ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಏಕತಾ ಪ್ರತಿಮೆಯಲ್ಲಿ ಲೈಫ್ ಅಭಿಯಾನಕ್ಕೆ ಚಾಲನೆ ನೀಡಿ, ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಭಾಷಾಂತರ

Posted On: 20 OCT 2022 3:04PM by PIB Bengaluru

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರೇ, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರೇ, ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ. ಎಸ್. ಜೈಶಂಕರ್ ಅವರೇ, ದೇಶ ಮತ್ತು ವಿದೇಶಗಳ ಇತರ ಎಲ್ಲಾ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ಈ ಭವ್ಯ ಭೂಮಿಗೆ ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ. ಶ್ರೀ ಆಂಟೋನಿಯೊ ಗುಟೆರಸ್ ಅವರಿಗೆ, ಭಾರತವು ಎರಡನೇ ಮನೆಯಿದ್ದಂತೆ. ನಿಮ್ಮ ಯೌವನದಲ್ಲಿ ನೀವು ಅನೇಕ ಬಾರಿ ಭಾರತಕ್ಕೆ ಬಂದಿದ್ದೀರಿ. ಗೋವಾದೊಂದಿಗೆ ನಿಮ್ಮ ಕುಟುಂಬದ ನಂಟು ಹೊಂದಿದ್ದೀರಿ. ನಾನು ಇಂದು ಗುಜರಾತ್ ಗೆ ನನ್ನ ಸ್ವಂತ ಕುಟುಂಬದ ಸದಸ್ಯರನ್ನು ಸ್ವಾಗತಿಸುತ್ತಿದ್ದೇನೆ ಎಂದು ಭಾವಿಸುತ್ತೇನೆ. ಶ್ರೀ ಆಂಟೋನಿಯೊ ಗುಟೆರಸ್, ಇಲ್ಲಿಗೆ ಬಂದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು! ನಿಮಗೆ ಹೃತ್ಪೂರ್ವಕ ಶುಭಾಶಯಗಳು! ಲೈಫ್ ಅಭಿಯಾನ ಪ್ರಾರಂಭವಾದಾಗಿನಿಂದ, ಅನೇಕ ದೇಶಗಳು ಈಗ ಈ ಸಂಕಲ್ಪದೊಂದಿಗೆ ಸಂಬಂಧ ಹೊಂದಿವೆ ಎಂಬುದು ನನಗೆ ಸಂತೋಷತಂದಿದೆ. ಫ್ರಾನ್ಸ್ ಅಧ್ಯಕ್ಷರಾದ ಶ್ರೀ ಮೆಕ್ರಾನ್, ಯುಕೆ ಪ್ರಧಾನಮಂತ್ರಿ ಲಿಜ್ ಟ್ರಸ್, ಗಯಾನಾದ ಅಧ್ಯಕ್ಷರಾದ ಇರ್ಫಾನ್ ಅಲಿ, ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡಿಸ್, ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ್ ಜುಗ್ನೌತ್, ಮಡಗಾಸ್ಕರ್ ಅಧ್ಯಕ್ಷರಾದ ಆಂಡ್ರಿ ರಜೋಲಿನಾ, ನೇಪಾಳದ ಪ್ರಧಾನಮಂತ್ರಿ ಶೇರ್ ಬಹದ್ದೂರ್ ಜಿ, ಮಾಲ್ಡೀವ್ಸ್ ನ ಸಹೋದರ ಸೋಲಿಹ್, ಜಾರ್ಜಿಯಾದ ಪ್ರಧಾನಮಂತ್ರಿ ಇರಕ್ಲಿ ಗರಿಬಾಶ್ವಿಲಿ ಮತ್ತು ಎಸ್ಟೋನಿಯಾದ ಪ್ರಧಾನ ಮಂತ್ರಿ ಕಾಜಾ ಕಲಾಸ್ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. 

ಸ್ನೇಹಿತರೇ,
ನಮ್ಮ ರಾಷ್ಟ್ರೀಯ ಹೆಮ್ಮೆಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯಾದ ಏಕತಾ ಪ್ರತಿಮೆ ಸಮೀಪದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹವಾಮಾನ ಬದಲಾವಣೆಯ ವಿರುದ್ಧ ಏಕತೆಯು ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವದ ಅತಿದೊಡ್ಡ ಪ್ರತಿಮೆಯು ಉನ್ನತ ಪರಿಸರ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಪೂರೈಸಲು ನಮ್ಮನ್ನು ಪ್ರೇರೇಪಿಸುತ್ತದೆ.

ಸ್ನೇಹಿತರೇ,
ಮಾನದಂಡಗಳು ಉನ್ನತವಾಗಿದ್ದಾಗ, ದಾಖಲೆಗಳು ಅಗಾಧವಾಗಿರುತ್ತವೆ. ಗುಜರಾತ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತು ಇದು ಸಂಪೂರ್ಣವಾಗಿ ಸೂಕ್ತವಾದ ಸ್ಥಳವೂ ಆಗಿದೆ. ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮೊದಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದ ಭಾರತದ ರಾಜ್ಯಗಳಲ್ಲಿ ಗುಜರಾತ್ ಒಂದಾಗಿದೆ. ನಾಲೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವುದಾಗಿರಲಿ, ಅಥವಾ ಬರಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಜಲ ಸಂರಕ್ಷಣೆಗಾಗಿ ಅಭಿಯಾನ ನಡೆಸುವುದಾಗಿರಲಿ, ಗುಜರಾತ್ ಸದಾ ಮುಂಚೂಣಿಯಲ್ಲಿದೆ ಅಥವಾ ಅಂತಹ ಪ್ರವೃತ್ತಿ ರೂಪಿಸುವುದಾಗಿದೆ.

ಸ್ನೇಹಿತರೇ,
ಹವಾಮಾನ ಬದಲಾವಣೆಯು ನೀತಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ನಾವು ಈ ವಿಷಯವನ್ನು ಒಂದು ನೀತಿಯ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದ ಕೂಡಲೇ, ನಮಗರಿವಿಲ್ಲದೆ ನಮ್ಮ ಮನಸ್ಸು ಸರ್ಕಾರ ಮಾತ್ರವೇ ಆ ಬಗ್ಗೆ ಏನನ್ನಾದರೂ ಮಾಡಬೇಕು ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು ಅದರ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಯೋಚಿಸಲು ಪ್ರಾರಂಭಿಸುತ್ತದೆ. ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಅವರು ಅದನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಜ. ಆದರೆ ಈಗ ಈ ವಿಷಯದ ಗಂಭೀರತೆಯು ಕೇವಲ ಚರ್ಚೆಯ ಮೇಜಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಇಂದು ಪ್ರಪಂಚದ ಮೂಲೆ ಮೂಲೆಯನ್ನು ಮತ್ತು ಪ್ರತಿಯೊಂದು ಮನೆಯನ್ನು ತಲುಪುತ್ತಿದೆ ಎಂಬುದನ್ನು ನಾವೆಲ್ಲರೂ ನೋಡಬಹುದು.

ಹವಾಮಾನ ಬದಲಾವಣೆಯಿಂದಾಗಿ ಜನರು ತಮ್ಮ ಸುತ್ತಲೂ ಆಗುತ್ತಿರುವ ಬದಲಾವಣೆಗಳನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ, ಪರಿಣಾಮವು ಹೇಗೆ ತೀವ್ರಗೊಂಡಿದೆ ಮತ್ತು ಅನಿರೀಕ್ಷಿತ ವಿಪತ್ತುಗಳನ್ನು ಸಹ ಹೇಗೆ ಎದುರಿಸಲಾಗುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಇಂದು ನಮ್ಮ ನೀರ್ಗಲ್ಲುಗಳು ಕರಗುತ್ತಿವೆ ಮತ್ತು ಸಮುದ್ರ ಮಟ್ಟವು ಏರುತ್ತಿದೆ. ನಮ್ಮ ನದಿಗಳು ಒಣಗುತ್ತಿವೆ ಮತ್ತು ಹವಾಮಾನವು ಅನಿಯಮಿತವಾಗುತ್ತಿದೆ. ಮತ್ತು ಈ ಬದಲಾವಣೆಗಳು ಹವಾಮಾನ ವೈಪರೀತ್ಯದ ವಿಷಯವನ್ನು ನೀತಿ ನಿರೂಪಣೆ ಮಾಡುವ ಮಟ್ಟಕ್ಕೆ ಮಾತ್ರ ಬಿಡಲಾಗುವುದಿಲ್ಲ ಎಂದು ಜನರು ಭಾವಿಸುವಂತೆ ಮಾಡುತ್ತಿದೆ. ಒಬ್ಬ ವ್ಯಕ್ತಿಯಾಗಿ, ಒಂದು ಕುಟುಂಬವಾಗಿ ಮತ್ತು ಒಂದು ಸಮುದಾಯವಾಗಿ, ಅವರು ಭೂಮಿಯ ಬಗ್ಗೆ ಕೆಲವು ಜವಾಬ್ದಾರಿಗಳನ್ನು ಕೈಗೊಳ್ಳಬೇಕು ಮತ್ತು ವೈಯಕ್ತಿಕ ಮಟ್ಟದಲ್ಲಿ ಏನನ್ನಾದರೂ ಮಾಡಬೇಕು ಎಂದು ಜನರು ಸ್ವತಃ ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. ಜನರು ವೈಯಕ್ತಿಕ ಮಟ್ಟದಲ್ಲಿ ಅಥವಾ ಕುಟುಂಬ ಮತ್ತು ಸಮುದಾಯದೊಂದಿಗೆ ಸೇರಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ತಿಳಿಯಲು ಬಯಸುತ್ತಾರೆ, ಇದರಿಂದ ಭೂಮಿಯನ್ನು ರಕ್ಷಿಸಬಹುದಾಗಿದೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಲೈಫ್ ಅಭಿಯಾನದಲ್ಲಿದೆ. ಲೈಫ್ ಅಭಿಯಾನದ ಮಂತ್ರ 'ಪರಿಸರಕ್ಕಾಗಿ ಜೀವನಶೈಲಿ' ಎಂಬುದಾಗಿದೆ. ಇಂದು ನಾನು ಲೈಫ್ ಅಭಿಯಾನದ ಈ ದೃಷ್ಟಿಕೋನವನ್ನು ಜಗತ್ತಿಗೆ ಪ್ರಸ್ತುತಪಡಿಸುತ್ತಿದ್ದೇನೆ, ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರಯತ್ನವನ್ನು ಮಾಡುತ್ತಾನೆ ಎಂಬ ಭರವಸೆಯೊಂದಿಗೆ. ಲೈಫ್ ಅಭಿಯಾನ ಈ ಭೂಮಿಯ ರಕ್ಷಣೆಗಾಗಿ ಜನರ ಶಕ್ತಿಯನ್ನು ಜೋಡಿಸುತ್ತಿದೆ ಮತ್ತು ಅದನ್ನು ಉತ್ತಮ ರೀತಿಯಲ್ಲಿ ಬಳಸಲು ಅವರಿಗೆ ಕಲಿಸುತ್ತಿದೆ. ಲೈಫ್ ಅಭಿಯಾನ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಪ್ರಜಾಸತ್ತಾತ್ಮಕಗೊಳಿಸುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡಬಹುದು. ಸಣ್ಣ ಪ್ರಯತ್ನಗಳು ಸಹ ದೊಡ್ಡ ಪರಿಣಾಮ ಬೀರಬಹುದು ಎಂದು ಲೈಫ್ ಅಭಿಯಾನ ಭಾವಿಸುತ್ತದೆ. ಪರಿಸರವನ್ನು ರಕ್ಷಿಸಲು ನಮ್ಮ ದೈನಂದಿನ ಜೀವನದಲ್ಲಿ ಮಾಡಬಹುದಾದ ಎಲ್ಲವನ್ನೂ ಮಾಡಲು ಲೈಫ್ ಅಭಿಯಾನ ನಮ್ಮನ್ನು ಪ್ರೇರೇಪಿಸುತ್ತದೆ. ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಪರಿಸರವನ್ನು ರಕ್ಷಿಸಬಹುದು ಎಂದು ಲೈಫ್ ಅಭಿಯಾನ ಭಾವಿಸುತ್ತದೆ. ನಾನು ನಿಮಗೆ ಎರಡು ಆಸಕ್ತಿದಾಯಕ ಉದಾಹರಣೆಗಳನ್ನು ನೀಡಲು ಬಯಸುತ್ತೇನೆ. ಕೆಲವು ಜನರು ಹವಾನಿಯಂತ್ರಣ -ಎಸಿಯ ತಾಪಮಾನವನ್ನು 17 ಡಿಗ್ರಿ ಸೆಲ್ಸಿಯಸ್ ಅಥವಾ 18 ಡಿಗ್ರಿ ಸೆಲ್ಸಿಯಸ್ ಗೆ ಹೊಂದಿಸುವುದನ್ನು ನೀವು ನೋಡಿರಬಹುದು. ಆದರೆ ಎಸಿಯ ತಾಪಮಾನವನ್ನು ಕಡಿಮೆ ಮಾಡಿದ ನಂತರ, ಈ ಜನರು ಕಂಬಳಿಗಳು ಅಥವಾ ಹೊದಿಕೆ ಹೊದ್ದು ಮಲಗುತ್ತಾರೆ. ಎಸಿ ಕಡಿಮೆಯಾದ ಪ್ರತಿ 1 ಡಿಗ್ರಿ ಸೆಲ್ಸಿಯಸ್ ತಾಪಮಾನವು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಾವು ಪ್ರಯತ್ನಿಸಿದರೆ ನಾವು ಪರಿಸರವನ್ನು ಉಳಿಸಬಹುದು. ಅಂದರೆ, ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಿದರೆ, ಅದು ಪರಿಸರಕ್ಕೆ ದೊಡ್ಡ ಸಹಾಯ ಮಾಡುತ್ತದೆ. ನಮ್ಮ ಜೀವನಶೈಲಿಯ ಮತ್ತೊಂದು ಉದಾಹರಣೆಯನ್ನು ನಾನು ನೀಡ ಬಯಸುತ್ತೇನೆ. ಕೆಲವು ಜನರು ಪ್ರತಿ ಲೀಟರ್ ಗೆ ಸರಾಸರಿ 5 ಕಿಲೋಮೀಟರ್ ಮೈಲೇಜ್ ಹೊಂದಿರುವ ತಮ್ಮ ಕಾರಿನಲ್ಲಿ ಜಿಮ್ ಗೆ ಹೋಗುತ್ತಾರೆ; ಮತ್ತು ನಂತರ ಜಿಮ್ ನ ಟ್ರೆಡ್ ಮಿಲ್ ನಲ್ಲಿ ಬೆವರು ಹರಿಸುತ್ತಾರೆ. ನಿಮ್ಮ ಗುರಿ ಬೆವರು ಹರಿಸುವುದೇ ಆಗಿದ್ದರೆ, ಜಿಮ್ ಗೆ ನಡೆದುಕೊಂಡು ಹೋಗುವ ಮೂಲಕ ಅಥವಾ ಸೈಕ್ಲಿಂಗ್ ಮಾಡುವ ಮೂಲಕ ನೀವು ಅದನ್ನು ಏಕೆ ಮಾಡಬಾರದು? ಈ ರೀತಿ ಪರಿಸರ ಮತ್ತು ನಮ್ಮ ಆರೋಗ್ಯ ಎರಡಕ್ಕೂ ಪ್ರಯೋಜನವಾಗುತ್ತದೆ. 

ಸ್ನೇಹಿತರೇ,
ಒಬ್ಬ ವ್ಯಕ್ತಿಯ ಮತ್ತು ಸಮಾಜದ ಸಣ್ಣ ಪ್ರಯತ್ನಗಳು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಪ್ರಮುಖ ಫಲಿತಾಂಶಗಳನ್ನು ತರಬಹುದು. ನಾನು ಮತ್ತೊಂದು ಉದಾಹರಣೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಭಾರತದಲ್ಲಿ, ನಾವು ಕೆಲವು ವರ್ಷಗಳ ಹಿಂದೆ ದೇಶವಾಸಿಗಳನ್ನು ಹೆಚ್ಚು ಹೆಚ್ಚು ಎಲ್.ಇಡಿ ಬಲ್ಬ್ ಗಳನ್ನು ಬಳಸುವಂತೆ ಒತ್ತಾಯಿಸಿದ್ದೆವು. ಜನರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು, ವಿದ್ಯುತ್ ವೆಚ್ಚವನ್ನು ತಗ್ಗಿಸುವುದು ಮತ್ತು ಪರಿಸರವನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಸರ್ಕಾರವು ಎಲ್.ಇಡಿ ಬಲ್ಬ್ ಗಳ ಯೋಜನೆಯನ್ನು ಪ್ರಾರಂಭಿಸಿತು ಮತ್ತು ದೇಶದ ಖಾಸಗಿ ವಲಯವು ಸಹ ಅದರ ಭಾಗವಾಯಿತು. ಇಂದು ಇಲ್ಲಿಗೆ ಬಂದಿರುವ ಅಂತಾರಾಷ್ಟ್ರೀಯ ತಜ್ಞರು, ಭಾರತದ ಜನರು ತಮ್ಮ ಮನೆಗಳಲ್ಲಿ 160 ಕೋಟಿಗೂ ಹೆಚ್ಚು ಎಲ್.ಇಡಿ ಬಲ್ಬ್ ಗಳನ್ನು ಅಳವಡಿಸಿದ್ದಾರೆ ಎಂದು ತಿಳಿದು ಆಶ್ಚರ್ಯಚಕಿತರಾಗುತ್ತಾರೆ! ಇದರ ಪರಿಣಾಮವಾಗಿ, ನಾವು 100 ದಶಲಕ್ಷ ಟನ್ ಗಳಿಗಿಂತಲೂ ಹೆಚ್ಚು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಗ್ಗಿಸಬಹುದು. ಮತ್ತು ಇದು ಪ್ರತಿ ವರ್ಷವೂ ಇದು ಆಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಬೇಕು. ಇದು ಕೇವಲ ಒಂದು ಬಾರಿಯ ಸಾಧನೆಯಲ್ಲ! ಇದು ಪ್ರತಿ ವರ್ಷವೂ ನಮಗೆ ಸಹಾಯ ಮಾಡುತ್ತಿದೆ. ಈಗ ಎಲ್ಇಡಿಗಳಿಂದಾಗಿ, ಪ್ರತಿ ವರ್ಷ ಹೊರಸೂಸುವಿಕೆಯು ಸಾಕಷ್ಟು ಕಡಿಮೆಯಾಗಲು ಪ್ರಾರಂಭಿಸಿದೆ!

ಸ್ನೇಹಿತರೇ,
ಗುಜರಾತ್ ಮಹಾತ್ಮಾ ಗಾಂಧಿಯವರ ಜನ್ಮಸ್ಥಳವೂ ಆಗಿದೆ. ಆದ್ದರಿಂದ ಅವರು ಪರಿಸರವನ್ನು ಸಂರಕ್ಷಿಸುವ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಜೀವನವನ್ನು ನಡೆಸುವ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ಧರ್ಮದರ್ಶಿತ್ವದ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದರು. ಲೈಫ್ ಅಭಿಯಾನ ಎಲ್ಲಾ ಬಾಧ್ಯಸ್ಥರನ್ನು ಪರಿಸರದ ಧರ್ಮದರ್ಶಿಗಳನ್ನಾಗಿ ಮಾಡುತ್ತದೆ. ಧರ್ಮದರ್ಶಿ ಎಂದರೆ ಸಂಪನ್ಮೂಲಗಳ ವಿವೇಚನಾರಹಿತ ಬಳಕೆಗೆ ಅವಕಾಶ ನೀಡದ ವ್ಯಕ್ತಿ ಎಂದರ್ಥ. ಧರ್ಮದರ್ಶಿಯು ಶೋಷಕನಾಗಿ ವರ್ತಿಸುವುದಿಲ್ಲ, ಆದರೆ ರಕ್ಷಕನಾಗಿ ವರ್ತಿಸುತ್ತಾನೆ. ಲೈಫ್ ಅಭಿಯಾನ 3 ಪಿ  ಪರಿಕಲ್ಪನೆಯನ್ನು ಬಲಪಡಿಸುತ್ತದೆ.  3 ಪಿ ಎಂದರೆ ಪ್ರೋ ಪ್ಲಾನೆಟ್ ಪೀಪಲ್ (ಭೂ ಗ್ರಹ ಪರವಾದ ಜನರು) ಎಂದರ್ಥ. ಇಂದು ನಾವು ಗುಂಪುವಾದದ ಬಗ್ಗೆ ಅಂದರೆ ಯಾವ ದೇಶದಲ್ಲಿ ಯಾವ ಗುಂಪು ಅಥವಾ ಯಾವ ದೇಶ ಅಥವಾ ಗುಂಪಿನ ವಿರುದ್ಧವಾಗಿದೆ ಎಂಬುದರ ಬಗ್ಗೆ ಮಾತನಾಡುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಆದರೆ ಲೈಫ್ ಅಭಿಯಾನ ಭೂಮಿಯ ಜನರನ್ನು ಭೂ ಗ್ರಹ ಪರವಾದ ಜನರು ಎಂದು ಸಂಪರ್ಕಿಸುತ್ತದೆ, ಅವರ ಆಲೋಚನೆಗಳಲ್ಲಿ ಅವರನ್ನು ಒಂದುಗೂಡಿಸುತ್ತದೆ. ಇದು 'ಗ್ರಹದ ಜೀವನಶೈಲಿ, ಗ್ರಹ ಮತ್ತು ಗ್ರಹದಿಂದ' ಎಂಬ ಮೂಲ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ.

ಸ್ನೇಹಿತರೇ,
ಭೂತಕಾಲದಿಂದ ಕಲಿಯುವ ಮೂಲಕ ಮಾತ್ರ ನಾವು ಉತ್ತಮ ಭವಿಷ್ಯವನ್ನು ನಿರ್ಮಿಸಬಹುದು. ಭಾರತವು ಸಾವಿರಾರು ವರ್ಷಗಳಿಂದ ಪ್ರಕೃತಿಯನ್ನು ಪೂಜಿಸುವ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ನೀರು, ಭೂಮಿ, ಗಾಳಿ ಮತ್ತು ಎಲ್ಲಾ ನೈಸರ್ಗಿಕ ವಸ್ತುಗಳ ಮಹತ್ವವನ್ನು ನಮ್ಮ ವೇದಗಳಲ್ಲಿ ನಿಖರವಾಗಿ ವಿವರಿಸಲಾಗಿದೆ. ಉದಾಹರಣೆಗೆ, ಅಥರ್ವವೇದವು ಹೀಗೆ ಹೇಳುತ್ತದೆ: माता भूमिः पपत्रोऽहं पृथिव्याः.  ಅಂದರೆ, ಭೂಮಿ ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು. 'ಕಡಿಮೆ ಬಳಕೆ, ಮರುಬಳಕೆ ಮಾಡಿ ಮತ್ತು ಪುನರ್ ಬಳಕೆ ' ಮತ್ತು ವರ್ತುಲಾಕಾರದ ಆರ್ಥಿಕತೆಯು ಸಾವಿರಾರು ವರ್ಷಗಳಿಂದ ನಮ್ಮ ಭಾರತೀಯ ಜೀವನಶೈಲಿಯ ಒಂದು ಭಾಗವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ, ಅನೇಕ ದೇಶಗಳಲ್ಲಿ, ಅಂತಹ ಆಚರಣೆಗಳು ಇಂದಿಗೂ ಪ್ರಚಲಿತದಲ್ಲಿವೆ ಎಂದು ನಮಗೆಲ್ಲರಿಗೂ ತಿಳಿದಿದೆ, ಇದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ನಡೆಯಲು ನಮ್ಮನ್ನು ಪ್ರೇರೇಪಿಸುತ್ತದೆ. ಲೈಫ್ ಅಭಿಯಾನ ಪ್ರಕೃತಿಯ ಸಂರಕ್ಷಣೆಗೆ ಸಂಬಂಧಿಸಿದ ಪ್ರತಿಯೊಂದು ಜೀವನಶೈಲಿಯನ್ನು ಒಳಗೊಳ್ಳುತ್ತದೆ, ಇದನ್ನು ನಮ್ಮ ಪೂರ್ವಜರು ಅಳವಡಿಸಿಕೊಂಡರು, ಮತ್ತು ಅದನ್ನು ಇಂದು ನಮ್ಮ ಜೀವನಶೈಲಿಯ ಒಂದು ಭಾಗವಾಗಿ ಮಾಡಬಹುದು.

ಸ್ನೇಹಿತರೇ,
ವಿಶ್ವದ ಸರಾಸರಿ ವರ್ಷಕ್ಕೆ 4 ಟನ್ ಗಳ ಇಂಗಾಲದ ಹೆಜ್ಜೆಗುರುತಿಗೆ ಹೋಲಿಸಿದರೆ ಇಂದು, ಭಾರತದಲ್ಲಿ ವಾರ್ಷಿಕ ತಲಾ ಇಂಗಾಲದ ಹೆಜ್ಜೆ ಗುರುತು ಕೇವಲ 1.5 ಟನ್ ಗಳಷ್ಟಿದೆ,. ಅದೇನೇ ಇದ್ದರೂ, ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಯನ್ನು ನಿಭಾಯಿಸಲು ಭಾರತ ಬದ್ಧವಾಗಿದೆ. ಕಲ್ಲಿದ್ದಲು ಮತ್ತು ಕಟ್ಟಿಗೆಯ ಹೊಗೆಯನ್ನು ತೊಡೆದುಹಾಕಲು ಅದು ಉಜ್ವಲ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ನೀರಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಇಂದು ಭಾರತದ ಪ್ರತಿ ಜಿಲ್ಲೆಯಲ್ಲೂ 75 'ಅಮೃತ ಸರೋವರ' ಗಳನ್ನು ನಿರ್ಮಿಸಲು ಬೃಹತ್ ಅಭಿಯಾನವನ್ನು ನಡೆಸುತ್ತಿದ್ದೇವೆ. ಇಲ್ಲಿ 'ತ್ಯಾಜ್ಯದಿಂದ ಸಂಪತ್ತಿಗೆ' ಅಭೂತಪೂರ್ವ ಒತ್ತು ನೀಡಲಾಗುತ್ತಿದೆ. ಇಂದು, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಇಂದು ನಾವು ಪವನ ಶಕ್ತಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ ಮತ್ತು ಸೌರ ಶಕ್ತಿಯಲ್ಲಿ ಐದನೇ ಸ್ಥಾನದಲ್ಲಿದ್ದೇವೆ. ಕಳೆದ 7-8 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಸುಮಾರು ಶೇ.290 ರಷ್ಟು ಹೆಚ್ಚಾಗಿದೆ. ಗಡುವಿನ 9 ವರ್ಷ ಮುಂಚಿತವಾಗಿ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ವಿದ್ಯುತ್ ಸಾಮರ್ಥ್ಯದ 40 ಪ್ರತಿಶತವನ್ನು ತುಲುಪುವ ಗುರಿಯನ್ನು ಸಹ ನಾವು ಸಾಧಿಸಿದ್ದೇವೆ. ನಾವು ಪೆಟ್ರೋಲ್ ನಲ್ಲಿ 10 ಪ್ರತಿಶತ ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸಿದ್ದೇವೆ, ಅದೂ ಗಡುವಿಗೆ 5 ತಿಂಗಳ ಮೊದಲು. ಈಗ ಭಾರತವು ಪೆಟ್ರೋಲ್ ನಲ್ಲಿ ಶೇಕಡಾ 2೦ ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ. ಜಲಜನಕ ಪರಿಸರ ವ್ಯವಸ್ಥೆಗಾಗಿ ಭಾರತವು ಪರಿಸರ ಸ್ನೇಹಿ ಇಂಧನ ಮೂಲಗಳತ್ತ ಬಹಳ ವೇಗವಾಗಿ ಚಲಿಸುತ್ತಿದೆ, ಮತ್ತು ಗುಜರಾತ್ ಈ ಹಸಿರು ಜಲಜನಕದ ಕೇಂದ್ರವಾಗಿ ಬದಲಾಗುತ್ತಿದೆ. ಇದು ಭಾರತ ಮತ್ತು ವಿಶ್ವದ ಅನೇಕ ದೇಶಗಳು 'ನಿವ್ವಳ ಶೂನ್ಯ'ದ ಗುರಿಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ಬಹಳ ದೂರ ಹೋಗುತ್ತದೆ.

ಸ್ನೇಹಿತರೇ,
ಇಂದು ಭಾರತವು ಪ್ರಗತಿ ಸಾಧಿಸುತ್ತಿರುವುದು ಮಾತ್ರವಲ್ಲದೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಪರಿಹಾರಗಳನ್ನು ಒದಗಿಸುತ್ತಿದೆ ಮತ್ತು ಉತ್ತಮ ಮಾದರಿಯನ್ನು ಸ್ಥಾಪಿಸುತ್ತಿದೆ. ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಆದರೆ ಅದೇ ಸಮಯದಲ್ಲಿ ನಮ್ಮ ಅರಣ್ಯ ಪ್ರದೇಶವು ವಿಸ್ತರಿಸುತ್ತಿದೆ ಮತ್ತು ಕಾಡು ಪ್ರಾಣಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಭಾರತವು ಈಗ ವಿಶ್ವದೊಂದಿಗಿನ ತನ್ನ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸಲು ಬಯಸುತ್ತದೆ. 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ನಂತಹ ಅಭಿಯಾನಗಳು ಅಂತಹ ಗುರಿಗಳ ಕಡೆಗೆ ನಮ್ಮ ಸಂಕಲ್ಪವನ್ನು ಬಲಪಡಿಸುತ್ತಿವೆ. 'ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಕ್ಕಾಗಿ ಒಕ್ಕೂಟ'ದ ರಚನೆಯಲ್ಲಿ ಮುಂದಾಳತ್ವ ವಹಿಸುವ ಮೂಲಕ, ಭಾರತವು ಪರಿಸರ ಸಂರಕ್ಷಣೆಯ ಬಗ್ಗೆ ತನ್ನ ಕಲ್ಪನೆಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ. ಲೈಫ್ ಅಭಿಯಾನ ಈ ದಿಕ್ಕಿನಲ್ಲಿ ಮುಂದಿನ ಹೆಜ್ಜೆಯಾಗಿದೆ.

ಸ್ನೇಹಿತರೇ,
ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ನನ್ನ ಅಭಿಪ್ರಾಯವನ್ನು ಒಪ್ಪುತ್ತಾರೆ, ಭಾರತ ಮತ್ತು ವಿಶ್ವಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗಲೆಲ್ಲಾ, ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಹೊಸ ಮಾರ್ಗಗಳು ಕಂಡುಬಂದಿವೆ. ಭಾರತವು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಸ್ತಾಪಿಸಿತ್ತು, ಇದನ್ನು ವಿಶ್ವಸಂಸ್ಥೆಯು ಬೆಂಬಲಿಸಿತು. ಇಂದು ವಿಶ್ವಸಂಸ್ಥೆಯ ಬೆಂಬಲದಿಂದಾಗಿ, ಯೋಗವು ವಿಶ್ವದಾದ್ಯಂತದ ಕೋಟ್ಯಂತರ ಜನರಿಗೆ ಆರೋಗ್ಯಕರ ಜೀವನವನ್ನು ನಡೆಸಲು ಸ್ಫೂರ್ತಿಯಾಗಿದೆ. ಅಂತಹ ಮತ್ತೊಂದು ಉದಾಹರಣೆಯೆಂದರೆ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ. ಭಾರತವು ತನ್ನ ಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿ, ಸಿರಿ ಧಾನ್ಯಗಳನ್ನು ಜಗತ್ತಿಗೆ ಪರಿಚಯಿಸಲು ಬಯಸಿತು. ವಿಶ್ವಸಂಸ್ಥೆ ಕೂಡ ಇದನ್ನು ಬೆಂಬಲಿಸಿತು. ನಾವು ಮುಂದಿನ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸಲಿದ್ದೇವೆ, ಆದರೆ ಅದಕ್ಕೆ ಸಂಬಂಧಿಸಿದ ಚರ್ಚೆ ಈಗಾಗಲೇ ವಿಶ್ವದಾದ್ಯಂತ ಪ್ರಾರಂಭವಾಗಿದೆ. ವಿಶ್ವಸಂಸ್ಥೆಯ ಬೆಂಬಲದೊಂದಿಗೆ, ಲೈಫ್ ಅಭಿಯಾನ ಒಂದು ದೊಡ್ಡ ಯಶಸ್ಸನ್ನು ಸಾಧಿಸುತ್ತಿದೆ ಮತ್ತು ಅದನ್ನು ವಿಶ್ವದ ಮೂಲೆಮೂಲೆ, ಪ್ರತಿ ದೇಶ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಕೊಂಡೊಯ್ಯಬಹುದು ಎಂಬ ಖಾತ್ರಿ ನನಗಿದೆ. ನಾವು ಈ ಮಂತ್ರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು प्रकृति रक्षति रक्षिता। .  ಅಂದರೆ,ಪ್ರಕೃತಿಯನ್ನು ಯಾರು ರಕ್ಷಿಸುತ್ತಾರೋ, ಪ್ರಕೃತಿ ಅವರನ್ನು ರಕ್ಷಿಸುತ್ತದೆ. ಈ ಲೈಫ್ ಅಭಿಯಾನದೊಂದಿಗೆ, ನಾವು ಉತ್ತಮ ಜಗತ್ತನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಮತ್ತು ಈ ಬೆಂಬಲಕ್ಕಾಗಿ ನಾನು ಮತ್ತೊಮ್ಮೆ ವಿಶ್ವಸಂಸ್ಥೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಧನ್ಯವಾದಗಳು.

******



(Release ID: 1870350) Visitor Counter : 78