ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ತಾಪಿಯ ವ್ಯಾರಾದಲ್ಲಿ 1970 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ 


​​​​​​​"ಬುಡಕಟ್ಟು ಸಮುದಾಯಗಳ ಕಲ್ಯಾಣವು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ನಾವು ಸರ್ಕಾರವನ್ನು ರಚಿಸಿದಲ್ಲೆಲ್ಲಾ, ನಾವು ಬುಡಕಟ್ಟು ಕಲ್ಯಾಣಕ್ಕೆ ಗರಿಷ್ಠ ಆದ್ಯತೆ ನೀಡಿದ್ದೇವೆ" 

"ಬುಡಕಟ್ಟು ಮಕ್ಕಳಿಗೆ ಇನ್ನಷ್ಟು ಬೆಳೆಯಲು ಹೊಸ ಅವಕಾಶಗಳು ಸಿಕ್ಕಿವೆ"

"ಕಳೆದ 7-8 ವರ್ಷಗಳಲ್ಲಿ ಬುಡಕಟ್ಟು ಕಲ್ಯಾಣ ಬಜೆಟ್ ಮೂರು ಪಟ್ಟು ಹೆಚ್ಚಾಗಿದೆ"

"ಸಬ್ಕಾ ಪ್ರಯಾಸ್ ನೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಗುಜರಾತ್ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ.” 

Posted On: 20 OCT 2022 5:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾಪಿಯ ವ್ಯಾರಾದಲ್ಲಿ 1970 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಸಪುತಾರಾದಿಂದ ಏಕತಾ ಪ್ರತಿಮೆಯವರೆಗಿನ ರಸ್ತೆಯನ್ನು ಸುಧಾರಿಸುವುದು ಮತ್ತು ಇತರ ರಸ್ತೆ ಸಂಪರ್ಕಗಳ ನಿರ್ಮಾಣ ಹಾಗು ತಾಪಿ ಮತ್ತು ನರ್ಮದಾ ಜಿಲ್ಲೆಗಳಲ್ಲಿ 300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನೀರು ಸರಬರಾಜು ಯೋಜನೆಗಳು ಸೇರಿವೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜನರ ಉತ್ಸಾಹ ಮತ್ತು ವಾತ್ಸಲ್ಯಕ್ಕೆ ಪ್ರತಿಕ್ರಿಯಿಸಿದ  ಪ್ರಧಾನಮಂತ್ರಿಯವರು, ಎರಡು ದಶಕಗಳ ಕಾಲ ಅವರ ಪ್ರೀತಿಯನ್ನು  ಪಡೆದಿರುವುದು ತಮ್ಮಲ್ಲಿ ಧನ್ಯತಾಭಾವ   ಮೂಡಿಸಿದೆ ಎಂದು ಹೇಳಿದರು. "ನೀವೆಲ್ಲರೂ ದೂರದೂರದಿಂದ ಇಲ್ಲಿಗೆ ಬಂದಿದ್ದೀರಿ. ನಿಮ್ಮ ಶಕ್ತಿ, ನಿಮ್ಮ ಉತ್ಸಾಹವನ್ನು ನೋಡಿ, ಮನಸ್ಸಿಗೆ ಸಂತೋಷವಾಗುತ್ತದೆ ಮತ್ತು ನನ್ನ ಶಕ್ತಿಯ ಮಟ್ಟವೂ  ಹೆಚ್ಚಾಗುತ್ತದೆ" ಎಂದವರು ಹೇಳಿದರಲ್ಲದೆ, ಮುಂದುವರೆದು. ", ನಿಮ್ಮ ಅಭಿವೃದ್ಧಿಗಾಗಿ ಹೃತ್ಪೂರ್ವಕವಾಗಿ ಕೆಲಸ ಮಾಡುವ ಮೂಲಕ ಈ ಋಣವನ್ನು ತೀರಿಸಲು ನಾನು ಪ್ರಯತ್ನಿಸುತ್ತಿದ್ದೇನೆ” ಎಂದರು.. ಇಂದು ತಾಪಿ ಮತ್ತು ನರ್ಮದಾ ಸೇರಿದಂತೆ ಈ ಇಡೀ ಬುಡಕಟ್ಟು ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದೂ ಅವರು ನುಡಿದರು.

ಬುಡಕಟ್ಟು ಹಿತಾಸಕ್ತಿಗಳು ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ದೇಶವು ಎರಡು ರೀತಿಯ ರಾಜಕೀಯವನ್ನು ನೋಡಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಒಂದು ಕಡೆ, ಬುಡಕಟ್ಟು ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸದ ಮತ್ತು ಬುಡಕಟ್ಟು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದ ಇತಿಹಾಸವನ್ನು ಹೊಂದಿರುವ ಪಕ್ಷಗಳಿವೆ, ಮತ್ತೊಂದೆಡೆ ಬಿಜೆಪಿಯಂತಹ ಪಕ್ಷವಿದೆ, ಅದು ಯಾವಾಗಲೂ ಬುಡಕಟ್ಟು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. "ಹಿಂದಿನ ಸರ್ಕಾರಗಳು ಬುಡಕಟ್ಟು ಸಂಪ್ರದಾಯಗಳನ್ನು ಗೇಲಿ ಮಾಡುತ್ತಿದ್ದರೆ, ಇದಕ್ಕೆ ಬದಲಾಗಿ ನಾವು ಬುಡಕಟ್ಟು ಸಂಪ್ರದಾಯಗಳನ್ನು ಗೌರವಿಸುತ್ತೇವೆ, " ಎಂದು ಅವರು ನುಡಿದರು. "ಬುಡಕಟ್ಟು ಸಮುದಾಯಗಳ ಕಲ್ಯಾಣವು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ನಾವು ಸರ್ಕಾರವನ್ನು ರಚಿಸಿದಲ್ಲೆಲ್ಲಾ, ನಾವು ಬುಡಕಟ್ಟು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ" ಎಂದೂ ಅವರು ಹೇಳಿದರು.

ಬುಡಕಟ್ಟು ಸಮುದಾಯಗಳ ಕಲ್ಯಾಣದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ತಮ್ಮದೇ ಆದ ಪಕ್ಕಾ ಮನೆಯನ್ನು ಹೊಂದಿರಬೇಕು ವಿದ್ಯುತ್, ಅನಿಲ ಸಂಪರ್ಕ, ಶೌಚಾಲಯ, ಮನೆಗೆ ಹೋಗುವ ರಸ್ತೆ, ಹತ್ತಿರದಲ್ಲಿ ವೈದ್ಯಕೀಯ ಕೇಂದ್ರ, ಹತ್ತಿರದಲ್ಲೇ ಆದಾಯದ ಸಾಧನಗಳು ಮತ್ತು ಮಕ್ಕಳಿಗಾಗಿ ಒಂದು ಶಾಲೆಯನ್ನು ಹೊಂದಿರಬೇಕು" ಎಂದು ಹೇಳಿದರು. ಗುಜರಾತ್ ಅಭೂತಪೂರ್ವ ಅಭಿವೃದ್ಧಿಯನ್ನು ಕಂಡಿದೆ ಎಂದು ಅವರು ಹೇಳಿದರು. ಗುಜರಾತ್ ನ ಪ್ರತಿಯೊಂದು ಹಳ್ಳಿಗೂ ಇಂದು 24 ಗಂಟೆಗಳ ವಿದ್ಯುತ್ ಸಂಪರ್ಕವಿದೆ, ಆದರೆ ಪ್ರತಿ ಹಳ್ಳಿಗೂ ವಿದ್ಯುತ್ ಸೌಲಭ್ಯದೊಂದಿಗೆ ಸಂಪರ್ಕ ಕಲ್ಪಿಸಿದ ಮೊದಲ ಸ್ಥಳವೆಂದರೆ ಬುಡಕಟ್ಟು ಜಿಲ್ಲೆ ಡಾಂಗ್ ಎಂದು ಪ್ರಧಾನಿ ಮಾಹಿತಿ ನೀಡಿದರು. "ಸುಮಾರು ಒಂದೂವರೆ ದಶಕದ ಹಿಂದೆ, ಜ್ಯೋತಿರ್ಗ್ರಾಮ ಯೋಜನೆಯಡಿ, ಡಾಂಗ್ ಜಿಲ್ಲೆಯ 300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶೇಕಡಾ 100 ರಷ್ಟು ವಿದ್ಯುದ್ದೀಕರಣದ ಗುರಿಯನ್ನು ಸಾಧಿಸಲಾಗಿತ್ತು. ಡಾಂಗ್ ಜಿಲ್ಲೆಯ ಈ ಸ್ಫೂರ್ತಿಯು ನೀವು ನನ್ನನ್ನು ಪ್ರಧಾನ ಮಂತ್ರಿಯಾಗಿ ದಿಲ್ಲಿಗೆ ಕಳುಹಿಸಿದಾಗ ದೇಶದ ಎಲ್ಲಾ ಹಳ್ಳಿಗಳ ವಿದ್ಯುದ್ದೀಕರಣವನ್ನು ಕೈಗೊಳ್ಳಲು ನಮ್ಮನ್ನು ಪ್ರೇರೇಪಿಸಿತು", ಎಂದು ಪ್ರಧಾನಿ ಹೇಳಿದರು.

ಬುಡಕಟ್ಟು ಪ್ರದೇಶಗಳಲ್ಲಿ ಕೃಷಿಗೆ ಹೊಸ ಚೇತನವನ್ನು ನೀಡಲು ಕೈಗೊಳ್ಳಲಾದ ವಾಡಿ ಯೋಜನೆಯ ಬಗ್ಗೆ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು. ಬುಡಕಟ್ಟು ಪ್ರದೇಶಗಳಲ್ಲಿ ರಾಗಿ-ಮೆಕ್ಕೆಜೋಳವನ್ನು ಬೆಳೆಯಲು ಮತ್ತು ಖರೀದಿಸಲು ಕಷ್ಟವಾಗುತ್ತಿದ್ದ ಹಿಂದಿನ ಪರಿಸ್ಥಿತಿಯನ್ನು ಶ್ರೀ ಮೋದಿ ಸ್ಮರಿಸಿದರು. "ಇಂದು, ಬುಡಕಟ್ಟು ಪ್ರದೇಶಗಳಲ್ಲಿ ಮಾವು, ಪೇರಳೆ ಮತ್ತು ನಿಂಬೆಯಂತಹ ಹಣ್ಣುಗಳೊಂದಿಗೆ ಗೋಡಂಬಿಯನ್ನು ಬೆಳೆಯಲಾಗುತ್ತಿದೆ" ಎಂದು ಪ್ರಧಾನಿ ಗಮನಸೆಳೆದರು. ಈ ಧನಾತ್ಮಕ ಬದಲಾವಣೆಗೆ ವಾಡಿ ಯೋಜನೆಯೇ ಕಾರಣ ಎಂದು ಶ್ಲಾಘಿಸಿದ ಅವರು, ಈ ಯೋಜನೆಯ ಮೂಲಕ ಬುಡಕಟ್ಟು ರೈತರಿಗೆ ಬಂಜರು ಭೂಮಿಯಲ್ಲಿ ಹಣ್ಣುಗಳು, ತೇಗ ಮತ್ತು ಬಿದಿರು ಬೆಳೆಯಲು ಸಹಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. "ಇಂದು ಈ ಕಾರ್ಯಕ್ರಮವು ಗುಜರಾತಿನ ಅನೇಕ ಜಿಲ್ಲೆಗಳಲ್ಲಿ ನಡೆಯುತ್ತಿದೆ" ಎಂದು ಅವರು ಹೇಳಿದರು. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ವಲ್ಸಾದ್ ಜಿಲ್ಲೆಯಲ್ಲಿ ಇದನ್ನು ನೋಡಲು ಬಂದಿದ್ದರು ಮತ್ತು ಅವರು ಈ ಯೋಜನೆಯನ್ನು ಬಹಳವಾಗಿ ಶ್ಲಾಘಿಸಿದ್ದರು ಎಂಬುದನ್ನೂ  ಪ್ರಧಾನಮಂತ್ರಿಯವರು ನೆನಪಿಸಿಕೊಂಡರು.

ಶ್ರೀ ಮೋದಿ ಅವರು ಗುಜರಾತ್ ನಲ್ಲಿ ಬದಲಾದ ನೀರಿನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದರು. ಗುಜರಾತ್ ನಲ್ಲಿ, ವಿದ್ಯುತ್ ಗ್ರಿಡ್ ಗಳ ಮಾದರಿಯಲ್ಲಿ ನೀರಿನ ಗ್ರಿಡ್ ಗಳನ್ನು ಹಾಕಲಾಯಿತು. ತಾಪಿ ಸೇರಿದಂತೆ ಇಡೀ ಗುಜರಾತಿನಲ್ಲಿ ಕಾಲುವೆ ಮತ್ತು ಏತ ನೀರಾವರಿ ಜಾಲವನ್ನು ನಿರ್ಮಿಸಲಾಯಿತು. ದಾಬಾ ಕಾಂತಾ ಕಾಲುವೆಯಿಂದ ನೀರನ್ನು ಎತ್ತಲಾಯಿತು ಮತ್ತು ನಂತರ ತಾಪಿ ಜಿಲ್ಲೆಯಲ್ಲಿ ನೀರಿನ ಸೌಲಭ್ಯದಲ್ಲಿ ಹೆಚ್ಚಳವಾಯಿತು. ನೂರಾರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಉಕೈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ ಮತ್ತು ಇಂದು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ನೀರಿನ ಸೌಲಭ್ಯವನ್ನು ಮತ್ತಷ್ಟು ಸುಧಾರಿಸುತ್ತವೆ ಎಂದು ಅವರು ಮಾಹಿತಿ ನೀಡಿದರು. "ಗುಜರಾತಿನಲ್ಲಿ ಕೇವಲ ಕಾಲು ಭಾಗದಷ್ಟು ಕುಟುಂಬಗಳು ಮಾತ್ರ ನೀರಿನ ಸಂಪರ್ಕವನ್ನು ಹೊಂದಿದ್ದ ಕಾಲವೊಂದಿತ್ತು. ಇಂದು ಗುಜರಾತಿನ ಶೇ.100ರಷ್ಟು ಕುಟುಂಬಗಳು ಕೊಳವೆಯಲ್ಲಿ ಪೂರೈಕೆಯಾಗುವ ಕುಡಿಯುವ ನೀರಿನ ಸೌಲಭ್ಯ ಹೊಂದಿವೆ" ಎಂದು ಪ್ರಧಾನ ಮಂತ್ರಿ ಹೇಳಿದರು.

ವನಬಂಧು ಕಲ್ಯಾಣ ಯೋಜನೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಗುಜರಾತ್ ನ ಬುಡಕಟ್ಟು ಸಮಾಜದ ಪ್ರತಿಯೊಂದು ಮೂಲಭೂತ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಇದನ್ನು ಕಲ್ಪಿಸಲಾಗಿದೆ ಮತ್ತು ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. "ಇಂದು ನಾವು ತಾಪಿ ಮತ್ತು ಇತರ ನೆರೆಹೊರೆಯ ಬುಡಕಟ್ಟು ಜಿಲ್ಲೆಗಳಿಂದ ಅನೇಕ ಹೆಣ್ಣುಮಕ್ಕಳು ಇಲ್ಲಿನ ಶಾಲೆ ಮತ್ತು ಕಾಲೇಜುಗಳಿಗೆ ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ಈಗ ಬುಡಕಟ್ಟು ಸಮಾಜದ ಅನೇಕ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದಾರೆ, ವೈದ್ಯರು ಮತ್ತು ಎಂಜಿನಿಯರ್ ಗಳಾಗುತ್ತಿದ್ದಾರೆ" ಎಂದು ಅವರು ಹೇಳಿದರು. 20-25 ವರ್ಷಗಳ ಹಿಂದೆ ಈ ಯುವಜನರು ಜನಿಸಿದಾಗ, ಉಮರ್ಗಾಮ್ ನಿಂದ ಅಂಬಾಜಿಯವರೆಗೆ ಇಡೀ ಬುಡಕಟ್ಟು ಪ್ರದೇಶದಲ್ಲಿ ಕೆಲವೇ ಕೆಲವು ಶಾಲೆಗಳು ಇದ್ದವು ಮತ್ತು ವಿಜ್ಞಾನವನ್ನು ಅಧ್ಯಯನ ಮಾಡಲು ಸಾಕಷ್ಟು ಸೌಲಭ್ಯಗಳು ಇರಲಿಲ್ಲ ಎಂಬುದನ್ನೂ  ಪ್ರಧಾನ ಮಂತ್ರಿ  ಸ್ಮರಿಸಿದರು. ಗುಜರಾತ್ ನಲ್ಲಿ ನಿನ್ನೆ ಉದ್ಘಾಟನೆಗೊಂಡ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಅಡಿಯಲ್ಲಿ ಬುಡಕಟ್ಟು ತಾಲ್ಲೂಕುಗಳಲ್ಲಿರುವ ಸುಮಾರು 4,000 ಶಾಲೆಗಳನ್ನು ಆಧುನೀಕರಣಗೊಳಿಸಲಾಗುವುದು ಎಂದೂ  ಪ್ರಧಾನ ಮಂತ್ರಿ  ಮಾಹಿತಿ ನೀಡಿದರು.

ಕಳೆದ ಎರಡು ದಶಕಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ 10 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಿಸಲಾಗಿದೆ, ಏಕಲವ್ಯ ಮಾದರಿ ಶಾಲೆ ಮತ್ತು ಹೆಣ್ಣು ಮಕ್ಕಳಿಗಾಗಿ ವಿಶೇಷ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ನರ್ಮದಾದಲ್ಲಿರುವ  ಬಿರ್ಸಾ ಮುಂಡಾ ಬುಡಕಟ್ಟು ವಿಶ್ವವಿದ್ಯಾಲಯ ಮತ್ತು ಗೋಧ್ರಾದ ಶ್ರೀ ಗೋವಿಂದ್ ಗುರು ವಿಶ್ವವಿದ್ಯಾಲಯಗಳು ಬುಡಕಟ್ಟು ಯುವಜನರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಒದಗಿಸುತ್ತಿವೆ. ಬುಡಕಟ್ಟು ಮಕ್ಕಳಿಗೆ ವಿದ್ಯಾರ್ಥಿವೇತನದ ಬಜೆಟ್ ಈಗ ದುಪ್ಪಟ್ಟಿಗೂ ಅಧಿಕವಾಗಿದೆ. “ಏಕಲವ್ಯ ಶಾಲೆಗಳ ಸಂಖ್ಯೆಯೂ ಹಲವು ಪಟ್ಟು ಹೆಚ್ಚಾಗಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ನಮ್ಮ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ನಾವು ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದೇವೆ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಆರ್ಥಿಕ ಸಹಾಯವನ್ನು ಸಹ ನೀಡಿದ್ದೇವೆ "ಎಂದು ಅವರು ಹೇಳಿದರು. ಖೇಲೋ ಇಂಡಿಯಾದಂತಹ ಅಭಿಯಾನಗಳ ಮೂಲಕ ಕ್ರೀಡೆಗಳಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಬುಡಕಟ್ಟು ಮಕ್ಕಳಿಗೆ ಬೆಳೆಯಲು ಮತ್ತು ಅವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಹೊಸ ಅವಕಾಶಗಳನ್ನು ಒದಗಿಸುವ ಮೂಲಕ ಆಗಿರುವ ಪ್ರಯೋಜನಗಳನ್ನು  ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ಗುಜರಾತ್ ಸರ್ಕಾರವು ವನಬಂಧು ಕಲ್ಯಾಣ ಯೋಜನೆಗಾಗಿ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಈಗ ಈ ಯೋಜನೆಯ ಎರಡನೇ ಹಂತದಲ್ಲಿ, ಗುಜರಾತ್ ಸರ್ಕಾರವು ಮತ್ತೆ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಲು ಹೊರಟಿದೆ ಎಂದು ಅವರು ಮಾಹಿತಿ ನೀಡಿದರು. ಇದರೊಂದಿಗೆ, ಬುಡಕಟ್ಟು ಮಕ್ಕಳಿಗಾಗಿ ಅನೇಕ ಹೊಸ ಶಾಲೆಗಳು, ಅನೇಕ ಹಾಸ್ಟೆಲ್ ಗಳು, ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ನರ್ಸಿಂಗ್ ಕಾಲೇಜುಗಳನ್ನು ಸಹ ನಿರ್ಮಿಸಲಾಗುವುದು. "ಈ ಯೋಜನೆಯಡಿ, ಬುಡಕಟ್ಟು ಜನರಿಗೆ 2.5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ  6 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ಒಂದು ಲಕ್ಷ ಬುಡಕಟ್ಟು ಕುಟುಂಬಗಳಿಗೆ ಭೋಗ್ಯಕ್ಕೆ ಭೂಮಿಯನ್ನು  ನೀಡಲಾಗಿದೆ" ಎಂದು ಅವರು ಹೇಳಿದರು.

"ಬುಡಕಟ್ಟು ಸಮಾಜವನ್ನು ಅಪೌಷ್ಟಿಕತೆಯ ಸಮಸ್ಯೆಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು ನಮ್ಮ ಸಂಕಲ್ಪವಾಗಿದೆ" ಎಂದು ಪ್ರಧಾನಿ ಹೇಳಿದರು. ಅದಕ್ಕಾಗಿಯೇ ಕೇಂದ್ರ ಸರ್ಕಾರವು ಬೃಹತ್ 'ಪೋಷಣ್ ಅಭಿಯಾನ'ವನ್ನು ಪ್ರಾರಂಭಿಸಿದೆ, ಇದರ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರವನ್ನು ಸೇವಿಸಲು ಅನುಕೂಲವಾಗುವಂತೆ  ಸಹಾಯ ಮಾಡಲು ಸಾವಿರಾರು ರೂಪಾಯಿಗಳನ್ನು ನೀಡಲಾಗುತ್ತಿದೆ. ಮಿಷನ್ ಇಂದ್ರಧನುಷ್ ಅಡಿಯಲ್ಲಿ ತಾಯಂದಿರು ಮತ್ತು ಮಕ್ಕಳು ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬೃಹತ್ ಅಭಿಯಾನ ನಡೆಯುತ್ತಿದೆ. ಈಗ ದೇಶಾದ್ಯಂತ ಬಡವರಿಗೆ ಉಚಿತ ಪಡಿತರವನ್ನು ಕಳೆದ ಎರಡೂವರೆ ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡುತ್ತಿದೆ.  ಇಲ್ಲಿಯವರೆಗೆ, ನಮ್ಮ ತಾಯಂದಿರು ಮತ್ತು ಸಹೋದರಿಯರು ಹೊಗೆಯಿಂದ ಉಂಟಾಗುವ ರೋಗಗಳಿಂದ ದೂರವಿರುವಂತೆ ಮಾಡಲು ದೇಶದಲ್ಲಿ ಸುಮಾರು 10 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಲಕ್ಷಾಂತರ ಬುಡಕಟ್ಟು ಕುಟುಂಬಗಳು ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದಿವೆ ಎಂದರು. 

ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಮರೆತುಹೋದಂತಹ ಬುಡಕಟ್ಟು ಸಮುದಾಯದ ಪರಂಪರೆಯನ್ನು ಪುನಃಸ್ಥಾಪಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ  ಪ್ರಧಾನಮಂತ್ರಿಯವರು, ಬುಡಕಟ್ಟು ಸಮುದಾಯವು ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. "ಈಗ ಮೊದಲ ಬಾರಿಗೆ, ದೇಶವು ನವೆಂಬರ್ 15 ರಂದು ಭಗವಾನ್  ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಹೆಮ್ಮೆಯ ದಿನವಾಗಿ ಆಚರಿಸುತ್ತಿದೆ" ಎಂದು ಅವರು ಹೇಳಿದರು. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ದೇಶಾದ್ಯಂತ ವಸ್ತುಸಂಗ್ರಹಾಲಯಗಳ ಮೂಲಕ ಸಂರಕ್ಷಿಸಲಾಗುತ್ತಿದೆ ಮತ್ತು ಪ್ರದರ್ಶಿಸಲಾಗುತ್ತಿದೆ ಎಂದೂ  ಅವರು ವಿವರಿಸಿದರು. ಬುಡಕಟ್ಟು ಸಚಿವಾಲಯವು ಅಸ್ತಿತ್ವದಲ್ಲಿಲ್ಲದ ಕಾಲಘಟ್ಟವನ್ನು  ಸ್ಮರಿಸಿದ ಪ್ರಧಾನಮಂತ್ರಿಯವರು, ಅಟಲ್ ಜೀ ಅವರ ಸರ್ಕಾರವು ಮೊದಲ ಬಾರಿಗೆ ಬುಡಕಟ್ಟು ಸಚಿವಾಲಯವನ್ನು ರಚಿಸಿತು ಎಂಬುದರತ್ತ ಗಮನಸೆಳೆದರು. ಅಟಲ್ ಜೀ ಅವರ ಸರ್ಕಾರದ ಅವಧಿಯಲ್ಲಿ ಗ್ರಾಮ ಸಡಕ್ ಯೋಜನೆಯನ್ನು ಪ್ರಾರಂಭಿಸಲಾಯಿತು, ಇದು ಬುಡಕಟ್ಟು ಪ್ರದೇಶಗಳಿಗೆ ಅನೇಕ ಪ್ರಯೋಜನಗಳನ್ನು ನೀಡಿತು. " ಬುಡಕಟ್ಟು ಜನರಿಗೆ ಆಗುತ್ತಿರುವ ಅನ್ಯಾಯವನ್ನು ಕೊನೆಗಾಣಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ" ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಬುಡಕಟ್ಟು ಕಲ್ಯಾಣಕ್ಕೆ ಸಂಬಂಧಿಸಿದ ಆಯವ್ಯಯವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ, ಆ ಮೂಲಕ ನಮ್ಮ ಬುಡಕಟ್ಟು ಯುವಜನರಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

"ಅಭಿವೃದ್ಧಿಯ ಈ ಪಾಲುದಾರಿಕೆಯನ್ನು ನಿರಂತರವಾಗಿ ಬಲಪಡಿಸಬೇಕು", ಎಂದು ಹೇಳಿದ ಪ್ರಧಾನಮಂತ್ರಿಯವರು, ಬುಡಕಟ್ಟು ಯುವಜನರ ಸಾಮರ್ಥ್ಯವನ್ನು ಹೆಚ್ಚಿಸಲು ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಮನವಿ ಮಾಡಿದರು. "ಸಬ್ ಕಾ ಪ್ರಯಾಸ್ ನೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಗುಜರಾತ್ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ" ಎಂದು ಹೇಳಿ ಪ್ರಧಾನ ಮಂತ್ರಿಯವರು ತಮ್ಮ ಭಾಷಣವನ್ನು  ಮುಕ್ತಾಯಗೊಳಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್, ಸಂಸತ್ ಸದಸ್ಯರಾದ ಶ್ರೀ ಸಿ.ಆರ್.ಪಾಟೀಲ್, ಶ್ರೀ ಕೆ.ಸಿ.ಪಟೇಲ್, ಶ್ರೀ ಮನ್ಸುಖ್ ವಾಸವ ಮತ್ತು ಶ್ರೀ ಪ್ರಭುಭಾಯಿ ವಾಸವ ಹಾಗು ಗುಜರಾತ್ ಸರ್ಕಾರದ ಸಚಿವರಾದ ಶ್ರೀ ಋಶಿಕೇಶ್ ಪಟೇಲ್, ಶ್ರೀ ನರೇಶ್ ಭಾಯಿ ಪಟೇಲ್, ಶ್ರೀ ಮುಖೇಶ್ ಭಾಯ್ ಪಟೇಲ್, ಶ್ರೀ ಜಗದೀಶ್ ಪಾಂಚಾಲ್ ಮತ್ತು ಶ್ರೀ ಜಿತುಭಾಯಿ ಚೌಧರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****



(Release ID: 1869986) Visitor Counter : 134