ತಗಲುವ ಬಜೆಟ್ ವೆಚ್ಚ ಹಲವು ಅನಗತ್ಯ ವೆಚ್ಚಗಳನ್ನು ಉಳಿಸಲು ಕಾರಣವಾಗುತ್ತದೆ. ತಂತ್ರಜ್ಞಾನದ ಉತ್ತಮ ಬಳಕೆಯು ಇಡೀ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದಷ್ಟೇ ಅಲ್ಲದೆ, ತಮ್ಮ ಭದ್ರತೆಯ ಬಗ್ಗೆ ಸಾಮಾನ್ಯ ನಾಗರಿಕರಲ್ಲಿ ನಂಬಿಕೆ ಮೂಡಲು ಕಾರಣವಾಗುತ್ತದೆ. ತಂತ್ರಜ್ಞಾನವು ಅಪರಾಧ ತಡೆಗಟ್ಟುವಿಕೆಗೆ ಮತ್ತು ಅಪರಾಧ ಪತ್ತೆಗೆ ಸಹಾಯ ಮಾಡುತ್ತದೆ. ಅಪರಾಧಗಳ ತನಿಖೆಯಲ್ಲಿ ಇದು ತುಂಬಾ ಉಪಯುಕ್ತವಾಗಿದೆ. ನೀವು ನೋಡಿ, ಸಿಸಿಟಿವಿಯಿಂದಾಗಿ ಇಂದು ಹಲವಾರು ಅಪರಾಧಿಗಳನ್ನು ಬಂಧಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ ನಗರಗಳಲ್ಲಿ ರಚಿಸಲಾದ ಆಧುನಿಕ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಗಳು ಸಹ ಸಾಕಷ್ಟು ಸಹಾಯ ಮಾಡುತ್ತಿವೆ.
ಸ್ನೇಹಿತರೇ,
ಕೇಂದ್ರ ಸರ್ಕಾರವು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಪೊಲೀಸ್ ತಂತ್ರಜ್ಞಾನ ಮಿಷನ್ ಅನ್ನು ಸಹ ಪ್ರಾರಂಭಿಸಿದೆ. ಹಲವಾರು ರಾಜ್ಯಗಳು ಸಹ ಈ ನಿಟ್ಟಿನಲ್ಲಿ ತಮ್ಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ವಿವಿಧ ಹಂತಗಳಲ್ಲಿನ ವಿಭಿನ್ನ ಪ್ರಯೋಗಗಳಿಂದಾಗಿ ತಂತ್ರಜ್ಞಾನವು ಅನಗತ್ಯವಾಗುತ್ತವೆ, ಆದ್ದರಿಂದ ನಮ್ಮ ಶಕ್ತಿಯೂ ವ್ಯರ್ಥವಾಗುತ್ತದೆ ಎಂಬುದನ್ನು ನಮ್ಮ ಅನುಭವವು ಹೇಳುತ್ತದೆ. ಅನೇಕ ವೇಳೆ ತನಿಖಾ ಸಾಮಗ್ರಿಯು ಸಂಬಂಧಪಟ್ಟ ರಾಜ್ಯದಲ್ಲಿ ಮಾತ್ರ ಉಳಿಯುತ್ತದೆ ಮತ್ತು ಅದನ್ನು ಹಂಚಿಕೊಳ್ಳಲಾಗುವುದಿಲ್ಲ. ಅಂತಹ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಒಂದು ಸಾಮಾನ್ಯ ವೇದಿಕೆಯ ಬಗ್ಗೆ ದೊಡ್ಡ ಮನಸ್ಸಿನಿಂದ ಯೋಚಿಸಬೇಕಾಗಿದೆ. ಉದಾಹರಣೆಗೆ, ಯಾರೋ ಒಬ್ಬರ ಬಳಿ ಉತ್ತಮವಾದ (ತಂತ್ರಜ್ಞಾನ) ಇದ್ದರೆ ಅವರು ಹೆಮ್ಮೆಪಡುತ್ತಾರೆ, ಮತ್ತು ಅದನ್ನು ಯಾರೊಂದಿಗೂ ಹಂಚಿಕೊಳ್ಳದಿರಲು ನಿರ್ಧರಿಸುತ್ತಾರೆ ಮತ್ತು ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುತ್ತಾರೆ. ಅವರು ಹೊಂದಿರುವ ತಂತ್ರಜ್ಞಾನ ಅತ್ಯುತ್ತಮವೇ ಇರಬಹುದು. ಆದರೆ, ಅದನ್ನು ಅವರಲ್ಲೇ ಇಟ್ಟುಕೊಟ್ಟಿದ್ದ ಕಾರಣ ಅದು ಯಾವುದೇ ಉಪಯೋಗಕ್ಕೆ ಬಾರದಂತಹ ಸಮಯವೂ ಬರುತ್ತದೆ. ಆದ್ದರಿಂದ, ತಂತ್ರಜ್ಞಾನವು ಭಾರತ ಕೇಂದ್ರಿತವಾಗಿರಬೇಕು. ನಮ್ಮ ಎಲ್ಲ ಉತ್ತಮ ರೂಢಿಗಳು ಮತ್ತು ಉತ್ತಮ ಆವಿಷ್ಕಾರಗಳು ಸಾಮಾನ್ಯ ಬಳಕೆಗಾಗಿ ಇರಬೇಕು.
ಸ್ನೇಹಿತರೇ,
ಇಂದು ವಿಧಿವಿಜ್ಞಾನದ ಪ್ರಾಮುಖ್ಯತೆ ಹೆಚ್ಚುತ್ತಿದೆ ಮತ್ತು ಇದು ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಕಾನೂನು ಸಮುದಾಯ, ನ್ಯಾಯಾಂಗ ಮತ್ತು ಆಸ್ಪತ್ರೆಗಳು ಸಹ ವಿಧಿವಿಜ್ಞಾನದ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಅಪರಾಧವನ್ನು ಬಯಲಿಗೆಳೆಯಲು, ಅಪರಾಧಿಗೆ ಶಿಕ್ಷೆ ಕೊಡಿಸಲು ವಿಧಿವಿಜ್ಞಾನದ ಸಂಯೋಜಿತ ಬಳಕೆಯು ಬಹಳ ಉಪಯುಕ್ತವಾಗಿದೆ. ವಿಧಿವಿಜ್ಞಾನವು ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿ ಉಳಿದರೆ ಸಾಲದು. ಗಾಂಧಿನಗರದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವು ದೇಶದ ಎಲ್ಲ ರಾಜ್ಯಗಳಿಗೆ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತಿದೆ. ಇದಲ್ಲದೆ, ವಿಶ್ವದ 60-70 ದೇಶಗಳು ಸಹ ಈ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಪ್ರಯೋಜನವನ್ನು ಪಡೆಯುತ್ತಿವೆ. ನಮ್ಮ ಎಲ್ಲ ರಾಜ್ಯಗಳು ಈ ವಿಶ್ವವಿದ್ಯಾಲಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಇದು ಸಂಪೂರ್ಣವಾಗಿ ಭವಿಷ್ಯದ ತಂತ್ರಜ್ಞಾನ ಚಾಲಿತ ವ್ಯವಸ್ಥೆಯಾಗಿದೆ. ಇದು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಹೊಸ ತಂತ್ರಜ್ಞಾನ ಸಾಧನಗಳನ್ನು ರಚಿಸುವುದನ್ನು ಒಳಗೊಂಡಿದೆ. ಇದರ ಪ್ರಯೋಗಾಲಯವು ತುಂಬಾ ಕಷ್ಟಕರವಾದ ಪ್ರಕರಣಗಳನ್ನು ಬೇಧಿಸಲು ಸಹ ಉಪಯುಕ್ತವಾಗುತ್ತಿದೆ. ಎಲ್ಲ ರಾಜ್ಯಗಳು ಈ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಬೇಕು ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ದಿನದ 24x7 ಕೆಲಸವಾಗಿದೆ. ಆದರೆ ನಾವು ಪ್ರಕ್ರಿಯೆಗಳನ್ನು ನಿರಂತರವಾಗಿ ಸುಧಾರಿಸುತ್ತಲೇ ಇರುವುದು ಮತ್ತು ಅವುಗಳನ್ನು ಆಧುನಿಕವಾಗಿಡುವುದು ಸಹ ಅಗತ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಸರ್ಕಾರವು ಕೈಗೊಂಡ ಕಾನೂನು ಮತ್ತು ಸುವ್ಯವಸ್ಥೆಯ ಸುಧಾರಣೆಗಳು ಇಡೀ ದೇಶದಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡಿವೆ. ನಿಮಗೆ ತಿಳಿದಿರುವಂತೆ, ಭಾರತದ ವೈವಿಧ್ಯ ಮತ್ತು ವಿಶಾಲತೆಯಿಂದಾಗಿ ನಮ್ಮ ಕಾನೂನು ಜಾರಿ ವ್ಯವಸ್ಥೆಯ ಮೇಲೆ ಭಾರಿ ಒತ್ತಡವಿದೆ. ಆದ್ದರಿಂದ, ನಮ್ಮ ವ್ಯವಸ್ಥೆಗಳು ಸರಿಯಾದ ನಿಟ್ಟಿನಲ್ಲಿ ತಮ್ಮ ಶಕ್ತಿ ವಿನಿಯೋಗಿಸುವುದು ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ, ಅನೇಕ ಅನಗತ್ಯ ಪ್ರಕರಣಗಳಲ್ಲಿನ ಸಣ್ಣ ತಪ್ಪುಗಳ ತನಿಖೆಯಲ್ಲೇ ಪೊಲೀಸ್ ಇಲಾಖೆಯ ಶಕ್ತಿ ವ್ಯರ್ಥವಾಗುವುದನ್ನು ನಾವು ನೋಡಿದ್ದೇವೆ. ಆದ್ದರಿಂದ, ನಾವು ಈಗ ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಿದ್ದೇವೆ ಮತ್ತು ಅವುಗಳನ್ನು ಅಪರಾಧದ ವರ್ಗದಿಂದ ತೆಗೆದುಹಾಕಲಾಗಿದೆ. 1,500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ದೊಡ್ಡ ಹೊರೆಯನ್ನು ಕಡಿಮೆ ಮಾಡಲಾಗಿದೆ. ರಾಜ್ಯಗಳು ಕೂಡ ತಮ್ಮ ಮಟ್ಟದಲ್ಲಿ ಕಾನೂನುಗಳನ್ನು ಮೌಲ್ಯಮಾಪನ ಮಾಡುವಂತೆ ನಾನು ಒತ್ತಾಯಿಸುತ್ತೇನೆ. ಪ್ರಸ್ತುತ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ಕಾನೂನುಗಳನ್ನು ಬದಲಿಸಿ. ಪ್ರತಿಯೊಂದು ಕಾನೂನಿನಲ್ಲಿದ್ದ ಅಪರಾಧದ ಅಂಶ ಮತ್ತು ಮುಗ್ಧ ನಾಗರಿಕರಿಗೆ ಆಗುತ್ತಿದ್ದ ತೊಂದರೆ ಈಗ ತಪ್ಪಿದೆ.
ಸ್ನೇಹಿತರೇ,
ಸ್ವಮಿತ್ವ ಯೋಜನೆಯಡಿ ದೇಶದ ಹಳ್ಳಿಗಳಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತ್ತಿನ ಕಾರ್ಡ್ ಗಳನ್ನು ವಿತರಿಸುವ ಸರ್ಕಾರದ ಉಪಕ್ರಮವು ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ತಗ್ಗಿಸಲು ಸಹಾಯ ಮಾಡುತ್ತಿದೆ. ಇಲ್ಲದಿದ್ದರೆ, ಯಾರಾದರೂ ತನ್ನ ನೆರೆಹೊರೆಯವರಿಂದ ಒಂದು ಅಡಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಂಡರೂ ಹಳ್ಳಿಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿದ್ದವು.
ಸ್ನೇಹಿತರೇ,
ಅಂತಹ ಅನೇಕ ಪ್ರಯತ್ನಗಳು, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ, ಕಾನೂನು ಜಾರಿ ಸಂಸ್ಥೆಗಳಿಗೆ ತಮ್ಮ ಆದ್ಯತೆಗಳನ್ನು ನಿಗದಿಪಡಿಸಲು ಸಹಾಯ ಮಾಡಿವೆ. ಆದರೆ ನಾವು ನಮ್ಮ ಕಾರ್ಯತಂತ್ರವನ್ನು ಬದಲಾಯಿಸದಿದ್ದರೆ ಮತ್ತು 20-30-50 ವರ್ಷಗಳಷ್ಟು ಹಳೆಯದಾದ ವಿಧಾನಗಳನ್ನು ಅನುಸರಿಸುವುದನ್ನು ಮುಂದುವರಿಸುತ್ತಿದ್ದರೆ ಈ ಪ್ರಯತ್ನಗಳು ಫಲ ನೀಡುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮಾಡಿದ ಕಾಯಿದೆಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಿವೆ. ಇಂದು ದೇಶದಲ್ಲಿ ಭಯೋತ್ಪಾದನೆ, ಹವಾಲಾ ಜಾಲ ಮತ್ತು ಭ್ರಷ್ಟಾಚಾರದ ವಿರುದ್ಧ ಅಭೂತಪೂರ್ವ ಕಠಿಣತೆ ಇದೆ. ಜನರಲ್ಲಿ ವಿಶ್ವಾಸ ಬೆಳೆಯುತ್ತಿದೆ. ಯುಎಪಿಎಯಂತಹ ಕಾನೂನುಗಳು ಭಯೋತ್ಪಾದನೆಯ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ವ್ಯವಸ್ಥೆಗಳಿಗೆ ಶಕ್ತಿಯನ್ನು ತುಂಬಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ಕಡೆ, ನಾವು ದೇಶದ ಕಾನೂನು ಜಾರಿ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ, ಮತ್ತು ಮತ್ತೊಂದೆಡೆ, ನಾವು ಅವರ ಮೇಲಿನ ಅನಗತ್ಯ ಹೊರೆಗಳನ್ನು ಸಹ ತೆಗೆದುಹಾಕುತ್ತಿದ್ದೇವೆ.
ಸ್ನೇಹಿತರೇ,
ನಮ್ಮ ದೇಶದ ಪೊಲೀಸರಿಗೆ ಮತ್ತೊಂದು ಪ್ರಮುಖ ವಿಷಯವಿದೆ. ಇಂದು ಒಂದು ರಾಷ್ಟ್ರ, ಒಂದು ಪಡಿತರ ಚೀಟಿ, ಒಂದು ರಾಷ್ಟ್ರ-ಒಂದು ಮೊಬಿಲಿಟಿ ಕಾರ್ಡ್, ಒಂದು ರಾಷ್ಟ್ರ-ಒಂದು ಗ್ರಿಡ್, ಒಂದು ರಾಷ್ಟ್ರ-ಒಂದು ಸಂಕೇತ ಭಾಷೆ ಇತ್ಯಾದಿಗಳ ವ್ಯವಸ್ಥೆ ಇದೆ. ಅದೇ ರೀತಿ ಪೊಲೀಸರ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಅಂತಹ ವಿಧಾನವನ್ನು ಅಭಿವೃದ್ಧಿಪಡಿಸಬಹುದೇ? ನಮ್ಮ ರಾಜ್ಯಗಳು ಒಟ್ಟಾಗಿ ಕುಳಿತು ಅದರ ಬಗ್ಗೆ ಚರ್ಚಿಸಬಹುದೇ? ಅನೇಕ ಪ್ರಯೋಜನಗಳು ಇರುತ್ತವೆ. ಒಂದು, ಅದು ಬೃಹತ್ ಪ್ರಮಾಣದಲ್ಲಿರುವ ಕಾರಣ ಗುಣಮಟ್ಟದ ಉತ್ಪನ್ನಗಳು ಇರುತ್ತವೆ. ಕೋಟ್ಯಂತರ ಟೋಪಿಗಳು ಬೇಕಾಗುತ್ತವೆ. ಕೋಟ್ಯಂತರ ಬೆಲ್ಟ್ ಗಳು ಬೇಕಾಗುತ್ತವೆ. ಮತ್ತು ದೇಶದ ಯಾವುದೇ ನಾಗರಿಕನಿಗೆ ಅವನು ಎಲ್ಲೇ ಹೋದರೂ, ಒಬ್ಬ ಪೊಲೀಸರನ್ನು ಗುರುತಿಸುವುದು ಸುಲಭವಾಗುತ್ತದೆ. ಉದಾಹರಣೆಗೆ, ಅಂಚೆ ಪೆಟ್ಟಿಗೆ ಇದೆ. ನೀವು ಆ ಪೆಟ್ಟಿಗೆಯಲ್ಲಿ ಒಂದು ಪತ್ರವನ್ನು ಹಾಕಿದರೆ ಅದು ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ ಎಂದು ಭಾರತದ ಅಕ್ಷರಸ್ಥರು ಮತ್ತು ಅನಕ್ಷರಸ್ಥ ಜನರಿಗೆ ತಿಳಿದಿದೆ. ಅದಕ್ಕೆ ತನ್ನದೇ ಆದ ಗುರುತಿದೆ. ಪೊಲೀಸ್ ಸಮವಸ್ತ್ರಗಳಿಗೆ ಸಂಬಂಧಿಸಿದಂತೆ ನಾವು ಗಂಭೀರವಾಗಿ ಯೋಚಿಸುವುದು ನಮಗೆ ಅಗತ್ಯವಾಗಿದೆ. ಅದನ್ನು ಹೇರುವ ಅಗತ್ಯವಿಲ್ಲ, ಆದರೆ ಅದನ್ನು ವಿಕಸನಗೊಳಿಸಬಹುದು. ಇದು ತುಂಬಾ ಪ್ರಯೋಜನಕಾರಿ ಮತ್ತು ಪರಸ್ಪರರ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ರಾಷ್ಟ್ರ-ಒಂದು ಪೊಲೀಸ್ ಸಮವಸ್ತ್ರಕ್ಕೆ ಸಂಬಂಧಿಸಿದ್ದಾಗಿದಿ, ರಾಜ್ಯದ ವಿಭಿನ್ನ ಟ್ಯಾಗ್ ಗಳು ಮತ್ತು ಸಂಖ್ಯೆಗಳು ಇರಬಹುದು, ಆದರೆ ಒಂದು ಸಾಮಾನ್ಯ ಗುರುತು ಇರಬೇಕು. ಇದು ನನ್ನ ಆಲೋಚನೆ ಮತ್ತು ನೀವು ಅದರ ಬಗ್ಗೆ ಯೋಚಿಸಬೇಕು. ಇದು ಸರಿ ಎನಿಸಿದರೆ ಚರ್ಚಿಸಿ, ಅದನ್ನು 5-50-100 ವರ್ಷಗಳ ನಂತರ ಪರಿಗಣಿಸಬಹುದು. ಅಂತೆಯೇ, ಪರಿಣತಿಗಾಗಿ ವಿವಿಧ ರೀತಿಯ ಪೊಲೀಸ್ ಇಲಾಖೆಗಳನ್ನು ಪ್ರಾರಂಭಿಸಲಾಗಿದೆ.
ಈಗ, ಪ್ರವಾಸೋದ್ಯಮವು ವಿಶ್ವದಲ್ಲಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಭಾರತದಲ್ಲಿ ಹಲವಾರು ಪ್ರವಾಸೋದ್ಯಮ ಅವಕಾಶಗಳು ಹೆಚ್ಚುತ್ತಿವೆ. ವಿಶ್ವದಾದ್ಯಂತದಿಂದ ಭಾರತಕ್ಕೆ ಪ್ರವಾಸಿಗರ ಹರಿವು ಹೆಚ್ಚಾಗಲಿದೆ. ವಿಶ್ವದ ಹಲವಾರು ದೇಶಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳ ಮುಂದಿವೆ. ಆ ದೇಶಗಳಲ್ಲಿ ಪ್ರವಾಸೋದ್ಯಮಕ್ಕಾಗಿ ವಿಶೇಷ ಪೊಲೀಸ್ ಪಡೆ ಇದೆ. ಆ ಪಡೆಗೆ ಸಂಪೂರ್ಣ ವಿಭಿನ್ನ ತರಬೇತಿ ಇದೆ. ಅವರಿಗೆ ವಿವಿಧ ಭಾಷೆಗಳನ್ನು ಸಹ ಕಲಿಸಲಾಗುತ್ತದೆ. ಅವರ ವರ್ತನೆಯೂ ತುಂಬಾ ಭಿನ್ನವಾಗಿರುತ್ತದೆ. ಆ ದೇಶಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೂ ಈ ಪೊಲೀಸ್ ಪಡೆ ಅವರ ಸಹಾಯಕ್ಕಾಗಿ ಇದೆ ಎಂದು ಭಾವಿಸುತ್ತಾರೆ. ಶೀಘ್ರ ಅಥವಾ ನಂತರ, ನಾವು ನಮ್ಮ ದೇಶದಲ್ಲಿ ಈ ಪಡೆಯನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಬೇರೆ ದೇಶದಿಂದ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ವಿದೇಶಿ ಹೂಡಿಕೆದಾರರ ನಡುವೆ ಭಾರಿ ವ್ಯತ್ಯಾಸವಿದೆ. ವಿದೇಶಿ ಪ್ರವಾಸಿಗರು ತಕ್ಷಣವೇ ನಿಮ್ಮ ದೇಶದ ರಾಯಭಾರಿಯಾಗಬಹುದು. ಅವರು ದೇಶದ ಒಳ್ಳೆಯ ಮತ್ತು ಕೆಟ್ಟ ಅನಿಸಿಕೆಗಳನ್ನು ತಮ್ಮ ತವರಿಗೆ ಒಯ್ಯುತ್ತಾರೆ. ಹೂಡಿಕೆದಾರರು ಒಳ್ಳೆಯದು ಅಥವಾ ಕೆಟ್ಟದ್ದನ್ನು ಗುರುತಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಒಬ್ಬ ಪ್ರವಾಸಿಗನು ಇಲ್ಲಿಯ ಸ್ಥಿತಿ ಹೀಗಿದೆ ಎಂಬ ಸುದ್ದಿಯನ್ನು ಪಸರಿಸಲು ಕೇವಲ ಎರಡು ದಿನಗಳನ್ನು ತೆಗೆದುಕೊಳ್ಳುತ್ತಾನೆ. ಭಾರತದಲ್ಲೂ ಸಹ, ಮಧ್ಯಮ ವರ್ಗದ ಜನರ ಹೆಚ್ಚಳದೊಂದಿಗೆ ಪ್ರವಾಸೋದ್ಯಮವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಪ್ರವಾಸೋದ್ಯಮವು ಸಂಚಾರದ ರೂಪದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ನಾವು ಮುಂಚಿತವಾಗಿ ಯೋಜಿಸದಿದ್ದರೆ, ಪ್ರವಾಸಿ ಕೇಂದ್ರಗಳು ಸ್ವತಃ ಬದಲಾಗುವುದಿಲ್ಲ. ಶಿಮ್ಲಾಕ್ಕೆ ಭೇಟಿ ನೀಡದಂತೆ ಮತ್ತು ಇತರ ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡದಂತೆ ನಾವು ಯಾರಿಗಾದರೂ ಸಲಹೆ ನೀಡಿದರೆ, ಅವರು ಹಾಗೆ ಮಾಡುತ್ತಾರೆಯೇ? ಶಿಮ್ಲಾಗೆ ಭೇಟಿ ನೀಡಲು ಬಯಸುವವರು, ಶಿಮ್ಲಾಗೆ ಹೋಗುತ್ತಾರೆ. ನೈನಿತಾಲ್, ಶ್ರೀನಗರ, ಗುಲ್ಮಾರ್ಗ್ ಇತ್ಯಾದಿಗಳಿಗೆ ಭೇಟಿ ನೀಡಲು ಬಯಸುವವರ ವಿಷಯದಲ್ಲೂ ಇದೇ ಆಗುತ್ತದೆ. ನಾವು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಸ್ನೇಹಿತರೇ,
ಕರೋನಾ ಅವಧಿಯಲ್ಲಿ, ಪೊಲೀಸ್ ಸಿಬ್ಬಂದಿ ತಮ್ಮ ಪ್ರದೇಶಗಳ ಜನರ ಯೋಗಕ್ಷೇಮದ ಬಗ್ಗೆ ಫೋನ್ ಮಾಡಿ ವಿಚಾರಿಸುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಮುಖ್ಯವಾಗಿ, ಹಲವಾರು ನಗರಗಳಲ್ಲಿನ ಅನೇಕ ಹಿರಿಯ ಪೊಲೀಸ್ ಸಿಬ್ಬಂದಿ ಹಿರಿಯ ನಾಗರಿಕರನ್ನು ಸ್ವಇಚ್ಛೆಯಿಂದ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡರು. ಪೊಲೀಸ್ ಸಿಬ್ಬಂದಿ ಹಿರಿಯ ನಾಗರಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾಗ ಅವರ ಯೋಗಕ್ಷೇಮದ ಬಗ್ಗೆ ಕೇಳಿದಾಗ ಅಥವಾ ಅವರು ತಮ್ಮ ಮನೆಗಳಿಗೆ ಬೀಗ ಹಾಕಿ ಹೊರಗೆ ಹೋಗಲು ಯೋಜಿಸಿದ್ದಾರೆಯೇ ಎಂದು ಕೇಳಿದಾಗ ನಾಗರಿಕರ ವಿಶ್ವಾಸವು ಹೆಚ್ಚಾಯಿತು. ಅಂತಹ ಸಂವಹನಗಳು ನಿಮಗೆ ದೊಡ್ಡ ಶಕ್ತಿಯಾಗುತ್ತವೆ. ನಾವು ಅಂತಹ ಸಂವಹನಗಳನ್ನು ವೃತ್ತಿಪರ ರೀತಿಯಲ್ಲಿ ಹೆಚ್ಚು ಬಳಸಿದರೆ ಅದು ಸಾಕಷ್ಟು ಒಳಿತನ್ನು ಮಾಡುತ್ತದೆ. ಸಾಮಾಜಿಕ ಜೀವನದಲ್ಲಿ ಪೊಲೀಸ್ ಠಾಣೆಯಿಂದ ಹಿರಿಯ ನಾಗರಿಕರಿಕರೊಬ್ಬರಿಗೆ ವಾರಕ್ಕೊಮ್ಮೆ ಒಂದು ಫೋನ್ ಕರೆ ಮಾಡಿದರೂ, ಅವರು ತಿಂಗಳು ಪೂರ್ತಿ ಪೊಲೀಸರ ಉತ್ತಮ ಕಾರ್ಯದ ಬಗ್ಗೆ ಪ್ರಚಾರ ಮಾಡುತ್ತಾರೆ. ನೀವು ಮಾತ್ರ ಜನರಲ್ಲಿ ಅಂತಹ ಅಭಿಪ್ರಾಯವನ್ನು ಸೃಷ್ಟಿಸಬಹುದು. ನಾವು ಬಹಳ ಜಾಗರೂಕರಾಗಿರಬೇಕಾದ ಮತ್ತೊಂದು ಸಮಸ್ಯೆಯಿದೆ. ಅದು ತಾಂತ್ರಿಕ ಬುದ್ಧಿಮತ್ತೆಯ ಬಳಕೆಯಾಗಿದೆ. ಅದು ತನ್ನದೇ ಆದ ಅನುಕೂಲಗಳನ್ನು ಹೊಂದಿದೆ. ಆದರೆ ಅದೇ ವೇಳೆ, ನಾವು ಮಾನವ ಬುದ್ಧಿಮತ್ತೆಯಿಂದ ದೂರ ಸರಿಯಲು ಸಾಧ್ಯವಿಲ್ಲ. ಇದು 100 ವರ್ಷಗಳಿಂದ ರೂಢಿಯಲ್ಲಿದೆ ಮತ್ತು ತಂತ್ರಜ್ಞಾನದಲ್ಲಿನ ಹಲವು ಆವಿಷ್ಕಾರಗಳ ಹೊರತಾಗಿಯೂ ಮುಂದಿನ 100 ವರ್ಷಗಳಾದರೂ ಪೊಲೀಸ್ ಸಿಬ್ಬಂದಿಗೆ ಇದು ಉಪಯುಕ್ತವಾಗಲಿದೆ. ನಿಮಗೆ ಸಾಧ್ಯವಾದಷ್ಟು ಮಾನವ ಬುದ್ಧಿಮತ್ತೆಯನ್ನು ಬಲಪಡಿಸಿ. ಇದು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಒಬ್ಬ ಅಪರಾಧಿಯ ಕಣ್ಣುಗಳನ್ನು ನೋಡುವ ಮೂಲಕ ಮತ್ತು ಅವನೊಂದಿಗೆ ಮಾತನಾಡುವ ಮೂಲಕ ಸತ್ಯವನ್ನು ಬಿಚ್ಚಿಡಬಲ್ಲ ಸಾಮರ್ಥ್ಯ ಒಬ್ಬ ಪೋಲೀಸನ ದೊಡ್ಡ ಶಕ್ತಿಯಾಗಿದೆ. ಮಾನವ ಬುದ್ಧಿಮತ್ತೆ ಮತ್ತು ತಾಂತ್ರಿಕ ಬುದ್ಧಿವಂತಿಕೆಯ ಸಂಯೋಜನೆಯು ನಿಮಗೆ ಜೀವನವನ್ನು ಸುಗಮಗೊಳಿಸುತ್ತದೆ. ಜನರ ಕೆಲವು ಅನಗತ್ಯ ಚಲನವಲನಗಳ ಬಗ್ಗೆ ನಿಮಗೆ ಶಂಕೆ ಮೂಡಿದರೆ, ನೀವು ತಕ್ಷಣವೇ ತಿಳಿದುಕೊಳ್ಳುತ್ತೀರಿ. ಆಗ ನೀವು ಈ ಎರಡು ವ್ಯವಸ್ಥೆಗಳ ಗರಿಷ್ಠ ಬಳಕೆಯಿಂದ ಒಂದು ಸ್ಮಾರ್ಟ್ ಬದಲಾವಣೆಯನ್ನು ತರಬಹುದು ಮತ್ತು ಅಪರಾಧವನ್ನು ಮಾಡುವ ಮೊದಲು ಅಪರಾಧಿಯನ್ನು 50 ಬಾರಿ ಯೋಚಿಸುವಂತೆ ಮಾಡಬಹುದು ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ನಾವು ಮತ್ತೊಂದು ವಾಸ್ತವದ ಬಗ್ಗೆ ಜಾಗೃತರಾಗಿರಬೇಕು. ಜಾಗತಿಕ ಮಟ್ಟದಲ್ಲಿ ಭಾರತವು ತ್ವರಿತ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುವಂತೆಯೇ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆರಂಭದಲ್ಲಿ, ಅವುಗಳನ್ನು ಉಪೇಕ್ಷಿಸಲಾಗುತ್ತದೆ ನಂತರ ಗೇಲಿ ಮಾಡುವ ಪ್ರಯತ್ನಗಳು ನಡೆಯುತ್ತವೆ, ಆದರೆ ನೀವು ಮುಂದುವರಿಯುವುದನ್ನು ಮುಂದುವರಿಸಬೇಕು. ನೀವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸ್ಪರ್ಧೆಯು ಆಗಾಗ್ಗೆ ವೈರತ್ವಕ್ಕೆ ಕಾರಣವಾಗುತ್ತದೆ. ಭಾರತವು ತಮಗಿಂತ ಹೆಚ್ಚು ಯಶಸ್ವಿಯಾಗುವುದನ್ನು ಬಯಸದ ಅನೇಕ ಶಕ್ತಿಗಳು ಜಗತ್ತಿನಲ್ಲಿ ಇರುತ್ತವೆ. ಅವು ತಾವು ಪರಿಣತಿಯನ್ನು ಹೊಂದಿರುವ ಕ್ಷೇತ್ರದಲ್ಲಿ ಭಾರತವು ಬರುವುದನ್ನು ಸಹಿಸುವುದಿಲ್ಲ. ಅವರು ಉತ್ಪನ್ನದ ಮೇಲೆ ಏಕಸ್ವಾಮ್ಯವನ್ನು ಹೊಂದಿದ್ದರೆ, ಭಾರತವು ಅದರ ಉತ್ಪಾದನೆಯನ್ನು ಮಾಡಿದರೆ ಭಾರತವು ತಮ್ಮ ಮಾರುಕಟ್ಟೆಗಳನ್ನು ಕಸಿದುಕೊಳ್ಳುತ್ತದೆ ಎಂದು ಅವರು ಹೆದರುತ್ತಾರೆ. ಭಾರತವು ಬೃಹತ್ ಮಾರುಕಟ್ಟೆಯಾಗಿದೆ, ಭಾರತವು ಉತ್ಪನ್ನವನ್ನು ಸ್ವಯಂ ಉತ್ಪಾದಿಸಲು ಪ್ರಾರಂಭಿಸಿದರೆ ತಮ್ಮ ಉತ್ಪನ್ನವನ್ನು ಎಲ್ಲಿ ಮಾರಾಟ ಮಾಡುವುದು ಎಂದು ಚಿಂತಿಸುತ್ತಾರೆ. ಆದ್ದರಿಂದ, ನಾವು ಅನೇಕ ರೂಪಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದೇವೆ ಮತ್ತು ಅಂತಹ ಸವಾಲುಗಳು ಆಗಾಗ್ಗೆ ಶತ್ರುತ್ವಕ್ಕೂ ಕಾರಣವಾಗುತ್ತವೆ. ಆದ್ದರಿಂದ, ನಾವು ಅಂತಹ ಸವಾಲುಗಳ ಬಗ್ಗೆ ಜಾಗೃತರಾಗಿರಬೇಕು. ಅದೇ ವೇಳೆ, ನಾವು ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಬೇಕಾಗಿಲ್ಲ. ಇದು ಮಾನವನ ಸ್ವಭಾವ. ಉದಾಹರಣೆಗೆ, ನಿಮ್ಮ ಇಲಾಖೆಯ ಇಬ್ಬರು ಅಧಿಕಾರಿಗಳಲ್ಲಿ ಒಬ್ಬರಿಗೆ ಮುಂಬಡ್ತಿ ನೀಡಬೇಕಾದಲ್ಲಿ ಅಶಾಂತಿಯ ಭಾವನೆಯೂ ಇರುತ್ತದೆ. ಇದರ ಪರಿಣಾಮವಾಗಿ, ಇಬ್ಬರು ಅಧಿಕಾರಿಗಳ ನಡುವೆ ಪದೋನ್ನತಿಗಾಗಿ ಮುಸುಕಿನ ಗುದ್ದಾಟ ಪೈಪೋಟಿ 10 ವರ್ಷಗಳ ಮೊದಲೇ ಪ್ರಾರಂಭವಾಗುತ್ತದೆ. ಸಹೋದರರೇ, ಇದು ಎಲ್ಲೆಡೆಯೂ ಇರುತ್ತದೆ. ಆದ್ದರಿಂದ, ನಮ್ಮ ಸಾಮರ್ಥ್ಯವನ್ನು ರಕ್ಷಿಸುವಾಗ ನಾವು ನಮ್ಮ ದೃಷ್ಟಿಕೋನದಲ್ಲಿ ದೂರದೃಷ್ಟಿಯನ್ನು ಹೊಂದಿರಬೇಕು ಎಂದು ನಾನು ಪುನರುಚ್ಚರಿಸುತ್ತೇನೆ. ಈ ಹಿಂದೆ ಇದ್ದ ಮತ್ತು ಈಗ ಇರುವ ಕಾನೂನು ಸುವ್ಯವಸ್ಥೆಯ ಸವಾಲುಗಳಲ್ಲಿ ಭಾರಿ ವ್ಯತ್ಯಾಸವಿದೆ. ನಾವು ಹಳೆಯ ಸವಾಲುಗಳನ್ನು ಎದುರಿಸಬೇಕಾಗಿರುವುದು ಮಾತ್ರವಲ್ಲದೆ, ಹೊಸ ಸವಾಲುಗಳಿಗೆ ನಮ್ಮನ್ನು ನಾವು ಅಣಿಗೊಳಿಸಿಕೊಳ್ಳಬೇಕು. ದೇಶದ ವಿರುದ್ಧವಾಗಿರುವ ಇಂತಹ ವಿರೋಧಿ ಶಕ್ತಿಗಳ ಹೊರಹೊಮ್ಮುವಿಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಮತ್ತು ಕಾನೂನನ್ನು ಪಾಲಿಸುವ ಜನರ ಭದ್ರತೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಯಾವುದೇ ಔದಾರ್ಯವನ್ನು ಸಹಿಸಲು ಸಾಧ್ಯವಿಲ್ಲ, ಇಲ್ಲದಿದ್ದರೆ, ನಮ್ಮ ಕಾನೂನನ್ನು ಪಾಲಿಸುವ ನಾಗರಿಕರು ಎಲ್ಲಿಗೆ ಹೋಗುತ್ತಾರೆ? ಅವರು ದೇಶದ ಶೇ.99ರಷ್ಟು ನಾಗರಿಕರು ಮತ್ತು ಸಮಸ್ಯೆ ಒಂದು ಪ್ರತಿಶತದಷ್ಟಿದೆ. ಜನಸಂಖ್ಯೆಯ 99 ಪ್ರತಿಶತದಷ್ಟು ಜನರಲ್ಲಿ ವಿಶ್ವಾಸವನ್ನು ಮೂಡಿಸಲು ನಾವು ಶೇಕಡಾ 1 ರಷ್ಟು ಜನರ ಬಗ್ಗೆ ದಯೆ ತೋರಿಸುವ ಅಗತ್ಯವಿಲ್ಲ.
ಸ್ನೇಹಿತರೇ,
ನಾವು ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬಾರದು. ಸಣ್ಣ ಸುಳ್ಳು ಸುದ್ದಿಗಳು ಸಹ ದೇಶಾದ್ಯಂತ ಕೋಲಾಹಲವನ್ನು ಸೃಷ್ಟಿಸಬಹುದು. ಮೀಸಲಾತಿಯ ವಿರುದ್ಧ ಹಬ್ಬಿದ ವದಂತಿಗಳಿಂದಾಗಿ ದೇಶಕ್ಕೆ ಉಂಟಾದ ಹಾನಿಯ ಬಗ್ಗೆ ನಮಗೆ ತಿಳಿದಿದೆ. ಇದು ಸುಳ್ಳು ಸುದ್ದಿ ಎಂದು ಜನರು ಅರಿತುಕೊಂಡಾಗ ಮತ್ತು 6-8 ಗಂಟೆಗಳ ನಂತರ ಶಾಂತವಾಯಿತು, ಆಷ್ಟೊತ್ತಿಗಾಗಲೇ ಸಾಕಷ್ಟು ಹಾನಿ ಸಂಭವಿಸಿತ್ತು. ಆದ್ದರಿಂದ, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರು ಸ್ವೀಕರಿಸುವ ಯಾವುದೇ ವಿಷಯವನ್ನು ಫಾರ್ವರ್ಡ್ ಮಾಡುವ ಮೊದಲು ಅವರು ಹತ್ತು ಬಾರಿ ಯೋಚಿಸಬೇಕು ಎಂದು ನಾವು ಜನರಿಗೆ ಶಿಕ್ಷಣ ನೀಡಬೇಕಾಗಿದೆ. ಅವರಿಗೆ ಫಾರ್ವರ್ಡ್ ಮಾಡಿದ ಯಾವುದೇ ಸುದ್ದಿಯ ಸತ್ಯಾಸತ್ಯತೆಯನ್ನು ಒಬ್ಬರು ಪರಿಶೀಲಿಸಬೇಕು ಮತ್ತು ಎಲ್ಲಾ ವೇದಿಕೆಗಳಲ್ಲಿ ಪರಿಶೀಲನೆಯ ವ್ಯವಸ್ಥೆ ಲಭ್ಯವಿದೆ. ನೀವು ಒಂದು-ಎರಡು-ಹತ್ತು ವೇದಿಕೆಗಳಿಗೆ ಭೇಟಿ ನೀಡಿದರೆ, ನೀವು ನಿಜವಾದ ಸುದ್ದಿಗಳನ್ನು ಪಡೆಯುತ್ತೀರಿ. ಸುಳ್ಳು ಸುದ್ದಿಗಳ ವಿರುದ್ಧ ನಾವು ಜನರಿಗೆ ಶಿಕ್ಷಣ ನೀಡಬೇಕಾಗಿದೆ. ನಕಲಿ ಜಗತ್ತಿನಿಂದ ಚಾಲಿತವಾದ ಸುದ್ದಿಯಿಂದ ಭಯಭೀತ ಸಮಾಜ ಸೃಷ್ಟಿಯಾಗುತ್ತದೆ ಇದರ ಮಧ್ಯೆ ನಾವು ದೊಡ್ಡ ಶಕ್ತಿಯನ್ನು ಸೃಷ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ತಂತ್ರಜ್ಞಾನದ ಶಕ್ತಿಯನ್ನು ತರಬೇಕಾಗಿದೆ.
ಸ್ನೇಹಿತರೇ,
ಅಮಿತ್ ಭಾಯ್ ಪೌರ ರಕ್ಷಣೆಯ ಮಹತ್ವದ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸಿರುವ ಹಲವಾರು ವಿಷಯಗಳಿವೆ. ಅಮಿತ್ ಭಾಯ್ ಸರಿಯಾದ ವಿಷಯವನ್ನು ಗಮನಿಸಿದ್ದಾರೆ. ಪೌರ ರಕ್ಷಣೆಯು ಹಲವಾರು ದಶಕಗಳಿಂದ ನಡೆಯುತ್ತಿದೆ ಮತ್ತು ಅದು ಅಪಾರ ಉಪಯುಕ್ತತೆಯನ್ನು ಹೊಂದಿದೆ. ನಮ್ಮ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪೌರ ರಕ್ಷಣೆಯ ಬಗ್ಗೆ ನಮಗೆ ಕಲಿಸಲಾಗುತ್ತದೆ. ನಾವು ಈ ಹಿಂದೆಯೂ ಸಹ ಅಗ್ನಿಶಾಮಕದಳಕ್ಕೆ ವ್ಯವಸ್ಥೆ ಮಾಡುತ್ತಿದ್ದೆವು. ಅದು ನಮ್ಮ ಸ್ವಭಾವದ ಭಾಗವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಪ್ರತಿ ವಾರ ಪ್ರತಿ ಪುರಸಭೆಯ ಶಾಲೆಯಲ್ಲಿ ಅಗ್ನಿಶಾಮಕ ವ್ಯಾಯಾಮ (ಡ್ರಿಲ್) ಗಳನ್ನು ಆಯೋಜಿಸಬೇಕು ಎಂದು ನಾನು ಆಗಾಗ್ಗೆ ಹೇಳುತ್ತೇನೆ. ಇದರಿಂದ ವಿದ್ಯಾರ್ಥಿಗಳು ಕಲಿಯುವುದು ಮಾತ್ರವಲ್ಲದೆ, ಅಗ್ನಿಶಾಮಕ ದಳದ ಅಧಿಕಾರಿಗಳಿಗೂ ಸಹ ಇಂತಹ ವ್ಯಾಯಾಮಗಳಿಂದ ಅಗ್ನಿ ಶಮನದ ತರಬೇತಿ ಆಗುತ್ತದೆ. ಇದನ್ನು ಎಲ್ಲ ವಾರ ವಾರವೂ ಒಂದು ಶಾಲೆಯಿಂದ ಮತ್ತೊಂದು ಶಾಲೆಯಲ್ಲಿ ಮಾಡಬೇಕು. 1೦ ವರ್ಷಗಳ ನಂತರ ನಗರದ ಶಾಲೆಯಲ್ಲಿ ಇಂತಹ ವ್ಯಾಯಾಮಗಳಿಗೆ ಅವಕಾಶ ಬರಬಹುದು. ಆದರೆ ಪ್ರತಿ ಪೀಳಿಗೆಯು ನಾಗರಿಕ ರಕ್ಷಣೆ ಮತ್ತು ಅಗ್ನಿಶಾಮಕ ಕೌಶಲ್ಯಗಳ ಉಪಯುಕ್ತತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದು ನಿಮಗೆ ದೊಡ್ಡ ಉತ್ತೇಜನವೂ ಆಗಿರುತ್ತದೆ. ಇದು ಸುಲಭವಾಗಿ ಮಾಡಬಹುದಾದ ಕೆಲಸವಾಗಿದೆ.
ಸ್ನೇಹಿತರೇ,
ಕಳೆದ ಕೆಲವು ವರ್ಷಗಳಲ್ಲಿ, ಎಲ್ಲ ಸರ್ಕಾರಗಳು ಅದರ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಜವಾಬ್ದಾರಿಯೊಂದಿಗೆ ಭಯೋತ್ಪಾದನೆಯ ನೆಲೆ, ಜಾಲವನ್ನು ನಾಶಪಡಿಸುವಲ್ಲಿ ಏನನ್ನಾದರೂ ಮಾಡಲು ಪ್ರಯತ್ನಿಸಿವೆ. ಎಲ್ಲೋ ಒಂದು ಕಡೆ ಈ ಯಶಸ್ಸನ್ನು ಸಾಧಿಸಿರಬಹುದು, ಎಲ್ಲೋ ಒಂದು ಕಡೆ ತಡವಾಗಿರಬಹುದು, ಆದರೆ ಇಂದು ಅದರ ಗಂಭೀರತೆಯನ್ನು ಎಲ್ಲರಿಗೂ ವಿವರಿಸಬೇಕಾದ ಅಗತ್ಯವಿಲ್ಲ. ಈಗ ನಾವು ಶಕ್ತಿಯನ್ನು ಒಗ್ಗೂಡಿಸುವ ಮೂಲಕ ಅದನ್ನು ನಿಭಾಯಿಸಬೇಕಾಗಿದೆ. ಅಂತೆಯೇ, ನಾವು ನಕ್ಸಲ್ ವಾದವನ್ನು ಅದರ ಪ್ರತಿಯೊಂದು ಸ್ವರೂಪವನ್ನು ಮಣಿಸಬೇಕು. ನಕ್ಸಲವಾದ ಬಂದೂಕು ಹಿಡಿದಿರುವುದಾಗಿರಲಿ ಅಥವಾ ಲೇಖನಿ ಹಿಡಿದಿರುವುದೇ ಆಗಿರಲಿ. ಈ ಸಮಸ್ಯೆಗೆ ನಾವು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ. ನಮ್ಮ ಯುವ ಪೀಳಿಗೆಯನ್ನು ಗೊಂದಲಕ್ಕೀಡು ಮಾಡಲು ಜನರು ಇಂತಹ ಅಪ್ರಬುದ್ಧ ಸಮಸ್ಯೆಗಳನ್ನು ಆಶ್ರಯಿಸುತ್ತಿದ್ದಾರೆ ಮತ್ತು ದೇಶವು ಸಾಕಷ್ಟು ನಷ್ಟ ಅನುಭವಿಸಬೇಕಾಗಿದೆ. ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅದನ್ನು ನಿರ್ವಹಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ನಾವು ನಕ್ಸಲ್ ಪೀಡಿತ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡಿರುವುದರಿಂದ, ಅವರು (ನಕ್ಸಲೀಯರು) ಈಗ ತಮ್ಮ ಬೌದ್ಧಿಕ ವಲಯವನ್ನು ಮುಂದಿನ ಪೀಳಿಗೆಯನ್ನು ಗುರಿಯಾಗಿಸಿ ವಿಕೃತ ಮನಸ್ಥಿತಿಯನ್ನು ಸೃಷ್ಟಿಸುವ ಸ್ಥಳಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಜನರಲ್ಲಿ ದ್ವೇಷವನ್ನು ಸೃಷ್ಟಿಸುತ್ತಾರೆ. ಅವರು ಭಾವನಾತ್ಮಕ ವಿಷಯಗಳನ್ನು ಅನುಪಾತದಿಂದ ಮೇಲೆತ್ತುವ ಮೂಲಕ ಸಮಾಜದಲ್ಲಿ ಕಂದಕವನ್ನು ಸೃಷ್ಟಿಸುತ್ತಾರೆ ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ನಾಶಪಡಿಸಬಹುದು. ಸರ್ದಾರ್ ವಲ್ಲಭಭಾಯಿ ಪಟೇಲರು ನಮಗೆ ಸ್ಫೂರ್ತಿಯಾಗಿರುವಾಗ, ಅಂತಹ ಶಕ್ತಿಗಳು ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ. ಆದರೆ ಅದನ್ನು ಬುದ್ಧಿವಂತಿಕೆಯಿಂದ ಮತ್ತು ಚಾಕಚಕ್ಯತೆಯಿಂದ ಮಾಡಬೇಕು. ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ನಾವು ಪರಿಣತಿಯನ್ನು ಸೃಷ್ಟಿಸಬೇಕಾಗಿದೆ. ಯಾವುದೇ ರಾಜ್ಯದಲ್ಲಿ ಅಂತಹ ಯಾವುದೇ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ, ನಮ್ಮ ಉನ್ನತ ತಜ್ಞರನ್ನು ಸ್ಥಳದಲ್ಲೇ ಅಧ್ಯಯನ ಮಾಡಲು ಅಲ್ಲಿಗೆ ಕಳುಹಿಸಬೇಕು. ಅವರು ಅಲ್ಲಿ ಕೆಲವು ದಿನಗಳನ್ನು ಕಳೆಯಬೇಕು ಮತ್ತು ಪರಿಸ್ಥಿತಿಯು ಹೇಗೆ ಬೆಳೆಯಿತು ಮತ್ತು ಅದನ್ನು ಹೇಗೆ ನಿಭಾಯಿಸಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನಾವು ಸದಾ ಕಲಿಯಲು ಸಿದ್ಧರಾಗಿರಬೇಕು. ಏಕೆಂದರೆ ಅಂತಹ ಶಕ್ತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ನೆರವು ಲಭಿಸುತ್ತಿದೆ. ಅವರು ತುಂಬಾ ಬುದ್ಧಿವಂತರು ಮತ್ತು ಅವರು ತುಂಬಾ ಮುಗ್ಧರಂತೆ ಕಾಣುತ್ತಾರೆ. ಅವರು ಕಾನೂನು ಮತ್ತು ಸಂವಿಧಾನದ ಭಾಷೆಯನ್ನು ಮಾತನಾಡುತ್ತಾರೆ ಆದರೆ ಅವರ ಕ್ರಿಯೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ನಮ್ಮ ಭದ್ರತಾ ಸಾಧನವು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಶಾಶ್ವತ ಶಾಂತಿಗಾಗಿ ಅಂತಹ ಶಕ್ತಿಗಳ ವಿರುದ್ಧ ವೇಗವಾಗಿ ಮುಂದಡಿ ಇಡುವುದು ನಮಗೆ ಬಹಳ ಮುಖ್ಯವಾಗಿದೆ.
ಸ್ನೇಹಿತರೇ,
ಅದು ಜಮ್ಮು-ಕಾಶ್ಮೀರವೇ ಆಗಿರಲಿ ಅಥವಾ ಈಶಾನ್ಯವೇ ಆಗಿರಲಿ, ನಾವು ಜನರ ವಿಶ್ವಾಸವನ್ನು ಗಳಿಸುತ್ತಿದ್ದೇವೆ. ವಿ ಶಕ್ತಿಗಳು ಸಹ ಮುಖ್ಯವಾಹಿನಿಗೆ ಸೇರಲು ಹಾತೊರೆಯುತ್ತಿವೆ. ತ್ವರಿತ ಅಭಿವೃದ್ಧಿ ಮತ್ತು ಮೂಲಸೌಕರ್ಯ ಮತ್ತು ಜನರ ಆಕಾಂಕ್ಷೆಗಳ ಈಡೇರಿಕೆಯನ್ನು ಅವರು ನೋಡಿದಾಗ, ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಮುಖ್ಯವಾಹಿನಿಗೆ ಸೇರಲು ತಯಾರಿ ನಡೆಸುತ್ತಿದ್ದಾರೆ. ಅಂತೆಯೇ, ನಾವು ನಮ್ಮ ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಬಜೆಟ್ ಮಂಡನೆಯ ಸಮಯದಲ್ಲಿ ಚೈತನ್ಯಶೀಲ ಗ್ರಾಮ (ವೈಬ್ರೆಂಟ್ ವಿಲೇಜ್) ಪರಿಕಲ್ಪನೆಯನ್ನು ಸಹ ಒತ್ತಿ ಹೇಳಲಾಗಿದೆ. ನೀವು ಅದರ ಬಗ್ಗೆ ಯೋಚಿಸಬೇಕು. ಉನ್ನತ ಅಧಿಕಾರಿಗಳು ಈ ಗಡಿ ಗ್ರಾಮಗಳಲ್ಲಿ ರಾತ್ರಿ ವಾಸ್ತವ್ಯ ಮಾಡಬೇಕು. ಒಂದು ವರ್ಷದಲ್ಲಿ ಕನಿಷ್ಠ ಐದು ಅಥವಾ ಏಳು ಗಡಿ ಹಳ್ಳಿಗಳಲ್ಲಿ ಕೆಲವು ಗಂಟೆಗಳ ಕಾಲ ಕಳೆಯುವಂತೆ ನಾನು ಸಚಿವರುಗಳನ್ನು ವಿನಂತಿಸುತ್ತೇನೆ. ಇದು ರಾಜ್ಯದ ಗಡಿ ಗ್ರಾಮವಾಗಿರಲಿ ಅಥವಾ ಅಂತಾರಾಷ್ಟ್ರೀಯ ಗಡಿ ಗ್ರಾಮವಾಗಿರಲಿ, ನೀವು ಸಾಕಷ್ಟು ಸೂಕ್ಷ್ಮಗಳನ್ನು ತಿಳಿದುಕೊಳ್ಳುತ್ತೀರಿ.
ಸ್ನೇಹಿತರೇ,
ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ಡ್ರೋನ್ ಹೊಸ ಚಿಂತೆಯ ವಿಷಯವಾಗಿದೆ. ನಮ್ಮ ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ನಾವು ಜಾಗರೂಕರಾಗಿರಬೇಕು. ನಾವು ಒಂದಲ್ಲ ಒಂದು ಸಂಸ್ಥೆಯ ಮೇಲೆ ದೂಷಣೆಯನ್ನು ಮಾಡಲು ಅಥವಾ ಅದು ಕರಾವಳಿ ಭದ್ರತಾ ಪಡೆಗಳ ಜವಾಬ್ದಾರಿ ಎಂದು ಆರಾಮವಾಗಿರಲು ಸಾಧ್ಯವಿಲ್ಲ. ನಮಗೆ ಉತ್ತಮ ಸಮನ್ವಯದ ಅಗತ್ಯವಿದೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಧಾನವಾಗಿಟ್ಟುಕೊಂಡು ನಾವು ಒಟ್ಟಾಗಿ ಮುನ್ನಡೆದರೆ, ಈ ಎಲ್ಲ ಸವಾಲುಗಳನ್ನು ಕುಬ್ಜವಾಗಿಸಬಹುದು ಎಂಬ ಖಾತ್ರಿ ನನಗಿದೆ. ಇತರ ಸಮಸ್ಯೆಗಳನ್ನು ಸಹ ನಿಭಾಯಿಸಲು ನಾವು ಉತ್ತಮವಾಗಿ ಸಿದ್ಧರಾಗುತ್ತೇವೆ. ಈ ಚಿಂತನ ಮಂಥನದ ಅಧಿವೇಶನದಲ್ಲಿನ ಚರ್ಚೆಗಳು ಕ್ರಿಯಾತ್ಮಕ ಅಂಶಗಳಿಗೆ ಕಾರಣವಾಗುತ್ತವೆ ಎಂಬ ಖಾತ್ರಿ ನನಗಿದೆ. ಪ್ರತಿಯೊಂದು ರಾಜ್ಯದ ಸಹಕಾರದೊಂದಿಗೆ ಸಾಮೂಹಿಕ ಮಾರ್ಗಸೂಚಿ ರೂಪುಗೊಳ್ಳುತ್ತದೆ. ಒಂದು ವೇಳೆ ನಾವು ಇದು ನನ್ನ ಕ್ಷೇತ್ರವಲ್ಲ ಎಂಬ ಹೋರಾಟದಲ್ಲಿ ಸಿಕ್ಕಿಹಾಕಿಕೊಂಡರೆ, ಕಾನೂನಿನ ಬಗ್ಗೆ ಕಡಿಮೆ ಗೌರವ ಹೊಂದಿರುವ ಸಮಾಜಘಾತುಕ ಶಕ್ತಿಗಳು ಈ ಅವ್ಯವಸ್ಥೆಯ ಸಂಪೂರ್ಣ ಲಾಭವನ್ನು ಪಡೆಯುತ್ತವೆ. ನಮ್ಮ ನಡುವೆ ವೃತ್ತಿಪರ ತಿಳಿವಳಿಕೆ ಮತ್ತು ನಂಬಿಕೆ ಇರಬೇಕು. ಮತ್ತು ಈ ಜವಾಬ್ದಾರಿ ನಮ್ಮ ಕೇಡರ್ ಗಳ ಮೇಲಿದೆ. ಇದೊಂದು ದೊಡ್ಡ ಜವಾಬ್ದಾರಿ. ನಾವು ಒಗ್ಗೂಡಿ ಕೆಲಸ ಮಾಡಿದರೆ ನಾವು ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೇವೆ ಎಂದು ನಾನು ಭಾವಿಸುತ್ತೇನೆ. ಒಂದು ದೇಶ ತನ್ನ ಶಕ್ತಿಯು ಮೊದಲು ಪಡೆಯುವ ಯಾವುದೇ ಅವಕಾಶ ಏಕರೂಪ ಪಡೆಗಳಿಂದ ಬರುತ್ತದೆ. ಏಕರೂಪದ ಬಲಗಳು ವಿಶ್ವಾಸದ ಹಿಂದಿನ ನಿರ್ಣಾಯಕ ಅಂಶವಾಗಿದೆ. ನಾವು ಅದನ್ನು ಹೆಚ್ಚು ಶಕ್ತಿಶಾಲಿ, ದೂರದರ್ಶಿ ಮತ್ತು ನಾಗರಿಕರಿಗೆ ಸಂವೇದನಾಶೀಲರನ್ನಾಗಿ ಮಾಡಿದರೆ ನಮಗೆ ಬಹಳಷ್ಟು ಪ್ರಯೋಜನವಾಗುತ್ತದೆ.
ಡಿಜಿಪಿ ಸಮ್ಮೇಳನದಲ್ಲಿ ನಾನು ಕೆಲವು ಸಲಹೆಗಳನ್ನು ನೀಡಿದ್ದೆ. ಡಿಜಿಪಿ ಸಮ್ಮೇಳನವು ಬಹಳ ಉಪಯುಕ್ತ ಸಮ್ಮೇಳನವಾಗಿ ಹೊರಹೊಮ್ಮಿದೆ ಎಂದು ನಾನು ಎಲ್ಲ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಹೇಳುತ್ತೇನೆ. ಶೂನ್ಯ ರಾಜಕೀಯ ಅಂಶದೊಂದಿಗೆ ಹೃದಯಪೂರ್ವಕವಾದ ಚರ್ಚೆ ನಡೆಯುತ್ತದೆ. ನಾನು ಆ ಸಮ್ಮೇಳನದ ಫಲಿತಾಂಶವನ್ನು ಐಎಎಸ್ ಕೇಡರ್ ಗೆ ಸೇರಿದ ಎಲ್ಲ ಕಾರ್ಯದರ್ಶಿಗಳು ಮತ್ತು ಸರ್ಕಾರವನ್ನು ನಡೆಸುವ ಚುನಾಯಿತ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳುತ್ತೇನೆ. ನೀವು ಡಿಜಿಪಿ ಸಮ್ಮೇಳನದ ಸಂಪೂರ್ಣ ವಿವರವನ್ನು ಪಡೆಯಬೇಕು ಮತ್ತು ನಿಮ್ಮ ಆಯಾ ರಾಜ್ಯಗಳಲ್ಲಿ ಕ್ರಿಯಾತ್ಮಕ ಅಂಶಗಳನ್ನು ತಕ್ಷಣವೇ ಜಾರಿಗೆ ತರಬೇಕು. ಇದು ತುಂಬಾ ಉಪಯುಕ್ತವಾಗಿರುತ್ತದೆ. ಡಿಜಿಪಿ ಸಮ್ಮೇಳನ ನಡೆಯಿತು, ನಮ್ಮ ವರಿಷ್ಠರು ಭಾಗವಹಿಸಿ ಬಂದರು, ಅದು ಅಷ್ಟೇ ಎಂಬ ಸಾಮಾನ್ಯ ಭಾವನೆ ಇರಬಾರದು. ಈ ಸಮಾವೇಶವು ದೇಶದ ಭದ್ರತೆಗಾಗಿಯೇ ಇದೆ. ಉದಾಹರಣೆಗೆ, ಪೊಲೀಸ್ ಸಿಬ್ಬಂದಿಗೆ ಮನೆಗಳ ಬಗ್ಗೆ ಪ್ರಸ್ತಾಪವಿತ್ತು. ಆ ಸಮ್ಮೇಳನದಲ್ಲಿ, ದೊಡ್ಡ ನಗರಗಳಲ್ಲಿ ನಮ್ಮ ಪೊಲೀಸ್ ಠಾಣೆಗಳನ್ನು ಬಹುಮಹಡಿ ಕಟ್ಟಡಗಳನ್ನಾಗಿ ಪರಿವರ್ತಿಸಬಹುದೇ ಎಂದು ನಾನು ಸಲಹೆ ನೀಡಿದ್ದೆ. ಬಹುಮಹಡಿ ಕಟ್ಟಡವಿದ್ದರೆ ಪೊಲೀಸ್ ಠಾಣೆಯು ನೆಲ ಅಂತಸ್ತಿನಲ್ಲಿ ಕಾರ್ಯ ನಿರ್ವಹಿಸಬಹುದು ಮತ್ತು ಅದರ ಮೇಲಿನ 20 ಅಂತಸ್ತಿನ ಕಟ್ಟಡದಲ್ಲಿ ಪೊಲೀಸರು ವಸತಿ ಗೃಹಗಳನ್ನು ಸಹ ನಿರ್ಮಿಸಬಹುದು. ವರ್ಗಾವಣೆಗೊಂಡ ಪೊಲೀಸ್, ಆವರಣವನ್ನು ತೆರವು ಮಾಡುತ್ತಾರೆ ಮತ್ತು ಅವರ ಜಾಗಕ್ಕೆ ಬಂದವರಿಗೆ ಅದೇ ಮನೆ ಸಿಗುತ್ತದೆ. ಇಂದು, ಪೊಲೀಸ್ ಸಿಬ್ಬಂದಿ ನಗರದಿಂದ 25 ಕಿ.ಮೀ ದೂರದಲ್ಲಿ ಮನೆಗಳನ್ನು ಪಡೆಯುತ್ತಾರೆ. ಅವರು ಎರಡು ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಇದು ಸಮಯ ವ್ಯರ್ಥ ಮಾಡುತ್ತದೆ. ಎತ್ತರದ ಕಟ್ಟಡಗಳ ನಿರ್ಮಾಣಕ್ಕಾಗಿ ನಾವು ಆಯಾ ರಾಜ್ಯ ಸರ್ಕಾರ ಮತ್ತು ಪುರಸಭೆಯೊಂದಿಗೆ ಮಾತನಾಡಬಹುದು. ನಾವು ಅಂತಹ ವಿಷಯಗಳನ್ನು ಸಂಘಟಿಸಬಹುದು. ಸ್ವತಂತ್ರ ಪೊಲೀಸ್ ಠಾಣೆಯು ಆಧುನಿಕ ಪೊಲೀಸ್ ಠಾಣೆಯಾಗುತ್ತದೆ ಮತ್ತು ಅದೇ ಸಂಕೀರ್ಣದ 20-25 ಅಂತಸ್ತಿನ ಎತ್ತರದ ಕಟ್ಟಡದಲ್ಲಿ ಪೊಲೀಸರಿಗೆ ವಸತಿ ವ್ಯವಸ್ಥೆಯನ್ನು ಸಹ ಮಾಡಬಹುದು.
ದೊಡ್ಡ ನಗರಗಳಲ್ಲಿ ಇಂತಹ 25-50 ಪೊಲೀಸ್ ಠಾಣೆಗಳನ್ನು ನಾವು ಸುಲಭವಾಗಿ ಗುರುತಿಸಬಹುದು ಎಂದು ನಾನು ನಂಬುತ್ತೇನೆ, ಅಲ್ಲಿ ಅಂತಹ ಸಾಧ್ಯತೆಯನ್ನು ಅಭಿವೃದ್ಧಿಪಡಿಸಬಹುದು. ಇಲ್ಲದಿದ್ದರೆ, ನಗರಗಳಿಂದ 20-25 ಕಿ.ಮೀ ದೂರದಲ್ಲಿ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಅಮಿತ್ ಭಾಯ್ ಹೇಳಿದಂತೆ, ಬಜೆಟ್ ಅನ್ನು ಸರಿಯಾಗಿ ಬಳಸಲಾಗುತ್ತಿಲ್ಲ ಮತ್ತು ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲಾಗುತ್ತಿಲ್ಲ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮಂಜೂರಾದ ಮೊತ್ತವನ್ನು ಅದಕ್ಕಷ್ಟೇ ಖರ್ಚು ಮಾಡಬೇಕು ಮತ್ತು ಅದೂ ಸಹ ಕಾಲಮಿತಿಯೊಳಗೆ ಖರ್ಚು ಮಾಡಬೇಕು ಎಂದು ನಾನು ಪದೇ ಪದೇ ಒತ್ತಿಹೇಳುತ್ತಲೇ ಬಂದಿದ್ದೇನೆ. ಸಮಸ್ಯೆಯೆಂದರೆ ನಾವು ಮಂಜೂರಾದ ಮೊತ್ತವನ್ನು ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಅಂತಹ ಪರಿಸ್ಥಿತಿ ನಮಗೆ ಬೇಕಾಗಿಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಆಗ ಮಾತ್ರ ನಾವು ಕಾಲಮಿತಿಯೊಳಗೆ ಹಣವನ್ನು ಬಳಸಲು ಸಾಧ್ಯವಾಗುತ್ತದೆ. ಕಾಲಮಿತಿಯೊಳಗೆ ಹಣವನ್ನು ಖರ್ಚು ಮಾಡಿದಾಗ, ಅದು ಹಣ ವ್ಯರ್ಥವಾಗುವುದನ್ನು ತಡೆಯುವುದು ಮಾತ್ರವಲ್ಲದೆ, ಅದು ಹಲವಾರು ಪ್ರಯೋಜನಗಳಿಗೆ ಕಾರಣವಾಗುತ್ತದೆ.
ನಾನು ನಿಮ್ಮ ಗಮನವನ್ನು ಮತ್ತೊಂದು ವಿಷಯದ ಕಡೆಗೆ ಸೆಳೆಯಲು ಬಯಸುತ್ತೇನೆ. ಭಾರತ ಸರ್ಕಾರವು ಹಳೆಯ ವಾಹನಗಳಿಗೆ ಸ್ಕ್ರ್ಯಾಪಿಂಗ್ ನೀತಿಯನ್ನು ತಂದಿದ್ದು, ಎಲ್ಲಾ ರಾಜ್ಯಗಳ ಪೊಲೀಸರು ಇದರ ಅಧ್ಯಯನ ಮಾಡಬೇಕು. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ದಿಕ್ಕಿನಲ್ಲಿ ಸಾಗಲು ಪ್ರಯತ್ನಿಸಿ. ಪೊಲೀಸರು ಹಳೆಯ ವಾಹನಗಳನ್ನು ಹೊಂದಿರಬಾರದು. ಏಕೆಂದರೆ ಇದು ದಕ್ಷತೆಗೆ ಸಂಬಂಧಿಸಿದ್ದಾಗಿದೆ. ಇದರಿಂದ ಎರಡು ಪ್ರಯೋಜನಗಳು ಆಗುತ್ತವೆ. ಸ್ಕ್ರ್ಯಾಪಿಂಗ್ ವ್ಯವಹಾರದಲ್ಲಿ ತೊಡಗಿರುವವರಿಗೆ ಒಂದು ನಿರ್ದಿಷ್ಟ ರಾಜ್ಯದಲ್ಲಿ ಸ್ಕ್ರ್ಯಾಪಿಂಗ್ ಮಾಡಲು ಸುಮಾರು 2,000 ವಾಹನಗಳನ್ನು ಗುರುತಿಸಲಾಗಿದೆ ಎಂದು ತಿಳಿದರೆ ಅವರು ತಕ್ಷಣವೇ ಆ ಉದ್ದೇಶಕ್ಕಾಗಿ ಘಟಕವನ್ನು ಸ್ಥಾಪಿಸುವ ಭರವಸೆ ಮೂಡುತ್ತದೆ. ಹಳೆಯ ವಾಹನಗಳ ಸ್ಕ್ರಾಪಿಂಗ್ ನಿಂದಾಗಿ ವೃತ್ತಾಕಾರದ ಆರ್ಥಿಕತೆ ಇರುತ್ತದೆ. ಕಾರು ತಯಾರಕರಿಗೆ 2,000 ವಾಹನಗಳನ್ನು ಖರೀದಿಸುವ ಭರವಸೆ ನೀಡಿದರೆ ಉತ್ತಮ ರಿಯಾಯಿತಿಯೊಂದಿಗೆ ಗುಣಮಟ್ಟದ ಉತ್ಪನ್ನಗಳನ್ನು ಸಹ ನೀಡುತ್ತಾರೆ. ನಮ್ಮ ಎಲ್ಲ ಪೊಲೀಸ್ ಇಲಾಖೆಗಳು ಆಧುನಿಕ ವಾಹನಗಳನ್ನು ಹೊಂದಬಹುದು. ನಾವು ಇದನ್ನು ಪರಿಶೀಲಿಸಬೇಕು ಮತ್ತು ಸ್ಕ್ರ್ಯಾಪಿಂಗ್ ವ್ಯವಹಾರದಲ್ಲಿ ತೊಡಗಿರುವವರ ಸಭೆಯನ್ನು ಸಂಬಂಧಪಟ್ಟ ರಾಜ್ಯಗಳ ಸಚಿವರು ಕರೆಯಬೇಕೆಂದು ನಾನು ಬಯಸುತ್ತೇನೆ. ನಾವು ಅವರಿಗೆ ಭೂಮಿಯನ್ನು ನೀಡಬಹುದು ಮತ್ತು ಹಳೆಯ ವಾಹನಗಳ ಸ್ಕ್ರಾಪಿಂಗ್ ಗಾಗಿ ತಮ್ಮ ಘಟಕಗಳನ್ನು ಸ್ಥಾಪಿಸಲು ಹೇಳಬಹುದು. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ನೀಡುವಲ್ಲಿ ಪೊಲೀಸ್ ಇಲಾಖೆ ಉಪಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರಿಗೆ ತಿಳಿಸಬೇಕು. ಇದು ಬಹಳ ಮುಖ್ಯ. ಭಾರತ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಹಳೆಯ ಕಸವನ್ನು ನಿಯಮಿತವಾಗಿ ತೆಗೆದುಹಾಕುತ್ತವೆ. ಹೊಸ ವಾಹನಗಳು ನಮ್ಮ ಪರಿಸರಕ್ಕೆ ಬದಲಾವಣೆ ತರುತ್ತವೆ. ನೀವು ಅಂತಹ ಸಣ್ಣ ವಿಷಯಗಳ ಬಗ್ಗೆ ಕಾಲಮಿತಿಯೊಳಗೆ ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಭಾಗಿದಾರರಾಗುತ್ತೀರಿ ಮತ್ತು ಅದೇ ವೇಳೆ ಜನರಿಗೆ ಭದ್ರತೆಯನ್ನು ಒದಗಿಸುತ್ತೀರಿ. ಮತ್ತು ಈ ಸಭೆಯಲ್ಲಿ ನೀವು ತೋರಿಸಿದ ಗಂಭೀರತೆಯು ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂಬ ಖಾತ್ರಿ ನನಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿರುವುದರಿಂದ, ನಾನು ನಿಮ್ಮ ನಡುವೆ ಇರಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ ಕೆಲವು ಒತ್ತಡದ ಕಾರ್ಯಕ್ರಮಗಳಿಂದಾಗಿ ನಾನು ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅನೇಕ ಗೌರವಾನ್ವಿತ ಮುಖ್ಯಮಂತ್ರಿಗಳು ಇರುವಾಗ, ಒಬ್ಬ ಪ್ರಧಾನಮಂತ್ರಿಯಾಗಿ ನಾನು ನಿಮ್ಮೊಂದಿಗೆ ಇರಬೇಕಾಗಿತ್ತು ಮತ್ತು ನಿಮ್ಮೊಂದಿಗೆ ಚಹಾ ಸೇವಿಸುತ್ತಾ ಹಲವಾರು ವಿಷಯಗಳನ್ನು ಚರ್ಚಿಸಬೇಕಾಗಿತ್ತು ಎಂದು ನನಗನಿಸುತ್ತದೆ. ಆದರೆ ಈ ಬಾರಿ ನಾನು ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಗೃಹ ಸಚಿವರು ಖುದ್ದು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಅವರು ನಿಮ್ಮೊಂದಿಗೆ ನಡೆಸಿದ ವಿಚಾರ ವಿನಿಮಯದ ಬಗ್ಗೆ ನನಗೆ ತಿಳಿಸಲಾಗುವುದು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಭಾರತ ಸರ್ಕಾರ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ನಾನು ಎಲ್ಲ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಭರವಸೆ ನೀಡುತ್ತೇನೆ. ನಾನು ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಿಮಗೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*****
(Release ID: 1872093)
Visitor Counter : 227
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam