ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ಭಾವನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಾರಂಭದಲ್ಲಿ  ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ

Posted On: 29 SEP 2022 6:14PM by PIB Bengaluru

ಭಾವನಗರದ ಸಮಸ್ತ ಜನರಿಗೆ ನವರಾತ್ರಿಯ ಶುಭಾಶಯಗಳು! ಮೊದಲನೆಯದಾಗಿ, ಇಷ್ಟು ಸುದೀರ್ಘ ಅವಧಿಯ ನಂತರ ಇಲ್ಲಿಗೆ ಬಂದುದಕ್ಕಾಗಿ ನಾನು  ಭಾವನಗರಕ್ಕೆ ಕ್ಷಮೆಯಾಚಿಸಬೇಕು. ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ಈ  ಮೊದಲು ಬರಲು ಸಾಧ್ಯವಾಗದ ಕಾರಣಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನೀವು ನನ್ನ ಮೇಲೆ ಸುರಿಸಿದ ಆಶೀರ್ವಾದಗಳನ್ನು ಮತ್ತು ನೀವು ನನಗೆ ನೀಡಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಜನರನ್ನು, ಅದೂ ಸುಡುಬಿಸಿಲು ಇರುವ ದಿನದಂದು ಬಹಳ ದೂರದವರೆಗೂ ಉದ್ದಗಲಕ್ಕೆ ನಾನು ಕಾಣಬಹುದಾಗಿದೆ. ನಾನು ನಿಮ್ಮೆಲ್ಲರಿಗೂ ತಲೆಬಾಗುತ್ತೇನೆ.

ಭಾವನಗರದ ಈ ಸಭೆ ಇಂದು ಬಹಳ ವಿಶೇಷದ್ದಾಗಿದೆ. ಒಂದು ಕಡೆ ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ್ದರೆ, ಭಾವನಗರವು ಈ ವರ್ಷ ತನ್ನ ಸಂಸ್ಥಾಪನಾ ದಿನದ 300 ವರ್ಷಗಳನ್ನು ಪೂರೈಸಲಿದೆ. 300 ವರ್ಷಗಳ ಈ ಪ್ರಯಾಣದಲ್ಲಿ, ಭಾವನಗರವು ತನ್ನ ಸ್ಥಿರ ಬೆಳವಣಿಯಿಂದಾಗಿ  ಮತ್ತು ಸೌರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾಗಿ ತನ್ನದೇ ಆದ ಛಾಪು ಮೂಡಿಸಿದೆ. ಈ ಅಭಿವೃದ್ಧಿಯ ಯಾನಕ್ಕೆ  ಹೊಸ ಆಯಾಮವನ್ನು ನೀಡಲು ಕೋಟ್ಯಂತರ ರೂಪಾಯಿಗಳ ಹಲವಾರು ಯೋಜನೆಗಳನ್ನು ಒಂದೋ ಇಂದು ಇಲ್ಲಿ ಉದ್ಘಾಟಿಸಲಾಗಿದೆ ಅಥವಾ ಶಂಕುಸ್ಥಾಪನೆ ಮಾಡಲಾಗಿದೆ. ಈ ಯೋಜನೆಗಳು ಭಾವನಗರದ ಅಸ್ಮಿತೆಯನ್ನು ಸಶಕ್ತಗೊಳಿಸುತ್ತವೆ, ಸೌರಾಷ್ಟ್ರದ ರೈತರಿಗೆ ನೀರಾವರಿಯ ಹೊಸ ಉಡುಗೊರೆಯನ್ನು ನೀಡುತ್ತವೆ ಮತ್ತು 'ಆತ್ಮನಿರ್ಭರ ಭಾರತ' ಅಭಿಯಾನವನ್ನು ಮತ್ತಷ್ಟು ಬಲಪಡಿಸುತ್ತವೆ. ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆಯೊಂದಿಗೆ, ಶಿಕ್ಷಣ ಮತ್ತು ಸಂಸ್ಕೃತಿಯ ನಗರವಾಗಿ ಭಾವನಗರದ ಅಸ್ಮಿತೆ ಮತ್ತಷ್ಟು ಶ್ರೀಮಂತಗೊಳ್ಳಲಿದೆ. ಈ ಎಲ್ಲಾ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು.


ಸಹೋದರರೇ ಮತ್ತು  ಸಹೋದರಿಯರೇ,

ನಾನು ಭಾವನಗರಕ್ಕೆ ಬಂದಾಗಲೆಲ್ಲಾ, ನಾನು ಒಂದು ವಿಷಯವನ್ನು ಒತ್ತಿ ಹೇಳುತ್ತಿದ್ದೆ. ಕಳೆದ ಎರಡು ಮೂರು ದಶಕಗಳಿಂದ ಸೂರತ್, ವಡೋದರಾ ಮತ್ತು ಅಹಮದಾಬಾದ್ ನಲ್ಲಿ ಇದ್ದ ಪ್ರತಿಧ್ವನಿ ಈಗ ರಾಜ್ ಕೋಟ್, ಜಾಮ್ ನಗರ್ ಮತ್ತು ಭಾವನಗರಗಳಲ್ಲಿಯೂ ಕೇಳಿ ಬರಲಿದೆ. ಸೌರಾಷ್ಟ್ರದ ಸಮೃದ್ಧಿಯಲ್ಲಿ ನನಗೆ ಬಲವಾದ ನಂಬಿಕೆ ಇದೆ ಏಕೆಂದರೆ ಅದು ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಅಭೂತಪೂರ್ವ ಸಾಮರ್ಥ್ಯವನ್ನು ಹೊಂದಿದೆ. ಇಂದಿನ ಕಾರ್ಯಕ್ರಮವು ಈ ದಿಕ್ಕಿನಲ್ಲಿ ವೇಗವಾಗಿ ಚಲಿಸುವ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳಿಗೆ ಜೀವಂತ ಪುರಾವೆಯಾಗಿದೆ. ಭಾವನಗರ ಜಿಲ್ಲೆಯು ಸಮುದ್ರ ತೀರದಲ್ಲಿದೆ. ಗುಜರಾತ್ ರಾಜ್ಯವು ದೇಶದ ಅತಿ ಉದ್ದದ ಕರಾವಳಿಯನ್ನು ಹೊಂದಿದೆ. ಆದರೆ ಸ್ವಾತಂತ್ರ್ಯಾನಂತರ ಹಲವಾರು ದಶಕಗಳ ಕಾಲ ಕರಾವಳಿ ಅಭಿವೃದ್ಧಿಯತ್ತ ಗಮನ ಹರಿಸದ ಕಾರಣ ಈ ವಿಶಾಲವಾದ ಕಡಲತೀರವು ಜನರಿಗೆ ಒಂದು ರೀತಿಯಲ್ಲಿ  ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಸಮುದ್ರದ ಉಪ್ಪುನೀರು ಈ ಸ್ಥಳಕ್ಕೆ ಶಾಪವಾಗಿತ್ತು. ಸಮುದ್ರದ ದಡದಲ್ಲಿದ್ದ ಹಳ್ಳಿಗಳು ನಿರ್ಜನವಾಗಿದ್ದವು. ಜನರು ಇತರ ನಗರಗಳಿಗೆ ವಲಸೆ ಹೋಗಲು ಪ್ರಾರಂಭಿಸಿದರು. ಸೂರತ್ ಗೆ ಹೋಗುವ ಯುವಕರು 10-15-20 ಜನರೊಂದಿಗೆ ಒಂದು ಕೋಣೆಯನ್ನು ಹಂಚಿಕೊಳ್ಳಬೇಕಾಯಿತು. ಇದು ತುಂಬಾ ಕರುಣಾಜನಕವಾದಂತಹ  ಪರಿಸ್ಥಿತಿಯಾಗಿತ್ತು. 


ಸ್ನೇಹಿತರೇ,

ಕಳೆದ ಎರಡು ದಶಕಗಳಲ್ಲಿ ಗುಜರಾತ್ ನ ಕರಾವಳಿಯನ್ನು ಭಾರತದ ಸಮೃದ್ಧಿಯ ಹೆಬ್ಬಾಗಿಲನ್ನಾಗಿ ಮಾಡಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ. ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ನಾವು ಗುಜರಾತಿನಲ್ಲಿ ಅನೇಕ ಬಂದರುಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಆಧುನೀಕರಿಸಿದ್ದೇವೆ. ಗುಜರಾತ್ ಇಂದು ಮೂರು ಪ್ರಮುಖ ಎಲ್.ಎನ್.ಜಿ. ಟರ್ಮಿನಲ್ ಗಳು ಮತ್ತು ಪೆಟ್ರೋಕೆಮಿಕಲ್ ಕೇಂದ್ರಗಳನ್ನು ಹೊಂದಿದೆ. ದೇಶದ ಮೊದಲ ಎಲ್ ಎನ್ ಜಿ ಟರ್ಮಿನಲ್ ಅನ್ನು ನಿರ್ಮಿಸಿದ ಮೊದಲ ರಾಜ್ಯ ಗುಜರಾತ್ ಆಗಿದೆ. ನಾವು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ನೂರಾರು ಕರಾವಳಿ ಕೈಗಾರಿಕೆಗಳನ್ನು ಮತ್ತು ಅನೇಕ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಕೈಗಾರಿಕೆಗಳ ಇಂಧನ ಬೇಡಿಕೆಯನ್ನು ಪೂರೈಸಲು ನಾವು ಕಲ್ಲಿದ್ದಲು ಟರ್ಮಿನಲ್ ಗಳ ಜಾಲವನ್ನು ಸಹ ರಚಿಸಿದ್ದೇವೆ. ಇಂದು ಗುಜರಾತಿನ ಕರಾವಳಿ ಪ್ರದೇಶಗಳಲ್ಲಿ ಅನೇಕ ವಿದ್ಯುತ್ ಸ್ಥಾವರಗಳಿವೆ, ಅವು ಗುಜರಾತ್ ಗೆ ಮಾತ್ರವಲ್ಲದೆ ದೇಶದ ಹಲವಾರು ರಾಜ್ಯಗಳಿಗೂ ವಿದ್ಯುತ್ ಪೂರೈಸುತ್ತವೆ.

ನಮ್ಮ ಮೀನುಗಾರರಿಗೆ ಸಹಾಯ ಮಾಡಲು ನಾವು ಮೀನುಗಾರಿಕಾ ಬಂದರುಗಳನ್ನು ನಿರ್ಮಿಸಿದ್ದೇವೆ, ಮೀನು ನೀಡುವ ಕೇಂದ್ರಗಳು ಮತ್ತು ಮೀನು ಸಂಸ್ಕರಣೆಯನ್ನು ಉತ್ತೇಜಿಸಿದ್ದೇವೆ. ನಾವು ನಿರ್ಮಿಸಿದ ಮೀನುಗಾರಿಕಾ ಬಂದರುಗಳ ಬಲಿಷ್ಟವಾದ ಜಾಲವನ್ನು ಸಹ ನಿರಂತರವಾಗಿ ವಿಸ್ತರಿಸಲಾಗುತ್ತಿದೆ ಮತ್ತು ಆಧುನೀಕರಿಸಲಾಗುತ್ತಿದೆ. ಗುಜರಾತ್ ನ ಕರಾವಳಿ ಪ್ರದೇಶದಲ್ಲಿ ಮ್ಯಾಂಗ್ರೋವ್ ಕಾಡುಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ಕರಾವಳಿ ಪರಿಸರ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಮತ್ತು ಬಲಪಡಿಸಿದ್ದೇವೆ. ಮ್ಯಾಂಗ್ರೋವ್ ಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ಭಾರತದ ಕರಾವಳಿ ರಾಜ್ಯಗಳು ಗುಜರಾತ್ ನಿಂದ ಕಲಿಯಬೇಕು ಎಂದು ಭಾರತ ಸರ್ಕಾರದ ಆಗಿನ ಸಚಿವರು ಒಮ್ಮೆ ಹೇಳಿದ್ದರು. ನಿಮ್ಮೆಲ್ಲರ ಸಹಕಾರದಿಂದ ಗುಜರಾತ್ ನಲ್ಲಿ ಇದು ಸಾಧ್ಯವಾಗಿದೆ.

ನಾವು ನಿರಂತರವಾಗಿ ಜಲಕೃಷಿಯನ್ನು ಉತ್ತೇಜಿಸಿದ್ದೇವೆ. ಸಮುದ್ರದ ಜೊಂಡು ಕೃಷಿಗಾಗಿ (ಸಮುದ್ರ ಕಳೆ) ಹೆಚ್ಚಿನ, ಬಹಳ ದೊಡ್ಡ  ಪ್ರಯತ್ನಗಳನ್ನು ಮಾಡಲಾದ ದೇಶದ ಪ್ರಮುಖ ರಾಜ್ಯಗಳಲ್ಲಿ ಗುಜರಾತ್ ಒಂದಾಗಿದೆ. ಇಂದು, ಗುಜರಾತ್ ನ ಕರಾವಳಿಯು ಲಕ್ಷಾಂತರ ಜನರಿಗೆ ಉದ್ಯೋಗದ ಮಾಧ್ಯಮವಾಗಿ ಮಾರ್ಪಟ್ಟಿದೆ, ಜೊತೆಗೆ ದೇಶದ ಆಮದು ಮತ್ತು ರಫ್ತಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಇಂದು, ಗುಜರಾತ್ ನ ಕರಾವಳಿಯು ನವೀಕರಿಸಬಹುದಾದ ಇಂಧನ ಮತ್ತು ಜಲಜನಕ ಪರಿಸರ ವ್ಯವಸ್ಥೆಗೆ ಸಮಾನಾರ್ಥಕವಾಗಿ ರೂಪುಗೊಳ್ಳುತ್ತಿದೆ. ನಾವು ಸೌರಾಷ್ಟ್ರವನ್ನು ಶಕ್ತಿಯ, ಇಂಧನದ  ಪ್ರಮುಖ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ. ಈ ಪ್ರದೇಶವು ಗುಜರಾತ್ ಮತ್ತು ದೇಶದ ಇಂಧನ ಅಗತ್ಯಗಳನ್ನು ಪೂರೈಸುವ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. ಈಗ ಈ ಪ್ರದೇಶದಲ್ಲಿ ಸೌರ ಶಕ್ತಿಯ ಅನೇಕ ಯೋಜನೆಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇಂದು ಪಾಲಿಟಾನಾದಲ್ಲಿ ಉದ್ಘಾಟನೆಗೊಂಡ ಸೌರ ವಿದ್ಯುತ್ ಯೋಜನೆಯು ಈ ಪ್ರದೇಶದ ಅನೇಕ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ  ಮತ್ತು ಸಾಕಷ್ಟು ವಿದ್ಯುತ್ ಒದಗಿಸುತ್ತದೆ. ಗುಜರಾತ್ ನಲ್ಲಿ ಒಂದು ಕಾಲದಲ್ಲಿ ಜನರು ಊಟದ ಸಮಯದಲ್ಲಿ ವಿದ್ಯುತ್ ಇದ್ದರೆ ಸಂತೋಷಪಡುತ್ತಿದ್ದರು. ಇಂದು 20-22 ವರ್ಷ ವಯಸ್ಸಿನ ಅನೇಕ ಜನರಿಗೆ ಆ ಪರಿಸ್ಥಿತಿಯ ಬಗ್ಗೆ ತಿಳಿದಿಲ್ಲ. ನಾನು ಗುಜರಾತ್ ನ ಮುಖ್ಯಮಂತ್ರಿಯಾದಾಗ, ಜನರು ಮೊದಲ ದಿನದಿಂದಲೇ ಊಟದ ಸಮಯದಲ್ಲಿ ಕನಿಷ್ಠ ವಿದ್ಯುತ್ ಖಚಿತಪಡಿಸಿಕೊಳ್ಳಲು ನನ್ನೊಂದಿಗೆ ಕೋರಿಕೊಳ್ಳಲು ಪ್ರಾರಂಭಿಸಿದ್ದು ನನಗೆ ನೆನಪಿದೆ. ಆ ಎಲ್ಲಾ ಶೋಚನೀಯ ದಿನಗಳು ಈಗ ಕಳೆದುಹೋಗಿವೆ,

ಸ್ನೇಹಿತರೇ.  

ಇಂದು, ಹೊಸ ವ್ಯಾಪಾರೋದ್ಯಮ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ, ಸಾಕಷ್ಟು ವಿದ್ಯುತ್ತಿನ ಲಭ್ಯತೆಯಿಂದಾಗಿ  ಕೈಗಾರಿಕೆಗಳು ಮತ್ತು ವ್ಯವಹಾರೋದ್ಯಮಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್ ಕೈಗಾರಿಕೆಗಳಿಗಾಗಿ ಧೋಲೆರಾದಲ್ಲಿ ಮಾಡಲಾಗುತ್ತಿರುವ ಹೂಡಿಕೆಯಿಂದ ಭಾವನಗರವು ಪ್ರಯೋಜನ ಪಡೆಯಲಿದೆ. ಭಾವನಗರದ ನೆರೆಹೊರೆಯ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಅಹಮದಾಬಾದ್ ನಿಂದ ಧೋಲೆರಾ ಮತ್ತು ಭಾವನಗರದವರೆಗಿನ ಇಡೀ ಪ್ರದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ಸಾಧಿಸುವ ದಿನ ದೂರವಿಲ್ಲ.
 

ಸಹೋದರರೇ ಮತ್ತು  ಸಹೋದರಿಯರೇ,

ಇಂದು ಭಾವನಗರವು ಬಂದರು-ಕೇಂದ್ರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ಈ ಬಂದರು ದೇಶಾದ್ಯಂತದ ವಿವಿಧ ಕೈಗಾರಿಕಾ ಪ್ರದೇಶಗಳೊಂದಿಗೆ ಬಹು ಮಾದರಿ ಸಂಪರ್ಕವನ್ನು ಖಚಿತಪಡಿಸುತ್ತದೆ. ಈ ಬಂದರನ್ನು ಗೂಡ್ಸ್ ರೈಲುಗಳಿಗಾಗಿ ಹಾಕಲಾಗುತ್ತಿರುವ ಪ್ರತ್ಯೇಕ ಹಳಿಗಳ ಮಾರ್ಗಕ್ಕೆ ಸಂಪರ್ಕಿಸಲಾಗುವುದು ಮತ್ತು ಆಗ ಇತರ ಹೆದ್ದಾರಿಗಳು ಹಾಗು ರೈಲ್ವೆ ಜಾಲಗಳೊಂದಿಗೆ ಉತ್ತಮ ಸಂಪರ್ಕವಿರಲಿದೆ. ಪಿಎಂ ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ  ಈ ಸಂಪರ್ಕ ಯೋಜನೆಗಳಿಗೆ ಹೊಸ ಒತ್ತು ನೀಡಲಿದೆ. ಈ ರೀತಿಯಲ್ಲಿ, ಭಾವನಗರದ ಈ ಬಂದರು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇಲ್ಲ ಯಿದೆ. ಉಗ್ರಾಣ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಗೆ ಸಂಬಂಧಿಸಿದ ವ್ಯವಹಾರದ ವಿಸ್ತರಣೆಯಾಗಲಿದೆ. ಈ ಬಂದರು ವಾಹನ ಸ್ಕ್ರ್ಯಾಪಿಂಗ್, ಕಂಟೈನರ್ ಉತ್ಪಾದನೆ ಮತ್ತು ಧೋಲೆರಾ ವಿಶೇಷ ಹೂಡಿಕೆ ಪ್ರದೇಶದಂತಹ ದೊಡ್ಡ ಯೋಜನೆಗಳ ಆವಶ್ಯಕತೆಗಳನ್ನು  ಪೂರೈಸುತ್ತದೆ. ಇದರ ಪರಿಣಾಮವಾಗಿ, ಇಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಸ್ವ-ಉದ್ಯೋಗಾವಕಾಶಗಳನ್ನು ಅಭಿವೃದ್ಧಿಪಡಿಸಲಾಗುವುದು.


ಸ್ನೇಹಿತರೇ,

ಅಲಾಂಗ್ ವಿಶ್ವದ ಅತಿದೊಡ್ಡ ಹಡಗು ಒಡೆಯುವ ಯಾರ್ಡ್ ಗಳಲ್ಲಿ ಒಂದು ಎಂದು ಪ್ರಖ್ಯಾತವಾಗಿದೆ. ಅಲಾಂಗ್ ಬಗ್ಗೆ ತಿಳಿಯದವರು ಯಾರೂ ಇಲ್ಲ. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಕೇಂದ್ರ ಸರ್ಕಾರದ ಹೊಸ ವಾಹನ ಗುಜರಿ ನೀತಿಯನ್ನು ಜಾರಿಗೆ ತಂದಾಗ, ನೀವು ಹೆಚ್ಚು ಪ್ರಯೋಜನ ಪಡೆಯುತ್ತೀರಿ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತೇನೆ. ಕಾರಣವೆಂದರೆ ಅಲಾಂಗ್ ಸ್ಕ್ರ್ಯಾಪಿಂಗ್ ಬಗ್ಗೆ ಪರಿಣತಿಯನ್ನು ಮತ್ತು ದೊಡ್ಡ ಹಡಗುಗಳನ್ನು ಸ್ಕ್ರ್ಯಾಪ್ ಮಾಡುವ ಜ್ಞಾನವನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಇದು ಹಡಗುಗಳೊಂದಿಗೆ ಇತರ ಸಣ್ಣ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ದೊಡ್ಡ ಕೇಂದ್ರವಾಗಬಹುದು. ಭಾವನಗರದ ನನ್ನ ವಿಶ್ವಾಸದ ಉದ್ಯಮಿಗಳು ವಿದೇಶದಿಂದ ಸಣ್ಣ ವಾಹನಗಳನ್ನು ತರುತ್ತಾರೆ ಮತ್ತು ಅವುಗಳನ್ನು ಇಲ್ಲಿ ಸ್ಕ್ರ್ಯಾಪ್ ಮಾಡಲು ಪ್ರಾರಂಭಿಸುತ್ತಾರೆ ಎಂಬುದನ್ನು ನಾನು ನೆನಪಿಸುವ ಅಗತ್ಯವಿಲ್ಲ.


ಸ್ನೇಹಿತರೇ,

ಹಡಗುಗಳನ್ನು ಒಡೆಯುವುದರಿಂದ ಲಭ್ಯವಾಗುವ ಕಬ್ಬಿಣವನ್ನು ನಿರ್ಮಾಣ ವಲಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕಂಟೇನರ್ ಗಳಿಗಾಗಿ ಒಂದೇ ದೇಶದ ಮೇಲೆ ಅತಿಯಾದ ಅವಲಂಬನೆಯಿಂದ ಒಂದು ದೊಡ್ಡ ಬಿಕ್ಕಟ್ಟು ಹೇಗೆ ಉದ್ಭವಿಸಬಹುದು ಎಂಬುದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಭಾವನಗರಕ್ಕೆ ಇದು ಹೊಸ ಮತ್ತು ದೊಡ್ಡ ಅವಕಾಶವಾಗಿದೆ. ಒಂದು ಕಡೆ, ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು ಹೆಚ್ಚುತ್ತಿದೆ ಮತ್ತು ಮತ್ತೊಂದೆಡೆ, ಜಗತ್ತು ಕಂಟೈನರ್ ಗಳ ವಿಶ್ವಾಸಾರ್ಹ ಪೂರೈಕೆದಾರನನ್ನು ಹುಡುಕುತ್ತಿದೆ. ಇಡೀ ಜಗತ್ತಿಗೆ ಲಕ್ಷಾಂತರ ಕಂಟೇನರ್ ಗಳ ಅಗತ್ಯವಿದೆ. ಭಾವನಗರದಲ್ಲಿ ನಿರ್ಮಿಸಲಾಗುತ್ತಿರುವ ಕಂಟೇನರ್ ಗಳು ಸ್ವಾವಲಂಬಿ ಭಾರತಕ್ಕೆ ಶಕ್ತಿಯನ್ನು ನೀಡುತ್ತವೆ ಮತ್ತು ಇಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
 

ಸ್ನೇಹಿತರೇ,

ಮನಸ್ಸಿನಲ್ಲಿ ಜನರ ಬಗ್ಗೆ ಸೇವಾ ಪ್ರಜ್ಞೆ, ಭಾವನೆ ಇದ್ದಾಗ ಮತ್ತು ಬದಲಾವಣೆಯನ್ನು ತರುವ ಇಚ್ಛಾಶಕ್ತಿ ಇದ್ದಾಗ, ದೊಡ್ಡ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಸೂರತ್ ನಿಂದ ಭಾವನಗರಕ್ಕೆ ಹೋಗುವ ವಾಹನಗಳ ಸ್ಥಿತಿಯ ಬಗ್ಗೆ ನಿಮಗೆ ತುಂಬಾ ತಿಳಿದಿದೆ. ಹಲವು ಗಂಟೆಗಳ ಪ್ರಯಾಣದ ಅವಧಿ, ರಸ್ತೆ ಅಪಘಾತಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚ! ಅಲ್ಲಿ ಅನೇಕ ತೊಂದರೆಗಳು ಇದ್ದವು. ಈಗ ಆ ಉದ್ವಿಗ್ನತೆ ಕಡಿಮೆಯಾಗಿದೆ ಮತ್ತು ಸಾರಿಗೆ ದರಗಳಲ್ಲಿ ಹಣ  ಮತ್ತು ಸಮಯ ಎರಡೂ  ಉಳಿಕೆಯಾಗುತ್ತಿದೆ. ಅನೇಕ ಅಡೆತಡೆಗಳ ನಡುವೆಯೂ ನಾವು ಘೋಘಾ-ದಹೇಜ್ ದೋಣಿ ಸೇವೆಯ ಕನಸನ್ನು ನನಸು ಮಾಡಿದೆವು. ಘೋಘಾ-ಹಾಜಿರಾ ರೋ-ರೋ ದೋಣಿ/ಹಡಗು ಸೇವೆಯಿಂದಾಗಿ ಸೌರಾಷ್ಟ್ರ ಮತ್ತು ಸೂರತ್ ನಡುವಿನ ದೂರವನ್ನು ಸುಮಾರು 400 ಕಿ.ಮೀ.ಗಳಿಂದ 100 ಕಿ.ಮೀ.ಗಿಂತಲೂ  ಕಡಿಮೆ ಮಾಡಲಾಗಿದೆ. ಸುಮಾರು ಮೂರು ಲಕ್ಷ ಪ್ರಯಾಣಿಕರು ಅತ್ಯಂತ ಕಡಿಮೆ ಸಮಯದಲ್ಲಿ ಈ ಸೇವೆಯನ್ನು ಬಳಸಿದ್ದಾರೆ. ಈ ವರ್ಷವೊಂದರಲ್ಲೇ 80,000 ಕ್ಕೂ ಹೆಚ್ಚು ವಾಹನಗಳನ್ನು ಸಾಗಿಸಲಾಗಿದೆ ಮತ್ತು 40 ಲಕ್ಷ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಳಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಸಾಕಷ್ಟು ಹಣವನ್ನು ಉಳಿಸಿದ್ದೀರಿ. ಇಂದಿನಿಂದ, ಈ ಮಾರ್ಗದಲ್ಲಿ ದೊಡ್ಡ ಹಡಗುಗಳಿಗೆ ಸಹ ಅವಕಾಶವನ್ನು ಒದಗಿಸಿಕೊಡಲಾಗಿದೆ. 


ಸ್ನೇಹಿತರೇ,

ಈ ಪ್ರದೇಶದ ಸಾಮಾನ್ಯ ಜನರು, ರೈತರು ಮತ್ತು ವ್ಯಾಪಾರಿಗಳಿಗೆ ಲಭ್ಯವಾಗಿರುವ ಈ ಬಹಳ ದೊಡ್ಡ ಸೇವೆಯನ್ನು ನೀವು ಅರ್ಥಮಾಡಿಕೊಳ್ಳಬಹುದು. ಆದರೆ ಇವೆಲ್ಲವೂ ಯಾವುದೇ ಗದ್ದಲವಿಲ್ಲದೆ ಮತ್ತು ಬೃಹತ್ ಜಾಹೀರಾತುಗಳಿಗೆ, ಹಣವನ್ನು ವ್ಯರ್ಥ ಮಾಡದೆ ನಡೆಯುತ್ತಿವೆ, ಸ್ನೇಹಿತರೇ.. ಏಕೆಂದರೆ ನಮ್ಮ ಪ್ರೇರಣೆ ಮತ್ತು ಗುರಿ ಎಂದಿಗೂ ಅಧಿಕಾರದ ಪ್ರಲೋಭನೆಯಾಗಿರಲಿಲ್ಲ. ನಾವು ಯಾವಾಗಲೂ ಅಧಿಕಾರವನ್ನು ಸೇವೆಯ ಮಾಧ್ಯಮವೆಂದು ಪರಿಗಣಿಸುತ್ತೇವೆ. ಇದು ನಮ್ಮ ಸೇವಾ ಯಜ್ಞ. ಈ ಸೇವಾ ಮನೋಭಾವದಿಂದಾಗಿಯೇ ನಾವು ತುಂಬಾ ಪ್ರೀತಿ ಮತ್ತು ಆಶೀರ್ವಾದಗಳನ್ನು ಪಡೆಯುತ್ತಿದ್ದೇವೆ, ಅದು ನಿರಂತರವಾಗಿ ಹೆಚ್ಚುತ್ತಲೇ ಇರುತ್ತದೆ.

ಸ್ನೇಹಿತರೇ,

ನಮ್ಮ ಪ್ರಯತ್ನಗಳು ಸಾರಿಗೆಯನ್ನು ಸುಗಮಗೊಳಿಸಿರುವುದಲ್ಲದೆ, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿವೆ. ಗುಜರಾತ್ ನ ಸಮುದ್ರ ಪರಂಪರೆಯನ್ನು ಉಳಿಸಲು ಮತ್ತು ಅದನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಗುಜರಾತ್ ನ ಕರಾವಳಿ ಪ್ರದೇಶಗಳಲ್ಲಿ ಅಭೂತಪೂರ್ವ ಕೆಲಸ ಮಾಡಲಾಗುತ್ತಿದೆ. ಲೋಥಾಲ್ ನಲ್ಲಿ ನಿರ್ಮಿಸಲಾಗುತ್ತಿರುವ ಕಡಲ ವಸ್ತುಸಂಗ್ರಹಾಲಯವು ಪ್ರಪಂಚದಲ್ಲಿ ತನ್ನದೇ ಆದ ಹೆಸರನ್ನು ಸೃಷ್ಟಿಸಲಿದೆ ಎಂಬ ಸಂಗತಿಯು ಬಹುಶಃ ನಿಮ್ಮಲ್ಲಿ ಕೆಲವೇ ಜನರಿಗೆ ತಿಳಿದಿರಬಹುದು. ಏಕತೆಯ ಪ್ರತಿಮೆಯಂತೆಯೇ, ಲೋಥಾಲ್ ನ ಸಾಗರ ವಸ್ತುಸಂಗ್ರಹಾಲಯವೂ ಅದೇ ಗುರುತನ್ನು ಮೂಡಿಸಲಿದೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ವಿಶ್ವದ ಅತ್ಯಂತ ಹಳೆಯ ಬಂದರು ಲೋಥಾಲ್ ನಮ್ಮ ಗುಜರಾತ್ ನೆಲದಲ್ಲಿದೆ, ಇದು ನಮ್ಮ ಭಾವನಗರದ ಅಂಚಿನಲ್ಲಿದೆ. ಲೋಥಾಲ್ ನಮ್ಮ ಪರಂಪರೆಯ ಪ್ರಮುಖ ಕೇಂದ್ರವಾಗಿದೆ ಮತ್ತು ಅದನ್ನು ಇಡೀ ವಿಶ್ವದ ಪ್ರವಾಸೋದ್ಯಮ ನಕ್ಷೆಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಲೋಥಾಲ್ ಜೊತೆಗೆ, ವೇಲವದಾರ್ ರಾಷ್ಟ್ರೀಯ ಉದ್ಯಾನವನದಲ್ಲಿನ ಪರಿಸರ ಪ್ರವಾಸೋದ್ಯಮ ಸರ್ಕ್ಯೂಟ್ ಸಹ ಭಾವನಗರಕ್ಕೆ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ವ್ಯಾಪಾರಿಗಳಿಗೆ ಬಹಳ ಪ್ರಯೋಜನಕಾರಿಯಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಎರಡು ದಶಕಗಳಲ್ಲಿ ಸೌರಾಷ್ಟ್ರದ ರೈತರು ಮತ್ತು ಮೀನುಗಾರರ ಜೀವನವು ಸಾಕಷ್ಟು ಬದಲಾಗಿದೆ. ಮಾಹಿತಿಯ ಕೊರತೆಯಿಂದಾಗಿ ಮೀನುಗಾರರ ಜೀವಗಳು ಆಗಾಗ್ಗೆ ಅಪಾಯಕ್ಕೆ ಸಿಲುಕುತ್ತಿದ್ದ ಕಾಲವೊಂದಿತ್ತು. ನಾನು ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಮೀನುಗಾರರಿಗೆ ವಿವಿಧ ಒತ್ತುಗುಂಡಿಗಳಿರುವ ಕೆಂಪು ಬುಟ್ಟಿಯನ್ನು ನೀಡಲಾಯಿತು. ಅಪಘಾತದ ಸಂದರ್ಭದಲ್ಲಿ, ಈ ಒತ್ತುಗುಂಡಿಯನ್ನು ಒತ್ತುವ ಮೂಲಕ ಕೋಸ್ಟ್ ಗಾರ್ಡ್ ಕಚೇರಿಗೆ ನೇರವಾಗಿ ಎಚ್ಚರಿಕೆಯ.ಅಪಾಯದ ಸಂದೇಶವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ತಕ್ಷಣದ ಸಹಾಯ ದೊರೆಯುವಂತಾಯಿತು.  ನಾವು ಈ ಸೇವೆಯನ್ನು 2014 ರ ನಂತರ ಇಡೀ ದೇಶಕ್ಕೆ ವಿಸ್ತರಿಸಿದ್ದೇವೆ. ಮೀನುಗಾರರಿಗೆ ಅವರ ದೋಣಿಗಳನ್ನು ಆಧುನೀಕರಿಸಲು ನಾವು ಸಬ್ಸಿಡಿಗಳನ್ನು ನೀಡಿದ್ದೇವೆ ಮತ್ತು ರೈತರಿಗೆ ನೀಡುತ್ತಿದ್ದಂತೆ  ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಿದ್ದೇವೆ.

ಸ್ನೇಹಿತರೇ,

ಇಂದು, ಸೌನಿ ಯೋಜನೆಯಿಂದಾಗಿ ಆಗುತ್ತಿರುವ ಬದಲಾವಣೆಯನ್ನು ನೋಡಿದಾಗ ನನಗೆ ತುಂಬಾ ತೃಪ್ತಿಯಾಗುತ್ತದೆ. ರಾಜ್ ಕೋಟ್ ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದು ನನಗೆ ನೆನಪಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮೋದಿಯವರು ಈ ಯೋಜನೆಯನ್ನು ಘೋಷಿಸಿದ್ದಾರೆ ಎಂದು ಮಾಧ್ಯಮಗಳು ಬರೆದಿದ್ದವು. ಚುನಾವಣೆ ಮುಗಿದ ನಂತರ, ಅದು ಮರೆತುಹೋಗುತ್ತದೆ. ಆದರೆ ನಾನು ಎಲ್ಲರ ಲೆಕ್ಕಾಚಾರವೂ  ತಪ್ಪು ಎಂದು ಸಾಬೀತುಪಡಿಸಿದೆ. ಸೌನಿ ಯೋಜನೆಯಿಂದಾಗಿ ಇಂದು ನರ್ಮದಾ ಮಾತೆಯ ನೀರು ನಾವು ಭರವಸೆ ನೀಡಿದ ಎಲ್ಲ ಸ್ಥಳಗಳನ್ನೂ ತಲುಪುತ್ತಿದೆ. ನಾವು ನಮ್ಮ ಮಾತುಗಳಿಗೆ ತಕ್ಕಂತೆ ಬದುಕುವವರು ಮತ್ತು ಸಮಾಜಕ್ಕಾಗಿ ಬದುಕುವಂತಹ  ಜನರು.
 

ಸ್ನೇಹಿತರೇ,

ಸೌನಿ ಯೋಜನೆಯ ಒಂದು ಭಾಗವನ್ನು ಉದ್ಘಾಟಿಸಿದಾಗ, ಮತ್ತೊಂದು ಭಾಗದ ಕೆಲಸವು ಏಕಕಾಲದಲ್ಲಿ ಪ್ರಾರಂಭವಾಗುತ್ತದೆ. ನಾವು ಕೆಲಸವನ್ನು ನಿಲ್ಲಿಸಲು ಬಿಡುವುದಿಲ್ಲ. ಇಂದಿಗೂ ಸಹ, ದೇಶಕ್ಕೆ ಸಮರ್ಪಿಸಲಾದ ಯೋಜನೆಯ ಭಾಗವು ಭಾವನಗರ ಮತ್ತು ಅಮ್ರೇಲಿ ಜಿಲ್ಲೆಗಳ ಅನೇಕ ಅಣೆಕಟ್ಟುಗಳಿಗೆ ನೀರು ತಲುಪಲು ಕಾರಣವಾಗಿದೆ. ಇದು ಭಾವನಗರದ ಗರಿಯಾಧರ್, ಜೇಸರ್ ಮತ್ತು ಮಹುವಾ ತಾಲ್ಲೂಕುಗಳ ಅನೇಕ ಹಳ್ಳಿಗಳ ರೈತರಿಗೆ ಮತ್ತು ಅಮ್ರೇಲಿ ಜಿಲ್ಲೆಯ ರಾಜುಲಾ ಮತ್ತು ಖಂಭಾ ತಾಲ್ಲೂಕುಗಳ ರೈತರಿಗೆ ಪ್ರಯೋಜನಕಾರಿಯಾಗಲಿದೆ. ಭಾವನಗರ, ಗಿರ್ ಸೋಮನಾಥ್, ಅಮ್ರೇಲಿ, ಬೊಟಾಡ್, ಜುನಾಗಢ, ರಾಜ್ ಕೋಟ್ ಮತ್ತು ಪೋರ್ ಬಂದರ್  ಜಿಲ್ಲೆಗಳ ನೂರಾರು ಗ್ರಾಮಗಳು ಮತ್ತು ಡಜನ್ ಗಟ್ಟಲೆ ನಗರಗಳಿಗೆ ನೀರು ಪೂರೈಸುವ ಮತ್ತೊಂದು ಯೋಜನೆಯನ್ನು ಇಂದು ನವೀಕರಿಸಲಾಗಿದೆ.


ಸಹೋದರರೇ ಮತ್ತು  ಸಹೋದರಿಯರೇ,

ಬಡತನವನ್ನು ತೊಡೆದುಹಾಕುವುದು ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದವರನ್ನು ಮುಂದೆ ಕೊಂಡೊಯ್ಯುವುದು ಡಬಲ್ ಇಂಜಿನ್ ಸರ್ಕಾರದ ಬದ್ಧತೆಯಾಗಿದೆ. ಕಡುಬಡವರು ಸಂಪನ್ಮೂಲಗಳನ್ನು ಪಡೆದಾಗ, ಅವರು ತಮ್ಮ ಅದೃಷ್ಟವನ್ನು ಬದಲಾಯಿಸಲು ಪ್ರಾರಂಭಿಸುತ್ತಾರೆ. ಅವರು ಹಗಲಿರುಳು ಶ್ರಮಿಸುತ್ತಾರೆ ಮತ್ತು ಬಡತನವನ್ನು ಸೋಲಿಸುತ್ತಾರೆ. ನಾವು ಆಗಾಗ್ಗೆ ಗುಜರಾತ್ ನಲ್ಲಿ ಗರೀಬ್ ಕಲ್ಯಾಣ್ ಮೇಳಗಳನ್ನು ಆಯೋಜಿಸುತ್ತಿದ್ದೆವು. ಅಂತಹ ಒಂದು ಕಾರ್ಯಕ್ರಮದಲ್ಲಿ, ಭಾವನಗರದ ಸಹೋದರಿಗೆ ನಾನು ತ್ರಿಚಕ್ರ ಸೈಕಲ್ ನೀಡಿದ್ದೆ. ಆಕೆ ದಿವ್ಯಾಂಗಳು ಮತ್ತು ಆಕೆ ನನಗೆ ಏನು ಹೇಳಿದರು? ಭಾವನಗರದ ಮತ್ತು ಗುಜರಾತಿಗಳ ಜನರ ಉತ್ಸಾಹವನ್ನು ನೋಡಿ. ನಾನು ಅದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಆ ಸಹೋದರಿ ತನಗೆ ಬೈಸಿಕಲ್ ಸವಾರಿ ಮಾಡಲು ತಿಳಿದಿಲ್ಲ ಎಂದು ಹೇಳಿದಳು ಮತ್ತು ಎಲೆಕ್ಟ್ರಿಕ್  ಟ್ರೈಸೈಕಲ್ ಕೇಳಿದಳು. ಇದು ನನ್ನ ಗುಜರಾತ್ ಮತ್ತು ಭಾವನಗರದ ಮನಸ್ಥಿತಿ. ನನ್ನ ಸಹೋದರಿ ತನ್ನ ಮನಸ್ಸಿನಲ್ಲಿ ಹೊಂದಿದ್ದ ವಿಶ್ವಾಸವು ನನ್ನ ಅತಿದೊಡ್ಡ ಆಸ್ತಿ, ಸಹೋದರರೇ.  ಬಡವರ ಈ ಕನಸುಗಳು ಮತ್ತು ಆಕಾಂಕ್ಷೆಗಳು ನನಗೆ ನಿರಂತರವಾಗಿ ಕೆಲಸ ಮಾಡುವ ಶಕ್ತಿಯನ್ನು ನೀಡುತ್ತವೆ. ಈ ಶಕ್ತಿಯು ನಿಮ್ಮ ಆಶೀರ್ವಾದದೊಂದಿಗೆ ಮುಂದುವರಿಯಲಿ, ಮತ್ತು ನಿಮ್ಮ ಪ್ರೀತಿಯು ಬೆಳೆಯುತ್ತಲೇ ಇರಲಿ. ನಾನು ಇಲ್ಲಿಗೆ ಬರಲು ಕೆಲವು ವರ್ಷಗಳು ಬೇಕಾಯಿತು, ನಾನು ತಡವಾಗಿ ಬಂದೆ, ಆದರೆ ನಾನು ಬರಿಗೈಯಲ್ಲಿ ಬಂದಿಲ್ಲ ಎಂದು ನಾನು ಇಂದು ಹೇಳಲೇಬೇಕು. ಹಿಂದಿನ ವರ್ಷಗಳ ಎಲ್ಲಾ ಬಾಕಿಗಳೊಂದಿಗೆ ನಾನು ಬಂದಿದ್ದೇನೆ. ಹೇಗಾದರೂ, ಭಾವನಗರಕ್ಕೆ ನನ್ನ ಮೇಲೆ ಎಲ್ಲಾ ಹಕ್ಕುಗಳಿವೆ. ನರಸೀಬಾಬಾ ಅವರ 'ಗಾಂಥಿಯಾ' ಮತ್ತು ದಾಸ್ ಅವರ 'ಪೇಡಾಗಳು' ನೆನಪಿಗೆ ಬರುತ್ತವೆ. 'ಗಾಂಥಿಯಾ' ಬಗ್ಗೆ ಮಾತನಾಡುವಾಗ ನನಗೆ ಹರಿಸಿಂಗ್ ದಾದಾ ನೆನಪಾಗುತ್ತಾರೆ. ಹಲವಾರು ವರ್ಷಗಳ ಹಿಂದೆ, ನಾನು ರಾಜಕೀಯದಲ್ಲಿ ಸಕ್ರಿಯನಾಗಿಲ್ಲದಿದ್ದಾಗ ಮತ್ತು ಬಹಳ ಸಣ್ಣ-ಮಟ್ಟಿನ ಕಾರ್ಯಕರ್ತನಾಗಿದ್ದಾಗ, ಹರಿಸಿಂಗ್ ದಾದಾ ಅವರು ನನ್ನನ್ನು 'ಗಾಂಥಿಯಾ' ಗೆ ಪರಿಚಯಿಸಿದರು. ಅವರು ಅಹಮದಾಬಾದಿಗೆ ಬಂದಾಗಲೆಲ್ಲಾ ನನಗಾಗಿ 'ಗಾಂಥಿಯಾ'ವನ್ನು ತರುತ್ತಿದ್ದರು. ಅವರು ನನ್ನ ಬಗ್ಗೆ ಬಹಳ ಕಾಳಜಿವಹಿಸುತ್ತಿದ್ದರು. ಈಗ ನಾನು ಭಾವನಗರದಲ್ಲಿರುವುದರಿಂದ, ನವರಾತ್ರಿ ಉಪವಾಸಗಳು ನಡೆಯುತ್ತಿರುವುದರಿಂದ ಇಂದು ಅದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ, ಭಾವನಗರದ 'ಗಾಂಥಿಯಾ' ದೇಶ ಮತ್ತು ಜಗತ್ತಿನಲ್ಲಿ ಪ್ರಸಿದ್ಧವಾಗಿದೆ. ಸ್ನೇಹಿತರೇ, ಇದು ಸಣ್ಣ ವಿಷಯವಲ್ಲ. ಇದು ಭಾವನಗರದ ಶಕ್ತಿ. ಸ್ನೇಹಿತರೇ, ಇಂದು ನಾನು ಅನೇಕ ಅಭಿವೃದ್ಧಿ ಯೋಜನೆಗಳೊಂದಿಗೆ ಬಂದಿದ್ದೇನೆ. ಈ ಯೋಜನೆಗಳು ಭಾವನಗರದ ಯುವ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುತ್ತವೆ. ಈ ಯೋಜನೆಗಳು ಭಾವನಗರದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ಈ ಯೋಜನೆಗಳು ಭಾವನಗರದ ತ್ವರಿತ ಅಭಿವೃದ್ಧಿಗೆ ನಾಂದಿ ಹಾಡುತ್ತವೆ ಎಂದು ಊಹಿಸಲು ಯಾರೂ ಸಮರ್ಥರಾಗಿಲ್ಲ. ಈ ಯೋಜನೆಗಳು ಸೌರಾಷ್ಟ್ರ, ಗುಜರಾತ್ ಮತ್ತು ಇಡೀ ದೇಶಕ್ಕೆ ಪ್ರಯೋಜನಕಾರಿಯಾಗಲಿವೆ. ಸಹೋದರರೇ ಮತ್ತು  ಸಹೋದರಿಯರೇ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬರುವ ಮೂಲಕ ನೀವು ನನ್ನ ಮೇಲೆ ಬೀರಿದ ಪ್ರೀತಿ ಮತ್ತು ಆಶೀರ್ವಾದಗಳಿಗಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ.

ನಿಮ್ಮ ಎರಡೂ ಕೈಗಳನ್ನು ಮೇಲೆತ್ತಿ ಮತ್ತು ನಿಮ್ಮ ಎಲ್ಲಾ ಶಕ್ತಿಯಿಂದ ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ತುಂಬಾ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ  ಮತ್ತು ಕೆಲವು ಭಾಗಗಳನ್ನು ಗುಜರಾತಿ ಭಾಷೆಯಲ್ಲಿ ಮಾಡಲಾಗಿದೆ.

*****


(Release ID: 1864125) Visitor Counter : 174