ವಾರ್ತಾ ಮತ್ತು ಪ್ರಸಾರ ಸಚಿವಾಲಯ

53ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಐಎಫ್ಎಫ್ಐ 53) ಮಾಧ್ಯಮ ಪ್ರತಿನಿಧಿಗಳಿಗೆ ಆದರದ ಸ್ವಾಗತ


ಚಲನಚಿತ್ರೋತ್ಸವದ ಸೌಂದರ್ಯ ಮತ್ತು ಶ್ರೀಮಂತಿಕೆಯನ್ನು ಹೆಚ್ಚಿಸಲು ಭಾರತ ಮತ್ತು ವಿದೇಶಗಳಲ್ಲಿನ ಮಾಧ್ಯಮಗಳನ್ನು ʻಐಎಫ್ಎಫ್ಐ 53ʼ ಸ್ವಾಗತಿಸುತ್ತದೆ, ಬನ್ನಿ ಈಗಲೇ ʻಐಎಫ್ಎಫ್ಐʼ ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಿ

Posted On: 06 OCT 2022 1:43PM by PIB Bengaluru

53ನೇ ಆವೃತ್ತಿಯ ʻಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವʼವು(ಐಎಫ್ಎಫ್ಐ 53) ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತವಾಗಿ ಆಹ್ವಾನವನ್ನು ನೀಡಿದೆ. 2022ರ ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ ಭಾರತ ಮತ್ತು ವಿಶ್ವದಾದ್ಯಂತದ ಅತ್ಯುತ್ತಮ ಸಮಕಾಲೀನ ಮತ್ತು ಶ್ರೇಷ್ಠ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ʻಐಎಫ್ಎಫ್ಐ 53ʼದಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ಭಾಗವಹಿಸುವ ನಿಮಗೆ ವಿಶ್ವವಿಖ್ಯಾತ ಚಲನಚಿತ್ರ ನಿರ್ಮಾಪಕರು, ನಟರು, ತಂತ್ರಜ್ಞರು, ವಿಮರ್ಶಕರು, ಶಿಕ್ಷಣ ತಜ್ಞರು, ಸಹ ಚಲನಚಿತ್ರ ಉತ್ಸಾಹಿಗಳು ಜತೆಯಾಗುತ್ತಾರೆ. ಪ್ರವಾಸಿ ರಾಜ್ಯವಾದ ಗೋವಾದಲ್ಲಿ ಸೇರುವ ಅವರೆಲ್ಲರೂ ಸಿನಿಮಾದ ಸಂಭ್ರಮಾಚರಣೆ ಮತ್ತು ಸ್ಫೂರ್ತಿಯ ಸಾಗರದಲ್ಲಿ ತೇಲಲಿದ್ದಾರೆ.

ಬನ್ನಿ ಸಿನೆಮಾದ ಸಂತಸ, ಈ ಚಲನಚಿತ್ರಗಳು ಹೇಳುವ ಕಥೆಗಳ ರೋಮಾಂಚಕ ಸೌಂದರ್ಯ ಹಾಗೂ ಚಲನಚಿತ್ರ ನಿರ್ಮಾಪಕರ ಜೀವನದ ವೈವಿಧ್ಯ, ಆಕಾಂಕ್ಷೆಗಳು, ಹೋರಾಟಗಳು ಮತ್ತು ಕನಸುಗಳನ್ನು ಅನುಭವಿಸಿ. ಪರದೆಯ ಮೇಲೆ, ಪರದೆಯ ಹೊರಗೆ ನಡೆಯುವ ಚಲನಚಿತ್ರಗಳ ಆಚರಣೆಯಲ್ಲಿ ಪಾಲ್ಗೊಳ್ಳಿ. ಹೌದು, ಈ ಉತ್ಸವವು ಭಾರತ ಮತ್ತು ವಿಶ್ವದ ವಿವಿಧ ಭಾಗಗಳಿಂದ ಜತನದಿಂದ ಆಯ್ದುಕೊಳ್ಳಲಾದ ಉತ್ಕೃಷ್ಟ ಸಿನಿಮಾಗಳನ್ನು ಅನಾವರಣಗೊಳಿಸುತ್ತದೆ. ಅಲ್ಲದೆ, ಪ್ರತಿಯೊಂದು ಬೃಹತ್‌ ಚಲನ ಚಿತ್ರೋತ್ಸವದಂತೆಯೇ ʻಮಾಸ್ಟರ್ ಕ್ಲಾಸ್‌ಗಳುʼ, ಪ್ಯಾನಲ್ ಚರ್ಚೆಗಳು, ವಿಚಾರ ಸಂಕಿರಣಗಳು ಮತ್ತು ಇತರ ಸಂಭಾಷಣೆಗಳ ಮೂಲಕ ಸ್ಫೂರ್ತಿ ಪಡೆಯುವ ಅಮೂಲ್ಯ ಅವಕಾಶವನ್ನು ಸಹ ʻಐಎಫ್ಎಫ್ಐʼ ಒದಗಿಸುತ್ತದೆ. 

ಯಾವುದೆ ಚಲನಚಿತ್ರೋತ್ಸವದ ಯಶಸ್ಸಿನಲ್ಲಿ, ಚಲನಚಿತ್ರ ಸಂಸ್ಕೃತಿಯನ್ನು ಪ್ರಚುರಪಡಿಸುವಲ್ಲಿ, ಕಲೆಯ ಬಗ್ಗೆ ನೈಜ ಪ್ರೀತಿಯನ್ನು ಬೆಳೆಸುವಲ್ಲಿ ಹಾಗೂ ಮಾನವನ ಸ್ಥಿತಿಯ ಆಳ ಮತ್ತು ಅಗಲದಲ್ಲಿ ನಮ್ಮನ್ನು ಮುಳುಗಿಸಿ-ತೇಲಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಮಾಹಿತಿ ಮತ್ತು ಸಂವಹನವು ಪ್ರಮುಖ ಪಾತ್ರ ವಹಿಸುತ್ತದೆ. ಉತ್ಸವಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಉತ್ಸವದಲ್ಲಿ ಭಾಗವಹಿಸಲು ನಾವು ಮಾಧ್ಯಮ ಪ್ರತಿನಿಧಿಗಳಾದ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ಆ ಮೂಲಕ ನಿಮ್ಮ ಲೇಖನಿ, ಧ್ವನಿ, ಸಂವೇದನೆಗಳನ್ನು ಒಳಗೊಂಡ ಮಾಧ್ಯಮದ ಶಕ್ತಿಯ ಮೂಲಕ ಚಲನಚಿತ್ರೋತ್ಸವದ ಸಂಭ್ರಮಾಚರಣೆಗೆ ಕೊಡುಗೆ ನೀಡಬಲ್ಲ ವೃತ್ತಿಪರ ಅವಕಾಶವನ್ನು ಬಳಸಿಕೊಳ್ಳಲು ನಾವು ನಿಮಗೆ ಕರೆ ನೀಡುತ್ತಿದ್ದೇವೆ. 

ನೀವು 2022ರ ಜನವರಿ 1ಕ್ಕೆ 21 ವರ್ಷ ವಯಸ್ಸು ಪೂರ್ಣಗೊಳಿಸಿದ್ದರೆ ಮತ್ತು ಮುದ್ರಣ, ವಿದ್ಯುನ್ಮಾನ ಅಥವಾ ಡಿಜಿಟಲ್/ಆನ್ಲೈನ್ ಮಾಧ್ಯಮ ಸಂಸ್ಥೆಗೆ ಸೇರಿದವರಾಗಿದ್ದರೆ ನೀವು ಮಾಧ್ಯಮ ಪ್ರತಿನಿಧಿಯಾಗಿ ಭಾಗವಹಿಸಬಹುದು. ನೀವು ವಯಸ್ಸಿನ ಮಾನದಂಡವನ್ನು ಪೂರೈಸಿದರೆ ಮತ್ತು ನೀವು ಫ್ರೀಲಾನ್ಸ್ ಪತ್ರಕರ್ತರಾಗಿದ್ದರೆ ನಿಮಗೂ ಸಹ ಸ್ವಾಗತವಿದೆ. ಈ ಲಿಂಕ್‌ ಮೂಲಕ ನೀವು ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು:http://https://my.iffigoa.org/extranet/media/

ಈ ಪ್ರಕ್ರಿಯೆಯು ಸಾಕಷ್ಟು ಸರಳವಾಗಿದೆ. ಆದರೆ ನಿಮಗೆ ಯಾವುದಾದರೂ ಸಂದೇಹಗಳಿದ್ದರೆ, ಲಿಂಕ್‌ನಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳು ನಿಮಗೆ ನೆರವಾಗಲಿವೆ. ನಿಮ್ಮ ಸಂದೇಹಗಳು ಪರಿಹಾರವಾಗದಿದ್ದರೆ, iffi-pib[at]nic[dot]in ಮೂಲಕ ಅಥವಾ +91-832-2956418 ದೂರವಾಣಿ ಮೂಲಕ (ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ) ʻಪಿಐಬಿʼಯಲ್ಲಿ ನಮ್ಮನ್ನು ಸಂಪರ್ಕಿಸಬಹುದು. 

ನಿಮ್ಮ ಅರ್ಜಿಯನ್ನು 2022ರ ನವೆಂಬರ್ 5ರ ರಾತ್ರಿ 11:59:59 ಗಂಟೆ ಒಳಗಾಗಿ (ಭಾರತೀಯ ಪ್ರಮಾಣಿತ ಸಮಯ) ಆನ್‌ಲೈನ್‌ನಲ್ಲಿ ಸಲ್ಲಿಸಲು ಮರೆಯಬೇಡಿ. ಅದಕ್ಕಾಗಿ ಅಷ್ಟು ದಿನ ಕಾಯುವುದು ಏಕೆ?  ತಕ್ಷಣವೇ ಅರ್ಜಿ ಸಲ್ಲಿಸಬಾರದೇಕೆ?

ಪ್ರತಿ ಮಾಧ್ಯಮ ಸಂಸ್ಥೆಗೆ ನೀಡಬೇಕಾದ ಮಾನ್ಯತೆಗಳ ಸಂಖ್ಯೆ ಸೇರಿದಂತೆ, ಮಾಧ್ಯಮ ಸಂಸ್ಥೆಯ ಆವರ್ತಕತೆ, ಅದರ ಗಾತ್ರ (ಪ್ರಸಾರ, ಪ್ರೇಕ್ಷಕರು, ತಲುಪುವಿಕೆ), ಸಿನೆಮಾದ ಮೇಲೆ ಅದರ ಗಮನ ಮತ್ತು ಅದು ʻಐಎಫ್ಎಫ್ಐʼಗೆ ನೀಡುವ ಮಾಧ್ಯಮ ಕವರೇಜ್‌ಗೆ ಅನುಗುಣವಾಗಿ ಮಾನ್ಯತೆಗಳ ಪ್ರಕ್ರಿಯೆಯನ್ನು ನಾವು (ಪಿಐಬಿ) ನಡೆಸುತ್ತೇವೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ನಿಮ್ಮ ಸ್ವಂತ ಯೋಗಕ್ಷೇಮಕ್ಕಾಗಿ ನೀವು ಕೋವಿಡ್ -19 ವಿರುದ್ಧ ಲಸಿಕೆ ಪಡೆದಿರುತ್ತೀರಿ ಎಂದು ನಾವು ಭಾವಿಸಿದ್ದೇವೆ. ನೀವು ಒಂದು ಅಥವಾ ಹೆಚ್ಚಿನ ಡೋಸ್ ವ್ಯಾಕ್ಸಿನೇಷನ್ ಪಡೆದಿದ್ದರೆ, ನಿಮ್ಮ ಲಸಿಕಾ ಪ್ರಮಾಣಪತ್ರವನ್ನು ಪ್ರತಿನಿಧಿ ನೋಂದಣಿ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿ.

 

ಐಐಎಫ್‌ಐ ಬಗ್ಗೆ

1952 ರಲ್ಲಿ ಸ್ಥಾಪನೆಯಾದ ʻಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವʼ (ಐಎಫ್ಎಫ್ಐ) ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. 2004ರಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ನಡೆದ ಈ ಉತ್ಸವವು ಕರಾವಳಿ ರಾಜ್ಯದಲ್ಲೇ ನೆಲೆಯನ್ನು ಕಂಡುಕೊಂಡಿದೆ. 2014ರಲ್ಲಿ ಗೋವಾವನ್ನು ʻಐಎಫ್ಎಫ್ಐʼಗೆ ಶಾಶ್ವತ ಸ್ಥಳವೆಂದು ಘೋಷಿಸಲಾಗಿದೆ. ಹೀಗಾಗಿ ಪ್ರತಿ ವರ್ಷ ಇಲ್ಲಿಯೇ ಈ ಚಲನಚಿತ್ರೋತ್ಸವ ನಡೆಯುತ್ತದೆ. 

ಚಲನಚಿತ್ರಗಳು, ಅವುಗಳು ಹೇಳುವ ಕಥೆಗಳು ಮತ್ತು ಅವುಗಳ ಹಿಂದಿನ ಜನರನ್ನು ಪರಸ್ಪರ  ಭೇಟಿಯಾಗಿಸಿ ಸಂಭ್ರಮಿಸುವುದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ದೇಶವಾಗಿದೆ. ಹಾಗೆ ಮಾಡುವ ಮೂಲಕ, ನಾವು ಚಲನಚಿತ್ರಗಳ ಬಗ್ಗೆ ಪರಿಪಕ್ವ ಮೆಚ್ಚುಗೆ ವ್ಯಕ್ತಪಡಿಸಲು ಮತ್ತು ಅವುಗಳತ್ತ ಆಳ-ಅಗಲವಾದ ಉತ್ಕಟ ಪ್ರೀತಿಯನ್ನು ತೋರಿಸಲು, ಅವುಗಳನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಪ್ರಯತ್ನಿಸುತ್ತೇವೆ. ಜೊತೆಗೆ ಜನರ ನಡುವೆ ಪ್ರೀತಿ, ತಿಳಿವಳಿಕೆ ಮತ್ತು ಭ್ರಾತೃತ್ವದ ಬಾಂಧವ್ಯವನ್ನು ಬೆಸೆಯುವುದು; ಹಾಗು ವೈಯಕ್ತಿಕ ಮತ್ತು ಸಾಮೂಹಿಕ ಉತ್ಕೃಷ್ಟತೆಯ ಹೊಸ ಶಿಖರಗಳನ್ನು ಏರಲು ಅವರನ್ನು ಪ್ರೇರೇಪಿಸುವುದು ಸಹ ಇದರ ಉದ್ದೇಶವಾಗಿದೆ.

ಈ ಉತ್ಸವವನ್ನು ʻಗೋವಾ ಮನರಂಜನಾ ಸೊಸೈಟಿʼ ಹಾಗೂ ಆತಿಥೇಯ ಗೋವಾ ಸರಕಾರದ ಸಹಯೋಗದೊಂದಿಗೆ ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪ್ರತಿ ವರ್ಷ ಆಯೋಜಿಸುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ಡಿಎಫ್ಎಫ್) ಸಾಮಾನ್ಯವಾಗಿ ಇಲ್ಲಿಯವರೆಗೆ ಉತ್ಸವದ ನೇತೃತ್ವ ವಹಿಸುತ್ತಿತ್ತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ಎಫ್‌ಡಿಸಿ) ಜೊತೆ ಚಲನಚಿತ್ರ ಮಾಧ್ಯಮ ಘಟಕಗಳನ್ನು ವಿಲೀನಗೊಳಿಸಿದ ಪರಿಣಾಮವಾಗಿ, ಪ್ರಸ್ತುತ ʻಎನ್ಎಫ್‌ಡಿಸಿʼ ಉತ್ಸವದ ನಿರ್ವಹಣೆಯನ್ನು ವಹಿಸಿಕೊಂಡಿದೆ.

ʻಐಎಫ್ಎಫ್ಐನʼ 53ನೇ ಆವೃತ್ತಿಗೆ ಸಂಬಂಧಿಸಿದ ಎಲ್ಲ ತಾಜಾ ಮಾಹಿತಿಯನ್ನು ಉತ್ಸವದ ಜಾಲತಾಣ www.iffigoa.org, ಪಿಐಬಿ ಜಾಲತಾಣ (pib.gov.in), ಟ್ವಿಟರ್, ಫೇಸ್‌ಬುಕ್‌ ಮತ್ತು ಇನ್ಸ್‌ಟಾಗ್ರಾಮ್‌ನಲ್ಲಿ; ಐಎಫ್ಎಫ್ಐನ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪಿಐಬಿ ಗೋವಾದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪಡೆಯಬಹುದು. ಸಿನಿಮೀಯ ಸಂಭ್ರಮಾಚರಣೆಯನ್ನು ಸವಿಯಲು ಮತ್ತು ಅದರ ಸಂತೋಷವನ್ನು ಹಂಚಿಕೊಳ್ಳಲು ಸಿದ್ಧರಾಗಿ.



(Release ID: 1865626) Visitor Counter : 225