ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ವ್ಯಾರಾದಲ್ಲಿ ವಿವಿಧ ಅಭಿವೃದ‍್ದಿ ಕಾಮಗಾರಿಗಳ ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಇಂಗ್ಲಿಷ್ ಅನುವಾದ

Posted On: 20 OCT 2022 10:25PM by PIB Bengaluru

ಭಾರತ ಮಾತೆಗೆ ಜೈ!

ಭಾರತ ಮಾತೆಗೆ ಜೈ!

ಜಿಲ್ಲೆಯ ವಿವಿಧ ಭಾಗಗಳಿಂದ ನಮ್ಮೆಲ್ಲರನ್ನು ಆಶೀರ್ವದಿಸಲು ಇಲ್ಲಿಗೆ ಬಂದಿದ್ದೀರಿ ಮತ್ತು ಎರಡೂವರೆಯಿಂದ ಮೂರು ಗಂಟೆಗಳ ಕಾಲದಿಂದ ನೀವು ಇಲ್ಲಿದ್ದೀರಿ ಎಂದು ನನಗೆ ತಿಳಿಯಿತು. ನಿಮ್ಮ ತಾಳ್ಮೆ, ಈ ಪ್ರೀತಿ, ನಿಮ್ಮ ಉತ್ಸಾಹ ಮತ್ತು ಸಂತೋಷ ಹಾಗೂ ಇಲ್ಲಿನ ಸಂಪೂರ್ಣ ವಾತಾವರಣ ತಮಗೆ ಹೊಸ ಶಕ್ತಿ ನೀಡಿದೆ ಹಾಗೂ ನಿಮ್ಮ ಪರವಾಗಿ ಕೆಲಸ ಮಾಡಲು ಇನ್ನಷ್ಟು ಶಕ್ತಿ ಬಂದಿದೆ. ಇದು ತಮಗೆ ಹೊಸ ವಿಶ್ವಾಸ ಕೊಟ್ಟಿದೆ. ಹಾಗಾಗಿ ಮೊದಲು ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಶುಭಾಶಯಗಳು!

ಕಳೆದ ಇಪ್ಪತ್ತು ವರ್ಷಗಳಿಂದ ನೀವೆಲ್ಲರೂ ನನಗೆ ಬೆಂಬಲ ಮತ್ತು ಪ್ರೀತಿ ನೀಡಿದ್ದೀರಿ. ನಿಮ್ಮೊಂದಿಗೆ ಈ ಆತ್ಮೀಯ ಸಂಬಂಧವನ್ನು ಹೊಂದಲು ನಾನು ಅದೃಷ್ಟಶಾಲಿಯಾಗಿದ್ದೇನೆ ಮತ್ತು ನನ್ನ ಬುಡಕಟ್ಟು ಸಮುದಾಯದ ಸಹೋದರರು, ಸಹೋದರಿಯರು ಹಾಗೂ ತಾಯಂದಿರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಬಹುಶ‍ಃ ರಾಜಕಾರಣದಲ್ಲಿ ಇಂತಹ ಅದೃಷ್ಟ ಬೇರೆ ಯಾರಿಗೂ ದೊರೆತಿಲ್ಲ ಮತ್ತು 20 ವರ್ಷಗಳಿಂದ ನಿರಂತರವಾಗಿ ಷರತ್ತುರಹಿತ ಪ್ರೀತಿಯ ತುಂತುರು ಮಳೆಯನ್ನು ನೀವು ಸುರಿಸಿದ್ದೀರಿ. ಆದ್ದರಿಂದ ನಾನು ಗಾಂಧಿನಗರ ಅಥವಾ ದೆಹಲಿಯಲ್ಲಿ ಎಲ್ಲೇ ಇದ್ದರೂ ನನ್ನ ಮನಸ್ಸಿಗೆ ಬರುವುದು ಒಂದೇ ಒಂದು ಆಲೋಚನೆ ಮತ್ತು ಅದು ನಿಮಗೆ ಪ್ರತಿಯೊಂದು ಅವಕಾಶದಲ್ಲೂ ಸೇವೆ ಮಾಡುತ್ತಿರಬೇಕು ಎಂದು.  

ತಾಪಿ-ನರ್ಮದಾ ಸೇರಿದಂತೆ ಸಂಪೂರ್ಣ ಬುಡಕಟ್ಟು ಪ್ರದೇಶದಲ್ಲಿ ನೂರು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟನೆ ಅಥವಾ ಶಿಲಾನ್ಯಾಸ ನೆರವೇರಿಸಲಾಗಿದೆ. ನಿನ್ನೆ ಮತ್ತು ಇಂದು ಕೈಗೆತ್ತಿಕೊಂಡ ಯೋಜನೆಗಳ ಮೊತ್ತ ಹಿಂದಿನ ಸರ್ಕಾರಗಳ ವಾರ್ಷಿಕ ಆಯವ್ಯಯದಷ್ಟಿದೆ. ಇದೆಲ್ಲವೂ ನಿಮಗಾಗಿ.  

ಇದು ನಿಮಗಾಗಿ ಮಾತ್ರ. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾತ್ರ ನಾವು ಇದನ್ನು ಮಾಡುತ್ತಿದ್ದೇವೆ ಎಂದು ಭಾವಿಸಬೇಡಿ. ನಿಮ್ಮ ಪೂರ್ವಿಕರು ತಮ್ಮ ಜೀವನದ ಭಾಗವನ್ನು ಕಾಡುಗಳಲ್ಲಿ ಕಳೆದಿದ್ದಾರೆ.  ಅವರು ಸಂಕಷ್ಟ ಪರಿಸ್ಥಿತಿಯಲ್ಲಿ ಬದುಕಿದ್ದಾರೆ. ಅಂತಹ ಕೆಲವು ಸಂಕಷ್ಟಗಳು ಇದೀಗ ಇಲ್ಲವಾಗಿದೆ. ಈಗಲೂ ಕೆಲವು ಸವಾಲುಗಳನ್ನು ನೀವು ಎದುರಿಸುತ್ತಿದ್ದೀರಿ. ಆದರೆ ನಾನು ನಿಮಗೆ ಭರವಸೆ ಕೊಡುತ್ತೇನೆ. ನೀವು ಎದುರಿಸಿದ ಸಂಕಷ್ಟ ನಿಮ್ಮ ಮಕ್ಕಳಿಗೆ ಬರಬಾರದು ಎನ್ನುವ ಕಾರಣದಿಂದ ಹಗಲು ಮತ್ತು ರಾತ್ರಿ ನಾನು ಕೆಲಸ ಮಾಡುತ್ತಿದ್ದೇನೆ. ಇದೇ ಕಾರಣದಿಂದ ಬುಡಕಟ್ಟು ಜನರ ಅಭಿವೃದ್ಧಿ ಮಾಡಬೇಕು ಎಂಬುದಾಗಿ ನಾನು ಬಯಸುತ್ತೇವೆ.  

ನಾವು ಬುಡಕಟ್ಟು ಪ್ರದೇಶದ ಹಿತ ಕಾಪಾಡಲು ಕಠಿಣವಾಗಿ ಕೆಲಸ ಮಾಡುತ್ತೇವೆ ಮತ್ತು ಬುಡಕಟ್ಟು ಸಹೋದರರ ಕಲ್ಯಾಣ ಅಗತ್ಯವಿದೆ. ಏಕೆಂದರೆ ನಿಮ್ಮಲ್ಲರ ಆಶೀರ್ವಾದದಿಂದ ನಾವು ಬೆಳೆದಿದ್ದೇವೆ. ಈ ಪ್ರದೇಶದಲ್ಲಿ ಹಿಂದಿನ ಸರ್ಕಾರಗಳು ಹೇಗೆ ಕೆಲಸ ಮಾಡಿವೆ ಎಂಬ ಸಂಸ್ಕೃತಿಯನ್ನು ನೀವು ನೋಡಿದ್ದೀರಿ. ಆದರೆ ನೀವು ಮಾತನಾಡುವುದಿಲ್ಲ, ನಿಮಗೆ ಎಲ್ಲವೂ ಗೊತ್ತು.

ದೇಶಾದ್ಯಂತ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಮತ್ತು ಹಾಲಿ ಬಿಜೆಪಿ ಸರ್ಕಾರಗಳನ್ನು ಹೋಲಿಕೆ ಮಾಡಿ. ಕಾಂಗ್ರೆಸ್ ಸರ್ಕಾರಗಳು ನಿಮ್ಮ ಉಜ್ವಲ ಭವಿಷ್ಯದ ಬಗ್ಗೆ ಎಂದಿಗೂ ಕಳಕಳಿ ಹೊಂದಿರಲಿಲ್ಲ. ಅವರು ಯಾವಾಗಲೂ ಚುನಾವಣೆಗಳ ಬಗ್ಗೆ ಮಾತ್ರ ಕಳವಳ ಹೊಂದಿದ್ದರು ಮತ್ತು ಚುನಾವಣೆಗೂ ಮುನ್ನ ಅವರು ಭರವಸೆಗಳನ್ನು ನೀಡುತ್ತಿದ್ದರು. ತರುವಾಯ ಅವರು ಸುಳ್ಳು ಭರವಸೆಗಳನ್ನು ಮರೆಯುತ್ತಿದ್ದರು.   

ಆದರೆ ಬಿಜೆಪಿ ಸರ್ಕಾರ ಬುಡಕಟ್ಟು ಜನರ ಕಲ್ಯಾಣಕ್ಕೆ ಪರಮೋಚ್ಚ ಆದ್ಯತೆ ನೀಡಿದೆ. ನಾವು ಬುಡಕಟ್ಟು ಸಹೋದರರು ಮತ್ತು ಸಹೋದರಿಯರನ್ನು ಸಮರ್ಥರನ್ನಾಗಿ ಮಾಡಲು ಮತ್ತು ಶಕ್ತಿಯುತಗೊಳಿಸಲು ಕೆಲಸ ಮಾಡುತ್ತೇವೆ. ನಿಮ್ಮ ಸಂಪೂರ್ಣ ಪ್ರದೇಶ  ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸುತ್ತದೆ ಎಂದು ನಾವು ಖಚಿತಪಡಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಸ್ವಭಾವ ಬುಡಕಟ್ಟು ಸಂಪ್ರದಾಯವನ್ನು ಅಣಕಿಸುವಂತಿತ್ತು. 

ನಾನು ಎಂದಾದರೂ ಸಾಂಪ್ರದಾಯಿಕ ಬುಡಕಟ್ಟು ಪೇಟ ಅಥವಾ ಕೋಟು ಧರಿಸಿದರೆ ಅವರು ಭಾಷಣಗಳಲ್ಲಿ ಉಡುಗೆಯನ್ನು ಗೇಲಿ ಮಾಡುತ್ತಾರೆ. ಕಾಂಗ್ರೆಸ್ ನಾಯಕರಿಗೆ ನಾನು ಹೇಳುತ್ತಿದ್ದು, ರಾಜಕೀಯದ ಅಂಕಗಳಿಗಾಗಿ ಬುಡಕಟ್ಟು ನಾಯಕರು, ಅವರ ಸಂಪ್ರದಾಯಗಳು ಮತ್ತು ಅವರ ಸಂಸ್ಕೃತಿಯನ್ನು ಗೇಲಿ ಮಾಡುತ್ತಿರುವುದು ಸರಿಯಲ್ಲ.  ಬುಡಕಟ್ಟು ಜನತೆ ಇದನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಸರಿಯಾದ ಸಮಯದಲ್ಲಿ ತಕ್ಕ ಉತ್ತರ ಕೊಡುತ್ತಾರೆ.

ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರಗಳು ವಿಷಯಗಳ ಮೌಲ್ಯಗಳನ್ನು ಅರ್ಥಮಾಡಿಕೊಂಡಿಲ್ಲ, ಬಿಜೆಪಿ ಸರ್ಕಾರಗಳು ವನ್ – ಧನ್ ಶಕ್ತಿಯನ್ನು ಅರ್ಥಮಾಡಿಕೊಂಡಿವೆ ಹಾಗೂ ಅರಣ್ಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ನೈಜ ಮೌಲ್ಯ ದೊರೆಯುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರಗಳು ರಚನೆಯಾದರೆ, ಬುಡಕಟ್ಟು ಕಲ್ಯಾಣಕ್ಕೆ ಪರಮೋಚ್ಛ ಆದ್ಯತೆ ನೀಡುತ್ತಾ ಬಂದಿವೆ. ಇತರೆ ಸರ್ಕಾರಗಳಿಗೆ ಹೋಲಿಸಿದರೆ ನಮ್ಮದು ಹೆಚ್ಚಿನ ರೀತಿಯಲ್ಲಿ ಸಕ್ರಿಯ ಸರ್ಕಾರಗಳಾಗಿದ್ದು, ಅರ್ಪಣಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿವೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಸರ್ಕಾರಗಳು ದಶಕಗಳ ಕಾಲ ಆಡಳಿತ ನಡೆಸಿವೆ ಮತ್ತು ಆದರೆ ಬುಡಕಟ್ಟು ಸಹೋದರರು ಮತ್ತು ಸಹೋದರಿಯರ ಸಮಸ್ಯೆಗಳನ್ನು ಬಗೆಹರಿಸಲು ಎಂದಿಗೂ ತಲೆ ಕೆಡಿಸಿಕೊಂಡಿಲ್ಲ. ಆದರೆ ನಾವು ಯಾವಾಗಲೂ ಬುಡಕಟ್ಟು ಸಹೋದರರು ಮತ್ತು ಸಹೋದರಿಯರ ತ್ವರಿತ ಅಭಿವೃದ್ಧಿಪರವಾಗಿದ್ದೇವೆ ಮತ್ತು ಅವರ ಭವಿಷ್ಯದ ಅಭಿವೃದ್ಧಿಗಾಗಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರಗಳು ಈ ಬಗ್ಗೆ ಯೋಚಿಸಲೇ ಇಲ್ಲ. ನಾವು ಗರಿಷ್ಠ ಸೌಲಭ್ಯಗಳನ್ನು ದೊರಕಿಸಿಕೊಡಲು ಅವಿರತವಾಗಿ ಶ್ರಮಿಸುತ್ತಿದ್ದೇವೆ.     

ನಾವು ನಿಮಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದು, ಕಾಂಗ್ರೆಸ್ ನವರು ಇಲ್ಲಿಗೆ ಬರುತ್ತಾರೆ ಎಂದು ನಂಬಿದ್ದೇನೆ ಮತ್ತು ಸುಳ್ಳು ಪ್ರಚಾರ ಮಾಡಲು ಪ್ರಯತ್ನಿಸುತ್ತಾರೆ. ಆದರೆ ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಅವರ ದುರಂಹಕಾರಕ್ಕೆ ತಕ್ಕ ಉತ್ತರ ನೀಡುತ್ತಾರೆ.  

ನಾವು ಹಲವಾರು ಅಭಿಯಾನಗಳನ್ನು ಆರಂಭಿಸಿದ್ದು, ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ, ಅಡುಗೆ ಅನಿಲ, ಶೌಚಾಲಯ ನಿರ್ಮಾಣ, ಮನೆಗಳ ಬಳಿ ವೈದ್ಯಕೀಯ ಕೇಂದ್ರಗಳನ್ನು ಹೊಂದಿರುವ, ಸುಸಜ್ಜಿತ ಮನೆಗಳನ್ನು ಒದಗಿಸಲಾಗುತ್ತಿದೆ ಮತ್ತು ಆಟದ ಮೈದಾನ, ಮಕ್ಕಳಿಗೆ ಶಾಲೆಯಷ್ಟೇ ಅಲ್ಲದೇ ಸೂಕ್ತ ರಸ್ತೆಯನ್ನು ಸಹ ಕಲ್ಪಿಸಲಾಗುತ್ತಿದೆ. ಗುಜರಾತ್ ಗಮನಾರ್ಹ ಕೆಲಸ ಮಾಡಿದೆ ಎಂದು ತಮಗೆ ನೆನಪಿದೆ. ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಗರ ಪ್ರದೇಶಗಳ ಜನತೆ “ಸಂಜೆ ವೇಳೆಯಲ್ಲಿ ವಿದ್ಯುತ್ ದೊರೆತರೆ ನಮಗೆ ಸಂತಸವಾಗುತ್ತದೆ” ಎಂದು ಹೇಳುತ್ತಿದ್ದರು. ಇಂದು ಗುಜರಾತ್ ನಲ್ಲಿ 24 ಗಂಟೆಗಳ ಕಾಲ ವಿದ್ಯುತ್ ದೊರೆಯುತ್ತಿದೆ. ನಾನು ಮುಖ್ಯಮಂತ್ರಿಯಾದೆ ಮತ್ತು ವಿದ್ಯುತ್ ಒದಗಿಸಲು ತೀರ್ಮಾನಿಸಿದೆ. ನಿಮಗೆ ಗೊತ್ತೆ, 24 ಗಂಟೆಗಳ ಕಾಲ ವಿದ್ಯುತ್ ಪಡೆದ ಮೊದಲ ಜಿಲ್ಲೆ ಯಾವುದು ಗೊತ್ತೆ?. ನಿಮಗೆ ನೆನಪಿದೆಯಾ?.

ಗುಜರಾತ್ ನ ದಂಗ್ ಜಿಲ್ಲೆ ಜ್ಯೋತಿ ಗ್ರಾಮ್ ಯೋಜನೆಯಡಿ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯ ಪಡೆಯಿತು. 300 ಬುಡಕಟ್ಟು ಗ್ರಾಮಗಳಿಗೆ ಮತ್ತು ಎಲ್ಲರಿಗೂ ದಿನದ 24 ಗಂಟೆಗಳ ಕಾಲ ವಿದ್ಯುತ್ ಸೌಕರ್ಯ ದೊರಕಿಸಲಾಯಿತು. ಪ್ರತಿಯೊಂದು ಮನೆಗೂ ಅನುಕೂಲ ನೀಡಲಾಗಿದೆ. ಬೇರೆ ನಾಯಕರು ಇದ್ದಿದ್ದರೆ ಅವರು ಅಹಮದಾಬಾದ್ ಅಥವಾ ವಡೋದರದಂತಹ ನಗರವನ್ನು ಆರಿಸಿಕೊಳ್ಳುತ್ತಿದ್ದರು. ಏಕೆಂದರೆ ಆ ಸಂದರ್ಭದಲ್ಲಿ ಅವರ ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಆದರೆ ದಂಗ್ ನಲ್ಲಿ ಅವರ ಛಾಯಾಚಿತ್ರಗಳು ಮುದ್ರಣವಾಗುತ್ತಿತ್ತೆ?. ಆದರೆ ನನಗೆ ನಮ್ಮ ಬುಡಕಟ್ಟು ಜನರ ಕಲ್ಯಾಣ ಪರಮೋಚ್ಛ ಅದ್ಯತೆಯಾಗಿದೆ ಮತ್ತು ಈ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ದೊರೆತ ನಂತರ ಮಕ್ಕಳು ಅಧ್ಯಯನದತ್ತ ಆಸಕ್ತಿ ತೋರಿದರು ಮತ್ತು ಜನರ ಬದುಕು ಬದಲಾಯಿತು. ಇದರಿಂದ ಸ್ಫೂರ್ತಿ ಪಡೆದಿದ್ದ ನಾನು ಪ್ರಧಾನಿಯಾದ ನಂತರ ಭಾರತದಲ್ಲಿ ವಿದ್ಯುತ್ ಸೌಲಭ್ಯವಿಲ್ಲದ ಇಂತಹ ಹಳ್ಳಿಗಳನ್ನು ಲೆಕ್ಕ ಹಾಕಿದೆ.  

ಈ ಜನತೆ ಮಾಡಿದ ಕೆಲಸದಿಂದ ನಮಗೆ ನಾಚಿಕೆಯಾಗುತ್ತದೆ. ಆಗ 18,000 ಹಳ್ಳಿಗಳಲ್ಲಿ ಒಂದೇ ಒಂದು ವಿದ್ಯುತ್ ಕಂಬ ಇರಲಿಲ್ಲ. ನಾವು ಅಭಿಯಾನ ಆರಂಭಿಸಿದೆವು ಮತ್ತು ಇಂದು ಭಾರತದಲ್ಲಿ ವಿದ್ಯುತ್ ಇಲ್ಲದ ಒಂದೇ ಒಂದು ಹಳ್ಳಿಯೂ ಇಲ್ಲ. ಈ ಎಲ್ಲಾ ವಿಷಯಗಳನ್ನು ನಾನು ದಂಗ್ ನಿಂದ ಕಲಿತೆ, ದಂಗ್ ನಲ್ಲಿ ನಡೆದ ಕೆಲಸವನ್ನು ನಿಕಟವಾಗಿ ವೀಕ್ಷಿಸುತ್ತಿದೆ. ಆದ್ದರಿಂದ ಬುಡಕಟ್ಟು ಪ್ರದೇಶ ನನಗೆ ಸಾರ್ವಜನಿಕ ಬದುಕಿನಲ್ಲಿ ಶಿಕ್ಷಣದ ಬಹುದೊಡ್ಡ ಮಾಧ್ಯಮವಾಗಿದೆ. ಬುಡಕಟ್ಟು ಪ್ರದೇಶದಲ್ಲಿ ಕೃಷಿ ಅಬಿವೃದ್ಧಿಪಡಿಸಲು ಪ್ರಯತ್ನಿಸಿದ್ದು, ನಾವು ವಲ್ಸಾದ್ ಜಿಲ್ಲೆಯಲ್ಲಿ ಬ್ಯಾರಿ ಯೋಜನೆ ಆರಂಭಿಸಿದ್ದು ನಿಮಗೆ ನೆನಪಿರಬಹುದು.  

ನನ್ನ ಬುಡಕಟ್ಟು ಸಹೋದರರೇ ಮತ್ತು ಸಹೋದರಿಯರೇ ಒಂದು ಎಕರೆ, ಎರಡು ಎಕರೆ ಭೂಮಿಗಿಂತ ಹೆಚ್ಚು ಭೂಮಿ ಹೊಂದಿಲ್ಲ. ಅದು ಕೂಡ ಗುಂಡಿಗಳಿರುವ ಭೂಮಿ. ಆಗ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ?. ನೀವು ಕಟ್ಟಪಟ್ಟು ಧಾನ್ಯಗಳನ್ನು ಬೆಳೆಯುತ್ತೀರಿ, ಆದರೆ ನಿಮ್ಮ ಹಸಿವು ನೀಗಿಸಲು ಇದು ಸಾಕಾಗುವುದಿಲ್ಲ. ಈ ಕಳವಳವನ್ನು ಅರ್ಥಮಾಡಿಕೊಂಡು ನಾವು ಬಾರಿ ಯೋಜನೆಯನ್ನು ಜಾರಿಗೆ ತಂದೆವು ಮತ್ತು ಈಗಲೂ ನಾವು ವಲ್ಸಾದ್ ಪ್ರದೇಶಗಳಿಗೆ ತೆರಳಿದರೆ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಸಣ್ಣ ಭೂಮಿಯಲ್ಲೂ ಗೋಡಂಬಿ ಬೀಜಗಳನ್ನು ಬೆಳೆಯುತ್ತಿದ್ದಾರೆ. ಅವರು ಮಾವು, ಸೀಬೆ, ನಿಂಬೆಹಣ್ಣು ಮತ್ತು ಸಪೋಟ ಬೆಳೆಯುತ್ತಿದ್ದಾರೆ. ಗೋಡಂಬಿ ಬೀಜ ಬೆಳೆಯುವುದರಲ್ಲಿ ಗೋವಾದೊಂದಿಗೆ ಸ್ಪರ್ಧಿಸುತ್ತಿದ್ದಾರೆ.

ಬಾರಿ ಯೋಜನೆ ಜನರ ಬದುಕಿನಲ್ಲಿ ಬದಲಾವಣೆ ತಂದಿದೆ ಮತ್ತು ಇದರ ಪರಿಣಾಮ ದೇಶಾದ್ಯಂತ ವ್ಯಾಪಿಸಿದೆ. ನಮ್ಮ ಬುಡಕಟ್ಟು ಜನತೆ ಬಂಜರು ಭೂಮಿಯಲ್ಲೂ ಹಣ್ಣುಗಳನ್ನು ಉತ್ಪಾದಿಸುತ್ತಿದ್ದಾರೆ. ಅವರು ಬಿದಿರು ಬೆಳೆಯುವುದನ್ನು ಆರಂಭಿಸಿದರು. ಆಗಿನ ಸಂದರ್ಭದಲ್ಲಿ ನಮ್ಮ ರಾಷ್ಟ್ರಪತಿಯಾಗಿದ್ದವರು ಶ್ರೀ ಅಬ್ದುಲ್ ಕಲಾಂ. ಅವರು ಈ ಪ್ರದೇಶವನ್ನು ನೋಡಬೇಕು ಎಂದು ಬಯಸಿದ್ದರು ಹಾಗೂ ಅವರನ್ನು ನಾನು ಆಹ್ವಾನಿಸಿದ್ದೆ. ಅಂದು ಅವರ ಹುಟ್ಟುಹಬ್ಬ. ಅವರು ಯಾವುದೇ ಸೌಲಭ್ಯ ಪಡೆಯಲಿಲ್ಲ ಮತ್ತು ವಲ್ಸಾದ್ ಜಿಲ್ಲೆಯ ಬುಡಕಟ್ಟು ಪ್ರದೇಶಗಳಿಗೆ ನೇರವಾಗಿ ತೆರಳಿದರು. ಅಲ್ಲಿನ ಬ್ಯಾರಿ ಯೋಜನೆಯನ್ನು ಕಣ್ಣಾರೆ ಕಂಡು ಅಪಾರವಾಗಿ ಕೊಂಡಾಡಿದರು.

ಬಾರಿ ಯೋಜನೆ ಬುಡಕಟ್ಟು ಜನರ ಬದುಕಿನಲ್ಲಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ನಮ್ಮ ಬುಡಕಟ್ಟು ಬಂಧುಗಳ ಸಮಸ್ಯೆಯಾದರೂ ಹೇಗಿದೆ ಎಂದರೆ ಸಾಕಷ್ಟು ಮಳೆಯಾದರೂ ಸಂಗ್ರಹಿಸಲು ಸಾಧ್ಯವಾಗದ ನೀರು ಹರಿದುಹೋಗುತ್ತಿತ್ತು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುತ್ತಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಈ ಸಮಸ್ಯೆಯತ್ತ ಗಮನಕೊಡಲು ಸಾಧ್ಯವಾಗಿರಲಿಲ್ಲ. ಅಂತಹ ಕೆಲವು ನಾಯಕರು ತಮ್ಮ ಹಳ್ಳಿಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುತ್ತಿದ್ದರು. ಆದರೆ ನಾನು ಕಂಡಂತೆ ಆ ನೀರಿನ ತೊಟ್ಟಿಗಳು ಒಂದು ಬಾರಿಯೂ ತುಂಬಿರಲಿಲ್ಲ. 

ಆ ರೀತಿಯ ದಿನಗಳನ್ನು ನಾನು ನೋಡಿದ್ದೇನೆ. ನಾನು ಮುಖ್ಯಮಂತ್ರಿಯಾದ ನಂತರ ತೊಟ್ಟಿಗಳು ತುಂಬುವುದನ್ನು ಖಚಿತಪಡಿಸಿಕೊಂಡಿದ್ದೇನೆ. ಬುಡಕಟ್ಟು ಜನರತ್ತ ನೋಡುವ ಅಭ್ಯಾಸವನ್ನು ಯಾವಾಗಲೂ ಬೆಳೆಸಿಕೊಂಡಿದ್ದೇನೆ. ವಿದ್ಯುತ್ ಒದಗಿಸುವುದು, ನೀರು ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಎಲ್ಲಿ ಅಗತ್ಯವಿದೆಯೋ ಅಲ್ಲಿ ಕೈಪಂಪುಗಳ ವ್ಯವಸ್ಥೆ ಮಾಡಿದೆ ಮತ್ತು ಇದು ಎಲ್ಲೆಡೆ ಚರ್ಚೆಗೆ ಕಾರಣವಾಯಿತು.  ಇಂದು ನಾವು ಜಲಾಗಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ದೂರದ ಬುಡಕಟ್ಟು ಪ್ರದೇಶದ ಹಳ್ಳಿಗಳಿಗೆ ಏತ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವ ಮತ್ತು ಸುರಂಗ ಕಾಲುವೆಗಳ ಜಾಲವನ್ನು ಅಭಿವೃದ್ಧಿಪಡಿಸಲಾಯಿತು. ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಿಗೆ ದಾಬ-ಕಂಥಾ ಕಾಲುವೆಗೆ ಏತನೀರಾವರಿ ಮೂಲಕ ನೀರು ಹರಿಸಲಾಯಿತು. ನಂತರ ಈ ಪ್ರದೇಶದಲ್ಲಿ ಮೂರು ವಿಧದ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಇದರಿಂದ ನಮ್ಮ ರೈತ ಸಹೋದರರು ನೂರಾರು ಕೋಟಿ ರೂಪಾಯಿ ಮೊತ್ತದ ಲಾಭ ಪಡೆಯುವಂತಾದರು. ಬುಡಕಟ್ಟು ಪ್ರದೇಶದ ಸಹೋದರಿಯರು ಮತ್ತು ತಾಯಂದಿರಿಗೆ ನೀರು ತಲುಪುತ್ತಿರುವುದನ್ನು ಖಚಿತಪಡಿಸಿಕೊಂಡೆವು. ಇದರಿಂದ ನೀರಿನ ಸೌಲಭ್ಯದಲ್ಲಿ ಸುಧಾರಣೆಯಾಯಿತು.    

ಒಂದು ಕಾಲದಲ್ಲಿ ಗುಜರಾತ್ ನಲ್ಲಿ 100 ಮನೆಗಳ ಪೈಕಿ 25 ಮನೆಗಳಿಗೆ ಮನೆಯೊಳಗೆ ನೀರು ದೊರೆಯುತ್ತಿತ್ತು. ಕೈಪಂಪುಗಳು ದೂರದಲ್ಲಿರುತ್ತಿದ್ದವು. ಇಂದು ಕಠಿಣ ಪರಿಶ್ರಮದ ಕಾರಣ ಗುಜರಾತ್ ನ ಭೂಪೇಂದ್ರಭಾಯ್ ಅವರ ಸರ್ಕಾರ 100ಕ್ಕೆ 100 ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗಿವೆ. 

ಸಹೋದರರೇ ಮತ್ತು ಸಹೋದರಿಯರೇ,

ಬುಡಕಟ್ಟು ಪ್ರದೇಶದ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ನಾವು ವನ್ ಬಂಧು ಕಲ್ಯಾಣ್ ಯೋಜನೆಯನ್ನು ಆರಂಭಿಸಿದೆವು. ಇಂದು ಮಂಗು ಭಾಯಿ ಅವರು ನಮ್ಮ ಜೊತೆ ಇದ್ದಾರೆ. ಇಂದು ಇದನ್ನು ಹೇಳಲು ನನಗೆ ಹೆಮ್ಮೆಯಾಗುತ್ತಿದ್ದು, ಅವರು ಇಂದು ಮಧ್ಯಪ್ರದೇಶ ರಾಜ್ಯಪಾಲರಾಗಿದ್ದಾರೆ. ಮಂಗು ಭಾಯಿ ಅವರು ಗುಜರಾತ್ ನ ಬುಡಕಟ್ಟು ತಾಯಿಯ ಪುತ್ರ. ಅವರು ಮಧ್ಯ ಪ್ರದೇಶದ ರಾಜ್ಯಪಾಲರಾಗಿ ಕಲ್ಯಾಣ ಸಂಬಂಧಿತ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಅದೃಷ್ಟವೆಂದರೆ ಅವರು ಇಂತಹ ಪ್ರಮುಖ ಕಾರ್ಯಕ್ರಮಕ್ಕೆ ಬಂದಿದ್ದಾರೆ ಮತ್ತು ನಮ್ಮನ್ನು ಆಶಿರ್ವದಿಸಿದ್ದಾರೆ. 

ಮಂಗು ಭಾಯಿ ಅವರು ಇಲ್ಲಿ ಸಚಿವರಾಗಿದ್ದಾಗ ಅವರು ತಮ್ಮ ಸಂಪೂರ್ಣ ಬದುಕನ್ನು ಬುಡಕಟ್ಟು ಜನರ ಕಲ್ಯಾಣಕ್ಕೆ ಸಮರ್ಪಿಸಿಕೊಂಡಿದ್ದರು ಮತ್ತು ಅವರು ಪರಿಣಾಮಕಾರಿ ನಾಯಕರು. ಭಾರತೀಯ ಜನತಾ ಪಾರ್ಟಿ ಇಂತಹ ಪ್ರಮುಖ ನಾಯಕರನ್ನು ರೂಪಿಸಿದೆ ಮತ್ತು ಅವರು ದೇಶದ ಬುಡಕಟ್ಟು ಸಮಾಜದ ಹೆಮ್ಮೆಯಾಗಿದ್ದಾರೆ. ಮಂಗು ಭಾಯಿ ಅವರ ನಾಯಕತ್ವದಡಿ ಯೋಜನೆಗಳನ್ನು ಆರಂಭಿಸಿದ ಪರಿಣಾಮ ಇಂದು ತಾಪಿ ಜಿಲ್ಲೆಯ ಹಲವಾರು ನಮ್ಮ ಹೆಣ್ಣು ಮಕ್ಕಳು ಶಾಲೆಗಳು ಮತ್ತು ಕಾಲೇಜುಗಳಿಗೆ ಹೋಗಲು ಆರಂಭಿಸಿದ್ದಾರೆ. ನಮ್ಮ ಬುಡಕಟ್ಟು ಗಂಡು ಮಕ್ಕಳು ಮತ್ತು ಹೆಣ‍್ಣು ಮಕ್ಕಳು ವಿಜ್ಞಾನ ಅಧ್ಯಯನ ಮಾಡುತ್ತಿದ್ದಾರೆ ಮತ್ತು ವೈದ್ಯರು ಮತ್ತು ಇಂಜಿನಿಯರ್ ಗಳು ಅಥವಾ ನರ್ಸಿಂಗ್ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈಗ ಅವರು ವಿದೇಶಗಳಿಗೂ ತೆರಳುತ್ತಿದ್ದಾರೆ. 20 ರಿಂದ 25 ವರ್ಷಗಳ ಹಿಂದೆ ಒಟ್ಟು ಬುಡಕಟ್ಟು ಪ್ರದೇಶದಲ್ಲಿ ಕೆಲವು ಬುಡಕಟ್ಟು ಆಶ್ರಮ ಶಾಲೆಗಳಿದ್ದವು.  ಆಗ ಆ ಶಾಲೆಗಳಲ್ಲಿ ವಿಜ್ಞಾನ ವಿಷಯಗಳಿರಲಿಲ್ಲ. 10 ಮತ್ತು 12ನೇ ತರಗತಿಗಳಲ್ಲಿ ವಿಜ್ಞಾನ ಬೋಧನಾ ಸಿಬ್ಬಂದಿ ಇರಲಿಲ್ಲ. ಇದೀಗ ನಮ್ಮ ಬುಡಕಟ್ಟು ಮಕ್ಕಳು ಇಂಜಿನಿಯರ್ ಗಳು ಮತ್ತು ವೈದ್ಯರಾಗುತ್ತಿದ್ದಾರೆ. ಈ ಸಮಸ್ಯೆಯಿಂದ ನಾನು ಎಲ್ಲರನ್ನೂ ಹೊರ ತಂದಿದ್ದೇನೆ. ಇಂದು ಮಕ್ಕಳು ವೈದ್ಯರು, ಇಂಜಿನಿಯರ್ ಗಳಾಗುತ್ತಿದ್ದು, ಶಿಕ್ಷಣದ ಮೂಲಕ ದೇಶಕ್ಕೆ, ಸಮಾಜಕ್ಕೆ, ಬುಡಕಟ್ಟು ಜನಾಂಗಕ್ಕೆ ಕೀರ್ತಿ ತರುತ್ತಿದ್ದಾರೆ.  ನಾವು ಈ ಕೆಲಸವನ್ನು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಇಂತಹ ವಿಷಯಗಳ ಬಗ್ಗೆ ಪರಿಶೀಲನೆಯನ್ನೇ ಮಾಡುತ್ತಿರಲಿಲ್ಲ.

ಸಹೋದರರೇ ಮತ್ತು ಸಹೋದರಿಯರೇ,

ಕಾಂಗ್ರೆಸ್ ನ ಆಲೋಚನೆ ಮತ್ತು ಚಿಂತನೆ ವಿಭಿನ್ನ. ನಾವು ಹಳೆಯ ಮಾದರಿಯ ಚಿಂತನೆ ಮತ್ತು ಕಾರ್ಯಶೈಲಿಯನ್ನು ಬದಲಿಸಿದ್ದೇವೆ. ನಿನ್ನೆ ಗುಜರಾತ್ ನ ಗಾಂಧಿ ನಗರದಲ್ಲಿ “ಶಾಲೆಗಳ ಉತ್ಕೃಷ್ಟ ಅಭಿಯಾನ” ಆರಂಭಿಸಿದ್ದೇವೆ. ಶಾಲೆಗಳಲ್ಲಿ ವಿಶ್ವದರ್ಜೆಯ ತಂತ್ರಜ್ಞಾನ ಪಡೆಯುವ ಗುರಿ ಹೊಂದಿದ್ದೇವೆ. ಗುಜರಾತ್ ನ ಬುಡಕಟ್ಟು ಪ್ರದೇಶದಲ್ಲಿ ಇಂತಹ 4000 ಶಾಲೆಗಳು ಬರಲಿದ್ದು, ನನ್ನ ಬುಡಕಟ್ಟು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಅವರು ಗುಣಮಟ್ಟದ ಶಿಕ್ಷಣ ಪಡೆಯಲಿದ್ದು, ಜಗತ್ತಿನಲ್ಲಿ ಉತ್ತಮ ಯಶಸ್ಸು ಸಾಧಿಸಲಿದ್ದಾರೆ. ತಮಗೆ ಬುಡಕಟ್ಟು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ಮೇಲೆ ಸಂಪೂರ್ಣ ವಿಶ್ವಾಸವಿದೆ.

ಕಳೆದ 20 ವರ್ಷಗಳಲ್ಲಿ ನಾವು ಬುಡಕಟ್ಟು ಪ್ರದೇಶಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಿಸಿದ್ದೇವೆ. ನಾವು ಏಕಲವ್ಯ ಮಾದರಿಯ ಶಾಲೆಗಳು ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆಗಳನ್ನು ಆರಂಭಿಸಿದ್ದು, ಅವರೆಲ್ಲರೂ ಉತ್ತಮ ಶಿಕ್ಷಣ ಪಡೆಯಲಿ ಎಂಬುದು ನಮ್ಮ ಉದ್ದೇಶವಾಗಿದೆ. ನಾವು ಅವರಿಗೆ ಕ್ರೀಡಾ ಚಟುವಟಿಕೆಗೂ ವ್ಯವಸ್ಥೆ ಮಾಡಿದ್ದೇವೆ. ನಾವು ಬುಡಕಟ್ಟು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗಾಗಿ ಖೇಲ್ ಕುಂಭ್ ಕ್ರೀಡಾ ಕೂಟ ಆಯೋಜಿಸುತ್ತಿದ್ದೇವೆ. ಅವರು ವಿಜಯಶಾಲಿಯಾಗಿಯೂ ಹೊರ ಹೊಮ್ಮುತ್ತಿದ್ದಾರೆ. ನಾವು ಬುಡಕಟ್ಟು ಮಕ್ಕಳಿಗಾಗಿ ಬಿರ್ಸಾ ಮುಂಡಾ ಬುಡಕಟ್ಟು ವಿಶ್ವವಿದ್ಯಾಲಯವನ್ನು ನರ್ಮಾದದಲ್ಲಿ ಮತ್ತು ಗೋಧ್ರಾದಲ್ಲಿ ಗೋವಿಂದ ಗುರು ವಿಶ್ವವಿದ್ಯಾಲಯವನ್ನು ಆರಂಭಿಸಿದ್ದೇವೆ.

ಬುಡಕಟ್ಟು ಮಕ್ಕಳ ವಿದ್ಯಾರ್ಥಿ ವೇತನದ ಆಯವ್ಯಯ ಮೊತ್ತವನ್ನು ದ್ವಿಗುಣಗೊಳಿಸಿದ್ದೇವೆ. ಏಕಲವ್ಯ ಮಾದರಿ ಶಾಲೆಗಳ ಸಂಖ್ಯೆಯನ್ನು ಸಹ ಹೆಚ್ಚಿಸಿದ್ದೇವೆ. ಒಂದು ವೇಳೆ ಬುಡಕಟ್ಟು ಮಕ್ಕಳು ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಅಥವಾ ಉನ್ನತ ಶಿಕ್ಷಣ ಪಡೆಯಲು ಬಯಸಿದರೆ ನಾವು ಅವರಿಗೆ ಹಣಕಾಸು ನೆರವು ನೀಡುತ್ತಿದ್ದೇವೆ.

ಜಗತ್ತಿನಾದ್ಯಂತ ನಮ್ಮ ಬುಡಕಟ್ಟು ಜನ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಪಾರದರ್ಶಕತೆಯನ್ನು ತಂದಿದ್ದು, ಭ್ರಷ್ಟಾಚಾರ ಮುಕ್ತ ಕೆಲಸ ಮಾಡುತ್ತಿದ್ದೇವೆ ಮತ್ತು ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಬುಡಕಟ್ಟು ಮಕ್ಕಳು ಭರಪೂರ ಅವಕಾಶಗಳನ್ನು ಹುಡುಕುತ್ತಿದ್ದಾರೆ.  

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತ್ ನಲ್ಲಿ ವನ್ ಬಂಧು ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇವೆ. ಈ ಕಾರ್ಯಕ್ರಮವನ್ನು ಭೂಪೇಂದ್ರಭಾಯಿ ಅವರು ಈಗಲೂ ಮುನ್ನಡೆಸುತ್ತಿದ್ದಾರೆ. ಉಮರ್ ಗಾಂವ್ ನ ಬುಡಕಟ್ಟು ಗ್ರಾಮಗಳಿಂದ ಅಂಬಾಜಿ ವರೆಗೆ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ.

ಇದರ ಎರಡನೇ ಹಂತದ ಕಾಮಗಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ವೆಚ್ಚ ಮಾಡಲಾಗಿದೆ. ಇಂತಹ ಮಕ್ಕಳಿಗೆ ಹಲವಾರು ಹೊಸ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಿದ್ದು, ಒಂದಾದ ನಂತರ ಮತ್ತೊಂದು ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸ್ ಗಳನ್ನು ತೆರೆಯಲಾಗಿದೆ. ಈ ಯೋಜನೆಯಡಿ ಬುಡಕಟ್ಟು ಜನರಿಗಾಗಿ 2.5 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಗುಜರಾತ್ ನಲ್ಲಿ 2.5 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ನಮ್ಮ ಬುಡಕಟ್ಟು ಸಹೋದರರು ಸುಸಜ್ಜಿತ ಮನೆಗಳನ್ನು ಪಡೆಯುವುದಷ್ಟೇ ಅಲ್ಲದೇ ಗುತ್ತಿಗೆ ಆಧಾರದ ಮೇಲೆ ಭೂಮಿ ಮತ್ತು ಅದರ ಮಾಲೀಕತ್ವವನ್ನು ಸಹ ಪಡೆಯುತ್ತಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಐದರಿಂದ ಏಳು ವರ್ಷಗಳಲ್ಲಿ ನಮ್ಮ ಬುಡಕಟ್ಟು ಪ್ರದೇಶಗಳಲ್ಲಿ ಆರು ಲಕ್ಷ ಮನೆಗಳನ್ನು ಮತ್ತು ಒಂದು ಲಕ್ಷ ಬುಡಕಟ್ಟು ಕುಟುಂಬಗಳಿಗೆ ಭೂಮಿಯನ್ನು ಗುತ್ತಿಗೆ ಮೂಲಕ ದೊರಕಿಸಿಕೊಡಲಾಗಿದೆ. ನನಗೆ ಈಗಲೂ ನೆನಪಿದ್ದು, ಬುಡಕಟ್ಟು ಸಮಾಜದಲ್ಲಿ ಅಪೌಷ್ಟಿಕತೆ ಹಾವಳಿ ಇದೆ. ಇದನ್ನು ಸರಿಪಡಿಸಲು ನನಗೆ ಅವಕಾಶ ಕಲ್ಪಿಸಿದ್ದೀರಿ. ನಮ್ಮ 11, 12 ಅಥವಾ 13 ವರ್ಷದ ಹೆಣ್ಣು ಮಕ್ಕಳ ದೇಹ ವಯಸ್ಸಿಗೆ ಅನುಗುಣವಾಗಿ ಅಭಿವೃದ್ಧಿಯಾಗಿರಲಿಲ್ಲ. ಹಾಗಾಗಿ ನಮಗೆ ಅವರ ಬಗ್ಗೆ ಕಳಕಳಿ ಇತ್ತು ಮತ್ತು ಪ್ರತಿಯೊಂದು ಹಳ್ಳಿಗಳ ಮಕ್ಕಳಿಗೆ ಸಂಜೀವಿನಿ ಧೂಧ್ ಯೋಜನೆ ಮೂಲಕ ಹಾಲು ಮತ್ತು ಆಹಾರ ಧಾನ್ಯಗಳನ್ನು ವಿತರಿಸಿದ್ದು ನನಗೆ ನೆನಪಿದೆ.  

ನಾವು 1,500 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನು ತೆರೆದಿದ್ದೇವೆ ಮತ್ತು ಜೀವಕೋಶ ರಕ್ತಹೀನತೆ ಕುರಿತು ದೇಶಾದ್ಯಂತ ಅಭಿಯಾನ ನಡೆಸಿದ್ದು ನನ್ನ ಸ್ಮರಣೆಯಲ್ಲಿದೆ. ನಮ್ಮ ಬುಡಕಟ್ಟು ಸಮುದಾಯ ಶತಮಾನಗಳಿಂದಲೂ ಇಂತಹ ಸಮಸ್ಯೆಯಲ್ಲಿ ಸಿಲುಕಿದ್ದು, ಜೀವಕೋಶ ರಕ್ತಹೀನತೆಗೆ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಿಕೊಂಡಿದ್ದೇವೆ. ಇದಕ್ಕಾಗಿ ನಾವು ಭಗೀರಥ್ ಯೋಜನೆಯನ್ನು ಪ್ರಾರಂಭಿಸಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ರೋಗಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ ಮತ್ತು ಅದು ಕೂಡ ಆದಷ್ಟು ತ್ವರಿತವಾಗಿ. ಮಕ್ಕಳು ಮತ್ತು ಗರ್ಭೀಣಿಯರಿಗೆ ಪೌಷ್ಟಿಕ ಆಹಾರ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಪೋಷಣ್ ಯೋಜನೆಯನ್ನು ಆರಂಭಿಸಿದ್ದೇವೆ. ನಾವು ಸಹಸ್ರಾರು ರೂಪಾಯಿ ಮೊತ್ತದ ಕಿಟ್ ಗಳನ್ನು ನೀಡಿ ಅವರಿಗೆ ಸಹಾಯ ಮಾಡುತ್ತಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಇಂದ್ರಧನುಷ್ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ತಾಯಂದಿರು, ಸಹೋದರಿಯರು, ಮತ್ತು ಮಕ್ಕಳು ಪಾರ್ಶ್ವವಾಯುವಿಗೆ ತುತ್ತಾಗದಂತೆ ನೋಡಿಕೊಳ್ಳಲು ಲಸಿಕೆ ನೀಡುತ್ತಿದ್ದೇವೆ.   

2.5 ವರ್ಷಕ್ಕೂ ಹೆಚ್ಚಿನ ಅವಧಿಯ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ನಾವು ಹಳ‍್ಳಿಗಳ ಬಡವರು ಮತ್ತು ಅರಣ್ಯವಾಸಿಗಳು ಹಾಗೂ ಮಧ್ಯಮವರ್ಗದವರಿಗೆ ಉಚಿತ ಪಡಿತರ ವಿತರಿಸಿದ್ದೇವೆ. ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಮಾಡಲಾಯಿತು. ಪ್ರಪಂಚದಾದ್ಯಂತ ಜನತೆ ಈ ಅಂಕಿ ಅಂಶಗಳನ್ನು ತಿಳಿದುಕೊಂಡು ಅಚ್ಚರಿಪಡುತ್ತಿದ್ದಾರೆ!. ಬಡವರು ಹಸಿವಿನಿಂದ ಇರಲು ಬಿಡುವುದಿಲ್ಲ. ಇದಕ್ಕಾಗಿ ನಾವು ಅಂತಹ ವ್ಯವಸ್ಥೆ ಮಾಡಿದ್ದೇವು ಮತ್ತು ಬಡವರಿಗಾಗಿ 3 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಯಾವುದೇ ಕುಟುಂಬ ಹಸಿವಿನಿಂದ ಇರಬಾರದು ಮತ್ತು ಯಾವುದೇ ಮಗು ಹಸಿವಿನಿಂದ ಮಲಗಬಾರದು. ಹೀಗಾಗಿ ನಾವು ಅವರ ಬಗ್ಗೆ ಕಾಳಜಿ ವಹಿಸಿದೆವು.

ಉರುವಲು ಬಳಸಿ ಅಡುಗೆ ಮಾಡುವಾಗ ನಮ್ಮ ತಾಯಂದಿರು ಮತ್ತು ಸಹೋದರಿಯರು ಹೊಗೆಯಿಂದ ತೊಂದರೆಗೆ ಒಳಗಾಗುತ್ತಿದ್ದರು. ಕೆಲವೊಮ್ಮೆ ಅವರು ತಮ್ಮ ದೃಷ್ಟಿಯನ್ನು ಸಹ ಕಳೆದುಕೊಳ್ಳುತ್ತಿದ್ದರು. ಆದ್ದರಿಂದ ನಾವು ಅಡುಗೆ ಅನಿಲ ಮತ್ತು ಅನಿಲ ಸಿಲೆಂಡರ್ ಗಳನ್ನು ಒದಗಿಸಿದೆವು. ನಮ್ಮ ಭೂಪೇಂದ್ರಭಾಯಿ ಅವರನ್ನು ಅಭಿನಂದಿಸುತ್ತೇನೆ, ಏಕೆಂದರೆ ದೀಪಾವಳಿ ಸಂದರ್ಭದಲ್ಲಿ ಅವರು ಎರಡು ಅಡುಗೆ ಸಿಲಿಂಡರ್ ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ನಮ್ಮ ತಾಯಂದಿರು ಮತ್ತು ಸಹೋದರರ ಆಶೀರ್ವಾದದಿಂದ ನಾವು ಹೊಸದನ್ನು ಸಾಧಿಸುವ ಶಕ್ತಿ ಪಡೆಯುತ್ತೇವೆ ಮತ್ತು ಇದರಿಂದ ಸಹಸ್ರಾರು ಕುಟುಂಬಗಳು ಪ್ರಯೋಜನ ಪಡೆಯುತ್ತವೆ.  

ನಾವು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ನೀವು ಯಾವುದೇ ರೋಗದಿಂದ ಬಳಲುತ್ತಿದ್ದರೆ ನಿಮ್ಮ 5 ಲಕ್ಷ ರೂಪಾಯಿವರೆಗಿನ ವೈದ್ಯಕೀಯ ಬಿಲ್ ಅನ್ನು ಪಾವತಿಸುತ್ತದೆ. ನೀವು ಪ್ರತಿ ವರ್ಷ ಕೇವಲ ಒಂದು ಲಕ್ಷ ರೂಪಾಯಿ ಅಲ್ಲ, ಐದು ಲಕ್ಷ ರೂಪಾಯಿ ಸೌಲಭ‍್ಯ ಪಡೆಯುತ್ತೀರಿ. ನೀವು ಇಂದಿನಿಂದ ಪ್ರಾರಂಭಿಸಿ 40 ವರ್ಷದವರೆಗೆ ಬದುಕಿದರೆ ನಿಮ್ಮ ಕಾಯಿಲೆಗಳಿಗೆ ಪ್ರತಿವರ್ಷ ಐದು ಲಕ್ಷ ರೂಪಾಯಿ ವಿಮಾ ಸೌಲಭ್ಯ ಬಳಸಲು ಇದರಿಂದ ಸಾಧ್ಯವಾಗಲಿದೆ.  ಆಯುಷ್ಮಾನ್ ಯೋಜನೆ ಚಿನ್ನದಂತೆ ಕೆಲಸ ಮಾಡುತ್ತದೆ. ಎಲ್ಲಿಯೇ ಆದರೂ ನೀವು ಇದನ್ನು ಕೊಂಡೊಯ್ಯಬಹುದಾಗಿದ್ದು, ಚಿಕಿತ್ಸೆಗೆ ಇದು ಹಣ ಪಾವತಿಸುತ್ತದೆ, ಶಸ್ತ್ರಚಿಕಿತ್ಸೆ ಅಗತ್ಯಬಿದ್ದರೆ ಅದಕ್ಕೂ ಸಹ ನೆರವಾಗುತ್ತದೆ. 

ಜೊತೆಗೆ ಈ ಯೋಜನೆಯ ಸೌಲಭ್ಯವನ್ನು ನೀವು ತಾಪಿ, ಪ್ಯಾರಾ ಅಥವಾ ಸೂರತ್ ನಲ್ಲಿ ಪಡೆಯಬೇಕು ಎಂಬುದು ಅನಿವಾರ್ಯವಲ್ಲ. ನೀವು ಕೊಲ್ಕತ್ತಾ, ಮುಂಬೈ, ದೆಹಲಿ ಸೇರಿದಂತೆ ಎಲ್ಲಿಗೆ ಬೇಕಾದರೂ ಈ ಚಿನ್ನದ ಕಾರ್ಡ್ ನ್ನು ಕೊಂಡೊಯ್ಯಬಹುದು. ಸುಮ್ಮನೆ ಕಾರ್ಡ್ ತೋರಿಸಿದರೆ ಆಸ್ಪತ್ರೆಯ ಬಾಗಿಲು ತೆರೆಯುತ್ತದೆ. ಸಹೋದರರೇ ಈ ಕೆಲಸವನ್ನು ನಾವು ಬಡವರಿಗಾಗಿ ಮಾಡಿದ್ದೇವೆ. ನಮ್ಮ ಬುಡಕಟ್ಟು ಸಮಾಜ ಯಾವುದೇ ಸಮಸ್ಯೆಗೆ ಸಿಲುಕಬಾರದು ಎಂಬುದು ನಮಗೆ ಖಚಿತವಾಗಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಬುಡಕಟ್ಟು ಜನಾಂಗ ದೇಶಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಂದಿ ಉಡುಗೊರೆ ಕೊಟ್ಟಿದ್ದಾರೆ. ಬುಡಕಟ್ಟು ನಾಯುಕ ಬಿರ್ಸಾ ಮುಂಡಾ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಆದರೆ ಹಿಂದಿನ ಸರ್ಕಾರಗಳು ಇವರನ್ನು ಮರೆತಿದ್ದವು. ಹಲವಾರು ಮಕ್ಕಳು ಇದೇ ಮೊದಲ ಬಾರಿಗೆ ಬಿರ್ಸಾ ಮುಂಡಾ ಅವರ ಹೆಸರನ್ನು ಕೇಳುತ್ತಿರಬಹುದು.  ಪ್ರತಿವರ್ಷ ನವೆಂಬರ್ 15 ರಂದು ಬುಡಕಟ್ಟು ಹೆಮ್ಮೆಯ ದಿನದಂದು ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಆಚರಿಸಲು ನಿರ್ಧರಿಸಿದ್ದೇವೆ.

ಶತಮಾನಗಳಿಂದ ಬುಡಕಟ್ಟು ಸಮಾಜಗಳು ಅಸ್ತಿತದಲ್ಲಿವೆ, ಭಗವಾನ್ ರಾಮನ ಕಾಲದಲ್ಲಿ ಶಬರಿ ಅಸ್ತಿತ್ವದಲ್ಲಿದ್ದಳು. ಸ್ವಾತಂತ್ರ್ಯ ದೊರೆತ ನಂತರ ಅಟಲ್ ಬಿಹಾರಿ ವಾಜಪೇಯಿ ಆಡಳಿತ ಅಸ್ಥಿತ್ವಕ್ಕೆ ಬರುವ ತನಕ ಯಾವುದೇ ಸಚಿವಾಲಯ ಬುಡಕಟ್ಟು ಕಲ್ಯಾಣಕ್ಕಾಗಿ ಕೆಲಸ ಮಾಡಿರಲಿಲ್ಲ. ಮೊದಲ ಬಾರಿಗೆ ಬುಡಕಟ್ಟು ಸಮುದಾಯಕ್ಕಾಗಿ ಬಿಜೆಪಿ ಸರ್ಕಾರ ಪ್ರತ್ಯೇಕ ಸಚಿವಾಲಯ ರಚಿಸಿತು ಮತ್ತು ಬುಡಕಟ್ಟು ಜನರಿಗಾಗಿ ಪ್ರತ್ಯೇಕ ಆಯವ್ಯಯ ನಿಗದಿ ಮಾಡಿತು. ಹೀಗೆ ಆದಿವಾಸಿಗಳ ಕಡೆ ಗಮನರಿಸುವಂತಾಯಿತು. ಕಾಂಗ್ರೆಸ್ ಇದನ್ನು ಮಾಡಬಹುದಾಗಿತ್ತು, ಆದರೆ ಮಾಡಲಿಲ್ಲ. ಬಿಜೆಪಿ ಆಡಳಿತಕ್ಕೆ ಬಂತು, ನಂತರ ಪ್ರತ್ಯೇಕ ಸಚಿವಾಲಯ ಮತ್ತು ಪ್ರತ್ಯೇಕ ಆಯವ್ಯಯ ನಿಗದಿ ಮಾಡಿತು. ಇದೀಗ ಅವರ ಅಭಿವೃದ‍್ದಿಗಾಗಿ ಹೊಸ ಕೆಲಸ ಆರಂಭವಾಗಿದೆ. ಅಟಲ್ ಜಿ ಅವರ ಸರ್ಕಾರ ಗ್ರಾಮ ಸಡಕ್ ಯೋಜನೆಯನ್ನು ಆರಂಭಿಸಿತು. ಬುಡಕಟ್ಟು ಪ್ರದೇಶದ ಜನರು ವಾಸಿಸುವ ಹಳ್ಳಿಗಳಲ್ಲಿ ರಸ್ತೆಗಳನ್ನು ನಿರ್ಮಿಸಿದ್ದೇವೆ.  

ಸಹೋದರರೇ ಮತ್ತು ಸಹೋದರಿಯರೇ,

ಈ ಡಬಲ್ ಇಂಜಿನ್ ಸರ್ಕಾರ ಡಬಲ್ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಎಲ್ಲಾ ಉತ್ಪನ್ನಗಳ ಮೇಲಿನ ಎಂ.ಎಸ್.ಪಿಯನ್ನು 12,000 ದಿಂದ 90,000 ರೂಪಾಯಿಗೆ ಏರಿಕೆ ಮಾಡಿದೆ. ನಮ್ಮ ಬುಡಕಟ್ಟು ಪ್ರದೇಶದಲ್ಲಿ ಉತ್ಪಾದಿಸುವ 90 ಸಾವಿರ ವಸ್ತುಗಳನ್ನು ಪಟ್ಟಿ ಮಾಡಿದೆ. ಅಲೆಮಾರಿ ಕುಟುಂಬಗಳಿಗೂ ಆದ್ಯತೆ ನೀಡಿದ್ದೇವೆ. ಇದಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿದ್ದೇವೆ. ಹಿಂದೆ ಬ್ರಿಟಿಷರು ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದ ಹಲವಾರು ಕಾನೂನುಗಳಿದ್ದವು. ಇದರ ಫಲವಾಗಿ ಬುಡಕಟ್ಟು ಜನ ಬಿದಿರನ್ನು ಕೂಡ ಕಡಿಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆ ಮಾಡಿದ್ದರೆ ಅವರು ಜೈಲು ಸೇರುತ್ತಿದ್ದರು. ಈಗ ಬುಡಕಟ್ಟು ಸಹೋದರ ಬಿದಿರು ಕಡಿಯುತ್ತಾನೆ ಮತ್ತು ಬಿದಿರು ಉತ್ಪನ್ನ ಮಾಡಿ ಮಾರಾಟ ಮಾಡುತ್ತಿದ್ದು, ಇದರಿಂದ ಆತನ ಜೀವನೋಪಾಯ ಸಾಗುತ್ತಿದೆ. ನಮ್ಮ ಸರ್ಕಾರ ಹಳೆಯ ಕಾನೂನುಗಳನ್ನು ಬದಲಿಸಿದೆ. ಬಿದಿರು ಮರವಲ್ಲ, ಅದು ಹುಲ್ಲು. ಯಾರು ಬೇಕಾದರೂ ಬಿದಿರು ಬೆಳೆಯಬಹುದು, ಕಡಿಯಬಹುದು ಮತ್ತು ಮಾರಾಟ ಮಾಡಬಹುದು. ಈ ಹಕ್ಕುಗಳನ್ನು ಬುಡಕಟ್ಟು ಸಮುದಾಯಕ್ಕೆ ನೀಡಿದ್ದೇವೆ. ಬ್ರಿಟಿಷರ ಕಾಲದಲ್ಲಿದ್ದ ಈ ಕಾನೂನುಗಳನ್ನು ನಿಮ್ಮ ಈ ಮಗ ಅಧಿಕಾರಕ್ಕೆ ಬಂದು ಬದಲಿಸಿದ್ದಾನೆ. ಇಂದು ನಮ್ಮ ಬುಡಕಟ್ಟು ಸಹೋದರರು ಬಿದಿರು ಕೃಷಿಯ ಮಾಲೀಕರಾಗಿದ್ದಾರೆ. ಕಳೆದ 8 ವರ್ಷಗಳಲ್ಲಿ ಬುಡಕಟ್ಟು ಪ್ರದೇಶದ ಆಯವ್ಯಯವನ್ನು ಮೂರು ಪಟ್ಟು ಹೆಚ್ಚಿಸಿದ್ದೇವೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಬುಡಕಟ್ಟು ಜನ ಉದ್ಯೋಗ ಪಡೆಯಲು ಸಾಧ್ಯವಾಗಿದ್ದು, ಬುಡಕಟ್ಟು ಹೆಣ್ಣು ಮಕ್ಕಳು ಬೆಳವಣಿಗೆಯಾಗಲು ಮತ್ತು ಸ್ವಯಂ ಉದ್ಯೋಗ ಪಡೆಯಲು ಇದರಿಂದ ಸಾಧ್ಯವಾಗಿದೆ.  

ಬುಡಕಟ್ಟು ಸಮುದಾಯದ ಹೆಣ್ಣು ಮಗಳು ರಾಷ್ಟ್ರಪತಿ ಆಗಿರುವ ಕಾರಣದಿಂದ ಇಂದು ದೇಶ ಹೆಮ್ಮೆ ಪಡುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ನಮ್ಮ ಮಂಗು ಭಾಯಿ ಅವರು ರಾಜ್ಯಪಾಲರ ಹುದ್ದೆ ಅಲಂಕರಿಸಿದ್ದಾರೆ. ನಾವು ಬದಲಾವಣೆ ತಂದಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯ ಬಹುದೊಡ್ಡ ಕೊಡುಗೆ ನೀಡಿದೆ. ಅವರು ಬ್ರಿಟಿಷರ ಮುಂದೆ ಬಾಗಿರಲಿಲ್ಲ. ಇಂತಹ ಹಲವಾಗು ಘಟನೆಗಳು ಬುಡಕಟ್ಟು ಸಮಾಜದಲ್ಲಿದ್ದು, ನಾವು ಅವುಗಳನ್ನೆಲ್ಲಾ ಮರೆತಿದ್ದೇವೆ. ಆದ್ದರಿಂದ ನಾವು ತೀರ್ಮಾನಿಸಿದ್ದು, ಇಂತಹ ಕಥಾನಕಗಳು ಮತ್ತು ವಿವಿಧ ರಾಜ್ಯಗಳಲ್ಲಿ ಬುಡಕಟ್ಟು ಇತಿಹಾಸವನ್ನು ಪ್ರತಿಬಿಂಬಿಸುವ ವಿಸ್ಮಯ ವಸ್ತುಸಂಗ್ರಹಾಲಯ ಸ್ಥಾಪಿಸುತ್ತಿದ್ದೇವೆ. ನಾವು ಮಕ್ಕಳನ್ನು ಇಂತಹ ವಸ್ತು ಸಂಗ್ರಹಾಲಯಗಳಿಗೆ ಕರೆದುಕೊಂಡು ಹೋಗಬೇಕು ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಬುಡಕಟ್ಟು ಸಹೋದರರು ನೀಡಿರುವ ಕೊಡುಗೆ ಬಗ್ಗೆ ಮಾಹಿತಿ ನೀಡಬೇಕು. ನಾವು ಇಂತಹ ಬೆಳವಣಿಗೆಗಳಿಂದ ಹೆಮ್ಮೆಪಡಬೇಕು ಮತ್ತು ಅವರ ಆಶೀರ್ವಾದ ಪಡೆಯಬೇಕು. ಮುಂದಿನ ಪೀಳಿಗೆಗೂ ಇಂತಹದ್ದನ್ನು ಬೋಧಿಸಬೇಕು ಎಂದು ನಾನು ಹೇಳುತ್ತೇನೆ.  

ಸಹೋದರರೇ ಮತ್ತು ಸಹೋದರಿಯರೇ,

ಪ್ರವಾಸೋದ್ಯಮ ವಲಯದಲ್ಲೂ ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ನಾವೀಗ ದೇವ್ ಮೋರ್ಗಾ ಬಗ್ಗೆ ಮಾತನಾಡೋಣ. ಗುಜರಾತ್ ನ ಯಾವುದೇ ಮುಖ್ಯಮಂತ್ರಿ ದೇವ್ ಮೋರ್ಗಾ ಬಗ್ಗೆ ಕೇಳಿರಲಾರರು. ನಾನು ದೇವ್ ಮೋರ್ಗಾಗೆ ಭೇಟಿ ನೀಡಿದ್ದೆ. ಇದೀಗ ದೇವ್ ಮೋರ್ಗಾದ ಚಿತ್ರಣವೇ ಸಮಗ್ರವಾಗಿ ಬದಲಾವಣೆಯಾಗಿದೆ. ಇಲ್ಲಿ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ಇತರೆ ಹಲವಾರು ಸೌಲಭ‍್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತಿದೆ. ಇದೇ ರೀತಿ ಹೊಸ ಸಪುತರ ಪಟ್ಟಣ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ಒದಗಿಸುವ ತಾಣವಾಗಿ ಬದಲಾಗಿದೆ. 

ಇಂದು ಏಕತಾ ಪ್ರತಿಮೆ ಬುಡಕಟ್ಟು ಜನರಿಗೆ ಈ ಭಾಗದಲ್ಲಿ ಉದ್ಯೋಗ ದೊರಕಿಸುವ ತಾಣವಾಗಿದೆ. ಅಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಂದು ರಸ್ತೆ ಸಂಪರ್ಕವನ್ನು ಸಹ ನಿರ್ಮಿಸಲಾಗಿದೆ. ಯಾತ್ರಾ ಸ್ಥಳಗಳು ಸಹ ಈ ಮಾರ್ಗದಲ್ಲಿವೆ.  ಬುಡಕಟ್ಟು ಜನಾಂಗಕ್ಕೆ ಹಲವಾರು ವಿಧದಲ್ಲಿ ಅನುಕೂಲವಾಗಿದೆ. ನನ್ನ ಬುಡಕಟ್ಟು ಸಹೋದರರು ರಸ್ತೆಗಳನ್ನು ನಿರ್ಮಿಸುವ ಕೂಲಿ ಕೆಲಸ ಮಾಡಲು ನಗರದ ಕಾಲುದಾರಿಯಲ್ಲಿ ವಾಸಿಸಬೇಕಾದ ಹಳೆಯ ದಿನಗಳು ಕಳೆದುಹೋಗಿವೆ. ಇದೀಗ ಮನೆಯಲ್ಲಿ ಇದ್ದು ಜೀವನೋಪಾಯ ಸಾಧಿಸುವ ಹಂತಕ್ಕೆ ಬೆಳೆದಿದ್ದು, ನಾನು ಅಂತಹ ಶಕ್ತಿಯನ್ನು ಆತನಿಗೆ ನೀಡಿದ್ದೇನೆ.  

ಅಭಿವೃದ್ಧಿಯ ಪಾಲುದಾರರು ಎಂದರೆ ಬಡವರಲ್ಲಿ ಬಡವರನ್ನು ಸಬಲೀಕರಣಗೊಳಿಸುವುದು ಎಂದು ಅರ್ಥ ಬರುತ್ತದೆ. ಡಬಲ್ ಎಂಜಿನ್ ಸರ್ಕಾರ ಬುಡಕಟ್ಟು ಯುವ ಸಮೂಹದ ಕೌಶಲ್ಯವನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುವ ಕಾರ್ಯದಲ್ಲಿ ನಿರತವಾಗಿದೆ. “ಪ್ರತಿಯೊಬ್ಬರ ಪ್ರಯತ್ನ” ಎಂಬ ಮಂತ್ರದ ಆಧಾರದ ಮೇಲೆ ನಾವು ನಡೆಯುತ್ತಿದ್ದೇವೆ. ಬಡವರಲ್ಲಿ ಬಡವರು, ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ಜನರು ಸಹ ಅಭಿವೃದ್ದಿ ಪಯಣದ ಭಾಗವಾಗಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜ ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ.   

ಸಹೋದರರೇ ಮತ್ತು ಸಹೋದರಿಯರೇ,

ಬಡವರು ಮತ್ತು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರವಿದೆ. ಬಡವರು, ತುಳಿತಕ್ಕೊಳಗಾದವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಹೃದಯದಿಂದ ಶ್ರಮಿಸಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿಯೇ ನೀವು ದೊಡ್ಡ ಪ್ರಮಾಣದಲ್ಲಿ ನಮ್ಮನ್ನು ಹರಸಲು ಇಲ್ಲಿಗೆ ಆಗಮಿಸಿದ್ದೀರಿ. ನಿಮ್ಮ ಆಶೀರ್ವಾದ ನಮಗೆ ಶಕ್ತಿ ಮತ್ತು ಸ್ಫೂರ್ತಿಯಾಗಿದೆ. ನಿಮ್ಮ ಆಶೀರ್ವಾದ ನಮಗೆ ಬೇಕಿದೆ. ನಿಮ್ಮ ಆಶೀರ್ವಾದ ಕೆಲಸ ಮಾಡಲು ನಮಗೆ ಸಂಕಲ್ಪ. ನಿಮ್ಮ ಆಶೀರ್ವಾದ ನಿಮಗಾಗಿ ನಮ್ಮ ಜೀವನವನ್ನು ಸಮರ್ಪಿಸಲು ಪ್ರೇರಣೆಯಾಗಿದೆ ಮತ್ತು ನಿಮ್ಮ ಆಶೀರ್ವಾದ ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಪಥದಲ್ಲಿ ಸುಗಮವಾಗಿ ಮುನ್ನಡೆಯಲು ಸಹಕಾರಿ. ನಿಮಗಾಗಿ ಹಲವಾರು ಅಭಿವೃದ‍್ದಿ ಯೋಜನೆಗಳನ್ನು ಸಮರ್ಪಿಸುವ ಮೂಲಕ ನಮ್ಮ ಭಾಷಣವನ್ನು ಮುಕ್ತಾಯ ಮಾಡುತ್ತಿದ್ದೇನೆ. ನಿಮ್ಮ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮತ್ತು ನನ್ನ ಜೊತೆ ಜೋರಾಗಿ ಕೂಗಿ

ಭಾರತ ಮಾತೆಗೆ ಜೈ

ಜೋರಾಗಿ – ಭಾರತ ಮಾತೆಗೆ ಜೈ

ಜೋರಾಗಿ – ಭಾರತ ಮಾತೆಗೆ ಜೈ

ತುಂಬಾ ಧನ್ಯವಾದಗಳು

ಪ್ರಧಾನಮಂತ್ರಿಯವರ ಮೂಲ ಭಾಷಣವು ಗುಜರಾತಿ ಭಾಷೆಯಲ್ಲಿದೆ. ಇದನ್ನು ಇಲ್ಲಿ ಅನುವಾದಿಸಲಾಗಿದೆ.

*****



(Release ID: 1870665) Visitor Counter : 144