ವಾರ್ತಾ ಮತ್ತು ಪ್ರಸಾರ ಸಚಿವಾಲಯ

 'ಅಂಬೇಡ್ಕರ್ ಅಂಡ್ ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾರ್ಮರ್ಸ್ ಇಂಪ್ಲಿಮೆಂಟೇಶನ್' ಪುಸ್ತಕವನ್ನು ಬಿಡುಗಡೆ ಮಾಡಿದ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್


ಪುಸ್ತಕವು ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಡೆಯುತ್ತಿರುವ ಕಠಿಣ ಪ್ರಯತ್ನಗಳ ದಾಖಲೆಯಾಗಿದೆ: ಶ್ರೀ ಅನುರಾಗ್ ಠಾಕೂರ್

"ವೈದ್ಯಕೀಯ ಶಿಕ್ಷಣದಲ್ಲಿ ಎಣೆಯಿಲ್ಲದ ಸಾಧನೆ, 208 ಕಾಲೇಜುಗಳನ್ನು ತೆರೆಯಲಾಗಿದ್ದು, ಸೀಟುಗಳ ಸಂಖ್ಯೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಚ್ಚಳ"

"ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಸಮಾನತೆ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದರು"

Posted On: 16 SEP 2022 4:23PM by PIB Bengaluru

ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್, ಭಾರತದ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀ ಕೆ.ಜಿ. ಬಾಲಕೃಷ್ಣನ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮತ್ತು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ನ ನಿರ್ದೇಶಕ ಶ್ರೀ ಹಿತೇಶ್ ಜೈನ್ ಅವರ ಉಪಸ್ಥಿತಿಯಲ್ಲಿ  'ಅಂಬೇಡ್ಕರ್ ಅಂಡ್ ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾರ್ಮರ್ಸ್ ಇಂಪ್ಲಿಮೆಂಟೇಶನ್'  ಪುಸ್ತಕವನ್ನು ಬಿಡುಗಡೆ ಮಾಡಿದರು.  


ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್ ಅವರು, ಈ ಪುಸ್ತಕವು ಮಹಾನ್ ಸುಧಾರಕ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಉದಾತ್ತ ವಿಚಾರಗಳು ಮತ್ತು ದೂರದೃಷ್ಟಿಯ ಸಂಗ್ರಹ ಮಾತ್ರವಷ್ಟೇ ಅಲ್ಲ, ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ವಿಚಾರಗಳನ್ನು ಹೇಗೆ ಕಾರ್ಯಗತಗೊಳಿಸಿದ್ದಾರೆ ಎಂಬುದರ ಸಂಗ್ರಹವೂ ಆಗಿದೆ ಎಂದು ಹೇಳಿದರು. ಇದು ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ಮಾಡುತ್ತಿರುವ ಕಠಿಣ ಪ್ರಯತ್ನಗಳ ದಾಖಲೆಯಾಗಿದೆ ಎಂದರು.

 

ಡಾ. ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದ ಶ್ರೀ ಠಾಕೂರ್, ಅಂಬೇಡ್ಕರ್ ಅವರು ಒಬ್ಬ ಶ್ರೇಷ್ಠ ಮುತ್ಸದ್ದಿಯಾಗಿದ್ದರು, ಅವರ ಕಲ್ಪನೆಗಳು, ಮಧ್ಯಸ್ಥಿಕೆಗಳು ಮತ್ತು ತತ್ವಗಳು ಇಂದು ನಮಗೆ ತಿಳಿದಿರುವಂತೆ ನಮ್ಮ ರಾಷ್ಟ್ರ ಮತ್ತು ದೇಶದ ಅಡಿಪಾಯವನ್ನು ರೂಪಿಸಿವೆ ಎಂದು ಹೇಳಿದರು. ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಸಮಾನತೆ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರು ದುರ್ಬಲರ ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಾದವರ ಧ್ವನಿಯಾಗಿದ್ದರು. ಅವರ ಜೀವನ ಮತ್ತು ಪ್ರಭಾವವು ಆಧುನಿಕ ಭಾರತದ ನಿರ್ಮಾಣದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರುತ್ತಲೇ ಇದೆ", ಎಂದು ಹೇಳಿದರು.

ದೇಶದ ಮೊದಲ ಕಾನೂನು ಸಚಿವರಾಗಿ, ಡಾ. ಅಂಬೇಡ್ಕರ್ ಅವರು ತಾರತಮ್ಯವಿಲ್ಲದ, ದುರ್ಬಲರನ್ನು ಮುಖ್ಯವಾಹಿನಿಗೆ ತರುವ, ಅಭಿವೃದ್ಧಿಯ ಫಲವನ್ನು ಎಲ್ಲರಿಗೂ ಸಮಾನವಾಗಿ ಹಂಚುವ ಸಮಾಜದ ಕನಸು ಕಂಡಿದ್ದರು, ಆದರೆ ಸ್ವಾತಂತ್ರ್ಯದ ತರುವಾಯ ಸರ್ಕಾರಗಳ ಪ್ರಯತ್ನಗಳು ಈ ವಿಚಾರಗಳನ್ನು ಸಾಕಾರಗೊಳಿಸುವಲ್ಲಿ ವಿಫಲವಾದವು ಎಂದು ಅವರು ಹೇಳಿದರು. 2014 ರಿಂದ ಸರ್ಕಾರ ಈ ಉದ್ದೇಶಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದರು. 

ಸರ್ಕಾರದ ಮೂಲ ತತ್ವವನ್ನು ಒತ್ತಿ ಹೇಳಿದ ಶ್ರೀ ಠಾಕೂರ್, ತಮ್ಮ ನೇತೃತ್ವದ ಸರ್ಕಾರ ರಚನೆಯಾದ ಪ್ರಾರಂಭದಲ್ಲೇ ಪ್ರಧಾನಮಂತ್ರಿಯವರು ದಲಿತರು, ದುರ್ಬಲರು ಮತ್ತು ಸಮಾಜದ ಶೋಷಿತ ವರ್ಗಗಳ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಘೋಷಿಸಿದ್ದರು ಎಂದು ಹೇಳಿದರು. ಅಂದಿನಿಂದ, ಸರ್ಕಾರದ ಕ್ರಮಗಳು ಮತ್ತು ನೀತಿಗಳು ಅಂತ್ಯೋದಯದ ಪರವಾಗಿ ಸಾಗಿವೆ. ಇದು ಮೇಕ್ ಇನ್ ಇಂಡಿಯಾ ಆಗಿರಲಿ ಅಥವಾ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳಾಗಿರಲಿ, ಡಾ. ಅಂಬೇಡ್ಕರ್ ಅವರು ಕಲ್ಪಿಸಿದಂತೆ, ಆಧುನಿಕ ಭಾರತವನ್ನು ಸಾಕಾರಗೊಳಿಸಲು ಸರ್ಕಾರದ ಉಪಕ್ರಮಗಳಾಗಿವೆ ಎಂದರು. 

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 'ಬಹುಜನ ಹಿತಾಯ, ಬಹುಜನ ಸುಖಾಯ' (ಜನಸಾಮಾನ್ಯರ ಸಂತೋಷಕ್ಕಾಗಿ, ಜನಸಾಮಾನ್ಯರ ಕಲ್ಯಾಣಕ್ಕಾಗಿ) ಎಂಬ ಜೀವನ ಮಂತ್ರವು ಸದಾ ಪ್ರಧಾನಮಂತ್ರಿ ಮೋದಿಯವರ ಅಭಿವೃದ್ಧಿ ಮಾದರಿಯ ತಿರುಳಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ, ದೇಶವು ಐಐಟಿಗಳು, ಐಐಎಂಗಳು, ಐಐಐಟಿಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿದೆ. ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ಅವರದೇ ಆದ ಇದೇ ರೀತಿಯ ನಂಬಿಕೆಗಳಿಂದ ಪ್ರೇರಿತರಾದ ಪ್ರಧಾನಮಂತ್ರಿ ಮೋದಿ ಅವರು ಪ್ರಾಥಮಿಕ, ಉನ್ನತ ಮತ್ತು ವೈದ್ಯಕೀಯ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿ ಶಿಕ್ಷಣ ಕ್ಷೇತ್ರವನ್ನು ತ್ವರಿತ ಗತಿಯಲ್ಲಿ ಪರಿವರ್ತಿಸುವಲ್ಲಿ ಯಾವುದೇ ಅವಕಾಶವನ್ನು ಕೈಚೆಲ್ಲಿಲ್ಲ. ಕಳೆದ ಎಂಟು ವರ್ಷಗಳಲ್ಲಿ 208 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದ್ದು, ವೈದ್ಯಕೀಯ ಸೀಟುಗಳ ಸಂಖ್ಯೆ 78 ಸಾವಿರದಿಂದ 1 ಲಕ್ಷಕ್ಕೆ ಏರಿದೆ, ಇದು ಎಮೆಯಿಲ್ಲದ ಸಾಧನೆಯಾಗಿದೆ, ದೇಶದಲ್ಲಿ ವೈದ್ಯರ ಸಂಖ್ಯೆಯ ಅಂತರವನ್ನು ತಗ್ಗಿಸಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಕಡುಬಡವರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳಿವೆ ಎಂದರು. 

ದೇಶದ ಮೂಲಭೂತ ಮೂಲಸೌಕರ್ಯಗಳಲ್ಲಿನ ಸುಧಾರಣೆಗಳ ಬಗ್ಗೆ ಒತ್ತಿ ಹೇಳಿದ ಸಚಿವರು, ವಿದ್ಯುತ್ ದೇಶದ ಮೂಲೆ ಮೂಲೆಗಳನ್ನು ತಲುಪಿದೆ, 45 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, ಬಿಕ್ಕಟ್ಟಿನ ಸಮಯದಲ್ಲಿ ಮಹಿಳೆಯರ ಖಾತೆಗಳಿಗೆ 31 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ ಎಂದು ಹೇಳಿದರು. ಒಂದು ಕಡೆ ಭೀಮ್ ದೃಢವಾದ ಡಿಜಿಟಲ್ ಪಾವತಿ ವ್ಯವಸ್ಥೆಗೆ ಮಾದರಿಯಾಗಿದ್ದು, ನಾವು 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಮತ್ತೊಂದೆಡೆ 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದರು. 

ಮಹಿಳಾ ಕೇಂದ್ರಿತ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿ ಕುರಿತ ಪ್ರಧಾನಮಂತ್ರಿ ಮೋದಿ ಅವರ ಕಲ್ಪನೆಯನ್ನು ಈ ಸರ್ಕಾರದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದೆಂದು ಉಲ್ಲೇಖಿಸಿದ ಶ್ರೀ ಠಾಕೂರ್, ಉಜ್ವಲ ಯೋಜನೆಯಡಿ 12 ಕೋಟಿ ಮಹಿಳೆಯರು ಅನಿಲ ಸಿಲಿಂಡರ್ ಗಳನ್ನು ಪಡೆಯುವುದನ್ನು ಸರ್ಕಾರ ಖಚಿತಪಡಿಸಿದೆ ಮತ್ತು ಹೆರಿಗೆ ರಜೆಯನ್ನು ಹಿಂದಿದ್ದ 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. 

ಹಿಂದುಳಿದ ಸಮುದಾಯಗಳ ಪ್ರಯೋಜನಗಳ ಬಗ್ಗೆ ಮಾತನಾಡಿದ ಅವರು, ಮುದ್ರಾ ಯೋಜನೆಯು 34 ಕೋಟಿ ಎಸ್ಸಿ, ಎಸ್ಟಿ ಮತ್ತು ಇತರ ಹಿಂದುಳಿದ ಸಮುದಾಯದ ಸದಸ್ಯರಿಗೆ 18 ಲಕ್ಷ ಕೋಟಿ ರೂ.ಗಳ ಸಾಲವನ್ನು ಯಾವುದೇ ಖಾತ್ರಿಯಿಲ್ಲದೆ ಒದಗಿಸಲು ನೆರವಾಗಿದೆ ಎಂದು ಹೇಳಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಸದಸ್ಯರು ಉಜ್ವಲ ಯೋಜನೆಯ 3.1 ಕೋಟಿ ಫಲಾನುಭವಿಗಳಾಗಿದ್ದಾರೆ. ಆ ಸಮುದಾಯಗಳ ಸದಸ್ಯರಿಗೆ 1.31 ಕೋಟಿ ಪಕ್ಕಾ ಮನೆಗಳನ್ನು ಒದಗಿಸಲಾಗಿದೆ ಎಂದರು.

"ಪರಿಶಿಷ್ಟ ಜಾತಿಯ ಯುವಕರನ್ನು ಮೇಲೆತ್ತುವ ಡಾ. ಅಂಬೇಡ್ಕರ್ ಅವರ ದೃಷ್ಟಿಕೋನದ ಆಧಾರದ ಮೇಲೆ ಅಂಬೇಡ್ಕರ್ ಸಾಮಾಜಿಕ ಆವಿಷ್ಕಾರ ಮತ್ತು ಇನ್ಕ್ಯುಬೇಶನ್ ಅಭಿಯಾನ (ಎಎಸ್ಐಎಂ) ಅನ್ನು 2020 ರಲ್ಲಿ ಪ್ರಾರಂಭಿಸಲಾಯಿತು. ಪಿಎಂ ದಕ್ಷ್ ಯೋಜನೆಯು 2.27 ಲಕ್ಷ ಯುವಕರು ನುರಿತ ಮಾನವ ಸಂಪನ್ಮೂಲ ಪಡೆ ಸೇರಿಸಲು ತರಬೇತಿ ನೀಡಿದೆ. 2014ಕ್ಕಿಂತ ಮೊದಲು ಕೇವಲ 15,000 ರೂ.ಗಳಷ್ಟಿದ್ದ ನೌಕರರ ರಾಜ್ಯ ವಿಮೆಯ ವೇತನ ಮಿತಿಯನ್ನು 21,000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.


ಬಾಬಾ ಸಾಹೇಬ್ ಅವರ ಗೌರವ ಸೂಚಕವಾಗಿ ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರವು ಪಂಚತೀರ್ಥವನ್ನು ರೂಪಿಸಿದೆ ಮತ್ತು ಸಂಸತ್ತಿನಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ ಎಂದರು

ಭಾರತದ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಅವರು ತಮ್ಮ ಭಾಷಣದಲ್ಲಿ ಡಾ. ಅಂಬೇಡ್ಕರ್ ಅವರ ಬಹು ಆಯಾಮದ ವ್ಯಕ್ತಿತ್ವವನ್ನು ಅವಲೋಕಿಸಿದರು. ಸ್ವತಂತ್ರ ಭಾರತದ ರಚನಾತ್ಮಕ ವರ್ಷಗಳಲ್ಲಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ ಶ್ರೀ ಕೋವಿಂದ್ ಅವರು, ಬಾಬಾ ಸಾಹೇಬ್ ಅವರ ಕೊಡುಗೆಗಳು ಬ್ಯಾಂಕಿಂಗ್, ನೀರಾವರಿ, ವಿದ್ಯುತ್ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಕಾರ್ಮಿಕ ನಿರ್ವಹಣೆ, ಆದಾಯ ಹಂಚಿಕೆ ವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಿವೆ ಎಂದು ಹೇಳಿದರು. 

2010ರಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ನಲ್ಲಿ ಗೌರವ್ ಯಾತ್ರೆಯನ್ನು ಆಯೋಜಿಸಿದ್ದ ಸಂದರ್ಭವನ್ನು ಶ್ರೀ ಕೋವಿಂದ್ ಸ್ಮರಿಸಿದರು. ಅಲಂಕೃತ ಆನೆಯ ಮೇಲೆ ಭಾರತೀಯ ಸಂವಿಧಾನದ ದೊಡ್ಡ ಪ್ರತಿಯನ್ನು ಇಡಲಾಗಿತ್ತು, ಮುಖ್ಯಮಂತ್ರಿ ಮೋದಿ ಜನರೊಂದಿಗೆ ಕಾಲ್ನಡಿಗೆಯಲ್ಲಿ ನಡೆಯುತ್ತಿದ್ದರು. ಸಂವಿಧಾನದ ಬಗ್ಗೆ ಗೌರವ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ ಎಂದರು. 

ಡಾ. ಅಂಬೇಡ್ಕರ್ ಅವರ ದೃಷ್ಟಿಕೋನ ಮತ್ತು ಪ್ರಧಾನಮಂತ್ರಿ ಮೋದಿ ಅವರ ನೀತಿಗಳ ನಡುವಿನ ಸಾಮ್ಯತೆಯನ್ನು ಗುರುತಿಸಿದ ಶ್ರೀ ಕೋವಿಂದ್ ಅವರು, ದೇಶಾದ್ಯಂತದಿಂದ ಬಂದ ಎರಡು ಲಕ್ಷಕ್ಕೂ ಹೆಚ್ಚು ವಿಚಾರಗಳಿಂದ ಜನ್ಮತಳೆದ ಮತ್ತು ಅವರದೇ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸುವ ನೂತನ ಶಿಕ್ಷಣ ನೀತಿಯು ಬಾಬಾ ಸಾಹೇಬ್ ಅವರ ವಿಚಾರಗಳಿಗೆ ಅನುಗುಣವಾಗಿದೆ ಎಂದು ಹೇಳಿದರು. ಹಲವಾರು ಸಂಕೀರ್ಣ ಕಾನೂನುಗಳನ್ನು ಬದಲಾಯಿಸುವ ನಾಲ್ಕು ಕಾರ್ಮಿಕ ಸಂಹಿತೆಗಳು, ಕಾರ್ಮಿಕರಿಗೆ ಸಾರ್ವತ್ರಿಕ ಖಾತೆ ಸಂಖ್ಯೆ ಡಾ. ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿದೆ ಎಂದು ಅವರು ಹೇಳಿದರು.

ಭಾರತದ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಭಾರತದ ಮಹಾನ್ ಚಿಂತಕರಲ್ಲಿ ಒಬ್ಬರಾದ ಡಾ. ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿದರು. ಕೈಗಾರಿಕೀಕರಣ, ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಭಾರತದ ಆಧುನೀಕರಣದ ಬಗ್ಗೆ ಬಾಬಾ ಸಾಹೇಬರ ಚಿಂತನೆಗಳನ್ನು ಅವರು ಸ್ಮರಿಸಿದರು.

ಪ್ರಸ್ತುತ ಸರ್ಕಾರದ ನೀತಿಗಳು ಡಾ. ಅಂಬೇಡ್ಕರ್ ಅವರು  ಮಂಡಿಸಿದ ಭಾರತದ ಪರಿಕಲ್ಪನೆಯ ಸಾರವನ್ನು ಜಾರಿಗೆ ತರುತ್ತಿವೆ ಎಂದು ಅವರು ಒತ್ತಿ ಹೇಳಿದರು. 

 

ಕಾರ್ಯಕ್ರಮಕ್ಕೂ ಮುನ್ನ, ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ಶ್ರೀ ಅನುರಾಗ್ ಠಾಕೂರ್ ಅವರು ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ನಿಂದ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಬೋಧನೆಗಳು ಮತ್ತು ಕೊಡುಗೆಗಳ ಮೇಲೆ ಗಮನ ಕೇಂದ್ರೀಕರಿಸಿದ ಮೂರು ದಿನಗಳ ಡಿಜಿಟಲ್ ಸಂವಾದಾತ್ಮಕ ಬಹು ಮಾಧ್ಯಮ ಪ್ರದರ್ಶನವನ್ನು ಉದ್ಘಾಟಿಸಿದರು. ಡಾ. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಸರ್ಕಾರದ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಾಗ, ಸಂದರ್ಶಕರನ್ನು ತನ್ಮಯಗೊಳಿಸುವಂತಹ  ಅನುಭವವನ್ನು ನೀಡುವಂತೆ ಈ ಪ್ರದರ್ಶನವನ್ನು ವಿನ್ಯಾಸಗೊಳಿಸಲಾಗಿದೆ. ಇದು ಹೋಲೋಕ್ಯೂಬ್ಸ್, ಡಿಜಿಟಲ್ ಸಂವದಾತ್ಮಕ ಒಗಟುಗಳು, ಆಎಫ್.ಐ.ಡಿ ಆಧಾರಿತ ಡಿಜಿಟಲ್ ಸಂವಾದಾತ್ಮಕ ಪ್ರದರ್ಶಕಗಳು, ಸಂವಾದಾತ್ಮಕ ಸ್ಪರ್ಶ ಫಲಕಗಳು ಮತ್ತು ಫ್ಲಿಪ್ ಪುಸ್ತಕಗಳ ಪ್ರದರ್ಶನವನ್ನು ಒಳಗೊಂಡಿದೆ.

 

 

 

'ಅಂಬೇಡ್ಕರ್ ಅಂಡ್ ಮೋದಿ: ರಿಫಾರ್ಮರ್ಸ್ ಐಡಿಯಾಸ್ ಪರ್ಫಾರ್ಮರ್ಸ್ ಇಂಪ್ಲಿಮೆಂಟೇಶನ್' ಪುಸ್ತಕದ ಬಗ್ಗೆ

ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಈ ಪುಸ್ತಕವನ್ನು ಬಹಳ ಎಚ್ಚರಿಕೆಯಿಂದ ಮತ್ತು ತಜ್ಞತೆಯೊಂದಿಗೆ ಸಂಪಾದಿಸಿದೆ, ಇದು ಭಾರತೀಯ ಪ್ರತಿಭೆಗಳನ್ನು ಬಳಸಿಕೊಳ್ಳುವ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಜಾಗೃತಿ ಮೂಡಿಸುವ ಮತ್ತು ಬಾಹ್ಯ ಆಲೋಚನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಭಾರತೀಯ ಸಮಾಜವನ್ನು ಸಶಕ್ತಗೊಳಿಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ರಾಜ್ಯಸಭಾ ಸದಸ್ಯ ಇಳಯರಾಜಾ (ಖ್ಯಾತ ಸಂಗೀತ ಸಂಯೋಜಕ ಮತ್ತು ಗೀತರಚನೆಕಾರರೂ ಆಗಿರುವ) ಅವರ ಮುನ್ನುಡಿಯನ್ನು ಒಳಗೊಂಡಿದೆ, ಇದು ಡಾ. ಅಂಬೇಡ್ಕರ್ ಅವರ ಕೃತಿಗಳಲ್ಲಿ ಕಂಡುಬರುವ ಜ್ಞಾನದ ಅಗಾಧ ವಿಸ್ತಾರದ ಬಗ್ಗೆ ಮೌಲ್ಯಯುತ ಒಳನೋಟವನ್ನು ಬೀರುತ್ತದೆ, ಅದೇ ವೇಳೆ ಭಾರತದ ಪ್ರಗತಿಯನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಚ್ಚಿಟ್ಟ ನೀತಿಗಳು ಮತ್ತು ಸುಧಾರಣೆಗಳಿಗೆ ಪರ್ಯಾಯವಾಗಿದೆ.  
ಅಂಬೇಡ್ಕರ್ ಮತ್ತು ಮೋದಿ ಕೃತಿಯು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಕೃತಿಗಳ ಬಗ್ಗೆ ನಿರಂತರ ಸಂಶೋಧನೆಗೆ ಪ್ರಮುಖ ಸೇರ್ಪಡೆಯಾಗಿದ್ದು, ಇದು ದೇಶದ ನೀತಿ ಭೂರಮೆಗೆ ಪ್ರಮುಖ ಕೊಡುಗೆಯಾಗಲಿದೆ. ಇದು ಸ್ವತಂತ್ರ ರಾಷ್ಟ್ರವಾಗಿ ಭಾರತದ ಪ್ರಯಾಣದಲ್ಲಿ ಒಂದು ಮೈಲಿಗಲ್ಲಾಗಿದೆ ಮತ್ತು ಡಾ. ಅಂಬೇಡ್ಕರ್ ಅವರಂತಹ ವ್ಯಕ್ತಿಗಳ ದೃಷ್ಟಿಕೋನವು ಅಂತಿಮವಾಗಿ ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯ ಮತ್ತು ಕ್ರಿಯಾತ್ಮಕ ನಾಯಕತ್ವದಲ್ಲಿ ಹೇಗೆ ಕಾರ್ಯರೂಪಕ್ಕೆ ಬರುತ್ತಿದೆ ಎಂಬುದನ್ನು ವಿಶ್ಲೇಷಿಸುತ್ತದೆ.  

ಈ ಪುಸ್ತಕವು ಡಾ. ಅಂಬೇಡ್ಕರ್ ಅವರ ಜೀವನ, ಕೃತಿಗಳು ಮತ್ತು ಸಾಧನೆಗಳನ್ನು ವಿದ್ವತ್ಪೂರ್ಣ ದೃಷ್ಟಿಕೋನದಿಂದ ಆಳವಾಗಿ ಪರಿಶೀಲಿಸುತ್ತದೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ನವಭಾರತದ ಅಭಿವೃದ್ಧಿ ಪಯಣದ ನಡುವೆ ನಿರಾಕರಿಸಲಾಗದ ಒಮ್ಮತವನ್ನು ಪ್ರಸ್ತುತಪಡಿಸುತ್ತದೆ. 

*****



(Release ID: 1859948) Visitor Counter : 250