ಸಂಪುಟ

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ(ಪಿಎಂಎವೈ-ಯು)  2024 ಡಿಸೆಂಬರ್ 31ರ ವರೆಗೆ “ಎಲ್ಲರಿಗೂ ವಸತಿ” ಮಿಷನ್‌ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ


ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮನವಿ ಸ್ವೀಕರಿಸಿದ ಭಾರತ ಸರ್ಕಾರ


ಯೋಜನೆಯಡಿ ಮಂಜೂರಾದ 122.69 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರದಿಂದ ಆರ್ಥಿಕ ನೆರವು 

Posted On: 10 AUG 2022 9:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 2024 ಡಿಸೆಂಬರ್ 31ರ ವರೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ(ಪಿಎಂಎವೈ-ಯು) ಮುಂದುವರೆಸುವ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ)ದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈಗಾಗಲೇ 2022 ಮಾರ್ಚ್ 31ರ ವರೆಗೆ ಮಂಜೂರಾಗಿರುವ 122.69 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಆರ್ಥಿಕ ನೆರವು ಸಹ ಒದಗಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಪಿಎಂಎವೈ-ಯು: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರದ ನೋಡಲ್ ಏಜೆನ್ಸಿಗಳ ಮೂಲಕ ದೇಶದ ನಗರ ಪ್ರದೇಶಗಳ ಎಲ್ಲಾ ಅರ್ಹ ಬಡ ಫಲಾನುಭವಿಗಳಿಗೆ ಎಲ್ಲಾ ಹವಾಮಾನಕ್ಕೂ ಹೊಂದಿಕೆಯಾಗುವ  ಪಕ್ಕಾ ಮನೆಗಳನ್ನು ಒದಗಿಸಲು ಭಾರತ ಸರ್ಕಾರ ಜಾರಿಗೆ ತಂದಿರುವ ‘ಎಲ್ಲರಿಗೂ ವಸತಿ’ ಕಲ್ಪಿಸುವ ಪ್ರಮುಖ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಪಿಎಂಎವೈ-ಯು ಒಂದಾಗಿದೆ. ಈ ಯೋಜನೆಯು ದೇಶದ ಎಲ್ಲಾ ನಗರ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಅಂದರೆ, 2011ರ ಜನಗಣತಿಯ ಪ್ರಕಾರ, ಎಲ್ಲಾ ಶಾಸನಬದ್ಧ ಪಟ್ಟಣಗಳು ಮತ್ತು ಅಧಿಸೂಚಿತ ಯೋಜನೆ, ಅಭಿವೃದ್ಧಿ ಪ್ರದೇಶಗಳನ್ನು ಒಳಗೊಂಡಂತೆ ನಂತರ ಸೂಚಿಸಲಾದ ಪಟ್ಟಣಗಳು ಸೇರಲಿವೆ. ಈ ಯೋಜನೆಯನ್ನು 4 ಆದ್ಯಂತ(ಹಂತ ಅಥವಾ ಶ್ರೇಣಿ ಅಥವಾ ವಿಭಾಗ-ವರ್ಟಿಕಲ್‌)ಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.ಅದೆಂದರೆ, ಫಲಾನುಭವಿಗಳ ನೇತೃತ್ವದಲ್ಲಿ ನಿರ್ಮಾಣ/ಹೆಚ್ಚುವರಿ ನಿರ್ಮಾಣ(ಬಿಎಲ್ಸಿ), ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ (ಎಎಚ್ ಪಿ), ಮೂಲಸ್ಥಳದಲ್ಲಿ ಕೊಳಗೇರಿ ಮರುಅಭಿವೃದ್ಧಿ(ಐಎಸ್ಎಸ್ಆರ್) ಮತ್ತು ಸಾಲಸೌಲಭ್ಯ ಸಂಪರ್ಕಿತ ಸಹಾಯಧನ ಯೋಜನೆ(ಸಿಎಲ್ಎಸ್ಎಸ್). ಭಾರತ ಸರ್ಕಾರವು ಹಣಕಾಸಿನ ನೆರವು ನೀಡಿದರೆ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳು ಫಲಾನುಭವಿಗಳ ಆಯ್ಕೆ ಸೇರಿದಂತೆ ಇಡೀ ಯೋಜನೆಯನ್ನು ಜಾರಿಗೊಳಿಸುತ್ತವೆ.
ನಗರ ವಸತಿ ಯೋಜನೆಯಡಿ 2004-2014ರ ಅವಧಿಯಲ್ಲಿ 8.04 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಶ್ರೀ ನರೇಂದ್ರ ಮೋದಿ ಸರ್ಕಾರದಲ್ಲಿ,  ನಗರ ಭಾಗಗಳ ಎಲ್ಲಾ ಅರ್ಹ ಬಡ ನಿವಾಸಿಗಳಿಗೆ ಸಂತೃಪ್ತ ಮಾದರಿಯಲ್ಲಿ ಮನೆಗಳನ್ನು ಒದಗಿಸುವ ವಿಷಯಕ್ಕೆ ಆದ್ಯತೆಯ ಗಮನ ನೀಡಿ, ಪಿಎಂಎವೈ-ನಗರ ಯೋಜನೆಯ ಪರಿಕಲ್ಪನೆಗೆ ಸ್ಪಷ್ಟ ರೂಪು ನೀಡಲಾಯಿತು. 2017ರಲ್ಲಿ 100 ಲಕ್ಷ ಮನೆಗಳಿಗೆ ಮೂಲ ಯೋಜಿತ ಬೇಡಿಕೆ ಬಂತು. ಈ ಮೂಲ ಯೋಜಿತ ಬೇಡಿಕೆಗೆ ಪ್ರತಿಯಾಗಿ 102 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ನಿರ್ಮಾಣ ಹಂತದಲ್ಲಿವೆ. ಈ ಪೈಕಿ 62 ಲಕ್ಷ ಮನೆಗಳು ಪೂರ್ಣಗೊಂಡಿವೆ. ಒಟ್ಟು ಮಂಜೂರಾದ 123 ಲಕ್ಷ ಮನೆಗಳಲ್ಲಿ, 40 ಲಕ್ಷ ಮನೆಗಳ ಪ್ರಸ್ತಾವನೆಗಳನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ತಡವಾಗಿ (ಕಳೆದ 2 ವರ್ಷಗಳ ಯೋಜನೆಯ ಅವಧಿಯಲ್ಲಿ) ಸ್ವೀಕರಿಸಲಾಗಿದೆ. ಅವುಗಳನ್ನು ಪೂರ್ಣಗೊಳಿಸಲು ಇನ್ನೂ 2 ವರ್ಷಗಳ ಅಗತ್ಯವಿದೆ. ಆದ್ದರಿಂದ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮನವಿ ಆಧರಿಸಿ, ಕೇಂದ್ರ ಸಚಿವ ಸಂಪುಟವು ಪಿಎಂಎವೈ-ಯು ಯೋಜನೆಯ ಅನುಷ್ಠಾನ ಅವಧಿಯನ್ನು 31.12.2024ರ ವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಕೇಂದ್ರ ಸರ್ಕಾರ ಈ ಯೋಜನೆಗೆ 2015ರಿಂದ ಅನುಮೋದಿಸಿರುವ ಆರ್ಥಿಕ ನೆರವಿನ ಮೊತ್ತ 2.03 ಲಕ್ಷ ಕೋಟಿ ರೂ. ಆಗಿದೆ. 2004ರಿಂದ 2014ರ ವರೆಗೆ ಅಂದರೆ 10 ವರ್ಷಗಳ ಅವಧಿಗೆ ಅನುಮೋದನೆಯಾಗಿದ್ದ ಆರ್ಥಿಕ ನೆರವಿನ ಪ್ರಮಾಣ 20,000 ಕೋಟಿ ರೂ. ಆಗಿತ್ತು. 2022 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ, ಕೇಂದ್ರ ಸರ್ಕಾರ ಈಗಾಗಲೇ 1,18,020.46 ಕೋಟಿ ರೂ. ಆರ್ಥಿಕ ನೆರವು, ಸಬ್ಸಿಡಿ ಬಿಡುಗಡೆ ಮಾಡಿದೆ. 2024 ಡಿಸೆಂಬರ್ 31ರ ವರೆಗೆ ಕೇಂದ್ರ ಸಹಾಯ, ಸಬ್ಸಿಡಿಯಾಗಿ 85,406 ಕೋಟಿ ರೂ. ಬಿಡುಗಡೆ ಆಗಲಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಕೋರಿಕೆಯ ಆಧಾರದ ಮೇಲೆ 2024 ಡಿಸೆಂಬರ್ 31ರ ವರೆಗೆ ಯೋಜನೆ ಮುಂದುವರಿಸಲು ಕೇಂದ್ರ ಸಂಪುಟ ಕೈಗೊಂಡಿರುವ ನಿರ್ಧಾರವು ಬಿಎಲ್ ಸಿ, ಎಎಚ್ ಪಿ ಮತ್ತು ಐಎಸ್ಎಸ್ಆರ್ ವಿಭಾಗಗಳಲ್ಲಿ ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದೆ.

 

***********(Release ID: 1850913) Visitor Counter : 377