ಪ್ರಧಾನ ಮಂತ್ರಿಯವರ ಕಛೇರಿ

ಪೌರಸ್ತ್ಯ(ಈಸ್ಟರ್ನ್) ಆರ್ಥಿಕ ವೇದಿಕೆ – 2022 ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

Posted On: 07 SEP 2022 3:44PM by PIB Bengaluru

ಗೌರವಾನ್ವಿತ ರಷ್ಯಾ ಅಧ್ಯಕ್ಷರಾದ ಪುಟಿನ್ ಅವರೆ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರೆ,

ನಮಸ್ಕಾರಗಳು!

ವ್ಲಾಡಿವೊಸ್ಟಾಕ್‌ನಲ್ಲಿ ನಡೆಯುತ್ತಿರುವ 7ನೇ ಪೌರಸ್ತ್ಯ(ಈಸ್ಟರ್ನ್) ಆರ್ಥಿಕ ವೇದಿಕೆಯಲ್ಲಿ ವಾಸ್ತವಿಕ(ವರ್ಚುವಲ್)ವಾಗಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ತಿಂಗಳು ವ್ಲಾಡಿವೊಸ್ಟಾಕ್‌ನಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪನೆಯ 30ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತಿದೆ. ಈ ನಗರದಲ್ಲಿ ರಾಯಭಾರ ಕಚೇರಿ ತೆರೆದ ಮೊದಲ ದೇಶ ಭಾರತ. ಅಂದಿನಿಂದ, ಈ ನಗರವು ನಮ್ಮ ಮಧುರ ಸಂಬಂಧದ ಅನೇಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ.

ಸ್ನೇಹಿತರೆ,

2015ರಲ್ಲಿ ಸ್ಥಾಪಿಸಲಾದ ಪೌರಸ್ತ್ಯ ಆರ್ಥಿಕ ವೇದಿಕೆಯು ಇದೀಗ ರಷ್ಯಾದ ಪೂರ್ವ ಭಾಗದ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಸಹಕಾರ ಹೆಚ್ಚಿಸುವ  ಪ್ರಮುಖ ಜಾಗತಿಕ ವೇದಿಕೆಯಾಗಿದೆ. ಇದಕ್ಕಾಗಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ದೂರದೃಷ್ಟಿಯನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ.

ಈ ವೇದಿಕೆಯಲ್ಲಿ ಭಾಗವಹಿಸಲು ನನಗೆ 2019 ರಲ್ಲಿ ಅವಕಾಶ ಲಭಿಸಿತು. ಆ ಸಮಯದಲ್ಲಿ, ನಾವು ಭಾರತದ "ಆಕ್ಟ್ ಫಾರ್ ಈಸ್ಟ್" ನೀತಿಯನ್ನು ಘೋಷಿಸಿದ್ದೇವೆ. ಇದರ ಪರಿಣಾಮವಾಗಿ, ರಷ್ಯಾದ ದೂರದ ಪೂರ್ವ ಭಾಗದೊಂದಿಗೆ ಭಾರತದ ಸಹಕಾರವು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಾಗಿದೆ. ಇಂದು, ಈ ನೀತಿಯು ಭಾರತ ಮತ್ತು ರಷ್ಯಾದ "ವಿಶೇಷ ಮತ್ತು ಗೌರವದ ಕಾರ್ಯತಂತ್ರ ಪಾಲುದಾರಿಕೆ"ಯ ಪ್ರಮುಖ ಆಧಾರಸ್ತಂಭವಾಗಿದೆ.

ಸ್ನೇಹಿತರೆ,

ನಾವು ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಕುರಿತು ಮಾತನಾಡಬಹುದು, ಚೆನ್ನೈ-ವ್ಲಾಡಿವೋಸ್ಟಾಕ್ ಸಾಗರ ಭಾಗದ  ಕಾರಿಡಾರ್ ಯೋಜನೆ ಕುರಿತು ಮಾತನಾಡಬಹುದು ಅಥವಾ ಉತ್ತರ ಸಮುದ್ರ ಮಾರ್ಗದ ಬಗ್ಗೆ ಮಾತನಾಡಬಹುದು, ಆದರೆ ಸಂಪರ್ಕವು ಭವಿಷ್ಯದ ನಮ್ಮ ಸಂಬಂಧಗಳ ಅಭಿವೃದ್ಧಿಯಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸಲಿದೆ.

ಉತ್ತರ ಧ್ರುವದ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ರಷ್ಯಾ ಜೊತೆಗಿನ ಪಾಲುದಾರಿಕೆ ಬಲಪಡಿಸಲು ಭಾರತ ಅತೀವ ಉತ್ಸುಕವಾಗಿದೆ. ಇಂಧನ ಕ್ಷೇತ್ರದಲ್ಲಿ ಸಹಕಾರ ಹೊಂದಲು ಅಪಾರ ಸಾಮರ್ಥ್ಯವೂ ಇದೆ. ಇಂಧನದ ಜತೆಗೆ, ಭಾರತವು ರಷ್ಯಾದ ದೂರದ ಪೂರ್ವ ಭಾಗದಲ್ಲಿ ಫಾರ್ಮಾ ಮತ್ತು ವಜ್ರಗಳ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ.

ಕೋಕಿಂಗ್ ಕಲ್ಲಿದ್ದಲು(ಉಕ್ಕು ಮತ್ತು ಕಬ್ಬಿಣ ಉತ್ಪಾದನೆಗೆ ಬಳಸುವ ಗುಣಮಟ್ಟದ ಕಲ್ಲಿದ್ದಲು) ಪೂರೈಕೆಯ ಮೂಲಕ ಭಾರತೀಯ ಉಕ್ಕು ಉದ್ಯಮಕ್ಕೆ ರಷ್ಯಾ ಪ್ರಮುಖ ಪಾಲುದಾರನಾಗಬಹುದು. ಪ್ರತಿಭೆಯ ಚಲನಶೀಲತೆಯಲ್ಲಿ ನಾವು ಉತ್ತಮ ಸಹಕಾರವನ್ನು ಸಹ ಪಡೆಯಬಹುದು. ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಗತಿಗೆ ಭಾರತೀಯ ಪ್ರತಿಭೆಗಳು ಅಪಾರ ಕೊಡುಗೆ ನೀಡಿದ್ದಾರೆ. ಭಾರತೀಯರ ಪ್ರತಿಭೆ ಮತ್ತು ವೃತ್ತಿಪರತೆಯು ರಷ್ಯಾದ ದೂರದ ಪೂರ್ವದಲ್ಲಿ ತ್ವರಿತ ಅಭಿವೃದ್ಧಿಯನ್ನು ತರಬಹುದು ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಭಾರತದ ಪ್ರಾಚೀನ ಸಿದ್ಧಾಂತ "ವಸುಧೈವ ಕುಟುಂಬಕಂ" ಇಡೀ ಜಗತ್ತನ್ನೇ ಒಂದು ಕುಟುಂಬವಾಗಿ ನೋಡಲು, ಪರಿಭಾವಿಸಲು ಕಲಿಸಿದೆ. ಇಂದಿನ ಜಾಗತೀಕರಣ ಜಗತ್ತಿನಲ್ಲಿ, ಯಾವುದೇ ಒಂದು ಭಾಗದ ಘಟನೆ ಇಡೀ ವಿಶ್ವದ ಮೇಲೆ ಪ್ರಭಾವ ಬೀರುತ್ತದೆ.
ಉಕ್ರೇನ್ ಸಮರ ಸಂಘರ್ಷ ಮತ್ತು ಕೋವಿಡ್ ಸಾಂಕ್ರಾಮಿಕ ಸೋಂಕು ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇಂಧನಗಳ ಕೊರತೆಯು ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ ಪ್ರಮುಖ ಕಳವಳ ಮೂಡಿಸಿದೆ. ಉಕ್ರೇನ್ ಯುದ್ಧ ಸಂಘರ್ಷ ಆರಂಭವಾದ ದಿನದಿಂದಲೂ, ರಾಜತಾಂತ್ರಿಕ  ಮತ್ತು ಸಂಧಾನ ಮಾತುಕತೆಯ ಮಾರ್ಗವನ್ನು ಹಿಡಿಯುವ ಅಗತ್ಯವನ್ನು ನಾವು ಒತ್ತಿ ಹೇಳಿದ್ದೇವೆ. ಈ ಸಂಘರ್ಷವನ್ನು ಕೊನೆಗೊಳಿಸಲು ನಾವು ಎಲ್ಲಾ ಶಾಂತಿಯುತ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ. ಈ ನಿಟ್ಟಿನಲ್ಲಿ, ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಸುರಕ್ಷಿತ ರಫ್ತಿಗೆ ಸಂಬಂಧಿಸಿದ ಇತ್ತೀಚಿನ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ.

ಈ ಘನ ವೇದಿಕೆ ಉದ್ದೇಶಿಸಿ ಮಾತನಾಡಲು ಅವಕಾಶ ನೀಡಿದ ಅಧ್ಯಕ್ಷ ಪುಟಿನ್ ಅವರಿಗೆ ಮತ್ತೊಮ್ಮೆ ನಾನು ಧನ್ಯವಾದ ಹೇಳುತ್ತೇನೆ. ಈ ವೇದಿಕೆಯಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಎಲ್ಲರಿಗೂ ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿಗಳ ಪತ್ರಿಕಾ ಹೇಳಿಕೆಯ ಅಂದಾಜು ಅನುವಾದ ಇದಾಗಿದೆ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

*****



(Release ID: 1857793) Visitor Counter : 167