ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

5ಜಿ ಸೇವೆಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರಿಂದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ 6 ನೇ ಆವೃತ್ತಿ ಉದ್ಘಾಟನೆ

“5ಜಿ ದೇಶದಲ್ಲಿ ಹೊಸ ಯುಗದ ಬಾಗಿಲು ತಟ್ಟಿದೆ. 5ಜಿ ಅನಂತ ಅವಕಾಶಗಳ ಆರಂಭವಾಗಿದೆ”

"ನವ ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕನಾಗಿ ಉಳಿಯುವುದಿಲ್ಲ, ಆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ"

"5ಜಿ ಯೊಂದಿಗೆ, ಭಾರತವು ಮೊದಲ ಬಾರಿಗೆ ಟೆಲಿಕಾಂ ತಂತ್ರಜ್ಞಾನದಲ್ಲಿ ಜಾಗತಿಕ ಗುಣಮಟ್ಟವನ್ನು ಸ್ಥಾಪಿಸಿದೆ"

"2014 ರಲ್ಲಿ ಮೊಬೈಲ್ ಫೋನ್‌ಗಳ ಶೂನ್ಯ ರಫ್ತಿನಿಂದ, ಇಂದು ನಾವು ಸಾವಿರಾರು ಕೋಟಿ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡುವ ದೇಶವಾಗಿ ಮಾರ್ಪಟ್ಟಿದ್ದೇವೆ"

"ನಾನು ಯಾವಾಗಲೂ ದೇಶದ ಜನಸಾಮಾನ್ಯನ ತಿಳುವಳಿಕೆ, ಬುದ್ಧಿವಂತಿಕೆ ಮತ್ತು ಕುತೂಹಲ ಮನಸ್ಥಿತಿಯ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇನೆ"

"ಡಿಜಿಟಲ್ ಇಂಡಿಯಾ ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ವೇದಿಕೆಯನ್ನು ಒದಗಿಸಿದೆ"

"5ಜಿ ತಂತ್ರಜ್ಞಾನವು ವೇಗದ ಇಂಟರ್ನೆಟ್ ಲಭ್ಯತೆಗೆ ಮಾತ್ರ ಸೀಮಿತವಾಗಿಲ್ಲ, ಇದು ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ"

Posted On: 01 OCT 2022 1:08PM by PIB Bengaluru

ಹೊಸ ತಾಂತ್ರಿಕ ಯುಗಕ್ಕೆ ನಾಂದಿ ಹಾಡುವ 5ಜಿ ಸೇವೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಆರನೇ ಆವೃತ್ತಿಯನ್ನು ಉದ್ಘಾಟಿಸಿದರು ಮತ್ತು ಈ ಸಂದರ್ಭಕ್ಕಾಗಿ ಆಯೋಜಿಸಲಾಗಿದ್ದ ಐಎಂಸಿ ಪ್ರದರ್ಶನವನ್ನು ವೀಕ್ಷಿಸಿದರು. 

ಈ ಐತಿಹಾಸಿಕ ಸಂದರ್ಭದಲ್ಲಿ ಉದ್ಯಮದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ರಿಲಯನ್ಸ್‌ ಅಧ್ಯಕ್ಷರಾದ ಶ್ರೀ ಮುಖೇಶ್ ಅಂಬಾನಿ ಅವರು, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೃಷ್ಟಿಕೋನವನ್ನು ಪ್ರೇರೇಪಿಸುತ್ತಿರುವುದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. “ಸರ್ಕಾರದ ಪ್ರತಿಯೊಂದು ಕ್ರಮ ಮತ್ತು ನೀತಿಯನ್ನು ಭಾರತವನ್ನು ಆ ಗುರಿಯತ್ತ ಮುನ್ನಡೆಸಲು ಕೌಶಲ್ಯದಿಂದ ರೂಪಿಸಲಾಗಿದೆ. 5ಜಿ ಯುಗಕ್ಕೆ ಭಾರತದ ನಡಿಗೆಯನ್ನು ವೇಗಗೊಳಿಸಲು ತೆಗೆದುಕೊಂಡ ಕ್ರಮಗಳು ನಮ್ಮ ಪ್ರಧಾನ ಮಂತ್ರಿಯವರ ಸಂಕಲ್ಪಕ್ಕೆ ಬಲವಾದ ಪುರಾವೆಗಳನ್ನು ಒದಗಿಸುತ್ತವೆ" ಎಂದು ಅವರು ಹೇಳಿದರು. ಶಿಕ್ಷಣ, ಆರೋಗ್ಯ ಮತ್ತು ಹವಾಮಾನ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ 5ಜಿ ಯ ಸಾಧ್ಯತೆಗಳನ್ನು ಅವರು ವಿವರಿಸಿದರು. “ನಿಮ್ಮ ನಾಯಕತ್ವವು ಜಾಗತಿಕವಾಗಿ ಭಾರತದ ಪ್ರತಿಷ್ಠೆ ಮತ್ತು ಶಕ್ತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿಸಿದೆ. ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ನವಚೈತನ್ಯದ ಭಾರತವು ಮೇಲೇರುವುದನ್ನು ತಡೆಯಲು ಸಾಧ್ಯವಿಲ್ಲ ”ಎಂದು ಶ್ರೀ ಅಂಬಾನಿ ಹೇಳಿದರು.

ಭಾರ್ತಿ ಎಂಟರ್‌ಪ್ರೈಸ್‌ನ ಅಧ್ಯಕ್ಷ ಶ್ರೀ ಸುನಿಲ್ ಭಾರ್ತಿ ಮಿತ್ತಲ್ ಅವರು ಮಾತನಾಡಿ, 5ಜಿ ಸೇವೆಯ ಆರಂಭವು ಹೊಸ ಯುಗಾರಂಭವಾಗಿದೆ ಮತ್ತು ಇದು ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ ನಡೆಯುತ್ತಿರುವುದರಿಂದ ಮತ್ತಷ್ಟು ವಿಶೇಷವಾಗಿದೆ ಎಂದರು. “ಪ್ರಧಾನಿಯವರ ಪ್ರಯತ್ನದಿಂದ ಇದು ದೇಶದಲ್ಲಿ ಹೊಸ ಶಕ್ತಿಯನ್ನು ತರುತ್ತದೆ. ತಂತ್ರಜ್ಞಾನವನ್ನು ಅತ್ಯಂತ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಮತ್ತು ಅದನ್ನು ಸಾಟಿಯಿಲ್ಲದ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಬಳಸುವ ಪ್ರಧಾನ ಮಂತ್ರಿಯವರಂತಹ ನಾಯಕನನ್ನು ಪಡೆದ ನಾವು ಅದೃಷ್ಟವಂತರು” ಎಂದು ಅವರು ಹೇಳಿದರು. ಇದು ಜನರಿಗೆ, ವಿಶೇಷವಾಗಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಅನಂತ ಅವಕಾಶಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತೆಗೆದುಕೊಂಡ ಉಪಕ್ರಮಗಳನ್ನು ಅವರು ನೆನಪಿಸಿಕೊಂಡರು. ಸಾಂಕ್ರಾಮಿಕ ಸಮಯದಲ್ಲಿ, ಜನರು ಹಳ್ಳಿ ಮತ್ತು ಮನೆಗಳಲ್ಲಿ ಇರುವಂತಾಯಿತು. ಆದರೆ ದೇಶದ ಹೃದಯ ಬಡಿತವು ಒಂದು ಸೆಕೆಂಡ್ ಕೂಡ ನಿಲ್ಲಲಿಲ್ಲ. ಅದರ ಶ್ರೇಯವು ಡಿಜಿಟಲ್ ದೃಷ್ಟಿಕೋನಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು.  ಮೇಕ್ ಇನ್ ಇಂಡಿಯಾ ದೃಷ್ಟಿಕೋನದ ದಿಟ್ಟತನ ಮತ್ತು ಸಾಧನೆಯನ್ನು ಅವರು ಶ್ಲಾಘಿಸಿದರು. "ಡಿಜಿಟಲ್ ಇಂಡಿಯಾದ ಜೊತೆಗೆ, ಪ್ರಧಾನಮಂತ್ರಿಯವರು ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನವನ್ನು ಸಹ ಮುನ್ನೆಲೆಗೆ ತಂದರು ಮತ್ತು ಭಾರತವು ಯುನಿಕಾರ್ನ್‌ಗಳನ್ನು ಸೃಷ್ಟಿಸಲು ಪ್ರಾರಂಭಿಸಿತು" ಎಂದು ಶ್ರೀ ಮಿತ್ತಲ್ ಹೇಳಿದರು. 5ಜಿ  ಆಗಮನದಿಂದಾಗಿ, ದೇಶವು ಇನ್ನೂ ಅನೇಕ ಯುನಿಕಾರ್ನ್‌ಗಳನ್ನು ಸೇರಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.

ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾದ ಶ್ರೀ ಕುಮಾರ್ ಮಂಗಲಂ ಬಿರ್ಲಾ ಅವರು 5ಜಿ ಆರಂಭವನ್ನು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸುವ ಪರಿವರ್ತನೆಯ ಘಟನೆ ಎಂದು ಕರೆದರು ಮತ್ತು ಟೆಲಿಕಾಂ ತಂತ್ರಜ್ಞಾನವನ್ನು ಭಾರತದ ಬೆಳವಣಿಗೆಯ ತಳಹದಿ ಎಂದು ಪುನರುಚ್ಚರಿಸಿದರು. ಜಾಗತಿಕ ಮಟ್ಟದಲ್ಲಿ ಭಾರತವು ಛಾಪು ಮೂಡಿಸಲು ಕಾರಣವಾದ ತಂತ್ರಜ್ಞಾನದಲ್ಲಿ ತಲೆಮಾರಿನಷ್ಟು ಜಿಗಿತಕ್ಕೆ ಕಾರಣವಾದ ದೂರದೃಷ್ಟಿ ಮತ್ತು ನಾಯಕತ್ವ ನೀಡಿದ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು. ಸಾಂಕ್ರಾಮಿಕ ಸಮಯದಲ್ಲಿ ಟೆಲಿಕಾಂ ಉದ್ಯಮವನ್ನು ಬೆಂಬಲಿಸಿದ ಮತ್ತು ಉದ್ಯಮದಲ್ಲಿ ವಿನೂತನ ಟೆಲಿಕಾಂ ಸುಧಾರಣೆಗಳನ್ನು ತಂದಿದ್ದಕ್ಕಾಗಿ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. 5ಜಿ ಚಾಲನೆಯು ಭಾರತದ ರೋಚಕ ಪ್ರಯಾಣದ ಆರಂಭವಾಗಿದೆ. ನಾವು 5ಜಿ ಅಭಿವೃದ್ಧಿಯಲ್ಲಿ ಮಿತಿಯಿಲ್ಲದ ಸಾಮರ್ಥ್ಯವನ್ನು ಮತ್ತು  ಬಳಕೆಯ ಪ್ರಕರಣಗಳನ್ನು ನೋಡುತ್ತೇವೆ ಎಂದು ಶ್ರೀ ಬಿರ್ಲಾ ಹೇಳಿದರು. 
ಭಾರತದಲ್ಲಿ 5ಜಿ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಪ್ರಧಾನ ಮಂತ್ರಿಯವರ ಮುಂದೆ ತಲಾ ಒಂದು ಬಳಕೆಯ ಪ್ರಕರಣವನ್ನು ಪ್ರದರ್ಶಿಸಿದರು.

ರಿಲಯನ್ಸ್ ಜಿಯೋ ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್‌, ಒಡಿಸ್ಸಾದ ಮೂರು ವಿಭಿನ್ನ ಸ್ಥಳಗಳ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿತು. ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ 5ಜಿ ಸೇವೆಯು ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ, ಅವರ ನಡುವಿನ ಭೌತಿಕ ಅಂತರವನ್ನು ಹೇಗೆ ಅಳಿಸಿಹಾಕುತ್ತದೆ ಎಂಬುದನ್ನು ಇದು ತೋರಿಸಿತು. ಇದು ಪರದೆಯ ಮೇಲೆ ಆಗ್ಮೆಂಟೆಡ್ ರಿಯಾಲಿಟಿ (ಎಆರ್‌) ಶಕ್ತಿಯನ್ನು ಪ್ರದರ್ಶಿಸಿತು ಮತ್ತು ಎಆರ್‌ಸಾಧನದ ಅಗತ್ಯವಿಲ್ಲದೆಯೇ ದೂರದಿಂದಲೇ ದೇಶದಾದ್ಯಂತ ಮಕ್ಕಳಿಗೆ ಕಲಿಸಲು ಹೇಗೆ ಬಳಸಲಾಗುತ್ತದೆ ಎಂಬುದನ್ನು ಪ್ರದರ್ಶಿಸಿತು. ಮಹಾರಾಷ್ಟ್ರದ ರಾಯಗಢದ ಜ್ಞಾನಜ್ಯೋತಿ ಸಾವಿತ್ರಿಬಾಯಿ ಫುಲೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಸಂವಾದ ನಡೆಸಿದರು. ಗುಜರಾತ್‌ನ ಗಾಂಧಿನಗರದ ರೋಪ್ಡಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಸಂಪರ್ಕ ಸಾಧಿಸಿದರು. ಒಡಿಶಾ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಅವರ ಸಮ್ಮುಖದಲ್ಲಿ ಒಡಿಶಾದ ಮೈರ್‌ಭಂಜ್‌ನ ಎಸ್‌ಎಲ್‌ಎಸ್ ಸ್ಮಾರಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಶ್ರೀ ಅಭಿಮನ್ಯು ಬಸು, ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್‌ ಸ್ಕೂಲ್‌, ಬಿಕೆಸಿ ಮುಂಬೈ ಸಹ 5ಜಿ ತಂತ್ರಜ್ಞಾನದ ಬಳಕೆಯನ್ನು ಪ್ರದರ್ಶಿಸಿದವು. ಶಿಕ್ಷಣದಲ್ಲಿ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳ ಉತ್ಸಾಹವನ್ನು ಪ್ರಧಾನಿಯವರು ಗಮನಿಸಿದರು. ಲೇಖಕ ಅಮಿಶ್ ತ್ರಿಪಾಠಿ ಈ ವಿಭಾಗವನ್ನು ಪರಿಚಯಿಸಿದರು.

ವೊಡಾಫೋನ್ ಐಡಿಯಾ ಪರೀಕ್ಷಾ ಪ್ರಕರಣವು ದೆಹಲಿ ಮೆಟ್ರೋದ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಕೆಲಸಗಾರರ ಸುರಕ್ಷತೆಯನ್ನು ವೇದಿಕೆಯಲ್ಲಿ ಡಿಜಿಟಲ್ ಅವಳಿ ಸುರಂಗವನ್ನು ರಚಿಸುವ ಮೂಲಕ ಪ್ರದರ್ಶಿಸಿತು. ಡಿಜಿಟಲ್ ಅವಳಿ ಸರುಂಗವು ನೈಜ ಸಮಯದಲ್ಲಿ ಕಾರ್ಮಿಕರಿಗೆ ಸುರಕ್ಷತೆ ಎಚ್ಚರಿಕೆಗಳನ್ನು ನೀಡಲು ಸಹಾಯ ಮಾಡುತ್ತದೆ. ವಿಆರ್‌ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನೈಜ ಸಮಯದಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಪ್ರಧಾನಮಂತ್ರಿಯವರು ನೇರವಾಗಿ ಪ್ರಾತ್ಯಕ್ಷಿಕೆ ತೆಗೆದುಕೊಂಡರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಸಕ್ಸೇನಾ ಅವರ ಸಮ್ಮುಖದಲ್ಲಿ ದೆಹಲಿಯ ದ್ವಾರಕಾ ಮೆಟ್ರೋ ಸುರಂಗದಲ್ಲಿ ಕೆಲಸ ಮಾಡುವ ಶ್ರೀ ರಿಂಕು ಕುಮಾರ್ ಅವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ಬಳಕೆದಾರರ ಅನುಭವ ಮತ್ತು ಕಲಿಕೆಯ ಪ್ರಗತಿಯ ಬಗ್ಗೆ ಪ್ರಧಾನಿಯವರು ವಿಚಾರಿಸಿದರು. ಸುರಕ್ಷತೆಯ ಬಗ್ಗೆ ಕಾರ್ಮಿಕರಿಗೆ ಮೂಡಿರುವ ವಿಶ್ವಾಸವು ಹೊಸ ತಂತ್ರಜ್ಞಾನದ ದೊಡ್ಡ ಕೊಡುಗೆಯಾಗಿದೆ ಎಂದು ಅವರು ಹೇಳಿದರು. ರಾಷ್ಟ್ರದ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ ಅವರು ಭಾರತದ ಕಾರ್ಮಿಕರನ್ನು ಶ್ಲಾಘಿಸಿದರು.

ಏರ್‌ಟೆಲ್ ಪ್ರಾತ್ಯಕ್ಷಿಕೆಯಲ್ಲಿ, ಉತ್ತರ ಪ್ರದೇಶದ ಡಂಕೌರ್‌ನ ವಿದ್ಯಾರ್ಥಿಗಳು ವರ್ಚುವಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಹಾಯದಿಂದ ಸೌರವ್ಯೂಹದ ಬಗ್ಗೆ ಕಲಿಯಲು ಉತ್ಸಾಹಭರಿತ ಮತ್ತು ತಲ್ಲೀನಗೊಳಿಸುವ ಶಿಕ್ಷಣದ ಅನುಭವವನ್ನು ವೀಕ್ಷಿಸಿದರು. ವಿದ್ಯಾರ್ಥಿನಿ ಖುಷಿ, ಹೊಲೊಗ್ರಾಮ್ ಮೂಲಕ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ಕಲಿಕೆಯ ಅನುಭವವನ್ನು ಪ್ರಧಾನಿಯೊಂದಿಗೆ ಹಂಚಿಕೊಂಡರು. ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ವಾರಾಣಸಿಯ ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್‌ನಿಂದ ಸಂಪರ್ಕ ಹೊಂದಿದರು. ವಿಆರ್ ಶಿಕ್ಷಣದ ಅನುಭವವು ಪರಿಕಲ್ಪನೆಗಳನ್ನು ಸಮಗ್ರ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆಯೇ ಎಂದು ಪ್ರಧಾನಿಯವರು ವಿಚಾರಿಸಿದರು. ಈ ಅನುಭವದ ನಂತರ ಹೊಸ ವಿಷಯಗಳನ್ನು ಕಲಿಯುವತ್ತ ಹೆಚ್ಚು ಒಲವು ಬರುತ್ತಿದೆ ಎಂದು ವಿದ್ಯಾರ್ಥಿನಿ ಹೇಳಿದರು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಇಂದಿನ ಶೃಂಗಸಭೆಯು ಜಾಗತಿಕವಾಗಿರಬಹುದು, ಆದರೆ ಅದರ ಪರಿಣಾಮಗಳು ಮತ್ತು ದಿಕ್ಕುಗಳು ಸ್ಥಳೀಯವಾಗಿವೆ ಎಂದು ಹೇಳಿದರು. 21ನೇ ಶತಮಾನದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಇಂದು ವಿಶೇಷ ದಿನವಾಗಿದೆ ಎಂದರು. ಇಂದು, 130 ಕೋಟಿ ಭಾರತೀಯರು ದೇಶದಿಂದ ಮತ್ತು ದೇಶದ ಟೆಲಿಕಾಂ ಉದ್ಯಮದಿಂದ 5ಜಿ ರೂಪದಲ್ಲಿ ಅದ್ಭುತ ಉಡುಗೊರೆಯನ್ನು ಪಡೆಯುತ್ತಿದ್ದಾರೆ. 5ಜಿ ದೇಶದಲ್ಲಿ ಹೊಸ ಯುಗದ ಬಾಗಿಲು ತಟ್ಟಿದೆ. 5ಜಿ ಅನಂತ ಅವಕಾಶಗಳ ಆರಂಭವಾಗಿದೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಭಾರತೀಯನನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು. ಈ 5ಜಿ ಆರಂಭ ಮತ್ತು ತಂತ್ರಜ್ಞಾನದ ಯಾತ್ರೆಯಲ್ಲಿ, ಗ್ರಾಮೀಣ ಪ್ರದೇಶಗಳು ಮತ್ತು ಕಾರ್ಮಿಕರು ಸಮಾನ ಪಾಲುದಾರರಾಗಿದ್ದಾರೆ ಎಂದು ಅವರು ಹೇಳಿದರು.

5ಜಿ ಆರಂಭದ ಇನ್ನೊಂದು ಸಂದೇಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನವ ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕನಾಗಿ ಉಳಿಯುವುದಿಲ್ಲ, ಬದಲಿಗೆ ಆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಭವಿಷ್ಯದ ವೈರ್‌ಲೆಸ್ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪಾದನೆಯಲ್ಲಿ ಭಾರತವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದರು. ಭಾರತವು 2ಜಿ, 3ಜಿ ಮತ್ತು 4ಜಿ ತಂತ್ರಜ್ಞಾನಗಳಿಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿತ್ತು ಎಂದ ಪ್ರಧಾನಿಯವರು, ಆದರೆ 5ಜಿ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 5ಜಿ ಯೊಂದಿಗೆ, ಭಾರತವು ಮೊದಲ ಬಾರಿಗೆ ಟೆಲಿಕಾಂ ತಂತ್ರಜ್ಞಾನದಲ್ಲಿ ಜಾಗತಿಕ ಗುಣಮಟ್ಟವನ್ನು ಸ್ಥಾಪಿಸಿದೆ  ಎಂದು ಹೇಳಿದರು.

ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದ ಪ್ರಧಾನಿಯವರು, ಇದು ಕೇವಲ ಸರ್ಕಾರದ ಯೋಜನೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಡಿಜಿಟಲ್ ಇಂಡಿಯಾ ಕೇವಲ ಹೆಸರಲ್ಲ, ಇದು ದೇಶದ ಅಭಿವೃದ್ಧಿಗೆ ದೊಡ್ಡ ದೃಷ್ಟಿಕೋನವಾಗಿದೆ. ಜನರಿಗಾಗಿ ಕೆಲಸ ಮಾಡುವ, ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವುದು ಈ ದೃಷ್ಟಿಕೋನದ ಗುರಿಯಾಗಿದೆ ಎಂದು ಹೇಳಿದರು.

ಡಿಜಿಟಲ್ ಇಂಡಿಯಾಗೆ ಸಮಗ್ರ ವಿಧಾನದ ಅಗತ್ಯದ ಬಗ್ಗೆ ಮಾತನಾಡಿದ  ಪ್ರಧಾನಮಂತ್ರಿಯವರು, “ನಾವು ಏಕಕಾಲದಲ್ಲಿ 4 ಸ್ತಂಭಗಳ ಮೇಲೆ, ನಾಲ್ಕು ದಿಕ್ಕುಗಳನ್ನು ಕೇಂದ್ರೀಕರಿಸಿದ್ದೇವೆ. ಮೊದಲನೆಯದಾಗಿ, ಸಾಧನದ ಬೆಲೆ, ಎರಡನೆಯದು, ಡಿಜಿಟಲ್ ಸಂಪರ್ಕ, ಮೂರನೆಯದು, ಡೇಟಾದ ವೆಚ್ಚ, ನಾಲ್ಕನೆಯದು ಮತ್ತು ಮುಖ್ಯವಾದ್ದು, 'ಡಿಜಿಟಲ್ ಫಸ್ಟ್' ಕಲ್ಪನೆ ಎಂದು ಹೇಳಿದರು.

ಮೊದಲ ಸ್ತಂಭದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕಡಿಮೆ ವೆಚ್ಚದ ಸಾಧನಗಳನ್ನು ಆತ್ಮನಿರ್ಭರತೆಯಿಂದ ಮಾತ್ರ ಸಾಧಿಸಬಹುದು ಎಂದು ಹೇಳಿದರು. ಎಂಟು ವರ್ಷಗಳ ಹಿಂದೆ ಭಾರತದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳು ಇದ್ದವು. ಅವು ಈಗ 200 ಕ್ಕೆ ಏರಿವೆ ಎಂದು ಶ್ರೀ ಮೋದಿ ಹೇಳಿದರು. 2014ರಲ್ಲಿ ಮೊಬೈಲ್ ಫೋನ್‌ಗಳ  ರಫ್ತು ಶೂನ್ಯವಾಗಿತ್ತು. ನಾವು ಇಂದು ಸಾವಿರಾರು ಕೋಟಿ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡುವ ದೇಶವಾಗಿ ಮಾರ್ಪಟ್ಟಿದ್ದೇವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಹಜವಾಗಿ, ಈ ಎಲ್ಲ ಪ್ರಯತ್ನಗಳು ಸಾಧನದ ವೆಚ್ಚದ ಮೇಲೆ ಪ್ರಭಾವ ಬೀರಿವೆ. ಈಗ ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.

ಡಿಜಿಟಲ್ ಸಂಪರ್ಕದ ಎರಡನೇ ಸ್ತಂಭವನ್ನು ಕುರಿತು ಮಾತನಾಡಿದ ಅವರು, ಇಂಟರ್ನೆಟ್ ಬಳಕೆದಾರರು 2014 ರಲ್ಲಿದ್ದ 6 ಕೋಟಿಯಿಂದ ಈಗ 80 ಕೋಟಿಗೆ ಏರಿದ್ದಾರೆ ಎಂದು ಮಾಹಿತಿ ನೀಡಿದರು. 2014 ರಲ್ಲಿ 100 ಕ್ಕಿಂತ ಕಡಿಮೆ ಪಂಚಾಯತ್‌ಗಳು ಆಪ್ಟಿಕಲ್‌ ಫೈಬರ್‌ ಸಂಪರ್ಕ ಹೊಂದಿದ್ದವು. ಈಗ ಅವುಗಳ ಸಂಖ್ಯೆ 1.7 ಲಕ್ಷವಾಗಿದೆ ಎಂದು ಅವರು ಹೇಳಿದರು. ಸರಕಾರವು ವಿದ್ಯುತ್ ಒದಗಿಸಲು ಮನೆ-ಮನೆಗೆ ಅಭಿಯಾನವನ್ನು ಪ್ರಾರಂಭಿಸಿದಂತೆಯೇ, ಹರ್ ಘರ್ ಜಲ್ ಅಭಿಯಾನದ ಮೂಲಕ ಎಲ್ಲರಿಗೂ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಕೆಲಸ ಮಾಡಿದೆ ಮತ್ತು ಉಜ್ವಲ ಯೋಜನೆಯ ಮೂಲಕ ಕಡುಬಡವರಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸಿದೆ. ನಮ್ಮ ಸರ್ಕಾರವು ಎಲ್ಲರಿಗೂ ಇಂಟರ್ನೆಟ್ ಗುರಿಯಲ್ಲೂ ಸಹ ಇದೇ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಮೂರನೇ ಸ್ತಂಭವಾದ ಡೇಟಾದ ವೆಚ್ಚದ ಬಗ್ಗೆ ಮಾತನಾಡಿ, ಉದ್ಯಮಕ್ಕೆ ಹಲವಾರು ಪ್ರೋತ್ಸಾಹಕಗಳನ್ನು ನೀಡಲಾಗಿದೆ ಮತ್ತು 4ಜಿಯಂತಹ ತಂತ್ರಜ್ಞಾನಗಳು ನೀತಿ ಬೆಂಬಲವನ್ನು ಪಡೆದುಕೊಂಡಿವೆ ಎಂದು ಪ್ರಧಾನಿ ಹೇಳಿದರು. ಇದು ಡೇಟಾದ ಬೆಲೆಯನ್ನು ಕಡಿಮೆ ಮಾಡಿತು ಮತ್ತು ದೇಶದಲ್ಲಿ ಡೇಟಾ ಕ್ರಾಂತಿಗೆ ನಾಂದಿ ಹಾಡಿತು. ಈ ಮೂರು ಸ್ತಂಭಗಳು ತಮ್ಮ ಪರಿಣಾಮವನ್ನು ಎಲ್ಲೆಡೆ ತೋರಿಸಲಾರಂಭಿಸಿದವು ಎಂದು ಅವರು ಹೇಳಿದರು.

ನಾಲ್ಕನೇ ಸ್ತಂಭ ಅಂದರೆ 'ಡಿಜಿಟಲ್ ಫಸ್ಟ್' ಕಲ್ಪನೆಯ ಕುರಿತು ಮಾತನಾಡಿ, ಬೆರಳೆಣಿಕೆಯಷ್ಟು ಗಣ್ಯ ವರ್ಗದವರು ಬಡವರಿಗೆ ಡಿಜಿಟಲ್‌ನ ಅರ್ಥ ಗೊತ್ತಾಗುತ್ತದೆಯೇ ಎಂದು ಪ್ರಶ್ನಿಸಿದ್ದನ್ನು ಮತ್ತು ಅವರ ಸಾಮರ್ಥ್ಯವನ್ನು ಅನುಮಾನಿಸಿದ್ದನ್ನು ಪ್ರಧಾನಿ ನೆನಪಿಸಿಕೊಂಡರು, ದೇಶದ ಸಾಮಾನ್ಯ ಮನುಷ್ಯನ ತಿಳುವಳಿಕೆ, ಬುದ್ಧಿವಂತಿಕೆ ಮತ್ತು ಕುತೂಹಲ ಮನಸ್ಥಿತಿಯ ಬಗ್ಗೆ ತಾವು ಯಾವಾಗಲೂ ನಂಬಿಕೆಯನ್ನು ಹೊಂದಿದ್ದೇನೆ. ದೇಶದ ಬಡವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸದಾ ಸಿದ್ಧರಿರುವುದನ್ನು ಕಂಡಿದ್ದೇನೆ ಎಂದು ಹೇಳಿದರು.

ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು, ಡಿಜಿಟಲ್ ಪಾವತಿಗೆ ದಾರಿ ಮಾಡಿಕೊಟ್ಟಿದ್ದು ಸರ್ಕಾರ ಎಂದರು. ಸರ್ಕಾರವೇ ಆ್ಯಪ್ ಮೂಲಕ ನಾಗರಿಕ ಕೇಂದ್ರಿತ ವಿತರಣಾ ಸೇವೆಯನ್ನು ಉತ್ತೇಜಿಸಿದೆ. ಅದು ರೈತರಾಗಿರಲಿ ಅಥವಾ ಸಣ್ಣ ಅಂಗಡಿಯವರಾಗಿರಲಿ, ಅವರ ದೈನಂದಿನ ಅಗತ್ಯಗಳನ್ನು ಅಪ್ಲಿಕೇಶನ್ ಮೂಲಕ ಪೂರೈಸಲು ನಾವು ಅವರಿಗೆ ಹಾದಿಯನ್ನು ತೋರಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಅವರು ಡಿಬಿಟಿ, ಶಿಕ್ಷಣ, ಲಸಿಕಾಕರಣ ಮತ್ತು ಆರೋಗ್ಯ ಸೇವೆಗಳ ತಡೆರಹಿತ ಮುಂದುವರಿಕೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದ ಕೆಲಸಗಳನ್ನು ಸ್ಮರಿಸಿದರು. ಈ ಸೇವೆಗಳನ್ನು ಮುಂದುವರಿಸಲು ಅನೇಕ ದೇಶಗಳು ಕಷ್ಟಪಟ್ಟವು ಎಂದು ಅವರು ಹೇಳಿದರು.

ಡಿಜಿಟಲ್ ಇಂಡಿಯಾ ವೇದಿಕೆಯನ್ನು ನೀಡಿದೆ ಎಂದು ಹೇಳಿದ ಪ್ರಧಾನಿ, ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳು ಈಗ ಎಲ್ಲರಿಗೂ ಮಾರುಕಟ್ಟೆ ದೊರೆತಿದೆ ಎಂದು ಹೇಳಿದರು. ಇಂದು ನೀವು ಸ್ಥಳೀಯ ಮಾರುಕಟ್ಟೆ ಅಥವಾ ತರಕಾರಿ ಮಾರುಕಟ್ಟೆಗೆ ಹೋಗಿ ನೋಡಿ, ಸಣ್ಣ ಬೀದಿಬದಿ ವ್ಯಾಪಾರಿ ಕೂಡ, ನಗದು ಬದಲಿಗೆ 'ಯುಪಿಐ' ಮೂಲಕ ವಹಿವಾಟು ಮಾಡಿ ಎಂದು ನಿಮಗೆ ಹೇಳುತ್ತಾನೆ ಎಂದು ಶ್ರೀ ಮೋದಿ ಹೇಳಿದರು. ಒಂದು ಸೌಲಭ್ಯ ಲಭ್ಯವಿದ್ದಾಗ, ಆಲೋಚನೆಯು ಧೈರ್ಯವನ್ನು ಪಡೆಯುತ್ತದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರ ಸ್ವಚ್ಛ ಉದ್ದೇಶದಿಂದ ಕೆಲಸ ಮಾಡಿದಾಗ ನಾಗರಿಕರ ಆಶಯಗಳೂ ಬದಲಾಗುತ್ತವೆ ಎಂದು ಪ್ರಧಾನಿ ಹೇಳಿದರು. ಇದು 2ಜಿ ಮತ್ತು 5ಜಿ ಉದ್ದೇಶದ (ನಿಯತ್ತು) ಪ್ರಮುಖ ವ್ಯತ್ಯಾಸವಾಗಿದೆ" ಎಂದು ಅವರು ಹೇಳಿದರು.

ದೇಶದಲ್ಲಿ ಡೇಟಾ ವೆಚ್ಚವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತಿ ಜಿಬಿಗೆ 300 ರೂಪಾಯಿಯಿದ್ದ ವೆಚ್ಚವು ಈಗ ಸುಮಾರು 10 ರೂಪಾಯಿಗೆ ಇಳಿದಿದೆ ಎಂದರು. ಸರ್ಕಾರದ ಗ್ರಾಹಕ ಕೇಂದ್ರಿತ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಡೇಟಾದ ವೆಚ್ಚವು ತುಂಬಾ ಕಡಿಮೆಯಾಗಿದೆ ಎಂದರು. ನಾವು ಇದರ ಬಗ್ಗೆ ಅಬ್ಬರ ಮಾಡಲಿಲ್ಲ ಮತ್ತು ದೊಡ್ಡ ಜಾಹೀರಾತುಗಳನ್ನು ಬಿಡುಗಡೆ ಮಾಡಲಿಲ್ಲ ಎಂಬುದು ಬೇರೆ ವಿಷಯ. ದೇಶದ ಜನರ ಅನುಕೂಲತೆ ಮತ್ತು ಜೀವನ ಹೇಗೆ ಸುಲಭವಾಯಿತು ಎಂಬುದರ ಮೇಲೆ ನಾವು ಗಮನ ಹರಿಸಿದ್ದೇವೆ. ಭಾರತವು ಮೊದಲ ಮೂರು ಕೈಗಾರಿಕಾ ಕ್ರಾಂತಿಗಳಿಂದ ಪ್ರಯೋಜನ ಪಡೆಯದಿರಬಹುದು, ಆದರೆ ಭಾರತವು 4 ನೇ ಕೈಗಾರಿಕಾ ಕ್ರಾಂತಿಯ ಸಂಪೂರ್ಣ ಲಾಭವನ್ನು ಪಡೆಯುತ್ತದೆ ಮತ್ತು ವಾಸ್ತವವಾಗಿ ಅದನ್ನು ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

5ಜಿ ತಂತ್ರಜ್ಞಾನದ ಬಳಕೆಯು ವೇಗದ ಇಂಟರ್ನೆಟ್ ಲಭ್ಚಯತೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಜೀವನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಜೀವಿತಾವಧಿಯಲ್ಲಿ ತಂತ್ರಜ್ಞಾನದ ಭರವಸೆಗಳು ಸಾಕಾರಗೊಳ್ಳುವುದನ್ನು ನಾವು ಕಾಣುತ್ತೇವೆ ಎಂದು ಅವರು ಹೇಳಿದರು. ದೇಶದ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಈ ಹೊಸ ತಂತ್ರಜ್ಞಾನದ ಪ್ರತಿಯೊಂದು ಅಂಶವನ್ನು ಅನಾವರಣಗೊಳಿಸುವಂತೆ ಟೆಲಿಕಾಂ ಉದ್ಯಮ ಸಂಘಟನೆಗಳ ನಾಯಕರಿಗೆ ಶ್ರೀ ಮೋದಿ ಕರೆ ನೀಡಿದರು. ಎಲೆಕ್ಟ್ರಾನಿಕ್ ಉತ್ಪಾದನೆಗೆ ಬಿಡಿಭಾಗಗಳನ್ನು ತಯಾರಿಸಲು ಎಂಎಸ್‌ಎಂಇಗಳಿಗೆ ಸೂಕ್ತ ಪರಿಸರ ವ್ಯವಸ್ಥೆಯನ್ನು ರಚಿಸುವಂತೆ ಅವರು ಕರೆಕೊಟ್ಟರು. ದೇಶದಲ್ಲಿ ಕ್ರಾಂತಿಯನ್ನು ತರಲು 5ಜಿ ತಂತ್ರಜ್ಞಾನವನ್ನು ಬಳಸಬೇಕು ಎಂದು ಅವರು ಹೇಳಿದರು. ಹೊಸದಾಗಿ ಬಿಡುಗಡೆಯಾದ ಡ್ರೋನ್ ನೀತಿಯ ನಂತರ ಡ್ರೋನ್ ತಂತ್ರಜ್ಞಾನದ ಬಳಕೆಯ ಬಗ್ಗೆ ಪ್ರಧಾನಮಂತ್ರಿ ವಿವರಿಸಿದರು. ಅನೇಕ ರೈತರು ಡ್ರೋನ್‌ಗಳನ್ನು ಹಾರಿಸುವುದನ್ನು ಕಲಿತಿದ್ದಾರೆ ಮತ್ತು ಹೊಲಗಳಲ್ಲಿ ಕೀಟನಾಶಕಗಳು ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸಲು ಬಳಸಲು ಪ್ರಾರಂಭಿಸಿದ್ದಾರೆ ಎಂದು ಅವರು ತಿಳಿಸಿದರು. ಭವಿಷ್ಯದ ಭಾರತವು ಮುಂಬರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ಎಲ್ಲರಿಗೂ ಭರವಸೆ ನೀಡಿದರು.

ಕೇಂದ್ರ ಸಂಪರ್ಕ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಶ್ರೀ ದೇವುಸಿಂಹ ಚೌಹಾಣ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಶ್ರೀ ಮುಖೇಶ್ ಅಂಬಾನಿ, ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಶ್ರೀ ಸುನಿಲ್ ಮಿತ್ತಲ್, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಶ್ರೀ ಕುಮಾರ್ ಮಂಗಲಂ ಬಿರ್ಲಾ ಮತ್ತು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಶ್ರೀ ಕೆ ರಾಜಾರಾಮನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ಹಿನ್ನೆಲೆ 
5ಜಿ ತಂತ್ರಜ್ಞಾನವು ಜನಸಾಮಾನ್ಯರಿಗೆ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತದೆ. ಇದು ತಡೆರಹಿತ ಕವರೇಜ್, ಹೆಚ್ಚಿನ ಡೇಟಾವೇಗ, ಕಡಿಮೆ ಸಮಸ್ಯೆಗಳು ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ವಿದ್ಯುತ್‌ ದಕ್ಷತೆ, ಸ್ಪೆಕ್ಟ್ರಮ್ ದಕ್ಷತೆ ಮತ್ತು ನೆಟ್‌ವರ್ಕ್ ದಕ್ಷತೆಯನ್ನು ಹೆಚ್ಚಿಸುತ್ತದೆ. 5ಜಿ ತಂತ್ರಜ್ಞಾನವು ಕೋಟ್ಯಾಂತರ ಇಂಟರ್ನೆಟ್ ಆಫ್ ಥಿಂಗ್ಸ್ ಸಾಧನಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ, ಹೆಚ್ಚಿನ ವೇಗದಲ್ಲಿ ಚಲನಶೀಲತೆಯೊಂದಿಗೆ ಉತ್ತಮ ಗುಣಮಟ್ಟದ ವೀಡಿಯೊ ಸೇವೆಗಳನ್ನು ನೀಡುತ್ತದೆ ಮತ್ತು ಟೆಲಿಸರ್ಜರಿಯಂತಹ  ನಿರ್ಣಾಯಕ ಸೇವೆಗಳ ವಿತರಣೆಗೆ ಅನುವು ಮಾಡಿಕೊಡುತ್ತದೆ. ವಿಪತ್ತುಗಳು ಮತ್ತು ನಿಖರವಾದ ಕೃಷಿಯಲ್ಲಿ ನೈಜ-ಸಮಯದ ಮೇಲ್ವಿಚಾರಣೆ ಮತ್ತು ಆಳ ಗಣಿ, ಕಡಲಾಳದ ಚಟುವಟಿಕೆಗಳಂತಹ ಅಪಾಯಕಾರಿ ಕೈಗಾರಿಕಾ ಕಾರ್ಯಾಚರಣೆಗಳಲ್ಲಿ ಮಾನವರ ಪಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಸ್ತಿತ್ವದಲ್ಲಿರುವ ಮೊಬೈಲ್ ಸಂವಹನ ನೆಟ್‌ವರ್ಕ್‌ಗಳಿಗಿಂತ ಭಿನ್ನವಾಗಿ, 5ಜಿ ನೆಟ್‌ವರ್ಕ್‌ಗಳು ಒಂದೇ ನೆಟ್‌ವರ್ಕ್‌ನಲ್ಲಿ ಈ ಪ್ರತಿಯೊಂದು ವಿಭಿನ್ನ ಬಳಕೆಯ ಸಂದರ್ಭಗಳಿಗೆ ಅಗತ್ಯಗಳನ್ನು ಹೊಂದಿಸಲು ಅವಕಾಶ ನೀಡುತ್ತವೆ.
ಐಎಂಸಿ 2022 ಅನ್ನು "ಹೊಸ ಡಿಜಿಟಲ್ ಜಗತ್ತು"  ಅಕ್ಟೋಬರ್ 1 ರಿಂದ 4 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಇದು ಡಿಜಿಟಲ್ ತಂತ್ರಜ್ಞಾನದ ತ್ವರಿತ ಅಳವಡಿಕೆ ಮತ್ತು ಹರಡುವಿಕೆಯಿಂದ ಹೊರಹೊಮ್ಮುವ ಅನನ್ಯ ಅವಕಾಶಗಳನ್ನು ಚರ್ಚಿಸಲು ಮತ್ತು ಪ್ರದರ್ಶಿಸಲು ಪ್ರಮುಖ ಚಿಂತಕರು, ಉದ್ಯಮಿಗಳು, ನವೋದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಂದೆಡೆ ಸೇರಿಸುತ್ತದೆ.

 

 

 

 

 

 

 

 

 

 

 

*****

 

 (Release ID: 1864720) Visitor Counter : 161