ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯ ಪ್ರಗತಿ ಮೈದಾನದಲ್ಲಿ 90ನೇ ಇಂಟರ್ ಪೋಲ್ ಮಹಾಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
"ಸ್ಥಳೀಯ ಕಲ್ಯಾಣಕ್ಕಾಗಿ ಜಾಗತಿಕ ಸಹಕಾರ ನಮ್ಮ ಕರೆ"
"ಕಾನೂನು ಜಾರಿ ನಮ್ಮ ಬಳಿ ಇಲ್ಲದಿರುವುದನ್ನು ಪಡೆಯಲು, ನಮ್ಮ ಬಳಿ ಇರುವುದನ್ನು ರಕ್ಷಿಸಲು, ನಾವು ರಕ್ಷಿಸಿದ್ದನ್ನು ಹೆಚ್ಚಿಸಲು ಮತ್ತು ಅದನ್ನು ಅತ್ಯಂತ ಅರ್ಹರಿಗೆ ವಿತರಿಸಲು ನೆರವಾಗುತ್ತದೆ"
"ನಮ್ಮ ಪೊಲೀಸ್ ಪಡೆಗಳು ಜನರನ್ನು ರಕ್ಷಿಸುವುದಷ್ಟೇ ಅಲ್ಲದೆ ನಮ್ಮ ಪ್ರಜಾಪ್ರಭುತ್ವಕ್ಕೂ ಸೇವೆ ಸಲ್ಲಿಸುತ್ತವೆ"
"ಬೆದರಿಕೆಗಳು ಜಾಗತಿಕವಾಗಿದ್ದಾಗ, ಸ್ಪಂದನೆ ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ! ಈ ಬೆದರಿಕೆಗಳನ್ನು ಮಣಿಸಲು ಜಗತ್ತು ಒಗ್ಗೂಡಲು ಇದು ಸಕಾಲ"
"ಸುರಕ್ಷಿತ ಸ್ವರ್ಗದಂತಹ ತಾಣಗಳನ್ನು ನಿರ್ಮೂಲನೆ ಮಾಡಲು ಜಾಗತಿಕ ಸಮುದಾಯ ಇನ್ನೂ ವೇಗವಾಗಿ ಕೆಲಸ ಮಾಡುವ ಅಗತ್ಯವಿದೆ"
"ಸಂವಹನ, ಸಹಯೋಗ ಮತ್ತು ಸಹಕಾರವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಮಣಿಸಬೇಕು"
Posted On:
18 OCT 2022 3:52PM by PIB Bengaluru
ನವದೆಹಲಿಯಲ್ಲಿ ನಡೆದ 90ನೇ ಇಂಟರ್ ಪೋಲ್ ಮಹಾಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲ ಗಣ್ಯರಿಗೆ ಆತ್ಮೀಯ ಸ್ವಾಗತ ಕೋರಿದರು. ಭಾರತವು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ, ಇದು ಜನರು ಮತ್ತು ಸಂಸ್ಕೃತಿಗಳ ಆಚರಣೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂಟರ್ ಪೋಲ್ ಬರುವ 2023ರಲ್ಲಿ ತನ್ನ ಶತಮಾನೋತ್ಸವ ಆಚರಿಸಲಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಇದು ಆತ್ಮಾವಲೋಕನದ ಸಮಯವಾಗಿದ್ದು, ಭವಿಷ್ಯವನ್ನು ನಿರ್ಧರಿಸುವ ಸಮಯವೂ ಆಗಿದೆ ಎಂದು ಅವರು ಹೇಳಿದರು. ಸೋಲಿನಿಂದ ಕಲಿಯಲು ಮತ್ತು ಭವಿಷ್ಯದ ಬಗ್ಗೆ ಭರವಸೆಯಿಂದ ನೋಡಲು ಸಂತೋಷಪಡಲು ಮತ್ತು ಪ್ರತಿಬಿಂಬಿಸಲು ಇದು ಉತ್ತಮ ಸಮಯ ಎಂದು ಶ್ರೀ ಮೋದಿ ಹೇಳಿದರು.
ಭಾರತೀಯ ಸಂಸ್ಕೃತಿಯೊಂದಿಗೆ ಇಂಟರ್ ಪೋಲ್ ಸಿದ್ಧಾಂತದ ಸಂಬಂಧವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂಟರ್ ಪೋಲ್ ನ ಧ್ಯೇಯವಾಕ್ಯವಾದ 'ಸುರಕ್ಷಿತ ಜಗತ್ತಿನೊಂದಿಗೆ ಪೊಲೀಸರನ್ನು ಸಂಪರ್ಕಿಸುವುದು' ಮತ್ತು ವೇದಗಳಲ್ಲಿರುವ "ಆನೋ ಭದ್ರಾ ಕೃತವೋ ಯಂತು ವಿಶ್ವತಾಃ" ಅಂದರೆ ಉದಾತ್ತ ಚಿಂತನೆಗಳು ಎಲ್ಲ ದಿಕ್ಕುಗಳಿಂದ ಬರಲಿ ಎಂಬುದರ ಸಾಮ್ಯತೆಯನ್ನು ಉಲ್ಲೇಖಿಸಿ, ಇದು ಜಗತ್ತನ್ನು ಉತ್ತಮ ತಾಣವನ್ನಾಗಿ ಮಾಡಲು ಸಾರ್ವತ್ರಿಕ ಸಹಕಾರದ ಕರೆಯಾಗಿದೆ ಎಂದು ಅವರು ವಿವರಿಸಿದರು. ಭಾರತದ ವಿಶಿಷ್ಟ ಜಾಗತಿಕ ದೃಷ್ಟಿಕೋನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರನ್ನು ಕಳುಹಿಸುವಲ್ಲಿ ಭಾರತವು ಪ್ರಮುಖ ಕೊಡುಗೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದರು. "ಭಾರತ ಸ್ವಾತಂತ್ರ್ಯವನ್ನು ಪಡೆಯುವ ಮೊದಲೇ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಾವು ತ್ಯಾಗ ಮಾಡಿದ್ದೇವೆ" ಎಂದು ಶ್ರೀ ಮೋದಿ ಹೇಳಿದರು. ಸಾವಿರಾರು ಭಾರತೀಯರು ವಿಶ್ವಯುದ್ಧಗಳಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು. ಕೋವಿಡ್ ಲಸಿಕೆಗಳು ಮತ್ತು ಹವಾಮಾನ ಗುರಿಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ಯಾವುದೇ ರೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂದಾಳತ್ವ ವಹಿಸಲು ಇಚ್ಛಾಶಕ್ತಿಯನ್ನು ತೋರಿಸಿದೆ ಎಂದು ತಿಳಿಸಿದರು. "ರಾಷ್ಟ್ರಗಳು ಮತ್ತು ಸಮಾಜಗಳು ಆಂತರಿಕವಾಗಿ ನೋಡುತ್ತಿದ್ದ ಸಮಯದಲ್ಲಿ, ಭಾರತವು ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡಿತು. ಸ್ಥಳೀಯ ಕಲ್ಯಾಣಕ್ಕಾಗಿ ಜಾಗತಿಕ ಸಹಕಾರವು ನಮ್ಮ ಕರೆಯಾಗಿದೆ", ಎಂದು ಶ್ರೀ ಮೋದಿ ಹೇಳಿದರು.
ಪ್ರಪಂಚದಾದ್ಯಂತದ ಪೊಲೀಸ್ ಪಡೆಗಳು ಕೇವಲ ಜನರನ್ನು ಮಾತ್ರ ರಕ್ಷಿಸುತ್ತಿಲ್ಲ, ಜೊತೆಗೆ ಸಾಮಾಜ ಕಲ್ಯಾಣವನ್ನು ಹೆಚ್ಚಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. "ಅವರು ಯಾವುದೇ ಬಿಕ್ಕಟ್ಟಿಗೆ ಸಮಾಜದ ಪ್ರತಿಕ್ರಿಯೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ" ಎಂದು ಶ್ರೀ ಮೋದಿ ಹೇಳಿದರು. ಕೋವಿಡ್ ಬಿಕ್ಕಟ್ಟಿನ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಜನರಿಗೆ ಸಹಾಯ ಮಾಡಲು ಪೊಲೀಸ್ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದರು ಎಂದು ಗಮನಸೆಳೆದರು. "ಅವರಲ್ಲಿ ಅನೇಕರು ಜನರ ಸೇವೆ ಮಾಡುತ್ತಲೇ ಬಲಿದಾನ ಸಹ ಮಾಡಿದರು" ಎಂದು ಅವರು ಹೇಳಿದರು.
ಭಾರತದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಗಾತ್ರ ಮತ್ತು ವಿಶಾಲತೆಯ ಬಗ್ಗೆ ಮಾತನಾಡಿದರು. "ಭಾರತೀಯ ಪೊಲೀಸ್" "ಒಕ್ಕೂಟ ಮತ್ತು ರಾಜ್ಯ ಮಟ್ಟದಲ್ಲಿ, 900 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಸುಮಾರು ಹತ್ತು ಸಾವಿರ ರಾಜ್ಯ ಕಾನೂನುಗಳನ್ನು ಜಾರಿಗೆ ತರಲು ಸಹಕರಿಸಿದೆ" ಎಂದು ಅವರು ಹೇಳಿದರು, "ನಮ್ಮ ಪೊಲೀಸ್ ಪಡೆಗಳು ಸಂವಿಧಾನವು ಭರವಸೆ ನೀಡಿದ ಜನರ ವೈವಿಧ್ಯತೆ ಮತ್ತು ಹಕ್ಕುಗಳನ್ನು ಗೌರವಿಸುತ್ತಾ ಕೆಲಸ ಮಾಡುತ್ತವೆ. ಅವರು ಜನರನ್ನು ರಕ್ಷಿಸುವುದು ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವಕ್ಕೂ ಸೇವೆ ಸಲ್ಲಿಸುತ್ತಾರೆ" ಎಂದು ಅವರು ಹೇಳಿದರು. ಇಂಟರ್ ಪೋಲ್ ನ ಸಾಧನೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇಂಟರ್ ಪೋಲ್ ಕಳೆದ 99 ವರ್ಷಗಳಿಂದ ಜಾಗತಿಕವಾಗಿ 195 ದೇಶಗಳಲ್ಲಿನ ಪೊಲೀಸ್ ಸಂಸ್ಥೆಗಳನ್ನು ಸಂಪರ್ಕಿಸಿದೆ ಮತ್ತು ಈ ಮಹೋನ್ನತ ಸಂದರ್ಭದ ನೆನಪಿಗಾಗಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಭಾರತ ಸರ್ಕಾರ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ, ಭ್ರಷ್ಟಾಚಾರ, ಮಾದಕ ದ್ರವ್ಯ ಕಳ್ಳಸಾಗಣೆ, ಕಳ್ಳಬೇಟೆ ಮತ್ತು ಸಂಘಟಿತ ಅಪರಾಧದಂತಹ ಅನೇಕ ಹೊರಹೊಮ್ಮುತ್ತಿರುವ ಹಾನಿಕಾರಕ ಜಾಗತೀಕರಣದ ಬೆದರಿಕೆಗಳ ಬಗ್ಗೆ ಪ್ರಧಾನಮಂತ್ರಿಯವರು ನೆನಪಿಸಿದರು. "ಈ ಅಪಾಯಗಳ ಬದಲಾವಣೆಯ ವೇಗವು ಮೊದಲಿಗಿಂತ ವೇಗವಾಗಿದೆ. ಬೆದರಿಕೆಗಳು ಜಾಗತಿಕವಾಗಿದ್ದಾಗ, ಸ್ಪಂದನೆಯು ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ! ಈ ಬೆದರಿಕೆಗಳನ್ನು ಮಣಿಸಲು ಜಗತ್ತು ಒಗ್ಗೂಡಲು ಇದು ಸಕಾಲ" ಎಂದು ಅವರು ಹೇಳಿದರು.
ಬಹುರಾಷ್ಟ್ರೀಯ ಭಯೋತ್ಪಾದನೆಯ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಜಗತ್ತು ಅದನ್ನು ಗುರುತಿಸುವ ಮೊದಲೇ ಭಾರತವು ಹಲವಾರು ದಶಕಗಳಿಂದ ಅದರ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದರು. "ಸುರಕ್ಷತೆ ಮತ್ತು ಭದ್ರತೆಯ ಬೆಲೆ ನಮಗೆ ತಿಳಿದಿತ್ತು. ನಮ್ಮ ಸಾವಿರಾರು ಜನರು ಈ ಹೋರಾಟದಲ್ಲಿ ಪ್ರಾಣ ತ್ಯಾಗವನ್ನು ಮಾಡಿದರು", ಎಂದು ಶ್ರೀ ಮೋದಿ ಹೇಳಿದರು. ಭಯೋತ್ಪಾದನೆ ವಿರುದ್ಧ ಕೇವಲ ಭೌತಿಕ ನೆಲೆಗಟ್ಟಿನಲ್ಲಿ ಮಾತ್ರ ಹೋರಾಟ ಮಾಡಿದರೆ ಸಾಲದು, ಜೊತೆಗೆ ಆನ್ ಲೈನ್ ಮೂಲಭೂತವಾದ ಮತ್ತು ಸೈಬರ್ ಮೂಲಕ ಬೆದರಿಕೆಗಳು ವೇಗವಾಗಿ ಹಬ್ಬುತ್ತಿವೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ದಾಳಿಯನ್ನು ಮಾಡಬಹುದು ಅಥವಾ ಕಾಲಬುಡಕ್ಕೆ ತರಬಹುದು ಎಂದು ಪ್ರಧಾನಮಂತ್ರಿ ವಿವರಿಸಿದರು. ಅಂತಾರಾಷ್ಟ್ರೀಯ ಕಾರ್ಯತಂತ್ರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, "ಪ್ರತಿಯೊಂದು ರಾಷ್ಟ್ರವೂ ಅವುಗಳ ವಿರುದ್ಧ ವ್ಯೂಹಾತ್ಮಕವಾಗಿ ಕೆಲಸ ಮಾಡುತ್ತಿದೆ. ಆದರೆ ನಮ್ಮ ಗಡಿಯೊಳಗೆ ನಾವು ಏನು ಮಾಡುತ್ತೇವೆಯೋ ಅದು ಇನ್ನು ಮುಂದೆ ಸಾಕಾಗುವುದಿಲ್ಲ." ಮುಂಚಿತವಾಗಿ ಪತ್ತೆಹಚ್ಚಿ, ಎಚ್ಚರಿಕೆ ನೀಡುವ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಸಾರಿಗೆ ಸೇವೆಗಳನ್ನು ರಕ್ಷಿಸುವುದು, ಸಂವಹನ ಮೂಲಸೌಕರ್ಯಕ್ಕೆ ಭದ್ರತೆ, ನಿರ್ಣಾಯಕ ಮೂಲಸೌಕರ್ಯಕ್ಕೆ ಭದ್ರತೆ, ತಾಂತ್ರಿಕ ಮತ್ತು ತಂತ್ರಜ್ಞಾನದ ನೆರವು, ಗುಪ್ತಚರ ಮಾಹಿತಿ ವಿನಿಮಯ ಮತ್ತು ಇತರ ಹಲವಾರು ವಿಷಯಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯಬೇಕು ಎಂದು ಅವರು ಸಲಹೆ ನೀಡಿದರು.
ಪ್ರಧಾನಮಂತ್ರಿಯವರು ಭ್ರಷ್ಟಾಚಾರದ ಅಪಾಯಗಳ ಬಗ್ಗೆ ವಿವರಿಸಿದರು. ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳು ಅನೇಕ ದೇಶಗಳ ನಾಗರಿಕರ ಕಲ್ಯಾಣಕ್ಕೆ ಹಾನಿಯುಂಟು ಮಾಡಿವೆ ಎಂದು ಅವರು ಹೇಳಿದರು. "ಭ್ರಷ್ಟರು" ಎಂದು ಹೇಳಿ ಮಾತು ಮುಂದುವರಿಸಿದ ಅವರು, "ಅಪರಾಧದಿಂದ ಬರುವ ಆದಾಯವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ನಿಲ್ಲಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಈ ಹಣವು ದೇಶದ ನಾಗರಿಕರಿಗೆ ಸೇರಿದ್ದು, ಅವರಿಂದಲೇ ಅದನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು. ಆಗಾಗ್ಗೆ, ಇದನ್ನು ವಿಶ್ವದ ಕೆಲವು ಬಡ ಜನರಿಂದ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಹಣವನ್ನು ಅನೇಕ ಹಾನಿಗಳಿಗೆ ಬಳಕೆ ಮಾಡಲಾಗುತ್ತದೆ ಎಂದರು.
ಸುರಕ್ಷಿತ ಸ್ವರ್ಗದಂತಹ ತಾಣಗಳನ್ನು ನಿರ್ಮೂಲನೆ ಮಾಡಲು ಜಾಗತಿಕ ಸಮುದಾಯವು ಇನ್ನೂ ವೇಗವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. "ಭ್ರಷ್ಟರು, ಭಯೋತ್ಪಾದಕರು, ಮಾದಕ ದ್ರವ್ಯ ಮಾರಾಟಗಾರರು, ಕಳ್ಳಬೇಟೆ ತಂಡಗಳು ಅಥವಾ ಸಂಘಟಿತ ಅಪರಾಧಗಳಿಗೆ ಯಾವುದೇ ಸುರಕ್ಷಿತ ತಾಣಗಳು ಇರಲು ಸಾಧ್ಯವಿಲ್ಲ. ಒಂದೇ ಸ್ಥಳದಲ್ಲಿ ಜನರ ವಿರುದ್ಧದ ಇಂತಹ ಅಪರಾಧಗಳು ಪ್ರತಿಯೊಬ್ಬರ ವಿರುದ್ಧದ ಅಪರಾಧಗಳಾಗಿವೆ, ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ", ಎಂದು ಅವರು ಹೇಳಿದರು. "ಸಹಕಾರವನ್ನು ಹೆಚ್ಚಿಸಲು ಪೊಲೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಕಾರ್ಯವಿಧಾನಗಳು ಮತ್ತು ಶಿಷ್ಟಾಚಾರಗಳನ್ನು ರೂಪಿಸುವ ಅಗತ್ಯವಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೇಶಭ್ರಷ್ಟ ಅಪರಾಧಿಗಳಿಗೆ ರೆಡ್ ಕಾರ್ನರ್ ನೋಟಿಸ್ ಗಳನ್ನು ತ್ವರಿತಗೊಳಿಸುವ ಮೂಲಕ ಇಂಟರ್ ಪೋಲ್ ಸಹಾಯ ಮಾಡುತ್ತದೆ. "ಸುರಕ್ಷಿತ ಮತ್ತು ಸುಭದ್ರ ಜಗತ್ತು ನಮ್ಮ ಹಂಚಿಕೆಯ ಜವಾಬ್ದಾರಿಯಾಗಿದೆ. ಶಿಷ್ಟ ಶಕ್ತಿಗಳು ಸಹಕರಿಸಿದಾಗ, ದುಷ್ಟ ಅಪರಾಧಿಕ ಶಕ್ತಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ." ಎಂದರು
ಭಾರತವನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಲು ನವದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದನ್ನು ಪರಿಗಣಿಸುವಂತೆ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರಿಗೆ ಮನವಿ ಮಾಡಿದರು. 90ನೇ ಇಂಟರ್ ಪೋಲ್ ಮಹಾಧಿವೇಶನವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಮತ್ತು ಯಶಸ್ವಿ ವೇದಿಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ ಎಂಬ ಭರವಸೆಯನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು. "ಸಂವಹನ, ಸಹಯೋಗ ಮತ್ತು ಸಹಕಾರವು ಅಪರಾಧ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಮಣಿಸಬೇಕು" ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಮುಗಿಸಿದರು.
ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಇಂಟರ್ ಪೋಲ್ ಅಧ್ಯಕ್ಷರು ಕಾರ್ಯಕಾರಿ ಸಮಿತಿಗೆ ಪರಿಚಯಿಸಿದರು. ನಂತರ ಪ್ರಧಾನಮಂತ್ರಿಯವರು ಗುಂಪು ಛಾಯಾಚಿತ್ರಕ್ಕೆ ತೆಗೆಸಿಕೊಂಡರು ಮತ್ತು ಇಂಟರ್ ಪೋಲ್ ಶತಮಾನೋತ್ಸವ ವೇದಿಕೆ ವೀಕ್ಷಿಸಿದರು. ಇದರ ನಂತರ ಪ್ರಧಾನಮಂತ್ರಿಯವರು ಟೇಪು ಕತ್ತರಿಸುವ ಮೂಲಕ ಮತ್ತು ರಾಷ್ಟ್ರೀಯ ಪೊಲೀಸ್ ಪಾರಂಪರಿಕ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ಅಲ್ಲಿ ಒಂದು ಸುತ್ತು ಹಾಕಿ ವೀಕ್ಷಿಸಿದರು.
ವೇದಿಕೆಗೆ ಆಗಮಿಸಿದ ಪ್ರಧಾನಮಂತ್ರಿಯವರು ದ್ವಾರದಲ್ಲೇ ಐಟಿಬಿಪಿ ತುಕಡಿಯ ಪಥಸಂಚಲನಕ್ಕೆ ಸಾಕ್ಷಿಯಾದರು. ಇದರ ನಂತರ ಭಾರತದ ರಾಷ್ಟ್ರಗೀತೆ ಮತ್ತು ಇಂಟರ್ ಪೋಲ್ ಗೀತೆ ಮೊಳಗಿತು. ಪ್ರಧಾನಮಂತ್ರಿಯವರಿಗೆ ಇಂಟರ್ ಪೋಲ್ ನ ಅಧ್ಯಕ್ಷರು ಕುಬ್ಜ ಗಿಡವನ್ನು ಉಡುಗೊರೆಯಾಗಿ ನೀಡಿದರು. ತದನಂತರ, ಪ್ರಧಾನಮಂತ್ರಿಯವರು 90ನೇ ಇಂಟರ್ ಪೋಲ್ ಮಹಾಸಭೆಯ ಅಂಗವಾಗಿ ಸ್ಮರಣಾರ್ಥ ಅಂಚೆ ಚೀಟಿ ಮತ್ತು 100 ರೂ.ಗಳ ನಾಣ್ಯವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಇಂಟರ್ ಪೋಲ್ ಅಧ್ಯಕ್ಷ ಶ್ರೀ ಅಹ್ಮದ್ ನಾಸಿರ್ ಅಲ್ ರೈಸ್, ಇಂಟರ್ ಪೋಲ್ ಪ್ರಧಾನ ಕಾರ್ಯದರ್ಶಿ ಶ್ರೀ ಜುರ್ಗೆನ್ ಸ್ಟಾಕ್ ಮತ್ತು ಸಿಬಿಐ ನಿರ್ದೇಶಕ ಶ್ರೀ ಸುಬೋಧ್ ಕುಮಾರ್ ಜೈಸ್ವಾಲ್ ಉಪಸ್ಥಿತರಿದ್ದರು.
ಹಿನ್ನೆಲೆ
ಇಂಟರ್ ಪೋಲ್ ನ 90ನೇ ಮಹಾಧಿವೇಶನವು ಅಕ್ಟೋಬರ್ 18 ರಿಂದ 21 ರವರೆಗೆ ನಡೆಯುತ್ತಿದೆ. ಸಚಿವರು, ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರೀಯ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗ ಸಭೆಯಲ್ಲಿ ಭಾಗವಹಿಸುತ್ತಿವೆ. ಮಹಾಧಿವೇಶನವು ಇಂಟರ್ ಪೋಲ್ ನ ಅತ್ಯುನ್ನತ ಆಡಳಿತ ಮಂಡಳಿಯಾಗಿದ್ದು, ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ.
ಸುಮಾರು 25 ವರ್ಷಗಳ ನಂತರ ಇಂಟರ್ ಪೋಲ್ ಮಹಾಸಭೆಯು ಭಾರತದಲ್ಲಿ ನಡೆಯುತ್ತಿದೆ - ಇದು ಕೊನೆಯ ಬಾರಿಗೆ 1997 ರಲ್ಲಿ ನಡೆದಿತ್ತು. ಭಾರತದ ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯೊಂದಿಗೆ 2022ರಲ್ಲಿ ನವದೆಹಲಿಯಲ್ಲಿ ಇಂಟರ್ ಪೋಲ್ ನ ಮಹಾಸಭೆಯನ್ನು ಆಯೋಜಿಸುವ ಭಾರತದ ಪ್ರಸ್ತಾಪವನ್ನು ಸಾಮಾನ್ಯ ಸಭೆಯು ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತು. ಈ ಕಾರ್ಯಕ್ರಮವು ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯಲ್ಲಿನ ಅತ್ಯುತ್ತಮ ರೂಢಿಗಳನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುವ ಅವಕಾಶವನ್ನು ಒದಗಿಸುತ್ತದೆ
*****
(Release ID: 1869021)
Visitor Counter : 212
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam