ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಗಳ ಗೃಹ ಸಚಿವರ 'ಚಿಂತನ ಶಿಬಿರ' ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ


"ಚಿಂತನ ಶಿಬಿರ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಪ್ರಮುಖ ಉದಾಹರಣೆ"

"ಉತ್ತಮ ಆಡಳಿತಕ್ಕೆ 'ಪಂಚ ಪ್ರಾಣ' ಮಾರ್ಗದರ್ಶಕ ಶಕ್ತಿಯಾಗಿರಬೇಕು"

"ಸ್ಮಾರ್ಟ್ ತಂತ್ರಜ್ಞಾನದ ನೆರವಿನಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಬಹುದು"

"ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು 27 X 7 ಕಾರ್ಯವಾಗಿದೆ"

ಯುಎಪಿಎಯಂತಹ ಕಾನೂನುಗಳು ಭಯೋತ್ಪಾದನೆಯ ವಿರುದ್ಧದ ನಿರ್ಣಾಯಕ ಸಮರದಲ್ಲಿ ವ್ಯವಸ್ಥೆಗೆ ಶಕ್ತಿ ತುಂಬಿವೆ"

'ಒಂದು ರಾಷ್ಟ್ರ, ಒಂದು ಪೊಲೀಸ್ ಸಮವಸ್ತ್ರ' ಕಾನೂನು ಅನುಷ್ಠಾನಕ್ಕೆ ಒಂದು ಸಾಮಾನ್ಯ ಅಸ್ಮಿತೆಯನ್ನು ನೀಡುತ್ತದೆ"

ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ನಾವು ತಾಂತ್ರಿಕ ಪ್ರಗತಿಯೊಂದಿಗೆ ಮುಂದೆ ಬರಬೇಕು"

ನಕ್ಸಲಿಸಂನ ಪ್ರತಿಯೊಂದು ರೂಪ, ಅದು ಬಂದೂಕುಗಳನ್ನು ಹಿಡಿದಿರುವುದಾಗಿರಲಿ ಅಥವಾ ಪೆನ್ನುಗಳನ್ನು ಹಿಡಿದಿರುವುದೇ ಆಗಿರಲಿ, ಅವುಗಳನ್ನು ಬೇರುಸಹಿತ ಕಿತ್ತೊಗೆಯಬೇಕು"

ಪೊಲೀಸ್ ವಾಹನಗಳು ಎಂದಿಗೂ ಹಳೆಯದಾಗಬಾರದು ಏಕೆಂದರೆ ಅದು ದಕ್ಷತೆಗೆ ಸಂಬಂಧಿಸಿದ್ದಾಗಿದೆ"

Posted On: 28 OCT 2022 12:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಗೃಹ ಸಚಿವರ 'ಚಿಂತನ ಶಿಬಿರ'ವನ್ನುದ್ದೇಶಿಸಿ ಭಾಷಣ ಮಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಬ್ಬದ ಋತುವಿನಲ್ಲಿ ಶಾಂತಿಯುತ ವಾತಾವರಣಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ಸಿಬ್ಬಂದಿಯ ಸಿದ್ಧತೆಗಳನ್ನು ಶ್ಲಾಘಿಸಿದರು. ಚಿಂತನ ಶಿಬಿರ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಸಂವಿಧಾನದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿಯಾಗಿದ್ದರೂ, ಅವು ದೇಶದ ಏಕತೆ ಮತ್ತು ಸಮಗ್ರತೆಗೆ ಸಮಾನವಾಗಿ ಸಂಬಂಧಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. "ಪ್ರತಿಯೊಂದು ರಾಜ್ಯವು ಪರಸ್ಪರರಿಂದ ಕಲಿಯಬೇಕು, ಪರಸ್ಪರರಿಂದ ಸ್ಫೂರ್ತಿ ಪಡೆಯಬೇಕು, ದೇಶದ ಒಳಿತಿಗಾಗಿ ಶ್ರಮಿಸಬೇಕು, ಎಂಬುದು ಸಂವಿಧಾನದ ಸ್ಫೂರ್ತಿಯಾಗಿದೆ ಮತ್ತು ಇದು ದೇಶವಾಸಿಗಳ ಬಗ್ಗೆ ನಮ್ಮ ಜವಾಬ್ದಾರಿಯೂ ಆಗಿದೆ" ಎಂದು ಅವರು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಅಮೃತ ಕಾಲವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಮೃತ ಕಾಲದಲ್ಲಿ, 'ಪಂಚ ಪ್ರಾಣ'ದ ಸಾರವನ್ನು ಹೊತ್ತು ಅಮೃತ ಪೀಳಿಗೆಯು ಹೊರಹೊಮ್ಮುತ್ತದೆ ಎಂದು ಹೇಳಿದರು. 'ಪಂಚ ಪ್ರಾಣ' ಉತ್ತಮ ಆಡಳಿತಕ್ಕೆ ಮಾರ್ಗದರ್ಶಕ ಶಕ್ತಿಯಾಗಿರಬೇಕು' ಎಂದು ಅವರು ಹೇಳಿದರು.

ದೇಶದ ಶಕ್ತಿ ಹೆಚ್ಚಾದಾಗ, ದೇಶದ ಪ್ರತಿಯೊಬ್ಬ ನಾಗರಿಕನ ಮತ್ತು ಪ್ರತಿ ಕುಟುಂಬದ ಶಕ್ತಿಗೆ ಚೈತನ್ಯ ಸಿಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. "ಇದು ಉತ್ತಮ ಆಡಳಿತವಾಗಿದ್ದು, ಪ್ರತಿ ರಾಜ್ಯದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಕಟ್ಟಕಡೆಯ ವ್ಯಕ್ತಿಗೂ ಸಹ ಪ್ರಯೋಜನಗಳು ತಲುಪುತ್ತಿವೆ ಎಂದರು. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ರಾಜ್ಯಗಳ ಅಭಿವೃದ್ಧಿಯ ನಡುವಿನ ಸಂಬಂಧವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಇಡೀ ಕಾನೂನು ಮತ್ತು ಸುವ್ಯವಸ್ಥೆಯು ವಿಶ್ವಾಸಾರ್ಹವಾಗಿರುವುದು ಬಹಳ ಮುಖ್ಯ. ಸಾರ್ವಜನಿಕರಲ್ಲಿ ಅದರ ನಂಬಿಕೆ ಮತ್ತು ಗ್ರಹಿಕೆ ಬಹಳ ಮುಖ್ಯ", ಎಂದು ಅವರು ಗಮನಸೆಳೆದರು. ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್.ನ ಹೆಚ್ಚುತ್ತಿರುವ ಅಸ್ಮಿತೆಯನ್ನು ಅವರು ಗಮನಿಸಿದರು. ಅಂತೆಯೇ, ಅಪರಾಧ ನಡೆದ ಸ್ಥಳಕ್ಕೆ ಪೊಲೀಸರ ಆಗಮನವು ಸರ್ಕಾರದ ಆಗಮನವೆಂದೇ ತಿಳಿಯಲಾಗುತ್ತದೆ ಮತ್ತು ಕೊರೊನಾ ಅವಧಿಯಲ್ಲಿ  ಪೊಲೀಸರ ಬಗೆಗಿನ  ಗೌರವ ಜನರಲ್ಲಿ ಹೆಚ್ಚಾಗಿದೆ  ಎಂದು ಪ್ರಧಾನಮಂತ್ರಿ ಹೇಳಿದರು. ಬದ್ಧತೆಗೆ ಯಾವುದೇ ಕೊರತೆಯಿಲ್ಲ ಮತ್ತು ಪೊಲೀಸರ ಗ್ರಹಿಕೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಅವರು ಒತ್ತಿ ಹೇಳಿದರು. 

ಅಪರಾಧಗಳು ಇನ್ನು ಮುಂದೆ ಸ್ಥಳೀಯವಾಗಿರುವುದಿಲ್ಲ ಮತ್ತು ಅಂತಾರಾಜ್ಯ, ಅಂತಾರಾಷ್ಟ್ರೀಯ ಅಪರಾಧಗಳ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪ್ರಧಾನಮಂತ್ರಿ ಗಮನಸೆಳೆದರು. ಅದಕ್ಕಾಗಿಯೇ ರಾಜ್ಯ ಸಂಸ್ಥೆಗಳ ನಡುವೆ ಮತ್ತು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರವು ನಿರ್ಣಾಯಕವಾಗುತ್ತಿದೆ. ಸೈಬರ್ ಅಪರಾಧವೇ ಆಗಿರಲಿ ಅಥವಾ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳ ಕಳ್ಳಸಾಗಣೆಗೆ ಡ್ರೋನ್ ತಂತ್ರಜ್ಞಾನಗಳ ಬಳಕೆಯೇ ಆಗಿರಲಿ, ಈ ಪಿಡುಗನ್ನು ನಿಭಾಯಿಸಲು ಸರ್ಕಾರವು ಹೊಸ ತಂತ್ರಜ್ಞಾನಗಳ ಕಡೆಗೆ ಕೆಲಸ ಮಾಡುತ್ತಲೇ ಇರಬೇಕು ಎಂದು ಅವರು ಗಮನಸೆಳೆದರು. "ಸ್ಮಾರ್ಟ್ ತಂತ್ರಜ್ಞಾನದ ಸಹಾಯದಿಂದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಬಹುದು" ಎಂದು ಪ್ರಧಾನಮಂತ್ರಿ ಹೇಳಿದರು. 5ಜಿ, ಅದರ ಪ್ರಯೋಜನಗಳೊಂದಿಗೆ, ಹೆಚ್ಚಿನ ಎಚ್ಚರಿಕೆಯ ಅಗತ್ಯವನ್ನು ತರುತ್ತದೆ ಎಂದು ಅವರು ಹೇಳಿದರು. ಈ ತಂತ್ರಜ್ಞಾನವು ಸಾಮಾನ್ಯ ನಾಗರಿಕರಲ್ಲಿ ಭದ್ರತೆಯ ವಿಶ್ವಾಸವನ್ನು ಪಸರಿಸುವುದರಿಂದ ಬಜೆಟ್ ನ ಮಿತಿಗಳನ್ನು ಮೀರಿ ತಂತ್ರಜ್ಞಾನದ ಅಗತ್ಯವನ್ನು ಗಂಭೀರವಾಗಿ ಮೌಲ್ಯಮಾಪನ ಮಾಡುವಂತೆ ಅವರು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರನ್ನು ವಿನಂತಿಸಿದರು. ಕೇಂದ್ರ ಸರ್ಕಾರದ ಪೊಲೀಸ್ ತಂತ್ರಜ್ಞಾನ ಅಭಿಯಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವಿವಿಧ ರಾಜ್ಯಗಳ ವಿಭಿನ್ನ ತಂತ್ರಜ್ಞಾನಗಳ ಕುರಿತಂತೆ ಪರಸ್ಪರ ಮಾತನಾಡದ ಕಾರಣ ಒಂದೇ ವೇದಿಕೆಯ ಅಗತ್ಯವಿತ್ತು ಎಂದು ಒತ್ತಿ ಹೇಳಿದರು. "ನಾವು ಇಡೀ ಭಾರತದ ದೃಷ್ಟಿಕೋನವನ್ನು ಹೊಂದಿರಬೇಕು, ನಮ್ಮ ಎಲ್ಲಾ ಉತ್ತಮ ರೂಢಿಗಳು ಪರಸ್ಪರ ಕಾರ್ಯನಿರ್ವಹಿಸಬೇಕು ಮತ್ತು ಸಾಮಾನ್ಯ ಸಂಪರ್ಕವನ್ನು ಹೊಂದಿರಬೇಕು" ಎಂದು ಅವರು ಹೇಳಿದರು. ವಿಧಿವಿಜ್ಞಾನದಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅವರು ರಾಜ್ಯ ಸಂಸ್ಥೆಗಳಿಗೆ ಸೂಚಿಸಿದರು.

ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕಳೆದ ಕೆಲವು ವರ್ಷಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಹಲವಾರು ಸುಧಾರಣೆಗಳು ನಡೆದಿವೆ, ಇದು ದೇಶದಲ್ಲಿ ಶಾಂತಿಯುತ ವಾತಾವರಣವನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದೆ ಎಂದರು. "ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು 24 X 7 ಕೆಲಸವಾಗಿದೆ" ಎಂದು ಅವರು ಹೇಳಿದರು. ಇದರಲ್ಲಿ ಒಳಗೊಂಡಿರುವ ಪ್ರಕ್ರಿಯೆಗಳಲ್ಲಿ ಪ್ರಗತಿ ಮತ್ತು ಸುಧಾರಣೆಗಳ ಕಡೆಗೆ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಕಂಪನಿ ಕಾನೂನಿನಲ್ಲಿ ಅನೇಕ ವಿಷಯಗಳನ್ನು ಅಪರಾಧಮುಕ್ತಗೊಳಿಸಿರುವುದು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಉಲ್ಲೇಖಿಸಿದ ಅವರು, ಹಳೆಯ ನಿಯಮಗಳು ಮತ್ತು ಕಾನೂನುಗಳನ್ನು ಮೌಲ್ಯಮಾಪನ ಮಾಡಲು ಮತ್ತು ತೊಡೆದುಹಾಕಲು ರಾಜ್ಯಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಹವಾಲಾವನ್ನು ಬಲವಾಗಿ ನಿಭಾಯಿಸುವ ಇಚ್ಛಾಶಕ್ತಿ ಸ್ಪಷ್ಟವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಯುಎಪಿಎಯಂತಹ ಕಾನೂನುಗಳು ಭಯೋತ್ಪಾದನೆಯ ವಿರುದ್ಧದ ನಿರ್ಣಾಯಕ ಯುದ್ಧದಲ್ಲಿ ವ್ಯವಸ್ಥೆಗೆ ಶಕ್ತಿಯನ್ನು ನೀಡಿವೆ" ಎಂದು ಅವರು ಹೇಳಿದರು.

ಇಡೀ ದೇಶದ ರಾಜ್ಯಗಳ ಪೊಲೀಸರಿಗೆ ಒಂದೇ ಸಮವಸ್ತ್ರವನ್ನು ಪರಿಗಣಿಸುವಂತೆ ಪ್ರಧಾನಮಂತ್ರಿಯವರು ಸಭೆಯಲ್ಲಿ ಭಾಗಿಯಾಗಿದ್ದವರಿಗೆ ತಿಳಿಸಿದರು. ಇದು ಗಾತ್ರದ ಕಾರಣದಿಂದ ಗುಣಮಟ್ಟದ ಉತ್ಪನ್ನಗಳನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ, ದೇಶದ ಯಾವುದೇ ಭಾಗದಲ್ಲಿ ನಾಗರಿಕರು ಪೊಲೀಸ್ ಸಿಬ್ಬಂದಿಯನ್ನು ಗುರುತಿಸಲು ನೆರವಾಗಿ, ಕಾನೂನು ಜಾರಿಗೂ ಒಂದು ಸಾಮಾನ್ಯ ಅಸ್ಮಿತೆಯನ್ನು ನೀಡುತ್ತದೆ. ರಾಜ್ಯಗಳು ತಮ್ಮ ಸಂಖ್ಯೆ ಅಥವಾ ಲಾಂಛನವನ್ನು ಹೊಂದಬಹುದು. 'ಒಂದು ರಾಷ್ಟ್ರ, ಒಂದು ಪೊಲೀಸ್ ಸಮವಸ್ತ್ರ', ನಾನು ಇದನ್ನು ನಿಮ್ಮ ಪರಿಗಣನೆಗಾಗಿ ಒಂದು ಆಲೋಚನೆಯಾಗಿ ಮುಂದಿಡುತ್ತಿದ್ದೇನೆ" ಎಂದು ಅವರು ಹೇಳಿದರು. ಅಂತೆಯೇ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪೊಲೀಸ್ ವ್ಯವಸ್ಥೆಗಾಗಿ ವಿಶೇಷ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಪ್ರವಾಸಿಗರು ಯಾವುದೇ ಸ್ಥಳದ ಖ್ಯಾತಿಯ ಅತಿದೊಡ್ಡ ಮತ್ತು ವೇಗದ ರಾಯಭಾರಿಗಳು ಎಂದು ಅವರು ಹೇಳಿದರು.

ಸಂವೇದನಾಶೀಲತೆಯ ಮಹತ್ವ ಮತ್ತು ತಾರತಮ್ಯರಹಿತ ಸ್ಪರ್ಶವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಪೊಲೀಸರು ಮಾಡಿದ ಕರೆಗಳ ಉದಾಹರಣೆಗಳನ್ನು ಅವರು ನೀಡಿದರು. ತಾಂತ್ರಿಕ ಬುದ್ಧಿಮತ್ತೆಯ ಜೊತೆಗೆ ಮಾನವ ಬುದ್ಧಿಮತ್ತೆಯನ್ನು ಬಲಪಡಿಸುವಂತೆಯೂ ಹೇಳಿದ ಪ್ರಧಾನಮಂತ್ರಿಯವರು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.  ಭಾರತದ ವರ್ಚಸ್ಸು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರಹೊಮ್ಮುತ್ತಿರುವ ಹೊಸ ಸವಾಲುಗಳ ವಿರುದ್ಧ ಜಾಗರೂಕರಾಗಿರುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಸಾಮಾಜಿಕ ಮಾಧ್ಯಮಗಳ ಸಾಧ್ಯತೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅದನ್ನು ಮಾಹಿತಿಯ ಮೂಲ ಎಂದು ಸೀಮಿತಗೊಳಿಸಬಾರದು ಎಂದು ಹೇಳಿದರು. ಒಂದೇ ಒಂದು ಸುಳ್ಳು ಸುದ್ದಿಯ ತುಣುಕು ರಾಷ್ಟ್ರೀಯ ಕಾಳಜಿಯ ವಿಷಯವಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಹಿಂದೆ ಉದ್ಯೋಗ ಮೀಸಲಾತಿಯ ಬಗ್ಗೆ ಸುಳ್ಳು ಸುದ್ದಿಗಳಿಂದಾಗಿ ಭಾರತವು ಅನುಭವಿಸಿದ ಕಷ್ಟ ನಷ್ಟಗಳ ಬಗ್ಗೆ ಪ್ರಧಾನಮಂತ್ರಿ ಅವರು ವಿಷಾದಿಸಿದರು. ಯಾವುದೇ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುವ ಮೊದಲು ಅದನ್ನು ವಿಶ್ಲೇಷಿಸುವ ಮತ್ತು ಪರಿಶೀಲಿಸುವ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. "ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಲು ನಾವು ತಾಂತ್ರಿಕ ಪ್ರಗತಿಯೊಂದಿಗೆ ಬರಬೇಕು" ಎಂದು ಅವರು ಹೇಳಿದರು. ದೇಶದಲ್ಲಿ ಪೌರ ರಕ್ಷಣೆಯ ಅಗತ್ಯದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಶಾಲಾ ಕಾಲೇಜುಗಳಲ್ಲಿ ಅಭ್ಯಾಸಗಳನ್ನು ನಡೆಸುವಂತೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಆಗ್ರಹಿಸಿದರು, ಇದರಿಂದ ವಿದ್ಯಾರ್ಥಿಗಳು ಈ ವಿಚಾರದ ಕಲ್ಪನೆ ಪಡೆಯುತ್ತಾರೆ ಎಂದೂ ತಿಳಿಸಿದರು. 

ಭಯೋತ್ಪಾದನೆಯ ತಳಹದಿಯ ಜಾಲವನ್ನು ಅಳಿಸಿಹಾಕುವ ಅಗತ್ಯವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ಸರ್ಕಾರವೂ ತನ್ನದೇ ಆದ ಸಾಮರ್ಥ್ಯ ಮತ್ತು ತಿಳಿವಳಿಕೆಯಿಂದ ತಮ್ಮ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಒಂದಾಗಿ ಒಗ್ಗೂಡಿ ಪರಿಸ್ಥಿತಿಯನ್ನು ನಿಭಾಯಿಸುವುದು ಇಂದಿನ ಅಗತ್ಯವಾಗಿದೆ ಎಂದು ಶ್ರೀ ಮೋದಿ ಹೇಳಿದರು. "ನಕ್ಸಲ್ ವಾದದ ಪ್ರತಿಯೊಂದು ರೂಪ, ಅದು ಬಂದೂಕುಗಳನ್ನು ಹೊಂದಿರುವುದಾಗಿರಲಿ ಅಥವಾ ಲೇಖನಿಯನ್ನು ಹಿಡಿದಿರುವುದೇ ಆಗಿರಲಿ, ದೇಶದ ಯುವಕರನ್ನು ತಪ್ಪುದಾರಿಗೆಳೆಯುವುದನ್ನು ತಡೆಯಲು ಅವುಗಳನ್ನು ಬೇರುಸಹಿತ ಕಿತ್ತೊಗೆಯಬೇಕು" ಎಂದು ಅವರು ಹೇಳಿದರು. ಇಂತಹ ಶಕ್ತಿಗಳು ತಮ್ಮ ಬೌದ್ಧಿಕ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಮುಂದಿನ ಪೀಳಿಗೆಯ ಮನಸ್ಸನ್ನು ವಿಕೃತಗೊಳಿಸುತ್ತಿವೆ ಎಂದು ಪ್ರಧಾನಮಂತ್ರಿ ಎಚ್ಚರಿಸಿದರು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ ಮತ್ತು ಸರ್ದಾರ್ ಪಟೇಲರ ಸ್ಫೂರ್ತಿಯಿಂದ, ನಮ್ಮ ದೇಶದಲ್ಲಿ ಅಂತಹ ಯಾವುದೇ ಶಕ್ತಿಗಳು ಬೆಳೆಯಲು ನಾವು ಅವಕಾಶ ನೀಡುವುದಿಲ್ಲ. ಅಂತಹ ಶಕ್ತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಹಾಯವನ್ನು ಪಡೆಯುತ್ತವೆ ಎಂದು ಅವರು ಹೇಳಿದರು. 

ಕಳೆದ ಎಂಟು ವರ್ಷಗಳಲ್ಲಿ, ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಜಮ್ಮು ಮತ್ತು ಕಾಶ್ಮೀರವೇ ಆಗಿರಲಿ ಅಥವಾ ಈಶಾನ್ಯವೇ ಆಗಿರಲಿ, ಇಂದು ನಾವು ಶಾಶ್ವತ ಶಾಂತಿಯತ್ತ ವೇಗವಾಗಿ ಸಾಗುತ್ತಿದ್ದೇವೆ. ಈಗ ನಾವು ಮೂಲಸೌಕರ್ಯ ಸೇರಿದಂತೆ ಈ ಎಲ್ಲಾ ವಲಯಗಳಲ್ಲಿ ತ್ವರಿತ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ", ಎಂದು ಅವರು ಹೇಳಿದರು.  ಇಂದು, ಕೇಂದ್ರ ಸರ್ಕಾರವು ಹಿಮ್ಮುಖ ವಲಸೆಯನ್ನು ಉತ್ತೇಜಿಸಲು ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಭಿವೃದ್ಧಿಗಾಗಿ ಅಭಿಯಾನದೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಈ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಇದು ಬಹಳ ದೂರ ಹೋಗಬಹುದು ಎಂದು ಅವರು ಸಲಹೆ ನೀಡಿದರು. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಗಡಿ ಮತ್ತು ಕರಾವಳಿ ರಾಜ್ಯಗಳಿಂದ ಹೆಚ್ಚಿನ ಸಹಕಾರ ನೀಡುವಂತೆ ಪ್ರಧಾನಮಂತ್ರಿಯವರು ಕೋರಿದರು.

ಭಾಷಣದ ಕೊನೆಯಲ್ಲಿ, ಪ್ರಧಾನಮಂತ್ರಿಯವರು, ಡಿಜಿಪಿ ಸಮ್ಮೇಳನಗಳಲ್ಲಿ ಹಲವು ವರ್ಷಗಳಿಂದ ಹೊರಹೊಮ್ಮಿರುವ ಸಲಹೆಗಳನ್ನು ಗಂಭೀರವಾಗಿ ಅಧ್ಯಯನ ಮಾಡುವಂತೆ ವಿನಂತಿಸಿದರು. ಹೊಸ ಸ್ಕ್ರ್ಯಾಪೇಜ್ ನೀತಿಯ ಹಿನ್ನೆಲೆಯಲ್ಲಿ ತಮ್ಮ ವಾಹನಗಳನ್ನು ಮೌಲ್ಯಮಾಪನ ಮಾಡುವಂತೆ ಪ್ರಧಾನಮಂತ್ರಿಯವರು ಪೊಲೀಸ್ ಪಡೆಗಳಿಗೆ ತಿಳಿಸಿದರು. "ಪೊಲೀಸ್ ವಾಹನಗಳು ಎಂದಿಗೂ ಹಳೆಯದಾಗಬಾರದು ಏಕೆಂದರೆ ಅದು ದಕ್ಷತೆಗೆ ಸಂಬಂಧಿಸಿದ್ದಾಗಿದೆ" ಎಂದರು.

ನಾವು ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಮುಂದೆ ಸಾಗಿದರೆ, ಪ್ರತಿಯೊಂದು ಸವಾಲು ನಮ್ಮ ಮುಂದೆ ಕಡಿಮೆಯಾಗುತ್ತದೆ ಎಂದು ಅವರು ಭರವಸೆ ನೀಡಿದರು. "ಈ ಚಿಂತನ ಶಿಬಿರದಲ್ಲಿ, ಉತ್ತಮ ಸಲಹೆಗಳೊಂದಿಗೆ ಮಾರ್ಗಸೂಚಿಯು ಮುನ್ನೆಲೆಗೆ ಬರಲಿದೆ. ನಾನು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ!", ಎಂದು ಪ್ರಧಾನಮಂತ್ರಿಯವರು ಮಾತು ಮುಗಿಸಿದರು.
 

ಹಿನ್ನೆಲೆ 
2022ರ ಅಕ್ಟೋಬರ್ 27 ಮತ್ತು 28 ರಂದು ಹರಿಯಾಣದ ಸೂರಜ್ ಕುಂಡದಲ್ಲಿ ಚಿಂತನ ಶಿಬಿರ ನಡೆಯುತ್ತಿದೆ. ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮಹಾನಿರ್ದೇಶಕರು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ (ಸಿಪಿಒಗಳು) ಮಹಾನಿರ್ದೇಶಕರು ಚಿಂತನ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಗೃಹ ಸಚಿವರ ಚಿಂತನ ಶಿಬಿರ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ನೀತಿ ನಿರೂಪಣೆಗೆ ರಾಷ್ಟ್ರೀಯ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನವಾಗಿದೆ, ಇದು ಪ್ರಧಾನಮಂತ್ರಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಪಂಚ ಪ್ರಾಣಗಳಿಗೆ ಅನುಗುಣವಾಗಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಲ್ಲಿ ಶಿಬಿರ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಬಾಧ್ಯಸ್ಥರ ನಡುವೆ ಯೋಜನೆ ಮತ್ತು ಸಮನ್ವಯದಲ್ಲಿ ಹೆಚ್ಚಿನ ಒಮ್ಮತವನ್ನು ಮೂಡಿಸುತ್ತದೆ.

ಪೊಲೀಸ್ ಪಡೆಗಳ ಆಧುನೀಕರಣ, ಸೈಬರ್ ಅಪರಾಧ ನಿರ್ವಹಣೆ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಹೆಚ್ಚಿನ ಬಳಕೆ, ಭೂ ಗಡಿ ನಿರ್ವಹಣೆ, ಕರಾವಳಿ ಭದ್ರತೆ, ಮಹಿಳೆಯರ ಸುರಕ್ಷತೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಮುಂತಾದ ವಿಷಯಗಳ ಬಗ್ಗೆ ಶಿಬಿರದಲ್ಲಿ ಚರ್ಚಿಸಲಾಗುತ್ತಿದೆ.

*****



(Release ID: 1871721) Visitor Counter : 194